ಶನಿವಾರ, ಏಪ್ರಿಲ್ 30, 2022

ಯಕ್ಷ ಗಾನ ಲೀಲಾವಳಿ: ಯಕ್ಷಗಾನ ರಂಗದ ಪ್ರಥಮ ವೃತ್ತಿಪರ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯರ ಆತ್ಮಕಥೆ

  • ಪುಸ್ತಕ: ಯಕ್ಷ-ಗಾನ ಲೀಲಾವಳಿ (ಯಕ್ಷಗಾನರಂಗದ ಪ್ರಥಮ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯರ ಆತ್ಮಕಥನ)
  • ನಿರೂಪಣೆ: ವಿದ್ಯಾರಶ್ಮಿ ಪೆಲತ್ತಡ್ಕ
  • ಪ್ರಕಟಣೆ: ಅಭಿನವ ಬೆಂಗಳೂರು
  • ಪುಟಗಳು: 164
  • ಬೆಲೆ: ರೂ. 150-00
  • ಸಂಪರ್ಕ: 9986266991

ಬದುಕು ಅರ್ಥವಾಗಬೇಕೆಂದರೆ ಆತ್ಮಕಥೆಗಳನ್ನು ಓದಿ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇನೆ. ಈ ಆತ್ಮಕಥೆ ಓದಿ ಬದುಕು ಎಷ್ಟು ಅರ್ಥವಾಯಿತೋ ಗೊತ್ತಿಲ್ಲ, ಲೀಲಮ್ಮನವರ ಕುರಿತು ಇದ್ದ ಗೌರವ-ಅಭಿಮಾನಗಳು ಇಮ್ಮಡಿಗೊಂಡದ್ದಂತೂ ನಿಜ.

‘ನಾವು ಬಾಲ್ಯ-ತಾರುಣ್ಯದಲ್ಲಿ ಪಟ್ಟ ಕಷ್ಟದ ಒಂದು ಪಾಲೂ ನೀವು ನೋಡಿಲ್ಲ’ ಎಂದು ನಮ್ಮ ಮಕ್ಕಳನ್ನು ನೋಡಿ ಕೆಲವೊಮ್ಮೆ ನಾವು ಬಯ್ಯುವುದಿದೆ; ಆದರೆ ಇಂತಹ ಹಿರಿಯರ ಜೀವನಗಾಥೆಗಳನ್ನು ಓದಿದ ಮೇಲೆ ನಮ್ಮ ಹಿರಿಯ ತಲೆಮಾರು ಅನುಭವಿಸಿದ ಕಷ್ಟಗಳ ಸಣ್ಣ ಪಾಲನ್ನೂ ನಾವೂ ಅನುಭವಿಸಿಲ್ಲ ಎಂದು ಅನಿಸುವುದಿದೆ.

ಔಪಚಾರಿಕ ಶಿಕ್ಷಣವನ್ನೇ ಪಡೆಯದ ಹೆಣ್ಣುಮಗಳೊಬ್ಬರು, ಮಹಿಳೆಯರು ಯಕ್ಷಗಾನಕ್ಕೆ ಪ್ರೇಕ್ಷಕರಾಗಿ ಹೋಗುವುದೂ ಮನೆಮಂದಿಗೆ ಇಷ್ಟವಿಲ್ಲದ ಕಾಲದಲ್ಲಿ – ಅರ್ಧಶತಮಾನದ ಹಿಂದೆ – ವೃತ್ತಿಪರ ಮೇಳಗಳಲ್ಲಿ ಸತತ ಎರಡೂವರೆ ದಶಕ ಭಾಗವತರಾಗಿ ತಿರುಗಾಟ ಮಾಡಿದರು ಎಂಬುದನ್ನು ನಂಬುವುದೂ ಕಷ್ಟ. ಆದರೆ ನಂಬಲೇಬೇಕು; ಏಕೆಂದರೆ ನಮ್ಮೆದುರು ಲೀಲಮ್ಮ ಇದ್ದಾರೆ. ಈ ಕಥೆಯನ್ನೇ ಪ್ರತಿಭಾವಂತ ನಿರ್ದೇಶಕನೊಬ್ಬ ದೃಶ್ಯ ರೂಪಕ್ಕಿಳಿಸಿದರೆ ಎಷ್ಟು ಸುಂದರ ಬಯೋಪಿಕ್ ಆಗಬಹುದಲ್ಲ ಎಂದು ನನಗೆ ಓದಿನ ನಡುವೆ ಅನಿಸಿದ್ದೂ ಉಂಟು.

ಅವರ ಬದುಕಿನ ಕಥೆ ತೆರೆದುಕೊಳ್ಳುತ್ತಾ ಹೋದಂತೆ ನಮ್ಮೊಳಗೂ ಹೊಸದೊಂದು ಪ್ರಪಂಚ ಬಿಚ್ಚಿಕೊಳ್ಳುತ್ತದೆ. ಮನಸ್ಸು ಆರ್ದ್ರವಾಗುತ್ತದೆ. ನಾವು ಅಗಾಧವಾಗಿ ಪ್ರೀತಿಸುವ ಕಲೆಯೊಂದು ಇಷ್ಟು ವಿಸ್ತಾರವಾಗಿ ಬೆಳೆದಿರುವುದರ ಹಿಂದೆ ಎಷ್ಟೊಂದು ಮಂದಿಯ ತ್ಯಾಗಗಳಿವೆ ಎಂದು ಪುನಃಪುನಃ ಮನವರಿಕೆ ಆಗುತ್ತದೆ.

