ಯಕ್ಷೋಪಾಸನೆ-ಸೂರಿಕುಮೇರು ಕೆ. ಗೋವಿಂದ ಭಟ್ಟರ ಆತ್ಮವೃತ್ತಾಂತ
ನಿರೂಪಣೆ: ಡಾ.ಬಿ.ಪ್ರಭಾಕರ ಶಿಶಿಲ
ಪ್ರಕಟಣೆ: ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ.
ವರ್ಷ: 2008
ಪುಟಗಳು: 252
ಕ್ರಯ: ರೂ 200
ಕಲಾವಿದನೊಬ್ಬನ ಬದುಕು ರಂಗಸ್ಥಳದಲ್ಲಿ ಅತ್ಯಂತ ವೈಭವದಿಂದ ಕೂಡಿರುತ್ತದೆ. ಅಲ್ಲಿ ಆತ ಚಕ್ರವರ್ತಿಯಾಗಿರುತ್ತಾನೆ, ಮೂರು ಲೋಕಗಳನ್ನು ನಡುಗಿಸಬಲ್ಲ ಪರಾಕ್ರಮಿಯಾಗಿರುತ್ತಾನೆ. ಪ್ರೇಕ್ಷಕವೃಂದ ತನ್ನಿಂತಾನಾಗಿ ಅಂತಹ ಕಲಾವಿದರ ಬಗ್ಗೆ ತಮ್ಮದೇ ಆದ ಚಿತ್ರವೊಂದನ್ನು ಮನೋಪಟಲದಲ್ಲಿ ಹೊಂದಿರುತ್ತಾರೆ. ಅದು ಯಕ್ಷಗಾನದಂತಹ ಕಲೆಯ ಮೂಲಕ ಕಲಾವಿದನಿಗೆ ದೊರೆಯುವ ಮಾನ-ಸಮ್ಮಾನ. ಆದರೆ ಕಲಾವಿದನೊಬ್ಬ ಆ ಎತ್ತರಕ್ಕೆ ಬೆಳೆಯುವ ಹಂತದಲ್ಲಿ ಅನುಭವಿಸಿದ ನೋವೇನು, ಪ್ರತೀ ಹೆಜ್ಜೆಗೂ ಸವಾಲನ್ನೇ ತಂದಿಟ್ಟ ಬದುಕಿನ ತಲ್ಲಣಗಳನ್ನು ಮೀರಿ ರಂಗನಾಯಕನಾಗುವ ಪಯಣದ ಚಿತ್ರಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಶ್ರೀ ಕೆ. ಗೋವಿಂದ ಭಟ್ಟರ ಆತ್ಮಕಥನವನ್ನು ಓದಬೇಕು. ಹೊಸತಲೆಮಾರಿನ ಕಲಾವಿದರಲ್ಲದೇ ಎಲ್ಲರೂ ಓದಲೇಬೇಕಾದ ಕೃತಿಯಿದು. ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ 2008ರಲ್ಲಿ ಪ್ರಕಟಿಸಿದ ಪುಸ್ತಕವಿದು.
'ಕಲಾವಿದನ ಜೀವನ ಚರಿತ್ರೆಯಿಂದ ಸಾಂಸ್ಕೃತಿಕ ಇತಿಹಾಸದ ತುಣುಕುಗಳು ದೊರೆಯುತ್ತವೆ, ಮತ್ತು ಅವು ಕಲಾಪ್ರಕಾರವೊಂದರ ಪಾರ್ಶ್ವದರ್ಶನಕ್ಕೆ ಸಹಕಾರಿ’ ಎಂಬುದಾದರೆ ತನ್ನ ಬದುಕನ್ನು ಓದುಗರೆದುರು ತೆರೆದಿಡಲು ತನಗೆ ಒಪ್ಪಿಗೆ ಎಂಬ ವಿನಮ್ರತೆಯಿಂದಲೇ ಪ್ರಾರಂಭವಾಗುವ ಅವರ ಕಥನ ನಿಜಕ್ಕೂ ಯಕ್ಷಗಾನ ರಂಗದ ಇತಿಹಾಸ ಬರೆಯುವವರಿಗೆ ಅನೇಕ ಮಜಲುಗಳನ್ನು ತೋರಿಸುತ್ತದೆ. ಕಿನಿಲ ಶಂಕರನಾರಾಯಣ ಭಟ್ಟ, ಕುಕ್ಕೆ ಮನೆ ಲಕ್ಷ್ಮಿ ಅಮ್ಮ ದಂಪತಿಗಳ ಮಗನಾಗಿ ಜನಿಸಿದ ಗೋವಿಂದ ಭಟ್ಟರ ಬಾಲ್ಯ ಕಡುಬಡತನದ್ದು. ಎಲ್ಲ ನೋವುಗಳ ನಡುವೆಯೂ 'ಅಗಲಿಕೆ ಎಂಬುದು ಅಮ್ಮನ ಗರ್ಭದಿಂದ ನಾವು ಹೊರಪ್ರಪಂಚಕ್ಕೆ ಬರುವಾಗಲೇ ಆರಂಭವಾಗುತ್ತದೆ. ಆದರೆ ಮುಳುಗುವವನನ್ನು ಎತ್ತುವ ಕೈಗಳೂ ಇರುತ್ತವೆ.’ ಎಂಬ ನಂಬಿಕೆಯಿಂದ ಮುಂದಿನ ಹೆಜ್ಜೆಗಳನ್ನಿಟ್ಟವರು.
