'ಭೂತಾನ್‌ನಲ್ಲಿ ಯಕ್ಷದೀವಿಗೆʼ
ಪ್ರವಾಸ ಕಥನ-5
ಡಾ. ಸಿಬಂತಿ ಪದ್ಮನಾಭ & ಡಾ. ಆರತಿ ಪಟ್ರಮೆ
(ಪ್ರಜಾಪ್ರಗತಿ, 22 ಫೆಬ್ರವರಿ 2026)
(ಮುಂದುವರಿದ ಭಾಗ...)
ಡಿಸೆಂಬರ್ 1 ಸೋಮವಾರ. ಎಂದಿನಂತೆ ಮನೆಯಿಂದ ಹೊರಡುವ ತರಾತುರಿಯಲ್ಲಿದ್ದಾಗ ಒಂದು ವಾಟ್ಸಾಪ್ ಕರೆ. ಅಪರಿಚಿತ ಸಂಖ್ಯೆ. “ಹಲೋ” ಎಂದರೆ ಆ ಕಡೆಯಿಂದ “ನಾವು ಭೂತಾನ್ ರಾಯಭಾರ ಕಚೇರಿಯಿಂದ” ಎಂದರು. ಅರೆ, ಎರಡು ತಿಂಗಳಿನಿಂದ ಸುದ್ದಿಯಿರಲಿಲ್ಲ, ಈಗ ಬೆಳ್ಳಂಬೆಳಗ್ಗೆ ಕರೆ ಮಾಡಿದ್ದಾರಲ್ಲ ಎಂದು ಕುತೂಹಲವಾಯಿತು. ಅವರು ಮಾತು ಮುಂದುವರಿಸಿದರು: “ನಿಮ್ಮ ಅಧ್ಯಯನ ಪ್ರವಾಸದ ವೇಳಾಪಟ್ಟಿ ಬಗ್ಗೆ ಒಂದು ಸಣ್ಣ ಸ್ಪಷ್ಟೀಕರಣ ಬೇಕಿತ್ತು. ನೀವು ಪ್ರವಾಸದ ಹನ್ನೆರಡನೆಯ ದಿನ ಬೌದ್ಧಮಂದಿರಗಳಿಗೆ ಭೇಟಿ ನೀಡುವುದಾಗಿ ಉಲ್ಲೇಖಿಸಿದ್ದೀರಿ. ಅವು ತುಂಬ ದೂರದಲ್ಲಿರುತ್ತವೆ. ಅಲ್ಲಿಗೆಲ್ಲ ಹೋಗಿ ಬರುವುದಕ್ಕೆ ಒಂದು ದಿನ ಸಾಕಾಗುವುದಿಲ್ಲ. ಇದನ್ನು ಹೇಗೆ ನಿಭಾಯಿಸುತ್ತೀರಿ ನೋಡಿ. ಅದರಂತೆ ನಿಮ್ಮ ವೇಳಾಪಟ್ಟಿಯನ್ನು ಪರಿಷ್ಕರಿಸಿ...”
ಭೂತಾನದಲ್ಲಿ ಯಾವ ಊರು, ಏನು ಕಥೆ? ಎಲ್ಲಿಂದ ಎಲ್ಲಿಗೆ ಎಷ್ಟು ದೂರ? ತುಮಕೂರಲ್ಲಿ ಕುಳಿತಿರುವ ನಾವು ಇಂಟರ್ನೆಟ್ ಇತ್ಯಾದಿಗಳ ಮಾಹಿತಿ ಆಧಾರದಲ್ಲಿ ಅಂದಾಜಿಸಬಹುದಷ್ಟೇ ಹೊರತು ಅಲ್ಲಿನ ವಾಸ್ತವ ತಿಳುವಳಿಕೆ ನಮಗೆಲ್ಲಿದೆ? ಪಾರೊ ಜಿಲ್ಲೆಯಲ್ಲಿರುವ ಕೆಲವು ಬೌದ್ಧಮಂದಿರಗಳಿಗೆ ಭೇಟಿ ನೀಡಿ ಮುಖವಾಡ ನೃತ್ಯದ ಬಗ್ಗೆ ಮಾಹಿತಿ ಪಡೆಯುತ್ತೇವೆ ಎಂದು ನಮ್ಮ ಪ್ರಸ್ತಾವನೆಯಲ್ಲಿ ಬರೆದಿದ್ದೆವು. ಆದರೆ ಅವು ಎಲ್ಲಿವೆ, ಪರಸ್ಪರ ಎಷ್ಟು ದೂರದಲ್ಲಿವೆ, ಅವುಗಳ ಮಧ್ಯೆ ಪ್ರಯಾಣಕ್ಕೆ ಎಷ್ಟು ಹೊತ್ತು ಬೇಕು ಎಂಬ ಮಾಹಿತಿ ನಮಗಿರಲಿಲ್ಲ. ಅಲ್ಲಿನ ಸ್ಥಳೀಯರನ್ನೇ ಯಾರನ್ನಾದರೂ ಕೇಳಬೇಕು.
