ಶುಕ್ರವಾರ, ಮೇ 31, 2019

ಕುರಿಯ ವಿಠಲ ಶಾಸ್ತ್ರಿಗಳ ಆತ್ಮಕಥನ 'ಬಣ್ಣದ ಬದುಕು'

ಯಕ್ಷಗಾನ ಕೃತಿ ಪರಿಚಯ ಮಾಲಿಕೆ-4

ಕುರಿಯ ವಿಠಲ ಶಾಸ್ತ್ರಿಗಳ ಆತ್ಮಕಥನ 'ಬಣ್ಣದ ಬದುಕು'

ನಿರೂಪಣೆಪ. ಗೋಪಾಲಕೃಷ್ಣ
ಪ್ರಕಾಶನ: ಕರ್ನಾಟಕ ಸಂಘ, ಪುತ್ತೂರು
ವರ್ಷ: 2002           
ಪುಟಗಳುXVI + 82          
ಬೆಲೆರೂ. 60
ರಕ್ಷಾಪುಟ ವಿನ್ಯಾಸ: ಮೋಹನ ಸೋನ


ಆತ್ಮಕಥನವನ್ನು ಮೂರನೆಯ ವ್ಯಕ್ತಿ ನಿರೂಪಿಸುವಲ್ಲಿ ಎರಡು ಅನುಕೂಲಗಳು, ಮತ್ತೆರಡು ಅನನುಕೂಲಗಳು. ಅನುಕೂಲಗಳೆಂದರೆ ಬರೆಯುವ ಸ್ಥಿತಿಯಲ್ಲಿಲ್ಲದ ವ್ಯಕ್ತಿಯ ಚರಿತ್ರೆಯೂ ನಿರೂಪಕನ ಮೂಲಕವಾದರೂ ಓದುಗ ಜಗತ್ತಿಗೆ ಲಭ್ಯವಾಗುವುದು; ಮತ್ತು ನಿರೂಪಕನ ನಿರೂಪಣಾ ಸಾಮರ್ಥ್ಯದ ಲಾಭ ಓದುಗನಿಗೆ ದೊರೆಯುವುದು. ಅನನುಕೂಲಗಳೆಂದರೆ, ಕಥಾನಾಯಕನ ವ್ಯಕ್ತಿತ್ವ ಮತ್ತು ಬದುಕನ್ನು ನಿರೂಪಕ ಯಥಾವತ್ತಾಗಿ ಚಿತ್ರಿಸಲು ಸೋಲುವುದು ಹಾಗೂ ನಿರೂಪಕನ ವೈಯುಕ್ತಿಕ ಅಭಿಪ್ರಾಯವೂ ಆತ್ಮಕಥಾನಕದೊಳಗೆ ಸೇರಿಹೋಗುವುದು.

ಆದರೆ ಹಿರಿಯ ಪತ್ರಕರ್ತ ಪ. ಗೋಪಾಲಕೃಷ್ಣ ಅವರ ನಿರೂಪಣೆಯಲ್ಲಿ ಮೂಡಿಬಂದ ತೆಂಕುತಿಟ್ಟು ಯಕ್ಷಗಾನದ ಸೀಮಾಪುರುಷ ಕುರಿಯ ವಿಠಲ ಶಾಸ್ತ್ರಿಗಳ (1912-1972) ಆತ್ಮಕಥನ ‘ಬಣ್ಣದ ಬದುಕು’ ಓದಿದಾಗ ಮೊದಲೆರಡು ಅನುಕೂಲಗಳಷ್ಟೇ ಮನಸ್ಸಿಗೆ ನಾಟಿದವು. ಅನನುಕೂಲಗಳು ಗಮನಕ್ಕೆ ಬರಲೇ ಇಲ್ಲ. ಆತ್ಮಕಥೆ ಅನೇಕ ಬಾರಿ ಅತಿರಂಜಿತವೂ, ವೈಭವೀಕರಣವೂ, ಸ್ವಪ್ರಶಂಸೆಯೂ ಆಗುವುದಿದೆ. ‘ಬಣ್ಣದ ಬದುಕಿ’ನಲ್ಲಿ ಅಂತಹ ಅಪಾಯವೂ ಸಂಭವಿಸಿಲ್ಲ.

