ಭಾನುವಾರ, ಆಗಸ್ಟ್ 23, 2020

ಯಕ್ಷಗಾನ ಮತ್ತು ನಾನು

 ಯಕ್ಷಗಾನ ಮತ್ತು ನಾನು

ಹರಿದಾಸ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರ ಆತ್ಮಚರಿತ್ರೆ

ಪ್ರಕಾಶಕರು: ಕಲ್ಕೂರ ಪ್ರಕಾಶನ 

ವರ್ಷ: 1981, 2006

ಪುಟಗಳು: 256

ಕ್ರಯ: ರೂ. 200

ಸಮಾರಂಭವೊಂದರಲ್ಲಿ ತನ್ನ ಆತ್ಮಕಥೆ ಬರೆಯಬೇಕೆಂಬ ಉದ್ದೇಶವಿದೆ ಎಂದು ಆಡಿದ ಮಾತೇ ಮೂಲಕಾರಣವಾಗಿ, ಬರೆಯಲೇ ಬೇಕಾದ ಅನಿವಾರ್ಯತೆಗೆ ಕಟ್ಟುಬಿದ್ದು ‘ಯಕ್ಷಗಾನ ಮತ್ತು ನಾನು’ ಎಂಬ ಸ್ವಗತವನ್ನು ಮಂಡಿಸಿದವರು ಯಕ್ಷರಂಗದ ಅದ್ವಿತೀಯ ವಾಗ್ಮಿ, ಶೇಣಿ ಅಜ್ಜನೆಂದೇ ನಾವೆಲ್ಲ ಹೇಳಿಕೊಳ್ಳುವ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು. ತಾನು ನಿರೂಪಿಸಿದ ಪ್ರತಿಯೊಂದು ಪಾತ್ರವನ್ನೂ ಹೇಗೆ ಎತ್ತರಕ್ಕೇರಿಸಿಬಿಡುತ್ತಿದ್ದರೋ ಅದೇ ರೀತಿ ಈ ಆತ್ಮಕಥೆಯೂ ನಮ್ಮಂಥ ಕಿರಿಯರಿಗೆ ಯಕ್ಷರಂಗಕ್ಕೊಂದು ಮಾರ್ಗದರ್ಶಿ ಇದ್ದಂತಿದೆ. 

‘ನಾನೊಬ್ಬ ಮಾತುಗಾರನೇ ಹೊರತು ಕೃತಿಕಾರನಲ್ಲ. ಮಾತು ಕೃತಿಯಾಗದಿದ್ದರೆ ಅದು ಅರ್ಥಶೂನ್ಯವೂ ಶುಷ್ಕವೂ ಆಗುತ್ತದೆ.’ ಎಂಬ ಎಚ್ಚರಿಕೆಯಲ್ಲಿ ಮೊದಲುಗೊಳ್ಳುವ ಅವರ ಮಾತು ಪ್ರತಿಯೊಬ್ಬ ಬರಹಗಾರನಿಗೂ, ಭಾಷಣಕಾರನಿಗೂ ಸಂದೇಶವೇ ಹೌದು. ಪರಿಸರ, ಹೊಸ ಬಯಕೆಯ ಒಕ್ಕಲು, ಯಕ್ಷಲೋಕದ ಹಾದಿಯಲ್ಲಿ, ಸಂಚಾಲಕ ಮತ್ತು ನಟನಾಗಿ, ವಿವೇಚನೆ, ನಿವೇದನೆ, ಬಣ್ಣ ಒರೆಸಿದ ಮೇಲೆ ಎಂಬ ಐದು ಅಧ್ಯಾಯಗಳಲ್ಲಿ ಅವರ ಬದುಕು ಅನಾವರಣಗೊಂಡಿದೆ.  

