ಮಂಗಳವಾರ, ಮಾರ್ಚ್ 10, 2026

ಪಾಸ್‌ಪೋರ್ಟ್ ಪ್ರಕ್ರಿಯೆಗೆ ಎದುರಾಯ್ತು ಫಜೀತಿ!

'ಭೂತಾನ್‌ನಲ್ಲಿ ಯಕ್ಷದೀವಿಗೆʼ

ಪ್ರವಾಸ ಕಥನ-7

ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ

(ಪ್ರಜಾಪ್ರಗತಿ, 08 ಮಾರ್ಚ್ 2026)

(ಮುಂದುವರಿದ ಭಾಗ...)

ಭೂತಾನ್ ಯೋಜನೆ ಅಂತಿಮವಾದ ಮೇಲೆ ನಮ್ಮೆದುರಿಗಿದ್ದ ದೊಡ್ಡ ಸವಾಲು ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು. ಸಾಮಾನ್ಯ ಪ್ರಕ್ರಿಯೆಯಲ್ಲಿ ಅರ್ಜಿ ಹಾಕಿ ಪಾಸ್‌ಪೋರ್ಟ್ ಪಡೆಯುವುದಕ್ಕೆ ಇರುವ ಗರಿಷ್ಠ ಕಾಲಾವಧಿ 45 ದಿನ. ಆದರೆ ನಮಗೆ ಉಳಿದದ್ದು 30 ದಿನ ಮಾತ್ರ. ಅಂದರೆ ತತ್ಕಾಲ್ ಯೋಜನೆಯನ್ನೇ ಆಶ್ರಯಿಸಬೇಕು; ಅಂದರೆ ದುಪ್ಪಟ್ಟು ಶುಲ್ಕ. ಆದರೆ ನಮಗದು ಅನಿವಾರ್ಯವಾಗಿತ್ತು. ಸಾಕಷ್ಟು ಮೊದಲೇ ಈ ಕೆಲಸಕ್ಕೆ ಹೊರಟಿದ್ದರೆ ಯಾವುದೇ ಅಡಾವುಡಿಯಿಲ್ಲದೆ ಆಗುತ್ತಿತ್ತು. ಆದರೆ ಏನೇನೋ ಕಾರಣಕ್ಕೆ ಅದು ಆಗಲೇ ಇಲ್ಲ. ಅದರ ಪ್ರಕ್ರಿಯೆ ಮತ್ತು ಅಗತ್ಯ ದಾಖಲೆಗಳ ಬಗ್ಗೆ ಸಂಬಂಧಿಸಿದ ಜಾಲತಾಣದಲ್ಲಿ ಹುಡುಕಿದರೂ ಕೆಲವು ಗೊಂದಲಗಳು ಬಾಕಿಯಿದ್ದವು.

ಪಾಸ್‌ಪೋರ್ಟ್ ಸೇವಾಕೇಂದ್ರಕ್ಕೆ ಹೋದರೆ ಎಲ್ಲ ಗೊಂದಲಕ್ಕೆ ಒಮ್ಮೆಲೆ ಉತ್ತರ ಸಿಗುತ್ತದಲ್ಲ ಎಂದುಕೊಂಡು ಬೆಳ್ಳಂಬೆಳಗ್ಗೆ ಅಲ್ಲಿಗೆ ಲಗ್ಗೆಯಿಟ್ಟಾಯಿತು. ಅದು ಶೆಟ್ಟಿಹಳ್ಳಿ ರಸ್ತೆಯಲ್ಲಿ ಮಾರುತಿನಗರದ ವಾಟರ್‌ಟ್ಯಾಂಕ್ ಎದುರು ಪಿ & ಟಿ ಕ್ವಾರ್ಟರ್ಸ್ಗೆ ಹೊಂದಿಕೊಂಡಂತಿದೆ. “ತತ್ಕಾಲ್ ಯೋಜನೆಗಾದರೂ ನೀವು ಆನ್ಲೈನ್ ಅರ್ಜಿ ಸಲ್ಲಿಸಬೇಕು. ಅದನ್ನು ತುಮಕೂರಲ್ಲೇ ಮಾಡಬಹುದು. ಆದರೆ ದಾಖಲೆ ಪರಿಶೀಲನೆಗೆ ನೀವು ಬೆಂಗಳೂರಿಗೆ ಹೋಗಬೇಕು. ಗುರುತು ಮತ್ತು ವಿಳಾಸದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ” ಎಂದು ಅಲ್ಲಿ ಸಲಹೆ ನೀಡಿದರು.