ಹಸಿವು ಬಡತನಗಳ ನಡುವೆ ಕಂಗೆಟ್ಟಾಗ 'ಬಡವರಿಗೆ ದೇವರು ಕೂಡಾ ಸಹಾಯ ಮಾಡುವುದಿಲ್ಲ’ ಎಂದು ಕಾಡಿದ ವಿಷಾದ ಓದುಗನನ್ನೂ ಕಾಡದೇ ಬಿಡುವುದಿಲ್ಲ. ವಿದ್ವಾಂಸನಾಗಿ ಹೈಸ್ಕೂಲಿನ ದೊಡ್ಡ ಅಧ್ಯಾಪಕನಾಗುವುದು ಮಹತ್ವಾಕಾಂಕ್ಷೆಯಾಗಿತ್ತಾದರೂ ಎಳೆಯ ವಯಸ್ಸಿನಲ್ಲಿಯೇ ಹೆಗಲಿಗೆ ಬಿದ್ದ ಜವಾಬ್ದಾರಿಯಿಂದ ಓದು ಮುಂದುವರಿಸಲಾಗದೇ ಅದು ಈಡೇರಲಿಲ್ಲ. ಆದರೆ 'ಅಧ್ಯಾಪಕರಾದ ಎಷ್ಟು ಮಂದಿ ಗೋವಿಂದ ಭಟ್ಟರುಗಳು ಜನಮಾನಸದಲ್ಲಿ ನೆಲೆಗೊಂಡಿದ್ದಾರೆ?’ ಎಂದು ಯೋಚಿಸಿದರೆ ಅವರು ಧೀಮಂತ ನಾಯಕನಾಗಿ ರಂಗಸ್ಥಳದಲ್ಲಿ ಮೆರೆಯುವುದೇ ದೇವರ ಸಂಕಲ್ಪವಾಗಿತ್ತೆನಿಸುತ್ತದೆ. ಅವರ ತಂದೆ ತೀರಿಕೊಂಡ ದಿನ ಕೃಷ್ಣ ಜೋಯಿಸರು ಹೇಳಿದ ಮಾತು ಅವರಿಗೊಂದು ಪ್ರೇರಣೆಯಾಯಿತೇ ಅಥವಾ ಅದೇ ಆಶೀರ್ವಾದವಾಯಿತೇ ಗೊತ್ತಿಲ್ಲ. ಅಂತೂ ಅವರ ಭವಿತವ್ಯ ಚೆನ್ನಾಗಿರಲಿ ಎಂಬ ಆ ಹಿರಿಯರ ಹರಕೆ ನಿಜವಾದ್ದು ಹೌದು.
