ಶನಿವಾರ, ಮಾರ್ಚ್ 7, 2026

ಬಸ್ಸಲ್ಲಿ ಹೋಗಬಹುದೇ ಭೂತಾನ್‌ಗೆ?

'ಭೂತಾನ್‌ನಲ್ಲಿ ಯಕ್ಷದೀವಿಗೆʼ

ಪ್ರವಾಸ ಕಥನ-6

ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ

(ಪ್ರಜಾಪ್ರಗತಿ, 01 ಮಾರ್ಚ್ 2026)

(ಮುಂದುವರಿದ ಭಾಗ...)

ವಿದೇಶ ಎಂದಕೂಡಲೇ ನಮಗೆ ಸಾಮಾನ್ಯವಾಗಿ ವಿಮಾನದಲ್ಲೇ ಹೋಗಬೇಕು ಎಂಬ ಯೋಚನೆ ಬಂದುಬಿಡುತ್ತದೆ. ಆದರೆ ಭೂತಾನ್‌ಗೆ ಹೋಗುವುದಕ್ಕೆ ವಿಮಾನವೇ ಬೇಕಾಗಿಲ್ಲ. ಭಾರತ-ಭೂತಾನ್‌ಗಳು ಸುಮಾರು 699 ಕಿ.ಮೀ.ಗಳಷ್ಟು ದೀರ್ಘವಾದ ಗಡಿಯನ್ನು ಹಂಚಿಕೊಂಡಿವೆ. ಭಾರತದಿಂದ ಭೂತಾನ್‌ಗೆ ಹೋಗುವುದಕ್ಕೆ ಹಲವು ದಾರಿಗಳು, ಹಲವು ವಿಧಾನಗಳು ಇವೆ. ನಮ್ಮಲ್ಲಿ ಎಷ್ಟು ಸಮಯ ಮತ್ತು ಹಣ ಇದೆ ಎಂಬುದರ ಆಧಾರದಲ್ಲಿ ಇವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 

ಬಸ್ಸು, ರೈಲು, ವಿಮಾನ- ಭೂತಾನ್‌ಗೆ ಪ್ರಯಾಣಿಸುವುದಕ್ಕೆ ಈ ಮೂರು ವಿಧಾನಗಳೂ ನೆರವಿಗೆ ಬರುತ್ತವೆ. ಸದ್ಯ ಹಡಗಿನ ಮೂಲಕ ಹೋಗಲಾರೆವೇ ಎಂದು ಕೇಳುವಂತಿಲ್ಲ. ಭೂತಾನದ ಪರ್ವತಗಳ ಕತೆಯಲ್ಲಿ ಸಮುದ್ರಕ್ಕೆ ಜಾಗವಿಲ್ಲ! ಹಾಗೆ ನೋಡಿದರೆ ಈ ಪರ್ವತಗಳಿಂದಾಗಿ ಭೂತಾನದಲ್ಲಿ ರೈಲ್ವೇ ವ್ಯವಸ್ಥೆಯೂ ಇಲ್ಲ. ಭೂತಾನ್‌ನ ಗಡಿಪ್ರದೇಶ ತಲುಪುವುದಕ್ಕಷ್ಟೆ ರೈಲು ಬಳಸಬಹುದು. ಆಮೇಲೆ ಭೂಸಾರಿಗೆಯೇ ಸರಿ.

ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ಮೂಲಕ ಭೂತಾನ್‌ಗೆ ಪ್ರವೇಶಿಸಬಹುದು. ಅಸ್ಸಾಂ-ಭೂತಾನ್ ಗಡಿ ಮೂಲಕ ಭೂತಾನ್‌ನ ಗೆಲೆಫುಗೆ ಹೋಗುವುದು ಒಂದು ದಾರಿಯಾದರೆ, ಸಂದ್ರುಪ್ ಜೋಂಖರ್‌ಗೆ ಹೋಗುವುದು ಇನ್ನೊಂದು ದಾರಿ. ಸಾಮಾನ್ಯವಾಗಿ ಈ ದಾರಿಗಳನ್ನು ಪ್ರವಾಸಿಗರು ಬಳಸುವುದು ಕಮ್ಮಿ. ಪಶ್ಚಿಮ ಬಂಗಾಳದ ಮೂಲಕ ಹೋಗುವುದೇ ಹೆಚ್ಚು ಜನಪ್ರಿಯ ವಿಧಾನ. ಭೂತಾನ್‌ಗೆ ಹೊಂದಿಕೊಂಡಂತೆ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳು ಇವೆಯಾದರೂ ಇವುಗಳ ಮೂಲಕ ಭೂತಾನ್ ಪ್ರವೇಶಿಸುವುದಕ್ಕೆ ದಾರಿಗಳಿಲ್ಲ.

ವಿಮಾನದ ಮೂಲಕ ಭೂತಾನ್‌ಗೆ ಬೇಗನೆ ಹೋಗಬಹುದು, ಮತ್ತು ಇದು ಹೆಚ್ಚು ಆರಾಮದಾಯಕ ಕೂಡ. ಸಹಜವಾಗಿಯೇ ಬಸ್ಸು, ರೈಲಿಗಿಂತ ಇದಕ್ಕೆ ಹೆಚ್ಚು ಖರ್ಚು. ಬೆಂಗಳೂರಿನಿಂದ ಭೂತಾನ್‌ಗೆ ನೇರ ವಿಮಾನ ಸಂಪರ್ಕ ಇಲ್ಲ. ಇಲ್ಲಿಂದ ದೆಹಲಿ ಅಥವಾ ಕೋಲ್ಕತಕ್ಕೆ ಹೋಗಿ, ಅಲ್ಲಿಂದ ಭೂತಾನ್‌ನ ಪಾರೊಗೆ ಹೋಗಬೇಕು. ಭೂತಾನ್‌ನಲ್ಲಿ ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣ ಇರುವುದು ಪಾರೊದಲ್ಲಿ ಮಾತ್ರ. 

ದೆಹಲಿ ಅಥವಾ ಕೋಲ್ಕತದಿಂದ ಪಾರೊಗೆ ಡ್ರುಕ್ ಏರ್ ಮತ್ತು ಭೂತಾನ್ ಏರ್‌ಲೈನ್ಸ್ ಎಂಬ ಎರಡು ವಿಮಾನಯಾನ ಸಂಸ್ಥೆಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ಇವುಗಳ ಪೈಕಿ ಡ್ರುಕ್ ಏರ್ (ರಾಯಲ್ ಭೂತಾನ್ ಏರ್‌ಲೈನ್ಸ್) ಸರ್ಕಾರಿ ಸ್ವಾಮ್ಯದ ಕಂಪೆನಿಯಾದರೆ, ಭೂತಾನ್ ಏರ್‌ಲೈನ್ಸ್ (ತಾಶಿ ಏರ್) ಖಾಸಗಿ ಸ್ವಾಮ್ಯದ ಕಂಪೆನಿಯಾಗಿದೆ.

ರೈಲು-ರಸ್ತೆ ಸಾರಿಗೆ ಹೇಗೆ?