ಇನ್ನೀಗ ಏನೇನು ತಯಾರಿ ಮಾಡಿಕೊಳ್ಳಬೇಕು ಎಂಬ ಯೋಚನೆಯಲ್ಲಿದ್ದಾಗ ಸಹೋದ್ಯೋಗಿಯೊಬ್ಬರು, “ಅದ್ಯಾಕೆ ಅಷ್ಟೊಂದು ತಲೆಕೆಡಿಸ್ಕೋತಿದ್ದೀರಾ? ನಮ್ಮ ಶೆಟ್ರಿಗೆ ಒಂದು ಮಾತು ಹೇಳಿ, ಮೂರು ದಿನದಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಡ್ತಾರೆ” ಎಂದು ಸಲಹೆಕೊಟ್ಟರು. ಅವರು ಹೇಳಿದ ಶೆಟ್ರು ನಮಗೆ ಪರಿಚಯದವರೇ ಆಗಿದ್ದರು: ಯುನಿಮನಿಯ ನಿತಿನ್ ರೈಗಳು. ಹೌದಲ್ಲ, ನಾಳೆ ಬೆಳಗ್ಗೆಯೇ ಅವರನ್ನು ಭೇಟಿಯಾಗ್ಬೇಕು ಅಂದುಕೊಂಡೆವು. ಅದೇ ಸಂಜೆ ಯಾವುದೋ ಕೆಲಸದ ಮೇಲೆ ಸೋಮೇಶ್ವರಪುರದ ರಸ್ತೆಯಲ್ಲಿ ಅಡ್ಡಾಡುತ್ತಾ ಏನಾದರೂ ಹೊಟ್ಟೆಗೆ ಹಾಕಿಕೊಳ್ಳೋಣವೆಂದು ಫಾಸ್ಟ್‌ಫುಡ್ ಅಂಗಡಿಗೆ ಹೊಕ್ಕರೆ ಅದೇ ರೈಗಳು ಮಸಾಲಪುರಿ ತಿನ್ನುತ್ತಾ ನಿಂತಿದ್ದರು. “ನಿಮಗೆ ನೂರು ವರ್ಷ ಆಯಸ್ಸು ಮಾರಾಯ್ರೆ. ಈಗ ಸ್ವಲ್ಪ ಹೊತ್ತಿನ ಹಿಂದೆ ನಿಮ್ಮ ಬಗ್ಗೆಯೇ ಮಾತಾಡಿದೆವು” ಎಂದೆವು. “ಹೌದಾ! ಏನು ವಿಶೇಷ?” ಎಂದರವರು.