ಜೀವನೋಪಾಯಕ್ಕಾಗಿ ಯಕ್ಷಗಾನ ರಂಗಕ್ಕೆ ಬಂದವರು ಇಂದಿಗೂ ತಮ್ಮನ್ನು ಕಲೋಪಾಸಕ ಎಂದೇ ವಿನಮ್ರವಾಗಿ ಕರೆದುಕೊಳ್ಳುತ್ತಾರೆ ವಿನಾ ಕಲಾವಿದನೆಂದಲ್ಲ. 'ಮಡಿವಂತ ಬ್ರಾಹ್ಮಣರಿಗೆ ಯಕ್ಷಗಾನ ಕಲೆಯ ಬಗ್ಗೆ, ಯಕ್ಷಗಾನ ಕಲಾವಿದರ ಬಗ್ಗೆ ಸದಭಿಪ್ರಾಯವಿರಲಿಲ್ಲ. ಅದು ಕೆಳಜಾತಿಯ ಶೂದ್ರರಿಂದ ಹುಟ್ಟಿ ಬೆಳೆದ ಕಲೆ ಎಂಬ ತಾತ್ಸಾರವಿತ್ತು. ಮೇಳದವರು ಎಂದು ಕಲಾವಿದರನ್ನು ಸಮಾಜ ಹೀಗೆಳೆಯುತ್ತಿತ್ತು. ಯಕ್ಷಗಾನ ಪ್ರದರ್ಶನಗಳನ್ನು ನೋಡಲು ಹೋಗುವ ಜನರು ಕೂಡಾ ಕಲಾವಿದರಿಗೆ ಸಹಪಂಕ್ತಿ ನೀಡದ ಪ್ರಕರಣಗಳಿದ್ದವು. ... ಮೊಮ್ಮಗ ಯಕ್ಷಗಾನ ಮೇಳಕ್ಕೆ ಸೇರಿದರೆ ಕೆಟ್ಟು ಕೆರ ಹಿಡಿಯುತ್ತಾನೆಂದು ಭಾವಿಸಿದ ಅವರು ಕೊನೆಗೆ ನನ್ನನ್ನು ದೈಗೋಳಿಯಲ್ಲಿ ಹೋಟೆಲೊಂದಕ್ಕೆ ಕೆಲಸಕ್ಕೆ ಸೇರಿಸಿದರು. ನಾನು ಯಾರ್ಯಾರದೋ ತಟ್ಟೆ ಗ್ಲಾಸು ತೊಳೆಯುವ ಕೆಲಸಕ್ಕೆ ಸೇರಿಕೊಂಡೆ. ಯಕ್ಷಗಾನ ಕಲಾವಿದನಾಗುವುದಕ್ಕಿಂತ ಅದು ಒಳ್ಳೆಯದೆಂದು ಅಜ್ಜಿ ಭಾವಿಸಿದ್ದರು.’ ಇಂತಹ ಪರಿಸ್ಥಿತಿಯಲ್ಲಿ ಕಲಾರಂಗಕ್ಕೆ ಪದಾರ್ಪಣೆ ಮಾಡಿದವರು ಅವರು. ಆ ಹೆಜ್ಜೆ ವಾಮನನ ಹೆಜ್ಜೆಯಾಯಿತು.
೧೯೫೦ ರಿಂದೀಚೆ ಮಡಿವಂತ ಬ್ರಾಹ್ಮಣರು ಯಕ್ಷಗಾನವನ್ನು ಶ್ರೇಷ್ಠ ಕಲೆಯೆಂದು ಒಪ್ಪಿಕೊಳ್ಳುವಂತಹ ಸನ್ನಿವೇಶ ಸೃಷ್ಟಿಯಾಗತೊಡಗಿತು. 'ತೆಂಕುತಿಟ್ಟಿನ ಯಕ್ಷಗಾನದ ಕ್ರಮ ಹೇಗೆ?’ ಎಂದು ತನ್ನೊಳಗೇ ತರ್ಕಿಸಿ ಅದಕ್ಕೊಂದು ಶಿಸ್ತಿನ ರೂಪ ಕೊಟ್ಟವರು ಅವರು. 'ತೆಂಕು, ಬಡಗುತಿಟ್ಟುಗಳ ಜತೆ ಭರತನಾಟ್ಯವನ್ನೂ ಮತ್ತು ಕಥಕ್ಕಳಿಯನ್ನು ಯಕ್ಷಗಾನಕ್ಕೆ ಒಗ್ಗುವಂತೆ ಸಂಯೋಜಿಸಿ ಅದನ್ನೊಂದು ಅದ್ಭುತ ಕಲಾಪ್ರಕಾರವನ್ನಾಗಿ ಮಾಡಬಹುದು.’ ಎಂಬ ಯೋಜನೆಯನ್ನು ಅವರ ನಿರ್ದೇಶನದಲ್ಲಿ ಕಾರ್ಯರೂಪಕ್ಕೆ ತರುವ ಕೆಲಸವನ್ನು ಅವರ ಶಿಷ್ಯವೃಂದ ಕೈಗೆತ್ತಿಕೊಳ್ಳಬೇಕು.
