'ಭೂತಾನ್‌ನಲ್ಲಿ ಯಕ್ಷದೀವಿಗೆʼ
ಪ್ರವಾಸ ಕಥನ-14
ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ
(ಪ್ರಜಾಪ್ರಗತಿ, 26 ಏಪ್ರಿಲ್ 2026)
(ಮುಂದುವರಿದ ಭಾಗ...)
ನಾವು ಯಾವುದೋ ದೇಶದವರು, ಯಾವುದೋ ಭಾಷೆಯವರು. ಆ ಸುಂದರಿಯಂತೂ ವರ್ಷಾನುಗಟ್ಟಲೆಯಿಂದ ನಮ್ಮ ಪರಿಚಯವೇನೋ ಎಂಬ ಹಾಗೆ ಉಪಚಾರ ಮಾಡಿದಳು. “ನಾಳೆ ಯಾವ ಕಡೆ ಪಯಣ? ಯಾವ ಪ್ರವಾಸಿ ತಾಣಗಳನ್ನು ನೋಡುತ್ತೀರಿ?” ಎಂದು ತನ್ನ ಹರಕು ಮುರುಕು ಇಂಗ್ಲಿಷಲ್ಲಿ ಮಾತಿಗೆಳೆದಳು. ನಾವು ಬಂದ ಉದ್ದೇಶ, ನಮ್ಮ ಯೋಜನೆಯ ಬಗ್ಗೆ ಆಕೆಗೆ ಸಂಕ್ಷಿಪ್ತವಾಗಿ ತಿಳಿಸಿದೆವು. “ನಮ್ಮ ಮುಖ್ಯ ಕೆಲಸ ಆರಂಭಿಸುವ ಮೊದಲು ಒಂದೆರಡು ದಿನ ನಾವು ಭೂತಾನದ ಪರಿಸರ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಗಮನಿಸಬೇಕು. ಅದಕ್ಕಾಗಿ ನಾಳೆ ಟೈಗರ್ಸ್ ನೆಸ್ಟ್ (Tiger's Nest) ಗೆ ಹೋಗುತ್ತಿದ್ದೇವೆ” ಎಂದೆವು.
ಟೈಗರ್ಸ್ ನೆಸ್ಟ್ ಹೆಸರು ಕೇಳುತ್ತಿದ್ದಂತೆ ಆಕೆಯ ಮುಖವರಳಿತು. “ಒಳ್ಳೆಯ ಯೋಚನೆ ಅದು. ಆದರೆ ನೀವು ಈಗ ಹಾಕಿಕೊಂಡಿರುವ ಶೂಸ್ ಏನೇನೂ ಸಾಲದು. ಅದು ಬಹಳ ಕಡಿದಾದ ಏರು ಹಾದಿ. ನೀವು ಇನ್ನೂ ಒಂಚೂರು ಒಳ್ಳೆಯ ಶೂಸ್ ಹಾಕಿಕೊಳ್ಳಬೇಕು” ಎಂದು ಒಂದಿಷ್ಟು ಅನುಕಂಪ ಸಮೇತ ಎಚ್ಚರಿಕೆ ನೀಡಿದಳು. ನಮ್ಮಲ್ಲೊಬ್ಬರು ಸಾಮಾನ್ಯ ಕ್ಯಾನ್ವಾಸ್ ಶೂಸ್ ಹಾಕಿಕೊಂಡಿದ್ದೆವು. ಅದನ್ನು ನೋಡಿ ಇವರು ಪರ್ವತ ಏರುವವರಾ ಎಂದು ಆಕೆಗೆ ಸೋಜಿಗ ಅನಿಸಿರಬೇಕು.