ಒಡಲಿನ ಮಡಿಲು-ಯಕ್ಷತಾರೆ: ಬಯಲಾಟದ
ನೆನಪುಗಳು
ಹೊಸ್ತೋಟ ಮಂಜುನಾಥ ಭಾಗವತ
ಪ್ರಕಾಶನ: ಅನೇಕ ನಾರಾಯಣ ಜೋಶಿ ಚಾರಿಟೇಬಲ್
ಟ್ರಸ್ಟ್, ಬೆಂಗಳೂರು.
ವರ್ಷ: 2015
ಪುಟಗಳು: 192
ಬೆಲೆ:
ರೂ. 150
ಹೊಸ್ತೋಟ ಮಂಜುನಾಥ ಭಾಗವತರ ಬಹುಮುಖಿ
ವ್ಯಕ್ತಿತ್ವವನ್ನು ಪರಿಚಯಿಸುವ ಕೃತಿಯಿದು. ಯಕ್ಷರಂಗದ ಒಬ್ಬ ಪ್ರಯೋಗಶೀಲ ನಿರ್ದೇಶಕ, ಶಿಸ್ತಿನ ಅಧ್ಯಾಪಕ,
ಪಾಂಡಿತ್ಯಪೂರ್ಣ ಕವಿ-ಕಲಾವಿದ, ಪ್ರಾಮಾಣಿಕ ಸಂಶೋಧಕ, ಪರಮ ಸ್ವಾಭಿಮಾನಿ, ದಾರ್ಶನಿಕ- ಹೀಗೆ ಹೊಸ್ತೋಟರ
ವಿವಿಧ ಮುಖಗಳ ದರ್ಶನ ಇಲ್ಲಿದೆ. ಇದು ಅವರ ಸಮಗ್ರ ಜೀವನ ಚರಿತ್ರೆ ಅಲ್ಲವಾದರೂ, ಅವರ ಆತ್ಮಕಥಾನಕದ
ಸಂಕ್ಷಿಪ್ತ ರೂಪವಂತೂ ಹೌದೆಂದು ಖಂಡಿತ ಹೇಳಬಹುದು.
“ಹೊಸ್ತೋಟ ಮಂಜುನಾಥ ಭಾಗವತರು ನನ್ನ
ಪಾಲಿಗೆ ಒಂದು ಪುಟ್ಟ ಗಣಿ. ಸ್ವಾರ್ಥದ ಸುಳಿವೂ ಇಲ್ಲದ ಈತ ನಿಜವಾಗಿ ಸನ್ಯಾಸಿ” ಎಂಬ ಕೆ. ವಿ. ಸುಬ್ಬಣ್ಣ
ಅವರ ಬೆನ್ನುಡಿಯ ವಾಕ್ಕು ಕೃತಿಯನ್ನು ಓದಿದಂತೆಲ್ಲಾ ನಮ್ಮೊಳಗೆ ಇಳಿಯುತ್ತಾ ಹೋಗುತ್ತದೆ. ಪ್ರಸ್ತುತ
76ರ ಆಸುಪಾಸಿನಲ್ಲಿರುವ ಹೊಸ್ತೋಟರು ತಮ್ಮ ಜೀವನದ ಅಷ್ಟೂ ಸಮಯವನ್ನು ಯಕ್ಷಗಾನದ ಉಪಾಸನೆಯಲ್ಲೇ ಕಳೆದವರು.
ಯಕ್ಷಗಾನದೊಂದಿಗಿನ ಅವರ ಬದುಕಿನ ಮುಖಾಮುಖಿಯನ್ನು ಎಳೆಯೆಳೆಯಾಗಿ ತೆರೆದಿಡುತ್ತದೆ ಈ ಪುಸ್ತಕ.