“ನಮಗೀಗ ತುರ್ತಾಗಿ ಪಾಸ್‌ಪೋರ್ಟ್ ಆಗಬೇಕಿದೆ. ನಮ್ಮಲ್ಲಿ ಒಬ್ಬರಲ್ಲಿ ಪಾಸ್‌ಪೋರ್ಟ್ ಇದೆ.  ಉಳಿದವರಿಗೆ ಆಗ್ಬೇಕು. ನಿಮ್ಮ ಸಹಾಯ ಬೇಕು” ಎಂದೆವು. “ಅದಕ್ಕೇನು? ಬೆಳಗ್ಗೆ ಬಂದುಬಿಡಿ. ನಿಮ್ಮಲ್ಲಿ ಒಬ್ಬರಿಗೆ ಪಾಸ್‌ಪೋರ್ಟ್ ಇರೋದರಿಂದ ಕುಟುಂಬದ ಉಳಿದವರಿಗೆ ಅನುಕೂಲವಾಗುತ್ತೆ. ಇಂತಿಂಥ ದಾಖಲೆಗಳನ್ನು ತನ್ನಿ. ಅರ್ಜಿ ಸಲ್ಲಿಸೋದೇನೋ ಬೇಗ ಆಗುತ್ತೆ. ನಿಮ್ಮ ಡಾಕ್ಯುಮೆಂಟ್ ವೆರಿಫಿಕೇಶನಿಗೆ ಡೇಟ್ ಯಾವಾಗ ಸಿಗುತ್ತೆ ಅನ್ನೋದು ಮುಖ್ಯ. ಬೆಂಗಳೂರಲ್ಲಿ ಎರಡು ಕಡೆ ಇದೆ. ಅಲ್ಲಿ ಸಿಗದಿದ್ರೆ ಮಂಗಳೂರು ಅಥವಾ ಹುಬ್ಬಳ್ಳಿ. ಎಲ್ಲಿ ಬೇಗ ಸಿಗುತ್ತೋ ಅಲ್ಲಿ ಅಪಾಯಿಂಟ್ಮೆಂಟ್ ತಗಳೋಣ. ಸಾಮಾನ್ಯ ಪ್ರಕ್ರಿಯೆಯಲ್ಲಿ ಡಾಕ್ಯುಮೆಂಟ್ ವೆರಿಫಿಕೇಶನ್ ಆದ್ಮೇಲೆ ಪೊಲೀಸ್ ವೆರಿಫಿಕೇಶನ್ ನಡೆದು ನಂತರ ಪಾಸ್‌ಪೋರ್ಟ್ ಸಿಗುತ್ತೆ. ಆದರೆ ತತ್ಕಾಲ್‌ನಲ್ಲಿ ಪಾಸ್‌ಪೋರ್ಟ್ ಸಿಕ್ಕ ಮೇಲೆ ಪೊಲೀಸ್ ಪರಿಶೀಲನೆ ನಡೆಯುತ್ತದೆ. ಆದ್ದರಿಂದ ಎಲ್ಲ ಬೇಗ ಆಗುತ್ತೆ” ಅಂದರು.

ಸದ್ಯ! ಇನ್ನು ಇದರ ಬಗ್ಗೆ ಟೆನ್ಶನ್ ಮಾಡಿಕೊಳ್ಳುವ ಅವಶ್ಯಕತೆಯಿಲ್ಲವೆಂದು ನಿರಾಳವಾದೆವು. ಮರುದಿನ ಬೆಳಗ್ಗೆಯೇ ಅಗತ್ಯ ದಾಖಲೆಗಳನ್ನು ಕಲೆಹಾಕಿ ಅವರ ಕಚೇರಿಗೆ ತಲುಪಿಸಿದ್ದಾಯಿತು. ಜಾಲತಾಣದ ಸಮಸ್ಯೆಯಿಂದಾಗಿ ಅರ್ಜಿಸಲ್ಲಿಸುವ ಪ್ರಕ್ರಿಯೆ ಇನ್ನೊಂದು ದಿನ ಮುಂದಕ್ಕೆ ಹೋಯಿತು. ಅರ್ಜಿ ಸಲ್ಲಿಸಿದ ನಾಲ್ಕೈದು ದಿನಕ್ಕೆ ದಾಖಲೆ ಪರಿಶೀಲನೆಯ ಅಪಾಯಿಂಟ್ಮೆಂಟ್ ಬೆಂಗಳೂರಿನಲ್ಲೇ ಸಿಕ್ಕಿತು. ಆ ದಿನದ ಆರಂಭದ ಸರದಿಯೇ ನಮ್ಮದಾಗಿದ್ದರಿಂದ ಬೆಳ್ಳಂಬೆಳಗ್ಗೆಯೇ ಮನೆಬಿಟ್ಟು ಲಾಲ್‌ಬಾಗ್‌ನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತಲುಪಿದೆವು. ಅಲ್ಲಿನ ಸುವ್ಯವಸ್ಥೆ, ಕಂಪ್ಯೂಟರೀಕೃತ ಪ್ರಕ್ರಿಯೆ, ಎಲ್ಲದಕ್ಕೂ ಸಮಾಧಾನದಿಂದ ಉತ್ತರಿಸುವ ಅಧಿಕಾರಿಗಳು, ಸಣ್ಣಪುಟ್ಟ ತೊಡಕುಗಳಿದ್ದರೆ ಸರಿಪಡಿಸಿಕೊಡುವ ಅವರ ಸಹಕಾರ ಮನೋಭಾವ, ಎಲ್ಲೂ ನೂಕುನುಗ್ಗಲಾಗದಂತೆ ನೋಡಿಕೊಳ್ಳುವ ಅಚ್ಚುಕಟ್ಟಾದ ವಿಧಾನ, ನೂರಾರು ಅಧಿಕಾರಿಗಳು, ಅಷ್ಟೇ ಸಂಖ್ಯೆಯ ಕ್ಯಾಮರಾಗಳು... ಒಂದು ಹೊಸ ಲೋಕದೊಳಗೆ ಹೋದ ಅನುಭವವಾಯಿತು. ಸರ್ಕಾರಿ ವ್ಯವಸ್ಥೆ ಕುರಿತು ಇದ್ದ ಒಂದು ಬಗೆಯ ಉದಾಸೀನ ಮನೋಭಾವ ಅಲ್ಲಿನ ಸಲೀಸು ವ್ಯವಸ್ಥೆಯನ್ನು ಕಂಡು ಕ್ಷಣಾರ್ಧದಲ್ಲಿ ಮಾಯವಾಗಿಬಿಟ್ಟಿತು. ನಮ್ಮ ದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಬಗ್ಗೆ ಗೌರವ ಮೂಡಿತು.