ವೃತ್ತಿಯಿಂದ ಕೀರ್ತನಕಾರ-ಹರಿದಾಸ ಆಗಿದ್ದವರು ಯಕ್ಷಗಾನ ಕಲಾವಿದನಾಗಿ ಬೆಳೆದ ಕತೆಯನ್ನು ಹೇಳುವ ಈ ಪುಸ್ತಕದ ಆರಂಭದಲ್ಲಿಯೇ ತನ್ನ ನಿವೃತ್ತಿಯ ಸಂಕಲ್ಪವು ಅಭಿಮಾನಿಯ ಪತ್ರದಿಂದ ಬದಲಾದುದರ ಬಗ್ಗೆ ವಿವರವಿದೆ. “ಎಂದಿನವರೆಗೆ ಕಲಾದೇವಿಯೂ ಅಭಿಮಾನಿ ವರ್ಗವೂ ಒಂದಾಗಿ ನನಗೆ ವಿದಾಯವನ್ನು ಹೇಳುವುದಿಲ್ಲವೋ ಅಂದಿನವರೆಗೆ ಯಥಾಸಾಧ್ಯ, ಯಥಾಶಕ್ತಿ ದುಡಿಯುವ ಅಚಲ ನಿರ್ಧಾರ ಮಾಡಿಕೊಂಡೆ.’ (ಪು. 3) ಎಂದ ಅವರು ಅಕ್ಷರಶಃ ಶರೀರ ದಣಿಯುವವರೆಗೂ, ಕಣ್ಣುಗಳ ಶಕ್ತಿ ಕುಂದುವವರೆಗೂ ಯಕ್ಷಗಾನಾಭಿಮಾನಿಗಳ ಮನದಲ್ಲಿ ಮಹಾರಾಜನಂತೆಯೇ ವಿಜೃಂಭಿಸಿದರು.

ಸಹಜವಾಗಿಯೇ ಅವರಲ್ಲಿದ್ದ ಎಲ್ಲವನ್ನೂ ಪ್ರಶ್ನಿಸುವ ಹೋರಾಟದ ಗುಣ ಅವರು ಖಳಪಾತ್ರಗಳನ್ನು ನಿರೂಪಿಸುವ ಶೈಲಿಗೂ ಅವರ ಬದುಕಿನ ಹೋರಾಟದ ಶೈಲಿಗೂ ಇರಬಹುದಾದ ಸುಪ್ತ ಸಂಬಂಧವನ್ನು ಹೇಳುತ್ತದೆ. ಬಾಲ್ಯದ ದಿನಗಳಲ್ಲಿ ಎದುರಿಸಬೇಕಿದ್ದ ಕಷ್ಟಗಳು ಕೆಲವಲ್ಲವಾದರೂ ಅಜ್ಜಿ- ಅಮ್ಮನ ಅಕ್ಕರೆಯಲ್ಲಿ ಸುಲಭವಾಗಿ ಕಳೆದು ಹೋದ ರೀತಿಯೊಂದು ಅಚ್ಚರಿ.

ತೆಂಕುತಿಟ್ಟಿನ ಯಕ್ಷಗಾನವು ಕಥಕಳಿಯ ಅನುಕರಣೆಯೆಂದು ಯಾರಾದರೂ ಹೇಳಿದರೆ ಅದು ತೆಂಕುತಿಟ್ಟು ಯಕ್ಷಗಾನದ ಕುರಿತಾದ ಅವರ ಪೂರ್ವಾಗ್ರಹವೋ, ಅಜ್ಞಾನವೋ, ಅಸೂಯೆಯೋ ಕಾರಣವಾದೀತೇ ಹೊರತು ವಾಸ್ತವಿಕತೆಯ ಹೇಳಿಕೆಯಾಗದು.(ಪು.9) ಮತ್ತು ತೆಂಕುತಿಟ್ಟಿನ ಬಯಲಾಟವನ್ನು ಕಥಕಳಿಯ ಕನ್ನಡೀಕರಣವೆನ್ನುವವರ ಬಗ್ಗೆ ಸತ್ಯವನ್ನು ತಿಳಿದವರು ಕನಿಕರಿಸಬೇಕೇ ಹೊರತು ಕೋಪಿಸಬೇಕಾಗಿಲ್ಲ. (ಪು.10) ಎಂಬುದರಲ್ಲಿ ತೆಂಕುತಿಟ್ಟಿನ ಬಗ್ಗೆ ಅವರಿಗಿದ್ದ ಗೌರವ ಸ್ಪಷ್ಟವಾಗಿ ಕಾಣುತ್ತದೆ. 

