'ಭೂತಾನ್‌ನಲ್ಲಿ ಯಕ್ಷದೀವಿಗೆʼ
ಪ್ರವಾಸ ಕಥನ-12
ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ
(ಪ್ರಜಾಪ್ರಗತಿ, 12 ಏಪ್ರಿಲ್ 2026)
(ಮುಂದುವರಿದ ಭಾಗ...)
ಕೋಲ್ಕತದಿಂದ ಪಾರೊಗೆ ಹೋಗುವುದಕ್ಕೆ ನಾವು ಏರಿದ ಡ್ರುಕ್‌ಏರ್ ವಿಮಾನ ಚಿಕ್ಕ ಗಾತ್ರದ್ದಾಗಿತ್ತು. ಫಕ್ಕನೆ ನೋಡಿದರೆ ನಮ್ಮ ರಾಜಹಂಸ ಬಸ್ಸಿನ ಹಾಗೆ. ಹೆಚ್ಚೆಂದರೆ ಅದರ ಎರಡು ಪಟ್ಟು ಸೀಟುಗಳಿರಬಹುದು ಅಷ್ಟೆ. ಆ ತುದಿಯಿಂದ ಈ ತುದಿಯವರೆಗೆ ಕುಳಿತ ಎಲ್ಲರನ್ನೂ ಒಂದೇ ಕಣ್ಣೋಟದಿಂದ ನೋಡಬಹುದಿತ್ತು. ತನ್ನ ಗಾತ್ರದಿಂದಷ್ಟೇ ಅಲ್ಲದೆ ಅದರಲ್ಲಿ ಕುಳಿತಿರುವ ಪ್ರಯಾಣಿಕರ ಸ್ವಭಾವದಿಂದಲೂ ವಿಮಾನ ಯಾಕೋ ಮನಸ್ಸಿಗೆ ಇಷ್ಟವಾಯ್ತು. ಬೆಂಗಳೂರು-ಕೋಲ್ಕತ ವಿಮಾನದಲ್ಲಿದ್ದ ಪ್ರಯಾಣಿಕರು ಘನಗಂಭೀರವಾಗಿ ಕುಳಿತಿದ್ದರು. ಸಾಮಾನ್ಯವಾಗಿ ಎಲ್ಲ ವಿಮಾನಗಳಲ್ಲಿ ಕಂಡುಬರುವ ದೃಶ್ಯವಿದು. ಎಲ್ಲರೂ ತಾವಾಯ್ತು, ತಮ್ಮ ಪಾಡಾಯ್ತು ಎಂದು ಇರುವವರು. ಹೆಚ್ಚೆಂದರೆ ಒಂದೇ ಕುಟುಂಬದ ಮಂದಿ ಮೆಲುದನಿಯಲ್ಲಿ ಮಾತಾಡಿಕೊಂಡಾರು. ವಿಮಾನ ಮೇಲೇರಿದರೆ ಸಾಕು, ಹೆಚ್ಚಿನವರೂ ನಿದ್ದೆಗೆ ಜಾರಿಬಿಡುವವರು ಅಥವಾ ಟ್ಯಾಬ್, ಮೊಬೈಲ್ ಇಲ್ಲವೇ ಲ್ಯಾಪ್‌ಟಾಪ್ ಬಳಸಿ ಸಿನಿಮಾ ನೋಡಿಕೊಂಡು ಕಾಲ ಕಳೆಯುವವರು.
