ಶನಿವಾರ, ಜೂನ್ 11, 2022

ನಾ. ಕಾರಂತ ಪೆರಾಜೆಯವರ 'ಅಮರಾವತಿ'

 • ಪುಸ್ತಕ: ಅಮರಾವತಿ
 • ಲೇಖಕರು: ನಾ. ಕಾರಂತ ಪೆರಾಜೆ
 • ಪ್ರಥಮ ಮುದ್ರಣ: 2022
 • ಪ್ರಕಾಶಕರು: ಜ್ಞಾನಗಂಗಾ ಪುಸ್ತಕ ಮಳಿಗೆ, ಪುತ್ತೂರು
 • ಪುಟಗಳು: 168
 • ಬೆಲೆ: ರೂ. 160
 • ಮುಖಪುಟ ವಿನ್ಯಾಸ: ಎಸ್ಸಾರ್ ಪುತ್ತೂರು
 • ಕಾರಂತರ ಸಂಪರ್ಕ: 9448985794 ಮತ್ತು 9448625794 (ವಾಟ್ಸಾಪ್) 

ನಾ. ಕಾರಂತ ಎಂಬ ಹೆಸರು ನೋಡಿದಾಗಲೆಲ್ಲ ನನಗೆ ನಾನೇ ಕೇಳಿಕೊಳ್ಳುವುದುಂಟು: ಇದೊಂದು ಯಾವ ನಮೂನೆಯ ಜನ ಮಾರಾಯ್ರೆ, ಅಂತ. ಹೇಳಿಕೇಳಿ ಪತ್ರಕರ್ತರು ಮತ್ತು ಯಕ್ಷಗಾನ ಕಲಾವಿದರು. ಯಾವಾಗ ನೋಡಿದರೂ ಯಾವುದೋ ಊರಿನ ಸುತ್ತಾಟದಲ್ಲಿರುತ್ತಾರೆ; ಯಾರೋ ಒಬ್ಬ ಪ್ರಯೋಗಶೀಲ ರೈತ ಅಥವಾ ಕಲಾವಿದರೊಡನೆ ಮಾತಾಡಿಕೊಂಡು ಕೂತಿರುತ್ತಾರೆ; ಇಲ್ಲವೇ ಯಾವುದೋ ಒಂದು ಆಟದಲ್ಲೋ ಕೂಟದಲ್ಲೋ ರಂಗದ ಮೇಲಿರುತ್ತಾರೆ. ಪತ್ರಿಕೆಗಳಲ್ಲಿ ತಿಂಗಳಿಗೆ ಐದಾರು ಬೈಲೈನು ಖಾಯಂ. ಇಂತಿಪ್ಪ ಕಾರಂತರ ಎರಡೋ ಮೂರೋ ಪುಸ್ತಕಗಳು ಪ್ರತೀ ವರ್ಷ ಪ್ರಿಂಟಾಗಿ ಅನಾಮತ್ತಾಗಿ ಹುಡುಕಿಕೊಂಡು ಬರುತ್ತವೆ. ಇವರನ್ನು ಇನ್ನು ಏನೂಂತ ಕರೆಯುವುದು?


ಹಾಗೆ, ಮೊನ್ನೆಮೊನ್ನೆ ಪ್ರಕಟವಾದ ಅವರ ಹೊಸ ಪುಸ್ತಕ ‘ಅಮರಾವತಿ’ಯನ್ನು ಓದುತ್ತಾ ಇದ್ದೆ. ಅದರ ಬಗ್ಗೆ ಹೇಳುವ ನೆಪದಲ್ಲಿ ಈ ಕಾರಂತರೆಂಬ ಸೋಜಿಗದ ಬಗ್ಗೆ ಎರಡು ಮಾತು ಬರೆಯಬೇಕೆನಿಸಿತು.