ಕಲೆ ಮತ್ತದರ ಅಭಿವ್ಯಕ್ತಿಯನ್ನು ಕುರಿತಂತೆ ‘ಈ ಹೊತ್ತು ಪರಿಷ್ಕøತ ರೂಪದಲ್ಲಿ ನಮ್ಮ ಮುಂದೆ ಕಾಣುವ ಎಲ್ಲ ಕಲೆಗಳೂ ಮೂಲತಃ ಜಾನಪದೀಯ ಸಂವೇದನೆಯವೇ.’ (ಪು.23) ಎನ್ನುವ ಅವರು ಅಪಾರ ಸಂಗೀತ ಜ್ಞಾನವಿದ್ದು, ಈ ಕಲಾಮಾಧ್ಯಮಕ್ಕೆ ಬೇಕಾದ ಜ್ಞಾನವಿಲ್ಲದಿದ್ದರೆ ಅಂಥವರ ಪಾಂಡಿತ್ಯವು ಶುದ್ಧ ಸಂಗೀತವನ್ನೂ ಯಕ್ಷಗಾನವನ್ನೂ ಜೊತೆಯಾಗಿಯೇ ಕೆಡಿಸೀತು.’ (ಪು.38) ಎನ್ನುತ್ತಾರೆ.

ಶಂಕರನಾರಾಯಣ ಸಾಮಗರ ಅನುಪಸ್ಥಿತಿಯಿಂದಾಗಿ ಆಕಸ್ಮಿಕವಾಗಿ ಹರಿದಾಸರಾದ ಶೇಣಿಯವರು ಮುಂದೆ ಅವರೇ ಕಾರಣರಾಗಿ ಆಟದ ವೇಷಧಾರಿಯೂ ಆದುದೊಂದು ವಿಸ್ಮಯ. ಚಿತ್ರನಟನಾಗುವ ಬಯಕೆ ಈಡೇರದೇ ಉಳಿದುದು ನಮ್ಮ ಪಾಲಿನ ಭಾಗ್ಯ! ಕಲ್ಲಿಕೋಟೆಯ ಆತ್ಮವಿದ್ಯಾಸಂಘದಲ್ಲಿನ ಸವಾಲುಗಳನ್ನು ಗೆದ್ದ ಬಗೆ ವ್ಯಕ್ತಿಯೊಬ್ಬನಿಗೆ ತನ್ನ ಕ್ಷೇತ್ರದಲ್ಲಿ ಇರಬೇಕಾದ ಪಾಂಡಿತ್ಯದ ಆಳ, ವಿಸ್ತಾರಗಳೇನು ಎಂಬುದನ್ನು ತೋರಿಸುತ್ತವೆ. ಮಾತ್ರವಲ್ಲದೇ ಅರ್ಥಧಾರಿಗಳಿಗೂ ಸ್ಪಷ್ಟವಾದ ಮಾರ್ಗದರ್ಶನದ ಮಾತುಗಳು ಇಲ್ಲಿವೆ. 

‘ಇಂದಿಗೂ ಬುದ್ಧಿವಂತರ ಗುಂಪಿನಲ್ಲಿ ಜಿಜ್ಞಾಸೆಯಾಗಿಯೇ ಉಳಿದ ಪಾದುಕಾ ಪ್ರದಾನ, ವಾಲಿವಧಾ ಪ್ರಕರಣ, ಸೀತಾ ಸ್ವೀಕಾರ ಪ್ರಕರಣ, ಸೀತಾಪರಿತ್ಯಾಗವೇ ಮುಂತಾದ ಪ್ರಸಂಗಗಳಲ್ಲಿ ರಾಮನ ಜೀವನ ಮೌಲ್ಯಗಳನ್ನೂ, ಕ್ಲಿಷ್ಟವೆನಿಸುವ ಶ್ರೀಕೃಷ್ಣನ ಜೀವನದ ಮೌಲ್ಯಗಳನ್ನೂ ಸಮರ್ಥ ಅರ್ಥದಾರಿಗಳೆನ್ನಿಸುವವರು ಅರ್ಥಪೂರ್ಣವಾಗಿ ಸಮರ್ಥಿಸಿ ಶ್ರೋತೃಗಳ ಸಂಶಯವನ್ನು ನಿವಾರಣೆ ಮಾಡುವ ಯತ್ನದಲ್ಲಿ ಬುದ್ಧಿಯನ್ನು ಉಪಯೋಗಿಸಬೇಕಾದುದು ಅವರ ಹಿರಿತನಕ್ಕೊಂದು ಶೋಭೆ..’ (ಪು.63) ಅರ್ಥಗಾರಿಕೆ ಹೇಗಿರಬೇಕೆಂಬುದಕ್ಕೆ ಕೆಲವು ದೃಷ್ಟಾಂತಗಳೂ ಇಲ್ಲಿ ದಾಖಲಾಗಿವೆ. 

ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾದ ಸಂಚಾಲಕ ಮತ್ತು ನಟನಾಗಿ ಅವರ ಅನುಭವವು ವಿಶಿಷ್ಟ. 

ಭಾಗವತರಿಂದ ಒಂದೊಂದು ಸೊಲ್ಲನ್ನು ಹತ್ತೆಂಟು ಸಲ ಹಾಡಿಸಿ ಅದರ ಅಭಿವ್ಯಕ್ತಿಗೆ ಸ್ವಕಲ್ಪಿತಗಳಾದ ಅಂಗ ಚೇಷ್ಟೆಗಳನ್ನು ಅಭಿನಯವೆಂದು ಭ್ರಮಿಸಿ ಅಥವಾ ನೋಟಕರಿಗೆ ಭ್ರಮೆ ಹುಟ್ಟಿಸಿ ತೃಪ್ತಿ ಪಡೆಯುವ ಹವ್ಯಾಸವುಳ್ಳ ಕೆಲವರನ್ನು ನಾನು ಬಲ್ಲೆ. ಹೀಗಾಗಬಾರದೆಂಬ ಅನಿಸಿಕೆ ನನ್ನದು (ಪು.107)- ಈ ಮಾತು ಕಲಾವಿದರಾಗಿ ಬೆಳೆಯಬೇಕೆಂದುಕೊಳ್ಳುವ ಎಲ್ಲ ಕಿರಿಯರಿಗೂ ಒಂದು ಎಚ್ಚರಿಕೆ. 

ಇಕ್ಕಟ್ಟಿನ ಸಂದರ್ಭವೊಂದರಲ್ಲಿ ಮಾಯಾ ಶೂರ್ಪನಖಿಯ ಪಾತ್ರ ನಿರ್ವಹಿಸಿದ ಬಗೆಯನ್ನು ಓದಿಯೇ ತೀರಬೇಕು. ತಮಗೆ ಬಂದ ಪ್ರಶಸ್ತಿ, ಪುರಸ್ಕಾರಗಳ ಬಗ್ಗೆ ತೃಪ್ತಿ ಹೊಂದಿದ ಅವರು ‘ತನ್ನ ಅಳತೆಯನ್ನು ತಾನೇ ತಿಳಿದುಕೊಂಡು ಕಾರ್ಯಪ್ರವೃತ್ತನಾದರೆ ಅದರ ಪ್ರತಿಕ್ರಿಯೆಗಳು ತೃಪ್ತಿಯನ್ನು ತಂದೇ ತರುತ್ತವೆ.’ (ಪು.168) ಎನ್ನುತ್ತಾರೆ. 

ಶೇಣಿಯವರು ರಂಗದಿಂದ ನಿವೃತ್ತಿಯನ್ನು ಘೋಷಿಸಿದಾಗ 1987 ರಲ್ಲಿ ಈಶ್ವರಯ್ಯನವರು ಉದಯವಾಣಿ ಪತ್ರಿಕೆಗೆ ಬರೆದ ಲೇಖನ ಮತ್ತು ಹಾ.ಮಾ.ನಾಯಕರು ಬರೆದ ಯಕ್ಷಗಾನ ಮತ್ತು ನಾನು ಕೃತಿಯ ವಿಮರ್ಶೆ ‘ಆತ್ಮ’ ವಿಚಾರ ‘ಕಥೆ’ಯ ಆಕರ್ಷಣೆ ಲೇಖನಗಳನ್ನು ಎರಡನೆಯ ಮುದ್ರಣದಲ್ಲಿ ಸೇರಿಸಿಕೊಳ್ಳಲಾಗಿದೆ.  (ಇದನ್ನು ಮೊದಲು  ಪ್ರಕಟಿಸಿದ್ದು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಕನ್ನಡ ಸಂಘ 1981ರಲ್ಲಿ.)

