'ಭೂತಾನ್‌ನಲ್ಲಿ ಯಕ್ಷದೀವಿಗೆʼ
ಪ್ರವಾಸ ಕಥನ-15
ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ
(ಪ್ರಜಾಪ್ರಗತಿ, 03 ಮೇ 2026)
(ಮುಂದುವರಿದ ಭಾಗ...)
ನಾವು ಬೇಗಬೇಗನೆ ತಿಂಡಿ ಮುಗಿಸಿಕೊಂಡು ಟೈಗರ್ಸ್ ನೆಸ್ಟ್ ಕಡೆಗೆ ಹೊರಡಬೇಕಿತ್ತು. ನಾವಿದ್ದ ಹೋಟೆಲಿನ ಊಟೋಪಚಾರದ ವಿಭಾಗ ಬಲು ಸೊಗಸಾಗಿತ್ತು. ಎಲ್ಲವೂ ಹೊಂಬಣ್ಣದಿಂದ ಮಿರುಗುತ್ತಿದ್ದ ಮರದ ಕಲಾತ್ಮಕ ಪೀಠೋಪಕರಣಗಳು. ಸುತ್ತಲೂ ಗಾಜಿನ ಗೋಡೆ, ಹೊರಗೆ ಅನತಿ ದೂರದಲ್ಲಿ ಕಾಣುವ ಪರ್ವತದ ಅಂಚಿನಿಂದ ಏರಿ ಬರುತ್ತಿದ್ದ ಸೂರ್ಯ, ಇಡೀ ಮೈಯನ್ನು ಹಿಡಿಯಾಗಿಸಿ ಮುದುರಿ ಕೂರುವಂತೆ ಮಾಡುವ ಚಳಿಗಾಳಿ- ನಾವು ಯಾವುದೋ ರೆಸಾರ್ಟಿನಲ್ಲಿದ್ದೇವೇನೋ ಎಂಬ ಭಾವನೆ ಮೂಡಿಸುತ್ತಿದ್ದವು. ನಾವು ತಿಂಡಿಗೆ ಬಂದೆವೆಂದು ಗೊತ್ತಾಗುತ್ತಲೇ ಎರಡು-ಮೂರು ಸುಂದರಿಯರು ಟೇಬಲ್ ಮೇಲೆ ತಿಂಡಿ ಪಾತ್ರೆಗಳನ್ನು ಓರಣವಾಗಿ ಜೋಡಿಸಿದರು. ನಮ್ಮಂತೆ ಅವರೂ ಚಳಿಯಿಂದ ತಪ್ಪಿಸಿಕೊಳ್ಳಲು ಹರಸಾಹಸಪಡುತ್ತಿದ್ದರು. ಅಲ್ಲೇ ಮೂಲೆಯಲ್ಲೊಂದು ಹೀಟರು ಕೆಂಪುಕೆಂಪಾಗಿ ಗಮನಸೆಳೆಯುತ್ತಿತ್ತು. ಆ ಹುಡುಗಿಯರು ಐದು ನಿಮಿಷಕ್ಕೊಮ್ಮೆ ಹೀಟರಿನ ಬಳಿಗೋಡಿ ಚಳಿಕಾಯಿಸಿಕೊಂಡು ಮತ್ತೆ ತಮ್ಮ ಕೆಲಸದತ್ತ ದೌಡಾಯಿಸುತ್ತಿದ್ದರು.
