ಶುಕ್ರವಾರ, ಫೆಬ್ರವರಿ 27, 2026

ಪಾಸ್‌ಪೋರ್ಟ್ ಇಲ್ಲದೆ ವಿದೇಶಕ್ಕೆ ಹೊರಟಿದ್ದೆವು!

'ಭೂತಾನ್‌ನಲ್ಲಿ ಯಕ್ಷದೀವಿಗೆʼ

ಪ್ರವಾಸ ಕಥನ-5

ಡಾ. ಸಿಬಂತಿ ಪದ್ಮನಾಭ & ಡಾ. ಆರತಿ ಪಟ್ರಮೆ

(ಪ್ರಜಾಪ್ರಗತಿ, 22 ಫೆಬ್ರವರಿ 2026)

(ಮುಂದುವರಿದ ಭಾಗ...)

ಡಿಸೆಂಬರ್ 1 ಸೋಮವಾರ. ಎಂದಿನಂತೆ ಮನೆಯಿಂದ ಹೊರಡುವ ತರಾತುರಿಯಲ್ಲಿದ್ದಾಗ ಒಂದು ವಾಟ್ಸಾಪ್ ಕರೆ. ಅಪರಿಚಿತ ಸಂಖ್ಯೆ. “ಹಲೋ” ಎಂದರೆ ಆ ಕಡೆಯಿಂದ “ನಾವು ಭೂತಾನ್ ರಾಯಭಾರ ಕಚೇರಿಯಿಂದ” ಎಂದರು. ಅರೆ, ಎರಡು ತಿಂಗಳಿನಿಂದ ಸುದ್ದಿಯಿರಲಿಲ್ಲ, ಈಗ ಬೆಳ್ಳಂಬೆಳಗ್ಗೆ ಕರೆ ಮಾಡಿದ್ದಾರಲ್ಲ ಎಂದು ಕುತೂಹಲವಾಯಿತು. ಅವರು ಮಾತು ಮುಂದುವರಿಸಿದರು: “ನಿಮ್ಮ ಅಧ್ಯಯನ ಪ್ರವಾಸದ ವೇಳಾಪಟ್ಟಿ ಬಗ್ಗೆ ಒಂದು ಸಣ್ಣ ಸ್ಪಷ್ಟೀಕರಣ ಬೇಕಿತ್ತು. ನೀವು ಪ್ರವಾಸದ ಹನ್ನೆರಡನೆಯ ದಿನ ಬೌದ್ಧಮಂದಿರಗಳಿಗೆ ಭೇಟಿ ನೀಡುವುದಾಗಿ ಉಲ್ಲೇಖಿಸಿದ್ದೀರಿ. ಅವು ತುಂಬ ದೂರದಲ್ಲಿರುತ್ತವೆ. ಅಲ್ಲಿಗೆಲ್ಲ ಹೋಗಿ ಬರುವುದಕ್ಕೆ ಒಂದು ದಿನ ಸಾಕಾಗುವುದಿಲ್ಲ. ಇದನ್ನು ಹೇಗೆ ನಿಭಾಯಿಸುತ್ತೀರಿ ನೋಡಿ. ಅದರಂತೆ ನಿಮ್ಮ ವೇಳಾಪಟ್ಟಿಯನ್ನು ಪರಿಷ್ಕರಿಸಿ...”