ಆದರೆ ಪಾರೊ ವಿಮಾನದೊಳಗಿನ ದೃಶ್ಯ ಬೇರೆ ಬಗೆಯದ್ದಾಗಿತ್ತು. ಪ್ರಯಾಣಿಕರು ಒಂದೇ ಊರಿನ ಚಿರಪರಿಚಿತ ಮಂದಿಯಂತೆ ಬಹಳ ಲವಲವಿಕೆಯಿಂದ ಹರಟೆ ಹೊಡೆದುಕೊಂಡು ಕುಳಿತಿದ್ದರು. ಅವರ ಮಾತು, ನಗು, ಕೇಕೆಯಿಂದ ಅಲ್ಲೊಂದು ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ಉತ್ತಮ ಆಸನ ವ್ಯವಸ್ಥೆ, ಹವಾನಿಯಂತ್ರಣ ಬಿಟ್ಟರೆ ನಮ್ಮೂರ ಜನಪ್ರಿಯ ಬಸ್ಸಿನೊಳಗೆ ಕುಳಿತಂತೆಯೇ ಭಾಸವಾಗುತ್ತಿತ್ತು.
ಆದರೆ ಕೋಲ್ಕತ-ಪಾರೊ ವಿಮಾನ ಪ್ರಯಾಣ ಕೊಂಚ ಆತಂಕಕಾರಿ ಇರಬಹುದು ಎಂದು ಹತ್ತಿರದ ಬಂಧುಗಳು, ಸ್ನೇಹಿತರು ನಮಗೆ ಮುನ್ನೆಚ್ಚರಿಕೆ ಕೊಟ್ಟಿದ್ದರು. ಪರ್ವತ ಪ್ರದೇಶಗಳ ಮೇಲೆ ಹಾರಾಟ ನಡೆಸಬೇಕಾದ್ದರಿಂದ ವಿಮಾನ ಸಣ್ಣಗಾತ್ರದ್ದಾಗಿರುವುದು ಸಾಮಾನ್ಯ. ಈ ಕಾರಣದಿಂದಲೇ ಅದರ ಪ್ರತಿಯೊಂದು ಚಲನೆಯೂ ಪ್ರಯಾಣಿಕರ ಅನುಭವಕ್ಕೆ ಬರುತ್ತದೆ. ವಿಮಾನ ತನ್ನ ಹಾರಾಟದ ದಿಕ್ಕನ್ನು ಬದಲಾಯಿಸುವುದು, ಅಗತ್ಯಕ್ಕೆ ತಕ್ಕಂತೆ ಎತ್ತರವನ್ನು ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು- ಇವೆಲ್ಲ ಸ್ಪಷ್ಟವಾಗಿ ಒಳಗೆ ಕುಳಿತಿರುವವರಿಗೆ ಗೊತ್ತಾಗುತ್ತದೆ. ದೊಡ್ಡ ವಿಮಾನಗಳಲ್ಲಿ ಇವು ಅಷ್ಟಾಗಿ ಅನುಭವಕ್ಕೆ ಬರುವುದಿಲ್ಲ... ಹೀಗೆಂದು ಮೊದಲೇ ಹೇಳಿದ್ದರಿಂದ ನಾವು ಸಣ್ಣ ಭಯದಿಂದಲೇ ಇವನ್ನೆಲ್ಲ ಅನುಭವಿಸುವುದಕ್ಕೆ ಸಿದ್ಧರಾಗಿದ್ದೆವು.