ಅಷ್ಟರಲ್ಲಿ ಅಲ್ಲೇ ಪಕ್ಕದ ಹೋಟೆಲಲ್ಲಿ ನಮಗೆ ಅನುಕೂಲವಾಗುವ ರೂಮ್ ಇದೆಯೆಂಬ ಸಿಹಿಸುದ್ದಿಯೊಂದಿಗೆ ಪೆಮಾ ಬಂದರು. ಪಾರೊ, ಥಿಂಪು ಎಲ್ಲ ಅವರಿಗೆ ಚಿರಪರಿಚಿತ ಸ್ಥಳಗಳು. ಅಷ್ಟಲ್ಲದೆ ನಾವು ಬರುವುದಕ್ಕೆ ಮೊದಲೇ ಅವರು ಸಾಕಷ್ಟು ಸುತ್ತಾಟ ನಡೆಸಿ ಕೆಲವು ಹೋಟೆಲ್‌ಗಳನ್ನು ನೋಡಿ ಬಂದಿದ್ದರು. ಈಗ ಅವರು ನೋಡಿ ಬಂದ ಹೋಟೆಲು ಸಾಕಷ್ಟು ಸುಸಜ್ಜಿತವಾಗಿತ್ತು. ವಿಶಾಲವಾದ ಕೊಠಡಿ, ಒಳ್ಳೆಯ ಗಾಳಿ-ಬೆಳಕು, ನಾವು ಮೂವರಿಗೆ ಸೂಕ್ತವೆನಿಸುವ ಮೆತ್ತಗಿನ ದೊಡ್ಡ ಹಾಸಿಗೆ, ಉತ್ತಮ ಸ್ನಾನದ ಮನೆ ಮತ್ತು ಶೌಚಾಲಯ, ಗೋಡೆಗಳನ್ನು ಬೆಚ್ಚಗಿಟ್ಟಿರುವ ಓಕ್ ಮರದ ಮುಚ್ಚಿಗೆ, ಎಲ್ಲಕ್ಕಿಂತ ಮಿಗಿಲಾಗಿ ಆ ಭಯಂಕರ ಚಳಿಯಿಂದ ನಮ್ಮನ್ನು ಕಾಪಾಡಬಲ್ಲ ಹೀಟರ್... ಇವನ್ನೆಲ್ಲ ನೋಡಿ ಖುಷಿ ಅನ್ನಿಸಿತು. ಬೆಳಗ್ಗೆ ಮತ್ತು ರಾತ್ರಿ ಮೂವರ ಊಟೋಪಚಾರ ಎಲ್ಲ ಸೇರಿ ಆ ರೂಮಿಗೆ ಪ್ರತಿದಿನಕ್ಕೆ ರೂ. 3300-00 ಬಾಡಿಗೆಗೆ ಹೋಟೆಲಿನವರು ಒಪ್ಪಿಕೊಂಡರು. ನಮ್ಮ ಎರಡನೇ ಶ್ರೇಣಿಯ ನಗರಗಳಲ್ಲಿಯೂ ಇಂತಹ ದರವನ್ನು ಊಹಿಸಿಕೊಳ್ಳುವುದು ಈ ದಿನಗಳಲ್ಲಿ ಕಷ್ಟ; ಅಂತಹದರಲ್ಲಿ ಇಷ್ಟೊಂದು ಸುಸಜ್ಜಿತ ಹೋಟೆಲಿನಲ್ಲಿ ಈ ದರ ನಮಗೆ ಬಹಳ ಆಕರ್ಷಕ ಅನಿಸಿತು.