ಬಣ್ಣ ಒರೆಸಿದ ಮೇಲೆ ಅಧ್ಯಾಯ ಶೇಣಿ ಬಾಲಮುರಳಿ ಕೃಷ್ಣ ಅವರ ನಿರೂಪಣೆ

ಕಲಾವಿದ ನಿವೃತ್ತಿಯ ನಂತರ ಏನಾದ ಎಂಬುದರ ಚಿಕ್ಕ ಚಿತ್ರಣವನ್ನು ಕೊಡುತ್ತದೆ. 28ರ ಮೊಮ್ಮಗ 88ರ ಅಜ್ಜನ ಕತೆಯನ್ನು ಬರೆದಿರುವುದು ಆಪ್ಯಾಯಮಾನ. ಅವರ ಪತ್ನಿಯ ಸಾವಿನ ಸಂದರ್ಭವಂತೂ ಮಹಾನ್ ಸಾಧಕರ ಕೌಟುಂಬಿಕ ಬದುಕು ಹೇಗಿರುತ್ತದೆ ಎನ್ನುವುದಕ್ಕೊಂದು ಉದಾಹರಣೆ. 

ರಾಮ ನಿರ್ಯಾಣದ ರಾಮನಿಂದಲೇ ಈ ಕ್ಷೇತ್ರದಿಂದ ನಿರ್ಗಮಿಸುವುದನ್ನು ಇಚ್ಛಿಸಿದ್ದ ಅವರ ಕೊನೆಯ ಅರ್ಥವೂ ಅದುವೇ. ಬಣ್ಣ ಹಚ್ಚಿದ ಕಲಾವಿದ ಕಣ್ಣಿಲ್ಲದೇ ಚಿಂತಿಸಲಾರ. ಎದುರು ಅರ್ಥ ಧಾರಿಯನ್ನು ನೋಡದೇ ಅರ್ಥ ಹೇಳುವುದು ಸಾಧ್ಯವೇ ಇಲ್ಲ ಎನಿಸಿದಾಗ ಅಭಿಮಾನಿಗಳ ಒತ್ತಡದ ಒತ್ತಾಯವಿದ್ದರೂ ನಿರಾಕರಿಸಿ ಮೌನವಾಗುತ್ತಾರೆ. ‘ಒಂದಷ್ಟು ವಿಶ್ರಾಂತಿ ಬೇಕಾಗಿದೆ, ಮಲಗಲು ಬಿಡಿ’ ಎಂದ ಕೊನೆಯ ವಾಕ್ಯ ಮಾತ್ರ ಓದುಗರನ್ನು ಭಾವುಕರನ್ನಾಗಿಸದೇ ಬಿಡದು. 

ಬಾಲ್ಯದಿಂದಲೂ ಕೇಳಿದ ಅವರ ಅರ್ಥಗಾರಿಕೆ, ಒಂದು ನಗುವಿನಲ್ಲಿ, ಒಂದು ಮೌನದಲ್ಲಿ, ಒಂದು ಹುಂ ಕಾರದಲ್ಲಿಯೂ ಸೂಚಿಸಿದ ನೂರರ್ಥ ನಮ್ಮೊಂದಿಗೆ ಉಳಿದು ಹೋಗಿದೆ. 

ಬಿಡುವು ಮಾಡಿಕೊಂಡು ಓದಿ ‘ಯಕ್ಷಗಾನ ಮತ್ತು ನಾನು’!

- ಆರತಿ ಪಟ್ರಮೆ

 


2 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಉತ್ತಮ ಲೇಖನ. ಶೇಣಿಯವರು ಹರಿಕಥೆ ಮಾಡುವುದರಿಂದ ತೊಡಗಿ ಅರ್ಥಧಾರಿಯಾಗಿ ಪಾತ್ರಧಾರಿಯಾಗಿ ಮೆರೆದುದನ್ನು ನೋಡಿದ ನೆನಪು ಈಗಲೂ ಇದೆ. ಈ ಪುಸ್ತಕ ಎಲ್ಲಿ ಸಿಗುತ್ತದೆ?

    ಪ್ರತ್ಯುತ್ತರಅಳಿಸಿ