ರೈಲು ಮತ್ತು ರಸ್ತೆ ಮಾರ್ಗದ ಮೂಲಕ ಭೂತಾನ್ ತಲುಪುವುದಕ್ಕೂ ಪಶ್ಚಿಮ ಬಂಗಾಳವೇ ಜನಪ್ರಿಯ ದ್ವಾರ. ಇಲ್ಲಿ ಎರಡು ಪ್ರಯಾಣ ವಿಧಾನಗಳನ್ನು ಅನುಸರಿಸಬಹುದು. ಮೊದಲನೆಯದು ಬೆಂಗಳೂರಿನಿಂದ ಹಸಿಮಾರಗೆ ಅಥವಾ ನ್ಯೂಜಲ್‌ಪೈಗುರಿಗೆ ರೈಲಿನಲ್ಲಿ ಹೋಗುವುದು. ಅಲ್ಲಿಂದ ಜಯಗಾಂವ್‌ಗೆ ಟ್ಯಾಕ್ಸಿ ಮೂಲಕ ಪ್ರಯಾಣಿಸುವುದು. ಜಯಗಾಂವ್‌ನಿಂದ ಭೂತಾನ್‌ನ ಫುನ್ಶೊಲಿಂಗ್‌ಗೆ ಹೋಗಿ, ಅಲ್ಲಿಂದ ಥಿಂಪು ಇಲ್ಲವೇ ಪಾರೊಗೆ ಬಸ್ ಅಥವಾ ಟ್ಯಾಕ್ಸಿ ಮೂಲಕ ಪ್ರಯಾಣಿಸುವುದು. ಈ ಪ್ರಯಾಣಕ್ಕೆ ಎರಡು-ಮೂರು ದಿನಗಳಾದರೂ ಬೇಕು. ಎರಡನೆಯದು, ಬೆಂಗಳೂರಿನಿಂದ ಬಾಗ್‌ಡೋಗ್ರಕ್ಕೆ ವಿಮಾನದ ಮೂಲಕ ಪ್ರಯಾಣಿಸಿ, ಅಲ್ಲಿಂದ ನಾಲ್ಕೈದು ಗಂಟೆ ರಸ್ತೆ ಮಾರ್ಗವಾಗಿ ಜಯಗಾಂವ್‌ಗೆ ತಲುಪಿ, ಅಲ್ಲಿಂದ ಭೂತಾನ್‌ನ ಫುನ್ಶೊಲಿಂಗ್‌ಗೆ ಹೋಗುವುದು. ಫುನ್ಶೊಲಿಂಗ್‌ನಿಂದ ಪಾರೊ ಅಥವಾ ಥಿಂಪುಗೆ ಪ್ರಯಾಣಿಸುವುದು ಸುಲಭ.

ಮೇಲೆ ಹೇಳಿದ ಹಸಿಮಾರ ಪ.ಬಂಗಾಳದ ಅಲಿಪುರ್‌ದುವಾರ್ ಜಿಲ್ಲೆಯ ಒಂದು ಪಟ್ಟಣ. ಇದು ಭಾರತದ ಪ್ರಮುಖ ವಾಯುನೆಲೆಯೂ ಹೌದು. ರಫೇಲ್ ಯುದ್ಧವಿಮಾನಗಳು ಇಲ್ಲಿ ಸದಾ ಸನ್ನದ್ಧವಾಗಿರುತ್ತವೆ. ಟೋರ್ಸಾ ಮತ್ತು ಬಸ್ರಾ ನದಿಗಳ ಮಧ್ಯೆ ನೆಲೆಗೊಂಡಿರುವ ಈ ಪಟ್ಟಣದ ಆಸುಪಾಸಿನಲ್ಲಿ ದಟ್ಟವಾದ ಚಹಾತೋಟಗಳನ್ನೂ ಕಾಣಬಹುದು. ಇನ್ನು ನ್ಯೂಜಲ್‌ಪೈಗುರಿ ಪ್ರಮುಖ ರೈಲ್ವೆ ನಿಲ್ದಾಣವನ್ನು ಹೊಂದಿರುವ ಪ.ಬಂಗಾಳದ ಒಂದು ಜಿಲ್ಲೆ. ಇದು ದಾರ್ಜಿಲಿಂಗ್, ಸಿಕ್ಕಿಂ ಹಾಗೂ ಈಶಾನ್ಯ ಭಾರತಕ್ಕೆ ಬಾಗಿಲು ಇದ್ದಂತೆ. ಬಾಗ್‌ಡೋಗ್ರ ದಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿ ಉಪವಿಭಾಗದ ಒಂದು ಪಟ್ಟಣ. ಕಡಿಮೆ ಲಗೇಜ್ ಹಾಗೂ ಸಾಕಷ್ಟು ಸಮಯ ಇಟ್ಟುಕೊಂಡು ಹೋಗುವುದಾದರೆ ಈ ದಾರಿಗಳು ಅನುಕೂಲಕರ. ರೈಲು, ಟ್ಯಾಕ್ಸಿ, ಬಸ್ಸು ಹೀಗೆ ವಾಹನ ಮತ್ತು ದಾರಿಗಳನ್ನು ಬದಲಾಯಿಸಿಕೊಂಡು ಹೋಗುತ್ತಿರಬೇಕು. ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ಇರಬೇಕು.

