ಮಂಗಳವಾರ, ಅಕ್ಟೋಬರ್ 23, 2018

ಹಿರಿಯಡಕ ಗೋಪಾಲರಾಯರ ‘ಮದ್ದಳೆಯ ಮಾಯಾಲೋಕ’


ಯಕ್ಷಗಾನ ಕೃತಿ ಪರಿಚಯ ಮಾಲಿಕೆ-3

ಮದ್ದಳೆಯ ಮಾಯಾಲೋಕ
ಹಿರಿಯಡಕ ಗೋಪಾಲರಾಯರ ನೆನಪುಗಳು
ನಿರೂಪಣೆ: ಕೆ. ಎಂ. ರಾಘವ ನಂಬಿಯಾರ್
ಪ್ರಕಾಶನಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ
ವರ್ಷ1997           
ಪುಟಗಳುXVI + 204          
ಬೆಲೆರೂ. 100

ಹಿರಿಯಡಕ ಗೋಪಾಲರಾಯರು ತಮ್ಮ ಬದುಕಿನ ನೂರನೆಯ ವಸಂತಕ್ಕೆ ಕಾಲಿಡುತ್ತಿರುವ ವೇಳೆಗೆ ಅವರ ಬದುಕಿನ ಸಿಂಹಾವಲೋಕನದಂತಿರುವಮದ್ದಳೆಯ ಮಾಯಾಲೋಕವನ್ನು ಸುತ್ತಿ ಬರುವ ಅವಕಾಶ ದೊರೆತದ್ದು ಒಂದು ಭಾಗ್ಯವೆನ್ನದೆ ವಿಧಿಯಿಲ್ಲ. ಪುಸ್ತಕ ಪ್ರಕಟವಾಗಿ 20 ವರ್ಷಗಳಾದರೂ ಈವರೆಗೆ ಅದನ್ನು ಓದದೆ ಇದ್ದುದು ನನಗಂತೂ ಬಲುದೊಡ್ಡ ನಷ್ಟವೇ.

ಗೋಪಾಲರಾಯರ ನೆನಪುಗಳಿಗೆ ಕಿವಿಗೊಡುವುದಕ್ಕೂ, ಯಕ್ಷಗಾನದ ಒಂದು ಶತಮಾನದ ಇತಿಹಾಸಕ್ಕೆ ಎದುರಾಗುವುದಕ್ಕೂ ಏನೂ ವ್ಯತ್ಯಾಸ ಇಲ್ಲ. ಇಷ್ಟೊಂದು ಸುದೀರ್ಘ ಅವಧಿಯಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಆದ ಅಗಾಧ ಬದಲಾವಣೆಗಳಿಗೆ ಅವರು ಜೀವಂತ ಸಾಕ್ಷಿ. ದೀವಟಿಗೆ ಬೆಳಕಿನಲ್ಲಿ ನಡೆಯುತ್ತಿದ್ದ ಆಟಗಳು ವಿದ್ಯುದ್ದೀಪದ ರಂಗಸ್ಥಳಕ್ಕೆ ವರ್ಗಾವಣೆಯಾದದ್ದು, ನಿಂತೇ ಇರುಳು ಕಳೆಯುತ್ತಿದ್ದ ಹಿಮ್ಮೇಳಕ್ಕೆ ಪಡಿಮಂಚ ಬಂದದ್ದು, ಪುಂಗಿಯ ಬದಲು ಹಾರ್ಮೋನಿಯಂ, ನಂತರ ಎಲೆಕ್ಟ್ರಾನಿಕ್ ಶ್ರುತಿ ಬಂದದ್ದು, ಮುಂಡಾಸು, ವೇಷ, ಬಣ್ಣಗಾರಿಕೆಯಲ್ಲಿ ಅಪಾರ ಬದಲಾವಣೆಯಾದದ್ದು, ಪ್ರಯೋಗಶೀಲತೆಯ ಹೆಸರಲ್ಲಿ ಸಿನಿಮಾ-ಸರ್ಕಸ್ಸುಗಳೆಲ್ಲ ಯಕ್ಷಗಾನವಾದದ್ದುಎಲ್ಲ ಸ್ಥಿತ್ಯಂತರಗಳನ್ನು ಕಣ್ಣಾರೆ ಕಂಡ ಅಪೂರ್ವ ವ್ಯಕ್ತಿತ್ವ ಅವರದ್ದು.