ಬಾಲ್ಯದಲ್ಲಿ ತಾವು ಕಂಡ ಯಕ್ಷಗಾನದ
ಚಿತ್ರಣವನ್ನು ಕೊಡುತ್ತಾ ನೆನಪುಗಳ ಪಯಣ ಆರಂಭಿಸುವ ಭಾಗವತರು, ಹಂತಹಂತವಾಗಿ ಅದೇ ಯಕ್ಷಗಾನದ ಒಳಗೊಳಗೆ
ತಾವು ಸೇರಿಹೋದುದನ್ನು ಯಾವುದೇ ಭಾವಾವೇಶಗಳಿಲ್ಲದೆ ಚಿತ್ರಿಸುತ್ತಾ ಹೋಗುತ್ತಾರೆ. ಅವರು ಹೇಳುವ ಕಥೆ
ಕೇವಲ ಅವರ ಜೀವನದ ಕಥೆಯಷ್ಟೇ ಆಗಿರದೆ, ಇಡೀ ಯಕ್ಷರಂಗ ಕಳೆದ ಮುಕ್ಕಾಲು ಶತಮಾನದಲ್ಲಿ ಕಂಡ ಏಳುಬೀಳುಗಳ
ಹಾಗೂ ಬದಲಾವಣೆಯ ಪರ್ವಗಳ ಕಥೆಯೂ ಆಗಿರುವುದು ಇಲ್ಲಿನ ವಿಶೇಷ.
ಯಕ್ಷಗಾನವು ಶಾಸ್ತ್ರೀಯವೇ? ಜಾನಪದವೇ?
ಎಂಬುದೊಂದು ಪ್ರಮುಖ ಚರ್ಚೆ. ಇದರ ಬಗೆಗೂ ಹೊಸ್ತೋಟರ ನಿಲುವು ಸ್ಪಷ್ಟವಾಗಿದೆ. ಅವರ ಪ್ರಕಾರ ಯಕ್ಷಗಾನ
ಒಂದು ಶುದ್ಧ ಜಾನಪದ ಕಲೆ; ಅದನ್ನು ಶಾಸ್ತ್ರೀಯತೆಯ ಚೌಕಟ್ಟಿನಲ್ಲಿ ಹಿಡಿದು ಕುಳ್ಳಿರಿಸುವುದರಿಂದ
ವಿಶೇಷ ಲಾಭವೇನೂ ಇಲ್ಲ. “ನಾನು ಚಿಕ್ಕಂದಿನಲ್ಲಿ ಕಂಡ ದಶಾವತಾರ ಆಟ ಜಾನಪದವೆನ್ನುವಂತೆಯೇ ಇತ್ತು.
ಶಾಸ್ತ್ರೀಯವೆಂದು ಕರೆಯುವ ಸಾಧ್ಯತೆಯಿರಲಿಲ್ಲ” (ಪು. 18).
“ಯಕ್ಷಗಾನವೊಂದು ನಿಯಮಬದ್ಧ ಶೈಲೀಕೃತ
ರಂಗಭೂಮಿ. ರಂಗಭೂಮಿ ಜನಸಾಮಾನ್ಯರ ಮಧ್ಯವೇ ಬೆಳೆದುಬರಬೇಕು. ನಿರ್ದಿಷ್ಟ ಜನರಿಗಾಗಿ ಮಾತ್ರ ಬಳಕೆಗೊಂಡ
ಕ್ಲಾಸಿಕ್ ರಂಗಭೂಮಿ ಯಕ್ಷಗಾನವಲ್ಲ. ಜನಸಾಮಾನ್ಯರಿಂದ ಅದನ್ನು ದೂರ ತಳ್ಳುವ ಶಾಸ್ತ್ರೀಯ ಚೌಕಟ್ಟು
ಇದಕ್ಕೇಕೆ? ರೂಢಿಯಿಂದ ಬಂದ ಉತ್ತಮ ಅಂಶಗಳನ್ನು ಒಳಗೊಳ್ಳುತ್ತ ಸಾಗಿ ಬಂದಿರುವ ಸಾಂಪ್ರದಾಯಿಕ ಕಲೆ
ಇದು…” (ಪು. 105).