ಅಮರಾವತಿ- ಕೇಳಿದ ಕೂಡಲೇ ಆಹಾ ಅನ್ನಿಸುವ ಹೆಸರು. ಯಕ್ಷಗಾನಪ್ರಿಯರಿಗಂತೂ ರೋಮಾಂಚನ ಹುಟ್ಟಿಸುವ ಪದ. ಆದರೆ ಅಮರಾವತಿ ಎಂದರೆ ಸ್ವರ್ಗ - ಈ ಪುಸ್ತಕದೊಳಗಿರುವುದು  ಕಳೆದೆರಡು ವರ್ಷದ ಕೋವಿಡ್ ಕಾಲದಲ್ಲಿ ನಾವು ಕಳೆದುಕೊಂಡ ಯಕ್ಷಗಾನದ ಒಂದಷ್ಟು ಅಮೂಲ್ಯ ಜೀವಗಳ ನೆನಪು – ಎಂದು ಗೊತ್ತಾದಾಗ ಮನಸ್ಸಿನ ತುಂಬ ವಿಷಾದ. ಎಂತೆಂತಹ ಕಲಾವಿದರನ್ನೆಲ್ಲ ಕಳೆದುಕೊಂಡೆವು... “ಹಿರಿಯರ ಹೆಗಲುಗಳ ಮೇಲೆ ನಾವು ನಿಂತಿದ್ದೇವೆ” ಎನ್ನುವುದುಂಟು ಡಾ. ಜೋಶಿಯವರು. ಅಂತಹ ಹಿರಿಯರನ್ನೆಲ್ಲ ಸಾಲುಸಾಲಾಗಿ ಅಮರಾವತಿ ಸೇರಿದರು… ಆ ದುಃಖದ ನಡುವೆಯೂ ನಾ. ಕಾರಂತರಂಥವರು ಮಾಡಿದ ಕೆಲಸದಿಂದ ಏನೋ ಒಂದು ಸಣ್ಣ ನೆಮ್ಮದಿ. ಆ ಹಿರಿಯ ಕಲಾವಿದರ ನೆನಪುಗಳು, ಕೊಡುಗೆಗಳು ಪುಸ್ತಕ ರೂಪದಲ್ಲಾದರೂ ದಾಖಲಾದವಲ್ಲ- ಎಂದು.

