'ಭೂತಾನ್‌ನಲ್ಲಿ ಯಕ್ಷದೀವಿಗೆʼ
ಪ್ರವಾಸ ಕಥನ-13
ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ
(ಪ್ರಜಾಪ್ರಗತಿ, 19 ಏಪ್ರಿಲ್ 2026)
(ಮುಂದುವರಿದ ಭಾಗ...)
ನಾವು ಎಳೆಯವರಿದ್ದಾಗ ನಮ್ಮ ಅಜ್ಜಿ ಹೇಳುತ್ತಿದ್ದ ಕಥೆಯಲ್ಲಿ ಯಾವುದೋ ರಾಜಕುಮಾರಿಯನ್ನು ಕಾಪಾಡಲು ರಾಜಕುಮಾರನೊಬ್ಬ ಏಳುಪರ್ವತ ದಾಟಿ ಹಾರಿ ಬರುತ್ತಾನಲ್ಲ ಅದು ಹೀಗೇ ಇದ್ದಿರಬಹುದು ಎಂಬ ಅನುಭವ ಗೆಲೆಫುವಿನಿಂದ ಪಾರೋಗೆ ಸಾಗುವಾಗ ಆಯ್ತು. ತುಂಬಾ ಎತ್ತರದಲ್ಲೂ ಅಲ್ಲದೇ ತೀರಾ ಕೆಳಗೂ ಅಲ್ಲದೇ ಪರ್ವತಶ್ರೇಣಿಗಳನ್ನು ತಾಕಿಯೇ ಬಿಡುತ್ತದೇನೋ ಎನ್ನುವಷ್ಟು ಹತ್ತಿರವಾಗಿ ನಮ್ಮ ವಿಮಾನ ಹಾರುತ್ತಿತ್ತು. ಮಗಳನ್ನು ಪರೀಕ್ಷೆಯ ನೆಪದಿಂದ ಬಿಟ್ಟುಬಂದದ್ದು ನೆನಪಾದಾಗ ಹೊಟ್ಟೆಯಲ್ಲಿ ಸಂಕಟ ಎದ್ದಿತು!
ಜಾತ್ರೆಯಲ್ಲಿ ಕೂಡ ಎಂದಿಗೂ ಜಯೆಂಟ್ ವೀಲ್ ಏರದ ನಮಗೆ ಈ ವಿಮಾನವೇ ಅದರ ಅನುಭವ ಕೊಡುತ್ತಿತ್ತು. ಒಮ್ಮೆ ಎತ್ತರಕ್ಕೆ ಒಮ್ಮೆ ಕೆಳಕ್ಕೆ ಹಾರುತ್ತಿದ್ದ ವಿಮಾನದ ದಿಸೆಯಿಂದ ನಮ್ಮೆದೆ ಢವಗುಡುತ್ತಿದ್ದರೆ ನಮ್ಮೊಂದಿಗಿದ್ದ ಸಹಪ್ರಯಾಣಿಕರ ಮಕ್ಕಳು ಬಲುಸಂಭ್ರಮದಿಂದ ಹ್ಹೋ ಎಂದು ಕೂಗುತ್ತಾ ನಗುತ್ತಿದ್ದರು. ಅವರಿಗೆ ಏನೇನೂ ಭಯ ಇರಲಿಲ್ಲ. ತಾವೇನೋ ಜೋಕಾಲಿ ಆಡುತ್ತಿದ್ದೇವೆ ಎಂಬಂಥ ಉತ್ಸಾಹ, ಉಲ್ಲಾಸದಿಂದ ಅವರು ಸಂಭ್ರಮಿಸುತ್ತಿದ್ದರು. ನಮ್ಮೂರಿನ ಜೀಪುಗಳಲ್ಲಿ ಮಳೆಗಾಲದ ಪ್ರಯಾಣವೂ ಸರಿಸುಮಾರು ಹೀಗೇ ಇರುತ್ತಿತ್ತಲ್ಲ ಅಂತ ನೆನಪಾದಾಗ ಮಾತ್ರ ಆತಂಕದ ನಡುವೆಯೂ ಸಣ್ಣಗೆ ನಗು ಉಕ್ಕಿತು. ಆದರೂ “ಕ್ಷೇಮವಾಗಿ ಪಾರೋದಲ್ಲಿ ಇಳಿಯುವಂತೆ ಮಾಡಪ್ಪಾ ದೇವರೇ” ಎಂದು ನೆನಪಿಗೆ ಬಂದ ದೇವರನ್ನೆಲ್ಲ ಪ್ರಾರ್ಥಿಸಿಕೊಂಡೆವು.
