ಕೊರಟಗೆರೆ ಸಮೀಪದ ದೊಡ್ಡನರಸಯ್ಯನಪಾಳ್ಯದ ಹಿರಿಯ ಪ್ರಾಥಮಿಕ ಶಾಲೆಯ ಕಥೆ.
“ನಾನು ಮೇಷ್ಟ್ರ ಕೆಲಸಕ್ಕೆ ಸೇರಿ 14 ವರ್ಷ ಆಯ್ತು ಸಾರ್. ಇಷ್ಟೂ ವರ್ಷಗಳ
ನನ್ನ ಆಸೆ ನಮ್ಮ ಶಾಲೆಯಲ್ಲೊಂದು ಯಕ್ಷಗಾನ ಮಾಡಿಸಬೇಕು ಅಂತ. ಕಡೇ ಪಕ್ಷ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಾದರೂ
ನಮ್ಮ ಹುಡುಗರಿಗೆ ಯಕ್ಷಗಾನ ವೇಷ ತೊಡಿಸಿ ಖುಷಿಪಡಬೇಕು ಅಂದುಕೊಂಡಿದ್ದೆ. ಆಗಲೇ ಇಲ್ಲ. ಈಗ ನಿಮ್ಮ
ತಂಡದ ಬಗ್ಗೆ ಗೊತ್ತಾಯ್ತು. ಈ ಸ್ವಾತಂತ್ರ್ಯೋತ್ಸವಕ್ಕೊಂದು ಯಕ್ಷಗಾನ ಆಡಲೇಬೇಕು ನೀವು. ನಮ್ಮೂರ ಮಂದಿ
ಯಕ್ಷಗಾನ ನೋಡೇ ಇಲ್ಲ. ಇಲ್ಲಿ ನಿಮ್ಮದೇ ಮೊದಲ ಯಕ್ಷಗಾನ…” ಹಾಗೆಂದು ಫೋನಿನಲ್ಲಿ ಹೇಳಿದರು ನಾಗೇಶ್.
ಅವರು ದೊಡ್ಡನರಸಯ್ಯನಪಾಳ್ಯದ ಸ.ಹಿ.ಪ್ರಾ. ಶಾಲೆಯ ಮೇಸ್ಟ್ರು. ಪಾದರಸದಷ್ಟು
ಚುರುಕು. ಮಹತ್ವಾಕಾಂಕ್ಷಿ. ಬಹುಮುಖ ಪ್ರತಿಭೆ. ಒಳ್ಳೆಯ ರಂಗಭೂಮಿ ಕಲಾವಿದ.
“ಒಂದು ಯಕ್ಷಗಾನ ಆಗಬೇಕೆಂದರೆ ಸಾಕಷ್ಟು ಖರ್ಚಿದೆ ಅಂತ ನಂಗೆ ಗೊತ್ತು.
ಆದರೆ ಅಷ್ಟೊಂದು ಹೊಂದಿಸೋದು ನಮ್ಮ ಹಳ್ಳಿ ಶಾಲೇಲಿ ಆಗಲ್ಲ. ನಮ್ಮ ಎಸ್.ಡಿ.ಎಂ.ಸಿ. ಸದಸ್ಯರು ಒಂದಿಷ್ಟು ಸಹಾಯ ಮಾಡ್ತೀವಿ ಅಂದಿದ್ದಾರೆ. ಅದರಲ್ಲೇ ಅಡ್ಜಸ್ಟ್ ಮಾಡಬೇಕು. ನಮ್ಮ ಹುಡುಗರು
ತುಂಬ ನಿರೀಕ್ಷೆಯಿಂದ ಇದ್ದಾರೆ…” ಅಂತ ಮಾತು ಮುಂದುವರಿಸಿದರು ನಾಗೇಶ್. ಮಾರನೆಯ ದಿನವೇ ಬಂದು ಖುದ್ದು
ಭೇಟಿಯೂ ಆದರು.
‘‘ಕೃಷ್ಣಾರ್ಜುನ ಕಾಳಗ’ ಆಡೋಣ ಎಂದಳು ಆರತಿ. ಆಮೇಲೇನಿದ್ದರೂ ಅವಳದ್ದೇ
ಕೆಲಸ. ಮತ್ತೊಂದೇ ವಾರ ಉಳಿದಿದ್ದರಿಂದ ಸಿದ್ಧತೆ ಭರದಿಂದ ನಡೆಯಿತು. ಆದರೆ ಅಷ್ಟೇ ಭರದಿಂದ ಊರೆಲ್ಲ
ಮಳೆಯೂ ಸುರಿಯುತ್ತಿತ್ತು. ಅತ್ತ ಕೇರಳ-ಕೊಡಗುಗಳಲ್ಲಿ ನದಿಗಳು ಉಕ್ಕಿ ಹರಿದು ಜನ ಕಂಗಾಲಾಗಿದ್ದರೆ
ಇತ್ತ ಬಯಲುಸೀಮೆಯಲ್ಲೂ ನಿರಂತರ ಮಳೆ.