ಬೇರೆಯದೇ ಪ್ರಪಂಚ:
ಆ ಹೋಟೆಲಿನಲ್ಲಿ ನೋಂದಣಿ ಇತ್ಯಾದಿ ಔಪಚಾರಿಕತೆಗಳನ್ನು ಮುಗಿಸುವ ಹೊತ್ತಿಗೆ ಮತ್ತೆ ಬಂತು ಹಬೆಯಾಡುವ ಚಹಾ ದೊಡ್ಡ ಕಪ್‌ಗಳಲ್ಲಿ. ಆ ಚಳಿಗೆ ಕೈಕಾಲುಗಳೆಲ್ಲ ಎಷ್ಟು ಮರಗಟ್ಟಿದ್ದವೆಂದರೆ ಅವರು ಒಂದೊಂದು ಕೊಡ ಚಹಾ ಕೊಟ್ಟರೂ ನಾವು ಕುಡಿಯುತ್ತಲೇ ಕೂರೋಣ ಎಂಬ ಮನಸ್ಥಿತಿಯಲ್ಲಿ ಇದ್ದೆವು. ನಮ್ಮೆದುರಿಗೆ ಜಪಾನ್, ಭಾರತ, ಭೂತಾನ್, ಅಮೇರಿಕ, ಥಾಯ್ಲೆಂಡ್ ದೇಶಗಳ ಸಮಯ ತೋರಿಸುವ ಐದು ಪ್ರತ್ಯೇಕ ಗಡಿಯಾಗಳು ಗಮನ ಸೆಳೆಯುತ್ತಿದ್ದವು. ಭೂತಾನ್ ಗಡಿಯಾರ 6:10 ಗಂಟೆಯನ್ನೂ, ಭಾರತದ ಗಡಿಯಾರ 5:40 ಗಂಟೆಯನ್ನೂ, ಜಪಾನ್ ಗಡಿಯಾರ 9:10 ಗಂಟೆಯನ್ನೂ, ಅಮೇರಿಕ ಗಡಿಯಾರ 8:10 ಗಂಟೆಯನ್ನೂ, ಥಾಯ್ಲಂಡ್ ಗಡಿಯಾರ 6:40 ಗಂಟೆಯನ್ನೂ ತೋರಿಸುತ್ತಿತ್ತು. ನಾವು ನಮ್ಮದೇ ಒಂದು ಲೋಕದಲ್ಲಿ ಸದಾ ಬದುಕುತ್ತಿರುತ್ತೇವೆ. ಉಳಿದ ಜಗತ್ತಿಗೆ ಅದು ಬೇರೆಯದೇ ಆಗಿರುತ್ತದೆ. ಎಷ್ಟೊಂದು ವಿಚಿತ್ರ ಅಲ್ಲವೇ ಈ ಪ್ರಪಂಚ?
ಚಹಾ ಕುಡಿದು ನಾವು ರೂಮಿಗೆ ಹೊರಟೆವು. ನಾಲ್ಕೈದು ಮಂದಿ ಸುಂದರಿಯರು ನಮ್ಮ ಲಗ್ಗೇಜುಗಳನ್ನು ಅದಾಗಲೇ ರೂಮಿಗೆ ತಲುಪಿಸಿಬಿಟ್ಟಿದ್ದರು. ಅವರ ಕೆಲಸದ ಶ್ರದ್ಧೆ, ಮೃದುವಾದ ಮಾತು, ಸೊಗಸಾದ ನಗು ಇವನ್ನೆಲ್ಲ ನೋಡುವುದೇ ಒಂದು ಚಂದದ ಅನುಭವ. ಅವರೆಲ್ಲ ತಕ್ಕಮಟ್ಟಿಗೆ ಹಿಂದಿ ಮಾತಾಡುತ್ತಿದ್ದರು. ಕೆಲವರ ಇಂಗ್ಲಿಷ್ ಕೂಡ ಪರವಾಗಿಲ್ಲ.
“ನೀವು ವಿಶ್ರಾಂತಿ ತೆಗೆದುಕೊಳ್ಳಿ. ನಾನು ಬೆಳಗ್ಗೆ ಎಂಟೂವರೆಗೆ ಬರುತ್ತೇನೆ. ನಾವು ಸಾಧ್ಯವಾದಷ್ಟು ಬೇಗ ಹೋಗಬೇಕು. ಇಲ್ಲದಿದ್ದರೆ ಟೈಗರ್ಸ್ ನೆಸ್ಟ್ ನಿಂದ ವಾಪಸ್ ಬರುವುದು ಬಹಳ ತಡವಾದೀತು” ಎಂದು ಸೂಚನೆ ಕೊಟ್ಟು ಹೊರಟರು ಪೆಮಾ.