ಇಂತಹದೊಂದು ಸಂತೃಪ್ತಿಗೆ ಕಾರಣರಾದ ನಿರೂಪಕಿ ವಿದ್ಯಾರಶ್ಮಿ ಖಂಡಿತ ಅಭಿನಂದನಾರ್ಹರು. ಏಕೆಂದರೆ ಇದು ಕೇವಲ ಮಹಿಳೆಯೊಬ್ಬರ ಸಾಹಸಕಥನ ಮಾತ್ರ ಅಲ್ಲ, ಯಕ್ಷಗಾನ ಇತಿಹಾಸದ ಪ್ರಮುಖ ಅಧ್ಯಾಯವೂ ಹೌದು. ಲೀಲಮ್ಮನವರು ವೃತ್ತಿಪರ ಭಾಗವತರಾಗಿ ಅಭ್ಯುದಯ ಕಂಡ ಕಾಲ ವಿವಿಧ ಕಾರಣಗಳಿಗಾಗಿ ಯಕ್ಷಗಾನ ಚರಿತ್ರೆಯಲ್ಲಿ ಮಹತ್ವದ್ದೆನಿಸುತ್ತದೆ. ಯಕ್ಷಗಾನಕ್ಕೆ ಆಧುನಿಕತೆಯ ಪ್ರವೇಶ, ಟೆಂಟ್ ಮೇಳಗಳ ಉಚ್ಛ್ರಾಯ ಕಾಲ, ಅಪಾರ ಸಂಖ್ಯೆಯಲ್ಲಿ ತುಳು ಪ್ರಸಂಗಗಳು ರಂಗಕ್ಕೆ ಬಂದು “ತುಳು ತಿಟ್ಟು” ಎಂಬ ಹೊಸ ಆಯಾಮವೇ ಹುಟ್ಟಿಕೊಂಡದ್ದು, ಆ ಮೂಲಕ ಯಕ್ಷಗಾನವು ಜನಸಾಮಾನ್ಯರ ಮನಸ್ಸು ಹಾಗೂ ದೈನಂದಿನ ಬದುಕಿಗೆ ಹತ್ತಿರವಾದದ್ದು- ಇಂತಹ ವಿಶಿಷ್ಟ ಕಾಲಘಟ್ಟದ ಚರಿತ್ರೆಗೂ ಒಂದು ಗಟ್ಟಿ ಆಧಾರವಾಗಿ ನಿಲ್ಲುವುದು ಲೀಲಮ್ಮನವರು ಆತ್ಮಕಥೆಯ ವೈಶಿಷ್ಟ್ಯ.

ಆತ್ಮಕಥೆ ಬರೆಯುವವರ ಪ್ರಮುಖ ಸವಾಲೆಂದರೆ ಅದು ಆತ್ಮರತಿ ಆಗದಂತೆ ನೋಡಿಕೊಳ್ಳುವುದು. ಈ ಇಡೀ ಪುಸ್ತಕದಲ್ಲಿ ಅಂತಹದೊಂದು ಸ್ವಪ್ರಶಂಸೆಯ ಒಂದು ಸಣ್ಣ ಎಳೆಯೂ ಕಾಣಿಸಿಕೊಂಡಿಲ್ಲ. ಅದು ಕಥಾನಾಯಕಿಯ ಹಾಗೂ ನಿರೂಪಕಿಯ ಯಶಸ್ಸೂ ಹೌದು. ವಿನಯವೇ ಮೈವೆತ್ತ ವ್ಯಕ್ತಿತ್ವ ಲೀಲಮ್ಮನವರದ್ದು. ಇನ್ನು ಅವರು ಹೇಳಿಕೊಂಡ ಕಥೆಯಲ್ಲಿ ಆತ್ಮಪ್ರಶಂಸೆ ಕಾಣಿಸಿಕೊಳ್ಳುವುದಾದರೂ ಹೇಗೆ? ಬದುಕಿನ ಹಾದಿಯುದ್ದಕ್ಕೂ ತನ್ನ ಪತಿ, ಮಕ್ಕಳು, ಬಂಧುಗಳು ಹಾಗೂ ಹಿತೈಷಿಗಳ ತ್ಯಾಗ ದೊಡ್ಡದು, ತನ್ನದೇನೂ ಇಲ್ಲ ಎಂಬ ಅವರ ವಿನಯವಂತಿಕೆಯೇ ಅವರ ವ್ಯಕ್ತಿತ್ವವನ್ನು ಬಹಳ ಎತ್ತರಕ್ಕೆ ಏರಿಸಿದೆ. ಆ ವ್ಯಕ್ತಿತ್ವವನ್ನು ಅಷ್ಟೇ ಪರಿಣಾಮಕಾರಿಯಾಗಿ ಪ್ರತಿಫಲಿಸಿರುವುದು ಪುಸ್ತಕದ ಮುಖಪುಟದಲ್ಲಿ ಬಳಸಲಾಗಿರುವ ಅವರ ಚಿತ್ರ. ಅವರ ಅಮಾಯಕತೆ, ಸಜ್ಜನಿಕೆ ಹಾಗೂ ಪ್ರತಿಭೆಗಳನ್ನೆಲ್ಲ ಒಟ್ಟಿಗೆ ಎರಕ ಹೊಯ್ದಂತಿದೆ ಈ ಚಿತ್ರ. ಛಾಯಾಗ್ರಾಹಕ ಸುಧಾಕರ್ ಜೈನ್ ಅವರಿಗೆ ಇದಕ್ಕಾಗಿ ವಿಶೇಷ ಅಭಿನಂದನೆ ಹೇಳಬೇಕು.