ಒಂದು ಪಾತ್ರೆಯಲ್ಲಿ ಉಪ್ಪಿಟ್ಟು, ಇನ್ನೊಂದರಲ್ಲಿ ಪರೋಟ, ಮತ್ತೊಂದರಲ್ಲಿ ಬ್ರೆಡ್ಡು, ಸವರಿಕೊಳ್ಳುವುದಕ್ಕೆ ಬೆಣ್ಣೆ ಮತ್ತು ಜಾಮ್, ದಪ್ಪನೆಯ ಮೊಸರು, ಮಾವಿನಕಾಯಿ ಉಪ್ಪಿನಕಾಯಿ. ಅವರು ತಂದಿಟ್ಟ ಪ್ರಮಾಣ ನಾವು ಮೂವರೇನು, ನಾಲ್ಕೈದು ಮಂದಿ ತಿನ್ನುವಷ್ಟಿತ್ತು. ಹೆಚ್ಚೇ ಎನಿಸುವಷ್ಟು ದ್ರಾಕ್ಷಿ-ಗೋಡಂಬಿ ಬೆರೆಸಿದ ಉಪ್ಪಿಟ್ಟು ಸಿಹಿಯಾಗಿತ್ತು; ಪರೋಟವೂ ನಮ್ಮೂರಿನ ಪರೋಟಕ್ಕಿಂತ ಭಿನ್ನವಾಗಿತ್ತು. ಆದರೆ ಎಲ್ಲವೂ ರುಚಿಕರವಾಗಿದ್ದವು. ಭೂತಾನಿಗೆ ಹೋಗಿ ಏನು ತಿನ್ನುವುದೆಂಬ ಸಣ್ಣ ಅನುಮಾನ ಅಷ್ಟರಲ್ಲೇ ಮಾಯವಾಗಿತ್ತು. ಇನ್ನೊಂದು ಕಪ್ ಚಹಾ ಇದೆಯಾ ಎಂದು ಕೇಳುತ್ತಿತ್ತು ಚಳಿ.
ಅಷ್ಟರಲ್ಲಿ ಪೆಮಾ ಕೂಡ ಬಂದು ನಮ್ಮನ್ನು ಸೇರಿಕೊಂಡರು. ಅವರು ಉಳಿದುಕೊಂಡಿದ್ದ ಸಂಬಂಧಿಕರ ಮನೆಯೂ ಅದೇ ಹೋಟೆಲಿನ ಆಸುಪಾಸಿನಲ್ಲಿತ್ತು. ಅವರೂ ನಮ್ಮೊಂದಿಗೆ ತಿಂಡಿ ಪೂರೈಸಿದರು. ಎಷ್ಟೇ ಬೇಗ ಅಂದರೂ ಅಷ್ಟೆಲ್ಲ ಆಗುವ ಹೊತ್ತಿಗೆ ಒಂಬತ್ತು ಗಂಟೆ ಕಳೆದಿತ್ತು. ಇನ್ನೇನು ಕಾರು ಏರುವುದೇ ಅಂದುಕೊಂಡರೆ ‘ಐದು ನಿಮಿಷ ತಡೆಯಿರಿ. ಕಾರ್ ಬಾಗಿಲು ತೆಗೆಯಲು ಆಗದಷ್ಟು ಐಸ್ ಅಂಟಿಕೊಂಡಿದೆ. ನಾನು ಆಗಲೇ ಬಂದು ಒಂದು ಡೋರ್ ತೆಗೆದು ಕಾರ್ ಆನ್ ಮಾಡಿ ಇಟ್ಟಿದ್ದೇನೆ. ಸ್ವಲ್ಪ ಹೊತ್ತಲ್ಲಿ ಸರಿಹೋಗುತ್ತೆ’ ಎಂದರು ಪೆಮಾ. ನಮಗೆಲ್ಲವೂ ಹೊಸದಾಗಿದ್ದರಿಂದ ಪ್ರತಿಯೊಂದನ್ನೂ ಸೋಜಿಗದಿಂದ ಗಮನಿಸುತ್ತಿದ್ದೆವು. ಬಟ್ಟೆಬರೆಗಳನ್ನು ಧರಿಸುವ ಮುನ್ನ ಥರ್ಮಲ್ ವೇರ್ ಧರಿಸಿದ್ದೂ ನಮಗೆ ಹೊಸ ಅನುಭವವೇ. ಪುಸ್ತಕಗಳಲ್ಲಿ ಸಿನಿಮಾಗಳಲ್ಲಿ ನೋಡುತ್ತಿದ್ದ ಹಿಮಾಲಯವನ್ನು ನಾವು ದಾಟಿ ಬಂದಿದ್ದೆವು. ವಾಸ್ತವವಾಗಿ ಈಗ ನಾವು ಹಿಮಾಲಯದ ಒಂದು ಭಾಗವಾಗಿಯೇ ಇದ್ದೆವು. ಥರ್ಮಲ್ ವೇರ್, ಅದರ ಮೇಲೆ ನಮ್ಮ ದಿನನಿತ್ಯದ ಡ್ರೆಸ್, ಅದರ ಮೇಲೆ ಸ್ವೆಟರ್, ಎರಡೂ ಕಿವಿಗಳನ್ನು ಪೂರ್ತಿಯಾಗಿ ಮುಚ್ಚುವ ಮಂಕಿಕ್ಯಾಪ್, ಕೈಗಳಿಗೆ ದಪ್ಪನೆಯ ಗ್ಲೌಸ್- ಇವಿಷ್ಟರ ಸಹಾಯದಿಂದ ಅಲ್ಲಿನ ಚಳಿಯನ್ನು ತಕ್ಕಮಟ್ಟಿಗೆ ತಡೆದುಕೊಳ್ಳುವುದು ನಮಗೆ ಸಾಧ್ಯವಾಗಿತ್ತು.ಪರಂಪರೆ ಪ್ರಿಯರು:
ಟೈಗರ್ಸ್ ನೆಸ್ಟ್ ತಪ್ಪಲು ತಲುಪಲು ನಾವು ಒಂದರ್ಧ ಗಂಟೆ ಕಾರಿನಲ್ಲಿ ಪ್ರಯಾಣಿಸಬೇಕಿತ್ತು. ಕಾರು ಪಾರೊ ನಗರವನ್ನು ದಾಟಿ ಪರ್ವತದತ್ತ ಸಾಗುತ್ತಿದ್ದರೆ ಪೆಮಾ ಒಂದೊಂದೇ ಕಥೆಗಳನ್ನು ಬಿಚ್ಚುತ್ತಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಹೊಲಗಳು, ಅವುಗಳ ನಡುವೆ ಅಲ್ಲೊಂದು ಇಲ್ಲೊಂದು ಚೌಕಾಕಾರದ ಮನೆಗಳು. ಚಳಿಗಾಲವಾದ್ದರಿಂದ ಹೊಲಗಳು ಕಟಾವು ಮುಗಿಸಿಕೊಂಡು ಬಣ್ಣಗುಂದಿದ್ದವು. ಆದರೆ ಆ ಬಣ್ಣಗಳೆಲ್ಲ ಮನೆಗಳಲ್ಲಿ ಪ್ರತಿಫಲಿಸುತ್ತಿದ್ದವು. ಕಲ್ಲು-ಮಣ್ಣಿನ ಗೋಡೆಗಳು, ಅವುಗಳಿಗೆ ಮರದ ಪಟ್ಟಿಗಳ ಅಲಂಕಾರ, ಕಮಾನು ಕಿಟಕಿ ಬಾಗಿಲುಗಳು, ಕಂದು, ಕೆಂಪು, ಹಳದಿ ಬಣ್ಣ ಎದ್ದು ಕಾಣುವ ಚಿತ್ರಗಳು ಮತ್ತು ಕೆತ್ತನೆ ಕೆಲಸಗಳು, ಸಿಜಿಐ ಶೀಟುಗಳನ್ನು ಇಳಿಜಾರಾಗಿ ಜೋಡಿಸಿದ ಮಾಡು... ಹೆಚ್ಚಿನ ಮನೆಗಳದ್ದೂ ಒಂದೇ ರೂಪ. ಅಲ್ಲಿನ ಮಳೆ, ಗಾಳಿ ಮತ್ತು ಚಳಿಯನ್ನು ತಡೆದುಕೊಳ್ಳುವುದಕ್ಕೆ ಅಂತಹ ಶೀಟುಗಳನ್ನು ಬಳಸುವುದು ಅನಿವಾರ್ಯ ಎಂದು ವಿವರಿಸುತ್ತಿದ್ದರು