ನಾವು ನಮ್ಮ ಸಂಶೋಧನ ಪ್ರಸ್ತಾವನೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದೆವೇ ಹೊರತು ಪ್ರಯಾಣದ ವಿಧಾನಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರಲಿಲ್ಲ. ಮಾಡಿಕೊಂಡಿದ್ದರೂ ವಿಮಾನದ ಹೊರತಾದ ದಾರಿಗಳು ನಮಗೆ ಅನುಕೂಲಕರವಾಗಿರಲಿಲ್ಲ. ಒಂದು, ನಾವು ಹೆಚ್ಚು ದಿನಗಳನ್ನು ಪ್ರಯಾಣದಲ್ಲೇ ಕಳೆಯುವ ಹಾಗಿರಲಿಲ್ಲ. ಎಲ್ಲರೂ ರಜೆಗಳನ್ನು ಪಡೆದು ಹೋಗಬೇಕಿದ್ದುದರಿಂದ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ದಿನಗಳಲ್ಲಿ ಪ್ರವಾಸವನ್ನು ಪೂರೈಸಬೇಕಿತ್ತು, ಮತ್ತು ಲಭ್ಯವಿರುವ ದಿನಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಬೇಕಿತ್ತು. ಇನ್ನೊಂದು, ನಮ್ಮ ಬಳಿಯಿದ್ದ ಲಗೇಜ್. ಯಕ್ಷಗಾನದ ವೇಷಭೂಷಣಗಳನ್ನು ಎಷ್ಟೇ ಅಳೆದುತೂಗಿ ಆಯ್ದುಕೊಂಡರೂ ಅವು ಸುಮಾರು 20 ಕೆ.ಜಿ.ಯಷ್ಟಿದ್ದವು. ಇನ್ನು ಎರಡು ವಾರಕ್ಕೆ ಮೂವರಿಗೆ ಬೇಕಾದ ಬಟ್ಟೆಬರೆಗಳು. ಇಷ್ಟು ದೊಡ್ಡ ಮೂಟೆಗಳನ್ನು ಹೊತ್ತುಕೊಂಡು ರೈಲು, ಬಸ್ಸು, ಟ್ಯಾಕ್ಸಿಗಳ ಮೂಲಕ ಎರಡುಮೂರು ದಿನ ಪ್ರಯಾಣಿಸುವುದು ನಮಗೆ ಕಷ್ಟಸಾಧ್ಯವಾಗಿತ್ತು. ಹೀಗಾಗಿ ವಿಮಾನವೇ ನಮಗೆ ಹೆಚ್ಚು ಅನುಕೂಲಕರವಾಗಿತ್ತು. ನಾವು ಹೋಗುವಾಗ ಡ್ರುಕ್ ಏರ್ ಮೂಲಕವೂ ಬರುವಾಗ ಭೂತಾನ್ ಏರ್‌ಲೈನ್ಸ್ ಮೂಲಕವೂ ಪ್ರಯಾಣಿಸಿದೆವು. ಬೆಂಗಳೂರು-ಕೋಲ್ಕತ-ಪಾರೊ ನಮ್ಮ ಪ್ರಯಾಣದ ಹಾದಿಯಾಗಿತ್ತು.

ಪಾಸ್‌ಪೋರ್ಟ್ ಇಲ್ಲದಿದ್ದರೆ?