ಆಗಸ್ಟ್ 14ರ ಸಂಜೆ ನಾಗೇಶ್ ಅವರಿಗೆ ಫೋನ್ ಮಾಡಿದೆ. “ಮಳೆ ಜೋರಾಗಿದೆಯಲ್ಲಾ
ಸಾರ್. ನಾಳೆಯೂ ಹೀಗೇ ಸುರಿದರೆ ಏನು ಮಾಡೋಣ?” ಎಂದು ಕೇಳಿದೆ.
“ಇಲ್ಲಿ ಅಷ್ಟೊಂದು ಮಳೆ ಇಲ್ಲ ಸಾರ್. ನಾಳೆ ಏನೂ ತೊಂದರೆ ಆಗದು ಅನ್ನೋ
ವಿಶ್ವಾಸ. ಶಾಮಿಯಾನ ಹಾಕಿಸ್ತೀವಿ. ಸಣ್ಣಪುಟ್ಟ ಮಳೆಗೆ ಏನೂ ಆಗದು” ಎಂದರು ನಾಗೇಶ್.
“ಎಲ್ಲದಕ್ಕಿಂತ ನಮ್ಮ ಮಕ್ಕಳ ಪ್ರಾರ್ಥನೆ ದೊಡ್ಡದು ಅಲ್ವಾ ಸಾರ್?” ಎಂದು
ಮರುಪ್ರಶ್ನಿಸಿದರು ನಾಗೇಶ್.
ನಾನು ಸುಮ್ಮನಾದೆ.
ಆ ದಿನ ಮಧ್ಯರಾತ್ರಿಯವರೆಗೂ ನಮ್ಮ ಪಟ್ಟಾಜೆ ಉದಯಣ್ಣ ಹಾಗೂ ಜಯಪ್ರಕಾಶ್ ಅವರನ್ನೊಳಗೊಂಡ
ಹಿಮ್ಮೇಳದವರೊಂದಿಗೆ ಮನೆಯೊಳಗೇ ಅಭ್ಯಾಸವೂ ನಡೆಯಿತು. ಮಂಜುನಾಥ್-ಸುಪ್ರಿಯಾ, ವೇದಮೂರ್ತಿ-ನವ್ಯಾ ದಂಪತಿಗಳ
ಉದಾರತೆಯಿಂದ ಭೂರಿ ಭೋಜನವೂ.
ಬೆಳಗ್ಗೆ ಎದ್ದಾಗಲೂ ಮಳೆಮೋಡ ದಟ್ಟೈಸಿತ್ತು. ಏಳು ಗಂಟೆಗೆಲ್ಲ ತಂಡದ ಸದಸ್ಯರು
ಹೊರಟು ನಿಂತಾಯಿತು. ಅತ್ತ ಕಡೆಯಿಂದ ಮತ್ತೆ ನಾಗೇಶ್ ಫೋನು: “ಮಳೆ ಒಂದೇ ಸಮನೆ ಸುರೀತಿದೆಯಲ್ಲಾ ಸಾರ್.
ಧ್ವಜಾರೋಹಣವಾದರೂ ಮಾಡಬಹುದಾ ಅಂತ ಕಾಯ್ತಾ ಇದೀವಿ. ಬಿಡೋ ಲಕ್ಷಣ ಇಲ್ಲ. ಏನ್ಮಾಡೋದು ಸಾರ್?”
ಏನ್ಮಾಡೋದು? ಇಡೀ ತಂಡ ವಾರವಿಡೀ ಪ್ರಾಕ್ಟೀಸ್ ಮಾಡಿ ಬಣ್ಣ ಹಚ್ಚುವುದಕ್ಕೆ
ಸಿದ್ಧವಾಗಿದೆ. ಹಿಮ್ಮೇಳದವರು ಬೆಂಗಳೂರಿನಿಂದ ಬಂದು ನಿನ್ನೆ ರಾತ್ರಿಯಿಂದಲೇ ನಮ್ಮ ಜತೆಗಿದ್ದಾರೆ.
ಅರ್ಜುನ ವೇಷಭೂಷಣ ಹೊತ್ತುಕೊಂಡು ಏಳೂವರೆ ಗಂಟೆಗೆಲ್ಲ ಶಾಲೆಯ ಬಳಿಗೇ ಬಂದುಬಿಡುತ್ತಾರೆ.