ಆತ್ಮಕಥೆಯೊಂದು ಇನ್ನೊಬ್ಬರ ನಿರೂಪಣೆ ಎಂದಾಗ ಅಲ್ಲಿ ಇನ್ನೊಂದು ಸವಾಲೂ ಇದೆ. ಅದು ನಿರೂಪಕರ ಆತ್ಮಕಥೆ ಆಗದಂತೆ ನೋಡಿಕೊಳ್ಳುವುದು. ನಿರೂಪಕಿಯಾಗಿ ವಿದ್ಯಾರಶ್ಮಿ ಇದರಲ್ಲೂ ಬಹುತೇಕ ಯಶಸ್ವಿಯಾಗಿದ್ದಾರೆ. ಆದರೂ ಸಹಪಾಠಿಯಾಗಿ ಅವರ ಓದು, ಬರೆವಣಿಗೆ, ಯೋಚನಾಕ್ರಮ ಇತ್ಯಾದಿಗಳನ್ನು ಹತ್ತಿರದಿಂದ ಬಲ್ಲೆನಾದ್ದರಿಂದ ಕೆಲವೊಂದು ವಾಕ್ಯಗಳನ್ನು ಓದುವಾಗ “ಇದು ವಿದ್ಯಾರಶ್ಮಿಯ ಮನಸ್ಸಿನಿಂದ ಬಂದ ಹಾಗುಂಟು” ಎಂದು ಅನಿಸಿದ್ದೂ ಉಂಟು. ಆದರೆ ಅದರಿಂದ ಆತ್ಮಕಥೆಯ ಓದುವಿಕೆಗಾಗಲೀ, ಕಥಾನಾಯಕಿಯ ವ್ಯಕ್ತಿತ್ವ ಚಿತ್ರಣಕ್ಕಾಗಲೀ ತೊಡಕಾಗಿಲ್ಲ. ಅಲ್ಲದೆ, ಅವೆಲ್ಲ ಉದ್ದೇಶಪೂರ್ವಕ ಅಭಿವ್ಯಕ್ತಿ ಆಗಿರಲಾರದು. ನಿರೂಪಕಿ ಕಥಾನಾಯಕಿಯ ಬದುಕನ್ನು ತನ್ನ ಕಣ್ಣಿನಿಂದ ನೋಡುತ್ತ, ಅದರೊಳಗೆ ಬೆರೆತುಹೋಗುತ್ತ, ಅಲ್ಲಲ್ಲಿ ಅಯಾಚಿತವಾಗಿ ತಾನೇ ಪಾತ್ರವಾಗುವ ಪರಿಯೂ ಆಗಿರಬಹುದು.

“ಹೆಣ್ಣುಮಕ್ಕಳ ಬದುಕು ಚೆಂದವಿರಬೇಕೆಂದರಂತೂ ಬೆನ್ನಿಗೆ ಅಪ್ಪನಿರಲೇಬೇಕು” (ಪು. 29), “…ನನ್ನ ಬಗೆಗೆ ಅವರೊಂದು ಕನಸು ಕಟ್ಟಿಕೊಂಡರು” (ಪು. 46) ಎಂಬ ವಾಕ್ಯಗಳನ್ನು ಓದುವಾಗ ಥಟ್ಟನೆ ಅಲ್ಲೊಂದು ಕವಿತೆಯ ಸಾಲು ಕಂಡಂತಾಗಿ ಪುಳಕವಾದದ್ದಿದೆ. ಬದುಕಿನ ಸಂಕಷ್ಟ, ದುಡಿಯುವ ಅನಿವಾರ್ಯ, ಎಲ್ಲ ಎಡರುತೊಡರುಗಳ ನಡುವೆ ಹಿರಿಯರಿಂದ, ಸಮಾಜದಿಂದ ದೊರೆತ ಪ್ರಶಂಸೆ, ಮನ್ನಣೆ- ಇಂತಹವುಗಳನ್ನು ಓದುವಾಗ ಕಣ್ಣು ತೇವಗೊಂಡದ್ದೂ ಇದೆ.

