ಶನಿವಾರ, ಏಪ್ರಿಲ್ 30, 2022

ಯಕ್ಷ ಗಾನ ಲೀಲಾವಳಿ: ಯಕ್ಷಗಾನ ರಂಗದ ಪ್ರಥಮ ವೃತ್ತಿಪರ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯರ ಆತ್ಮಕಥೆ

  • ಪುಸ್ತಕ: ಯಕ್ಷ-ಗಾನ ಲೀಲಾವಳಿ (ಯಕ್ಷಗಾನರಂಗದ ಪ್ರಥಮ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯರ ಆತ್ಮಕಥನ)
  • ನಿರೂಪಣೆ: ವಿದ್ಯಾರಶ್ಮಿ ಪೆಲತ್ತಡ್ಕ
  • ಪ್ರಕಟಣೆ: ಅಭಿನವ ಬೆಂಗಳೂರು
  • ಪುಟಗಳು: 164
  • ಬೆಲೆ: ರೂ. 150-00
  • ಸಂಪರ್ಕ: 9986266991

ಬದುಕು ಅರ್ಥವಾಗಬೇಕೆಂದರೆ ಆತ್ಮಕಥೆಗಳನ್ನು ಓದಿ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇನೆ. ಈ ಆತ್ಮಕಥೆ ಓದಿ ಬದುಕು ಎಷ್ಟು ಅರ್ಥವಾಯಿತೋ ಗೊತ್ತಿಲ್ಲ, ಲೀಲಮ್ಮನವರ ಕುರಿತು ಇದ್ದ ಗೌರವ-ಅಭಿಮಾನಗಳು ಇಮ್ಮಡಿಗೊಂಡದ್ದಂತೂ ನಿಜ.

‘ನಾವು ಬಾಲ್ಯ-ತಾರುಣ್ಯದಲ್ಲಿ ಪಟ್ಟ ಕಷ್ಟದ ಒಂದು ಪಾಲೂ ನೀವು ನೋಡಿಲ್ಲ’ ಎಂದು ನಮ್ಮ ಮಕ್ಕಳನ್ನು ನೋಡಿ ಕೆಲವೊಮ್ಮೆ ನಾವು ಬಯ್ಯುವುದಿದೆ; ಆದರೆ ಇಂತಹ ಹಿರಿಯರ ಜೀವನಗಾಥೆಗಳನ್ನು ಓದಿದ ಮೇಲೆ ನಮ್ಮ ಹಿರಿಯ ತಲೆಮಾರು ಅನುಭವಿಸಿದ ಕಷ್ಟಗಳ ಸಣ್ಣ ಪಾಲನ್ನೂ ನಾವೂ ಅನುಭವಿಸಿಲ್ಲ ಎಂದು ಅನಿಸುವುದಿದೆ.

ಔಪಚಾರಿಕ ಶಿಕ್ಷಣವನ್ನೇ ಪಡೆಯದ ಹೆಣ್ಣುಮಗಳೊಬ್ಬರು, ಮಹಿಳೆಯರು ಯಕ್ಷಗಾನಕ್ಕೆ ಪ್ರೇಕ್ಷಕರಾಗಿ ಹೋಗುವುದೂ ಮನೆಮಂದಿಗೆ ಇಷ್ಟವಿಲ್ಲದ ಕಾಲದಲ್ಲಿ – ಅರ್ಧಶತಮಾನದ ಹಿಂದೆ – ವೃತ್ತಿಪರ ಮೇಳಗಳಲ್ಲಿ ಸತತ ಎರಡೂವರೆ ದಶಕ ಭಾಗವತರಾಗಿ ತಿರುಗಾಟ ಮಾಡಿದರು ಎಂಬುದನ್ನು ನಂಬುವುದೂ ಕಷ್ಟ. ಆದರೆ ನಂಬಲೇಬೇಕು; ಏಕೆಂದರೆ ನಮ್ಮೆದುರು ಲೀಲಮ್ಮ ಇದ್ದಾರೆ. ಈ ಕಥೆಯನ್ನೇ ಪ್ರತಿಭಾವಂತ ನಿರ್ದೇಶಕನೊಬ್ಬ ದೃಶ್ಯ ರೂಪಕ್ಕಿಳಿಸಿದರೆ ಎಷ್ಟು ಸುಂದರ ಬಯೋಪಿಕ್ ಆಗಬಹುದಲ್ಲ ಎಂದು ನನಗೆ ಓದಿನ ನಡುವೆ ಅನಿಸಿದ್ದೂ ಉಂಟು.

ಅವರ ಬದುಕಿನ ಕಥೆ ತೆರೆದುಕೊಳ್ಳುತ್ತಾ ಹೋದಂತೆ ನಮ್ಮೊಳಗೂ ಹೊಸದೊಂದು ಪ್ರಪಂಚ ಬಿಚ್ಚಿಕೊಳ್ಳುತ್ತದೆ. ಮನಸ್ಸು ಆರ್ದ್ರವಾಗುತ್ತದೆ. ನಾವು ಅಗಾಧವಾಗಿ ಪ್ರೀತಿಸುವ ಕಲೆಯೊಂದು ಇಷ್ಟು ವಿಸ್ತಾರವಾಗಿ ಬೆಳೆದಿರುವುದರ ಹಿಂದೆ ಎಷ್ಟೊಂದು ಮಂದಿಯ ತ್ಯಾಗಗಳಿವೆ ಎಂದು ಪುನಃಪುನಃ ಮನವರಿಕೆ ಆಗುತ್ತದೆ.

ಇಂತಹದೊಂದು ಸಂತೃಪ್ತಿಗೆ ಕಾರಣರಾದ ನಿರೂಪಕಿ ವಿದ್ಯಾರಶ್ಮಿ ಖಂಡಿತ ಅಭಿನಂದನಾರ್ಹರು. ಏಕೆಂದರೆ ಇದು ಕೇವಲ ಮಹಿಳೆಯೊಬ್ಬರ ಸಾಹಸಕಥನ ಮಾತ್ರ ಅಲ್ಲ, ಯಕ್ಷಗಾನ ಇತಿಹಾಸದ ಪ್ರಮುಖ ಅಧ್ಯಾಯವೂ ಹೌದು. ಲೀಲಮ್ಮನವರು ವೃತ್ತಿಪರ ಭಾಗವತರಾಗಿ ಅಭ್ಯುದಯ ಕಂಡ ಕಾಲ ವಿವಿಧ ಕಾರಣಗಳಿಗಾಗಿ ಯಕ್ಷಗಾನ ಚರಿತ್ರೆಯಲ್ಲಿ ಮಹತ್ವದ್ದೆನಿಸುತ್ತದೆ. ಯಕ್ಷಗಾನಕ್ಕೆ ಆಧುನಿಕತೆಯ ಪ್ರವೇಶ, ಟೆಂಟ್ ಮೇಳಗಳ ಉಚ್ಛ್ರಾಯ ಕಾಲ, ಅಪಾರ ಸಂಖ್ಯೆಯಲ್ಲಿ ತುಳು ಪ್ರಸಂಗಗಳು ರಂಗಕ್ಕೆ ಬಂದು “ತುಳು ತಿಟ್ಟು” ಎಂಬ ಹೊಸ ಆಯಾಮವೇ ಹುಟ್ಟಿಕೊಂಡದ್ದು, ಆ ಮೂಲಕ ಯಕ್ಷಗಾನವು ಜನಸಾಮಾನ್ಯರ ಮನಸ್ಸು ಹಾಗೂ ದೈನಂದಿನ ಬದುಕಿಗೆ ಹತ್ತಿರವಾದದ್ದು- ಇಂತಹ ವಿಶಿಷ್ಟ ಕಾಲಘಟ್ಟದ ಚರಿತ್ರೆಗೂ ಒಂದು ಗಟ್ಟಿ ಆಧಾರವಾಗಿ ನಿಲ್ಲುವುದು ಲೀಲಮ್ಮನವರು ಆತ್ಮಕಥೆಯ ವೈಶಿಷ್ಟ್ಯ.

ಆತ್ಮಕಥೆ ಬರೆಯುವವರ ಪ್ರಮುಖ ಸವಾಲೆಂದರೆ ಅದು ಆತ್ಮರತಿ ಆಗದಂತೆ ನೋಡಿಕೊಳ್ಳುವುದು. ಈ ಇಡೀ ಪುಸ್ತಕದಲ್ಲಿ ಅಂತಹದೊಂದು ಸ್ವಪ್ರಶಂಸೆಯ ಒಂದು ಸಣ್ಣ ಎಳೆಯೂ ಕಾಣಿಸಿಕೊಂಡಿಲ್ಲ. ಅದು ಕಥಾನಾಯಕಿಯ ಹಾಗೂ ನಿರೂಪಕಿಯ ಯಶಸ್ಸೂ ಹೌದು. ವಿನಯವೇ ಮೈವೆತ್ತ ವ್ಯಕ್ತಿತ್ವ ಲೀಲಮ್ಮನವರದ್ದು. ಇನ್ನು ಅವರು ಹೇಳಿಕೊಂಡ ಕಥೆಯಲ್ಲಿ ಆತ್ಮಪ್ರಶಂಸೆ ಕಾಣಿಸಿಕೊಳ್ಳುವುದಾದರೂ ಹೇಗೆ? ಬದುಕಿನ ಹಾದಿಯುದ್ದಕ್ಕೂ ತನ್ನ ಪತಿ, ಮಕ್ಕಳು, ಬಂಧುಗಳು ಹಾಗೂ ಹಿತೈಷಿಗಳ ತ್ಯಾಗ ದೊಡ್ಡದು, ತನ್ನದೇನೂ ಇಲ್ಲ ಎಂಬ ಅವರ ವಿನಯವಂತಿಕೆಯೇ ಅವರ ವ್ಯಕ್ತಿತ್ವವನ್ನು ಬಹಳ ಎತ್ತರಕ್ಕೆ ಏರಿಸಿದೆ. ಆ ವ್ಯಕ್ತಿತ್ವವನ್ನು ಅಷ್ಟೇ ಪರಿಣಾಮಕಾರಿಯಾಗಿ ಪ್ರತಿಫಲಿಸಿರುವುದು ಪುಸ್ತಕದ ಮುಖಪುಟದಲ್ಲಿ ಬಳಸಲಾಗಿರುವ ಅವರ ಚಿತ್ರ. ಅವರ ಅಮಾಯಕತೆ, ಸಜ್ಜನಿಕೆ ಹಾಗೂ ಪ್ರತಿಭೆಗಳನ್ನೆಲ್ಲ ಒಟ್ಟಿಗೆ ಎರಕ ಹೊಯ್ದಂತಿದೆ ಈ ಚಿತ್ರ. ಛಾಯಾಗ್ರಾಹಕ ಸುಧಾಕರ್ ಜೈನ್ ಅವರಿಗೆ ಇದಕ್ಕಾಗಿ ವಿಶೇಷ ಅಭಿನಂದನೆ ಹೇಳಬೇಕು.

