ಗುರುವಾರ, ನವೆಂಬರ್ 14, 2019

ಒಂದು ಚಂದದ ತಾಳಮದ್ದಳೆಯ ಗುಂಗಿನಲ್ಲಿ...


ಭರತಾಗಮನದಲ್ಲಿ ಅಂಥದ್ದೇನಿದೆ? ಕಾಡಿಗೆ ಹೋದ ರಾಮನನ್ನು ಕರೆತರುವುದಕ್ಕೆ ಭರತ ಹೋದ. ರಾಮ ಒಪ್ಪದ್ದರಿಂದ ಪಾದುಕೆಯೊಂದಿಗೆ ಹಿಂತಿರುಗಿದ- ಇಷ್ಟೇ ಅಲ್ವೋ?” ಅಂತ ತಾಳಮದ್ದಳೆಗೆ ಎರಡು ದಿನ ಇರುವಾಗ ಸ್ನೇಹಿತರೊಬ್ಬರು ಕೇಳಿದರು. “ಕಥೆ ಸರಳವಾಗಿದೆ, ಆದರೆ ವಿಷಯ ಅಷ್ಟೊಂದು ಸರಳ ಇಲ್ಲ. ಅದರೊಳಗೆ ತುಂಬ ಚಂದ ಉಂಟು” ಅಂತ ನಾನು ನನಗೆ ತಿಳಿದ ಹಾಗೆ ವಿವರಣೆ ಕೊಟ್ಟೆ. ಆದರೆ ನಿಜವಾಗಿಯೂ ಅದರೊಳಗೆ ತುಂಬ ಚಂದ ಉಂಟು ಅಂತ ತೋರಿಸಿಕೊಟ್ಟದ್ದು ಅಂದು ಅದನ್ನು ಚಿತ್ರಿಸಿದ ಕಲಾವಿದರು.

ಹೀಗೆ ಬರೆಯುವುದಕ್ಕೆ ಮುನ್ನ ತಾಳಮದ್ದಳೆಯ ವೀಡಿಯೋವನ್ನು ಎರಡು ಸಲ ಪೂರ್ತಿಯಾಗಿ ನೋಡಿದ್ದೇನೆ. ನೋಡಿದ ಮೇಲೆ ಬರೆಯದಿರುವುದಕ್ಕೆ ಆಗುತ್ತಿಲ್ಲ.

ತಾಳಮದ್ದಳೆಯನ್ನು ವಿಮರ್ಶೆ ಮಾಡುವಷ್ಟು ಅನುಭವವೂ ತಿಳುವಳಿಕೆಯೂ ಇಲ್ಲ ನನಗೆ. ಆದರೆ ಒಬ್ಬ ಪ್ರೇಕ್ಷಕನಾಗಿ ಯಾವುದು ಇಷ್ಟವಾಯಿತು ಅಂತ ಹೇಳಬಲ್ಲೆ. ಇದನ್ನು ಇನ್ನೂ ಒಂದಷ್ಟು ಮಂದಿ ಆಸ್ವಾದಿಸಬಹುದಲ್ಲ ಎಂಬ ಉದ್ದೇಶ ಕೂಡ.

ಆ ಪ್ರಸಂಗವೇ ಹಾಗೆ- ಒಂದು ಕಡೆಗೆ ಭಾವುಕತೆಯ ಓಟ, ಇನ್ನೊಂದು ಕಡೆಗೆ ಸ್ಥಿತಪ್ರಜ್ಞತೆಯ ಒಡ್ಡು. ಈ ಎರಡೂ ವೈಶಿಷ್ಟ್ಯಗಳನ್ನು ಅಷ್ಟೇ ಸಶಕ್ತವಾಗಿ ಕಟ್ಟಿಕೊಟ್ಟವರು ಹಿರಿಯ ಕಲಾವಿದರಾದ ಗಣರಾಜ ಕುಂಬ್ಳೆ ಹಾಗೂ ರಾಧಾಕೃಷ್ಣ ಕಲ್ಚಾರರು. ತಾಳಮದ್ದಳೆಗಳು ಇಷ್ಟವಾಗುವುದೇ ಅದಕ್ಕೆ. ಇಲ್ಲಿ ಕಲಾವಿದರಿಗೆ ಇರುವ ಸವಾಲುಗಳು ಬೇರೆ ತರಹದವು. ವೇಷಭೂಷಣ ಇಲ್ಲ, ಬಣ್ಣಗಾರಿಕೆ ಇಲ್ಲ, ನೃತ್ಯವಿಲ್ಲ, ಅಭಿನಯವಿಲ್ಲ; ಎಲ್ಲವೂ ನಿಂತಿರುವುದು ಮಾತಿನ ಮಂಟಪದ ಮೇಲೆ. ಇಡೀ ಪಾತ್ರಚಿತ್ರಣಕ್ಕೆ ಮಾತು ಮತ್ತು ಅದರೊಳಗೆ ಸೇರಿಕೊಂಡ ಭಾವವೇ ಆಧಾರ. ಹಾಗಾಗಿ ತಾನಾಡುವ ಒಂದೊಂದು ಮಾತಿನ ಮೇಲೂ ಕಲಾವಿದನಿಗೆ ಅಪಾರ ಎಚ್ಚರ ಬೇಕು. ಹಾಗೆಂದು ಅವು ಕೃತಕವೂ ಅನ್ನಿಸಬಾರದು, ನದಿ ನೀರಿನಂತೆ ಸಹಜವಾಗಿ ಹರಿಯಬೇಕು. ಹೇಳಿಕೇಳಿ ಪ್ರಸಂಗದ ಪದ್ಯಗಳ ಹೊರತಾಗಿ ಯಕ್ಷಗಾನದಲ್ಲಿ ಉಳಿದೆಲ್ಲವೂ ಆಶು. ಆ ಕ್ಷಣಕ್ಕೆ ಕಲಾವಿದನ ಮನಸ್ಸಲ್ಲಿ ಏನು ಹುಟ್ಟಿತೋ ಅದೇ ಅವನ ಪಾತ್ರ. ಇರಲಿ.