ಗೋಪಾಲರಾಯರನ್ನುಛಲ ಮತ್ತು ಸಾಧನೆಯಿಂದ ಸಿದ್ಧಿ ಪಡೆದ” “ಮದ್ದಳೆಗೆ ಮಾತು ಬರಿಸಿದ ಮಾಂತ್ರಿಕಎಂದು ತಮ್ಮ ಮುನ್ನುಡಿಯಲ್ಲಿ ಬಣ್ಣಿಸುವ ಪ್ರೊ. ಲೀಲಾ ಭಟ್, “ ಕೃತಿ ಅವರ ಬದುಕಿನ ಇತಿವೃತ್ತ ಮಾತ್ರವಲ್ಲ, 60 ವರ್ಷಗಳ ಯಕ್ಷಗಾನ ಪರಂಪರೆಯ ಇತಿಹಾಸವೂ ಆಗಿರುತ್ತದೆಎಂದಿದ್ದಾರೆ.

ಅವಿಭಕ್ತ ಕುಟುಂಬದ ಹಿನ್ನೆಲೆ, ತಕ್ಕಮಟ್ಟಿಗೆ ಚೆನ್ನಾಗಿದ್ದ ಬದುಕಿಗೆ ಬಡತನ ಅಂಟಿಕೊಂಡದ್ದು, ಅದರೊಂದಿಗೆ ಪ್ರತಿದಿನ ಸೆಣಸಾಟ, ಬೇಸಾಯ, ಬೀದಿಬದಿ ವ್ಯಾಪಾರ, ಅರ್ಧಕ್ಕೇ ನಿಂತ ವಿದ್ಯಾಭ್ಯಾಸ, ಇವೆಲ್ಲದರ ನಡುವೆ ಹೆಚ್ಚಿದ ಮದ್ದಳೆಯ ಹುಚ್ಚುರಾಯರ ನೆನಪುಗಳು ಎಳೆಯೆಳೆಯಾಗಿ ಬಿಚ್ಚಿಕೊಂಡು ಹೋಗುತ್ತವೆ.

ಯಕ್ಷಗಾನದ ಎಲ್ಲ ಅಂಗಗಳಲ್ಲಿ ನನ್ನ ಆಸಕ್ತಿ ಇತ್ತಾದರೂ ಮದ್ದಳೆಯ ಮೇಲಿನ ಮೋಹ ಬಲವಾಗಿತ್ತು. ಆದರೆ ವಿದ್ಯೆ ಸುಲಭವಲ್ಲ. ‘ಛಾಪುಸರಿಯಾಗಿ ಬರುವುದಕ್ಕೆ ಅಷ್ಟೊಂದು ಪ್ರಯಾಸ. ಐವತ್ತು ಸಾರಿತ್ತಾಎಂದು ಬಾರಿಸಿದರೆ ಒಮ್ಮೆ ಸರಿಯಾದ ಛಾಪಿನ ನಾದ ಕಾಣಿಸುತ್ತದೆ. ಮತ್ತೆ ಮುಂಚಿನಂತೆಯೆ. ಹಠ ಹಿಡಿದು ನಾದದ ಸಾಧನೆ ಮಾಡುತ್ತಿದ್ದೆ. ಸಮಾಧಾನವಾಗುವವರೆಗೂ ಉರುಳಿಕೆ ಅಭ್ಯಾಸ ಮಾಡುತ್ತಿದ್ದೆ…” (ಪು.17) ರಾಯರು ಹೇಳುತ್ತಾ ಹೋಗುತ್ತಿದ್ದರೆ ವಿದ್ಯಾರ್ಥಿಯೊಬ್ಬನಿಗಿರಬೇಕಾದ ಶ್ರದ್ಧೆ ಮತ್ತು ಛಲದ ವಿಶ್ವರೂಪದರ್ಶನವಾಗುತ್ತದೆ.