ಪೆಮಾ. ಯಾವುದೇ ಕಟ್ಟಡ- ಖಾಸಗಿಯಿರಲಿ, ಸರ್ಕಾರದ್ದಿರಲಿ, ವಾಸದ ಮನೆಯಾಗಿರಲಿ, ವಾಣಿಜ್ಯ ಉದ್ದೇಶದ್ದೇ ಇರಲಿ - ಭೂತಾನಿನ ಪರಂಪರೆ ಮತ್ತು ಸಂಸ್ಕೃತಿಯನ್ನು ಚೆನ್ನಾಗಿ ಬಿಂಬಿಸುವ ಕಲಾತ್ಮಕತೆ ಇರಲೇಬೇಕು, ಇಲ್ಲವಾದರೆ ಅಂತಹ ನಿರ್ಮಾಣಕ್ಕೆ ಸರ್ಕಾರ ಅನುಮತಿಯೇ ನೀಡುವುದಿಲ್ಲ ಎಂದರವರು.
ರಸ್ತೆಯ ಅಕ್ಕಪಕ್ಕ, ಗುಡ್ಡ ಮತ್ತು ಕಟ್ಟಡಗಳ ಮೇಲೆ ವಿವಿಧ ಬಣ್ಣಗಳ ಧ್ವಜಗಳು, ಧ್ವಜಗಳಿಂದಲೇ ಮಾಡಿದ ಬಣ್ಣಬಣ್ಣದ ತೋರಣಗಳು ಸಾಮಾನ್ಯವಾಗಿದ್ದವು. ಧ್ವಜಗಳಲ್ಲಿ ಹುಲಿ, ಕುದುರೆ, ಸಿಂಹ, ಗರುಡ ಮೊದಲಾದ ಪ್ರಾಣಿ-ಪಕ್ಷಿಗಳ ಚಿತ್ರಗಳು, ಝೋಂಕಾ ಭಾಷೆಯ ಅಕ್ಷರಗಳಿದ್ದವು. “ಇವೆಲ್ಲ ಭೂತಾನೀಯರ ಧಾರ್ಮಿಕ ನಂಬಿಕೆಯ ಸಂಕೇತಗಳು. ಈ ಪ್ರಾಣಿಪಕ್ಷಿಗಳೆಲ್ಲ ಶಕ್ತಿ ಹಾಗೂ ಶೌರ್ಯದ ಪ್ರತೀಕಗಳು. ಅವುಗಳ ಮೇಲಿರುವುದು ವಿವಿಧ ಬಗೆಯ ಮಂತ್ರಾಕ್ಷರಗಳು” ಎಂದು ವಿವರಿಸಿದರು ಪೆಮಾ.
“ಶಕ್ತಿಗಾಗಿ, ದೀರ್ಘಾಯಸ್ಸಿಗಾಗಿ ಪ್ರಾರ್ಥಿಸಿ ಜನರು ಧ್ವಜಗಳನ್ನು ನೆಡುತ್ತಾರೆ. ಇನ್ನು ಬೆಟ್ಟಗಳ ಮೇಲೆ ಕಾಣುವ ಬೆಳ್ಳನೆಯ ಧ್ವಜಗಳು ತೀರಿ ಹೋದ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರಿಗಾಗಿ ಸ್ಥಳೀಯರು ನೆಟ್ಟ ಧ್ವಜಗಳು. ಆರ್ಥಿಕವಾಗಿ ಸಾಮಾನ್ಯ ಹಿನ್ನೆಲೆಯವರು ಅಳಿದ ಕುಟುಂಬಸ್ಥರಿಗಾಗಿ ಒಂದೋ ಎರಡೋ ಧ್ವಜ ನೆಡುತ್ತಾರೆ; ಶ್ರೀಮಂತರು ನೂರಾರು ಧ್ವಜಗಳನ್ನು ಸ್ಥಾಪಿಸುವುದುಂಟು...” ಪೆಮಾ ಕಥೆಗಳು ಕುತೂಹಲಕರವಾಗಿದ್ದವು, ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟಿಸುತ್ತಿದ್ದವು.