ಯಕ್ಷಗಾನ ರಂಗದ ದೊಡ್ಡ ಸಮಸ್ಯೆ ದಾಖಲಾತಿಯ ಕೊರತೆ. ತಂತ್ರಜ್ಞಾನ ಬೆಳೆದ ಮೇಲೆ ಕ್ಯಾಸೆಟ್, ಸೀಡಿಗಳ ರೂಪದಲ್ಲಿ ಒಂದಷ್ಟು ಪ್ರದರ್ಶನಗಳು, ಸಂದರ್ಶನಗಳು ದಾಖಲಾದವು. ಯೂಟ್ಯೂಬ್, ವಾಟ್ಸಾಪ್, ಫೇಸ್ಬುಕ್ ಕಾಲದಲ್ಲಿ ಈ ದಾಖಲಾತಿಯ ವ್ಯಾಪ್ತಿ ಇನ್ನಷ್ಟು ವಿಸ್ತರಿಸಿತು (ಇಲ್ಲಿ ಜೊಳ್ಳಿನಿಂದ ಕಾಳನ್ನು ಆಯುವುದು ಇನ್ನೊಂದು ತೊಡಕು). ಆದರೆ ಅದಕ್ಕೂ ಹಿಂದಿನ ಯಕ್ಷರಂಗದ ಸಮೃದ್ಧಿಯನ್ನು ಗಮನಿಸಿದರೆ, ಆಗಿರುವ ದಾಖಲಾತಿ ಏನೂ ಅಲ್ಲ. ಹೆಚ್ಚು ಬೇಡ, ಕಳೆದ 70-80 ವರ್ಷಗಳಲ್ಲಿ ನಮ್ಮ ಯಕ್ಷಗಾನ, ತಾಳಮದ್ದಳೆ ಕಲಾವಿದರು ರಂಗದಲ್ಲಿ ಆಡಿದ ಮಾತುಗಳನ್ನೆಲ್ಲ ಲಿಪಿರೂಪಕ್ಕೆ ಇಳಿಸಿದರೆ ಎಷ್ಟು ಕೋಟಿ ಪುಟಗಳಾಗಬಹುದು ಎಂದು ನಾನು ನನ್ನಷ್ಟಕ್ಕೇ ಊಹಿಸಿ ವಿಸ್ಮಿತನಾಗುವುದುಂಟು. ಯಕ್ಷಗಾನ ಮೂಲತಃ ಆಶುಕಲೆ. ಅದು ಹಾಗಿದ್ದರೆ ಚೆನ್ನ. ಆದರೆ ಎಷ್ಟೋ ಕಲಾವಿದರು ಆಡುವ ಅಮೂಲ್ಯ ಮಾತುಗಳು, ಅಲ್ಲಿ ಮಿಂಚುವ ಅದ್ಭುತ ಹೊಳಹುಗಳು ದಾಖಲಾಗಿದ್ದರೆ ಅದು ಇನ್ನೂ ಚೆನ್ನಾಗಿರುತ್ತಿತ್ತು. ಕ್ಯಾಸೆಟ್ ಹಿಂದಿನ ಕಾಲ ಹಾಗಿರಲಿ, ಕ್ಯಾಸೆಟ್ ಬಂದ ಮೇಲಿನ ಕಾಲದ್ದಾದರೂ, ಅಕ್ಷರೂಪಕ್ಕೆ ಬಂದ ಅರ್ಥದ ಪ್ರಮಾಣ ಬಹಳ ಕಮ್ಮಿ. ಎಷ್ಟೋ ಕ್ಯಾಸೆಟ್ ಗಳು ಈಗ ಬಳಕೆಗೆ ದಕ್ಕದೆ ಹಾಗೇ ನಷ್ಟವಾಗಿವೆ.

ಇಂತಹ ಪರಿಸ್ಥಿತಿಯಲ್ಲಿ ‘ಅಮರಾವತಿ’ಯಂತಹ ಪುಸ್ತಕಗಳ ಬೆಲೆ ಗೊತ್ತಾಗುತ್ತದೆ.ಇದರಲ್ಲಿ ಕೋವಿಡ್ ಕಾಲದಲ್ಲಿ ನಿಧನರಾದ ಹದಿನೇಳು ಹಿರಿಯ ಕಲಾವಿದರ ಪರಿಚಯ, ಸಂದರ್ಶನದ ದಾಖಲಾತಿ ಇದೆ. ಪುಸ್ತಕದ ಆರಂಭದಲ್ಲಿ, ಯಕ್ಷಗಾನದ ಬಹುದೊಡ್ಡ ಪೋಷಕರೂ ಸ್ವತಃ ಕಲಾವಿದರೂ ಆಗಿದ್ದ ಎಡನೀರು ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಹಾಗೂ ಯಕ್ಷಗಾನದ ದಂತಕತೆ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರ ಕುರಿತ ಸುದೀರ್ಘ ನುಡಿನಮನ/ ಸಂದರ್ಶನ ಇದೆ. ನಂತರದ ಪುಟಗಳಲ್ಲಿ ಪುತ್ತೂರು ಶ್ರೀಧರ ಭಂಡಾರಿ, ಪದ್ಯಾಣ ಗಣಪತಿ ಭಟ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಡಾ. ಶಿಮಂತೂರು ನಾರಾಯಣ ಶೆಟ್ಟಿ, ವಂಡ್ಸೆ ನಾರಾಯಣ ಗಾಣಿಗ, ಮಲ್ಪೆ ವಾಸುದೇವ ಸಾಮಗ, ಸಂಪಾಜೆ ಶೀನಪ್ಪ ರೈ, ಮಾರ್ಗೋಳಿ ಗೋವಿಂದ ಸೇರೆಗಾರ್, ಕುರ್ನಾಡು ಶಿವಣ್ಣ ಆಚಾರ್, ಮುಳಿಯಾಲ ಭೀಮ ಭಟ್, ತಲೆಂಗಳ ರಾಮಚಂದ್ರ ಭಟ್, ಬಿ. ಎಸ್. ಓಕುಣ್ಣಾಯ, ಸರಸ್ವತಿ ಕೃಷ್ಣ ಭಟ್, ರಾಮಚಂದ್ರ ಅರ್ಬಿತ್ತಾಯ, ವೇಣೂರು ವಾಮನ ಕುಮಾರ್ ಅವರ ಕುರಿತ ನೆನಪುಗಳ ಅಕ್ಷರತೋರಣವಿದೆ.

