(ಸಣ್ಣ ಸಾಮಗರ ಆತ್ಮಚರಿತ್ರೆ ಮತ್ತು ಅಭಿನಂದನೆ)
ನಿರೂಪಣೆ: ಟಿ.ಎಸ್. ಅಂಬುಜಾ
ಪ್ರಕಟನೆ: ಈಶಾವಾಸ ಪ್ರಕಾಶನ, ಲಕ್ಷ್ಮೀಂದ್ರ ನಗರ, ಉಡುಪಿ
ವರ್ಷ: 2005
ಕ್ರಯ: ರೂ.75
ಪುಟಗಳು: 195+5
ಸಾಮಗ ಮಾರ್ಗದಲ್ಲಿದ್ದೂ ಸ್ವತಂತ್ರ ಯೋಗ್ಯತೆಯನ್ನು ಕಾಣಿಸಿದ ಶ್ರೀ ರಾಮದಾಸ ಸಾಮಗರ ಜೀವನದ ಎಲ್ಲ ಮಜಲುಗಳ ನೆನಪುಗಳನ್ನು ದಾಖಲೀಕರಿಸಿದ ಬರಹಗುಚ್ಛ. ಸ್ವ ಆಯ್ಕೆಯಿಂದ ಹರಿದಾಸರಾದ ಸಾಮಗರು ಬದುಕಿನ ಯಾವುದೋ ತಿರುವಿನಲ್ಲಿ ಯಕ್ಷಗಾನ ವೇಷಧಾರಿಯಾದರು. ಸ್ವತಃ ನಾಟ್ಯಾಭ್ಯಾಸ ಮಾಡದಿದ್ದರೂ ತಾಳಜ್ಞಾನ, ಲಯ, ಸಂಗೀತ ಇವುಗಳ ಅರಿವಿದ್ದುದರಿಂದ iತ್ತು ಮುಖ್ಯವಾಗಿ ತನ್ನ ಮಾತಿನ ಬಲದಿಂದ ರಂಗಸ್ಥಳವನ್ನು ಮೆರೆಸಿದ ರಾಮದಾಸ ಸಾಮಗರು ಯಕ್ಷಗಾನ ರಂಗದ ಒಂದು ವಿಸ್ಮಯವೇ ಹೌದು. ಕನ್ನಡದಲ್ಲಿ ಮಾತನಾಡಿದಷ್ಟೇ ಪ್ರಬುದ್ಧತೆಯಿಂದ ತುಳು ಭಾಷೆಯಲ್ಲಿಯೂ ಅಭಿವ್ಯಕ್ತಿಯನ್ನು ಸಾಧಿಸಿಕೊಂಡು ತುಳು ಯಕ್ಷಗಾನ ರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿದವರು. ವಿದ್ವಾಂಸರಾದ ಡಾ. ಅಮೃತ ಸೋಮೇಶ್ವರರು ಗುರುತಿಸುವಂತೆ ತುಳು ಯಕ್ಷಗಾನ ಕ್ಷೇತ್ರ ಬೆಳೆಯಲು ಸಾಮಗರು ನೀಡಿದ ಕೊಡುಗೆ ಅಪಾರವಾದುದು. ಮುನ್ನುಡಿಯಲ್ಲಿ ಡಾ. ಪ್ರಭಾಕರ ಜೋಷಿಯವರು ಹೇಳಿದಂತೆ ’ಜೀವನದಲ್ಲಿ ಏಳುಬೀಳುಗಳನ್ನು, ದೊಡ್ಡ ಸವಾಲು ಸಂಕಷ್ಟಗಳನ್ನು ದಿಟ್ಟತನದಿಂದ ಹರಿದಾಸನ ಅಧ್ಯಾತ್ಮ ಪ್ರಜ್ಞೆಯಿಂದ ಇದಿರಿಸಿದ ಧೀರರು ಸಾಮಗರು.