ಅಷ್ಟು ಹೊತ್ತಿಗೆ ನಾವು ಟೈಗರ್ಸ್ ನೆಸ್ಟ್ ಪರ್ವದ ತಪ್ಪಲಿಗೆ ತಲುಪಿದ್ದೆವು. ಅಲ್ಲಿ ಅದಾಗಲೇ ಸಾಕಷ್ಟು ವಾಹನಗಳು ತುಂಬಿಕೊಂಡಿದ್ದವು. ಎಲ್ಲವೂ ಪ್ರವಾಸಿ ವಾಹನಗಳು. ನಮ್ಮ ಕಾರ್ ಪಾರ್ಕ್ ಮಾಡಲು ಸಾಕಷ್ಟು ಹೆಣಗಾಡಬೇಕಾಯಿತು. ಕೊನೆಗೆ ಪೆಮಾ ಸ್ವಲ್ಪ ದೂರದಲ್ಲಿದ್ದ ಒಂದು ಟಿಂಬರ್ ಅಂಗಡಿಯ ವ್ಯಕ್ತಿಯನ್ನು ವಿನಂತಿಸಿಕೊಂಡು ಅವರ ಕಾಂಪೌಂಡಿನೊಳಗೆ ಕಾರ್ ನಿಲ್ಲಿಸಿದರು.
ಮೂರು ಸಾವಿರ ಉಳಿಯಿತು:
ಪರ್ವತ ಏರುವ ಮುನ್ನ ನಾವು ಪ್ರವೇಶ ಶುಲ್ಕ ಪಾವತಿಸಬೇಕಿತ್ತು. ‘ನೀವು ಭೂತಾನಿನ ಅಧಿಕೃತ ಅತಿಥಿಗಳು. ನಿಮಗೆ ವಿನಾಯಿತಿ ಕೊಡಬಹುದು’ ಎಂದ ಪೆಮಾ ಅವರು ಟಿಕೆಟ್ ಕೌಂಟರಿನಲ್ಲಿ ನಮ್ಮನ್ನು ‘ಮಾಸ್ಸ್ ಡ್ಯಾನ್ಸ್ ಅಧ್ಯಯನ ಮಾಡಲು ಭಾರತದಿಂದ ಬಂದಿರುವ ಯಕ್ಷಗಾನ ಕಲಾವಿದರು; ನಮ್ಮ ಸರ್ಕಾರದ ಅಧಿಕೃತಿ ಅತಿಥಿಗಳು’ ಎಂದು ಪರಿಚಯಿಸಿದರು. ಸಂಸ್ಕೃತಿ ಇಲಾಖೆಯ ಅಧಿಕಾರಿ ಸೋನಂ ಅವರಿಗೆ ಕರೆ ಮಾಡಿ ಟಿಕೆಟ್ ಕೌಂಟರಿನವರೊಂದಿಗೆ ಸಂಪರ್ಕಿಸಿದರು. ಭೂತಾನಿನ ಎಲ್ಲ ಪಾರಂಪರಿಕ ಮತ್ತು ಪ್ರವಾಸಿ ತಾಣಗಳು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ಬರುತ್ತವಾದ್ದರಿಂದ ಯಾವುದೇ ವಿನಾಯಿತಿಗೂ ಅವರ ಅನುಮತಿ ಅಗತ್ಯ. ಅವರ ದೂರವಾಣಿ ಕರೆ ಕೆಲಸ ಮಾಡಿತು. ಪರ್ವತ ಏರುವ ಪ್ರವೇಶ ಶುಲ್ಕದಿಂದ ನಮಗೆ ವಿನಾಯಿತಿ ದೊರೆಯಿತು. ‘ನೋಡಿ ನಿಮಗೆ ಮೂರು ಸಾವಿರ ಉಳಿಸಿದೆ’ ಎಂದು ತಮಾಷೆ ಮಾಡಿದರು ಪೆಮಾ.