ಹೋಟೆಲ್ ರೂಮಿನಲ್ಲಿದ್ದ ಹೀಟರು ಹಳೆಯ ಕರೆಂಟ್ ಸ್ಟೌವ್ ಅನ್ನು ನೆನಪಿಸುವಂತೆ ಇತ್ತು. ನಿಗಿನಿಗಿ ಕೆಂಪಾಗಿ ಅದು ಹೊಳೆಯುತ್ತಿದ್ದರೆ ಕವಿ ಪಿ.ಬಿ. ಶೆಲ್ಲಿ ನೆನಪಾದ: “ಜಗಜಗಿಸಿ ಹೊಳೆವ ಉರಿ ಸರಳುಗಳ ಬಳಿ ಕುಳಿತು ಉಸುರಿಕೋ ನಿನ್ನೊಳಗೆ ನೀನೇ ವ್ಯಥೆ ದನಿಯಲ್ಲಿ...” ಇದೇ ರೀತಿಯ ಬೆಂಕಿಗೂಡು ಅದಿದ್ದಿರಬಹುದಲ್ಲ ಅಂತ ಮತ್ತೊಮ್ಮೆ ಸೋಜಿಗವಾಯಿತು. ಆದರೆ ಆ ಹೀಟರ್ ಇಲ್ಲದೆ ಆ ರೂಮನ್ನು ಊಹಿಸಿಕೊಳ್ಳುವುದು ಕಷ್ಟ. ಅದರಿಂದ ಕೊಂಚವೇ ದೂರ ಹೋದರೂ ನಿಜವಾದ ಚಳಿ ಅನುಭವಕ್ಕೆ ಬರುತ್ತಿತ್ತು.
ಈ ಮಧ್ಯೆ “ನಾವೆಲ್ಲ ಬಹಳ ಆರಾಮವಾಗಿ ಹೋಟೆಲ್ ರೂಮಿಗೆ ತಲುಪಿದ್ದೇವೆ. ಇಲ್ಲಿ ಎಲ್ಲವೂ ಚೆನ್ನಾಗಿದೆ. ನಿಮ್ಮ ಮಂದಿ ಬಹಳ ಚೆನ್ನಾಗಿ ನಮ್ಮನ್ನು ನೋಡಿಕೊಂಡಿದ್ದಾರೆ” ಎಂದು ಸೋನಂ ಅವರಿಗೆ ಸಂದೇಶ ಕಳಿಸುವುದನ್ನು ಮರೆಯಲಿಲ್ಲ. ಅವರು ಪ್ರತಿಯಾಗಿ, “ನಿಮ್ಮ ಮೂವರ ಪಾಸ್‌ಪೋರ್ಟಿನಲ್ಲಿರುವ ಎಂಟ್ರಿ ಪರ್ಮಿಟ್‌ನ ಫೋಟೋ ತೆಗೆದು ಕಳಿಸಿ. ನೀವು ಪುನಾಖಾಕ್ಕೆ ಹೋಗಲು ರೂಟ್ ಪರ್ಮಿಟ್ ಮಾಡಿಸಿಕೊಳ್ಳಲು ಅದು ಬೇಕಾಗುತ್ತದೆ” ಎಂದು ಅವರು ನೆನಪಿಸಿದರು. ಹಾಗೆಯೇ ಮಾಡಿದೆವು.ಮುನ್ನಾದಿನ ರಾತ್ರಿ ಬಹುತೇಕ ನಿದ್ದೆಯೇ ಮಾಡಿರಲಿಲ್ಲ. ಪ್ಯಾಕಿಂಗೆಲ್ಲ ಮುಗಿದು ಮಧ್ಯರಾತ್ರಿ ಹಾಗೆಯೇ ಏರ್‌ಪೋರ್ಟಿಗೆ ಹೊರಟಿದ್ದೆವು. ಮತ್ತೆ ಎರಡೆರಡು ವಿಮಾನ ಪ್ರಯಾಣ. ಈಗ ಮೆತ್ತಗಿನ ಹಾಸಿಗೆ, ಬೆಚ್ಚನೆಯ ಕೋಣೆ ನೋಡಿದಾಗ ಕೈಕಾಲುಮನಸ್ಸುಗಳೆಲ್ಲ ವಿಶ್ರಾಂತಿಗಾಗಿ ಹಾತೊರೆಯತೊಡಗಿದ್ದವು. ಬೇಗಬೇಗನೆ ಸ್ನಾನ ಮಾಡಿ ಊಟ ಮುಗಿಸಿ ಹಾಸಿಗೆಯಷ್ಟೇ ದಪ್ಪದ ಹೊದಿಕೆಯೊಳಗೆ ತೂರಿಕೊಂಡೆವು.