ನೇರ, ಸರಳ ನಿರೂಪಣೆಯ ಈ ಆತ್ಮಕಥೆ “ತೆಂಕಣ ಯಕ್ಷಗಾನ ಬಯಲಾಟದ ನವೋದಯದ ಮುಂಗೋಳಿ” ಕುರಿಯ ವಿಠಲ ಶಾಸ್ತ್ರಿಗಳ ಘನ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಲೇ ಸುಮಾರು ಮುಕ್ಕಾಲು ಶತಮಾನದ ಯಕ್ಷಗಾನದ ಬದಲಾವಣೆಯ ಇತಿಹಾಸವನ್ನೂ ನಾಜೂಕಾಗಿ ಓದುಗನೆದುರು ಕಡೆದಿಡುತ್ತದೆ. ಕರ್ನಾಟಕ ಪತ್ರಿಕೋದ್ಯಮದ ದೊಡ್ಡ ಹೆಸರು ಪ.ಗೋ. ಅವರ ವಿಶಿಷ್ಟ ಬರವಣಿಗೆ ಶೈಲಿಗೆ ಕನ್ನಡಿ ಹಿಡಿದಿರುವ ಈ ಕೃತಿ ತನ್ನ ನಿರುಮ್ಮಳ ನಿರೂಪಣಾ ಗುಣದಿಂದಲೇ ನಮ್ಮ ಆದರಕ್ಕೆ ಪಾತ್ರವಾಗುತ್ತದೆ.

ಪುಟ್ಟ ಪುಟ್ಟ ವಾಕ್ಯಗಳು, ಮೂರ್ನಾಲ್ಕು ವಾಕ್ಯ ಮೀರದ ಪುಟ್ಟ ವಾಕ್ಯವೃಂದಗಳು. ಪುಟಗಳು ತಾವಾಗಿಯೇ ಪಟಪಟನೆ ತಿರುಗುತ್ತಿರುತ್ತವೆ. ‘ಸುಧಾ’ ವಾರಪತ್ರಿಕೆಯಲ್ಲಿ ಮಾರ್ಚ್ 19, 1967ರಿಂದ ಜೂನ್ 25, 1967ರವರೆಗೆ ಧಾರಾವಾಹಿಯಾಗಿ ಮೊದಲ ಬಾರಿಗೆ ಪ್ರಕಟವಾದ ‘ಬಣ್ಣದ ಬದುಕು’ ಮುಂದೆ Webdunia ಜಾಲತಾಣದಲ್ಲಿ ಮರುಪ್ರಕಟಣೆಯಾದದ್ದೂ ಇದೆ (ಶಾಸ್ತ್ರಿಗಳ ಜನ್ಮಶತಮಾನೋತ್ಸವ ವರ್ಷ 1912ರಲ್ಲಿ).