ತನ್ನ ಬದುಕಿನ ಅನುಭವಗಳ ಸಾರವನ್ನು ಇತರರು ತಿಳಿದು ಮಾಡಬೇಕಾದುದೇನು ಎಂಬ ಔದಾಸೀನ್ಯದಿಂದಲೋ ಎಂಬಂತೆ ಆತ್ಮಚರಿತ್ರೆಯನ್ನು ಬರೆಯುವ ಸಾಮರ್ಥ್ಯ ಸಾಮಗರಲ್ಲಿದ್ದಿತ್ತಾದರೂ ಬರೆಯದೆ ಉಳಿದ ಅವರ ನೆನಪಿನ ಬುತ್ತಿಯನ್ನು ಬಿಚ್ಚಿಕೊಳ್ಳುವಂತೆ ಮಾಡಿದವರು ಅವರ ಮಗಳಾದ ಶ್ರೀಮತಿ ಟಿ. ಎಸ್. ಅಂಬುಜಾ. ’ಒಂದು ಬಾಳ್ವೆಯ ಸಾರ್ಥಕ್ಯವಿರುವುದು ಅವನ ದೇಹಾಂತ್ಯದ ಬಳಿಕವೂ ಆ ಚೇತನವನ್ನು ಇಲ್ಲಿ ನೆನೆಯುತ್ತಿರುವಾಗ’ (ಪು.15) ಎಂಬ ವಾಕ್ಯಾಧಾರವನ್ನು ನೆನಪಿಗೆ ತಂದುಕೊಂಡು ತಾನು ತನ್ನ ಬದುಕಿನ ಚಿತ್ರವನ್ನು ನೆನಪಿರುವಷ್ಟರ ಮಟ್ಟಿಗೆ ತೆರೆದಿಡಲು ಯತ್ನಿಸಿದ್ದೇನೆ ಎಂಬ ಹಿರಿಯರ ಸಜ್ಜನಿಕೆಗೊಂದು ನಮಿಸಿ ಪುಸ್ತಕದ ಓದನ್ನು ಮೊದಲುಗೊಳ್ಳುವುದು ಓದುಗನಿಗೆ ಶೋಭೆ.
ಬಾಲ್ಯದ ಕಠಿಣ ದಿನಗಳಲ್ಲೂ ವಿದ್ಯಾಭ್ಯಾಸಕ್ಕೆ ಅನುಕೂಲ ಒದಗಿಸಿಕೊಟ್ಟಿದ್ದರು ಅವರ ತೀರ್ಥರೂಪರಾದ ಶ್ರೀ ಕ್ಷ್ಮೀನಾರಾಯಣ ಸಾಮಗರು. ಲಕ್ಷ್ಮೀದೇವಿ ತಾಯಿ. ಮೆಟ್ರಿಕ್ ನಂತರ ಕಾಲೇಜಿಗೆ ಹೋಗಲು ಅನುಕೂಲವಿಲ್ಲವಾಗಿ ಸಂಸ್ಕೃತ ಶಾಲೆಗೆ ಸೇರಿದರು, ಸಂಸ್ಕೃತ ಶಿರೋಮಣಿಯಾಗುವ ನಿಟ್ಟಿನಲ್ಲಿ. ಆದರೆ ಅವರ ತಂದೆಯವರ ಮರಣದಿಂದಾಗಿ ಪರೀಕ್ಷೆಯ ಫೀಸು ಕಟ್ಟಲಾಗದೇ ಸಾಂಪ್ರದಾಯಿಕ ಶಿಕ್ಷಣವನ್ನು ಮುಕ್ತಾಯಗೊಳಿಸಿದ ಅವರು ಬದುಕಿನ ಶಾಲೆಯಲ್ಲಿ ತಾನು ಕಲಿತ ಶಿಕ್ಷಣದ ಮುಂದೆ ಶಾಲೆಯಲ್ಲಿ ಪಡೆದ ಜ್ಞಾನ ಏನೂ ಅಲ್ಲವೆನ್ನುತ್ತಾರೆ.
ಹೊಸ ತಲೆಮಾರಿನ ಯಕ್ಷಗಾನ ಕಲಾವಿದರು ಇಂತಹ ಹಿರಿಯರ ಜೀವನ ಚರಿತ್ರೆಗಳನ್ನೋದುವುದು ನಿಜಕ್ಕೂ ದೊಡ್ಡದೊಂದು ಪಾಠ. ಆಟಕ್ಕೂ ತಾಳಮದ್ದಳೆಗೂ ನಡುವೆ ಇರುವ ಭಿನ್ನತೆ ಮತ್ತು ಕಲಾವಿದರ ತಯಾರಿಯ ಕುರಿತು ವಿವರಿಸುತ್ತಾ, ಒಬ್ಬ ಕೇವಲ ಆಟದ ಕಲಾವಿದ ತಾಳಮದ್ದಳೆಗಳಲ್ಲಿ ಸಮರ್ಥವಾಗಿ ಅರ್ಥ ಹೇಳಲಾರ ಎನಿಸುತ್ತದೆ ಎನ್ನುತ್ತಾರೆ. ಜ್ಞಾನ ಮತ್ತು ನಿರರ್ಗಳವಾಗಿ ಮಾತನಾಡುವ ಕೌಶಲ ತಾಳಮದ್ದಳೆಗೆ ಮುಖ್ಯ. ನಮ್ಮ ಪಾತ್ರದ ಆಯ್ಕೆಯೂ ಅಷ್ಟೇ. ನಮಗೆ ಒಗ್ಗದ ಪಾತ್ರಗಳನ್ನು ಮಾಡಲು ಹೋಗಬಾರದು ಎಂಬುದು ಅವರ ನಿಲುವು. ಒಂದು ನಿರ್ದಿಷ್ಟ ವಯಸ್ಸಿನ ಬಳಿಕ ಅವರಲ್ಲಿ ’ಉತ್ತರನ ಪೌರುಷ’ದ ಉತ್ತರನ ಪಾತ್ರ ನಿರ್ವಹಿಸಲು ಕೇಳಿದಾಗ: ’ನೋಡಿ ನನಗೆ ಉತ್ತರನ ಅಪ್ಪ ಅಲ್ಲ, ಅಜ್ಜನ ವಯಸ್ಸಾಗಿದೆ. ಆದ್ದರಿಂದ ಈ ಮುದಿ ಉತ್ತರನ ಮುಖ ತೋರಿಸುವ ಸಾಹಸ ಮಾಡಬೇಡಿ.’ (ಪು. 81)ಎಂದರಂತೆ! ಈ ನಿಲುವು ಸುಲಭವಲ್ಲ.