“ನಿಮ್ಮ ಶಾಲೆಯಲ್ಲಿ ಯಾವುದಾದರೂ ಹಾಲ್, ದೊಡ್ಡ ಕ್ಲಾಸ್ ರೂಂ ಅಥವಾ ಒಂದಷ್ಟು
ಉದ್ದದ ಜಗುಲಿ ಇಲ್ವಾ ಸಾರ್” ನಾನು ಕೇಳಿದೆ.
“ಅಯ್ಯೋ ಗೊತ್ತಲ್ಲ ಸಾರ್ ನಮ್ದು ಸರ್ಕಾರಿ ಪಾಠಶಾಲೆ. ಚಿಕ್ಕಚಿಕ್ಕ ಕ್ಲಾಸುಗಳು.
ಮಕ್ಳು ಕೂತ್ಕೊಂಬಿಟ್ರೆ ಕಾಲಿಡಕ್ಕೆ ಜಾಗ ಇರೋದಿಲ್ಲ. ಹೊರಗೆ ಇರೋ ಸಣ್ಣ ಅಂಗಳದಲ್ಲೇ ಶಾಮಿಯಾನ, ಸ್ಟೇಜು
ಹಾಕಿಸ್ಬೇಕು. ಅಲ್ಲೆಲ್ಲ ಅಷ್ಟಷ್ಟು ನೀರು ನಿಂತ್ಕೊಂಬಿಟ್ಟಿದೆ. ನನ್ನ ಒಂದು ವಾರದ ಒದ್ದಾಟ ವೇಸ್ಟ್
ಆಗೋಯ್ತು ಸಾರ್” ಎಂದು ನಾಗೇಶ್ ಅಸಹಾಯಕರಾದರು.
“ಶಾಲೆಯ ಸುತ್ತಮುತ್ತ ಯಾರದ್ದಾದ್ರೂ ದೊಡ್ಡ ಮನೆ ಅಥವಾ ಸಮುದಾಯ ಭವನ ಅಥವಾ
ದೇವರ ಗುಡಿ ಏನಾದರೂ ಇದೆಯಾ ನೋಡಿ. ಶಾಲೆಯ ಹೊರತು ಹತ್ತಿರದಲ್ಲೇ ಬೇರೆಲ್ಲಿ ಮಾಡಬಹುದು ನಿಧಾನವಾಗಿ
ಯೋಚನೆ ಮಾಡಿ. ಮಕ್ಕಳನ್ನು ನಿರಾಶೆಗೊಳಿಸೋದು ಬೇಡ. ನಾವು ಹೊರಟಾಗಿದೆ, ಬರ್ತೀವಿ. ಏನಾದರೂ ಮಾಡೋಣ”
ಎಂದೆ.
“ಸರಿ ನೋಡೋಣ ಸಾರ್. ಏನಾದರೂ ವ್ಯವಸ್ಥೆ ಮಾಡೋಣ. ಬನ್ನಿ ನೀವು” ಎಂದು ಫೋನಿಟ್ಟರು
ನಾಗೇಶ್. ನಾವು ಹೊರಟೆವು. ಮಳೆ ಜೋರಾಯಿತು. 25 30 ಕಿ. ಮೀ. ಪ್ರಯಾಣದುದ್ದಕ್ಕೂ ಮಳೆ ಹಾಗೆಯೇ ಇತ್ತು.
ದೊಡ್ಡನರಸಯ್ಯನ ಪಾಳ್ಯ ತಲುಪುವ ವೇಳೆಗೆ ಮಳೆ ಕೊಂಚ ಇಳಿದಿತ್ತು. ಅದರ ನಡುವೆಯೇ
ಯೂನಿಫಾರ್ಮಿನಲ್ಲಿದ್ದ ಪುಟಾಣಿಗಳು ಧ್ವಜಗೀತೆ ಹಾಡುತ್ತಿದ್ದರು.
“ಮಳೆ ಸಣ್ಣದಾಗುತ್ತಿದೆ ಸಾರ್. ಅಲ್ಲೊಂದು ಕ್ಲಾಸುರೂಂ ಖಾಲಿ ಇದೆ. ನೀವು
ಕಾಸ್ಟ್ಯೂಮ್ಸ್ ಹಾಕ್ಕೊಳ್ಳೋದು ಶುರು ಮಾಡಿಕೊಳ್ಳಿ. ಹುಡುಗರು ಮೆರವಣಿಗೆ ಹೋಗಿ ಬರುತ್ತಾರೆ. ಅಷ್ಟರಲ್ಲಿ
ಸ್ಟೇಜು ಶಾಮಿಯಾನ ಹಾಕಿಸ್ತೀನಿ. ನಿಮಗೇನಾದರೂ ಸಹಾಯಕ್ಕೆ ನಮ್ಮ ಹುಡುಗರು ಇರುತ್ತಾರೆ” ಎಂದರು ನಾಗೇಶ್.