ಬಾಲ್ಯದ ಯಕ್ಷಗಾನಗಳು ತಮ್ಮ ಮೇಲೆ ಪ್ರಭಾವ ಬೀರಿದ ರೀತಿ, ತಾವು ತಾಳಮದ್ದಳೆ ಅರ್ಥಧಾರಿಯಾಗಿ ರಂಗ ಪ್ರವೇಶ ಮಾಡಿದ್ದು, ತಂದೆಯ ಗರಡಿಯಲ್ಲಿ ಪಳಗಿದ್ದು, ಕುಲೀನ ಮನೆತನಗಳು ವೃತ್ತಿಪರ ಮೇಳಗಳಿಗೆ ಸೇರುವುದೇ ಅವಮಾನವೆಂದು ಸಮಾಜ ಭಾವಿಸಿದ್ದ ಕಾಲದಲ್ಲಿ ಅಂತಹ ಕಟ್ಟುಪಾಡುಗಳನ್ನು ಧಿಕ್ಕರಿಸಿ ಮೇಳಗಳಲ್ಲಿ ಗೆಜ್ಜೆ ಕಟ್ಟಿದ್ದು, ಮೂವತ್ತರ ಹರೆಯದಲ್ಲಿ ಸಮರ್ಥ ಗುರುಗಳನ್ನು ಹುಡುಕಿ ನೃತ್ಯ ಕಲಿತು ತಮ್ಮೊಳಗೆ ಬಹುದಿನಗಳಿಂದ ಕಾಡುತ್ತಿದ್ದ ಕೊರತೆಗೆ ಪರಿಹಾರವನ್ನು ಕಂಡುಕೊಂಡದ್ದು, ಮುಂದೆ ಜನಾನುರಾಗಿ ಕಲಾವಿದನೂ, ಸಂಘಟಕನೂ, ಅಗ್ರಮಾನ್ಯ ಮೇಳಗಳ ವ್ಯವಸ್ಥಾಪಕನೂ ಆಗಿ ಅಪಾರ ಯಶಸ್ಸು ಕಂಡದ್ದು... ಎಲ್ಲವನ್ನೂ ಒಂದಿನಿತೂ ಅಹಮಿಕೆಯ ಎಳೆಯಿಲ್ಲದೆ ನಿರಾಡಂಬರವಾಗಿ ಹೇಳುತ್ತಾ ಹೋಗುತ್ತಾರೆ ಕುರಿಯ ಶಾಸ್ತ್ರಿಗಳು.
  • ಸಮಾಜದ ಮೇಲ್ವರ್ಗದವರ ಅಸಡ್ಡೆ ಅನಾದರಗಳಿಗೆ ಒಳಗಾಗಿದ್ದ ಯಕ್ಷಗಾನಕ್ಕೆ ಕಾಯಕಲ್ಪ ಒದಗಿಸಿ ಎಲ್ಲರೂ ಕುಟುಂಬ ಸಮೇತ ಬಂದು ಅದನ್ನು ನೋಡುವಂತೆ ಮಾಡಿದ್ದು;
  • ಯಕ್ಷಗಾನದಲ್ಲಿ ತುಂಬಿದ್ದ ಅಶ್ಲೀಲತೆಯೇ ಮೊದಲಾದ ಕೆಡುಕುಗಳನ್ನು ಚಿವುಟಿ ಅದನ್ನು ಬಹುಜನರು ಒಪ್ಪುವ ವಿನ್ಯಾಸಕ್ಕೆ ತಂದು ನಿಲ್ಲಿಸಿದ್ದು;
  • ತೆಂಕುತಿಟ್ಟು ಯಕ್ಷಗಾನದಲ್ಲಿ ‘ಯಕ್ಷಗಾನ ನಾಟಕ’ ಎಂಬ ಹೊಸ ಪರಿಕಲ್ಪನೆಯನ್ನು ಪ್ರಯೋಗಕ್ಕೆ ತಂದದ್ದು;
  • ರಾಜಯೋಗ್ಯ ದಿರಿಸು-ಕಿರೀಟ ವೇಷದಲ್ಲೇ ವನವಾಸ ಮಾಡುತ್ತಿರುವಂತೆ ಚಿತ್ರಿತವಾಗಿದ್ದ ರಾಮಲಕ್ಷ್ಮಣರನ್ನು ಜಟಾವಲ್ಕಲಧಾರಿಗಳನ್ನಾಗಿಸಿ ಜನಸಾಮಾನ್ಯರ ಹತ್ತಿರಕ್ಕೆ ಕೊಂಡೊಯ್ದದ್ದು;
  • ಈಶ್ವರ, ದಕ್ಷ, ಕಂಸ, ಕರ್ಣ ಮೊದಲಾದ ಪಾತ್ರಗಳ ಚಿತ್ರಣವನ್ನು ತಾವೇ ಮೊದಲಬಾರಿಗೆ ಹಾಕಿಕೊಟ್ಟು ಮುಂದಿನ ತಲೆಮಾರಿನ ಕಲಾವಿದರಿಗೆ ಸಮರ್ಥ ಮಾದರಿಯೊಂದನ್ನು ಒದಗಿಸಿದ್ದು;
  • ದಕ್ಷಿಣಕನ್ನಡ-ಕಾಸರಗೋಡಿಗೆ ಸೀಮಿತವಾಗಿದ್ದ ತೆಂಕುತಿಟ್ಟು ಯಕ್ಷಗಾನವನ್ನು ರಾಜ್ಯದೆಲ್ಲೆಡೆ ಹಬ್ಬಿಸಿದ್ದಲ್ಲದೆ ದೆಹಲಿಯವರೆಗೂ ಕೊಂಡೊಯ್ದದ್ದು…