ಪಾರೋ ನಗರ ಹತ್ತಿರ ಬರುತ್ತಿದ್ದಂತೆ ವಿಮಾನ ಸ್ವಲ್ಪಸ್ವಲ್ಪವೇ ಕೆಳಗಿಳಿಯಲಾರಂಭಿಸಿದಾಗ ಅಲ್ಲಲ್ಲಿ ಹರಿಯುತ್ತಿದ್ದ ನದಿ, ಹಸಿರಾದ ಕಾನನ ಕಾಣಲಾರಂಭಿಸಿತು. ಜತೆಗೆ ಪೆಟ್ಟಿಗೆಗಳಂತೆ ಕಾಣುತ್ತಿದ್ದ ಮನೆಗಳೂ. ಎಲ್ಲವೂ ಒಂದೇ ಆಕಾರ! ಅಂತೂ ಒಂದಿಷ್ಟೂ ತೊಂದರೆಯಾಗದಂತೆ ಬಹಳ ಸಹಜವಾಗಿ ಪಾರೋ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸಿದರು ನಮ್ಮ ಪೈಲಟ್. ಅವರಿಗಿದು ದಿನನಿತ್ಯದ ಕಾಯಕ. ನಮಗೋ ಬದುಕಿದೆಯಾ ಬಡಜೀವವೇ ಎಂಬ ನಿಟ್ಟುಸಿರು. ಆತನೋ ನೋಡಿದರೆ ಮೊನ್ನೆಯಷ್ಟೇ ಡಿಗ್ರಿ ಮುಗಿಸಿದ ಹುಡುಗನಂತೆ ಇದ್ದ. “ಏನೋಪ! ಇಲ್ಲಿ ವಿಮಾನ ಹಾರಿಸಿದ ಈ ಪುಣ್ಯಾತ್ಮ ಮಾತ್ರ ಬಹಳ ಗಟ್ಟಿಗನೇ ಸೈ” ಎಂದು ನಮ್ಮೊಳಗೇ ಮಾತಾಡಿಕೊಂಡು ದೂರದಿಂದ ಅವನಿಗೊಂದು ಅಭಿನಂದನೆ ಹೇಳಿದೆವು.