ಟಿಕೆಟ್ ಕೌಂಟರ್ ಆಸುಪಾಸಿನಲ್ಲಿ ಕೆಲವು ಕುದುರೆಗಳೊಂದಿಗೆ ಜನರು ಕಾಯುತ್ತಿದ್ದರು. ಕಾಲ್ನಡಿಗೆಯಲ್ಲಿ ಪರ್ವತ ಏರಲಾಗದವರು ಈ ಕುದುರೆಗಳ ಸಹಾಯ ಪಡೆಯಬಹುದು. ಆದರೆ ಅವರಿಗೆ ಹಣಕಾಸಿನ ಅನುಕೂಲ ಕೂಡ ಇರಬೇಕು. ‘ಕೆಲವು ತಿಂಗಳ ಹಿಂದೆ ಒಬ್ಬರು ಪ್ರವಾಸಿ ಮಹಿಳೆ ಪರ್ವತ ಏರುವಾಗ ಕುದುರೆಯಿಂದ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡರು. ಅವರಿಗೇನಾದರೂ ಆಗಿದ್ದರೆ ಕುದುರೆ ಮಾಲೀಕರಿಗೆ ತುಂಬ ಸಮಸ್ಯೆ ಆಗುತ್ತಿತ್ತು. ಆದರೆ ಈ ಘಟನೆಯ ನಂತರ ಸರ್ಕಾರ ಕುದುರೆ ಮಾಲೀಕರಿಗೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಮಾಡಿದೆ’ ಎಂದು ಮಾಹಿತಿ ನೀಡಿದರು ಪೆಮಾ.ನಾವಂತೂ ಕುದುರೆಗಳನ್ನೇರುವ ಯೋಚನೆ ಹೊಂದಿರಲಿಲ್ಲ. ನಮ್ಮ ನಡಿಗೆ ಆರಂಭವಾಯಿತು. ಒಂದಷ್ಟು ದೂರ ಮರ ಗಿಡ ಬಯಲಿನ ಹಾದಿ ಮುಗಿದ ಮೇಲೆ ಏರುದಾರಿಯ ಪಯಣ. ಕೊರೆಯುತ್ತಿದ್ದ ಚಳಿ ನಿಧಾನವಾಗಿ ನಮ್ಮನ್ನು ತೊರೆದಂತೆ ಸಣ್ಣಗೆ ಬೆವರು ಮೂಡಲು ಆರಂಭವಾಯಿತು. ಅಲ್ಲಿಯವರೆಗೆ ಟೈಗರ‍್ಸ್ ನೆಸ್ಟ್ ನ ಎತ್ತರ ವಿಸ್ತಾರಗಳ ಅರಿವು ನಮಗಿರಲಿಲ್ಲ. ಹೆಚ್ಚುಕಡಿಮೆ ಒಂದೂವರೆ ಗಂಟೆ ನಡೆಯಬೇಕಾಗುತ್ತದೆ ಎಂಬುದು ಮಾತ್ರ ಗೊತ್ತಿತ್ತು. ಕೆಲವೊಮ್ಮೆ ಅಜ್ಞಾನವೆಂಬುದು ವರವೇ ಹೌದಲ್ಲ! ಮೊದಲೇ ಅದರ ಬಗ್ಗೆ ತುಂಬ ಅಧ್ಯಯನ ಮಾಡಿದ್ದರೆ ‘ನನ್ನಿಂದಾಗದು- ನನ್ನಿಂದಾಗದು’ ಎಂದು ಕಾಲು ಮುಷ್ಕರ ಹೂಡುತ್ತಿತ್ತೇನೋ?