ಶಾಸ್ತ್ರಿಗಳ ಹೆಜ್ಜೆಗುರುತುಗಳು ‘ಬಣ್ಣದ ಬದುಕಿ’ನುದ್ದಕ್ಕೂ ಎದ್ದುಕಾಣುತ್ತವೆ. 
“ಯಕ್ಷಗಾನದಲ್ಲೇ ಜೀವನವನ್ನು ಸವೆಯಿಸಿ, ಬರಿಯ ಹಳ್ಳಿಗಾಡಿನ ಮೋಜು ಅದೆಂದು ಗೇಲಿ ಮಾಡಿಸಿಕೊಳ್ಳುತ್ತಿದ್ದ ಕೆಳ ತಾಣದಿಂದ ಕರ್ನಾಟಕದ ಅತಿ ಶ್ರೇಷ್ಠ ಜಾನಪದ ಕಲೆ ಎಂಬ ಉಚ್ಚ ಸ್ಥಾನಕ್ಕೆ ಅದು ಏರುವವರೆಗೂ, ಕಣ್ಣಾರೆ ಕಂಡು ಆನಂದಿಸುವವರೆಗೂ ಉಳಿದಿರುವೆನಾದುದರಿಂದ... ಎಕ್ಕಲಗಾನದ ಎಕ್ಕಲೆಗಳ ಜೊತೆಗೂ, ಯಕ್ಷನೃತ್ಯದ ದಕ್ಷರೊಂದಿಗೂ ಕುಣಿದು ಮಣಿದಿರುವೆನಾದುದರಿಂದ… ಯಕ್ಷಗಾನದಲ್ಲಿ ತ್ರಿಕರಣಪೂರ್ವಕ ಭಾಗವಹಿಸಿ, ಚೆಂಡೆಯ ಪೆಟ್ಟಿನೊಂದಿಗೆ ಗೆಜ್ಜೆಗಾಲನ್ನು ಕುಣಿಸುವಾಗಲೇ ರಂಗಸ್ಥಳದಲ್ಲಿ ಹೃದಯಕ್ಕೂ ಪೆಟ್ಟು ತಗುಲಿಸಿಕೊಂಡು ಆಸ್ಪತ್ರೆ ಸೇರಿ, ಕಡ್ಡಾಯ ನಿವೃತ್ತಿಯ ಕಟ್ಟಾಜ್ಞೆಯನ್ನು ಪಡೆಯುವವರೆಗೂ ಇದ್ದವನಾದುದರಿಂದ…” (ಪು. xiv) ಕೃತಿಯ ಆರಂಭದಲ್ಲೇ ಶಾಸ್ತ್ರಿಗಳು ಹೇಳಿರುವ ಈ ಮಾತುಗಳು ಅವರ ಒಟ್ಟಾರೆ ಬದುಕಿನ ಪುಟ್ಟ ಚಿತ್ರಣವನ್ನು ನೀಡುತ್ತವೆ.
ಧರ್ಮಸ್ಥಳ ಮೇಳವೊಂದನ್ನೇ ಸತತ 21 ವರ್ಷಗಳ ಕಾಲ ಪ್ರಧಾನ ಕಲಾವಿದನಾಗಿಯೂ ವ್ಯವಸ್ಥಾಪಕನಾಗಿಯೂ ಮುನ್ನಡೆಸಿದವರು ಶಾಸ್ತ್ರಿಗಳು. ಮೇಳದ ಉಸ್ತುವಾರಿ ಹಾಗೂ ಕಾಲಕ್ಕೆ ತಕ್ಕಂತೆ ರಂಗದಲ್ಲಿ ಯುಕ್ತ ಪರಿಷ್ಕರಣೆಗಳನ್ನು ಮಾಡುವುದಕ್ಕೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಇತ್ತು. ಗೌರಿ ಯೋಗಾಗ್ನಿಯಲ್ಲಿ ಬೆಂದುಹೋದ ವಾರ್ತೆಯನ್ನು ಕೇಳಿ ಕೆರಳಿ ಕೆಂಡವಾಗುತ್ತಿದ್ದ ಶಿವ, ಬ್ರಹ್ಮಕಪಾಲದ ಈಶ್ವರ- ಅವರಿಗೆ ಇನ್ನಿಲ್ಲದ ಗೌರವವನ್ನು ತಂದುಕೊಟ್ಟ ಪಾತ್ರಗಳು. ಜಯಚಾಮರಾಜೇಂದ್ರ ಒಡೆಯರ್, ರಷ್ಯಾದ ನಾಯಕರುಗಳಾದ ಬುಲ್ಗಾನಿನ್, ಕ್ರುಶ್ಶೇವ್, ಕೆಂಗಲ್ ಹನುಮಂತಯ್ಯ ಮೊದಲಾದ ಗಣ್ಯಾತಿಗಣ್ಯರೆದುರು ಯಕ್ಷಗಾನ ಪ್ರದರ್ಶಿಸುವ ಅವಕಾಶ ದೊರೆತದ್ದು ಶಾಸ್ತ್ರಿಗಳಿಗೇ.