ಆತ್ಮಕಥೆಯೊಂದು ಇನ್ನೊಬ್ಬರ ನಿರೂಪಣೆ ಎಂದಾಗ ಅಲ್ಲಿ ಇನ್ನೊಂದು ಸವಾಲೂ ಇದೆ. ಅದು ನಿರೂಪಕರ ಆತ್ಮಕಥೆ ಆಗದಂತೆ ನೋಡಿಕೊಳ್ಳುವುದು. ನಿರೂಪಕಿಯಾಗಿ ವಿದ್ಯಾರಶ್ಮಿ ಇದರಲ್ಲೂ ಬಹುತೇಕ ಯಶಸ್ವಿಯಾಗಿದ್ದಾರೆ. ಆದರೂ ಸಹಪಾಠಿಯಾಗಿ ಅವರ ಓದು, ಬರೆವಣಿಗೆ, ಯೋಚನಾಕ್ರಮ ಇತ್ಯಾದಿಗಳನ್ನು ಹತ್ತಿರದಿಂದ ಬಲ್ಲೆನಾದ್ದರಿಂದ ಕೆಲವೊಂದು ವಾಕ್ಯಗಳನ್ನು ಓದುವಾಗ “ಇದು ವಿದ್ಯಾರಶ್ಮಿಯ ಮನಸ್ಸಿನಿಂದ ಬಂದ ಹಾಗುಂಟು” ಎಂದು ಅನಿಸಿದ್ದೂ ಉಂಟು. ಆದರೆ ಅದರಿಂದ ಆತ್ಮಕಥೆಯ ಓದುವಿಕೆಗಾಗಲೀ, ಕಥಾನಾಯಕಿಯ ವ್ಯಕ್ತಿತ್ವ ಚಿತ್ರಣಕ್ಕಾಗಲೀ ತೊಡಕಾಗಿಲ್ಲ. ಅಲ್ಲದೆ, ಅವೆಲ್ಲ ಉದ್ದೇಶಪೂರ್ವಕ ಅಭಿವ್ಯಕ್ತಿ ಆಗಿರಲಾರದು. ನಿರೂಪಕಿ ಕಥಾನಾಯಕಿಯ ಬದುಕನ್ನು ತನ್ನ ಕಣ್ಣಿನಿಂದ ನೋಡುತ್ತ, ಅದರೊಳಗೆ ಬೆರೆತುಹೋಗುತ್ತ, ಅಲ್ಲಲ್ಲಿ ಅಯಾಚಿತವಾಗಿ ತಾನೇ ಪಾತ್ರವಾಗುವ ಪರಿಯೂ ಆಗಿರಬಹುದು.

“ಹೆಣ್ಣುಮಕ್ಕಳ ಬದುಕು ಚೆಂದವಿರಬೇಕೆಂದರಂತೂ ಬೆನ್ನಿಗೆ ಅಪ್ಪನಿರಲೇಬೇಕು” (ಪು. 29), “…ನನ್ನ ಬಗೆಗೆ ಅವರೊಂದು ಕನಸು ಕಟ್ಟಿಕೊಂಡರು” (ಪು. 46) ಎಂಬ ವಾಕ್ಯಗಳನ್ನು ಓದುವಾಗ ಥಟ್ಟನೆ ಅಲ್ಲೊಂದು ಕವಿತೆಯ ಸಾಲು ಕಂಡಂತಾಗಿ ಪುಳಕವಾದದ್ದಿದೆ. ಬದುಕಿನ ಸಂಕಷ್ಟ, ದುಡಿಯುವ ಅನಿವಾರ್ಯ, ಎಲ್ಲ ಎಡರುತೊಡರುಗಳ ನಡುವೆ ಹಿರಿಯರಿಂದ, ಸಮಾಜದಿಂದ ದೊರೆತ ಪ್ರಶಂಸೆ, ಮನ್ನಣೆ- ಇಂತಹವುಗಳನ್ನು ಓದುವಾಗ ಕಣ್ಣು ತೇವಗೊಂಡದ್ದೂ ಇದೆ.

ಯಕ್ಷಗಾನದ ನಿನ್ನೆಗಳ ಬಗ್ಗೆ ಹೇಳುವುದರ ಜೊತೆಗೆ ಇಂದು ಮತ್ತು ನಾಳೆಗಳ ಬಗೆಗೂ ಲೀಲಮ್ಮನವರು ಮಾತಾಡಿರುವುದು ಯಕ್ಷಗಾನಾಸಕ್ತರಿಗೆ ಪ್ರಮುಖವಾಗುತ್ತದೆ. “ಈಗ ಪದ ಹೇಳಿದವರೆಲ್ಲರೂ ಭಾಗವತ ಎನಿಸಿಕೊಳ್ಳುವುದು ನೋಡಿದಾಗ ನನಗೆ ಯಕ್ಷಗಾನದ ಮೂಲಬೇರು ಅಲುಗಾಡುತ್ತಿದೆಯೋ ಎಂಬ ಆತಂಕ ಮೂಡುತ್ತದೆ” (ಪು. 123);”ವೇದಿಕೆಯಲ್ಲಿ ದೀರ್ಘಕಾಲ ಬಾಳಬೇಕೆಂದರೆ ಪ್ರತಿಭೆಯ ಜೊತೆಗೆ ಪರಿಶ್ರಮ, ಬದ್ಧತೆಗಳು ಸೇರಬೇಕು ಎಂಬುದನ್ನು ಎಳೆಯರು ಮರೆಯಬಾರದು” (ಪು. 125) ಮುಂತಾದ ಮಾತುಗಳು ಅವರ ಅಂತರಂಗ ದರ್ಶನ ಮಾಡುವುದಷ್ಟೇ ಅಲ್ಲದೆ, ಹೊಸ ತಲೆಮಾರಿನ ಕಲಾವಿದರಿಗೆ ಕಿವಿಮಾತು ಹೇಳಿದಂತೆಯೂ ಇದೆ.

ಇಂತಹದೊಂದು ಆತ್ಮಕಥೆಯನ್ನು ನಿರೂಪಿಸುವುದರ ಹಿಂದೆ ತಾನು ಪಟ್ಟ ಕಷ್ಟವನ್ನು ವಿದ್ಯಾರಶ್ಮಿ ತಮ್ಮ ಆರಂಭಿಕ ಮಾತುಗಳಲ್ಲಿ ಹೇಳಿಕೊಂಡಿದ್ದಾರೆ. ಹೆಚ್ಚು ಮಾತಿನ ಪ್ರವೃತ್ತಿ ಇಲ್ಲದ ಲೀಲಮ್ಮನವರ ನೆನಪುಗಳನ್ನು ಕೆದಕುವುದು ಅವರಿಗೂ ದೊಡ್ಡ ಸಾಹಸವೇ ಆಗಿತ್ತು. ಅದರಲ್ಲೂ ದಿನಚರಿಯಂತಹ ಯಾವ ಲಿಖಿತ ಆಧಾರವೂ ಇಲ್ಲದೆ, ಕೇವಲ ನೆನಪುಗಳ ಆಧಾರದಲ್ಲಿ, ಕುಟುಂಬದ ಸದಸ್ಯರು, ಹತ್ತಿರದ ಬಂಧುಗಳ ವಿವರಗಳಲ್ಲಿ  ಒಬ್ಬರ ಆತ್ಮಕಥೆಯನ್ನು, ಅವರ ವ್ಯಕ್ತಿತ್ವಕ್ಕೆ ಕುಂದುಂಟಾಗದಂತೆ ಬರೆಯುವುದು ನಿಜಕ್ಕೂ ಕಷ್ಟದ ಕೆಲಸ. ಇದರ ಹಿಂದೆ ಲೀಲಮ್ಮನವರ ಮಗ ಅವಿನಾಶ್, ಪತಿ ಹರಿನಾರಾಯಣ ಬೈಪಾಡಿತ್ತಾಯರು, ಅಣ್ಣ ವಿಷ್ಣು ಹೆಬ್ಬಾರ್ ಅಂಥವರ ಮುತುವರ್ಜಿ, ಬೆಂಬಲಗಳೂ ಬಹಳ. ಪುಸ್ತಕವನ್ನು ಪ್ರಕಟಿಸಿರುವ ಅಭಿನವದ ರವಿಕುಮಾರ್ ಅವರೂ ಸೇರಿದಂತೆ, ಇಂತಹದೊಂದು ಯಕ್ಷಗಾನ ಇತಿಹಾಸದ ಅಧ್ಯಾಯ ಸೃಷ್ಟಿಗೆ ಕಾರಣಕರ್ತರಾಗಿರುವ ಎಲ್ಲರಿಗೂ ಯಕ್ಷಗಾನದ ಅಧ್ಯಯನಾಸಕ್ತರು ಸದಾ ಋಣಿಯಾಗಿರಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