ಪ್ರತಿಯೊಂದಕ್ಕೂ ಫೋನೋ, ಮೆಸೇಜೋ ಮಾಡಿ ಕೇಳಬಹುದೆಂದರೆ ಅಷ್ಟೊಂದು ಆತ್ಮೀಯರು ಯಾರೂ ಅಲ್ಲಿಲ್ಲ. ಈ ಯೋಜನೆಯ ಕಾರಣಕ್ಕಾಗಿ ಒಂದಿಬ್ಬರ ಪರಿಚಯವಾಗಿರುವುದಷ್ಟೇ. ಅದೂ ತೀರಾ ಔಪಚಾರಿಕ ಮಾತುಕತೆಗಳು. ಸ್ನೇಹಿತರ ಬಳಿ ಮಾತಾಡುವಂತೆ ಅವರೊಂದಿಗೆ ಮಾತಾಡುವಂತಿಲ್ಲ. ಅಷ್ಟು ಹೆಚ್ಚಾಗದಂತೆ ಇಷ್ಟು ಕಡಿಮೆಯೂ ಆಗದಂತೆ ಅಳೆದು ಸುರಿದು ಮಾತಾಡಬೇಕು. ನೋಡೋಣ, ಇದಕ್ಕೆ ಏನಾದರೊಂದು ದಾರಿ ಹುಡುಕಬೇಕು ಎಂದು ಯೋಚಿಸುತ್ತಲೇ ಕರೆ ಮಾಡಿದ ರಾಯಭಾರ ಕಚೇರಿಯವರಿಗೆ, “ಆಯಿತು, ಸರಿಪಡಿಸಿ ಕಳಿಸುತ್ತೇವೆ” ಎಂದು ಉತ್ತರಿಸಿದೆವು.ಆದರೆ ಯಾರೊಂದಿಗೆ ಮಾತಾಡಿ ಈ ಮಾಹಿತಿಯನ್ನು ಪಡೆಯುವುದು ಎಂದು ಹೊಳೆಯಲಿಲ್ಲ. ಈ ಹಿಂದೆ ನಾವು ಮಾಡಿದ ಸಂವಹನಗಳೆಲ್ಲ ಇ-ಮೇಲ್ ಮುಖಾಂತರ. ಪ್ರತಿ ಸಣ್ಣ ಮಾಹಿತಿಗೂ ಇ-ಮೇಲ್ ಮಾಡಿ ಉತ್ತರ ಪಡೆಯುವುದು ತ್ರಾಸದ ಕೆಲಸ. ವಾಟ್ಸಾಪ್ ಇದ್ದರೆ ಸಣ್ಣಪುಟ್ಟದಕ್ಕೂ ಮೆಸೇಜ್ ಮಾಡಿ ಕೇಳಬಹುದು. ಹಿಂದೆ ಸಂಸ್ಕೃತಿ ಇಲಾಖೆಯ ಸೋನಂ ಎಂಬವರ ಪರಿಚಯ ಅವರ ಜಾಲತಾಣದ ವಾಟ್ಸಾಪ್ ಲಿಂಕ್ ಮೂಲಕ ಆಗಿದ್ದರೂ ಅದು ಅವರ ಕಚೇರಿಗೆ ಸಂಬಂಧಿಸಿದ್ದು. ಅವರೇ ಅದನ್ನು ನೋಡುತ್ತಾರೆ ಎಂದೇನೂ ಇಲ್ಲ. ಅದಲ್ಲದೆ ಅವರೆಲ್ಲ ಅಧಿಕಾರಿ ವರ್ಗದವರು; ಅವರೊಂದಿಗೆ ಚಾಟ್ ಮಾಡಿಕೊಂಡು ಕೂರುವುದಕ್ಕಾಗುತ್ತದಾ? ಸರಿಯಾದ ಮಾಹಿತಿಗಳಿಲ್ಲದೆ ಪ್ರಸ್ತಾವನೆ ಹೇಗೆ ಸಿದ್ಧಪಡಿಸಿದಿರಿ ಎಂದು ವಾಪಸ್ ಕೇಳಿದರೆ ಕಷ್ಟ!