ಬದುಕು ನಿಂತ ನೀರಲ್ಲ. ಬದಲಾವಣೆಯೆಂಬುದು ನಿರಂತರ. ’ಯಾವನೇ ಆಗಲೀ, ಒಮ್ಮೆ ಮೃತ್ಯುವಿನ ಬಾಯೊಳಕ್ಕೆ ಹೊಕ್ಕು ಹೊರ ಬಂದನೆಂದರೆ ಅವನ ಆಧ್ಯಾತ್ಮಿಕತೆ ಅಥವಾ ಜೀವನ ವೈರಾಗ್ಯ ಹೆಚ್ಚುತ್ತದೆ ಎಂಬುದು ನನ್ನ ಅನುಭವದಿಂದಲೇ ಮನವರಿಕೆಯಾಗುವಂತಾಯ್ತು.’ (ಪು.85) ಹಾಗೆಯೇ ’ಮೂಗಿನಲ್ಲಿ ಉಸಿರಿರುವ ತನಕ ಈ ಪ್ರಪಂಚದ, ಅಲ್ಲಿರುವ ತನ್ನವರ-ತನ್ನದೆಂದು ತಾನು ಭಾವಿಸಿದ ವಸ್ತುಗಳ ಬಗೆಗಿನ ಮೋಹ ಅಳಿಸಿ ಹೋಗುವುದಿಲ್ಲ, ಹೋಗಲೂ ಬಾರದು. ಹಾಗಿದ್ದರೆ ಮಾತ್ರ ಈ ಪ್ರಪಂಚ ಅಥವಾ ಪ್ರಕೃತಿ ಸರಿಯಾಗಿ ನಡೆದೀತು.’ (ಪು.86) ಎಂಬ ಅರಿವನ್ನೂ ಬಿತ್ತರಿಸುತ್ತಾರೆ. ಪ್ರತಿಭೆಗೆ ಒಲಿದ ಪ್ರಮದೆಯರ ಬಗ್ಗೆ ಹೇಳುತ್ತಾ ಅಂತರಂಗವನ್ನು ಹಗುರಾಗಿಸುವ ಪ್ರಯತ್ನವನ್ನೂ ಮಾಡಿದ್ದಾರೆ ಎಂಬುದು ಗಮನಾರ್ಹ. ಒಂದು ಸಂದರ್ಭದಲ್ಲಂತೂ ಸೂರಿಕುಮೇರು ಗೋವಿಂದ ಭಟ್ಟರು (ಗೋವಿಂದ ಮಾಣಿ!) ತಮ್ಮನ್ನು ನೆರಳಾಗಿ ನಿಂತು ವ್ಯಕ್ತಿತ್ವ ಕುಸಿಯದಂತೆ ಕಾಪಾಡಿಕೊಂಡದ್ದನ್ನೂ ಉಲ್ಲೇಖಿಸಿದ್ದಾರೆ.