ವಿಮಾನದಿಂದ ಕೆಳಗಿಳಿಯುತ್ತಿದ್ದರೆ ನಮ್ಮ ಲಗ್ಗೇಜು ಯಾವ ಬೆಲ್ಟ್ ಅಂತ ಹೇಳಲೇ ಇಲ್ಲವಲ್ಲ ಅಂತ ಚಿಂತೆಯಾಯ್ತು. ನೋಡೋಣ, ನಮ್ಮಂತೆ ಬಂದವರು ಉಳಿದವರೂ ಇದ್ದಾರಲ್ಲ ಅಂದುಕೊಂಡು ಮೆಲ್ಲಮೆಲ್ಲನೆ ಕೆಳಗಿಳಿದರೆ ನರನಾಡಿ ಹೆಪ್ಪುಗಟ್ಟುವಂಥ ಛಳಿ! ಉಸಿರಾಡಿದರೆ ಮಂಜುಗಡ್ಡೆಯೇ ಮೂಗೊಳಗೆ ಹೋಗುತ್ತದೆ ಅನಿಸುವ ಶೀತಲ ಗಾಳಿ. ತುಮಕೂರಿನಿಂದ ಹೊರಡುವಾಗಲೇ ಥರ್ಮಲ್ ವೇರ್ ಯಾಕೆ ಎಂದುಕೊಂಡು ನಾವದನ್ನು ಧರಿಸಿರಲಿಲ್ಲ. ಕೈಗೆ ಹಾಕಿಕೊಳ್ಳುವುದಕ್ಕೆ ಬೇಕಿದ್ದ ಗ್ಲೌಸ್, ಅದಾಗಲೇ ಧರಿಸಿದ್ದ ಸ್ವೆಟರ್ ಮೇಲೆ ಹಾಕಿಕೊಳ್ಳಬೇಕಿದ್ದ ಜರ್ಕಿನ್ ಎಲ್ಲ ಲಗ್ಗೇಜಿನಲ್ಲಿತ್ತು. ಹೊಟ್ಟೆಯಿಂದಲೇ ಶುರುವಾದ ನಡುಕ ಬೆನ್ನುಹುರಿಗೆಲ್ಲ ವ್ಯಾಪಿಸಿ ನಡೆಯವುದೇ ಹಿಂಸೆಯೆನಿಸಿತು. ಮಗ ಮಾತ್ರ “ಆಹಾ, ಇಷ್ಟು ಚಳಿ ತುಮಕೂರಿನಲ್ಲಿ ಇದ್ದರೆ ಎಷ್ಟು ಚಂದ ಇತ್ತು” ಎಂದು ಕನಸು ಕಾಣುತ್ತಿದ್ದ. ಅವನಿಗೆ ಚಳಿಯೆಂದರೆ ಇಷ್ಟ. ಸುತ್ತಲೂ ಪರ್ವತಗಳ ಸಾಲು, ಮಧ್ಯೆ ಪಾರೊ ಏರ್‌ಪೋರ್ಟ್; ಸಂಜೆಯ ಆ ನೋಟ ನಯನಮನೋಹರವಾಗಿತ್ತು. ಆದರೆ ಚಳಿಯ ದಾಳಿಯಿಂದಾಗಿ ಅದನ್ನು ನೋಡುತ್ತಾ ಎರಡು ನಿಮಿಷ ನಿಲ್ಲುವ ವ್ಯವಧಾನ ನಮಗಿರಲಿಲ್ಲ. ನಡೆದೋ ಓಡಿಯೋ ಅಂತೂ ಇಮಿಗ್ರೇಷನ್ ವಿಭಾಗದ ಕಡೆ ಹೋಗಿ ಅಗತ್ಯ ಔಪಚಾರಿಕತೆಗಳನ್ನು ಮುಗಿಸಿಕೊಂಡು ಬ್ಯಾಗುಗಳ ಕತೆ ನೋಡೋಣವೆಂದು ಒಳ ನಡೆದೆವು! ಗಗನಸಖಿ ಬೆಲ್ಟ್ ನಂಬರ್ ಹೇಳದೇ ಇದ್ದುದಕ್ಕೆ ಕಾರಣ ಗೊತ್ತಾಯಿತು. ಅಲ್ಲಿದ್ದುದು ಒಂದೇ ಬೆಲ್ಟ್. ಶಿಸ್ತುಬದ್ಧ ವಿದ್ಯಾರ್ಥಿಗಳಂತೆ ನಮ್ಮ ಬ್ಯಾಗುಗಳು ಅದಾಗಲೇ ಬಂದು ಕಾಯುತ್ತಿದ್ದವು. ಬೆಂಗಳೂರು, ಕೋಲ್ಕತ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಇದು ತುಂಬ ಚಿಕ್ಕದು. ಆದರೆ ಬಹಳ ಸುಂದರವಾಗಿತ್ತು. ಭೂತಾನಿನ ಕಲೆ, ವಾಸ್ತುಶಿಲ್ಪ ಎಲ್ಲವೂ ಕಣ್ಣಮುಂದೆ ಬರುವಂತಹ ಸುಂದರ ರಚನೆಗಳು. ಪಕ್ಕದಲ್ಲೊಂದು ಮಾಸ್ಕ್ಡ್ಯಾನ್ಸಿನ ದೊಡ್ಡ ಗಾತ್ರದ ಚೌಕಟ್ಟು ಹಾಕಿಸಿದ ಚಿತ್ರ. ಗೋಡೆಯಷ್ಟೇ ದೊಡ್ಡದಾದ ಭೂತಾನ್ ರಾಜನ ಕುಟುಂಬ ಸದಸ್ಯರ ಗ್ರೂಪ್ ಫೋಟೋ ಮನಸೆಳೆಯುವಂತೆ ಇತ್ತು.
ಮೊದಲ ಸುಂದರಿ:
ಗೆಲೆಫುವಿಂದ ನಮ್ಮ ವಿಮಾನಕ್ಕೆ ಹತ್ತಿದ ಓರ್ವ ಎಳೆಯವಯಸ್ಸಿನ ತಾಯಿ ತನ್ನೊಂದಿಗೆ ಮೂರುಮಂದಿ ಮಕ್ಕಳನ್ನು ಕರೆತಂದಿದ್ದಳು. ಮುಖದ ಹೋಲಿಕೆ ನೋಡಿದರೆ ಮೂರು ಮಂದಿಯೂ ಅವಳಂತೆಯೇ ಕಾಣಿಸಿದರು. ದೊಡ್ಡ ಮಕ್ಕಳಿಬ್ಬರು ವಿಮಾನ ಪ್ರಯಾಣ ಬಹಳ ಅಭ್ಯಾಸ ಹೊಂದಿದವರಂತೆ ಸರಸರನೆ ನಡೆದುಹೋಗುತ್ತಿದ್ದರು. ನಮ್ಮನ್ನು ಬಾಧಿಸಿದ ಛಳಿ ಆ ಮಕ್ಕಳನ್ನು ಮುಟ್ಟಲೇ ಇಲ್ಲವೇನೋ! ಕಿರಿಯಮಗುವನ್ನು ಮಾತ್ರ ಆ ತಾಯಿ ಯಾರೊಬ್ಬರ ಸಹಾಯವನ್ನೂ ಅಪೇಕ್ಷಿಸದೇ ಅಚ್ಚುಕಟ್ಟಾಗಿ ಬಟ್ಟೆಯಲ್ಲಿ ತನ್ನ ಬೆನ್ನಿಗೆ ಕಟ್ಟಿಕೊಂಡು ಲಗ್ಗೇಜನ್ನೂ ತೆಗೆದುಕೊಂಡು ಅಲ್ಲಿಂದ ಹೊರನಡೆದಳು. ಭೂತಾನಿಗೆ ಹೋಗುತ್ತಿದ್ದೇವೆ ಎಂದು ಪ್ರಕಟಿಸಿದಾಗ ಹಿರಿಯರಾದ ಡಾ. ಎಸ್. ಪಿ. ಪದ್ಮಪ್ರಸಾದರು “ಅಲ್ಲಿಯ ಹೆಣ್ಣುಮಕ್ಕಳು ತುಂಬಾ ಸುಂದರಿಯರು ಮಾರಾಯ್ರೆ, ಜೋಪಾನ!” ಎಂದದ್ದು ನೆನಪಾಗಿ ಕುಟುಕುಟು ಚಳಿಯ ಮಧ್ಯೆಯೂ ಮುಖಮುಖ ನೋಡಿಕೊಂಡು ನಕ್ಕೆವು. ಮೊದಲ ಸುಂದರಿಯ ದರ್ಶನ ನಮಗೆ ಹೀಗೆ ಆಗಿತ್ತು. ಸೌಂದರ್ಯಕ್ಕಿಂತಲೂ ಆಕೆಯ ಸ್ವಾವಲಂಬೀ ಮನೋಭಾವ ನಮಗೆ ಇಷ್ಟವಾಯ್ತು.