ನಮ್ಮೊಂದಿಗೆ ಸಹಭಾಗಿತ್ವ ಹೊಂದುವುದಕ್ಕೆ ಸಿದ್ಧವಿದ್ದ ಸಾಂಪ್ರದಾಯಿಕ ಪ್ರದರ್ಶನ ಕಲೆ ಮತ್ತು ಸಂಗೀತ ವಿಭಾಗ (TPAMD)ದ ಯಾರಾದ್ದಾದರೂ ದೂರವಾಣಿ ಸಂಖ್ಯೆ ದೊರೆತರೆ ಕೆಲಸ ಸುಲಭವಾಗುತ್ತದೆ ಅನಿಸಿತು. ಆದರೆ ಈ ಹಿಂದೆ ಅವರ ಸಹಾಯ ಕೋರಿ ಅವರಿಗೂ ಮೈಲ್ ಮಾಡಿದ್ದೆವು. ಟಿಪಿಎಎಂಡಿಯ ಸಹಭಾಗಿತ್ವ ಹೊಂದಬಹುದೆಂದು ಸೋನಂ ಅವರೇ ತಿಳಿಸಿದ್ದರು. ನಮಗೆ ಪ್ರತಿಕ್ರಿಯೆಯಾಗಿ ಹಾಕುವ ಎಲ್ಲ ಮೈಲ್‌ಗಳನ್ನು ಅವರಿಗೂ ಕಳಿಸುತ್ತಿದ್ದರು. ಆದರೆ ಅವರಿಂದ ನಮಗೆ ಯಾವುದೇ ನಿರ್ದಿಷ್ಟ ಪ್ರತಿಕ್ರಿಯೆ ಬಂದಿರಲಿಲ್ಲ. ಟಿಪಿಎಎಂಡಿ ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಸಂಸ್ಥೆಯಾದ್ದರಿಂದ ಅವರ ದೂರವಾಣಿ ಸಂಖ್ಯೆಯನ್ನು ಸೋನಂ ಅವರ ಮೂಲಕವೇ ಪಡೆಯುವುದು ಸರಿ ಎನಿಸಿತು. ಸೋನಂ ಅವರಿಗೊಂದು ಇ-ಮೇಲ್ ಬರೆದು, “ನಾವು ನಮ್ಮ ಯೋಜನೆಯ ಸಂಬಂಧ ಭೂತಾನ್‌ನಲ್ಲಿ ಕೆಲವು ಬೌದ್ಧ ಮಂದಿರಗಳನ್ನು ಸಂದರ್ಶಿಸಬೇಕಾಗಿದೆ. ಒಂದಷ್ಟು ಕಲಾವಿದರನ್ನು ಮಾತಾಡಿಸಬೇಕಾಗಿದೆ. ಈ ಬಗ್ಗೆ ಮಾಹಿತಿ ಪಡೆಯಲು ನಮಗೆ ಟಿಪಿಎಎಂಡಿಗೆ ಸಂಬಂಧಿಸಿದವರೊಬ್ಬರ ಸಂಪರ್ಕ ಸಂಖ್ಯೆ ಕೊಡಬಹುದೇ? ನಮಗೆ ಅವರಿಂದ ಈತನಕ ಯಾವುದೇ ಉತ್ತರ ಬಂದಿಲ್ಲ” ಎಂದು ಕೇಳಿದೆವು.
ಒಂದೇ ಗಂಟೆಯೊಳಗೆ ಅವರಿಂದ ಉತ್ತರ ಬಂತು. “ನಿಮ್ಮ ಪ್ರವಾಸಕ್ಕೆ ನನ್ನನ್ನು ಸಂಯೋಜಕಿ (focal) ಯನ್ನಾಗಿ ನೇಮಿಸಲಾಗಿದೆ. ಏನೇ ಪ್ರಶ್ನೆಗಳಿದ್ದರೂ ನೀವು ನನ್ನನ್ನು ಕೇಳಬಹುದು” ಎಂದು ಅವರು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆ ಕೊಟ್ಟಿದ್ದರು. ಇದರಿಂದ ತುಂಬ ಸಮಾಧಾನವೆನಿಸಿತು, ಮತ್ತು ಅವರ ಬಗ್ಗೆ ಗೌರವ ಮೂಡಿತು, ನಮ್ಮ ಯೋಜನೆಯನ್ನು ಭೂತಾನ್ ಸರ್ಕಾರ ಸಾಕಷ್ಟು ಗಂಭೀರವಾಗಿ ಪರಿಗಣಿಸಿದೆಯೆಂದು ಸಂತೋಷವೂ ಆಯಿತು. ಇನ್ನೇನೇ ಅನುಮಾನಗಳು ಬಂದರೂ ಇವರನ್ನೇ ಕೇಳಬಹುದಲ್ಲ ಎಂದು ನಿರಾಳವೆನಿಸಿತು.
ತಕ್ಷಣ ಅವರ ಸಂಖ್ಯೆಯನ್ನು ಸೇವ್ ಮಾಡಿಕೊಂಡು, “ನಾವು ಪ್ರವಾಸದ ಹನ್ನೆರಡನೆಯ ದಿನ ಕೆಲವು ಬೌದ್ಧಮಂದಿರಗಳನ್ನು ಸಂದರ್ಶಿಸುವುದಾಗಿ ಬರೆದಿದ್ದೇವೆ. ಆದರೆ ಒಂದೇ ದಿನದಲ್ಲಿ ಅದೆಲ್ಲ ಸಾಧ್ಯವಾಗುವುದಿಲ್ಲ ಎಂಬ ಅನುಮಾನವನ್ನು ರಾಯಭಾರ ಕಚೇರಿಯವರು ವ್ಯಕ್ತಪಡಿಸಿ ಈ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದ್ದಾರೆ. ನಾವಿನ್ನೂ ವೇಳಾಪಟ್ಟಿ ಹಾಗೂ ಪ್ರಯಾಣದ ದಿನವನ್ನು ಅಂತಿಮಗೊಳಿಸಿಲ್ಲವಾದ್ದರಿಂದ ಇನ್ನೊಂದು ದಿನವನ್ನು ಹೆಚ್ಚುವರಿಯಾಗಿ ಸೇರಿಸಲು ನಮಗೆ ಅಡ್ಡಿಯಿಲ್ಲ. ಭೇಟಿ ನೀಡುವುದಕ್ಕೆ ಅನುಕೂಲವಿರುವ ಹತ್ತಿರದ ಬೌದ್ಧಮಂದಿರಗಳ ಬಗ್ಗೆ ಮಾಹಿತಿ ಕೊಡುತ್ತೀರಾ?” ಎಂದು ಕೇಳಿದೆವು.