ಯಕ್ಷಗಾನದ ನಿನ್ನೆಗಳ ಬಗ್ಗೆ ಹೇಳುವುದರ ಜೊತೆಗೆ ಇಂದು ಮತ್ತು ನಾಳೆಗಳ ಬಗೆಗೂ ಲೀಲಮ್ಮನವರು ಮಾತಾಡಿರುವುದು ಯಕ್ಷಗಾನಾಸಕ್ತರಿಗೆ ಪ್ರಮುಖವಾಗುತ್ತದೆ. “ಈಗ ಪದ ಹೇಳಿದವರೆಲ್ಲರೂ ಭಾಗವತ ಎನಿಸಿಕೊಳ್ಳುವುದು ನೋಡಿದಾಗ ನನಗೆ ಯಕ್ಷಗಾನದ ಮೂಲಬೇರು ಅಲುಗಾಡುತ್ತಿದೆಯೋ ಎಂಬ ಆತಂಕ ಮೂಡುತ್ತದೆ” (ಪು. 123);”ವೇದಿಕೆಯಲ್ಲಿ ದೀರ್ಘಕಾಲ ಬಾಳಬೇಕೆಂದರೆ ಪ್ರತಿಭೆಯ ಜೊತೆಗೆ ಪರಿಶ್ರಮ, ಬದ್ಧತೆಗಳು ಸೇರಬೇಕು ಎಂಬುದನ್ನು ಎಳೆಯರು ಮರೆಯಬಾರದು” (ಪು. 125) ಮುಂತಾದ ಮಾತುಗಳು ಅವರ ಅಂತರಂಗ ದರ್ಶನ ಮಾಡುವುದಷ್ಟೇ ಅಲ್ಲದೆ, ಹೊಸ ತಲೆಮಾರಿನ ಕಲಾವಿದರಿಗೆ ಕಿವಿಮಾತು ಹೇಳಿದಂತೆಯೂ ಇದೆ.

ಇಂತಹದೊಂದು ಆತ್ಮಕಥೆಯನ್ನು ನಿರೂಪಿಸುವುದರ ಹಿಂದೆ ತಾನು ಪಟ್ಟ ಕಷ್ಟವನ್ನು ವಿದ್ಯಾರಶ್ಮಿ ತಮ್ಮ ಆರಂಭಿಕ ಮಾತುಗಳಲ್ಲಿ ಹೇಳಿಕೊಂಡಿದ್ದಾರೆ. ಹೆಚ್ಚು ಮಾತಿನ ಪ್ರವೃತ್ತಿ ಇಲ್ಲದ ಲೀಲಮ್ಮನವರ ನೆನಪುಗಳನ್ನು ಕೆದಕುವುದು ಅವರಿಗೂ ದೊಡ್ಡ ಸಾಹಸವೇ ಆಗಿತ್ತು. ಅದರಲ್ಲೂ ದಿನಚರಿಯಂತಹ ಯಾವ ಲಿಖಿತ ಆಧಾರವೂ ಇಲ್ಲದೆ, ಕೇವಲ ನೆನಪುಗಳ ಆಧಾರದಲ್ಲಿ, ಕುಟುಂಬದ ಸದಸ್ಯರು, ಹತ್ತಿರದ ಬಂಧುಗಳ ವಿವರಗಳಲ್ಲಿ  ಒಬ್ಬರ ಆತ್ಮಕಥೆಯನ್ನು, ಅವರ ವ್ಯಕ್ತಿತ್ವಕ್ಕೆ ಕುಂದುಂಟಾಗದಂತೆ ಬರೆಯುವುದು ನಿಜಕ್ಕೂ ಕಷ್ಟದ ಕೆಲಸ. ಇದರ ಹಿಂದೆ ಲೀಲಮ್ಮನವರ ಮಗ ಅವಿನಾಶ್, ಪತಿ ಹರಿನಾರಾಯಣ ಬೈಪಾಡಿತ್ತಾಯರು, ಅಣ್ಣ ವಿಷ್ಣು ಹೆಬ್ಬಾರ್ ಅಂಥವರ ಮುತುವರ್ಜಿ, ಬೆಂಬಲಗಳೂ ಬಹಳ. ಪುಸ್ತಕವನ್ನು ಪ್ರಕಟಿಸಿರುವ ಅಭಿನವದ ರವಿಕುಮಾರ್ ಅವರೂ ಸೇರಿದಂತೆ, ಇಂತಹದೊಂದು ಯಕ್ಷಗಾನ ಇತಿಹಾಸದ ಅಧ್ಯಾಯ ಸೃಷ್ಟಿಗೆ ಕಾರಣಕರ್ತರಾಗಿರುವ ಎಲ್ಲರಿಗೂ ಯಕ್ಷಗಾನದ ಅಧ್ಯಯನಾಸಕ್ತರು ಸದಾ ಋಣಿಯಾಗಿರಬೇಕು.

ಸೋಮವಾರ, ಏಪ್ರಿಲ್ 4, 2022

ಉಲಿಯ ಉಯ್ಯಾಲೆ: ತಾಳಮದ್ದಳೆಯೆಂಬ ಮೋಹಕ ಲೋಕ

  • ಪುಸ್ತಕ: ಉಲಿಯ ಉಯ್ಯಾಲೆ
  • ಲೇಖಕರು: ರಾಧಾಕೃಷ್ಣ ಕಲ್ಚಾರ್
  • ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು
  • ಬೆಲೆ: ರೂ. 170
  • ಪ್ರಥಮ ಮುದ್ರಣ: 2022

ಉಲಿಯ ಉಯ್ಯಾಲೆ’ ಎಂಬ ಶೀರ್ಷಿಕೆಯಿಂದಲೇ ಆಕರ್ಷಿಸಲ್ಪಟ್ಟವನು ನಾನು. ಮಾರುಕಟ್ಟೆಯ ದೃಷ್ಟಿಯಿಂದ ನೋಡುವುದಾದರೆ ಪುಸ್ತಕದ ಯಶಸ್ಸಿನಲ್ಲಿ ಶೀರ್ಷಿಕೆಯ ಪಾಲೂ ಇದೆಯಂತೆ. ಆದರೆ ಈ ಪುಸ್ತಕ ಇಷ್ಟವಾಗುವುದಕ್ಕೆ ಹಲವು ಕಾರಣಗಳುಂಟು.