ಮಧ್ಯಾಹ್ನದ ಹೊತ್ತಿಗೆ ಎಲ್ಲರ ದಾಖಲೆ ಪರಿಶೀಲನೆ ಮುಗಿದು, “ಪಾಸ್‌ಪೋರ್ಟ್ ಗ್ರಾಂಟೆಡ್” ಎಂಬ ಮೆಸೇಜು ಮೊಬೈಲಿಗೆ ಬಂದು ಕುಳಿತದ್ದನ್ನು ನೋಡಿಕೊಂಡು ಸಂಭ್ರಮದಿಂದ ತುಮಕೂರಿಗೆ ಮರಳಿದೆವು. ಆದರೆ ಮೆಸೇಜನ್ನು ನಾವು ಪೂರ್ತಿಯಾಗಿ ಮತ್ತು ಸರಿಯಾಗಿ ಓದಿಕೊಂಡಿಲ್ಲ ಎಂದು ಅರ್ಥವಾದದ್ದು ಒಂದು ದಿನ ಕಳೆದ ಮೇಲೆ!

ನಮ್ಮಲ್ಲಿ ಒಬ್ಬರ ಪಾಸ್‌ಪೋರ್ಟ್ ನಾವು ಬೆಂಗಳೂರಿಗೆ ಹೋಗಿ ಬಂದ ಮರುದಿನ ಮಧ್ಯಾಹ್ನವೇ ನಮ್ಮನ್ನು ಹುಡುಕಿಕೊಂಡು ತುಮಕೂರಿಗೆ ಬಂತು. ಆ ವೇಗಕ್ಕೆ ನಾವೇ ದಂಗಾಗಿಹೋದೆವು. ನಮ್ಮ ಸರ್ಕಾರಿ ವ್ಯವಸ್ಥೆ ಇಷ್ಟೊಂದು ಕ್ಷಿಪ್ರವಾಗಿ ಕೆಲಸ ಮಾಡುತ್ತದೆಯೇ ಎಂದು ಆಶ್ಚರ್ಯವಾಯಿತು. ಆದರೆ ಉಳಿದಿಬ್ಬರು ಮಕ್ಕಳ ಪಾಸ್‌ಪೋರ್ಟ್ ಕೂಡ ಬರಬೇಕಿತ್ತಲ್ಲ, ಯಾಕೆ ಬಂದಿಲ್ಲ ಎಂದು ಯೋಚನೆಯಾಯಿತು. ಪಾಸ್‌ಪೋರ್ಟ್ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ಸಂಬಂಧಿಸಿದ ಜಾಲತಾಣದಲ್ಲಿ ತಿಳಿದುಕೊಳ್ಳಲು ಅವಕಾಶವಿದೆ. ಅಲ್ಲಿ ಹೋಗಿ ನೋಡಿದರೆ ಇಬ್ಬರ ದಾಖಲೆಗಳನ್ನು ಕೂಡ ಪೊಲೀಸ್ ಪರಿಶೀಲನೆಗೆ ಕಳುಹಿಸಲಾಗಿದೆ ಎಂಬ ಸಂದೇಶ ಇತ್ತು.