ಕಲ್ಚಾರರು ‘ಉತ್ಥಾನ’ ಪತ್ರಿಕೆಯಲ್ಲಿ ಬರೆಯುತ್ತಿರುವ ‘ಪರಕಾಯ ಪ್ರವೇಶ’ ಅಂಕಣದಿಂದಲೂ ಸಾಕಷ್ಟು ಮಂದಿಯ ಅಭಿಮಾನವನ್ನು ಪಡೆದವರು. ಮೊನ್ನೆಯೂ ಭರತನಾಗಿ ಪರಕಾಯ ಪ್ರವೇಶ ಮಾಡಿದ್ದರು. ಕೂಡಲೇ ಅಯೋಧ್ಯೆಗೆ ಬಂದು ತನ್ನನ್ನು ಕಾಣತಕ್ಕದ್ದು ಎಂಬ ಗುರು ವಸಿಷ್ಠರ ಸಂಕ್ಷಿಪ್ತ ಸಂದೇಶ, ಅದರ ಹಿಂದೆ ಕವಿದಿದ್ದ ನಿಗೂಢತೆ, ಅದನ್ನು ಇನ್ನಷ್ಟು ಗಾಢಗೊಳಿಸಿದ ಹಿಂದಿನ ಇರುಳ ದುಃಸ್ವಪ್ನ, ಕೇಕಯದಿಂದ ಆತುರಾತುರವಾಗಿ ಮರಳುತ್ತಲೇ ಕಣ್ಣಿಗೆ ರಾಚಿದ ನಗರದ ಪ್ರೇತಕಳೆ – ಈ ಎಲ್ಲದರ ಬೆನ್ನಿಗೆ ವಸಿಷ್ಠರ ಮೂಲಕ ತಿಳಿದ ತಂದೆಯ ಮರಣವಾರ್ತೆ, ತಂದೆಗಿಂತಲೂ ಹೆಚ್ಚಾಗಿದ್ದ ಅಣ್ಣ ರಾಮಚಂದ್ರನ ವನವಾಸದ ವಿಚಾರ... ಅಂತಹ ಒಂದು ಸಂಕೀರ್ಣ ಪರಿಸ್ಥಿತಿಯನ್ನೂ ಮನಸ್ಥಿತಿಯನ್ನೂ ಚಿತ್ರಿಸುವುದು ಸುಲಭದ ಕೆಲಸವೇನೂ ಅಲ್ಲ. ಆದರೆ ಕಲ್ಚಾರರು ಅದನ್ನು ತುಂಬ ಸಲೀಸಾಗಿ, ಸಹಜವಾಗಿ ಮಾಡಿದರು. ಚಡಪಡಿಕೆ, ಭಯ, ಆತಂಕ, ವಿಹ್ವಲತೆ, ದುಃಖ ಇವೆಲ್ಲದರ ನಡುವೆ “ಪ್ರಳಯಕಾಲದ ರುದ್ರನಂತೆ ಆರ್ಭಟಿಸಿ ಕಂಗಳ ಮೇಲೆ ಕಿಡಿಗೆದರಿ ಹೊಳೆವ ಖಡ್ಗವಗೊಂಡು ಮಾತೆಯ ಕಡಿವೆನೆಂದು” ಹೊರಡುವ ಭರತನನ್ನು ಕೇವಲ ಮಾತು ಮತ್ತದರ ಭಾವತೀವ್ರತೆಯಿಂದಲೇ ತೋರಿಸಿಕೊಡಬೇಕು.

ರಾಮನನ್ನು ಮತ್ತೆ ಅಯೋಧ್ಯೆಗೆ ಕರೆತರುವೆನೆಂದು ಮಂದಿ ಮಾರ್ಬಲದೊಂದಿಗೆ ಚಿತ್ರಕೂಟಕ್ಕೆ ಧಾವಿಸಿ ಅಣ್ಣನ ಪಾದಕ್ಕೆ ಬೀಳುವ ಭರತ ತಂದೆಯ ಮರಣದ ಸುದ್ದಿಯನ್ನು ಆತನಿಗೆ ತಿಳಿಸುವ ಸನ್ನಿವೇಶ ಎಂತಹವರ ಎದೆಯನ್ನೂ ಆರ್ದ್ರವಾಗಿಸದೆ ಇರದು. ಕಲ್ಚಾರರ ಭರತ ಹೇಳುವ ಪರಿ ಇದು, ಕೇಳಿ:

“ಒಂದು ಹೊತ್ತು ಉಂಡುಹೋಗಪ್ಪಾ ಅಂತ ತಂದೆಯವರು ನಿನ್ನಲ್ಲಿ ಯಾಚಿಸಿದರಂತೆ. ಮನುಷ್ಯರ ಮನಸ್ಸು ಯಾವಾಗ ಹೇಗೆ ಚಂಚಲಗೊಳ್ಳುತ್ತದೋ ಗೊತ್ತಿಲ್ಲ, ಹಾಗಾಗಿ ನನಗೆ ಉಣ್ಣುವುದಕ್ಕೆ ವ್ಯವಧಾನವಿಲ್ಲ, ಹೊರಟೆ ಅಂತ ನೀನು ಹೊರಟಿಯಂತೆ. ನೀನು ತಿರುಗಿ ನೋಡ್ಲಿಲ್ಲ ಅಯೋಧ್ಯೆಯನ್ನು. ನೀನು ತಿರುಗಿ ನೋಡ್ಲಿಲ್ಲ ನಮ್ಮ ತಂದೆಯನ್ನು. ನೀನು ತಿರುಗಿ ನೋಡ್ಲಿಲ್ಲ ಅಯೋಧ್ಯೆಯ ಪ್ರಜೆಗಳನ್ನು, ನಮ್ಮ ತಾಯಂದಿರನ್ನು. ಅಣ್ಣಾ, ನಮ್ಮ ತಂದೆಯವರು ರಾಮಾ ರಾಮಾ ರಾಮಾ ಅಂತ ವಿಲಪಿಸ್ತಾ ನಿನ್ನನ್ನು ಹಿಂಬಾಲಿಸುವ ಪ್ರಯತ್ನವನ್ನು ಮಾಡಿದರಂತೆ. ಆದರೆ ಬೀದಿಯ ಧೂಳಿನಲ್ಲಿ ಬಿದ್ದು ಮೈಯೆಲ್ಲ ಮಣ್ಣಾಗಿ ಕಣ್ಣೀರು ಹರಿಸ್ತಾ ತರಚು ಗಾಯಗಳಿಂದ ನೆತ್ತರನ್ನು ಹರಿಯಿಸ್ತಾ ‘ನನ್ನನ್ನು ಕೌಸಲ್ಯೆಯ ಅಂತಃಪುರಕ್ಕೆ ಕೊಂಡೊಯ್ಯಿರಿ’ ಅಂತ ಆಡಿದರಂತೆ. ಆಮೇಲೆ ಅವರು ಮಾತನಾಡ್ಲಿಲ್ಲ. ಉಣ್ಣಲೂ ಇಲ್ಲ. ಎಂಟು ದಿನಗಳ ಕಾಲ ಹಾಗೆಯೇ ರಾಮಾ ರಾಮಾ ರಾಮಾ ಎಂಬ ವಿಲಾಪವನ್ನುಳಿದು ಬೇರೆ ಏನೂ ಇಲ್ಲದೆ… ಬೇರೆ ಏನೂ ಇಲ್ಲದೆ… ಅನ್ನ ಉಣ್ಣದೆ ಎಂಟು ದಿನ ಇದ್ದು… ನಮ್ಮಪ್ಪ… ನಮ್ಮಪ್ಪ…”