ಭೂತಾನದಲ್ಲಿ ಯಾವ ಊರು, ಏನು ಕಥೆ? ಎಲ್ಲಿಂದ ಎಲ್ಲಿಗೆ ಎಷ್ಟು ದೂರ? ತುಮಕೂರಲ್ಲಿ ಕುಳಿತಿರುವ ನಾವು ಇಂಟರ್ನೆಟ್ ಇತ್ಯಾದಿಗಳ ಮಾಹಿತಿ ಆಧಾರದಲ್ಲಿ ಅಂದಾಜಿಸಬಹುದಷ್ಟೇ ಹೊರತು ಅಲ್ಲಿನ ವಾಸ್ತವ ತಿಳುವಳಿಕೆ ನಮಗೆಲ್ಲಿದೆ? ಪಾರೊ ಜಿಲ್ಲೆಯಲ್ಲಿರುವ ಕೆಲವು ಬೌದ್ಧಮಂದಿರಗಳಿಗೆ ಭೇಟಿ ನೀಡಿ ಮುಖವಾಡ ನೃತ್ಯದ ಬಗ್ಗೆ ಮಾಹಿತಿ ಪಡೆಯುತ್ತೇವೆ ಎಂದು ನಮ್ಮ ಪ್ರಸ್ತಾವನೆಯಲ್ಲಿ ಬರೆದಿದ್ದೆವು. ಆದರೆ ಅವು ಎಲ್ಲಿವೆ, ಪರಸ್ಪರ ಎಷ್ಟು ದೂರದಲ್ಲಿವೆ, ಅವುಗಳ ಮಧ್ಯೆ ಪ್ರಯಾಣಕ್ಕೆ ಎಷ್ಟು ಹೊತ್ತು ಬೇಕು ಎಂಬ ಮಾಹಿತಿ ನಮಗಿರಲಿಲ್ಲ. ಅಲ್ಲಿನ ಸ್ಥಳೀಯರನ್ನೇ ಯಾರನ್ನಾದರೂ ಕೇಳಬೇಕು. 

ಪ್ರತಿಯೊಂದಕ್ಕೂ ಫೋನೋ, ಮೆಸೇಜೋ ಮಾಡಿ ಕೇಳಬಹುದೆಂದರೆ ಅಷ್ಟೊಂದು ಆತ್ಮೀಯರು ಯಾರೂ ಅಲ್ಲಿಲ್ಲ. ಈ ಯೋಜನೆಯ ಕಾರಣಕ್ಕಾಗಿ ಒಂದಿಬ್ಬರ ಪರಿಚಯವಾಗಿರುವುದಷ್ಟೇ. ಅದೂ ತೀರಾ ಔಪಚಾರಿಕ ಮಾತುಕತೆಗಳು. ಸ್ನೇಹಿತರ ಬಳಿ ಮಾತಾಡುವಂತೆ ಅವರೊಂದಿಗೆ ಮಾತಾಡುವಂತಿಲ್ಲ. ಅಷ್ಟು ಹೆಚ್ಚಾಗದಂತೆ ಇಷ್ಟು ಕಡಿಮೆಯೂ ಆಗದಂತೆ ಅಳೆದು ಸುರಿದು ಮಾತಾಡಬೇಕು. ನೋಡೋಣ, ಇದಕ್ಕೆ ಏನಾದರೊಂದು ದಾರಿ ಹುಡುಕಬೇಕು ಎಂದು ಯೋಚಿಸುತ್ತಲೇ ಕರೆ ಮಾಡಿದ ರಾಯಭಾರ ಕಚೇರಿಯವರಿಗೆ, “ಆಯಿತು, ಸರಿಪಡಿಸಿ ಕಳಿಸುತ್ತೇವೆ” ಎಂದು ಉತ್ತರಿಸಿದೆವು.

ಆದರೆ ಯಾರೊಂದಿಗೆ ಮಾತಾಡಿ ಈ ಮಾಹಿತಿಯನ್ನು ಪಡೆಯುವುದು ಎಂದು ಹೊಳೆಯಲಿಲ್ಲ. ಈ ಹಿಂದೆ ನಾವು ಮಾಡಿದ ಸಂವಹನಗಳೆಲ್ಲ ಇ-ಮೇಲ್ ಮುಖಾಂತರ. ಪ್ರತಿ ಸಣ್ಣ ಮಾಹಿತಿಗೂ ಇ-ಮೇಲ್ ಮಾಡಿ ಉತ್ತರ ಪಡೆಯುವುದು ತ್ರಾಸದ ಕೆಲಸ. ವಾಟ್ಸಾಪ್ ಇದ್ದರೆ ಸಣ್ಣಪುಟ್ಟದಕ್ಕೂ ಮೆಸೇಜ್ ಮಾಡಿ ಕೇಳಬಹುದು. ಹಿಂದೆ ಸಂಸ್ಕೃತಿ ಇಲಾಖೆಯ ಸೋನಂ ಎಂಬವರ ಪರಿಚಯ ಅವರ ಜಾಲತಾಣದ ವಾಟ್ಸಾಪ್ ಲಿಂಕ್ ಮೂಲಕ ಆಗಿದ್ದರೂ ಅದು ಅವರ ಕಚೇರಿಗೆ ಸಂಬಂಧಿಸಿದ್ದು. ಅವರೇ ಅದನ್ನು ನೋಡುತ್ತಾರೆ ಎಂದೇನೂ ಇಲ್ಲ.  ಅದಲ್ಲದೆ ಅವರೆಲ್ಲ ಅಧಿಕಾರಿ ವರ್ಗದವರು; ಅವರೊಂದಿಗೆ ಚಾಟ್ ಮಾಡಿಕೊಂಡು ಕೂರುವುದಕ್ಕಾಗುತ್ತದಾ? ಸರಿಯಾದ ಮಾಹಿತಿಗಳಿಲ್ಲದೆ ಪ್ರಸ್ತಾವನೆ ಹೇಗೆ ಸಿದ್ಧಪಡಿಸಿದಿರಿ ಎಂದು ವಾಪಸ್ ಕೇಳಿದರೆ ಕಷ್ಟ! 

ನಮ್ಮೊಂದಿಗೆ ಸಹಭಾಗಿತ್ವ ಹೊಂದುವುದಕ್ಕೆ ಸಿದ್ಧವಿದ್ದ ಸಾಂಪ್ರದಾಯಿಕ ಪ್ರದರ್ಶನ ಕಲೆ ಮತ್ತು ಸಂಗೀತ ವಿಭಾಗ (TPAMD)ದ ಯಾರಾದ್ದಾದರೂ ದೂರವಾಣಿ ಸಂಖ್ಯೆ ದೊರೆತರೆ ಕೆಲಸ ಸುಲಭವಾಗುತ್ತದೆ ಅನಿಸಿತು. ಆದರೆ ಈ ಹಿಂದೆ ಅವರ ಸಹಾಯ ಕೋರಿ ಅವರಿಗೂ ಮೈಲ್ ಮಾಡಿದ್ದೆವು. ಟಿಪಿಎಎಂಡಿಯ ಸಹಭಾಗಿತ್ವ ಹೊಂದಬಹುದೆಂದು ಸೋನಂ ಅವರೇ ತಿಳಿಸಿದ್ದರು. ನಮಗೆ ಪ್ರತಿಕ್ರಿಯೆಯಾಗಿ ಹಾಕುವ ಎಲ್ಲ ಮೈಲ್‌ಗಳನ್ನು ಅವರಿಗೂ ಕಳಿಸುತ್ತಿದ್ದರು. ಆದರೆ ಅವರಿಂದ ನಮಗೆ ಯಾವುದೇ ನಿರ್ದಿಷ್ಟ ಪ್ರತಿಕ್ರಿಯೆ ಬಂದಿರಲಿಲ್ಲ. ಟಿಪಿಎಎಂಡಿ ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಸಂಸ್ಥೆಯಾದ್ದರಿಂದ ಅವರ ದೂರವಾಣಿ ಸಂಖ್ಯೆಯನ್ನು ಸೋನಂ ಅವರ ಮೂಲಕವೇ ಪಡೆಯುವುದು ಸರಿ ಎನಿಸಿತು. ಸೋನಂ ಅವರಿಗೊಂದು ಇ-ಮೇಲ್ ಬರೆದು, “ನಾವು ನಮ್ಮ ಯೋಜನೆಯ ಸಂಬಂಧ ಭೂತಾನ್‌ನಲ್ಲಿ ಕೆಲವು ಬೌದ್ಧ ಮಂದಿರಗಳನ್ನು ಸಂದರ್ಶಿಸಬೇಕಾಗಿದೆ. ಒಂದಷ್ಟು ಕಲಾವಿದರನ್ನು ಮಾತಾಡಿಸಬೇಕಾಗಿದೆ. ಈ ಬಗ್ಗೆ ಮಾಹಿತಿ ಪಡೆಯಲು ನಮಗೆ ಟಿಪಿಎಎಂಡಿಗೆ ಸಂಬಂಧಿಸಿದವರೊಬ್ಬರ ಸಂಪರ್ಕ ಸಂಖ್ಯೆ ಕೊಡಬಹುದೇ? ನಮಗೆ ಅವರಿಂದ ಈತನಕ ಯಾವುದೇ ಉತ್ತರ ಬಂದಿಲ್ಲ” ಎಂದು ಕೇಳಿದೆವು.

ಒಂದೇ ಗಂಟೆಯೊಳಗೆ ಅವರಿಂದ ಉತ್ತರ ಬಂತು. “ನಿಮ್ಮ ಪ್ರವಾಸಕ್ಕೆ ನನ್ನನ್ನು ಸಂಯೋಜಕಿ (focal) ಯನ್ನಾಗಿ ನೇಮಿಸಲಾಗಿದೆ. ಏನೇ ಪ್ರಶ್ನೆಗಳಿದ್ದರೂ ನೀವು ನನ್ನನ್ನು ಕೇಳಬಹುದು” ಎಂದು ಅವರು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆ ಕೊಟ್ಟಿದ್ದರು. ಇದರಿಂದ ತುಂಬ ಸಮಾಧಾನವೆನಿಸಿತು, ಮತ್ತು ಅವರ ಬಗ್ಗೆ ಗೌರವ ಮೂಡಿತು, ನಮ್ಮ ಯೋಜನೆಯನ್ನು ಭೂತಾನ್ ಸರ್ಕಾರ ಸಾಕಷ್ಟು ಗಂಭೀರವಾಗಿ ಪರಿಗಣಿಸಿದೆಯೆಂದು ಸಂತೋಷವೂ ಆಯಿತು. ಇನ್ನೇನೇ ಅನುಮಾನಗಳು ಬಂದರೂ ಇವರನ್ನೇ ಕೇಳಬಹುದಲ್ಲ ಎಂದು ನಿರಾಳವೆನಿಸಿತು. 

ತಕ್ಷಣ ಅವರ ಸಂಖ್ಯೆಯನ್ನು ಸೇವ್ ಮಾಡಿಕೊಂಡು, “ನಾವು ಪ್ರವಾಸದ ಹನ್ನೆರಡನೆಯ ದಿನ ಕೆಲವು ಬೌದ್ಧಮಂದಿರಗಳನ್ನು ಸಂದರ್ಶಿಸುವುದಾಗಿ ಬರೆದಿದ್ದೇವೆ. ಆದರೆ ಒಂದೇ ದಿನದಲ್ಲಿ ಅದೆಲ್ಲ ಸಾಧ್ಯವಾಗುವುದಿಲ್ಲ ಎಂಬ ಅನುಮಾನವನ್ನು ರಾಯಭಾರ ಕಚೇರಿಯವರು ವ್ಯಕ್ತಪಡಿಸಿ ಈ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದ್ದಾರೆ. ನಾವಿನ್ನೂ ವೇಳಾಪಟ್ಟಿ ಹಾಗೂ ಪ್ರಯಾಣದ ದಿನವನ್ನು ಅಂತಿಮಗೊಳಿಸಿಲ್ಲವಾದ್ದರಿಂದ ಇನ್ನೊಂದು ದಿನವನ್ನು ಹೆಚ್ಚುವರಿಯಾಗಿ ಸೇರಿಸಲು ನಮಗೆ ಅಡ್ಡಿಯಿಲ್ಲ. ಭೇಟಿ ನೀಡುವುದಕ್ಕೆ ಅನುಕೂಲವಿರುವ ಹತ್ತಿರದ ಬೌದ್ಧಮಂದಿರಗಳ ಬಗ್ಗೆ ಮಾಹಿತಿ ಕೊಡುತ್ತೀರಾ?” ಎಂದು ಕೇಳಿದೆವು.

“ನೀವು ಯಾವ ಬೌದ್ಧಮಂದಿರವನ್ನು ಭೇಟಿಮಾಡಲು ನಿರ್ಧರಿಸಿದ್ದೀರಿ? ಪಾರೋದಲ್ಲೇ, ಪುನಾಖಾದಲ್ಲೇ? ಭಾಷೆ ಮತ್ತು ಸಂಸ್ಕೃತಿ ಕಾಲೇಜು (CLCS) ಭೇಟಿಯನ್ನು ನೀವು ಈಗಾಗಲೇ ಯೋಜಿಸಿಕೊಂಡಿದ್ದೀರಾ? ಅಲ್ಲಿಗೆ ಹೋಗಲು ಥಿಂಪುವಿನಿಂದ ಪೂರ್ತಿ ಒಂದು ದಿನ ಬೇಕಾಗುತ್ತದೆ. ಪ್ರಯಾಣಕ್ಕೆ ನಿಮಗೆ ರೂಟ್ ಪರ್ಮಿಟ್‌ನ ಅವಶ್ಯಕತೆಯಿದೆ. ನಿಮ್ಮ ಪಾಸ್‌ಪೋರ್ಟ್ ಪ್ರತಿಗಳು ಬೇಕಾಗುತ್ತವೆ. ನಿಮಗೆ ರೂಟ್ ಪರ್ಮಿಟ್ ಯಾರು ಮಾಡಿಕೊಡುತ್ತಾರೆ? ಅಲ್ಲಿಗೆ ಹೋಗಲು ಕಾರ್ ಮತ್ತು ಡ್ರೈವರನ್ನು ಗೊತ್ತುಮಾಡಿದ್ದೀರಾ? ಎಸ್‌ಡಿಎಫ್ (SDF) ವಿನಾಯಿತಿಗೆ ಅರ್ಜಿ ಹಾಕಿದ್ದೀರಾ?” ಅವರು ಒಂದಾದ ಮೇಲೊಂದು ಪ್ರಶ್ನೆ ಕೇಳಿದರು. ನಮ್ಮಲ್ಲಿ ಹೊಸಹೊಸ ಆತಂಕಗಳು ಮೂಡುತ್ತಿದ್ದವು.

ನಮಗೆ ನಿಜವಾಗಿಯೂ ಇವು ಏನೇನೂ ಗೊತ್ತಿರಲಿಲ್ಲ. ಭೂತಾನ್ ದೇಶದೊಳಗೆ ಪ್ರಯಾಣಕ್ಕೆ ಬೇರೆ ಪರ್ಮಿಟ್ ಬೇಕಾ, ಅದನ್ನು ಯಾರು ಕೊಡುತ್ತಾರೆ, ಈ ಎಸ್‌ಡಿಎಫ್ ವಿನಾಯಿತಿ ಎಂದರೇನು- ನಾವು ಚಕಿತರಾದೆವು. ಈ ಯೋಜನೆ ಅಂತಿಮವಾಗಿ ಅಂಗೀಕಾರವಾಗುವ ಬಗ್ಗೆ ಅದರ ಮುನ್ನಾದಿನದವರೆಗೂ ನಮಗೆ ಗೊತ್ತಿರಲಿಲ್ಲ. ಹೀಗಾಗಿ ಅಲ್ಲಿ ಪ್ರಯಾಣಿಸುವ ಪರ್ಮಿಟ್, ಕಾರು, ಡ್ರೈವರ್ ಏನು, ವಿಮಾನದ ಟಿಕೆಟ್ ಬುಕ್ ಮಾಡುವ ಬಗೆಗೂ ನಾವು ಯೋಚಿಸಿರಲಿಲ್ಲ. ವಿಮಾನದ ಟಿಕೆಟ್ ಅಂತಿರಲಿ, ಪಾಸ್‌ಪೋರ್ಟ್ ಕೂಡ ಮಾಡಿಸಿಕೊಂಡಿರಲಿಲ್ಲ ಅಂದರೆ ಯಾರಾದರೂ ತಮಾಷೆ ಮಾಡಿಯಾರು. ಆದರೆ ಅದು ನಿಜ.

ವಿದೇಶದ ಅಧ್ಯಯನ ಪ್ರವಾಸಕ್ಕೆ ಹೋಗುವವರು ಪಾಸ್‌ಪೋರ್ಟ್ ಮಾಡಿಸಿಕೊಂಡಿಲ್ಲ ಅಂದರೆ ತಮಾಷೆಯಲ್ಲದೆ ಇನ್ನೇನು? ಆದರೆ ನಮ್ಮ ದಿನನಿತ್ಯದ ಚಟುವಟಿಕೆಗಳ ಜಂಜಡದ ಮಧ್ಯೆ ಆ ಕೆಲಸ ಉಳಿದುಕೊಂಡಿತ್ತು. ಮೇಲಾಗಿ ಪ್ರಾಯೋಜಕರ ಕಡೆಯಿಂದ ಪ್ರಸ್ತಾವನೆಯ ಪ್ರಗತಿ ಬಗ್ಗೆ ಆಗಿಂದಾಗ್ಗೆ ಮಾಹಿತಿಯೂ ಇರಲಿಲ್ಲ. ಬಹುಶಃ ಇದು ಕೈಗೂಡುವ ಯೋಜನೆಯಲ್ಲ ಎಂಬ ನಿರ್ಧಾರಕ್ಕೆ ನಾವು ಬಂದಿದ್ದೆವು. ಹೀಗಾಗಿ “ನೋಡೋಣ, ಅಗತ್ಯವಿದ್ದರೆ ಮುಂದಕ್ಕೆ ಪಾಸ್‌ಪೋರ್ಟ್ ಮಾಡಿಸಿಕೊಳ್ಳೋಣ” ಎಂದುಕೊಂಡಿದ್ದೆವು.

ಅಧ್ಯಯನ ಪ್ರವಾಸದ ತಂಡದಲ್ಲಿ ನಾವು ಮೂವರಿದ್ದೆವು. ನಾವಿಬ್ಬರಲ್ಲದೆ ನಮ್ಮ ಮಗ ಸಂವೃತ- ಎಸ್.ಎಸ್.ಪುರಂ ಮಾರುತಿ ವಿದ್ಯಾಕೇಂದ್ರದ 9ನೇ ತರಗತಿ ವಿದ್ಯಾರ್ಥಿ. ಮೂವರ ಪೈಕಿ ಒಬ್ಬರಲ್ಲಿ ಮಾತ್ರ ಪಾಸ್‌ಪೋರ್ಟ್ ಇತ್ತು. ನಾವು ನಮ್ಮ ಪ್ರಸ್ತಾವನೆಯ ಪ್ರಕಾರ ಜನವರಿ 2ರಂದು ಭೂತಾನ್ ವಿಮಾನವೇರಬೇಕು. ಅಂದರೆ ಸರಿಯಾಗಿ ಒಂದು ತಿಂಗಳಿದೆ. ಅದಕ್ಕಿಂತ ಮೊದಲು ಬೇರೆಬೇರೆ ಕೆಲಸವಾಗಬೇಕು. ಅಲ್ಲಿ ಅದೇನೋ ರೂಟ್ ಪರ್ಮಿಟ್, ಎಸ್‌ಡಿಎಫ್ ವಿನಾಯಿತಿ ಬಗೆಗೆಲ್ಲ ಕೇಳಿದ್ದಾರೆ- ಅವಕ್ಕೆ ