- ಪುಸ್ತಕ: ಅರ್ಥಾಲೋಕ
- ಲೇಖಕರು: ರಾಧಾಕೃಷ್ಣ ಕಲ್ಚಾರ್
- ಪ್ರಕಾಶಕರು: ಜ್ಞಾನಗಂಗಾ ಪುಸ್ತಕ ಮಳಿಗೆ, ಪುತ್ತೂರು
- ಬೆಲೆ: ರೂ. 105
ಮಾತಿನಿಂದಲೇ ಮಂಟಪ ಕಟ್ಟುವ ಕಲೆಯೆಂದು ಖ್ಯಾತಿ ಪಡೆದ ಯಕ್ಷಗಾನ ತಾಳಮದ್ದಲೆಯನ್ನು ಒಂದು ರಂಗಭೂಮಿಯಾಗಿ ನೋಡುವ ಪ್ರಯತ್ನವನ್ನು ಹಿರಿಯ ಅರ್ಥಧಾರಿ, ಲೇಖಕ ರಾಧಾಕೃಷ್ಣ ಕಲ್ಚಾರ್ ತಮ್ಮ ‘ಅರ್ಥಾಲೋಕ’ ಕೃತಿಯಲ್ಲಿ ಮಾಡಿದ್ದಾರೆ. ಇದರ ಮೂಲಕ ಯಕ್ಷಗಾನ ಸಾಹಿತ್ಯಕ್ಕೆ ಒಂದು ಹೊಸ ಗಟ್ಟಿಕಾಳು ಸೇರ್ಪಡೆಯಾದಂತಾಗಿದೆ. ಅಪೂರ್ವ ಸಂವಹನಸಾಧ್ಯತೆಯುಳ್ಳ ತಾಳಮದ್ದಲೆಯನ್ನು ವ್ಯವಸ್ಥಿತ ಅಧ್ಯಯನಕ್ಕೊಳಪಡಿಸುವ ಕೃತಿಗಳೇ ವಿರಳವಾಗಿರುವಾಗ, ಅದರ ಅಂತರಂಗ ಬಹಿರಂಗಗಳನ್ನು ಬಲ್ಲ ಕಲಾವಿದರೊಬ್ಬರಿಂದ ಇಂತಹ ಪ್ರಯತ್ನವಾಗಿರುವುದು ಒಂದು ಗಮನಾರ್ಹ ಸಂಗತಿ.
ತಾಳಮದ್ದಲೆ ಅರ್ಥಧಾರಿಗಳಾದವರು ರೂಢಿಸಿಕೊಳ್ಳಬೇಕಾದ ಅರ್ಹತೆ, ಪರಿಶ್ರಮಗಳಿಂದ ತೊಡಗಿ, ತಾಳಮದ್ದಲೆಯ ಕಲಾತ್ಮಕತೆಯನ್ನು ಉಳಿಸಿಕೊಳ್ಳುವಲ್ಲಿ ಕಲಾವಿದ ಹಾಗೂ ಪ್ರೇಕ್ಷಕನಿಗಿರಬೇಕಾದ ಎಚ್ಚರ, ಕಲಾಮೌಲ್ಯವನ್ನು ಉಳಿಸಿಕೊಂಡೇ ಸಿದ್ಧಮಾದರಿಗಳನ್ನು ಮೀರುವಲ್ಲಿ ಅರ್ಥಧಾರಿಗಿರಬೇಕಾದ ಜವಾಬ್ದಾರಿ, ಪುರಾಣದ ಆವರಣದೊಳಗಿದ್ದುಕೊಂಡೇ ತಾಳಮದ್ದಲೆಯೆಂಬ ಸಾಂಪ್ರದಾಯಿಕ ಕಲೆ ವರ್ತಮಾನದೊಂದಿಗೆ ಸಮೀಕರಿಸಿಕೊಳ್ಳಬೇಕಾದ ಅನಿವಾರ್ಯತೆ- ಹೀಗೆ ಹಲವು ಆಯಾಮಗಳವರೆಗೆ ಲೇಖಕರ ಚಿಂತನೆಯ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಪುಸ್ತಕದ ಆರಂಭದಲ್ಲಿ ತಾಳಮದ್ದಳೆಯ ಕುರಿತಾದ ಒಂದು ಪರಿಚಯಾತ್ಮಕ ಲೇಖನವೂ ಇರುವುದರಿಂದ ಈ ಕಲೆಗೆ ವಿಶೇಷ ಪ್ರವೇಶ ಇಲ್ಲದವರೂ ಅಧ್ಯಯನದ ದೃಷ್ಟಿಯಿಂದ ಗಮನಿಸುವುದಕ್ಕೆ ಸಾಧ್ಯ.