ಕಲ್ಚಾರರು ತಮ್ಮ ಉಲಿಯ ಉಯ್ಯಾಲೆಗೆ ‘ತಾಳಮದ್ದಳೆಯೆಂಬ ಮೋಹಕ ಲೋಕ’ ಎಂಬ ಉಪಶೀರ್ಷಿಕೆ ನೀಡಿದ್ದಾರೆ. ಈ ಪುಸ್ತಕವನ್ನು ಏನೆಂದು ಕರೆಯಬೇಕೆಂದು ಯೋಚಿಸಿದೆ. ಇದು ಆತ್ಮಕಥೆಯೇ?  ಕಾದಂಬರಿಯೇ? ಕಥಾಸಂಕಲನವೇ? ಅಂಕಣಗಳ ಸಂಕಲನವೇ? ತಾಳಮದ್ದಳೆಯ ಇತಿಹಾಸ ಕಥನವೇ? ಈ ಕಲಾಪ್ರಕಾರದ ಭೂತ-ವರ್ತಮಾನಗಳನ್ನು ವಿಶ್ಲೇಷಿಸುವ ವಿಮರ್ಶಾ ಕೃತಿಯೇ?

ಪ್ರತಿಯೊಂದು ಪ್ರಶ್ನೆಗೂ ಒಂದು ಕಡೆಯಿಂದ ಹೌದು ಅಂತಲೂ, ಇನ್ನೊಂದು ಕಡೆಯಿಂದ ಅಲ್ಲ ಅಂತಲೂ ಹೇಳಬೇಕೆಂದು ಅನಿಸುತ್ತದೆ. ಇದು ಇವುಗಳಲ್ಲಿ ಯಾವುದೂ ಅಲ್ಲ, ಮತ್ತು ಎಲ್ಲವೂ ಹೌದು. ಇದು ಇವೆಲ್ಲವುಗಳ ಹೊಸದೊಂದು ಮಿಶ್ರಣ ಅಂತಾದರೂ ಕರೆಯಬಹುದು.

ಆತ್ಮಕಥೆಯೇ? ಇದಕ್ಕೆ ಅಂತಹದೊಂದು ಲಕ್ಷಣ ಇದೆ. ಯಕ್ಷಗಾನದ ಬೀಜ ಬಿತ್ತಲ್ಪಟ್ಟ ಬಾಲ್ಯದ ರೋಚಕ ಪರಿಸರದ ವಿವರಣೆಗಳಿಂದ ತೊಡಗಿ ತಾನು ತಾಳಮದ್ದಳೆಯ ಲೋಕದಲ್ಲಿ ಸಾಗಿಬಂದ ಹಾದಿಯ ಸಿಂಹಾವಲೋಕನವನ್ನು ಲೇಖಕರು ಮಾಡಿದ್ದಾರೆ. ಆದರೆ ಅವರ ಒಟ್ಟಾರೆ ಬದುಕಿನ ಚಿತ್ರಣವಿಲ್ಲ. ಪತ್ರಕರ್ತರಾಗಿ, ಕಥೆಗಾರರಾಗಿ, ಲೇಖಕರಾಗಿ, ಅಧ್ಯಾಪಕರಾಗಿ ಅವರ ಅನುಭವಗಳು ಇಲ್ಲಿ ಬರುವುದಿಲ್ಲ. ಯಕ್ಷಗಾನ ಬದುಕಿನ ವಿವರಗಳೂ ಕಟ್ಟುನಿಟ್ಟಾಗಿ ಕಾಲಾನುಕ್ರಮಣಿಕೆಯ ವ್ಯವಸ್ಥೆಯಲ್ಲಿ ಇಲ್ಲ. ಇದು ತಮ್ಮ ಆತ್ಮಕಥೆಯೇನೂ ಅಲ್ಲವೆಂಬುದನ್ನು ಲೇಖಕರೇ ಸ್ಪಷ್ಟಪಡಿಸಿದ್ದಾರೆ. ಆದರೆ ಇಲ್ಲಿಯ ಶೈಲಿ ಶುದ್ಧ ಆತ್ಮನಿವೇದನೆಯದ್ದು.

ಹಾಗೆಂದು ಇದನ್ನೊಂದು ಸುಲಲಿತ ಕಾದಂಬರಿಯನ್ನಾಗಿಯೂ, ಮೂವತ್ತು ಬಿಡಿ ಲೇಖನ ಅಥವಾ ಸಣ್ಣಸಣ್ಣ ಕಥೆಗಳನ್ನಾಗಿಯೂ ಓದಿಕೊಳ್ಳಬಹುದು. ಪೂರ್ತಿಯಾಗಿ ಓದಿದ ಮೇಲೆ ತಾಳಮದ್ದಳೆಯೆಂಬ ರಂಗಭೂಮಿಯ ಕಳೆದ ಕೆಲವು ದಶಕಗಳ ಒಟ್ಟಾರೆ ಸಾಂಸ್ಕೃತಿಕ ಇತಿಹಾಸದಂತೆಯೂ, ತಾಳಮದ್ದಳೆಯ ಭೂತ-ವರ್ತಮಾನಗಳ ಗಂಭೀರ ತುಲನೆಯಂತೆಯೂ ತೋರಬಹುದು. ನನಗೆ ಹೆಚ್ಚುಕಡಿಮೆ ಇದೇ ಭಾವನೆ ಬಂತು.