ಗೋಪಾಲರಾಯರ ಕೃತಿ ಪ್ರಮಾಣಸಿದ್ಧವಾಗಿ ಅವರು ಕಂಡುಂಡ ನೋವು, ನಲಿವು ಮತ್ತು ಜೀವನಾನುಭವದ ರಸಘಟ್ಟಿಯಾಗಿದೆ. ದುಡ್ಡಿಗೂ ಮನುಷ್ಯನಿಗೂ ಮೌಲ್ಯವಿದ್ದ ಕಾಲದ ಕಥಾನಕವಿದು. ಹಳ್ಳಿಯಿಂದ ಹಳ್ಳಿಗೆ ಕಾಲುನಡಿಗೆಯ  ಪ್ರಯಾಣ, ಅತ್ಯಲ್ಪ ಸಂಭಾವನೆ, ಆದರೆ ಪ್ರಾಮಾಣಿಕ ಸೇವೆ- ಹೀಗೆ ಚಾರಿತ್ರಿಕವಾಗಿಯೂ ಕೃತಿಗೆ ಮಹತ್ವವಿದೆ. ಕೃತಿಯಲ್ಲಿ ಬರುವ ಪ್ರತಿಯೊಂದು ಪಾತ್ರ ಚಿತ್ರಣವೂ ಶಿಲ್ಪಿಯು ಸರ್ವಾಂಗ ಸುಂದರವಾಗಿ ಕಡೆದ ಮೂರ್ತಿಯಂತಿದೆಯಕ್ಷಗಾನದ ಹೆಸರಾಂತ ಹಿರಿಯರಾದ ಹಾರಾಡಿ ರಾಮ ಗಾಣಿಗ, ವೀರಭದ್ರ ನಾಯಕ, ಶೇಷಗಿರಿ ಕಿಣಿ ಮೊದಲಾದ ಅವರ ಸಂಪರ್ಕಕ್ಕೆ ಬಂದವರೆಲ್ಲರ ಗುಣದೋಷಗಳನ್ನು ರೋಚಕವಾಗಿ ಕಥನಿಸಿದ್ದಾರೆಎನ್ನುತ್ತಾರೆ ಪ್ರೊ. ಲೀಲಾ ಭಟ್ (ಪು. vii).

ಯಕ್ಷಗಾನಕ್ಕೆ ಮಹಿಳೆಯರ ಪ್ರವೇಶವಿಲ್ಲದ ಕಾಲದಲ್ಲೇ ಕುಂಜಾಲು ಯಮುನೆ ಎಂಬಾಕೆ ಭಾಗವತಿಕೆ ಮಾಡುತ್ತಿದ್ದುದು ಮತ್ತು ಮದ್ದಳೆ ನುಡಿಸುತ್ತಿದ್ದುದು (ಪು. 13), ನಾಗಪ್ಪಯ್ಯ ಕಮ್ತಿಯವರು ತಮ್ಮ ಐಗಳ ಮಠದಲ್ಲಿ ಯಕ್ಷಗಾನದ ಮೂಲಕ ಓದು ಬರಹವನ್ನು ಕಲಿಸುತ್ತಿದ್ದುದು (ಪು. 16), ಪತ್ರಕರ್ತ ಎಂ. ವಿ. ಹೆಗ್ಡೆ ಬರೆದಸ್ವರಾಜ್ಯ ವಿಜಯಎಂಬ ಸ್ವಾತಂತ್ರ್ಯ ಸಂಗ್ರಾಮದ ಪ್ರಸಂಗವನ್ನು ತಾಳಮದ್ದಳೆಗೆ ಅಳವಡಿಸಿದ್ದು (ಪು. 32-33), ರಾಯರಏರುಮದ್ದಳೆಎಂಬ ಹೊಸ ಶೋಧ ಬಡಗು ಯಕ್ಷಗಾನಕ್ಕೆ ಶಾಶ್ವತ ಕೊಡುಗೆಯಾದದ್ದು (ಪು. 46), 1962ರಲ್ಲಿ ಯಕ್ಷಗಾನ ಹಿಮ್ಮೇಳದಲ್ಲಿ ಮೊದಲ ಬಾರಿಗೆ ಪಿಟೀಲು ಹಾಗೂ ಸ್ಯಾಕ್ಸೋಫೋನ್ ಬಳಸಿದ್ದು (ಪು. 151), 1968-69ರಲ್ಲಿ ಪೀಟರ್ ಜೆ. ಕ್ಲಾಸ್ ಮೊದಲ ಬಾರಿಗೆ ಯಕ್ಷಗಾನ ಪ್ರಸಂಗದ ಚಿತ್ರೀಕರಣ ನಡೆಸಿ ಅಮೇರಿಕಕ್ಕೆ ಕೊಂಡೊಯ್ದದ್ದು (ಪು. 156), ಡಾ. ಶಿವರಾಮ ಕಾರಂತರ ನಿರ್ದೇಶನದಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯ ಯಕ್ಷಗಾನ ತರಬೇತಿ ನೀಡಿದ್ದು (ಪು. 170-171), ದೂರದರ್ಶನದಲ್ಲಿ ಮೊದಲ ಬಾರಿಗೆ ಯಕ್ಷಗಾನ ಪ್ರಸಾರವಾದದ್ದು, ಅಮೇರಿಕದ ಸಂಶೋಧಕಿ ಮಾರ್ತಾ ಆಸ್ಟನ್ಗೆ ಯಕ್ಷಗಾನ ಕಲಿಸಿದ್ದು, ಆಕೆಯ ಆಸಕ್ತಿಯ ಕಾರಣವಾಗಿ ಅಮೇರಿಕ ಹಾಗೂ ಕೆನಡಾಗಳಲ್ಲಿ 27 ಕಡೆ ಯಕ್ಷಗಾನ ಪ್ರದರ್ಶನಗಳನ್ನು ನೀಡಿದ್ದುಹೀಗೆ ಹತ್ತಾರು ಕುತೂಹಲಕರ ವಿಚಾರಗಳು ಪುಸ್ತಕದುದ್ದಕ್ಕೂ ತೆರೆದುಕೊಳ್ಳುತ್ತಾ ಹೋಗುತ್ತವೆ.