ವಿಮಾನ ಆಗಸಕ್ಕೇರಿತು. ಸ್ನೇಹಿತರು ಹೇಳಿದಂತಹ ಭಯದ ಅನುಭವವೇನೂ ಅಷ್ಟಾಗಿ ಆಗಲಿಲ್ಲ. ಅಬ್ಬ ಪರವಾಗಿಲ್ಲ ಇದು ಎಂದು ಸಮಾಧಾನಪಟ್ಟುಕೊಂಡೆವು. ಅದಕ್ಕಿಂತಲೂ ಸಮಾಧಾನದ ವಿಷಯ ಏನೆಂದರೆ ವಿಮಾನ ಹೊರಟು ಸ್ವಲ್ಪ ಹೊತ್ತಲ್ಲೇ ಪ್ರಸಾದ ವಿತರಣೆ ಆರಂಭವಾದದ್ದು. ನಾವು ಬೆಳಗ್ಗೆ ತಿಂಡಿ ತಿಂದದ್ದು ಬಿಟ್ಟರೆ ಮತ್ತೇನೂ ಸೇವಿಸಿರಲಿಲ್ಲ. ಎಸ್‌ಡಿಎಫ್ ಕುರಿತಂತೆ ವಿಮಾನ ನಿಲ್ದಾಣದಲ್ಲಿ ಆದ ಗೊಂದಲ ಇತ್ಯಾದಿಗಳಿಂದ ಸಾಕಷ್ಟು ಸಮಯ ಕಳೆದುಹೋಗಿತ್ತು. ತೀರಾ ವಿಮಾನ ನಿಲ್ದಾಣದ ಒಳಗೆ ತಲುಪಿದ ಮೇಲೆ ನಮಗೆ ಒಗ್ಗುವ ಊಟ ಸಿಗುವುದೂ ಅಷ್ಟರಲ್ಲೇ ಇತ್ತು. ಪಿಜ್ಜಾ, ಬರ್ಗರ್ ತಿನ್ನುವುದಕ್ಕೆ ಸಾವಿರ ರುಪಾಯಿ ಚೆಲ್ಲಬೇಕು. ಹೀಗಾಗಿ ಇನ್ನೀಗ ಊಟ ಬೇಡ, ಭೂತಾನ್ ತಲುಪಿದ ಮೇಲೆ ನೋಡೋಣ ಎಂದು ನಿರ್ಧರಿಸಿದ್ದೆವು.
ಹಾಗೆಂದು ವಿಮಾನದಲ್ಲಿ ಕುಳಿತ ಮೇಲೆ ಹೊಟ್ಟೆ ತಾಳಹಾಕಲು ಆರಂಭಿಸಿತ್ತು. ಅದಕ್ಕೆ ಸರಿಯಾಗಿ ವಿಮಾನದ ಮುಂಭಾಗದಿಂದ ತಿಂಡಿಯ ಗಾಡಿ ಹೊರಟಾಗ ಖುಷಿಯಾಗಿಬಿಟ್ಟಿತು. ನಾವೇನೂ ಸೀಟ್ ಜೊತೆಗೆ ಊಟ ಕಾಯ್ದಿರಿಸಿರಲಿಲ್ಲ, ಆದ್ದರಿಂದ ಇದು ಕಾಯ್ದಿರಿಸಿದವರಿಗೆ ಮಾತ್ರ ಇರಬಹುದು ಎಂಬ ಅನುಮಾನವೂ ಇತ್ತು. ಆದರೆ ಅವರು ಎಲ್ಲರಿಗೂ ಪ್ಯಾಕೆಟ್ ವಿತರಿಸಿಕೊಂಡು ಬಂದಾಗ ನಿಜವಾಗಿಯೂ ಖುಷಿಯಾಯಿತು. ಅದು ಡ್ರುಕ್‌ಏರ್ ಕಂಪೆನಿ ಕಡೆಯಿಂದ ಕಾಂಪ್ಲಿಮೆಂಟರಿ ಫುಡ್ ಆಗಿತ್ತು. ಅದನ್ನು ತಿಂದು ತಂಪು ಪಾನೀಯ ಕುಡಿದಾಗ ಮೈಮನಸ್ಸು ಎಲ್ಲ ತಂಪುತಂಪಾಗಿ ಹಾಯೆನಿಸಿತು.