ಅರೆ! ಅರ್ಜಿ ಹಾಕಿದ ಮೂವರಲ್ಲಿ ಒಬ್ಬರದು ಮಾರನೆಯ ದಿನವೇ ಬಂದಿದೆ; ಉಳಿದವರದ್ದು ಪೊಲೀಸ್ ಪರಿಶೀಲನೆಗೆ ಹೋಗಿದೆ; ಇದೇನಪ್ಪಾ ಎಂದು ಆಶ್ಚರ್ಯವಾಯಿತು. ತತ್ಕಾಲ್‌ನಲ್ಲಿ ಪೊಲೀಸ್ ವೆರಿಫಿಕೇಶನ್ ಪಾಸ್‌ಪೋರ್ಟ್ ಕೊಟ್ಟ ಮೇಲೆ ನಡೆಯುತ್ತದೆ. ಬೇಗನೆ ಪಾಸ್‌ಪೋರ್ಟ್ ಕೊಡುವುದೇ ತತ್ಕಾಲ್‌ನ ಉದ್ದೇಶವಾಗಿರುವುದರಿಂದ ಹೀಗೆ ಮಾಡಲಾಗುತ್ತದೆ. ಆದರೆ ಇದೇಕೆ ಹೀಗಾಯಿತು? ಒಮ್ಮೆ ಪೊಲೀಸ್ ವೆರಿಫಿಕೇಶನ್‌ಗೆ ಹೋದರೆ ಅದು ಮುಗಿದು ಪಾಸ್‌ಪೋರ್ಟ್ ಬರುವುದು ಸಾಕಷ್ಟು ತಡವಾದರೂ ಆಯಿತು. ಮತ್ತೇಕೆ ಇದನ್ನು ತತ್ಕಾಲ್ ಎಂದು ಕರೆದರು ಎಂದು ಚಿಂತೆಯಾಯಿತು. ನಮಗೆ ಪ್ರಾಜೆಕ್ಟಿಗೆ ಸಂಬಂಧಿಸಿದ ಉಳಿದ ಕೆಲಸಗಳಿಗೆ ತುರ್ತಾಗಿ ಪಾಸ್‌ಪೋರ್ಟ್ ಬೇಕೇಬೇಕಿತ್ತು.