ಕಾಲದ ಯಕ್ಷಗಾನದ ವೈಶಿಷ್ಟ್ಯತೆಯನ್ನು ಗೋಪಾಲರಾಯರ ಮಾತುಗಳಲ್ಲಿ ಕೇಳುವುದೇ ಸೊಗಸು: “… ಅಭಿನಯದಲ್ಲಿ ಇಡಿಯ ದೃಶ್ಯಕಲ್ಪನೆಗೆ ಎಲ್ಲರ ಧ್ಯಾನ ಹರಿಯುತ್ತಿತ್ತು. ತಾನು ಪ್ರತ್ಯೇಕ ರಂಜಿಸಿ ಕಾಣಿಸಿಕೊಳ್ಳಬೇಕೆಂಬ ಇರಾದೆ ಕಲಾವಿದರಲ್ಲಿ ಇರಲಿಲ್ಲ.

ಪ್ರತಿ ಕಲಾವಿದನಿಗೂ, ಪಾತ್ರಕ್ಕೂ ತಾನು ಎದ್ದು ಕಾಣಿಸುವ ಸಂದರ್ಭಗಳು ಪ್ರಸಂಗದಲ್ಲೆ ಬರುತ್ತವೆ. ಅದಕ್ಕೆ ವಿಶೇಷ ಮೆಹನತ್ತು ಏನೂ ಬೇಡ. ಭಾಗವತಿಕೆಯೂ ಪಾತ್ರಾಭಿನಯವೂ ಸನ್ನಿವೇಶದಲ್ಲಿ ಮುಳುಗಿರುತ್ತಿತ್ತು ಹೊರತು ಪ್ರೇಕ್ಷಕರ ಜತೆ ವಿಹರಿಸುತ್ತಿರಲಿಲ್ಲ.

ಹಳೆಗಾಲದ ಕಲಾ ಪ್ರದರ್ಶನದಲ್ಲಿ ಕಲಾವಿದರಿಗೆ ಪ್ರೇಕ್ಷಕರ ಗೊಡವೆ ಇಲ್ಲ. ತಾವಾಯಿತು, ತಮ್ಮ ಕಸುಬಾಯಿತು. ಯಾರು ಮೆಚ್ಚಲಿ ಬಿಡಲಿ, ಜನ ಇರಲಿ ಇಲ್ಲದಿರಲಿ, ಆಟ ಶುರುವಾಯಿತೆಂದರೆ ಪಾತ್ರಧಾರಿ, ಪಾತ್ರವೇ ಆಗಿಬಿಡುತ್ತಾನೆ. ತನ್ನ ಗರಿಷ್ಠ ಸಾಧ್ಯತೆಯನ್ನು ತೋರುತ್ತಾನೆ” (ಪು. 99-100).

ರಾಯರುಹಳೆಗಾಲದ ಯಕ್ಷಗಾನ ಬಗ್ಗೆ ಹೇಳುತ್ತಿದ್ದರೆ  “ಹೊಸಗಾಲದ ಯಕ್ಷಗಾನ ಬಗ್ಗೆ ಓದುಗ ನೆನಪಿಸಿಕೊಳ್ಳದೆ ಇರುವುದು ಸಾಧ್ಯವೇ ಇಲ್ಲ.