ಹೊಸ್ತೋಟರದ್ದು ಸದಾ ಪ್ರಯೋಗಶೀಲ ಮನಸ್ಸು.
ಯಕ್ಷಗಾನ ಕಲಿಕೆಗೆ ವೈಜ್ಞಾನಿಕ ಸೂತ್ರವನ್ನು ಅಳವಡಿಸುವುದಲ್ಲದೆ ಸಮರ್ಪಕ ತರಬೇತಿಯಿಂದ ಅಂಧರೂ ಯಕ್ಷಗಾನ
ಆಡಬಲ್ಲರೆಂಬುದನ್ನು ಸಿದ್ಧಪಡಿಸಿದವರು ಅವರು. ನಾಟಕದಂತೆ ಯಕ್ಷಗಾನಕ್ಕೂ ನಿರ್ದೇಶನ ತುಂಬ ಮುಖ್ಯವೆಂದು
ನಂಬಿದ್ದವರು. ಶೇಕ್ಸ್ ಪಿಯರ್, ಕಾಳಿದಾಸ ಮೊದಲಾದ ಪ್ರಸಿದ್ಧರ ನಾಟಕಗಳನ್ನು ಆಧರಿಸಿ ಪ್ರಸಂಗ ರಚನೆ
ಮಾಡಿದವರು. ಪರಿಸರ ಸಂರಕ್ಷಣೆಯಂತಹ ಹೊಸ ಸಂದೇಶಗಳ ಪ್ರಸಾರಕ್ಕೆ ಯಕ್ಷಗಾನದ ನಮನೀಯತೆಯನ್ನು ಬಳಸಿಕೊಂಡವರು.
ಆದರೆ ಬದಲಾವಣೆಯ/ಪ್ರಯೋಗಶೀಲತೆಯ ಹೆಸರಿನಲ್ಲಿ ಯಕ್ಷಗಾನದ
ಚೌಕಟ್ಟನ್ನು ಮೀರುವವರ ಬಗ್ಗೆ ಅವರು ಸಿಟ್ಟಿನಿಂದ ಕುದಿಯುತ್ತಾರೆ.
“ಇಂದಿನ ಪ್ರಯೋಗದಲ್ಲಿ ಅನೇಕ ಆವಿಷ್ಕಾರ
ಅಧ್ಯಯನ ಆಕರ್ಷಣೆಗಳು ಮೈಗೂಡಿದ್ದರೂ ಆತ್ಮೀಯ ಆರಾಧನಾ ಭಾವದಲ್ಲಿ ಸಾಮೂಹಿಕ ಪಾಲುಗಾರಿಕೆ ಮಾಯವಾಗಿದೆ.
ಮನೋರಂಜನೆಯೇ ಮುಖ್ಯವಾಗಿದೆ. ಕಾಳಜಿ ಕಡಿಮೆಯಾಗಿದೆ” (ಪು. 24).
“ಮೇಳದವರು ಅಧ್ಯಯನಶೀಲರಾಗಿ ಹೊಣೆಗಾರರಾಗಿ
ಇರಬೇಕಾದ ಅಗತ್ಯ ಏಕಿದೆ ಎಂದರೆ ಜನರನ್ನು ರಂಜಿಸುವ ತನ್ಮಯಗೊಳಿಸುವ ಪ್ರಯತ್ನಕ್ಕೆ ಸಾಧ್ಯವಾದ ಸಂಗ್ರಹ
ಅವರಲ್ಲಿರಬೇಕು. ಅದಿಲ್ಲದಿದ್ದರೆ ಆ ವೇಷ ಹಾಕಿ ಹೋಗಿ ಸಾಮಾಜಿಕರನ್ನು ಮೋಸಗೊಳಿಸಿದಂತಾಗುತ್ತದೆ. ತಾನೇನು
ಮಾಡಬೇಕು ಎಂಬ ಅರಿವೂ ಇಲ್ಲದೆ ಆದದ್ದಾಗುತ್ತದೆ ಎಂದು ಹೇಳುವವರು, ತನ್ನ ಹೊಣೆಗಾರಿಕೆಯ ಪಾತ್ರವನ್ನೇ
ಮರೆತವರು, ಪಾತ್ರಧಾರಿಗಳಾದರೆ ವೇಷಭೂಷಣಗಳೂ ಕಳಚಿ ಬೀಳುತ್ತವೆ... ಆಟವಾಡುವುದೆಂದರೆ ಗದ್ದಲ ಎಬ್ಬಿಸಿ
ಸುತ್ತಲಿದ್ದವರ ನಿದ್ದೆಗೆಡಿಸುವುದಲ್ಲ…” (ಪು. 31-32).