ಅಂದಹಾಗೆ, ಪಾಸ್‌ಪೋರ್ಟ್ ಇಲ್ಲದೆಯೂ ಭೂತಾನ್‌ಗೆ ಹೋಗಬಹುದು. (ನಮ್ಮ ನೆರೆಯ ದೇಶ ನೇಪಾಳಕ್ಕೆ ಹೋಗುವುದಕ್ಕೂ ಪಾಸ್‌ಪೋರ್ಟ್ ಕಡ್ಡಾಯವಲ್ಲ). ಪಾಸ್‌ಪೋರ್ಟ್ ಬದಲು ಮತದಾನದ ಗುರುತಿನ ಚೀಟಿ (ವೋಟರ್ ಐಡಿ) ಬಳಸಿಯೂ ಭೂತಾನ್‌ಗೆ ಹೋಗಬಹುದು. 18 ವರ್ಷದೊಳಗಿನವರಾದರೆ ಜನನ ಪ್ರಮಾಣಪತ್ರ ಅಥವಾ ಶಿಕ್ಷಣ ಸಂಸ್ಥೆಯ ಗುರುತಿನ ಚೀಟಿ ತೋರಿಸಬಹುದು. ಇವುಗಳ ಮೂಲದಾಖಲೆಗಳು ಇರಬೇಕು. ಆದರೂ ವಿಮಾನದ ಮೂಲಕ ಪ್ರಯಾಣಿಸುವುದಾದರೆ ಪಾಸ್‌ಪೋರ್ಟ್ ಹೊಂದಿರುವುದೇ ಹೆಚ್ಚು ಅನುಕೂಲಕರ. ವಿಮಾನ ಬುಕಿಂಗ್ ಮಾಡುವಾಗ, ಇಮಿಗ್ರೇಶನ್ ತಪಾಸಣೆ ಸಂದರ್ಭದಲ್ಲಿ ಪಾಸ್‌ಪೋರ್ಟ್ ಹೊಂದಿರುವವರಿಗೆ ಹೆಚ್ಚು ಸುಲಭವಾಗುತ್ತದೆ. ನಮಗಂತೂ ಟಿಕೆಟ್ ಕಾಯ್ದಿರಿಸುವಾಗ ಪಾಸ್‌ಪೋರ್ಟ್ ಸಂಖ್ಯೆ ನಮೂದಿಸದೆ ಪ್ರಕ್ರಿಯೆ ಮುಂದಕ್ಕೆ ಹೋಗಲಿಲ್ಲ. ಕೆಲವು ವಿಮಾನಯಾನ ಸಂಸ್ಥೆಗಳು ಯಾವುದೇ ವಿದೇಶ ಪ್ರವಾಸಕ್ಕೆ ಪಾಸ್‌ಪೋರ್ಟ್ ಬೇಕೆಂದು ಕಡ್ಡಾಯ ಮಾಡುತ್ತವೆ.

ಭೂತಾನ್‌ಗೆ ಹೋಗಲು ಭಾರತೀಯರಿಗೆ ವೀಸಾ ಬೇಕಾಗಿಲ್ಲ. ಆದರೆ ‘ಪ್ರವೇಶ ಪರವಾನಗಿ’ (Entry Permit) ಇರಬೇಕು. ವಿಮಾನದ ಮೂಲಕ ಹೋಗುವುದಾದರೆ ಪಾರೊ ವಿಮಾನ ನಿಲ್ದಾಣದಲ್ಲಿ ಇದನ್ನು ಪಡೆದುಕೊಳ್ಳಬಹುದು. ರಸ್ತೆಯ ಮೂಲಕ ಹೋಗುವುದಾದರೆ ಪುನ್ಶೊಲಿಂಗ್‌ನಲ್ಲಿ ಪಡೆಯಬಹುದು. ಅಸ್ಸಾಂ ಮೂಲಕ ಪ್ರವೇಶಿಸುವುದಾದರೆ ಗೆಲೆಫು ಅಥವಾ ಸಂದ್ರುಪ್ ಜೋಂಖರ್‌ನಲ್ಲಿ ಪಡೆಯಬಹುದು.