ವಿಮಾನ ನಿಲ್ದಾಣದ ಉಚಿತ ವೈಫೈ ಸಹಾಯದಿಂದ ಮೊಬೈಲ್‌ನಲ್ಲಿ ವಾಟ್ಸಾಪ್ ತೆರೆದರೆ ನಮ್ಮ ‘ಯಕ್ಷಗಾನ ವಿಸಿಟ್ ಟು ಭೂತಾನ್’ ಗ್ರೂಪಿನಲ್ಲಿ ಅದಾಗಲೇ ನಾವು ತಲುಪಿದೆವೋ ಇಲ್ಲವೋ ಎಂಬ ಬಗ್ಗೆ ಪೆಮಾ ಮತ್ತು ಸೋನಂ ಮಾತುಕತೆಯಲ್ಲಿ ತೊಡಗಿದ್ದರು. “ನಾವು ತಲುಪಿದ್ದೇವೆ. ವಿಮಾನ ನಿಗದಿತ ವೇಳೆಗಿಂತ ಕೊಂಚ ತಡವಾಗಿದೆ. ಇನ್ನೇನು ಹೊರಗೆ ಬಂದು ಬಿಡುತ್ತೇವೆ” ಎಂದು ಸಂದೇಶ ಹಾಕಿದೆವು. ಆಗ ಅಲ್ಲಿ ಸಂಜೆ ಐದು ಗಂಟೆ ಆಗಿತ್ತು; ಅಂದರೆ ಭಾರತದಲ್ಲಿ ನಾಲ್ಕೂವರೆ.
ಪೆಮಾರನ್ನು ಹುಡುಕುವುದು ನಮಗೆ ಕಷ್ಟವಾಗಲಿಲ್ಲ. ಅವರು ಮುಖ್ಯದ್ವಾರದಲ್ಲೇ ಕಾದಿದ್ದರು. ನಮ್ಮನ್ನು ಕಾಣುತ್ತಿದ್ದಂತೆಯೇ ತಕ್ಷಣ ಗುರುತು ಹಿಡಿದು ಕೈಬೀಸಿದರು. ತಾವೇ ನಮ್ಮ ಲಗೇಜುಗಳನ್ನೆತ್ತಿ ಕಾರಿನಲ್ಲಿ ಇರಿಸಿಕೊಂಡರು. “ಲೋಕಲ್ ಸಿಮ್ ತೆಗೆದುಕೊಂಡಿರಾ?” ಎಂದು ನೆನಪಿಸಿದರು. ನಾವದನ್ನು ಮರೆತಿದ್ದೆವು. ಮತ್ತೆ ನಾಲ್ಕು ಹೆಜ್ಜೆ ಹಿಂದಕ್ಕೆ ಹೋಗಿ ಸಿಮ್ ಖರೀದಿಸಿದೆವು. ಎರಡು ವಾರದ ವ್ಯಾಲಿಡಿಟಿ ಇರುವ ಸಿಮ್‌ಗೆ 300 ರುಪಾಯಿ ಅಂತ ಬೋರ್ಡಿನಲ್ಲಿ ಇತ್ತು. “ಜನವರಿಯಿಂದ ನಮ್ಮಲ್ಲಿ ಜಿಎಸ್‌ಟಿ ಜಾರಿ ಆಗಿದೆ, ಇನ್ನೂ15 ರುಪಾಯಿ ಹೆಚ್ಚಾಗುತ್ತದೆ” ಎಂದು ಸಿಮ್ ಅಂಗಡಿಯ ಹುಡುಗಿ ಸಂಕೋಚದಿಂದಲೇ ಹೇಳಿದಳು. ತಾನೇ ಸಿಮ್ ಆಕ್ಟಿವೇಟ್ ಮಾಡಿ ಮೊಬೈಲಿಗೆ ಸೆಟ್ ಮಾಡಿ ಡೇಟಾ ಚಾಲೂ ಮಾಡಿಯೇ ಕೊಟ್ಟುಬಿಟ್ಟಳು.