ವಿಮಾನ ಹಿಮಾಲಯದ ಮೇಲೆ ಸಾಗುತ್ತಿದ್ದುದರಿಂದಲೂ, ಸುತ್ತಲೂ ಬೆಳ್ಳಗಿನ ಮೋಡಗಳು ಹರಡಿಕೊಂಡಿದ್ದರಿಂದಲೂ ಎಲ್ಲೆಲ್ಲೂ ಬೆಳ್ಳಗಿನ ಕನಸಿನಲೋಕ ಕಾಣಿಸುತ್ತಿತ್ತು. ಆಗಾಗ ಚಲಿಸಿದಂತೆ, ಆಗೊಮ್ಮೆ ಈಗೊಮ್ಮೆ ಅಲ್ಲೇ ನಿಂತಂತೆ, ಎತ್ತರೆತ್ತರ ಏರಿದಂತೆ, ಇಷ್ಟಿಷ್ಟೇ ಕೆಳಗಿಳಿದಂತೆ ವಿಮಾನದ ಪ್ರಯಾಣ ಆಹ್ಲಾದಕಾರಿಯಾಗಿತ್ತು. ಆದರೆ ಸಮುದ್ರ ಮಟ್ಟದಿಂದ ಅತ್ಯಂತ ಎತ್ತರಕ್ಕೆ ಏರುವ ವೇಳೆಗೆ ಒಂದಷ್ಟು ಹೊತ್ತು ವಿಪರೀತ ಕಿವಿ ನೋವು ಬಂತು. ನಿಧಾನಕ್ಕೆ ಅದು ಸರಿಹೋಯಿತು.
ಅರ್ಧದಲ್ಲೇ ಲ್ಯಾಂಡ್ ಆದೆವು:
ಕೋಲ್ಕತದಿಂದ ಪಾರೊ ವಿಮಾನಯಾನದ ಒಟ್ಟು ಅವಧಿ ಒಂದು ಗಂಟೆ ಹತ್ತು ನಿಮಿಷ. ಇನ್ನೇನು ಮುಕ್ಕಾಲು ಗಂಟೆ ಆಗಿರಬೇಕು ಎಂಬಷ್ಟರಲ್ಲಿ ವಿಮಾನ ಕೆಳಗಿಳಿಯಲು ಆರಂಭಿಸಿತು. ನಾವು ಲ್ಯಾಂಡ್ ಆಗುತ್ತಿದ್ದೇವೆ ಎಂಬ ಪೈಲಟ್ ಸೂಚನೆಯೇನೋ ಕೇಳಿಸಿತ್ತು, ಆದರೆ ಯಾಕೆ ಏನು ಎಂಬ ವಿವರ ಅರ್ಥವಾಗಿರಲಿಲ್ಲ. ಎರಡೇ ನಿಮಿಷದಲ್ಲಿ ವಿಮಾನ ಹೆಲಿಪ್ಯಾಡಿನಂತಹ ಪುಟ್ಟ ವ್ಯವಸ್ಥೆಯ ಮೇಲೆ ಲ್ಯಾಂಡ್ ಆಯಿತು. ನಾವು ಗೊಂದಲದಿಂದ ಮಿಕಮಿಕ ನೋಡುತ್ತಿದ್ದೆವು. ಹೊರಗೆ ಒಂದು ವಿಮಾನ ನಿಲ್ದಾಣದ ನೋಟವೇನೂ ಇರಲಿಲ್ಲ. ನಾವೊಂದು ಬಯಲಿನ ಮಧ್ಯೆ ಇಳಿದಂತೆ ಇತ್ತು ಅಷ್ಟೇ. ದೂರದಲ್ಲಿ ಸಾಲುಸಾಲು ಬೆಟ್ಟಗಳು. ಮೊದಲೇ ಬಸ್ಸಿನಂತೆ ಇತ್ತು ವಿಮಾನ, ಈಗ ನೋಡಿದರೆ ಬಸ್ಟಾö್ಯಂಡಿನಲ್ಲೇ ಇಳಿಸಿಬಿಟ್ಟರೋ ಹೇಗೆ ಎಂದು ಮಾತಾಡಿಕೊಂಡೆವು.