ಎಂದು ಮಾತನ್ನು ಅರ್ಧಕ್ಕೆ ನಿಲ್ಲಿಸುತ್ತಾನೆ ಭರತ. ಆಮೇಲೆ ಒಂದು ಸುದೀರ್ಘ ಮೌನ. ರಾಮನಿಗೂ ಮಾತು ಬಾರದು. ಆ ನೀರವಕ್ಕೆ ಭಾಗವತರ ಶ್ರುತಿ ಮಾತ್ರ ಜತೆಯಾಗಿ ಹುಟ್ಟುವ ಭಾವಕ್ಕೆ ಪ್ರೇಕ್ಷಕನ ಕಣ್ಣಂಚು ಒದ್ದೆಯಾಗದಿದ್ದರೆ ಅವನು ಸಹೃದಯನೇ ಅಲ್ಲ.
“ನನ್ನ ಒಡಹುಟ್ಟಿದ ಹಿರಿಯಣ್ಣ ಗೆಡ್ಡೆಗೆಣಸುಗಳನ್ನು ತಿನ್ನುತ್ತಾ ಮರದ ನೆರಳಿನಲ್ಲಿ ಕಲ್ಲು ನೆಲದ ಮೇಲೆ ಮೈಚಾಚಿದ್ದಾನೆ ಎನ್ನುವುದನ್ನೆಣಿಸಿಯೂ ಒಂದು ತುತ್ತು ಅನ್ನ ಉಣ್ಣುವುದಕ್ಕೆ ನನಗೆ ಸಾಧ್ಯವಾದರೆ ನಾನು ನಿನ್ನ ತಮ್ಮನೇ? ಆ ಸುಖದ ತಲ್ಪದ ಮೇಲೆ ಮಲಗಿದರೆ ಒಂದು ಕ್ಷಣವಾದರೂ ನನಗೆ ಹಿತವೆನಿಸೀತೇ? ಬಣ್ಣವೇ ತನಗೆ ಊರು? ಪುಣ್ಯ ಪುರುಷ ನಿನ್ನ ಪಾದದಿಂದ ಎನ್ನ ಎದೆಯನ್ನು ಮೆಟ್ಟಿ ಅಯೋಧ್ಯೆಗೆ ಬಂದರೂ ನನಗೆ ಸಂತೋಷ…” 
ಎಂದು ಭರತ ಮತ್ತೆ ಕಣ್ಣೀರಾಗುವ ಹೊತ್ತಿಗೆ ಆತನ ಇಡಿಯ ಚಿತ್ರ ಪ್ರೇಕ್ಷಕನ ಮನಸ್ಸಲ್ಲಿ ಭದ್ರವಾಗತೊಡಗುತ್ತದೆ.
ಈ ಭಾವಪ್ರವಾಹದ ದಂಡೆಯಲ್ಲಿ ನಿಂತು ನದಿಯಾಚೆಯನ್ನು ಗಮನಿಸಲು ಪ್ರೇಕ್ಷಕನಿಗೆ ನೆರವಾಗುವುದು ಕುಂಬ್ಳೆಯವರ ರಾಮ. “ನದಿಯನ್ನು ದಾಟುವುದು ದೊಡ್ಡದಲ್ಲ, ಆದರೆ ಈ ಪ್ರೀತಿಯ ನದಿಯನ್ನು ದಾಟುವುದು ಬಹಳ ಕಷ್ಟ” ಎಂದೇ ಪ್ರಸಂಗದ ಆರಂಭದಲ್ಲಿ ಮಾತು ಆರಂಭಿಸುತ್ತಾನೆ ರಾಮ. ಅವನು ಹೇಳುವುದು ಅಯೋಧ್ಯೆಯ ಜನರ, ಸೀತೆ-ಲಕ್ಷ್ಮಣ-ಗುಹ ಮುಂತಾದವರ ಪ್ರೀತಿಯ ಸೆಳೆತದ ಬಗ್ಗೆ.

