ʼಭೂತಾನ್‌ನಲ್ಲಿ ಯಕ್ಷದೀವಿಗೆʼ
ಪ್ರವಾಸ ಕಥನ-1
ಡಾ. ಸಿಬಂತಿ ಪದ್ಮನಾಭ & ಡಾ. ಆರತಿ ಪಟ್ರಮೆ
(ಪ್ರಜಾಪ್ರಗತಿ, 25 ಜನವರಿ 2026)
----------------------------------------------------------
ಪ್ರಕೃತಿ ಸೌಂದರ್ಯವೇ ಮೈವೆತ್ತು ನಿಂತಿರುವ ಸಾಂಸ್ಕೃತಿಕ ಸಿರಿವಂತಿಕೆಯ ನಾಡು ಭೂತಾನ್‌ಗೆ ‘ಯಕ್ಷಗಾನ ಮತ್ತು ಮುಖವಾಡ ನೃತ್ಯದ ತೌಲನಿಕ ಅಧ್ಯಯನ’ ಯೋಜನೆಯ ಅಂಗವಾಗಿ ‘ಯಕ್ಷದೀವಿಗೆ’ಯ ಪ್ರತಿನಿಧಿಗಳಾಗಿ ಲೇಖಕರು ಇತ್ತೀಚೆಗೆ ಭೇಟಿ ನೀಡಿದರು. ತಮ್ಮ ಅನುಭವಗಳನ್ನು ಅವರು ಈ ಸರಣಿಯಲ್ಲಿ ಪ್ರಸ್ತುತಪಡಿಸಲಿದ್ದಾರೆ.
----------------------------------------------------------
ಎತ್ತ ನೋಡಿದರೂ ಎತ್ತರದ ಪರ್ವತಗಳೇ ಕಾಣುವ ದೇಶವನ್ನು ಪರ್ವತಗಳ ನಾಡೆಂದು ಕರೆಯದೆ ಬೇರೆ ದಾರಿಯಿಲ್ಲ! ಹೌದು, ಭೂತಾನ್ ಇಡೀ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಪರ್ವತಗಳನ್ನು ಹೊಂದಿರುವ ದೇಶವೆಂಬ ಹೆಗ್ಗಳಿಕೆ ಹೊಂದಿದೆ. ಈ ದೇಶದ ಶೇ. 98.8ರಷ್ಟು ಭಾಗವೂ ಪರ್ವತಗಳಿಂದಲೇ ಕೂಡಿದೆ. ಅದು ಸಣ್ಣ ಪರ್ವತ, ಇದು ದೊಡ್ಡ ಪರ್ವತವೆಂಬ ವ್ಯತ್ಯಾಸ ತೋರಿಸಬಹುದಷ್ಟೇ ಹೊರತು ಪರ್ವತಗಳಿಲ್ಲದ ಒಂದೂರನ್ನು ಇಲ್ಲಿ ತೋರಿಸುವುದೇ ಅಸಾಧ್ಯ. ಐದುನೂರು ಅಡಿ ಎತ್ತರದ ಪರ್ವತಗಳಿಂದ ತೊಡಗಿ 24,000 ಅಡಿ ಎತ್ತರದ ಪರ್ವತಗಳವರೆಗೆ ನೂರಾರು ಪರ್ವತಗಳು ಈ ದೇಶವನ್ನಿಡೀ ಆವರಿಸಿಕೊಂಡಿವೆ.ಪರ್ವತಗಳ ಅಂಚಿನಲ್ಲಿ ಆಳವಾದ ಕಣಿವೆಗಳು, ಅಲ್ಲಲ್ಲಿ ನದಿಗಳು, ಕಣ್ಣೆತ್ತುವಷ್ಟೂ ದೂರ ಎತ್ತರದ ಪೈನ್ ಮರಗಳ ಹಚ್ಚಹಸುರಿನ ದಟ್ಟ ಅರಣ್ಯ... ಭೂತಾನ್ ದೇಶವನ್ನು ನಿತ್ಯಹರಿದ್ವರ್ಣವಾಗಿಸಿದ ಪ್ರಕೃತಿಯ ಕೊಡುಗೆಗಳಿವು. ಇಡೀ ದೇಶದ ಶೇ. 64ರಷ್ಟು ಪ್ರದೇಶವನ್ನೂ ಕಾಡುಗಳೇ ಆವರಿಸಿಕೊಂಡಿವೆ ಎಂದರೆ ಇಲ್ಲಿನ ಅರಣ್ಯ ವ್ಯಾಪ್ತಿ, ಅದರ ಬಗ್ಗೆ ಜನರು ಹಾಗೂ ಸರ್ಕಾರಕ್ಕಿರುವ ಗೌರವವನ್ನು ಅರ್ಥ ಮಾಡಿಕೊಳ್ಳಬಹುದು.