ಈ ಚಿಂತೆಯಲ್ಲಿ ಪಾಸ್‌ಪೋರ್ಟಿಗೆ ಸಂಬಂಧಿಸಿದ ಜಾಲತಾಣಕ್ಕೆ ಹೋಗಿ ಹೀಗೇಕೆ ಮಾಡಲಾಗಿದೆ, ಇದನ್ನು ಸರಿಪಡಿಸಿ ಎಂದು ದೂರು ಸಲ್ಲಿಸಿದೆವು. ಮರುದಿನ ಬೆಳಗ್ಗೆಯೇ ತುಮಕೂರಿನ ಪಾಸ್‌ಪೋರ್ಟ್ ಸೇವಾಕೇಂದ್ರಕ್ಕೆ ಹೋಗಿ ಹೀಗೇಕಾಗಿದೆ ಎಂದು ವಿಚಾರಿಸಿದೆವು. “ತತ್ಕಾಲ್‌ನಲ್ಲಿ ಪೊಲೀಸ್ ಪರಿಶೀಲನೆಗೆ ಮೊದಲೇ ಪಾಸ್‌ಪೋರ್ಟ್ ಕೊಡೋದು ಹೌದು. ಆದರೆ ಅದೇನೂ ಕಡ್ಡಾಯವಲ್ಲ. ಅಲ್ಲಿ ಎರಡು ಆಯ್ಕೆ ಇದೆ. ಪ್ರಿ-ಪೊಲೀಸ್ ವೆರಿಫಿಕೇಶನ್ ಮತ್ತು ಪೋಸ್ಟ್-ಪೊಲೀಸ್ ವೆರಿಫಿಕೇಶನ್ ಆಧಾರದಲ್ಲಿ ಅಂತ. ನಿಮ್ಮ ಅರ್ಜಿಗಳನ್ನು ಅಂತಿಮಗೊಳಿಸುವಾಗ ಪ್ರಿ-ಪೊಲೀಸ್ ವೆರಿಫಿಕೇಶನ್ ಬೇಸಿಸ್ ಎಂಬ ಆಯ್ಕೆ ಒತ್ತಿರಬೇಕು. ಅದರಿಂದ ಹೀಗಾಗಿದೆ. ಈಗ ಅದನ್ನು ಬದಲಾಯಿಸಲು ಬರುವುದಿಲ್ಲ. ನೀವು ಸಾಧ್ಯವಾದಷ್ಟು ಬೇಗನೆ ಪೊಲೀಸ್ ಪರಿಶೀಲನೆ ಮಾಡಿಸಿಕೊಳ್ಳುವುದೊಂದೇ ದಾರಿ” ಎಂದರು ಅಲ್ಲಿನ ಅಧಿಕಾರಿ.

ಬೆಂಗಳೂರಲ್ಲಿ ದಾಖಲೆ ಪರಿಶೀಲನೆ ನಡೆದ ಮೇಲೆ ಮೊಬೈಲಿಗೆ ಬಂದ ಮೆಸೇಜನ್ನು ಈಗ ಮತ್ತೊಮ್ಮೆ ಓದಿಕೊಂಡೆವು. ಒಬ್ಬರ ದಾಖಲೆ ಪರಿಶೀಲನೆಯ ಮೆಸೇಜಿನಲ್ಲಿ “ಪೋಸ್ಟ್ ಪೊಲೀಸ್ ವೆರಿಫಿಕೇಶನ್ ಬೇಸಿಸ್” ಅಂತ ಇದ್ದರೆ ಮಕ್ಕಳಿಬ್ಬರ ಕುರಿತ ಮೆಸೇಜಿನಲ್ಲಿ “ಪ್ರಿ ಪೊಲೀಸ್ ವೆರಿಫಿಕೇಶನ್ ಬೇಸಿಸ್” ಅಂತ ಇತ್ತು. ಇದನ್ನು ಈಗ ನೋಡಿ ಏನು ಪ್ರಯೋಜನ, ಅಲ್ಲೇ ನೋಡಿದ್ದರೆ ಅವರಲ್ಲೇ ಕೇಳಿಕೊಳ್ಳಬಹುದಿತ್ತು. ಈಗ ಹೋಗಿ ಅದನ್ನು ವಿಚಾರಿಸುವುದೆಲ್ಲ ಪ್ರಾಯೋಗಿಕ ಅಲ್ಲ. ಪೊಲೀಸ್ ಪರಿಶೀಲನೆ ಬೇಗ ಆಗುವಂತೆ ಪ್ರಯತ್ನಿಸುವುದೇ ಸರಿ ಎಂದು ನಿರ್ಧರಿಸಿದೆವು. ಆದರೆ ನಮ್ಮ ಅವಸರಕ್ಕೆ ತಕ್ಕಂತೆ ಅದೆಲ್ಲ ಆಗುತ್ತದೆಯೇ?

(ಮುಂದುವರಿಯುತ್ತದೆ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