“ಭರತ ದೊಡ್ಡ ಸೈನ್ಯದೊಂದಿಗೆ ಸಮೀಪಿಸುತ್ತಿದ್ದಾನೆ. ನಾವು ಕಾಡಿನಲ್ಲಿಯೂ ಇರಕೂಡದು ಎಂಬ ಉದ್ದೇಶದಿಂದಲೇ ಇರಬೇಕು. ನೀನೊಂದು ಅಪ್ಪಣೆ ಕೊಟ್ಟರೆ ಹತ್ತಿದ ನೇರಳೆ ಮರದ ಹಣ್ಣು ಉದುರಿಸುವ ಹಾಗೆ ಅವರನ್ನೆಲ್ಲ ಕೆಡಹಿಬಿಡುತ್ತೇನೆ” ಎಂದು ಸಿಟ್ಟಿನಿಂದ ಅಬ್ಬರಿಸುವ ಲಕ್ಷ್ಮಣನಿಗೆ ರಾಮ ಹೇಳುವ ಮಾತಿದು: “ನೇರಳೆ ಹಣ್ಣು ಪೂರ್ತಿ ಉದುರಿಬಿಟ್ಟರೆ ನಾಳೆಗೆ ನಮಗೆ ಹಣ್ಣಿಲ್ಲಾಂತ ಆದೀತು ತಮ್ಮಾ. ನೀನು ಯಾರು, ನಾನು ಯಾರು, ಭರತ ಯಾರು? ನಾವೆಲ್ಲ ಒಂದೇ ಮರದಲ್ಲಿ ಹುಟ್ಟಿದ ನೇರಳೆ ಹಣ್ಣಿನ ಹಾಗೆ.” ಅದು ರಾಮ. ನಿನಗೆ ಹೇಳದೇ ಕಾಡಿಗೆ ಹೊರಟದ್ದು ತನ್ನ ತಪ್ಪು ಎನ್ನುತ್ತಾನೆ ಅವನು ಭರತನನ್ನುದ್ದೇಶಿಸಿ. ತಂದೆಯ ಮರಣದ ವಾರ್ತೆ ಕೇಳಿ ಸೀತಾ ಲಕ್ಷ್ಮಣರು ಒಂದು ಕ್ಷಣ ಮೂರ್ಛಿತರಾದರೂ ತಾನು ಪ್ರಜ್ಞೆ ತಪ್ಪಲಿಲ್ಲ ಎನ್ನುತ್ತಾ, “ಈ ಸಂದರ್ಭದಲ್ಲಿ ಎಚ್ಚರ ತಪ್ಪುವುದಕ್ಕಿಂತ ಎಚ್ಚರವಿರುವುದೇ ಒಳ್ಳೆಯದು” ಎನ್ನುತ್ತಾನೆ. ಇದಲ್ಲವೇ ರಾಮ?

“ಇವರೆಲ್ಲ ಅಯೋಧ್ಯೆಯಲ್ಲಿರಬೇಕಾದವರು. ಇವರೆಲ್ಲ ಅರಣ್ಯದಲ್ಲೇ ಉಳಿದರೆ, ಅರಣ್ಯವೇ ಅಯೋಧ್ಯೆಯಾಗುತ್ತದೆ; ಅತ್ತ ಅಯೋಧ್ಯೆ ಅರಣ್ಯವಾಗುತ್ತದೆ. ಯಾವುದು ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲೇ ಇರಬೇಕು” – ಅದು ತಾನೂ ಅಯೋಧ್ಯೆಗೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಕೂತ ಭರತನಿಗೆ ರಾಮ ಹೇಳುವ ಮಾತು.

“ಬದುಕಿನಲ್ಲಿ ಬರುವ ಕಷ್ಟ ಸೂರ್ಯನಿಗೆ ಮೋಡ ಅಡ್ಡ ಬಂದ ಹಾಗೆ. ಅಲ್ಪಕಾಲ ಮಾತ್ರ. ಜೋರಾದ ಗಾಳಿ ಬಂದರೆ ಬೇಗನೆ ಹಾರಿ ಹೋಗ್ತದೆ. ನಿಧಾನವಾಗಿ ಬಂತು ಅಂತಾದ್ರೆ ಸ್ವಲ್ಪ ಹೊತ್ತು ನೆರಳಾಗಿರ್ತದೆ ಅಷ್ಟೆ. ಅದನ್ನು ಕತ್ತಲೆ ಅಂತ ಯಾಕೆ ತಿಳೀಬೇಕು? ನೆರಳು ಅಂತ ತಿಳೀಬಹುದಲ್ಲ?” ಅಂತ ಭರತನಿಗೆ ಸಮಾಧಾನ ಹೇಳುತ್ತಾನೆ ರಾಮ. ಉದಾತ್ತಪುರುಷನ ಒಟ್ಟಾರೆ ವ್ಯಕ್ತಿತ್ವ ಎಷ್ಟೊಂದು ಸರಳ ಶಬ್ದಗಳಲ್ಲಿ!

ರಾಮಕುಂಜದಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ರಾಮಾಯಣದರ್ಶನಂ ಅಂತಹ ಕಾವ್ಯಗಳ ಪಾಠವನ್ನು ಕುಂಬ್ಳೆಯವರಿಂದ ಹೇಳಿಸಿಕೊಂಡ ನನಗಂತೂ ಮತ್ತೊಮ್ಮೆ ಅವರ ತರಗತಿಯಲ್ಲಿ ಕುಳಿತ ಅನುಭವ. ಅವರ ತರಗತಿಯೂ ಹೀಗೆ ತಾಳಮದ್ದಳೆಯ ಹಾಗೆ.

