ಶನಿವಾರ, ಆಗಸ್ಟ್ 13, 2016

ಎರಡು ಆರಂಭಿಕ ಮಾತು

ಎಳವೆಯಿಂದಲೂ ಯಕ್ಷಗಾನವೆಂದರೆ ನನಗೊಂದು ಬಹುದೊಡ್ಡ ಬೆರಗು. ಬೆರಗು ಬಲುಬೇಗನೆ ನನ್ನನ್ನು ತನ್ನೊಳಕ್ಕೆ ಅಕ್ಕರೆಯಿಂದ ಬರಮಾಡಿಕೊಂಡಿತು. ಒಳಗಿದ್ದೂ ಹೊರಗಿದ್ದೂ ಅದರ ಬೆಡಗು ವಿಸ್ಮಯಗಳನ್ನು ಒಬ್ಬ ಸಾಮಾನ್ಯ ಮನುಷ್ಯನಾಗಿ ನೋಡುತ್ತಲೇ ಬಂದೆ. ಬೆರಗಿನ ಜಾಗದಲ್ಲಿ ಒಂದಿಷ್ಟು ಅನಾದರವಾಗಲೀ ಅಸಡ್ಡೆಯಾಗಲೀ ಪ್ರವೇಶಿಸುವುದಕ್ಕೆ ಅವಕಾಶವಾಗಿಲ್ಲ. ಹಂಚಿದಷ್ಟೂ ಹೆಚ್ಚಾಗುವ ಸಂತೋಷದಂತೆ, ಅದಿನ್ನೂ ನನ್ನೊಳಗೆ ಹಿಮಾಲಯದಂತೆ ಬೆಳೆಯುತ್ತಲೇ ಇದೆ.

ಯಕ್ಷಗಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಒಂದು ಪ್ರತ್ಯೇಕ ಬ್ಲಾಗಿನಲ್ಲೇ ಯಾಕೆ ದಾಖಲಿಸಿಕೊಂಡು ಹೋಗಬಾರದು ಎನಿಸಿತು. ಅದಕ್ಕೇ 'ಯಕ್ಷದೀವಿಗೆ' ಹುಟ್ಟಿಕೊಂಡಿದೆ. ಈಗಂತೂ ಯೋಗಾಯೋಗ ಎಂಬ ಹಾಗೆ ಯಕ್ಷಗಾನವೇ ನನ್ನ ಸಂಶೋಧನಾ ಕ್ಷೇತ್ರವಾಗಿಯೂ ದೊರೆತಿರುವುದರಿಂದ ಯಕ್ಷಗಾನವನ್ನು ಕೇವಲ ಬೆರಗಿನ ಕಣ್ಣುಗಳಿಂದ ನೋಡುವುದಕ್ಕಿಂತಲೂ, ಕುತೂಹಲ ಹಾಗೂ ಚಿಕಿತ್ಸಕ ದೃಷ್ಟಿಗಳಿಂದ ನೋಡುವುದು ಅನಿವಾರ್ಯವಾಗಿದೆ.

ಸದ್ಯಕ್ಕೆ ಅಧ್ಯಯನಕ್ಕೆ ಅನುಕೂಲವಾಗುವ ಒಂದಷ್ಟು ಪುಸ್ತಕಗಳನ್ನು ಓದುತ್ತಾ ಇದ್ದೆ. ಅವುಗಳನ್ನು ಓದುತ್ತಾ ಹೋದ ಹಾಗೆ, ನನ್ನಷ್ಟಕ್ಕೇ ಕೆಲವು ವಿಚಾರಗಳನ್ನು ಟಿಪ್ಪಣಿ ಮಾಡಿಕೊಳ್ಳುವುದರ ಜತೆಗೆ, ಪುಸ್ತಕಗಳನ್ನು ಎಲ್ಲರೊಂದಿಗೂ ಯಾಕೆ ಹಂಚಿಕೊಳ್ಳಬಾರದು ಎನಿಸಿತು. ಹಾಗಾಗಿ, 'ಯಕ್ಷಗಾನ ಕೃತಿ ಪರಿಚಯ ಮಾಲಿಕೆ' ಈಗ ಆರಂಭಿಸುತ್ತಿದ್ದೇನೆ. ನಮ್ಮಲ್ಲಿ ತುಂಬ ವಿಸ್ತಾರವಾದ ಯಕ್ಷಗಾನ ಸಂಬಂಧೀ ಸಾಹಿತ್ಯ ಇದೆ. ಅವೆಲ್ಲವನ್ನೂ ಓದುವ ಅಥವಾ ಕಡೇ ಪಕ್ಷ ನೋಡುವ ಕೆಲಸ ಒಬ್ಬ ವ್ಯಕ್ತಿಗೆ ಆಗುವ ಕೆಲಸ ಅಲ್ಲ. ಹಾಗಾಗಿ,  ನನ್ನ ಓದಿನ ಸಂದರ್ಭದಲ್ಲಿ ಎದುರಾಗುವ ಒಂದಷ್ಟು ಪುಸ್ತಕಗಳ ಬಗ್ಗೆ ನಿಮಗೆ ಹೇಳುವ ಒಂದು ಪ್ರಯತ್ನ ಇದಷ್ಟೇ

ಮುಖ್ಯವಾಗಿ ಇದು ಪುಸ್ತಕ ವಿಮರ್ಶೆ ಅಲ್ಲ. ಪುಸ್ತಕಗಳ ಪರಿಚಯ ಅಷ್ಟೇ. ನಿಯಮಿತವಾಗಿ- ದಿನಕ್ಕೊಂದು, ವಾರಕ್ಕೊಂದು ಹೀಗೆಲ್ಲ- ಪ್ರಕಟಿಸುವುದು ಕಷ್ಟ. ನಾನು ಓದುತ್ತಿದ್ದ ಹಾಗೆ ಅವುಗಳ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾ ಹೋಗುತ್ತೇನೆ. ಅವುಗಳಲ್ಲಿ ಹೊಸ ಪುಸ್ತಕಗಳೂ ಇರಬಹುದು, ಹಳೇ ಪುಸ್ತಕಗಳೂ ಇರಬಹುದು, ನೀವು ಓದಿದ್ದೂ ಇರಬಹುದು, ಓದದ್ದೂ ಇರಬಹುದು. ಅಂತೂ ನನ್ನಂತಹ ಒಂದಷ್ಟು ಕುತೂಹಲಿಗಳಿಗೆ ಮಾಹಿತಿ ಸಿಗಬಹುದು ಅಂತ ನನ್ನ ಭಾವನೆ.

ಪುಸ್ತಕಗಳಷ್ಟೇ ಅಲ್ಲದೆ, ಯಕ್ಷಗಾನ ಸಂಬಂಧೀ ಇನ್ಯಾವುದೇ ವಿಚಾರಗಳನ್ನೂ ಆಗಿಂದಾಗ್ಗೆ ಹಂಚಿಕೊಳ್ಳುವುದಕ್ಕೆ ಬ್ಲಾಗ್ ಒಂದು ವೇದಿಕೆಯಾಗಬಹುದು ಎಂದುಕೊಂಡಿದ್ದೇನೆ.

ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