“ನೀವು ಯಾವ ಬೌದ್ಧಮಂದಿರವನ್ನು ಭೇಟಿಮಾಡಲು ನಿರ್ಧರಿಸಿದ್ದೀರಿ? ಪಾರೋದಲ್ಲೇ, ಪುನಾಖಾದಲ್ಲೇ? ಭಾಷೆ ಮತ್ತು ಸಂಸ್ಕೃತಿ ಕಾಲೇಜು (CLCS) ಭೇಟಿಯನ್ನು ನೀವು ಈಗಾಗಲೇ ಯೋಜಿಸಿಕೊಂಡಿದ್ದೀರಾ? ಅಲ್ಲಿಗೆ ಹೋಗಲು ಥಿಂಪುವಿನಿಂದ ಪೂರ್ತಿ ಒಂದು ದಿನ ಬೇಕಾಗುತ್ತದೆ. ಪ್ರಯಾಣಕ್ಕೆ ನಿಮಗೆ ರೂಟ್ ಪರ್ಮಿಟ್‌ನ ಅವಶ್ಯಕತೆಯಿದೆ. ನಿಮ್ಮ ಪಾಸ್‌ಪೋರ್ಟ್ ಪ್ರತಿಗಳು ಬೇಕಾಗುತ್ತವೆ. ನಿಮಗೆ ರೂಟ್ ಪರ್ಮಿಟ್ ಯಾರು ಮಾಡಿಕೊಡುತ್ತಾರೆ? ಅಲ್ಲಿಗೆ ಹೋಗಲು ಕಾರ್ ಮತ್ತು ಡ್ರೈವರನ್ನು ಗೊತ್ತುಮಾಡಿದ್ದೀರಾ? ಎಸ್‌ಡಿಎಫ್ (SDF) ವಿನಾಯಿತಿಗೆ ಅರ್ಜಿ ಹಾಕಿದ್ದೀರಾ?” ಅವರು ಒಂದಾದ ಮೇಲೊಂದು ಪ್ರಶ್ನೆ ಕೇಳಿದರು. ನಮ್ಮಲ್ಲಿ ಹೊಸಹೊಸ ಆತಂಕಗಳು ಮೂಡುತ್ತಿದ್ದವು.
ನಮಗೆ ನಿಜವಾಗಿಯೂ ಇವು ಏನೇನೂ ಗೊತ್ತಿರಲಿಲ್ಲ. ಭೂತಾನ್ ದೇಶದೊಳಗೆ ಪ್ರಯಾಣಕ್ಕೆ ಬೇರೆ ಪರ್ಮಿಟ್ ಬೇಕಾ, ಅದನ್ನು ಯಾರು ಕೊಡುತ್ತಾರೆ, ಈ ಎಸ್‌ಡಿಎಫ್ ವಿನಾಯಿತಿ ಎಂದರೇನು- ನಾವು ಚಕಿತರಾದೆವು. ಈ ಯೋಜನೆ ಅಂತಿಮವಾಗಿ ಅಂಗೀಕಾರವಾಗುವ ಬಗ್ಗೆ ಅದರ ಮುನ್ನಾದಿನದವರೆಗೂ ನಮಗೆ ಗೊತ್ತಿರಲಿಲ್ಲ. ಹೀಗಾಗಿ ಅಲ್ಲಿ ಪ್ರಯಾಣಿಸುವ ಪರ್ಮಿಟ್, ಕಾರು, ಡ್ರೈವರ್ ಏನು, ವಿಮಾನದ ಟಿಕೆಟ್ ಬುಕ್ ಮಾಡುವ ಬಗೆಗೂ ನಾವು ಯೋಚಿಸಿರಲಿಲ್ಲ. ವಿಮಾನದ ಟಿಕೆಟ್ ಅಂತಿರಲಿ, ಪಾಸ್‌ಪೋರ್ಟ್ ಕೂಡ ಮಾಡಿಸಿಕೊಂಡಿರಲಿಲ್ಲ ಅಂದರೆ ಯಾರಾದರೂ ತಮಾಷೆ ಮಾಡಿಯಾರು. ಆದರೆ ಅದು ನಿಜ.