ಐದೂವರೆಗೇ ಕತ್ತಲಾಯಿತು:
ಪೆಮಾ ಅವರ ಕಾರಿನಲ್ಲಿ ಕುಳಿತಾಗ ಚಳಿಯಿಂದ ಬಚಾವಾಗಿ ಸ್ವರ್ಗ ಸಿಕ್ಕಿದಂತಾಯಿತು. ಉಭಯ ಕುಶಲೋಪರಿಯೊಂದಿಗೆ ನಮ್ಮ ಪ್ರಯಾಣ ಮತ್ತೆ ಆರಂಭವಾಯಿತು. ಅಲ್ಲಿಂದ ಪಾರೊ ನಗರಕ್ಕೆ ನಾಲ್ಕೈದು ಕಿಲೋಮೀಟರ್ ದೂರವಷ್ಟೇ. ಸಂಜೆ ಐದೂವರೆಯಷ್ಟೇ ಆಗಿದ್ದರೂ ಊರೆಲ್ಲ ಕತ್ತಲಾಗಿತ್ತು. ಬೀದಿದೀಪಗಳು ಝಗ್ಗನೆ ಹತ್ತಿಕೊಂಡಿದ್ದವು. ವಾಹನಗಳು ಮಿರಮಿರನೆ ಹೆಡ್ಲೈಟ್ ಉರಿಸಿಕೊಂಡು ಓಡಾಡುತ್ತಿದ್ದವು. ಓಹೋ, ಇಲ್ಲಿ ಕತ್ತಲು ಬೇಗ ಎಂದು ನೆನಪಿಸಿಕೊಂಡೆವು.
ಪೆಮಾ ಕಾರಿನಲ್ಲಿ ಭೂತಾನ್ ಆಕಾಶವಾಣಿ ಹಿತವಾಗಿ ಹಾಡುತ್ತಿತ್ತು. ಇಕ್ಕೆಲಗಳಲ್ಲಿ ಬೆಟ್ಟಗುಡ್ಡಗಳನ್ನಿರಿಸಿದ ಸಪೂರ ರಸ್ತೆಯಲ್ಲಿ ಕಾರ್ ಮುಂದೆ ಸಾಗುತ್ತಿದ್ದಂತೆ “ವಾವ್! ನಿಮ್ಮ ದೇಶ ತುಂಬಾ ಚಂದವಿದೆ” ಎಂದು ಉದ್ಗರಿಸಿದೆವು. ಪ್ರಯಾಣದ ದೂರ ಕಡಿಮೆಯಿದ್ದರೂ ಸಿಕ್ಕಷ್ಟು ಸಮಯದಲ್ಲಿ ಪೆಮಾ ಅಲ್ಲಲ್ಲಿನ ಸ್ಥಳಗಳನ್ನು ಪರಿಚಯಿಸುತ್ತಲೇ ಇದ್ದರು.
ಅವರು ಅದಾಗಲೇ ನಮಗಾಗಿ ರೂಮ್ ಕಾಯ್ದಿರಿಸಿದ್ದರಿಂದ ಏನೂ ತೊಂದರೆಯಾಗದು ಎಂದಿದ್ದರು. ಆದರೆ ನಾವು ಅಲ್ಲಿಗೆ ತಲುಪುವ ಹೊತ್ತಿಗೆ ಅದೇನೋ ರಿಪೇರಿಯ ಕಾರಣಕ್ಕೆ ತಮ್ಮ ಹೋಟೆಲಿನ ವೈಫೈ ಕೆಲಸ ಮಾಡುತ್ತಿಲ್ಲ ಎಂದು ಅಲ್ಲಿನ ಸ್ವಾಗತಕಾರಿಣಿ ಹೇಳಿದರು. ವೈಫೈ ಇಲ್ಲವಾದರೆ ನಮಗೆ ಕಷ್ಟವಾದೀತು, ನಮ್ಮ ಎಲ್ಲ ಕೆಲಸಗಳಿಗೂ ಅದಿಲ್ಲದಿದ್ದರೆ ತೊಂದರೆಯಾಗುತ್ತದೆ ಎಂದೆವು. ಅದಕ್ಯಾಕೆ ಚಿಂತೆ, ಇಲ್ಲಿ ಇನ್ನೂ ಬೇಕಾದಷ್ಟು ಹೋಟೆಲ್‌ಗಳಿವೆ, ಹುಡುಕೋಣ ಎಂದರು ಪೆಮಾ.