“ಅರ್ಥಗಾರಿಕೆ ಎಂದರೆ ಪಾತ್ರದ ಕುರಿತು ಮಾಡುವ ವಕಾಲತ್ತು ಅಲ್ಲ. ಪಾತ್ರದ ಮೇಲಿನ ಉಪನ್ಯಾಸವೂ ಅಲ್ಲ. ಪದ್ಯದ ವ್ಯಾಖ್ಯಾನವೂ ಅಲ್ಲ. ಪಾತ್ರವಾಗಿ ತಾನು ನಟಿಸುವುದು ಎಂಬ ಅರಿವಿರಬೇಕು” ಎನ್ನುವ ಮೂಲಕ ಲೇಖಕರು ತಾಳಮದ್ದಲೆಯಲ್ಲಿ ಮಾತಿನಷ್ಟೇ ಅದನ್ನು ಆಡುವವನ ಜವಾಬ್ದಾರಿಯೂ ತುಂಬ ದೊಡ್ಡದು ಎಂಬುದನ್ನು ಪ್ರತಿಪಾದಿಸಿದ್ದಾರೆ. “ಮಾತಿನ ಗುಣವೇ ಅಂತಹುದು. ಅದೊಂದು ಇಬ್ಬಾಯ ಕತ್ತಿಯಂತೆ. ಎಚ್ಚರವಿದ್ದಾಗ ಬಹು ಉಪಯುಕ್ತ. ಅದಿಲ್ಲದ ಗಳಿಗೆಯಲ್ಲಿ ಹಿಡಿದವನ ಕೈಯನ್ನೇ ಕತ್ತರಿಸುವ ಅಪಾಯವೂ ಇದೆ” ಎಂಬ ಅವರ ಮಾತಿನಲ್ಲೂ ಈ ಸೂಚನೆ ಇದೆ.
ಕೃತಿಯಲ್ಲಿನ ಲೇಖನಗಳು ತಾಳಮದ್ದಲೆಯನ್ನು ವಿವಿಧ ಆಯಾಮಗಳಿಂದ ಚರ್ಚಿಸಿದರೂ ಈ ಕಲೆ ತನ್ನ ಕಲಾತ್ಮಕತೆಯನ್ನು ಉಳಿಸಿಕೊಳ್ಳುವಲ್ಲಿ ಮಾಡಬೇಕಾದ್ದೇನು ಎಂಬ ಮೂಲಕಾಳಜಿ ಪ್ರಧಾನ ಧ್ವನಿಯಾಗಿ ಗೋಚರಿಸುತ್ತದೆ. ಒಂದು ಕಲೆಯಾಗಿ ತಾಳಮದ್ದಲೆ ಸೋತಿತು ಎಂದಾದರೆ ಅದಕ್ಕೆ ಕಲಾವಿದ-ಪ್ರೇಕ್ಷಕರಿಬ್ಬರೂ ಕಾರಣ ಎಂಬುದನ್ನು ಲೇಖಕರು ಸ್ಪಷ್ಟವಾಗಿ ಹೇಳಿದ್ದಾರೆ. ಕಲಾವಿದ ಕೇವಲ ಶ್ರೋತೃಗಳ ‘ಜನಪ್ರಿಯ’ ನಿರೀಕ್ಷೆಗಳನ್ನೇ ಪ್ರಧಾನವೆಂದು ಗಣಿಸಿ, ಅವರ ಚಪ್ಪಾಳೆಗಳನ್ನೇ ಯಶಸ್ಸಿನ ಮಾನದಂಡವೆಂದು ಭಾವಿಸಿ, ತನ್ನ ಪಾತ್ರ ಸ್ವಭಾವ ಗೌರವಗಳನ್ನು ಮರೆತು ಅಗ್ಗದ ರಂಜನೆಗೆ ಬಿದ್ದರೆ ಕಲೆ ಸೋಲುತ್ತದೆ ಎಂಬುದನ್ನು ‘ತಾಳಮದ್ದಲೆ ಕಲೆಯಾಗುವ ಬಗೆ’, ‘ಸನ್ನಿವೇಶ ನಿರ್ಮಾಣ ಮತ್ತು ಪಾತ್ರಚಿತ್ರಣ’, ‘ಪಾತ್ರಗೌರವ’ ಮೊದಲಾದ ಲೇಖನಗಳು ಸೋದಾಹರಣವಾಗಿ ವಿಶ್ಲೇಷಿಸುತ್ತವೆ. “ತನ್ನ ನಿರ್ವಹಣೆಯನ್ನು ಪ್ರೇಕ್ಷಕ ಮೆಚ್ಚುವುದಿಲ್ಲ ಎನ್ನುವುದು ಅರಿವಿಗೆ ಬಂದಾಕ್ಷಣ ಕಲಾವಿದ ಜಾಗೃತನಾಗುತ್ತಾನೆ. ತಾನೆಲ್ಲಿ ಬೇಡಿಕೆ ಕಳಕೊಳ್ಳುತ್ತೇನೋ ಎಂಬ ಭೀತಿಯಿಂದ ಕೀಳು ಗಿಮಿಕ್ಕುಗಳಿಗೆ ಸ್ವಯಂ ಕಡಿವಾಣ ತೊಡಿಸುತ್ತಾನೆ. ಪ್ರೇಕ್ಷಕನ ಇಂತಹ ಎಚ್ಚರವೊಂದು ತಾಳಮದ್ದಲೆಯಂತಹ ರಂಗಭೂಮಿಯ ಪತನವನ್ನು ಯಶಸ್ವಿಯಾಗಿ ತಡೆಯಬಲ್ಲುದು. ಇಲ್ಲವಾದಲ್ಲಿ ಮೂಳೆಯನ್ನು ಜಗಿಯುತ್ತ, ತನ್ನ ನೆತ್ತರನ್ನೇ ಸವಿಯುವ ನಾಯಿಯ ಪಾಡು ಪ್ರೇಕ್ಷಕನದ್ದಾಗುತ್ತದೆ” ಎಂಬ ಲೇಖಕರ ಮಾತು ತಾಳಮದ್ದಳೆಯಲ್ಲದೆ ಇಂದಿನ ಆಧುನಿಕ ಮಾಧ್ಯಮಗಳ ಕುರಿತಾದ ಸಾರ್ವಜನಿಕ ಟೀಕೆಗೂ ಉತ್ತರದಂತಿದೆ.