ಅಷ್ಟಾದರೂ ವಿನಯವಂತಿಕೆ, ಸಜ್ಜನಿಕೆಯ ಸಾಕಾರಮೂರ್ತಿ ಅವರು. ಇಡೀ ಪುಸ್ತಕದ ನಡುವೆ ಎಲ್ಲಿಯೂ ಒಂದು ಆತ್ಮಪ್ರಶಂಸೆಯ, ಆಡಂಬರದ ಪ್ರದರ್ಶನವಿಲ್ಲ. ಮಾತು, ಅಭಿನಯಗಳಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದ್ದರೂ, ನೃತ್ಯದ ಕೌಶಲ ತಮ್ಮಲ್ಲಿಲ್ಲವಲ್ಲ ಎಂದು ಬಹುವಾಗಿ ಕೊರಗಿ ಕೊನೆಗೆ ಅದರಲ್ಲೂ ಪ್ರಾವೀಣ್ಯತೆಯನ್ನು ಪಡೆದ ಪರಿಶ್ರಮಿ ಅವರು. ಮೂವತ್ತು ದಾಟಿದ ಮೇಲೆ ಕಲಿಯುವ ಕಾಲ ಕಳೆದುಹೋಯಿತು ಎಂದುಕೊಳ್ಳುವವರೇ ಬಹಳ ಇರುವಾಗ ಮದುವೆಯಾಗಿ ಎರಡು ಮಕ್ಕಳಾದ ಮೇಲೆ ಶ್ರೀ ಕಾವು ಕಣ್ಣನ್, ಡಾ. ಕೊಚ್ಚಿ ಪರಮಶಿವನ್ ರಂಥ ವಿದ್ವಾಂಸರನ್ನು ಹುಡುಕಿಹೋಗಿ ಶಾಸ್ತ್ರೀಯ ಯಕ್ಷಗಾನ ನಾಟ್ಯ, ಭರತನಾಟ್ಯ, ಕಥಕ್ಕಳಿ ಅಭ್ಯಸಿಸಿ ತಮ್ಮಲ್ಲಿದ್ದ ಕೊರತೆಯನ್ನು ನೀಗಿಸಿಕೊಂಡ ಶಾಸ್ತ್ರಿಗಳು ತಮ್ಮ ಕೊನೆಗಾಲದವರೆಗೂ ವಿದ್ಯಾರ್ಥಿಯಾಗಿಯೇ ಇದ್ದರು.

ವೇಷದಲ್ಲಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿ (1965) ಶಾಸ್ತ್ರಿಗಳು ರಂಗದಿಂದ ಕಡ್ಡಾಯ ನಿವೃತ್ತಿ ಪಡೆದ ಕೊರಗಿನೊಂದಿಗೆ ‘ಬಣ್ಣದ ಬದುಕು’ ಮುಕ್ತಾಯವಾಗುತ್ತದೆ. ಆದರೂ ಕೊನೆಯ ವಾಕ್ಯದಲ್ಲಿ ಕಲಾವಿದನಿಗೆ ಸಹಜವಾಗಿ ಇರಬಹುದಾದ ಒಂದು ಆಶಾವಾದ ಇದೆ: 
“ಕುಣಿಯುವುದರ ಹೊರತು, ಬೇರಾವುದಾದರೂ ಒಂದು ರೀತಿಯಲ್ಲಿ ಸೇವೆಯನ್ನು ಯಕ್ಷಗಾನಕ್ಕೆ ಸಲ್ಲಿಸುವ ಕಾಲ ಬರಬಹುದು ನೋಡೋಣ” (ಪು. 82).

-      ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