ಕಾಲದಲ್ಲಿ ಕಲೆಯ ಕಸುಬುಗಾರಿಕೆಯಲ್ಲಿ ಒಬ್ಬರ ನಕಲನ್ನು ಇನ್ನೊಬ್ಬರು ತೆಗೆಯುವ ಕ್ರಮ ಇರಲಿಲ್ಲ. ಪ್ರತಿಯೊಬ್ಬನಿಗೂ ತನ್ನ ಸ್ವಂತ ಕಲಾವಂತಿಕೆ ಅರಳಬೇಕು. ಹೋಗಬೇಕಾದ ದಾರಿಯ ಬಗೆಗೆ ಮಾತ್ರ ಹಿರಿಯರ ಮಾರ್ಗದರ್ಶನ” (ಪು. 101) ಎಂಬ ಮಾತಂತೂ ಒಂದು ಸಂಹಿತೆಗೆ ಸಮಾನವಿದೆ.

ಕೆದಕಿದಷ್ಟೂ ಅರಳಿ ಬರುವ ಗೋಪಾಲರಾಯರ ನೆನಪುಗಳಲ್ಲಿ ರಂಗದ ಕುರಿತು, ಹಳೆಗಾಲದ ರೀತಿನೀತಿಗಳ ಕುರಿತು, ಕಲಾವಿದರ, ಜನಸಾಮಾನ್ಯರ ನೋವು-ನಲಿವುಗಳ ಕುರಿತು ವಿವರವಿದೆ. ಹೇಳುಗೆಯಲ್ಲಿ ಆಡಂಬರವಾಗಲಿ, ಮುಚ್ಚುಮರೆಯಾಗಲಿ, ಸೋಗಲಾಡಿತನವಾಗಲಿ ಇಲ್ಲ. ಬೆಟ್ಟದಿಂದ ಹರಿದುಬರುವ ತಿಳಿನೀರಿನಿಂತೆ ಮಾಹಿತಿ ನಿಷ್ಕಲ್ಮಷ. ನಿಜ ಅರ್ಥದಲ್ಲಿ ಅವರು ಗಾಂಧೀವಾದಿಎನ್ನುತ್ತಾರೆ ಇಡೀ ಪುಸ್ತಕದ ನಿರೂಪಕ ಶ್ರೀ ನಂಬಿಯಾರ್.

ಹಾಗೆ ನೋಡಿದರೆ ರಾಯರ ನೆನಪುಗಳ ರಂಗಸ್ಥಳ ಇಷ್ಟೊಂದು ಆಪ್ಯಾಯಮಾನವಾಗುವಲ್ಲಿ ಶ್ರೀ ನಂಬಿಯಾರರ ಪಾತ್ರ ಬಲುದೊಡ್ಡದು. ಸರಳ, ನೇರ, ಸಂಕ್ಷಿಪ್ತ ವಾಕ್ಯಗಳು, ಸಣ್ಣಸಣ್ಣ ವಾಕ್ಯವೃಂದಗಳು, ರಾಯರೇ ಎದುರು ಕುಳಿತು ಮಾತನಾಡುತ್ತಿದ್ದಾರೆ ಎಂದು ಅನಿಸುವಂತಹ ನಿರಾಡಂಬರ ನಿರೂಪಣೆ. ನಂಬಿಯಾರರೊಳಗಿನ ಪತ್ರಕರ್ತಮದ್ದಳೆಯ ಮಾಯಾಲೋಕದಲ್ಲಿ ನೂರು ಪ್ರತಿಶತ ಕೆಲಸ ಮಾಡಿದ್ದಾನೆ. ಪ್ರತೀ ವಾರ ಎಂಬಂತೆ ಸುಮಾರು ಎರಡು ವರ್ಷಗಳ ಕಾಲ ನಂಬಿಯಾರರು ಗೋಪಾಲರಾಯರನ್ನು ಸಂದರ್ಶಿಸಿದ ಫಲವೇ ಪುಸ್ತಕ. ಒಬ್ಬ ಅಪ್ರತಿಮ ಅಧ್ಯಯನಶೀಲ ಶ್ರದ್ಧಾಳುವಿಗಷ್ಟೇ ಇಂತಹದೊಂದು ಕೆಲಸ ಸಾಧ್ಯ.

ಇಡೀ ಪುಸ್ತಕವನ್ನು ಓದಿಮುಗಿಸಿದ ಮೇಲೆ ಪುಸ್ತಕದ ಮೊದಲ ವಾಕ್ಯವನ್ನು ಮತ್ತೊಮ್ಮೆ ಓದಿ ಮೂಕನಾಗಿ ಕುಳಿತೆ. ವಾಕ್ಯ ಹೀಗಿದೆ: “ಹೇಳಿಕೊಳ್ಳುವಂಥ ದೊಡ್ಡ ಬದುಕೇನೂ ನನ್ನದಲ್ಲ”.

 - ಸಿಬಂತಿ ಪದ್ಮನಾಭ ಕೆ. ವಿ.