“…ಅಡ್ಡಾದಿಡ್ಡಿ ಕುಣಿತಗಳು, ಹೆಜ್ಜೆಯ
ಅಭ್ಯಾಸವೇ ಇಲ್ಲದೆ ಭರತನಾಟ್ಯ-ಬ್ಯಾಲೆ-ಓಡಿಸ್ಸಿ ಇವುಗಳ ಹೆಸರಿನಲ್ಲಿ ಕ್ಲಬ್ ಡ್ಯಾನ್ಸಿನಂತೆ ಡಿಸ್ಕೋ
ಡ್ಯಾನ್ಸಿನಂತೆ ಕಾಣಿಸುತ್ತವೆ, ಪ್ರಸಿದ್ಧ ನಾಟ್ಯ ಪ್ರಕಾರಗಳ ಸಂಗೀತ ಪದ್ಧತಿಗಳ ಹೆಸರು ಹೇಳಿ ಪ್ರಕೃತ
ರಂಗದ ಪಾರಂಪರಿಕ ಬಳಕೆಗಳನ್ನು ಕಡೆಗಣಿಸಿ, ‘ನಾವು ಹೀಗೆ ಮಾಡದಿದ್ದರೆ ಕಲೆ ಉಳಿಯುವುದಿಲ್ಲ; ಹಳೆಯದನ್ನು
ಈಗ ಯಾರು ಕೇಳುತ್ತಾರೆ?” ಎಂದು ಗುಂಪು ಕಟ್ಟಿ ತಿರುಗುವ ದಗಾಕೋರರ ಹಾವಳಿಯಲ್ಲಿ ಯಕ್ಷಗಾನ ತನ್ನ ಸರ್ವಸ್ವವನ್ನೂ
ಕಳೆದುಕೊಂಡು ತಲೆ ಮರೆಸಿಕೊಳ್ಳುವಂತಾಗಿದೆ” (ಪು. 125)
“ಇತ್ತೀಚಿನ ದಶಕದಲ್ಲಿ ಪ್ರಸಿದ್ಧಿಯ
ಗೀಳು, ವ್ಯಾಪಾರೀ ಮನೋಭಾವ, ಅಭ್ಯಾಸದಲ್ಲಿ ಅನಾಸಕ್ತಿ, ವೈಯುಕ್ತಿಕ ಚಟ ಇವೇ ಹೆಚ್ಚು ಬೆಳೆಯತೊಡಗಿವೆ….
ಸಾಂದರ್ಭಿಕ ಅರಿವಿನಿಂದ ಸಾಂಸ್ಕೃತಿಕ ನೆಲೆಯಲ್ಲಿ ವ್ಯವಹರಿಸಿದ ಈ ರಂಗಭೂಮಿ ಇಂದಿನ ಯುವಜನಾಂಗದ ನೈಟ್
ಕ್ಲಬ್ಬಾಗದಿರಲಿ” (ಪು. 142).