'ಯಕ್ಷಗಾನ ಒಂದು ಕಲಾಸಂಪ್ರದಾಯವೆಂದು ಒಪ್ಪಿಕೊಂಡರೆ ಪೂರ್ವ ರಂಗದ ಜ್ಞಾನವಿಲ್ಲದ ಕಲಾವಿದರಿಗೆ ಕಲೆಯ ಸಮಗ್ರನೋಟ ದಕ್ಕಲಾರದು.’ ಎಂಬ ಅವರ ಮಾತು ಪೂರ್ವರಂಗದ ಅಭ್ಯಾಸದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಯಕ್ಷಗಾನ ಕಲಾವಿದರಾಗಿಯೂ ಸಂಸ್ಕಾರ ಬೆಳೆಸಿಕೊಳ್ಳಲಾಗದ ಮಂದಿ ನೈದಿಲೆಯ ಅಡಿಯ ಕಪ್ಪೆಗಳು ಎಂಬುದು ಅವರ ಅಭಿಪ್ರಾಯ.
ತನ್ನ ಮೊದಲ ವೇಷದ ಕುರಿತು ಹೇಳುತ್ತಾ 'ಪ್ರಪಂಚವನ್ನೇ ಗೆದ್ದು ಬಿಡುತ್ತೇನೆ ಎಂಬ ಆತ್ಮವಿಶ್ವಾಸದಿಂದ ನಗೆಮೊಗದಿಂದ ರಂಗ ಪ್ರವೇಶ ಮಾಡಿದೆ. ಹೊಸಹಿತ್ತಿಲು ಮಾಲಿಂಗಣ್ಣನ ಜತೆ ಬಾಲಗೋಪಾಲನಾಗಿ ಎಂದು ನೆನಪಿಸಿಕೊಳ್ಳುತ್ತಾರೆ. ಅಂದು ಏನಾಯಿತು ಎನ್ನುವುದಕ್ಕಿಂತ ತಾನೊಬ್ಬ ಮೇರು ಕಲಾವಿದನಾಗಿ ಮೆರೆಯಬೇಕಾದರೆ ಆ ಹೆಜ್ಜೆ ಮುಖ್ಯವಾದದ್ದೇ ಆಗಿತ್ತು.
ಕುರಿಯ ವಿಠಲ ಶಾಸ್ತ್ರಿಗಳಿಂದ ಹೆಜ್ಜೆಗಾರಿಕೆ, ಅಜ್ಜ ಬಲಿಪರಿಂದ ಭಾಗವತಿಕೆ, ಮಲ್ಪೆ ಶಂಕರನಾರಾಯಣ ಸಾಮಗರ ಸಾಹಚರ್ಯದಿಂದ ಅರ್ಥಗಾರಿಕೆ ಅಭ್ಯಾಸ ಮುಂದೆ ತುದಿಯಡ್ಕ ವಿಷ್ಣ್ವಯ್ಯನವರಿಂದ ಹಾಗೂ ರಾಮದಾಸ ಸಾಮಗರಿಂದ ಮಾತುಗಾರಿಕೆಯ ವಿಸ್ತಾರ ಎಲ್ಲವನ್ನೂ ಕಲಿತರು. 1969 ರಿಂದ ಧರ್ಮಸ್ಥಳ ಮೇಳದಲ್ಲಿ ತಿರುಗಾಟ. ಕನ್ನಡ ವಿದ್ವಾನ್ ಪರೀಕ್ಷೆ ಕಟ್ಟಲು ಯೋಚಿಸಿದ್ದರಾದರೂ ಅದು ಈಡೇರಲಿಲ್ಲ. 1972ರಲ್ಲಿ ಲಲಿತ ಕಲಾ ಕೇಂದ್ರವನ್ನು ಡಾ. ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದ್ದು ತೆಂಕುತಿಟ್ಟು ಯಕ್ಷಗಾನಕ್ಕೆ ರೂಪ ಒದಗಿಸುವಲ್ಲಿ ಆವಿಷ್ಕಾರಿಕ ಹೆಜ್ಜೆಯಾಯಿತು. ಕುರಿಯವಿಠಲ ಶಾಸ್ತ್ರಿಗಳು ಗುರುಗಳಾಗಿ, ಮಾಂಬಾಡಿ ನಾರಾಯಣ ಭಾಗವತರು ಹಿಮ್ಮೇಳ ಗುರುಗಳಾಗಿದ್ದರು. ಮುಂದೆ ನೆಡ್ಲೆ, ಕರ್ಗಲ್ಲು, ಚಿಪ್ಪಾರು ಮತ್ತು ಗೋವಿಂದ ಭಟ್ಟರ ಪರಿಶ್ರಮದ ಫಲವಾಗಿ ಪಠ್ಯಕ್ರಮಕ್ಕೆ ರೂಪರೇಖೆ, ಕುಕ್ಕಿಲ ಕೃಷ್ಣ ಭಟ್ಟರಿಂದ ಒಪ್ಪಿಗೆ ಪಡೆದರು. ಪ್ರತೀ ತಾಳಕ್ಕೂ ಕನಿಷ್ಟ ಹತ್ತು ರೀತಿಯಲ್ಲಿ, ಏಕತಾಳಕ್ಕೆ ಇಪ್ಪತ್ತನಾಲ್ಕು ರೀತಿ ಕುಣಿಯುವ ಕ್ರಮವನ್ನು ಅಭ್ಯಸಿಸಿದರು. 1985ರಲ್ಲಿ ಉಡುಪಿ ರಾಜಾಂಗಣದಲ್ಲಿ ತೆಂಕು ಬಡಗು ತಿಟ್ಟುಗಳ ಯಕ್ಷಗಾನ ಕಮ್ಮಟ ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ನಡೆದಾಗ ಅಪಾರ ಮೆಚ್ಚುಗೆಯನ್ನು ಪಡೆದರು. ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದರು ತೆಂಕುತಿಟ್ಟಿನ ಪುನರುತ್ಥಾನಕ್ಕೆ ಕಾರಣನೆಂದು ಪ್ರಶಸ್ತಿ ಪತ್ರ ನೀಡಿದರು.
ಕಲಾ ಕೇಂದ್ರದ ಕುರಿತಾಗಿ ತಮ್ಮ ಬಗ್ಗೆ ಬಂದ ಸಲ್ಲದ ಮಾತುಗಳಿಗೆ ಬೇಸರಗೊಂಡರೂ 'ಸಮಯಸಾಧಕ ನಿಂದಕರನ್ನು ಕಾಲವೇ ಸರಿಪಡಿಸಬೇಕಷ್ಟೇ’ ಎಂಬ ಅರಿವಿನಲ್ಲಿ ನಿರ್ಲಿಪ್ತರಾಗುತ್ತಾರೆ. ಇದು ಬಹುಶಃ ಅನೇಕ ಸಂದರ್ಭಗಳಲ್ಲಿ ನಮಗೆ ಮಾರ್ಗದರ್ಶನವೂ ಹೌದು. ಹತ್ತು ಹಲವು ವನಮಹೋತ್ಸವದ ಬಗ್ಗೆ ಹೇಳುತ್ತಾ 'ಹಲಸು ಮಾವು ನೆಟ್ಟರೆ ಮನುಷ್ಯರಿಗೂ ಪ್ರಾಣಿ ಪಕ್ಷಿಗಳಿಗೂ ಎಷ್ಟು ಪ್ರಯೋಜನ! ಇಂತಹ ವಿಚಾರಗಳು ನಮ್ಮನ್ನು ಆಳುವವರಿಗೆ ಗೊತ್ತಾಗಬೇಕಾದರೆ ಅವರಿಗೆ ಬಡತನ ಆಳ ವಿಸ್ತಾರಗಳ ಅನುಭವವಾಗಿರಬೇಕಲ್ಲಾ?’ ಜೀವನವೆಂಬ ವಿಶ್ವವಿದ್ಯಾಲಯದಲ್ಲಿ ಅವರು ಕಲಿತಪಾಠಗಳು ಇಂತಹ ಹೊಳಹನ್ನು ನೀಡುತ್ತವೆ.
ಅವರು ಏರಿದಷ್ಟಲ್ಲವಾದರೂ ಅವರನ್ನು ಮಾದರಿಯಾಗಿಟ್ಟುಕೊಂಡು ಬೆಳೆಯಬಯಸುವವರು ಅವರ ಪುಸ್ತಕದ ಓದಿನಿಂದ ಕಲಿಯಬಹುದಾದುದೇ ಬಹಳವಿದೆ.
ವಿವರವಾದ ಓದು ನಿಮ್ಮದಾಗಲಿ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