ಕಲಾವಿದ ಪಾತ್ರದೊಳಗೆ ಹೊಕ್ಕಾಗ ಸಹಜವಾಗಿ ಬರುವ ಕೆಲವು ಮಾತುಗಳು ಎಷ್ಟು ಅದ್ಭುತವಾಗಿರಬಲ್ಲವು ಎಂಬುದಕ್ಕೆ ಇಬ್ಬರೂ ಆಡಿದ ಕೆಲವು ವಾಕ್ಯಗಳು ಸಾಕ್ಷಿ.

“ನಮಗೆ ವರವಾಗಿ ಒದಗಬೇಕಾದ್ದು ಇನ್ನೊಬ್ಬರಿಗೆ ಶಾಪವಾಗಬಾರದಲ್ಲ ಗುರುಗಳೇ… ಊರಿಗೆ ಉಪಟಳ ಕೊಟ್ಟು ಯಾರು ಸುಖವಾಗಿದ್ದಾರು?” ಎಂದು ವಸಿಷ್ಠರನ್ನು ಪ್ರಶ್ನಿಸುತ್ತಾನೆ ಭರತ. ಕೈಕೇಯಿ ತನ್ನ ಸ್ವಾರ್ಥಕ್ಕಾಗಿ ಕೇಳಿದ ವರಕ್ಕೆ ಮಹತ್ವ ನೀಡಬೇಕಾಗಿಲ್ಲ ಎಂದು ರಾಮನಿಗೆ ಹೇಳುತ್ತಾ “ಅಂತಃಪುರದ ಪಿಸುಧ್ವನಿಗಳಿಗೆ ನಾವು ಸಾರ್ವಜನಿಕ ಮೌಲ್ಯ ಕೊಡಬೇಕು ಅಂತ ಇಲ್ಲ” ಎಂದ ಆತನ ಮಾತಂದೂ ಚೌಕಟ್ಟು ಹಾಕಿಸಿ ಇಡುವಂತಿತ್ತು.
ಮಾತಿನಲ್ಲಿ ಎಳ್ಳಿನಷ್ಟೂ ರಾಜಕೀಯವನ್ನು ಬೆರೆಸದೆಯೇ ರಾಮ-ಭರತ ಇಬ್ಬರೂ ತಮ್ಮ ಮಾತುಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಂದದ್ದಂತೂ ಮನೋಹರವಾಗಿತ್ತು. “ಜನಾಭಿಪ್ರಾಯಕ್ಕೆ ವಿರೋಧವಾಗಿ ಸಿಂಹಾಸನವೇರಿದ ಅರಸ ಎಷ್ಟು ಕಾಲ ಉಳಿದಾನು?” “ಆಳುವುದಕ್ಕೆ ಸಿಂಹಾಸನ ಏರಬೇಕೆಂದೇನೂ ಇಲ್ಲ” “ಎಲ್ಲರೂ ಒಟ್ಟು ಸೇರಿ ಆಡಳಿತ ಮಾಡಿದ್ರೆ ದೇಶ ಉದ್ಧಾರ ಆಗುವುದಿಲ್ಲ” ಎಂಬ ಭರತನ ಮಾತುಗಳು; “ನಿಜವಾಗಿ ಹೇಳುವುದಿದ್ರೆ, ಆಳುವವರು ಆಳಿಸಿಕೊಳ್ಳುವವರು ಅಂತ ಭೇದ ಇರಬಾರದು. ಆಗಲೇ ಒಳ್ಳೆಯ ಆಳ್ವಿಕೆ ಬರುವುದು” ಎಂಬ ರಾಮನ ಮಾತು – ಎಲ್ಲವೂ ಆಯಾ ಪಾತ್ರಪೋಷಣೆಗೆ ಕಾರಣವಾದವಲ್ಲದೆ, ವರ್ತಮಾನದ ಸಮಾಜಕ್ಕೆ ಕೊಟ್ಟ ಸಂದೇಶಗಳಂತೆಯೂ ಇದ್ದವು.

“ಭರತನಲ್ಲಿ ಒಂದು ತ್ಯಾಗ ಇದೆ. ಆದ್ದರಿಂದಲೇ ಭರತ ಭರತನಾದ ಮತ್ತು ಭರಿತನಾದ” ಎಂದು ಪ್ರಸಂಗದ ಕೊನೆಯಲ್ಲಿ ರಾಮನಾಡುವ ಮಾತು, ತಾನು ಅಯೋಧ್ಯೆಗೆ ಹೋಗದೆ ನಂದಿಗ್ರಾಮದಲ್ಲೇ ಉಳಿದುಕೊಂಡು “ಈಶ್ವರಾಲಯದ ಮುಂದೆ ಸ್ಥಾಪನೆಯಾದ ನಂದಿಯ ಹಾಗೆ” ರಾಮನ ನಿರೀಕ್ಷೆಯಲ್ಲಿರುತ್ತೇನೆ ಎಂದು ಭರತನಾಡುವ ಮಾತು- ಇವೆರಡಂತೂ ಒಟ್ಟಾರೆ ಕಥನಕ್ಕೊಂದು ಅರ್ಥಪೂರ್ಣ ಉಪಸಂಹಾರ ಬರೆದಂತಿದ್ದವು.