ನಾವು ನೆಚ್ಚಿಕೊಂಡ ಯಕ್ಷಗಾನ ನಮ್ಮನ್ನು ಎಷ್ಟು ದೂರ ಕರೆದುಕೊಂಡು ಬಂತಲ್ಲ ಎಂಬೊಂದು ವಿಸ್ಮಯ ಮನಸ್ಸಿನೊಳಗೆ ಹರಡಿಕೊಂಡಿತ್ತು. ನಾವು ಪಡೆದ ಪದವಿ, ಪರ್ಸೆಂಟೇಜು ನಮಗೆ ಏನು ಮಾಡಿದೆಯೋ ಗೊತ್ತಿಲ್ಲ, ಆದರೆ ನಾವು ಕಲಿತ, ಪ್ರೀತಿಸಿದ ಯಕ್ಷಗಾನ ನಮ್ಮನ್ನು ಸೀಮೋಲ್ಲಂಘನ ಮಾಡಿಸಿತ್ತು. ಎಲ್ಲಿಯ ಯಕ್ಷಗಾನ, ಎಲ್ಲಿಯ ಕರಾವಳಿ, ಎಲ್ಲಿಯ ಬಯಲುಸೀಮೆ, ಈಗ ಇನ್ನೆಲ್ಲಿಯ ಭೂತಾನ... ಎತ್ತಣಿಂದೆತ್ತ ಸಂಬಂಧವಯ್ಯ! ಈಗ ಈ ದೇಶದಲ್ಲಿ ನಾವು ಹತ್ತು-ಹನ್ನೆರಡು ದಿನ ಇರಬೇಕು, ಇಲ್ಲಿ ಬದುಕು-ಭಾವಗಳನ್ನು ಇಷ್ಟಿಷ್ಟಾದರೂ ಅರ್ಥಮಾಡಿಕೊಂಡು ಅನುಭವಗಳನ್ನು ಕಟ್ಟಿಕೊಳ್ಳಬೇಕು, ಯಕ್ಷಗಾನದ ಪರಿಚಯವನ್ನು ನಮಗೆ ಸಾಧ್ಯವಾದಷ್ಟರ ಮಟ್ಟಿಗೆ ಇಲ್ಲಿನವರಿಗೆ ಮಾಡಿಕೊಡಬೇಕು. ಹೀಗೆ ವಿಧವಿಧದ ಯೋಚನೆಗಳ ಸಮೇತ ಗಾಢ ನಿದ್ದೆ ನಮ್ಮನ್ನು ಆವರಿಸಿಕೊಂಡಿತು.
ಟೈಗರ್ಸ್ ನೆಸ್ಟ್ ಕಡೆಗೆ:
ಮರುದಿನ ಹೆಚ್ಚು ತಡಮಾಡದೆ ಎದ್ದು ಟೈಗರ್ಸ್ ನೆಸ್ಟ್ ಏರಲು ಸಿದ್ಧತೆ ಮಾಡಿಕೊಂಡೆವು. ಪೆಮಾ ಅವರ ಸಲಹೆಯ ಮೇರೆಗೆ ನಾವು ನಮ್ಮ ಒಟ್ಟು ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೆವು. ನಾವು ತುಮಕೂರಿನಿಂದ ಹೊರಡುವ ಮುನ್ನಾದಿನದವರೆಗೂ ಟೈಗರ್ಸ್ ನೆಸ್ಟ್ ಗೆ ಭೇಟಿಕೊಡುವುದು ನಮ್ಮ ಪಟ್ಟಿಯಲ್ಲಿ ಇರಲಿಲ್ಲ. ನಮ್ಮ ಪ್ರಮುಖ ಉದ್ದೇಶವೇ ಮಾಸ್ಕ್ ಡ್ಯಾನ್ಸ್ ಅಧ್ಯಯನ ಮತ್ತು ಯಕ್ಷಗಾನದ ಪರಿಚಯ ಆಗಿದ್ದುದರಿಂದ ಅದಕ್ಕೆ ಸಂಬಂಧಿಸಿದ ಕೆಲಸಗಳನ್ನಷ್ಟೇ ಹೆಚ್ಚಾಗಿ ಯೋಜಿಸಿಕೊಂಡಿದ್ದೆವು. ವಾರಾಂತ್ಯಗಳಲ್ಲಿ ಬಿಡುವು ಮಾಡಿಕೊಂಡು ಕೆಲವು ಪ್ರವಾಸಿ ತಾಣಗಳಿಗೆ ಹೋಗೋಣ ಎಂದು ಮಾತಾಡಿಕೊಂಡಿದ್ದೆವು. ಭೂತಾನ್‌ನಲ್ಲಿ ಟೈಗರ್ಸ್ ನೆಸ್ಟ್ ಬಹಳ ಪ್ರಸಿದ್ಧ ತಾಣ ಎಂದು ಅಂತರಜಾಲದ ಮೂಲಕ ತಿಳಿದುಕೊಂಡಿದ್ದೆವು. ಅಲ್ಲಿಗೆ ಭೇಟಿ ನೀಡುವುದನ್ನು ಮಾತ್ರ ಮಿಸ್ ಮಾಡಿಕೊಳ್ಳಬೇಡಿ ಎಂದು ಕೆಲವು ಸ್ನೇಹಿತರೂ ಸಲಹೆ ನೀಡಿದ್ದರು. ಆದರೆ ಅದೊಂದು ಕಡಿದಾದ ಪರ್ವತವೆಂದೂ, ಅದರ ಭೇಟಿ ಭರ್ತಿ ಒಂದು ದಿನದ ಕೆಲಸವೆಂದೂ ಅಲ್ಲಿ ಇಲ್ಲಿ ಓದಿಕೊಂಡದ್ದರಿಂದ ಅಲ್ಲಿಗೆ ಹೋಗಲು ಸಮಯ ಹೊಂದಿಸಿಕೊಳ್ಳುವುದು ಎಲ್ಲಿ ಎಂಬ ಗೊಂದಲ ಉಂಟಾಗಿತ್ತು. ಹಾಗಾಗಿ ಅದನ್ನು ನಮ್ಮ ವೇಳಾಪಟ್ಟಿಯಲ್ಲಿ ನಮೂದಿಸಿರಲಿಲ್ಲ. ಆದರೆ ಅದರ ಭೇಟಿಯ ಮಹತ್ವ ನಾವು ತುಮಕೂರು ಬಿಡುವ ಕೊನೆಯ ಕ್ಷಣದಲ್ಲಿ ಅರ್ಥವಾಗಿದ್ದರಿಂದ ನಮ್ಮನ್ನು ಯಾವುದಾದರೊಂದು ದಿನ ಅಲ್ಲಿಗೆ ಕರೆದುಕೊಂಡು ಹೋಗಲು ಸಾಧ್ಯವೇ ಎಂದು ಪೆಮಾರನ್ನು ಕೇಳಿಕೊಂಡಿದ್ದೆವು. ಅವರೋ ಮೊದಲನೆಯ ದಿನವೇ ಅದನ್ನು ಪ್ಲಾನ್ ಮಾಡಿಬಿಟ್ಟಿದ್ದರು. ಪಾರೊದಲ್ಲಿರುವ ರಾಷ್ಟ್ರೀಯ ಮ್ಯೂಸಿಯಂ, ಮತ್ತೆ ಒಂದಿಷ್ಟು ದೇವಾಲಯಗಳು ಹಾಗೂ ಬೌದ್ಧಮಂದಿರಗಳಿಗೆ ಒಂದು ದಿನ ಭೇಟಿ ನೀಡಿ ನಂತರ ನಾವು ಥಿಂಪು ಮೂಲಕ ಪುನಾಖಾಕ್ಕೆ ಹೋಗಬೇಕು. ಆಮೇಲೆ ಟೈಗರ್ಸ್ ನೆಸ್ಟ್ ಗೆ ವಾಪಸ್ ಬರಲು ಬಹಳ ದೂರ ಆಗುತ್ತದೆ. ಅದರಿಂದ ಸಮಯ ಮತ್ತು ಹಣವೂ ವ್ಯರ್ಥ. ಇಲ್ಲಿಂದಲೇ ಅದು ಹತ್ತಿರ, ಆದ್ದರಿಂದ ಮೊದಲು ಅಲ್ಲಿಗೆ ಹೋಗಿ ಬರೋಣ ಎಂದು ಪೆಮಾ ವಿವರಿಸಿದ್ದರು.