ಕೆಲವು ವರ್ಷಗಳ ಹಿಂದೆ ಇದು ಉಚಿತವಾಗಿ ಸಿಗುತ್ತಿತ್ತು. ಈಗ ಪ್ರವೇಶ ಪರವಾನಗಿ ಪಡೆಯಬೇಕಾದರೆ ಪ್ರವಾಸಿಗರು ಎಸ್‌ಡಿಎಫ್ (SDF - Sustainable Development Fees) ಪಾವತಿಸಬೇಕು. ಇದು ಭಾರತೀಯರಿಗೆ ಒಂದು ದಿನಕ್ಕೆ ರೂ. 1200, ಬೇರೆ ದೇಶದವರಿಗೆ 100 ಡಾಲರ್ ಇದೆ. ಈ ಶುಲ್ಕ ಎಂಟು ವರ್ಷ ಮೇಲ್ಪಟ್ಟ ಪ್ರತಿಯೊಬ್ಬನಿಗೂ ಅನ್ವಯಿಸುತ್ತದೆ. 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ತನ್ನ ನೂತನ ‘ಉನ್ನತ ಮೌಲ್ಯದ, ಕಡಿಮೆ ಪರಿಣಾಮದ ಪ್ರವಾಸೋದ್ಯಮ’ ನೀತಿಯ ಅಡಿಯಲ್ಲಿ ಭೂತಾನ್ ಈ ಎಸ್‌ಡಿಎಫ್ ಶುಲ್ಕ ವಿಧಿಸಲು ಆರಂಭಿಸಿತು. ಪ್ರವಾಸಿಗರಿಂದ ಪಡೆದ ಈ ಶುಲ್ಕವನ್ನು ಭೂತಾನ್ ಸರ್ಕಾರ ಪರಿಸರ ಸಂರಕ್ಷಣೆ, ಸಂಸ್ಕೃತಿ-ಪರಂಪರೆ ರಕ್ಷಣೆ, ಮೂಲಸೌಕರ್ಯ ಅಭಿವೃದ್ಧಿ, ಉಚಿತ ಶಿಕ್ಷಣ ಮತ್ತು ಆರೋಗ್ಯ ಇತ್ಯಾದಿ ಯೋಜನೆಗಳಿಗೆ ಬಳಸಿಕೊಳ್ಳುತ್ತದೆ.

ನಾವೇನಾದರೂ ಎಸ್‌ಡಿಎಫ್ ಪಾವತಿಸುವ ಸಂದರ್ಭ ಇದ್ದಿದ್ದರೆ ಅದಕ್ಕಾಗಿ ರೂ. 50,000 ಖರ್ಚು ಮಾಡಬೇಕಿತ್ತು. ಒಬ್ಬರಿಗೆ ದಿನವೊಂದಕ್ಕೆ ರೂ. 1200 ರಂತೆ ಮೂವರಿಗೆ ಎರಡು ವಾರಗಳ ಅನುಮತಿ. ಆದರೆ ಭೂತಾನ್‌ನ ಸಂಸ್ಕೃತಿ ಇಲಾಖೆಯ ಬೆಂಬಲ ಮತ್ತು ನಾವು ಶೈಕ್ಷಣಿಕ ಉದ್ದೇಶಕ್ಕೆ ಪ್ರಯಾಣಿಸುವವರು ಎಂಬ ಸರ್ಕಾರದ ಕಾಳಜಿಯಿಂದಾಗಿ ಅಷ್ಟೂ ಮೊತ್ತ ಪಾವತಿಸುವುದರಿಂದ ನಮಗೆ ವಿನಾಯಿತಿ ಸಿಕ್ಕಿತು. ಅವರದು ದೊಡ್ಡ ಮನಸ್ಸು ಎನ್ನದೆ ಇರಲಾದೀತೇ?

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