ವಿದೇಶದ ಅಧ್ಯಯನ ಪ್ರವಾಸಕ್ಕೆ ಹೋಗುವವರು ಪಾಸ್‌ಪೋರ್ಟ್ ಮಾಡಿಸಿಕೊಂಡಿಲ್ಲ ಅಂದರೆ ತಮಾಷೆಯಲ್ಲದೆ ಇನ್ನೇನು? ಆದರೆ ನಮ್ಮ ದಿನನಿತ್ಯದ ಚಟುವಟಿಕೆಗಳ ಜಂಜಡದ ಮಧ್ಯೆ ಆ ಕೆಲಸ ಉಳಿದುಕೊಂಡಿತ್ತು. ಮೇಲಾಗಿ ಪ್ರಾಯೋಜಕರ ಕಡೆಯಿಂದ ಪ್ರಸ್ತಾವನೆಯ ಪ್ರಗತಿ ಬಗ್ಗೆ ಆಗಿಂದಾಗ್ಗೆ ಮಾಹಿತಿಯೂ ಇರಲಿಲ್ಲ. ಬಹುಶಃ ಇದು ಕೈಗೂಡುವ ಯೋಜನೆಯಲ್ಲ ಎಂಬ ನಿರ್ಧಾರಕ್ಕೆ ನಾವು ಬಂದಿದ್ದೆವು. ಹೀಗಾಗಿ “ನೋಡೋಣ, ಅಗತ್ಯವಿದ್ದರೆ ಮುಂದಕ್ಕೆ ಪಾಸ್‌ಪೋರ್ಟ್ ಮಾಡಿಸಿಕೊಳ್ಳೋಣ” ಎಂದುಕೊಂಡಿದ್ದೆವು.
ಅಧ್ಯಯನ ಪ್ರವಾಸದ ತಂಡದಲ್ಲಿ ನಾವು ಮೂವರಿದ್ದೆವು. ನಾವಿಬ್ಬರಲ್ಲದೆ ನಮ್ಮ ಮಗ ಸಂವೃತ- ಎಸ್.ಎಸ್.ಪುರಂ ಮಾರುತಿ ವಿದ್ಯಾಕೇಂದ್ರದ 9ನೇ ತರಗತಿ ವಿದ್ಯಾರ್ಥಿ. ಮೂವರ ಪೈಕಿ ಒಬ್ಬರಲ್ಲಿ ಮಾತ್ರ ಪಾಸ್‌ಪೋರ್ಟ್ ಇತ್ತು. ನಾವು ನಮ್ಮ ಪ್ರಸ್ತಾವನೆಯ ಪ್ರಕಾರ ಜನವರಿ 2ರಂದು ಭೂತಾನ್ ವಿಮಾನವೇರಬೇಕು. ಅಂದರೆ ಸರಿಯಾಗಿ ಒಂದು ತಿಂಗಳಿದೆ. ಅದಕ್ಕಿಂತ ಮೊದಲು ಬೇರೆಬೇರೆ ಕೆಲಸವಾಗಬೇಕು. ಅಲ್ಲಿ ಅದೇನೋ ರೂಟ್ ಪರ್ಮಿಟ್, ಎಸ್‌ಡಿಎಫ್ ವಿನಾಯಿತಿ ಬಗೆಗೆಲ್ಲ ಕೇಳಿದ್ದಾರೆ- ಅವಕ್ಕೆ ಪಾಸ್‌ಪೋರ್ಟ್ ಬೇಕು. ವಿಮಾನ ಟಿಕೆಟ್ ಕಾದಿರಿಸಲು ಪಾಸ್‌ಪೋರ್ಟ್ ಬೇಕು. ಸಾಮಾನ್ಯ ಪ್ರಕ್ರಿಯೆಯಲ್ಲಿ ಪಾಸ್‌ಪೋರ್ಟ್ ಪಡೆಯಲು 45 ದಿನ ಬೇಕು. ನಮ್ಮೆದುರು 30 ದಿನಗಳು ಮಾತ್ರ ಉಳಿದಿದ್ದವು. ಅಂದರೆ ತತ್ಕಾಲ್ ಯೋಜನೆಯಲ್ಲಿ ಮಾತ್ರ ಪಡೆಯಬಹುದು. ಆದರೆ ಉಳಿದ ಕೆಲಸಗಳಿಗೆಲ್ಲ ಇಷ್ಟು ದಿನ ಸಾಕಾಗುತ್ತದಾ? ಹೊಸ ಚಿಂತೆಗಳು ಹುಟ್ಟಿಕೊಂಡವು.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