ಅಷ್ಟು ಸಾಲದು ಎಂಬಂತೆ ವಿಮಾನದಿಂದ ಒಂದಷ್ಟು ಮಂದಿ ತಮ್ಮ ಬ್ಯಾಗುಗಳೊಂದಿಗೆ ಇಳಿದುಹೋದರು. ಅರೆ! ನಾವು ಪಾರೊ ತಲುಪಿದೆವೇ ಹಾಗಾದರೆ ಎಂದು ಚೋದ್ಯವಾಯಿತು. ಹಾಗೆಂದು ಎಲ್ಲರೂ ಇಳಿದಿರಲಿಲ್ಲ. ಹೆಚ್ಚಿನವರು ಹಾಗೆಯೇ ಕುಳಿತಿದ್ದರು. ಇನ್ನೂ ಒಂದಷ್ಟು ಮಂದಿ ಕೈಕಾಲು ಬಿಡಿಸಿಕೊಂಡು ಬಸ್ಸಿನಲ್ಲಿ ಅಡ್ಡಾಡಿದಂತೆ ಹಿಂದೆ ಮುಂದೆ ಅಡ್ಡಾಡಿದರು. ಈಗ ನಾವು ಕೂಡ ಇಳಿಯಬೇಕಾ ಹಾಗಾದರೆ... ಈ ವಿಮಾನ ಪಾರೊವರೆಗೆ ಮಾತ್ರವಲ್ಲದೆ ಮುಂದೆಯೂ ಬೇರೆ ಯಾವುದಾದರೂ ಊರಿಗೆ ಹೋಗುತ್ತದೋ ಹೇಗೆ... ಎಂದೆಲ್ಲ ಯೋಚಿಸುವಾಗ ನಾಲ್ಕೈದು ಮಂದಿ ಹೊಸ ಪ್ರಯಾಣಿಕರು ವಿಮಾನ ಏರಿ ತಮ್ಮ ಆಸನಗಳಲ್ಲಿ ಕುಳಿತರು. ಈಗಿನ್ನೂ ಮಾರ್ಕೆಟಿನಿಂದ ಬಂದವರಂತೆ ಅವರ ಕೈಯಲ್ಲಿ ಒಂದಷ್ಟು ಖರೀದಿಯ ಚೀಲಗಳು, ಕೆಲವು ಹೂವಿನ ಗಿಡಗಳೆಲ್ಲ ಇದ್ದವು. ಇಳಿಯಬೇಕು ಅಂತಾದರೆ ಕಡೇ ಪಕ್ಷ ಇಳೀರಪ್ಪಾ ನಿಮ್ಮೂರು ಬಂತು ಅಂತ ಒಂದು ಅನೌನ್ಸ್ಮೆಂಟ್ ಆದರೂ ವಿಮಾನದಿಂದ ಬರಬೇಕಲ್ಲ, ಇದೇನು ಕತೆ ಎಂದು ಮಾತಾಡಿಕೊಂಡೆವು.ಸುಮ್ಮನೆ ಗೊಂದಲ ಯಾಕೆ, ಕೇಳೇಬಿಡೋಣ ಎಂದು ನಮ್ಮಲ್ಲೊಬ್ಬರು ಮೆಲ್ಲಗೆ ಎದ್ದು ಬಾಗಿಲ ಬಳಿ ನಿಂತಿದ್ದ ಗಗನಸಖಿಯ ಹತ್ತಿರ ಹೋದೆವು. “ಯಾಕೆ ಇಲ್ಲಿ ನಿಲ್ಲಿಸಿದ್ದೀರಿ? ಏನು ಕತೆ?” ಎಂದು ಕೇಳಿದೆವು. ಬಹುಶಃ ನಮ್ಮಂತಹ ಹೊಸಬರಿಗೆ ಈ ಪ್ರಶ್ನೆ ಹುಟ್ಟಿಕೊಂಡದ್ದರಲ್ಲಿ ಆಶ್ಚರ್ಯವೇನೂ ಇಲ್ಲ ಎಂಬ ಹಾಗೆ ಆ ಗಗನಸಖಿ “ಇದು ಗೆಲೆಫು ಎಂಬ ಊರು. ಇದು ಸಣ್ಣ ಏರ್‌ಪೋರ್ಟ್. ಈಗಿನ್ನೂ ಅಭಿವೃದ್ಧಿ ಮಾಡ್ತಾ ಇದ್ದಾರೆ. ಇಲ್ಲಿಯವರೆಗೆ ಟಿಕೆಟ್ ತಗೊಂಡವರು ಇಲ್ಲಿ ಇಳಿದಿದ್ದಾರೆ. ಇನ್ನೂ ಕೆಲವರು ಬರೋದಿದೆ. ಅವರು ಬಂದ ತಕ್ಷಣ ಹೊರಡೋದೆ. ಇಲ್ಲಿಂದ ಪಾರೊಗೆ ಇನ್ನೂ ಅರ್ಧ ಗಂಟೆ ಪ್ರಯಾಣ ಇದೆ” ಎಂದು ನಗುತ್ತಾ ಸರಳ ಇಂಗ್ಲಿಷಿನಲ್ಲಿ ವಿವರಣೆ ನೀಡಿದರು.