“ಅವರು ಬರುವ ತನಕ ನೀವು ಒಳಗೆ ಕುಳಿತುಕೊಳ್ಳಿ. ಈ ಚಳಿ ತಡೆದುಕೊಳ್ಳುವುದು ನಿಮಗೆ ಕಷ್ಟವಾಗಬಹುದು ನಿಮ್ಮ ಲಗ್ಗೇಜು ಅಲ್ಲೇ ರಸ್ತೆ ಬದಿಯಲ್ಲಿ ಇರಲಿ, ಏನೂ ಆಗುವುದಿಲ್ಲ, ಯಾರೂ ಮುಟ್ಟುವುದಿಲ್ಲ” ಎಂದು ಅಲ್ಲಿಯ ಸುಂದರಿ ಅಭಯವನ್ನಿತ್ತು ಒಳಗೆ ಕರೆದೊಯ್ದಳು. ತಮ್ಮ ಹೋಟೆಲಿಗೆ ಬರಬೇಕಿದ್ದ ಗಿರಾಕಿಗಳು ಬೇರೆ ಹೋಟೆಲ್ ಹುಡುಕುವುದಕ್ಕೆ ಹೋಗಿದ್ದಾರಲ್ಲ ಎಂಬ ಆತಂಕದ ಸಣ್ಣ ಎಳೆಯೂ ಅವಳಲ್ಲಿ ಇರಲಿಲ್ಲ. ನಮಗೆ ನಿಜಕ್ಕೂ ಅಚ್ಚರಿ ಆಯ್ತು. ಬೇಕಾದರೆ ರಸ್ತೆ ಬದಿಯಲ್ಲಿ ಚಳಿಯಲ್ಲಿ ಒದ್ದಾಡಲಿ ಎಂದುಕೊಳ್ಳುವ ಬದಲು ಆಕೆ ನಮ್ಮನ್ನು ಅತಿಥಿಗಳು ಎಂಬಂತೆ ಆದರದಿಂದ ಕರೆದು ಹೋಟೆಲ್ ಒಳಗೆ ಕೂರಿಸಿದಳು. ಅಷ್ಟು ಸಾಲದು ಎಂಬಂತೆ ಒಳಗಿನಿಂದ ಬಿಸಿಬಿಸಿ ಚಹಾ ತರಿಸಿ ನಮಗೆ ಕೊಟ್ಟು “ಇದನ್ನು ಮೊದಲು ಕುಡಿಯಿರಿ, ಚಳಿಗೆ ಹಿತವೆನಿಸೀತು” ಅಂದಳು. ಅದು ನಮ್ಮ ಕೈಗೆ ಬರುವಷ್ಟರಲ್ಲಿ ಮುಕ್ಕಾಲು ಪಾಲು ತಣ್ಣಗಾಗಿತ್ತು. ಆದರೂ ಆಕೆಯ ವರ್ತನೆ ನಮಗೆ ಬಹಳ ಆಪ್ಯಾಯಮಾನ ಎನಿಸಿತು. ದೇವರೇ ಎದುರು ಬಂದಂತೆ ಇದ್ದಳು ಆ ಸುಂದರಿ.
(ಮುಂದುವರಿಯುವುದು)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