ಕಲಾವಿದರ ಪಾತ್ರಪೋಷಣೆಗೆ ಅವರಷ್ಟೇ ಕಾರಣವಾದದ್ದು ಜತೆಗಿದ್ದ ಅದ್ಭುತ ಹಿಮ್ಮೇಳ ಎನ್ನದಿದ್ದರೆ ಇಲ್ಲಿಯವರೆಗೆ ಹೇಳಿದ್ದು ವ್ಯರ್ಥ. ಭರತಾಗಮನದಂತಹ ಪ್ರಸಂಗಕ್ಕೆ ಪುತ್ತೂರು ರಮೇಶ ಭಟ್ಟರಂತಹ ಭಾಗವತರೇ ಬೇಕು ಅಂತ ಯಾರಿಗಾದರೂ ಅನ್ನಿಸದೆ ಇರದು. ಆರಂಭದ ಕೆಲವು ಪದ್ಯಗಳನ್ನು ಹೊಸ್ತೋಟ ಮಂಜುನಾಥ ಭಾಗವತರ ಪ್ರಸಂಗದಿಂದಲೂ, ಅಮೇಲಿನ ಪದ್ಯಗಳನ್ನು ಪಾರ್ತಿಸುಬ್ಬನ ಪ್ರಸಂಗದಿಂದಲೂ ಆಯ್ದು ಪೋಣಿಸಿ ಅವರು ಮಂಡಿಸಿದ ರೀತಿ ಅನನ್ಯ.

ಆಯಾ ಸಂದರ್ಭಕ್ಕೆ ಹೊಂದುವ ರಾಗಗಳನ್ನು ಹೆಕ್ಕಿ ಹಾಡುವ ರಮೇಶಣ್ಣ ಕಲಾವಿದರಲ್ಲೂ, ಪ್ರೇಕ್ಷಕರಲ್ಲೂ ಸುಲಭವಾಗಿ ಭಾವದ ಒರತೆ ಮೂಡಿಸಬಲ್ಲರು. ಏಳು ದಿನ ಗತಿಸಿದುದು ಪಯಣದಿ, ಭರತ ನೀನತಿಧೈರ್ಯದಿಂದಲಿನ್ನಣಿಯಾಗು, ಸಾವ ಸಮಯದಿ ತಂದೆಯ ಸೇವೆಗೊದಗದೆ, ಎನಗಾಗಿ ಶ್ರೀರಾಮ ವನಕೆ ತೆರಳಿದ ಮೇಲೆ, ಸುಮ್ಮಗಿರು ಭರತ ಬರುವ ಧರ್ಮವನ್ನು ಅರಿಯೆ ನೀನು, ಬಂದೆಯಾ ಇನವಂಶವಾರಿಧಿ ಚಂದ್ರ, ತಮ್ಮ ಕೇಳಿನಕುಲದ ರಾಯರಲಿ, ಪಿತನ ವಾಕ್ಯವ ಮೀರಿ ಪಿಂತೆ ನಡೆದವರುಂಟೆ, ನಿರ್ಮಲದಲಿ ಜ್ಯೇಷ್ಠಸುತನಿರಲಾತನ ತಮ್ಮಗೆ ರಾಜ್ಯವುಂಟೆ, ಅಣ್ಣ ಕೇಳೀರೇಳು ವರುಷದ ಮರುದಿನ… ಮೊನ್ನೆ ಅವರು ಹಾಡಿದ ಅಷ್ಟೂ ಪದಗಳು ಒಂದಕ್ಕಿಂತ ಒಂದು ಚಂದ. “ತಾಳಯ್ಯ ಭರತ ಕೇಳಯ್ಯ”, “ಎಂದು ತಮ್ಮೊಳಾಡುತಿರಲು ಬಂದು ಭರತ ರಥವ ಇಳಿದು”, “ಹದಿನಾಲ್ಕು ವತ್ಸರದ ತುದಿಯ ಮರುದಿನ ಬಂದು” – ಹಳೆಯ ಕ್ರಮದಲ್ಲಿ ಅವರು ಹಾಡುವ ಈ ಪದ್ಯಗಳಂತೂ ಈಗಿನ ಜಮಾನಾದಲ್ಲಿ ಕೇಳಲು ಸಿಗುವುದೇ ಅಪರೂಪ.