ಓ ಇದಾ ಕತೆ ಎಂದು ನಮಗೂ ನಗು ಬಂತು. ಬಹುಶಃ ಹೆಚ್ಚು ಸಮಯ ಇರುವುದಿಲ್ಲ, ಇಲ್ಲಾಂದ್ರೆ ಇಲ್ಲೇ ಇಳಿದು ಸ್ವಲ್ಪ ಹೊತ್ತು ಊರು ನೋಡಿಕೊಂಡು ಬರಬಹುದಿತ್ತು ಎಂದು ತಮಾಷೆ ಮಾಡಿಕೊಂಡೆವು. ಅರ್ಧದಲ್ಲಿ ವಿಮಾನ ಇಳಿದು ಜನರನ್ನು ಹತ್ತಿಸಿಕೊಂಡ ಆ ಪ್ರಸಂಗವಂತೂ ನಮಗೆ ನಿಜಕ್ಕೂ ತಮಾಷೆ ಅನ್ನಿಸಿತು.
ಗೆಲೆಫು ಭೂತಾನ್‌ನ ಸರ್ಪಾಂಗ್ ಜಿಲ್ಲೆಯಲ್ಲಿರುವ ಒಂದು ಪ್ರಮುಖ ಪಟ್ಟಣ. ಅದು ಭಾರತ ಮತ್ತು ಭೂತಾನ್‌ನ ಗಡಿಭಾಗದಲ್ಲಿರುವ ಪಟ್ಟಣವಾದ್ದರಿಂದ ಎರಡೂ ದೇಶಗಳನ್ನು ಸಂಪರ್ಕಿಸುವ ಭಾಗವಾಗಿಯೂ ಪ್ರಾಮುಖ್ಯತೆ ಪಡೆದಿದೆ. ಅಸ್ಸಾಂನಿಂದ ರಸ್ತೆ ದಾರಿಯಾಗಿ ಭೂತಾನ್‌ಗೆ ಹೋಗುವುದಿದ್ದರೆ ಗೆಲೆಫು ಮೂಲಕವೇ ಪ್ರಯಾಣಿಸಬೇಕು. ಈಗ ಗೆಲೆಫು ವಿಮಾನ ನಿಲ್ದಾಣದ ಅಭಿವೃದ್ಧಿ ಕೆಲಸ ನಡೆಯುತ್ತಿದೆ. 2029ರ ವೇಳೆಗೆ ಅದನ್ನೊಂದು ಅಂತಾರಾ ಯ ವಿಮಾನ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶ ಭೂತಾನ್ ಸರ್ಕಾರಕ್ಕಿದೆ.