“ಇಂದಿನ ಹಾಡುಗಾರರು ಸ್ವರಜ್ಞಾನ, ರಾಗಜ್ಞಾನ
ಸಂಪಾದಿಸಲು ಬಳಸುವ ಹಾದಿ, ಯಾವುದೋ ಭಾವಗೀತೆಯ, ಸಿನಿಮಾ ಹಾಡಿನ ಯಥಾನುಕರಣೆಯೇ ಹೊರತು ದಿನದ ಸ್ವಂತ
ಅಧ್ಯಯನದ ಫಲವಲ್ಲ. ಆ ಗುಂಗಿಗೆ ಯಕ್ಷಗಾನ ಪದ್ಯಸಾಹಿತ್ಯವನ್ನು ಸಿಕ್ಕಂತೆ ಬಳಸಿ ಗುನುಗಿದರೆ ಅದೊಂದು
ಬಗೆಯ ನರಳಿಕೆಯೇ ವಿನಹ ಹಾಡುಗಾರಿಕೆಯಲ್ಲ…” (ಪು.143).
ಇಷ್ಟೆಲ್ಲ ಅಸಮಾಧಾನಗಳ ಮಧ್ಯೆಯೂ ಹೊಸ್ತೋಟರಿಗೆ
ಭವಿಷ್ಯದ ಬಗ್ಗೆ ನಿರಾಶೆಯಿಲ್ಲ. “ತಾವು ಈ ರಂಗಕ್ಕೆ ಬಂದಿದ್ದರಿಂದಲೇ ರಂಗ ಬದುಕಿದೆ ಎಂದು ಭಾವಿಸುವ
ಲಂಪಟ ಲಂಗುಲಗಾಮಿಲ್ಲದ ವರ್ತನೆಯಿಂದ ತಾತ್ಕಾಲಿಕ ಗೊಂದಲ ಎದ್ದಿದೆಯಾದರೂ, ಈ ಕಲೆ ತನ್ನ ಸಶಕ್ತ ಮಾಧ್ಯಮಗಳ
ಶೈಲೀಕೃತ ಬಲದಿಂದ ಅಸ್ತಿತ್ವವುಳಿಸಿಕೊಳ್ಳುತ್ತದೆ- ಎಂಬ ನಂಬುಗೆ ನನಗಿದೆ” (ಪು. 125) ಎಂಬ ಅವರ ಆಶಯ
ಪುಸ್ತಕದ ಕೊನೆಯ ಪುಟಗಳಲ್ಲಿದೆ. ಭೂತ-ವರ್ತಮಾನಗಳನ್ನು ಚಿಕಿತ್ಸಕ ದೃಷ್ಟಿಯಿಂದಲೂ, ಭವಿಷ್ಯವನ್ನು
ಆಶಾವಾದದಿಂದಲೂ ಕಾಣುವ ಹೊಸ್ತೋಟರ ನೆನಪುಗಳ ಬುತ್ತಿ ಎಲ್ಲ ಯಕ್ಷಗಾನಪ್ರಿಯರಿಗೆ ಒಂದು ಉತ್ತಮ ಆಕರ
ಗ್ರಂಥ.
ಅಂದಹಾಗೆ,
ಈ ಪುಸ್ತಕವನ್ನು ವಿಮರ್ಶಿಸುವ ಉದ್ದೇಶದಿಂದ ಬರೆದ
ಬರೆಹ ಇದಲ್ಲ. ಪುಸ್ತಕ ಓದುತ್ತ ನನ್ನ ಮನಸ್ಸಿಗೆ ನಾಟಿದ ಒಂದಷ್ಟು ವಿವರಗಳನ್ನು ಪರಿಚಯದ ಉದ್ದೇಶದಿಂದ
ದಾಖಲಿಸಿದ್ದೇನೆ ಅಷ್ಟೇ.
ಸಿಬಂತಿ ಪದ್ಮನಾಭ ಕೆ. ವಿ.
Dear Padmanabha, Good idea and great work. I would sure read it regularly.All the best.
ಪ್ರತ್ಯುತ್ತರಅಳಿಸಿThanks a lot sir, for your encouraging words.
ಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