ಈವರೆಗೂ ಯಾರೂ ಏರದ ಪ್ರಪಂಚದ ಅತ್ಯಂತ ಎತ್ತರದ ಪರ್ವತವೂ ಭೂತಾನಿನಲ್ಲಿದೆ. ಅದರ ಹೆಸರು- ಗಂಖರ್ ಪುಯೆನ್ಸಮ್. 7570 ಮೀಟರ್ ಅಂದರೆ 24,840 ಅಡಿ ಎತ್ತರದ ಈ ಪರ್ವತ ಶಿಖರ ಭೂತಾನ್-ಟಿಬೆಟ್ ಗಡಿಭಾಗದಲ್ಲಿದೆ. 6000 ಮೀಟರ್‌ಗಿಂತ ಎತ್ತರದ ಪರ್ವತಗಳನ್ನು ಹತ್ತಬಾರದು ಎಂದು ಮೂವತ್ತು ವರ್ಷಗಳ ಹಿಂದೆ ಭೂತಾನ್ ಸರ್ಕಾರ ಒಂದು ಕಾನೂನನ್ನೇ ಮಾಡಿತು. ಇದರ ಹಿಂದೆ ಧಾರ್ಮಿಕ ಕಾರಣಗಳೂ ಇವೆ. ಹೀಗಾಗಿ ಈ ಪರ್ವತವನ್ನು ಸಂಪೂರ್ಣವಾಗಿ ಏರುವುದಕ್ಕೆ ಇಲ್ಲಿಯವರೆಗೆ ಯಾರಿಗೂ ಸಾಧ್ಯವಾಗಿಲ್ಲ.ಟಿಬೆಟ್ ಅಂಚಿನಲ್ಲಿರುವ ಕೈಲಾಸ ಪರ್ವತವೂ ಇಂತಹದೇ ಒಂದು ಪರ್ವತ. ಹಿಂದೂ, ಬೌದ್ಧ, ಜೈನ ಹಾಗೂ ಬಾನ್ ಧಾರ್ಮಿಕ ಸಂಪ್ರದಾಯಗಳಲ್ಲಿ ಈ ಪರ್ವತಕ್ಕೆ ವಿಶೇಷ ಸ್ಥಾನವಿದೆ. 6638 ಮೀಟರ್ ಎತ್ತರದ ಈ ಪರ್ವತವನ್ನೂ ಯಾರೂ ಏರುವಂತಿಲ್ಲ. ವರ್ಷಕ್ಕೊಮ್ಮೆ ಇಲ್ಲಿಗೆ ತೀರ್ಥಯಾತ್ರೆ ಕೈಗೊಳ್ಳಬಹುದು ಅಷ್ಟೆ.
ಅಗೋ ಹಿಮಾಲಯ!
ಇಡಿಯ ಭೂತಾನ್ ದೇಶವೇ ಹಿಮಾಲಯದ ಒಂದು ಭಾಗವೆನ್ನುವುದು ಈ ದೇಶ ಪರ್ವತಗಳ ನಾಡು ಎನಿಸಿಕೊಳ್ಳುವುದಕ್ಕೆ ಪ್ರಮುಖ ಕಾರಣ. ಭೂತಾನ್ ವಿಶಾಲವಾದ ಪೂರ್ವ ಹಿಮಾಲಯದ ಮಧ್ಯೆ ಹರಡಿಕೊಂಡಿದೆ. ದಕ್ಷಿಣ ಮತ್ತು ನೈಋತ್ಯಕ್ಕೆ ನಮ್ಮ ಭಾರತ, ಉತ್ತರ ಮತ್ತು ವಾಯುವ್ಯಕ್ಕೆ ಚೀನಾ. ಎರಡೂ ದೇಶಗಳ ಮಧ್ಯೆ ಅಂಟಿಕೊಂಡಿರುವ ಈ ದೇಶಕ್ಕೆ ಸಮುದ್ರದ ಸಂಪರ್ಕವಿಲ್ಲ, ಆದರೆ ನದಿ ತೊರೆಗಳಿಗೆ ಕೊರತೆಯಿಲ್ಲ.