ಇಲ್ಲಿನ ಅಧ್ಯಾಯಗಳು ಕಲಾವಿದರ ಬಯೋಡಾಟಾ ಬರೆಯುವುದಕ್ಕೆ ಸೀಮಿತವಾಗಿಲ್ಲ. ಅವುಗಳಲ್ಲಿ ಕಲಾವಿದರೊಂದಿಗಿನ ಸಂದರ್ಶನದ ದಾಖಲೀಕರಣವಿದೆ; ಲೇಖಕರ ವೈಯಕ್ತಿಕ ಒಡನಾಟದ ನೆನಪುಗಳಿವೆ. ಪ್ರತೀ ಕಲಾವಿದನ ಬಗೆಗೂ ಅವರ ಸಮಕಾಲೀನರು, ಹಿರಿಕಿರಿಯ ಕಲಾವಿದರು, ವಿದ್ವಾಂಸರು ವ್ಯಕ್ತಪಡಿಸಿದ ಅನಿಸಿಕೆಗಳಿವೆ. ಕೆಲವು ಅಧ್ಯಾಯಗಳನ್ನು ಬರೆಯುವ ಮುನ್ನ ಲೇಖಕರು ವಿವಿಧ ಕೃತಿಗಳ ಪರಾಮರ್ಶನವನ್ನೂ ಮಾಡಿದ್ದಾರೆ. ಹೀಗಾಗಿ ಯಕ್ಷಗಾನ ಅಧ್ಯಯನಾಸಕ್ತರಿಗೆ ‘ಅಮರಾವತಿ’ ಒಂದೊಳ್ಳೆಯ ಆಕರ ಆಗಬಲ್ಲುದು.

‘ಶೇಣಿ ದರ್ಶನ’ದಿಂದ ತೊಡಗಿ ಇತ್ತೀಚಿನ ಮಣಿಸರ, ‘ಮಾಸದ ಮೆಲುಕು’, ‘ಸುಮನಸ’, ‘ಅಡ್ಡಿಗೆ’, ‘ದಗಲೆ’ ಕೃತಿಗಳಲ್ಲೂ ಕಾರಂತರು ಇದೇ ದಾಖಲೀಕರಣದ ಕೆಲಸವನ್ನು ಮಾಡಿದ್ದಾರೆ. ಅನೇಕ ಕೃತಿಗಳನ್ನು, ಅಭಿನಂದನ ಗ್ರಂಥಗಳನ್ನು ಸಂಪಾದಿಸಿದ್ದಾರೆ. ‘ಅಮರಾವತಿ’ಗೆ ಮುನ್ನುಡಿ ಬರೆಯುತ್ತಾ ಶ್ರೀ ಗಣರಾಜ ಕುಂಬ್ಳೆಯವರು ಆಡುವ ಮಾತು ಕಾರಂತರ ಒಟ್ಟಾರೆ ಕೆಲಸದ ಹಿನ್ನೆಲೆಯಲ್ಲಿ ಪ್ರಮುಖವಾಗುತ್ತದೆ: “ಸಂಸ್ಕೃತಿಯ ಕೂಸುಗಳಾದ ನಮಗೆ ನಮ್ಮ ಸಂಸ್ಕೃತಿಯನ್ನು ಅಜರಾಮರವಾಗಿಸಿದ ಸ್ಮರಣೆ ಕರ್ತವ್ಯ. ಇತಿಹಾಸವನ್ನು ಮರೆತ ಜನಾಂಗ ಭವಿಷ್ಯದಲ್ಲಿ ಸರ್ವವನ್ನೂ ಕಳೆದುಕೊಳ್ಳುತ್ತದೆ ಎಂಬ ಎಚ್ಚರವನ್ನು ಮೂಡಿಸಲು ಇಂತಹ ಗ್ರಂಥಗಳು ಬೇಕು.”