ಒಂದು ಕಿಲೋಮೀಟರಿನಷ್ಟು ಸಾಗುವಷ್ಟರಲ್ಲಿ ನಾವು ಏದುಸಿರು ಬಿಡಲು ಆರಂಭಿಸಿದ್ದೆವು. ಮಗನಿಗೆ ಚಳಿ ಮತ್ತು ಆಯಾಸದ ಪರಿವೆಯೇ ಇರಲಿಲ್ಲ. ಅವನು ಆಗಲೇ ಪೆಮಾ ಅಂಕಲ್ ಜೊತೆಗೆ ಒಳ್ಳೆಯ ಗೆಳೆತನ ಬೆಳೆಸಿಕೊಂಡು ಅವರಿಂದ ಕಥೆಗಳನ್ನು ಕೇಳುತ್ತಾ, ತಾನು ಯಕ್ಷಗಾನದ ಕಥೆಗಳನ್ನು ಹೇಳುತ್ತಾ ಬಿರುಸಾಗಿ ಹೆಜ್ಜೆ ಹಾಕುತ್ತಿದ್ದ. ‘ನೋಡು, ನಾವು ಹೆಚ್ಚಾಗಿ ಕುಳಿತೇ ಕೆಲಸ ಮಾಡುತ್ತೇವೆ. ಅಲ್ಲವೆಂದರೆ ತರಗತಿಯಲ್ಲಿ ನಿಂತುಕೊಂಡು ಪಾಠ, ವಾರಕ್ಕೊಂದು ಯಕ್ಷಗಾನ ಕ್ಲಾಸು. ಅದು ಬಿಟ್ಟರೆ ಎಂತ ವ್ಯಾಯಾಮವೂ ಇಲ್ಲ. ಅದಕ್ಕೇ ನಮಗೆ ನಡೆಯಲಾಗುತ್ತಿಲ್ಲʼ ಎಂದು ನಮ್ಮಷ್ಟಕ್ಕೇ ವಿಶ್ಲೇಷಣೆ ಮಾಡಿಕೊಂಡೆವು.
ಸ್ಕೂಲಿಗೆ ಹೋಗುವಾಗ ಏನಿಲ್ಲವೆಂದರೂ ಪ್ರತಿದಿನ ಐದು-ಹತ್ತು ಕಿ.ಮೀ. ನಡೆದು ಹೋಗುತ್ತಿದ್ದವರು ನಾವು. ಕೆಲವು ವರ್ಷ ಅದು ಹದಿನಾಲ್ಕು ಕಿ.ಮೀ. ತಲುಪಿದ್ದೂ ಉಂಟು. ಅರೆ... ಕಾಲ ಎಷ್ಟು ಬದಲಾಗಿ ಹೋಯಿತು... ಈಗ ಒಂದೆರಡು ಕಿ.ಮೀ. ನಡೆಯುವಷ್ಟರಲ್ಲಿ ಏದುಸಿರು ಬಿಡುತ್ತಿದ್ದೇವಲ್ಲ ಎಂದು ಗತವೈಭವವನ್ನು ನೆನಪಿಸಿಕೊಂಡು ನಕ್ಕೆವು. ಆದರೆ ನಿಜ ವಿಷಯ ಏನೆಂದರೆ ನಾವು ಎತ್ತರೆತ್ತರ ಏರುತ್ತಿದ್ದಂತೆ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿದ್ದುದು, ಮತ್ತು ಅದರಿಂದಾಗಿ ಉಸಿರಾಡಲು ಕಷ್ಟವಾಗುತ್ತಿದ್ದುದು.
(ಮುಂದುವರಿಯುವುದು)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