ಅಕ್ಕಪಕ್ಕದ ಭಾರತ ಮತ್ತು ಚೀನಾಗಳಿಗೆ ಹೋಲಿಸಿದರೆ ಭೂತಾನ್ ಪುಟ್ಟ ದೇಶ. ಇದರ ಒಟ್ಟು ಭೌಗೋಳಿಕ ವಿಸ್ತೀರ್ಣ 38,394 ಚದರ ಕಿ.ಮೀ. ಅಂದರೆ ತುಮಕೂರು ಜಿಲ್ಲೆಯ ಅಂದಾಜು ನಾಲ್ಕುಪಟ್ಟು ಅಂದುಕೊಳ್ಳಬಹುದು. ಆದರೆ ಜನಸಂಖ್ಯೆ ಮಾತ್ರ ನಮ್ಮ ಜಿಲ್ಲೆಯ ನಾಲ್ಕನೇ ಒಂದು ಪಾಲು ಎಂದರೆ ನೀವು ನಂಬಲೇಬೇಕು. ಭೂತಾನ್ ದೇಶದ ಒಟ್ಟು ಜನಸಂಖ್ಯೆ 7.27 ಲಕ್ಷ (ತುಮಕೂರು ಜಿಲ್ಲೆಯ ಜನಸಂಖ್ಯೆ 26.78 ಲಕ್ಷ). ಸರಳವಾಗಿ ಹೇಳಬೇಕೆಂದರೆ ತುಮಕೂರು ನಗರದ ಜನಸಂಖ್ಯೆಯ ಎರಡು ಪಟ್ಟು ಜನಸಂಖ್ಯೆಯಷ್ಟೇ ಇಡೀ ಭೂತಾನ್ ದೇಶದಲ್ಲಿದೆ. ಹೌದು, ವಿರಳ ಜನಸಂಖ್ಯೆಯೇ ಈ ದೇಶದ ವೈಶಿಷ್ಟ್ಯ; ಮತ್ತು ಈ ಕಾರಣದಿಂದಲೇ ಆಧುನಿಕ ಪ್ರಪಂಚದ ಮಧ್ಯೆ ತನ್ನದೇ ಆದ ಪರಿಸರ ವ್ಯವಸ್ಥೆ, ಜನಜೀವನ, ಸಂಸ್ಕೃತಿ ಇತ್ಯಾದಿಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಭೂತಾನ್‌ಗೆ ಸಾಧ್ಯವಾಗಿದೆ.
ಇಡೀ ದೇಶವೇ ಪರ್ವತಗಳಿಂದ ರಚಿತವಾಗಿರುವುದರಿಂದ ಮತ್ತು ದೇಶದ ಬಹುಭಾಗ ಅರಣ್ಯದಿಂದ ಕೂಡಿರುವುದರಿಂದ ಇಲ್ಲಿನ ಹೆಚ್ಚಿನ ಪ್ರದೇಶಗಳಲ್ಲಿ ಶಾಶ್ವತ ಜನವಸತಿ ಕಷ್ಟ. ಕಡಿದಾದ ಪರ್ವತಗಳು, ಆಳವಾದ ಕಣಿವೆಗಳ ಪ್ರದೇಶದಲ್ಲಿ ಕೃಷಿ ಮಾಡುವುದೂ ಕಷ್ಟವೇ. ದೇಶದಲ್ಲಿ ಶೇ. 60ಕ್ಕಿಂತ ಅರಣ್ಯ ಕಡಿಮೆಯಾಗಬಾರದು ಎಂದು ಇವರು ತಮ್ಮ ಸಂವಿಧಾನದಲ್ಲೇ ಬರೆದುಕೊಂಡುಬಿಟ್ಟಿದ್ದಾರೆ. ಇಪ್ಪತ್ತನೆಯ ಶತಮಾನದ ಮಧ್ಯಭಾಗದವರೆಗೂ ಈ ದೇಶದ ಪ್ರಪಂಚದ ಇತರ ಭಾಗಗಳ ಸಂಪರ್ಕವಿಲ್ಲದೆ ಏಕಾಂಗಿಯಾಗಿಯೇ ಇತ್ತು. ಈಗಷ್ಟೇ ಆಧುನಿಕತೆಯ ಪ್ರವೇಶವಾಗುತ್ತಿದೆ. ಇಲ್ಲಿ ಜನಸಂಖ್ಯೆ ಕಡಿಮೆಯಿರುವುದಕ್ಕೆ ಇವೆಲ್ಲ ಪ್ರಮುಖ ಕಾರಣಗಳು. ದೇಶದ ಒಟ್ಟು ಜನಸಂಖ್ಯೆಯ ಶೇ. 15ರಷ್ಟು ಪಾಲು ರಾಜಧಾನಿ ಥಿಂಪುವಿನಲ್ಲಿ ವಾಸಿಸುತ್ತಿದ್ದಾರೆ.