ಯಕ್ಷಗಾನ ಕ್ಷೇತ್ರದ ವಿವಿಧ ಆಯಾಮಗಳ ಕುರಿತು ಬಂದ ಪುಸ್ತಕಗಳು ಬಹಳ. ಆದರೆ ಅವುಗಳಲ್ಲಿ ಚಾರಿತ್ರಿಕ ದೃಷ್ಟಿಕೋನದವು ಕಡಿಮೆ. ಬೇರೆಬೇರೆ ಸಂದರ್ಭಗಳಲ್ಲಿ ಈ ಬಗೆಯ ಪ್ರಯತ್ನಗಳು ಆಂಶಿಕವಾಗಿಯಷ್ಟೇ ನಡೆದಿವೆ. ಅದರಲ್ಲೂ ಯಕ್ಷಗಾನದ ಸಮಗ್ರ ಸಾಮಾಜಿಕ ಇತಿಹಾಸದ ರಚನೆ ಇನ್ನಷ್ಟೇ ಆಗಬೇಕಿದೆ. ವಿಶ್ವವಿದ್ಯಾನಿಲಯ/ ಅಕಾಡೆಮಿಗಳಂತಹ ಸಂಸ್ಥೆಗಳ ಹಂತದಲ್ಲಿ, ದೊಡ್ಡಮಟ್ಟದಲ್ಲಿ ಆಗಬೇಕಾದ ಕೆಲಸವದು. ಈ ಕೆಲಸ ದೂರದ ಹಿಮಾಲಯದಂತೆ ಕಂಡರೂ ಎಂದಾದರೊಂದು ದಿನ ಅದರಲ್ಲಿ ತೊಡಗಿಸಿಕೊಳ್ಳಬೇಕು ಎಂಬ ದೊಡ್ಡ ಆಸೆ ನನಗಿದೆ. ಈ ಯೋಚನೆ ಮನಸ್ಸಿನಲ್ಲಿ ಸದಾ ಗುಂಯ್ ಗುಡುವ ಕಾರಣದಿಂದಲೋ ಏನೋ, ‘ಉಲಿಯ ಉಯ್ಯಾಲೆ’ ಒಂದು ಮಹತ್ವದ ಕೃತಿಯಾಗಿ ನನಗೆ ಕಂಡಿತು.

ಮೇಲ್ನೋಟಕ್ಕೆ ಒಬ್ಬ ಯಕ್ಷಗಾನ ಕಲಾವಿದ (ಮುಖ್ಯವಾಗಿ ತಾಳಮದ್ದಳೆ ಕಲಾವಿದ) ಆ ರಂಗಭೂಮಿಯತ್ತ ಆಕರ್ಷಿತನಾಗಿ, ಅದರೊಂದಿಗೆ ಬೆಳೆದ, ಕಂಡ ಏರಿಳಿತಗಳ, ಪಡೆದ ಅನುಭವಗಳ ಇತಿವೃತ್ತವಾಗಿ ಈ ಕೃತಿ ಕಂಡರೂ, ಅದರನ್ನು ಜನರಲೈಸ್ ಮಾಡಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಇದಕ್ಕೆ ಆತ್ಮಚರಿತ್ರೆಗಿಂತ ಹೆಚ್ಚಿನ ವ್ಯಾಪ್ತಿ ಇದೆ; ಯಕ್ಷಗಾನದ ಸಾಮಾಜಿಕ ಇತಿಹಾಸದ ಭಾಗವಾಗುವ ಶಕ್ತಿ ಇದೆ.

ತಮ್ಮ ಬಾಲ್ಯದ ನೆನಪುಗಳನ್ನು ಹೇಳಿಕೊಂಡ ಮೊದಲ ಐದಾರು ಅಧ್ಯಾಯಗಳಂತೂ ನನಗೆ ವೈಯಕ್ತಿಕವಾಗಿ ಆಪ್ತವೆನಿಸಿದವು. ಕಾರಣ ಅಂತಹದೇ ಬಾಲ್ಯದ ಪರಿಸರ ನನ್ನದೂ ಆಗಿದ್ದದ್ದು. ಬಹುಶಃ ನನ್ನಂತಹವರ ಮತ್ತು ಇದಕ್ಕಿಂತ ಹಿಂದಿನ ತಲೆಮಾರಿನ, ಗ್ರಾಮೀಣ ಪ್ರದೇಶಗಳಿಂದ ಬಂದ ಬಹುತೇಕರ ಬಾಲ್ಯವೂ ಹೀಗೆಯೇ ಇದ್ದಿರಬೇಕು. ವಿಸ್ಮಯದ ಕಲ್ಪನಾಲೋಕವನ್ನು ಕಟ್ಟಿಕೊಟ್ಟ ಅಜ್ಜನ ಕಥೆಗಳು, ಚಂದಮಾಮ, ಆಟ ನೋಡುವ ಹುಚ್ಚು, ಶಾಲಾ ವಾರ್ಷಿಕೋತ್ಸವದ ಯಕ್ಷಗಾನ ಸಂಭ್ರಮ.. ಇದೆಲ್ಲ ನಮ್ಮ ಕಥೆಯೇ ಅಲ್ಲವೇ ಎಂದು ಓದಿದವರಲ್ಲಿ ಹಲವರಿಗೆ ಅನ್ನಿಸಿರಬಹುದು.