ಇದಕ್ಕಿಂತ ಹೆಚ್ಚು ಹೇಳಲು ನನಗೇನೂ ತೋಚದು. ಚೆಂಡೆ-ಮದ್ದಳೆಗಳ ವಿಷಯದಲ್ಲಂತೂ ನಾನು ಪರಮ ಅಜ್ಞಾನಿ. ಚೆಂಡೆ ಉರುಳಿಕೆಗಳನ್ನು ಸ್ಪಷ್ಟವಾಗಿ ಕೇಳಿಸುವ ಜಗ್ಗಣ್ಣ, ಅಂಬ್ರೇಪಿಲ್ಲದೆ ಮದ್ದಳೆ ನುಡಿಸುವ ಅವಿನಾಶಣ್ಣ -ಇಬ್ಬರ ಸಾಂಗತ್ಯ ಹಿಮ್ಮೇಳವನ್ನು ಕಳೆಗಟ್ಟಿಸಿತು ಅಂತಷ್ಟೇ ಹೇಳಬಲ್ಲೆ. ಅರ್ಥಧಾರಿಗಳ ಮಾತುಗಳನ್ನು ಒಂದೂ ಬಿಡದೆ ಕೇಳುತ್ತಾ, ಅವುಗಳ ಸ್ವಾರಸ್ಯವನ್ನು ತಾವೂ ಅನುಭವಿಸುತ್ತಾ, ಜತೆಜತೆಯಾಗಿ ಪ್ರಸಂಗವನ್ನು ಮುಂದಕ್ಕೆ ಒಯ್ಯುವ ಹಿಮ್ಮೇಳ ಕೂಡ ಈಗ ಎಲ್ಲ ಕಡೆ ಸಿಗುವುದು ಕಷ್ಟ.

ಅಂದಹಾಗೆ, ಪ್ರಮುಖ ವಿಷಯವೊಂದನ್ನು ಹೇಳುವುದು ಬಾಕಿಯಾಯಿತು: ತಾಳಮದ್ದಳೆಯ ನೆಪದಲ್ಲಿ ಇಂತಹ ಕಲಾವಿದರೊಂದಿಗೆ ಕಳೆಯುವ ಸಮಯ, ಒಡನಾಟ, ದಿನಪೂರ್ತಿ ನಗು ಮತ್ತೊಂದಿಷ್ಟು ತಿಳುವಳಿಕೆ, ಅದರೊಂದಿಗೆ ಒದಗುವ ಪ್ರಫುಲ್ಲತೆ- ಇವು ತಾಳಮದ್ದಳೆಯಷ್ಟೇ ಇಂಟರೆಸ್ಟಿಂಗ್. ಆ ಬಗ್ಗೆ ಮುಂದೆಂದಾದರೂ ಮಾತಾಡೋಣ. ಎಂಬಲ್ಲಿಗೆ ಬರೆಯಹೊರಟ ನೂರು ಪದ ಸಾವಿರ ದಾಟಿತು.
*****************************************

ತಾಳಮದ್ದಳೆಯ ವಿವರ:
ಪ್ರಸಂಗ: ಭರತಾಗಮನ
ದಿನಾಂಕ: 10 ನವೆಂಬರ್ 2019
ಸ್ಥಳ: ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಎಸ್.ಎಸ್.ಪುರಂ, ತುಮಕೂರು

ಹಿಮ್ಮೇಳ:
ಭಾಗವತರು: ಶ್ರೀ ರಮೇಶ ಭಟ್ ಪುತ್ತೂರು
ಚೆಂಡೆ: ಶ್ರೀ ಪಿ. ಜಿ. ಜಗನ್ನಿವಾಸರಾವ್ ಪುತ್ತೂರು
ಮದ್ದಳೆ: ಶ್ರೀ ಅವಿನಾಶ್ ಬೈಪಾಡಿತ್ತಾಯ ಬೆಂಗಳೂರು

ಅರ್ಥಧಾರಿಗಳು:
ರಾಮ: ಶ್ರೀ ಗಣರಾಜ ಕುಂಬ್ಳೆ
ಭರತ: ಶ್ರೀ ರಾಧಾಕೃಷ್ಣ ಕಲ್ಚಾರ್
ವಸಿಷ್ಠ: ಸಿಬಂತಿ ಪದ್ಮನಾಭ
ಲಕ್ಷ್ಮಣ: ಆರತಿ ಪಟ್ರಮೆ

ಆಯೋಜನೆ: 
ಯಕ್ಷದೀವಿಗೆ (ರಿ.) ತುಮಕೂರು
ಯಕ್ಷಗಾನ ಸಾಂಸ್ಕೃತಿಕ ವೇದಿಕೆ, ತುಮಕೂರು