ಇದರೊಂದಿಗೆ ಇನ್ನೊಂದು ಮಾತನ್ನೂ ಕುಂಬ್ಳೆಯವರು ಸೇರಿಸುತ್ತಾರೆ: “ಕಲಾವಿದರ ಕುರಿತಾಗಿರುವ ಪ್ರಚಾರಗಳು ವಿಶೇಷ ಮಾಧ್ಯಮಗಳಿಂದ ಗರಿಬಿಚ್ಚಿ ಹಾರಾಡುತ್ತಿರುವ ಕಾಲವಿದು. ಎಲ್ಲವೂ ವಾಸ್ತವವಲ್ಲ. ಒಂದೊಂದು ಪ್ರದರ್ಶನವೂ ಕಲಾವಿದನಿಗೆ ಸವಾಲು. ಒಂದೇ ಪ್ರದರ್ಶನದಲ್ಲಿ ಕಲಾವಿದನ ಆಳವನ್ನು ಅಳೆಯಲಾಗದು. ಸಿದ್ಧಿ ಬೇರೆ, ಪ್ರಸಿದ್ಧಿ ಬೇರೆ ಎಂಬ ನಿಜದ ಅರಿವು ಮೂಡುವುದು ಕಾಲನ ಲೀಲೆಯಲ್ಲಿ.” ಎರಡು ವೇಷ ಮಾಡಿ, ಮೂರು ಅರ್ಥ ಹೇಳಿ ದೊಡ್ಡ ಕಲಾವಿದರಾಗುವ ಇಂದಿನ ಚಮತ್ಕಾರದ ಕಾಲದಲ್ಲಿ ಈ ಮಾತುಗಳು ತುಂಬ ಪ್ರಸ್ತುತ.

ಕಾರಂತರು ಮೂವತ್ತು-ನಲ್ವತ್ತು ವರ್ಷಗಳಿಂದ ಬರವಣಿಗೆಯಲ್ಲಿ, ಕಲಾವ್ಯವಸಾಯದಲ್ಲಿ ತೊಡಗಿಸಿಕೊಂಡವರು. ನಾವೆಲ್ಲ ಶಾಲೆಗೆ ಹೋಗುತ್ತಿದ್ದಾಗಲೇ ಅವರ ಹೆಸರು ಚಿರಪರಿಚಿತ. ಸುಧಾ, ತರಂಗ, ಉದಯವಾಣಿ, ಅಡಿಕೆ ಪತ್ರಿಕೆಗಳ ನಿಯಮಿತ ಓದುಗರಾಗಿದ್ದ ನಮಗೆ ಅವರ ನುಡಿಚಿತ್ರಗಳ ನೆನಪು ಧಾರಾಳ. ಯಕ್ಷಗಾನಕ್ಕಾಗಿ ಮಾಡಿದ ಕೆಲಸದಷ್ಟೇ ಕೃಷಿ ಸಾಹಿತ್ಯದ ಕಡೆಗೂ ಅವರ ಕೊಡುಗೆ ಇದೆ. ‘ಅನ್ನದ ಮರ’, ‘ಕೃಷಿ ಕತೆ-ಕೃಷಿಕರ ಕತೆ’, ‘ಜೀವಧಾನ್ಯ’, ‘ಅಗುಳು’, ‘ನೆಲದ ನಾಡಿ’, ‘ಮಾಂಬಳ’, ‘ಹಸಿರು ಮಾತು’ ಹೀಗೆ 15ಕ್ಕೂ ಹೆಚ್ಚು ಪುಸ್ತಕಗಳು ಕೃಷಿ ಕಡೆಗಿನ ಅವರ ಪ್ರೀತಿಯನ್ನು ತೋರಿಸುತ್ತವೆ. ಅಡಿಕೆ ಪತ್ರಿಕೆ ಹಾಗೂ ಇತರ ದಿನಪತ್ರಿಕೆ, ನಿಯತಕಾಲಿಕಗಳಲ್ಲಿ ಅವರು ಪರಿಚಯಿಸಿದ ಕೃಷಿಕರು, ಪ್ರಯೋಗಶೀಲರು ನೂರಾರು.