ಫ್ರಾನ್ಸಿಗೆ ಐಫೆಲ್ ಟವರು, ಅಮೇರಿಕಕ್ಕೆ ಸ್ಟಾಚ್ಯೂ ಆಫ್ ಲಿಬರ್ಟಿ ಇದ್ದ ಹಾಗೆ ಭೂತಾನಿಗೆ ಟೈಗರ್ಸ್ ನೆಸ್ಟ್. ಭೂತಾನಿಗೆ ಸಂಬಂಧಿಸಿದ ಯಾವುದೇ ಸ್ಮರಣಿಕೆ ಇರಲಿ, ಪುಸ್ತಕ ಇರಲಿ, ಅದರಲ್ಲಿ ಟೈಗರ್ಸ್ ನೆಸ್ಟನ್ನು ಪ್ರಧಾನವಾಗಿ ತೋರಿಸಿಯೇ ಇರುತ್ತಾರೆ. ಅದು ಹಿಮಾಲಯದ ಶ್ರೇಣಿಯಲ್ಲಿರುವ ವಜ್ರಯಾನ ಬೌದ್ಧ ಪಂಥಕ್ಕೆ ಸೇರಿದ ಒಂದು ಪ್ರಸಿದ್ಧ ಯಾತ್ರಾಸ್ಥಳ. ಅದಕ್ಕೆ ‘ಪಾರೊ ತಕ್ತ್ಸಂಗ್’ (Paro Taktsang) ಎಂಬುದು ಇನ್ನೊಂದು ಹೆಸರು. ಸಮುದ್ರಮಟ್ಟದಿಂದ 10,236 ಅಡಿ (3,120 ಮೀಟರ್) ಎತ್ತರವಿರುವ ಪರ್ವತ. ಭೂತಾನೀಯರು ಬಹುವಾಗಿ ಗೌರವಿಸುವ ಆಚಾರ್ಯ ಪದ್ಮಸಂಭವ ತಪಸ್ಸು ಮಾಡಿದ “ಹುಲಿಯ ಗುಹೆ” ಇಲ್ಲಿರುವುದರಿಂದ ಇದಕ್ಕೆ ಇಷ್ಟೊಂದು ಮಹತ್ವ. ಈ ಗುಹೆಯನ್ನು ಇವರು “ಗೂಡು” (nest) ಎಂದು ಯಾಕೆ ಕರೆದರೋ ತಿಳಿಯದು. ಪದ್ಮಸಂಭವ ಗುರುಗಳು ಹುಲಿಯ ಮೇಲೆ ಸವಾರಿ ಮಾಡಿಕೊಂಡು ಇಲ್ಲಿಗೆ ಆಗಮಿಸಿದರೆಂಬುದು ಐತಿಹ್ಯ. ನಾವು ತುಮಕೂರಿನಿಂದ ಹೊರಡುವ ಹಿಂದಿನ ತಿಂಗಳಷ್ಟೇ ‘ಶಬರಿಮಲೆ ಸ್ವಾಮಿ ಅಯ್ಯಪ್ಪ’ ಯಕ್ಷಗಾನ ಪ್ರಸಂಗ ಆಡಿದ್ದರಿಂದ ಹುಲಿಯ ಮೇಲೆ ಪದ್ಮಸಂಭವ ಸವಾರಿ ಮಾಡಿದ ವಿಚಾರ ಬಂದಾಗಲೆಲ್ಲ ಖುದ್ದು ನಮ್ಮ ಅಯ್ಯಪ್ಪನೇ ಹುಲಿಯ ಹಾಲಿನೊಂದಿಗೆ ರಂಗಸ್ಥಳಕ್ಕೆ ಬಂದ ದೃಶ್ಯ ಕಣ್ಣಮುಂದೆ ಬರುತ್ತಿತ್ತು. ನಿಜ ಹೇಳಬೇಕೆಂದರೆ, ಟೈಗರ್ಸ್ ನೆಸ್ಟ್ ಏರಿದ್ದು ಕೂಡ ನಮಗೊಂದು ಹುಲಿ ಸವಾರಿಯೇ ಆಯಿತು.
(ಮುಂದುವರಿಯುವುದು)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