ಪ್ರಜಾಸತ್ತಾತ್ಮಕ ರಾಜಪ್ರಭುತ್ವ:
ಭೂತಾನಿನ ಪ್ರಮುಖ ವೈಶಿಷ್ಟ್ಯವೆಂದರೆ ಇಲ್ಲಿ ರಾಜನೂ ಇದ್ದಾನೆ, ರಾಜಕಾರಣಿಗಳೂ ಇದ್ದಾರೆ! ಈ ದೇಶ ಪ್ರಜಾಸತ್ತಾತ್ಮಕ ಸಾಂವಿಧಾನಿಕ ರಾಜಪ್ರಭುತ್ವವನ್ನು ಅನುಸರಿಸುತ್ತಿದೆ. ಯುರೋಪಿನ ಇಂಗ್ಲೆಂಡ್, ಸ್ವೀಡನ್, ನಾರ್ವೆ, ಡೆನ್ಮಾರ್ಕ್, ಸ್ಪೇನ್, ನಮ್ಮ ಆಸುಪಾಸಿನ ಜಪಾನ್, ಥಾಯ್ಲೆಂಡ್, ಮಲೇಷ್ಯಾ ಮೊದಲಾದ ದೇಶಗಳಲ್ಲಿ ಈ ಬಗೆಯ ರಾಜಕೀಯ ವ್ಯವಸ್ಥೆಯಿದೆ. ಆದರೆ ಭೂತಾನ್ ಒಂದು ವಿಶಿಷ್ಟ ಪ್ರತ್ಯೇಕ ಉದಾಹರಣೆ. ಏಕೆಂದರೆ ಇಲ್ಲಿ ರಾಜಪ್ರಭುತ್ವ ಪ್ರಜಾಪ್ರಭುತ್ವವಾಗಿ ಬದಲಾದದ್ದು ಜನರ ಆಗ್ರಹದಿಂದ ಅಲ್ಲ, ರಾಜನ ಸ್ವ-ಇಚ್ಛೆಯಿಂದ. ಈ ಹಿಂದಿನ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಜಾರಿಮಾಡಬೇಕೆಂದು ಬಯಸಿ 2005ರಲ್ಲಿ ಸಂವಿಧಾನ ರಚನೆಯ ಪ್ರಕ್ರಿಯೆ ಆರಂಭಿಸಿದರು. 2008ರಲ್ಲಿ ಚುನಾವಣೆ ನಡೆಸಿ ಆಡಳಿತದ ಜವಾಬ್ದಾರಿಯನ್ನು ಚುನಾಯಿತ ಸಂಸತ್ತಿಗೆ ಹಸ್ತಾಂತರಿಸಿದರು. ಅಧಿಕಾರಕ್ಕಾಗಿ ಜನರು ಕಚ್ಚಾಡುವ ಈ ಕಾಲದಲ್ಲಿ ಭೂತಾನ್‌ನ ರಾಜ ತಾನೇ ಇಚ್ಛೆಪಟ್ಟು ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಮನಸ್ಸು ಮಾಡಿದ್ದು ನಿಜಕ್ಕೂ ದೊಡ್ಡ ವಿಚಾರ.