ಈ ಬೆಳವಣಿಗೆಗೆ ಕಾರಣ ‘ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿ’ (Gelephu Mindfulness City) ಎಂಬ ಹೊಸ ನಗರ ಯೋಜನೆಯೊಂದು ಆರಂಭವಾಗಿರುವುದು. ಭೂತಾನೀಯರಿಗೆ ಹೊಸ ಉದ್ಯೋಗ ಹಾಗೂ ಉದ್ಯಮ ಅವಕಾಶಗಳನ್ನು ಒದಗಿಸುವುದಕ್ಕಾಗಿ ಭೂತಾನ್ ರಾಜ ಜಿಗ್ಮೆ ಖೇಸರ್ ನಮ್‌ಗ್ಯಾಲ್ ವಾಂಗ್‌ಚುಕ್ ಅವರು ಆರಂಭಿಸಿರುವ ಹೊಸ ಉಪಕ್ರಮ ಇದು. ಈಗಾಗಲೇ ಹೇಳಿರುವಂತೆ ವಾಂಗ್‌ಚುಕ್ ಸಾಕಷ್ಟು ಹೊಸ ಚಿಂತನೆಗಳನ್ನು ಹೊಂದಿರುವ ಉನ್ನತ ಶಿಕ್ಷಣ ಪಡೆದಿರುವ ರಾಜ. ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿ ಅಲ್ಲಿನ ವಿಶೇಷ ಆರ್ಥಿಕ ವಲಯದ ಒಂದು ಭಾಗ. 2500 ಚದರ ಕಿಲೋಮೀಟರ್‌ಗಳಷ್ಟು ದೊಡ್ಡದು – ಇದು ಗಾತ್ರದಲ್ಲಿ ಸಿಂಗಾಪುರಕ್ಕಿಂತ ಮೂರು ಪಟ್ಟು ದೊಡ್ಡದಾಗಿರುವ ಜಾಗ. ಇದರಲ್ಲಿ ಎಲ್ಲ ಆಧುನಿಕ ಮೂಲಸೌಕರ್ಯಗಳನ್ನು ಹೊಂದುವ ಉದ್ದೇಶ ಇದ್ದರೂ, ಭೂತಾನ್ ಸರ್ಕಾರ ತನ್ನ ‘ಸಮಗ್ರ ರಾಷ್ಟ್ರೀಯ ಸಂತೋಷದ ಸೂಚ್ಯಂಕ’ (Gross National Happiness Index) ಕ್ಕೆ ಅನುಗುಣವಾಗಿಯೇ ಇದನ್ನು ಅಭಿವೃದ್ಧಿಪಡಿಸುತ್ತಿದೆ. ಅಂದಹಾಗೆ, ಈ ಯೋಜನೆಯಲ್ಲಿ ಭಾರತದ ಪಾಲೂ ಇದೆ. ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿಯ ಸಂಸ್ಥಾಪಕ ಸದಸ್ಯರೂ ಆಗಿದ್ದಾರೆ.
ಅಂತೂ ನಮ್ಮ ವಿಮಾನ ಮತ್ತೆ ಗೆಲೆಫು ಬಿಟ್ಟು ಮೇಲಕ್ಕೆ ಹಾರಿತು. ನಾವು ನಿರೀಕ್ಷಿಸಿದ್ದ ಪುಟ್ಟ ವಿಮಾನದೊಳಗಿನ ಪ್ರಯಾಣದ ಭಯಾತಂಕ ಆರಂಭವಾದದ್ದು ಇಲ್ಲಿಂದ. ಸುರಕ್ಷಿತವಾಗಿ ಪಾರೊದಲ್ಲಿ ಇಳಿಯುತ್ತೇವೋ, ಮರಳಿ ಊರಿಗೆ ಹೋಗುತ್ತೇವೋ ಎಂಬ ಭಯ ಹುಟ್ಟಿಕೊಂಡದ್ದೂ ಇಲ್ಲೇ.
(ಮುಂದುವರಿಯುತ್ತದೆ)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