ಆತ್ಮಕಥೆ, ಸಾಮಾಜಿಕ ಇತಿಹಾಸದ ಆಚೆಗೂ ಉಲಿಯ ಉಯ್ಯಾಲೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವುದಕ್ಕೆ ಅದರೊಳಗೆ ಅಂತಃಸ್ರೋತವಾಗಿರುವ ವೈಚಾರಿಕತೆಯೂ ಕಾರಣ. ಈ ವೈಚಾರಿಕತೆಯನ್ನು ಪ್ರತಿಫಲಿಸುವ ಮಾತುಗಳು ಅಲ್ಲಿಂದ ಇಲ್ಲಿಂದ ಉದ್ಧರಿಸಿದವಲ್ಲ. ಬರವಣಿಗೆಯ ಓಘಕ್ಕೆ ಸಹಜವಾಗಿ ಹುಟ್ಟಿಕೊಂಡ ಮನಸ್ಸಿನ ಯೋಚನೆಗಳು. ಬೇಲಿಯ ಮೇಲೆ ತಣ್ಣಗೆ ಪಲ್ಲವಿಸಿದ ಬಳ್ಳಿಗಳ ನಡುವೆ ಅರಳಿಕೊಂಡ ವರ್ಣಮಯ ಪುಷ್ಪಗಳಂತೆ ಅವು ಥಟ್ಟನೆ ಸೆಳೆಯುತ್ತವೆ. ಮನಸ್ಸಿನಲ್ಲಿ ಗಟ್ಟಿಯಾಗಿ ಕೂರುತ್ತವೆ.

ಅಂತಹ ಒಂದೆರಡನ್ನು ಓದುವಾಗ ಗುರುತು ಮಾಡಿಕೊಂಡೆ:

  • ಮೂಲತಃ ಮನುಷ್ಯನಲ್ಲಿ ಇಲ್ಲದಿರುವ ಏನನ್ನೂ ಪರಿಸರ ಬಿತ್ತಲಾರದು (ಪು. 18)
  • ನಾವಿರುವ ಈಗಿನ ತಲೆಮಾರು ಸಾಂಸ್ಕೃತಿಕ ಆಸಕ್ತಿ ಕಳೆದುಕೊಡಿದೆ ಎಂದು ಅಳುತ್ತಿದ್ದೇವೆ. ಅವರಲ್ಲಿ ಆಸಕ್ತಿ ಮೂಡುವುದಕ್ಕೆ ಅಡಿಪಾಯ ಹಾಕುವುದನ್ನೂ ಮರೆತಿದ್ದೇವೆ (ಪು. 23).
  • ಯಾವುದು ನಮ್ಮ ಪ್ರವೃತ್ತಿಗೆ ಒಲಿಯುತ್ತದೋ ಅದನ್ನು ಪರಿಶ್ರಮದಿಂದ ವೃದ್ಧಿಸಿಕೊಳ್ಳಬೇಕಲ್ಲದೆ ನಾನು ಪ್ರತಿಯೊಂದರಲ್ಲೂ ಪರಿಣತಿ ಸಾಧಿಸುತ್ತೇನೆಂಬ ಹಠಕ್ಕೆ ಬಿದ್ದರೆ ಯಾವುದರಲ್ಲೂ ಏಳಿಗೆಯಾಗುವುದಿಲ್ಲ (ಪು. 58-59)
  • ನಮ್ಮ ಹವ್ಯಾಸದ ಕುರಿತು ತೀರಾ ಮೋಹ ಇಟ್ಟುಕೊಳ್ಳುವುದು ಆರೋಗ್ಯಕರವಲ್ಲ (ಪು. 99)
  • ಆದರ್ಶವನ್ನು ಸಾಧಿಸಹೊರಟವನ ಮಾತು ಅರಣ್ಯರೋದನವಾಗುತ್ತದೆ. ಜನರನ್ನು ಮೆಚ್ಚಿಸಹೊರಟವನಿಗೆ ಆತ್ಮಸಾಕ್ಷಿ ಚುಚ್ಚುತ್ತದೆ (ಪು. 142)
  • ಹಳಸಿದ್ದನ್ನು ತಿಂದು ಹೊಟ್ಟೆನೋವು ಬಂದರೆ ತಿಂದವನ ವಿವೇಕ ಪ್ರಶ್ನಾರ್ಹವೇ ಹೊರತು ಹಳಸಿದ ಆಹಾರದ ಅಪರಾಧವಲ್ಲ (ಪು. 147)

ಈ ಬಗೆಯ ಹೊಳಹುಗಳು ತುಂಬ ಇವೆ. ಎಲ್ಲವನ್ನೂ ಇಲ್ಲೇ ಬರೆದರೆ ಮುಂದೆ ಓದುವವರಿಗೆ ಏನೂ ಉಳಿಸದಂತೆ ಆದೀತು. ಪುಸ್ತಕದ ಕೊನೆಯ ಒಂದಷ್ಟು ಲೇಖನಗಳಲ್ಲಿ ತನ್ನ ಅನುಭವವನ್ನು ಹೇಳಿಕೊಳ್ಳುತ್ತಲೇ ಒಟ್ಟಾರೆ ಕ್ಷೇತ್ರದ ವರ್ತಮಾನದ ಪರಿಸ್ಥಿತಿಯ ಅವಲೋಕನವನ್ನೂ ಮಾಡಿದ್ದಾರೆ. ಇತ್ತೀಚೆಗೆ ಬಂದ ಅವರ ‘ಅರ್ಥಾಲೋಕ’ ಈ ವೈಚಾರಿಕತೆಯ ವಿಸ್ತರಣೆಯಂತೆ ಇದೆ.

ಆತ್ಮನಿವೇದನೆ ಅಹಮಿಕೆಯ ಪ್ರದರ್ಶನ ಆಗಬಾರದು ಎಂಬ ಎಚ್ಚರ ತಮಗೆ ಇರುವುದಾಗಿ ಲೇಖಕರು ಪುಸ್ತಕದ ಆರಂಭದಲ್ಲೂ ಕೊನೆಯಲ್ಲೂ ಹೇಳಿಕೊಂಡಿದ್ದಾರೆ. ಅದಕ್ಕೆ ಅವರು ಸಾಕಷ್ಟು ಪ್ರಯತ್ನಪಟ್ಟಿರುವುದು ಗೊತ್ತಾಗುತ್ತದೆ. ನನಗೆ ಇಷ್ಟವಾದ ವಿಷಯವೆಂದರೆ, ಕೆಲವು ಘಟನೆಗಳನ್ನು ನೆನಪಿಸಿಕೊಳ್ಳುತ್ತ ಅವರು ‘ಅಲ್ಲಿ ನಾನು ಪಾಠ ಕಲಿತೆ’, ‘ಇಲ್ಲಿ ನನ್ನ ಅಹಮಿಕೆಗೆ ಪೆಟ್ಟು ಬಿತ್ತು’, ‘ಅಂದು ನಾನು ಹಾಗೆ ಮಾಡಬಾರದಿತ್ತು’ ಇತ್ಯಾದಿಯಾಗಿ ಹೇಳಿರುವುದು. ಪುಸ್ತಕದ ಕೊನೆಯ ಅಧ್ಯಾಯದ ಶೀರ್ಷಿಕೆಯೇ ‘ಮನ್ನಿಸೆನ್ನಪರಾಧವ’ ಎಂದು. ಅನೇಕ ಆತ್ಮಕಥಾರೂಪದ ಕೃತಿಗಳಲ್ಲಿ ಬರೆಹಗಾರ ತನ್ನ ಕುರಿತ ಉದಾತ್ತ ಚಿತ್ರಣವೊಂದನ್ನು ಮಾತ್ರ ಕೊಡಲು ಪ್ರಯತ್ನಿಸುತ್ತಾನೆ. ನೆಗೆಟಿವ್ ಅಂಶಗಳನ್ನು ಯಥಾಸಾಧ್ಯ ಮರೆಮಾಚುತ್ತಾನೆ. ಇದು ಹಾಗಿಲ್ಲದಿರುವುದು ನನ್ನಲ್ಲಿ ಅಚ್ಚರಿಯನ್ನೂ ಮೂಡಿಸಿತು.

ಇಂತಹ ಕೃತಿಗಳು ಕಲ್ಚಾರರಿಂದ ಹಾಗೂ ಇತರ ಕಲಾವಿದರಿಂದ ಇನ್ನಷ್ಟು ಬರಲಿ ಎಂಬುದು ನನ್ನ ಆಶಯ. ತಮ್ಮ ಅನುಭವಗಳನ್ನು ಒಂದು ಚೌಕಟ್ಟಿನಲ್ಲಿಟ್ಟು ಒಂದಷ್ಟು ಕಲಾವಿದರರು ಪ್ರಸ್ತುತಪಡಿಸಲು ಸಾಧ್ಯವಾದರೆ ಅದು ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಆದೀತು.

ಅಕ್ಷರ ಪ್ರಕಾಶನ ಎಂದಿನಂತೆಯೇ ಈ ಪುಸ್ತಕವನ್ನೂ ಅಚ್ಚುಕಟ್ಟಾಗಿ ಮುದ್ರಿಸಿದೆ. ರಕ್ಷಾಪುಟ ಸೊಗಸಾಗಿದೆ. ಆಸಕ್ತರು ಪುಸ್ತಕಕ್ಕಾಗಿ ಕೃತಿಕಾರ ರಾಧಾಕೃಷ್ಣ ಕಲ್ಚಾರ್ ಅವರನ್ನು (ಮೊ.: 9449086653) ಸಂಪರ್ಕಿಸಿ.

- ಸಿಬಂತಿ ಪದ್ಮನಾಭ ಕೆ. ವಿ.