ಹಾಗೆಂದು ಲೇಖಕರು ಅಧುನಿಕತೆಯ ವಿರೋಧಿಗಳಲ್ಲ. ಸಾಂಪ್ರದಾಯಿಕ ಕಲೆಯೊಂದು ವರ್ತಮಾನಕ್ಕೆ ಹತ್ತಿರವಾಗದೇ ಹೋದರೆ ಹೆಚ್ಚುಕಾಲ ಉಳಿಯದು ಎಂಬುದು ಅವರ ಗಟ್ಟಿನಿಲುವು. “ತಾಳಮದ್ದಲೆ ಯಾವತ್ತೂ ಪುರಾಣ ಮತ್ತು ಆಧುನಿಕತೆಗಳ ನಡುವೆ ತುಯ್ದಾಡುತ್ತ ಇರುವ ರಂಗಭೂಮಿ. ಆಧುನಿಕತೆಯು ಪುರಾಣದ ಆವರಣದೊಳಗಿನಿಂದಲೇ ಪ್ರಕಟವಾಗಬೇಕಾದ್ದು ಅಗತ್ಯ” ಎನ್ನುವ ಅವರು “ಪುರಾಣದ ಪಾತ್ರವೊಂದು ಕೇವಲ ಪೌರಾಣಿಕ ವಿವರಗಳಲ್ಲಿ ಮುಳುಗದೆ ಕೇಳುಗನಿಗೆ ಸಮಕಾಲೀನ ಸ್ಪಂದನವನ್ನೂ ಉಂಟುಮಾಡುತ್ತಿರಬೇಕು. ಇದು ಜೀವಂತ ರಂಗಭೂಮಿಯ ಅನಿವಾರ್ಯ... ಭಾಷೆ ಆಧುನಿಕವಾಗದೆ ಅನುಭವವು ಮಾತ್ರ ಸಮಕಾಲೀನ ಸ್ಪಂದನವುಳ್ಳದ್ದಾಗಿ ಬರಬೇಕು” ಎನ್ನುತ್ತಾರೆ. ಅದರ ಜೊತೆಗೆ ಸಿದ್ಧಮಾದರಿಗಳನ್ನು ಮುರಿದು ಕಲಾವಿದ ತನ್ನತನವನ್ನು ಸ್ಥಾಪಿಸಬೇಕಾದರೆ ಆತನಲ್ಲಿ ಗಟ್ಟಿಯಾದ ವೈಚಾರಿಕ ಹಿನ್ನೆಲೆಯೂ ಇರಬೇಕು. ಸಾಂಪ್ರದಾಯಿಕ ಮನಸ್ಸುಗಳನ್ನು ನೂತನ ಪ್ರತಿಪಾದನೆಗೆ ಒಗ್ಗಿಸಿ, ಒಲಿಸಿಕೊಳ್ಳುವ ಚಾತುರ್ಯವಿರಬೇಕು ಎಂಬುದನ್ನೂ ಒತ್ತಿ ಹೇಳುತ್ತಾರೆ.
ಆಶುಕಲೆಯಾಗಿ ಬೆಳೆದುಬಂದ ತಾಳಮದ್ದಲೆಯ ಒಳಗೆ ಲೇಖಕರು ಪ್ರಬಲ ಸಂವಹನ ಮಾದರಿಯೊಂದರ ಹುಡುಕಾಟವನ್ನು ನಡೆಸಿರುವುದು ಇನ್ನೊಂದು ಉಲ್ಲೇಖನೀಯ ಅಂಶ. ‘ತಾಳಮದ್ದಲೆ: ಅರ್ಥಧಾರಿಯ ನೆಲೆಯಿಂದ’ ಹಾಗೂ ‘ಪ್ರದರ್ಶನ ಮತ್ತು ಪ್ರೇಕ್ಷಕ’ ಎಂಬ ಎರಡು ಲೇಖನಗಳು ಅಪ್ರಯತ್ನಪೂರ್ವಕವಾಗಿ ಈ ಕೆಲಸವನ್ನು ಮಾಡಿವೆ. ಸಂವಹನ ಕ್ಷೇತ್ರದ ಬಹುತೇಕ ಆಧುನಿಕ ಅಧ್ಯಯನಗಳು ಆಧಾರವಾಗಿಟ್ಟುಕೊಂಡಿರುವ ‘ಬಳಕೆ ಮತ್ತು ಸಂತೃಪ್ತಿ ಸಿದ್ಧಾಂತ’ದ ಹಿನ್ನೆಲೆಯಲ್ಲಿ ತಾಳಮದ್ದಳೆಯನ್ನು ಪರಿಶೀಲಿಸಬಹುದಾದ ಸಾಧ್ಯತೆಯನ್ನು ಈ ಲೇಖನಗಳು ನಿಚ್ಚಳವಾಗಿಸಿವೆ. ತಾಳಮದ್ದಲೆಯನ್ನು ಪ್ರೇಕ್ಷಕ, ಕಲಾವಿದ, ಸಹಕಲಾವಿದರು, ಸಂಘಟಕರು, ಪ್ರಾಯೋಜಕರು, ಮಾಧ್ಯಮಗಳು, ವಿಮರ್ಶಕರು ಒಟ್ಟುಸೇರಿದ ಒಂದು ಸಾವಯವ ಕಲೆಯಾಗಿ ನೋಡಿರುವುದು, ಪ್ರದರ್ಶನವೊಂದರ ಕುರಿತಾಗಿ ಪ್ರೇಕ್ಷಕರು ಇಟ್ಟುಕೊಂಡಿರುವ ಬೌದ್ಧಿಕ ಹಸಿವು, ಮನೋರಂಜನೆ, ಮೌಲ್ಯಗಳ ಹುಡುಕಾಟ, ಭಾವವಿರೇಚನ ಮೊದಲಾದ ಉದ್ದೇಶಗಳನ್ನು ಲೇಖಕರು ಗುರುತಿಸಿರುವುದು ಸಂವಹನದ ದೇಸೀ ಮಾದರಿಗಳ ಮರುಶೋಧನೆಗೆ ಪೀಠಿಕೆ ಹಾಕಿದಂತೆ ಇದೆ.
ತಾಳಮದ್ದಲೆಯೆಂಬ ಚಲನಶೀಲ ರಂಗಭೂಮಿಯ ನಿರ್ಮಾಣಕ್ಕೆ ಸಿಂಹಪಾಲು ನೀಡಿರುವ ‘ತಾಳಮದ್ದಲೆ ಸಂಘ’ಗಳ ಕುರಿತಾದ ವಿಶ್ಲೇಷಣೆ, ಸಾಮಾಜಿಕ ಪಲ್ಲಟಗಳಿಗೆ ತಾಳಮದ್ದಳೆ ಸ್ಪಂದಿಸಿದ ಕುರಿತ ಸೂಕ್ಷ್ಮ ಒಳನೋಟಗಳು, ತಾಳಮದ್ದಲೆಯ ಸಾಂಸ್ಕøತಿಕ ಇತಿಹಾಸವನ್ನು ನಿರೂಪಿಸುವ ಪ್ರಯತ್ನ ಕೃತಿಯ ಇತರ ಪ್ರಧಾನ ಅಂಶಗಳು. ಯಕ್ಷಗಾನಕ್ಕೆ ಸಾಹಿತ್ಯವಲಯದಿಂದ ನಿರೀಕ್ಷಿತ ಮನ್ನಣೆ ಲಭಿಸದಿರುವ ಕುರಿತೂ ಚರ್ಚಿಸಿರುವ ಲೇಖಕರು ಬಹುತೇಕ ಆಶುಸಾಹಿತ್ಯವಾಗಿಯೇ ಉಳಿದಿರುವ ಯಕ್ಷಗಾನವು ಸಾರ್ವತ್ರಿಕವಾಗಿ ಪಠ್ಯರೂಪದಲ್ಲಿ ದೊರೆಯಬೇಕಾದ, ಅದರ ಕುರಿತು ಅಧ್ಯಯನಪೂರ್ಣ ಕೃತಿಗಳು ಬರಬೇಕಾದ ಅವಶ್ಯಕತೆಯನ್ನು ಪ್ರತಿಪಾದಿಸಿದ್ದಾರೆ. ಅವರ ‘ಅರ್ಥಾಲೋಕ’ವು ಅದೇ ದಿಕ್ಕಿನಲ್ಲಿ ಒಂದು ದೃಢ ಹೆಜ್ಜೆಯಾಗಿರುವುದು ಶ್ಲಾಘನೀಯ.
- ಸಿಬಂತಿ ಪದ್ಮನಾಭ ಕೆ. ವಿ.