ಆ ಪುಟಾಣಿಗಳಂತೂ ಚುರುಕುತನದಲ್ಲಿ ಮೇಸ್ಟ್ರಿಗೆ ಸರಿಸಾಟಿಯಾಗಿದ್ದರು. ಒಂದು
ಸಣ್ಣ ಕೆಲಸ ಹೇಳಿದರೆ ನಾಕು ಹುಡುಗರು ಎಂಟು ದಿಕ್ಕಿಗೆ ಓಡಿ ಹದಿನಾರು ಸೆಕೆಂಡಲ್ಲಿ ವಾಪಸ್ ಬಂದು,
ಇನ್ನೇನು ಹೇಳಿ ಸರ ಎಂದು ಕಾಯುತ್ತಿದ್ದರು. “ಏನ್ಸಾರ್ ನಿಮ್ ಹುಡುಗ್ರು” ಎಂದರೆ “ಹ್ಞೂ ಸಾರ್, ಹಂಗೆ
ಮಡಗಿದೀವಿ. ತಗೊಳ್ಳಿ ಈ ಬಾಳೆಹಣ್ಣು ದೇವರ ಪಕ್ಕ ಇಡಿ, ನಮ್ ಹುಡುಗ್ರೇ ಬೆಳೆದಿದ್ದು” ಎಂದು ಅಷ್ಟೆಲ್ಲ
ಅಡಾವುಡಿಗಳ ನಡುವೆ ಮಂದಹಾಸ ಬೀರಿದರು ನಾಗೇಶ್.
ಅಂತೂ ಬಹುತೇಕ ಮಳೆ ನಿಂತೇ ಹೋಯಿತು. ಅತ್ತ ತಕ್ಕಮಟ್ಟಿನ ವೇದಿಕೆ ಸಿದ್ಧವಾದರೆ
ಇತ್ತ ವೇಷಗಳೂ ತಯಾರಾದವು. ಹನ್ನೆರಡೂ ಕಾಲು ದಾಟುವ ಹೊತ್ತಿಗೆ ಭಾಗವತರು ‘ಗಜಮುಖದವಗೆ ಗಣಪಗೇ’ ಎಂದು
ಹಾಡಿ ವೇದಿಕೆ ಏರಿಯೇಬಿಟ್ಟರು.
ಮಳೆಯ ನಡುವೆಯೂ ಮಕ್ಕಳು, ಹಳ್ಳಿಯ ಹತ್ತಾರು ಮಂದಿ ಜಮಾಯಿಸಿದ್ದರು. ಒಂದಷ್ಟು
ಹೊತ್ತು ಹೈಕಳು ಕಣ್ಣುಬಾಯಿ ಬಿಟ್ಟು ವೇಷಗಳನ್ನು ನೋಡಿದವು. ಆಮೇಲೆ ಅರ್ಥವಾಗದೆ ಬೋರ್ ಅನಿಸಿ ತಮ್ಮತಮ್ಮೊಳಗೇ
ಒಂದಿಷ್ಟು ಸದ್ದುಗದ್ದಲ ಮಾಡಿಕೊಂಡವು.
ಮೂರೂಕಾಲಕ್ಕೆ ಸರಿಯಾಗಿ ಆಟ ಮುಗಿಸಿ ಭಾಗವತರು ‘ಕರದೊಳೂ ಪರಶು ಪಾಶಾಂಕುಶಧಾರಗೆ’
ಹಾಡಿದ ಮರುಕ್ಷಣ ಆಕಾಶ ಕಳಚಿಬಿದ್ದಂತೆ ಧೋ ಎಂದು ಮತ್ತೆ ಮುಸಲಧಾರೆ ಸುರಿಯತೊಡಗಿತು.
“ಮಕ್ಕಳ ಪ್ರಾರ್ಥನೆ ದೊಡ್ಡದು ಅಲ್ವಾ ಸಾರ್?” ಎಂಬ ನಾಗೇಶ್ ಮಾತನ್ನು ಹತ್ತು
ಸಲ ನೆನಪಿಸಿಕೊಂಡೆ.
ಮನಸಿದ್ದರೆ ಮಾರ್ಗ ಉತ್ತಮ ಪ್ರಯತ್ನ
ಪ್ರತ್ಯುತ್ತರಅಳಿಸಿಹತಾಶರಾಗದೆ ಪ್ರಯತ್ನಿಸಿ ಗೆದ್ದಿದ್ದಿರಾ ಶಭಾಶ್
ಪ್ರತ್ಯುತ್ತರಅಳಿಸಿ