ಮನಸ್ಸು ಮಾಡಿದ್ದರೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ನೆಲೆಸಿ ಪತ್ರಿಕಾವೃತ್ತಿಯನ್ನು ಅವರು ಮುಂದುವರಿಸಬಹುದಿತ್ತು. ಆದರೆ ಅವರಿಗೆ ತೃಪ್ತಿಕೊಡುವ ಯಕ್ಷಗಾನ ಹಾಗೂ ಕೃಷಿ ಬರವಣಿಗೆಯ ಕಾಯಕವನ್ನು ಅವರು ಪುತ್ತೂರಲ್ಲೇ ಕುಳಿತು ಮಾಡಿದ್ದಾರೆ.  ಕರ್ನಾಟಕ ಸರ್ಕಾರದ ಪತ್ರಿಕೋದ್ಯಮ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪುಸ್ತಕ ಪ್ರಶಸ್ತಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿಗಳು ಅವರನ್ನೇ ಹುಡುಕಿಕೊಂಡು ಬಂದಿವೆ. ಅಭಿವೃದ್ಧಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗಂತೂ ಕಾರಂತರ ಕೆಲಸಗಳೇ ಜೀವಂತ ಪಠ್ಯಪುಸ್ತಕ.

‘ಅಮರಾವತಿ’ಯ ನೆಪದಲ್ಲಿ ಇಷ್ಟೆಲ್ಲ ಹೇಳಬೇಕೆನಿಸಿತು.

- ಸಿಬಂತಿ ಪದ್ಮನಾಭ ಕೆ. ವಿ.

2 ಕಾಮೆಂಟ್‌ಗಳು:

 1. ನಾ ಕಾರಂತರು ಕಲಾವಿದರ ಕುರಿತು ಬರೆಯುವಾಗ ಅದರಲ್ಲಿ ಕಾಣುವ ಆಪ್ತ ಭಾವ ಅಪರೂಪದ್ದು. ಸ್ವತಃ ಕಲಾವಿದರಾಗಿದ್ದು, ಚೌಕಿ, ರಂಗಸ್ಥಳದ ಸ್ವಾನುಭವದಿಂದ ಬರುವ ಒಂದೊಂದು ವಾಕ್ಯವೂ ಅರ್ಥಪೂರ್ಣ. "ಅಮರಾವತಿ"ಯನ್ನು ಕೊಂಡು ಓದಿದ್ದೇನೆ. ಸಿಬಂತಿಯವರ ಪುಸ್ತಕ ಪರಿಚಯ ಸಮಯೋಚಿತ.ಶುಭಾಶಯಗಳು

  ಪ್ರತ್ಯುತ್ತರಅಳಿಸಿ