ಆದರೆ ರಾಜಪ್ರಭುತ್ವವು ದೇಶದ ಆಡಳಿತದ ಒಂದು ಭಾಗವಾಗಿ ಇನ್ನೂ ಉಳಿದುಕೊಂಡಿದೆ. ರಾಜಪ್ರಭುತ್ವದ ಬಗ್ಗೆ ಇಲ್ಲಿನ ಜನರು ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದಾರೆ. ರಾಜ ದೇಶದ ನಾಮಮಾತ್ರ ಕಾರ್ಯಾಂಗವಾಗಿದ್ದರೂ ಆತನನ್ನೇ ಪರಮಾಧಿಕಾರವುಳ್ಳ ಅರಸನನ್ನಾಗಿ ಜನರು ಗೌರವಿಸುತ್ತಾರೆ ಮತ್ತು ಪ್ರೀತಿಸುತ್ತಾರೆ. ಭೂತಾನ್‌ನಲ್ಲಿ ರಾಜನನ್ನು ಡ್ರುಕ್ ಗ್ಯಾಲ್ಪೋ (ಡ್ರ್ಯಾಗನ್ ಅರಸ) ಎಂಬ ಪದವಿಯಿಂದ ಗುರುತಿಸುತ್ತಾರೆ.
ಜಿಗ್ಮೆ ಖೇಸರ್ ನಮ್‌ಗ್ಯೆಲ್ ವಾಂಗ್ಚುಕ್ ಅವರು ಭೂತಾನ್‌ನ ಈಗಿನ ರಾಜ. ವಾಂಗ್ಚುಕ್ ರಾಜಪ್ರಭುತ್ವದ ಐದನೇ ರಾಜ ಇವರು. ದೇಶದಲ್ಲಿ ಸಾಂವಿಧಾನಿಕ ಪ್ರಜಾಸತ್ತೆಯನ್ನು ಜಾರಿಗೆ ತಂದ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಇವರ ತಂದೆ. 45 ವರ್ಷ ವಯಸ್ಸಿನ ಜಿಗ್ಮೆ ಖೇಸರ್ ನಮ್‌ಗ್ಯೆಲ್ ವಾಂಗ್ಚುಕ್ ಹಾಗೂ ಮಹಾರಾಣಿ ಜೆಟ್ಸುನ್ ಪೆಮಾ ದಂಪತಿಗೆ ಮೂವರು ಮಕ್ಕಳಿದ್ದಾರೆ. ರಾಜ-ರಾಣಿ ಇಬ್ಬರೂ ಉನ್ನತ ಶಿಕ್ಷಣ ಪಡೆದವರು. ತಮ್ಮ ವಿದ್ಯಾಭ್ಯಾಸದ ಕೆಲವು ವರ್ಷಗಳನ್ನು ಅವರು ಭಾರತದಲ್ಲೂ ಕಳೆದಿದ್ದಾರೆ. ಭೂತಾನ್‌ನ ಸಣ್ಣದೊಂದು ಹೋಟೇಲ್‌ನಿಂದ ತೊಡಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಎಲ್ಲೆಡೆಯೂ ರಾಜಕುಟುಂಬದ ಒಂದು ಚೆಂದನೆಯ ಚಿತ್ರವಂತೂ ಇದ್ದೇ ಇರುತ್ತದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಭೂತಾನ್ ತನ್ನದೇ ಆದ ಅಸ್ಮಿತೆಯೊಂದನ್ನು ಉಳಿಸಿಕೊಂಡು ಬಂದಿರುವುದಕ್ಕೆ ಈ ರಾಜಾಡಳಿತವೂ ಒಂದು ಪ್ರಮುಖ ಕಾರಣ.
ಇಂತಹ ವೈಶಿಷ್ಟ್ಯಪೂರ್ಣ ದೇಶವೊಂದಕ್ಕೆ ಭೇಟಿ ನೀಡುವ ಅವಕಾಶ ನಮಗೆ ಒದಗಿಬಂದದ್ದು ಮಾತ್ರ ಒಂದು ದೊಡ್ಡ ಆಕಸ್ಮಿಕ, ಆದರೆ ಅಷ್ಟೇ ಅದ್ಭುತ. ಆದರೆ ಇದು ಸಾಧ್ಯವಾದದ್ದು ಯಕ್ಷಗಾನವೆಂಬ ರಮಣೀಯ ಕಲೆಯೊಂದರ ಮೂಲಕ. ಭೂತಾನ್‌ಗೂ ಯಕ್ಷಗಾನಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ ಎಂದು ಕೇಳುವಿರಾ? ಉತ್ತರ ಮುಂದಿನ ಸಂಚಿಕೆಗಳಲ್ಲಿ ಸಿಗಲಿದೆ.
(ಮುಂದುವರಿಯುತ್ತದೆ)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