’ಒಂದು ವಿಭಾಗದಲ್ಲಿ ನಾವೆಷ್ಟು ವಿದ್ವಾಂಸರೆನಿಸಿದರೂ ಇನ್ನೊಂದು ವಿಭಾಗದಲ್ಲಿ ಶತದಡ್ಡರೂ ಆಗಿರಬಹುದು’ (ಪು.97) ಎಂಬುದು ತಮ್ಮನ್ನು ತಾವು ಒಪ್ಪಿಕೊಳುವಲ್ಲಿ ಮುಖ್ಯ. ಎಲ್ಲ ಬಲ್ಲವನೆಂಬ ಭ್ರಮೆಗೊಳಗಾಗದೇ ಇರಬೇಕಾದರೆ ನಮ್ಮಲ್ಲಿ ಈ ಪ್ರಜ್ಞೆಯಿರಬೇಕು. ’ಎದುರಾಳಿಯು ಅಲ್ಪನೆಂದು ತಿಳಿದು ಹಿಂಸಿಸುವುದು ತರವಲ್ಲ. ಅವನ ಹಿಂಬದಿಯಲ್ಲಿ ಯಾರ‍್ಯಾರು ಇದ್ದಾರೋ! ಅಶಕ್ತನಾದರೇನಂತೆ? ಪರಮ ಶಕ್ತನ ಸಹಕಾರವಿದ್ದರೆ ಜಗತ್ತನ್ನೇ ನಾಶಗೊಳಿಸಬಲ್ಲ, ಸೋಲಿಸಬಲ್ಲ’ (ಪು.99) ಎಂಬ ಟಿಟ್ಟಿಭ ಪುರಾಣದ ಕತೆಯ ನೀತಿಯನ್ನು ನಾವು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.
ಸಮಯಸ್ಪೂರ್ತಿಯ ಮಾತುಗಳೇ ಆಗಲೀ ಆಶುಕವಿತ್ವದ ಸಾಮರ್ಥ್ಯವೇ ಆಗಲೀ ಒಂದೆಡೆ ಕುಳಿತು, ಕಲಿತು ಅಭ್ಯಸಿಸಿ ಬರುವಂತಹುದಲ್ಲವಲ್ಲ? ಅಕ್ಕಿಯಿಂದ ಅನ್ನವಾಗುತ್ತದೆಂದು ಲೋಕಕ್ಕೆ ತೋರಿಸಿಕೊಟ್ಟವನನ್ನು ಯಾರಾದರೂ ಸಮ್ಮಾನಿಸಿದ್ದಾರೆಯೇ? ಒಂದಕ್ಕೆ ಒಂದು ಸೇರಿಸಿದರೆ ಎರಡಾಗುತ್ತದೆಂದು ಸಂಶೋಧಿಸಿ, ಪ್ರಪಂಚದ ವ್ಯವಹಾರಕ್ಕೆ ನಾಂದಿ ಹಾಕಿದವವನ ನೆನಪು-ಗುರುತು ಯಾರಿಗಿದೆ?(ಪು.123) ಎಂಬ ವಿಚಾರಗಳು ಸರಳವಾದರೂ ಗಹನವಾದುವು.
ಸಾಮಗರ ಜೀವನಕಥೆಯ ಜೊತೆಗೆ ಇದರಲ್ಲಿ ಅಮೃತ ಸೋಮೇಶ್ವರ, ಡಾ. ವ್ಯಾಸರಾವ್ ನಿಂಜೂರ್, ಡಾ.ಕೆ.ಎಮ್. ರಾಘವ ನಂಬಿಯಾರ್, ಕೆ. ಗೋವಿಂದ ಭಟ್, ಕೋಳ್ಯೂರು ರಾಮಚಂದ್ರ ರಾವ್, ಮಿಜಾರು ಅಣ್ಣಪ್ಪ, ಸುಬ್ರಹ್ಮಣ್ಯ ಬೈಪಡಿತ್ತಾಯ ನಂದಳಿಕೆ, ಡಾ.ರಮಾನಂದ ಬನಾರಿ, ಗುರುಪ್ರಸಾದ ಸರಳಾಯ, ಎಚ್. ಶ್ರೀಧರ ಹಂದೆ, ಕೂರಾಡಿ ಸದಾಶಿವ ಕಲ್ಕೂರ, ಪಿ. ನರಸಿಂಹ ಐತಾಳ್, ಉಳಿಯಾರಗೋಳಿ ವಿ.ರಮಣ ರಾವ್, ಎಂ.ಕೆ. ಬಾಬು, ಎನ್. ಯಜ್ಞನಾರಾಯಣ ಉಳ್ಳೂರ್, ಅಂಬುಜಾ ಟಿ.ಎಸ್ ಮೊದಲಾದವರ ಅಭಿನಂದನ ಲೇಖನಗಳೂ ಇವೆ.
ತೆರೆದುಕೊಂಡ ಅಂತರಂಗದ ಓದು ನಿಮ್ಮದಾಗಲಿ!
ಆರತಿ ಪಟ್ರಮೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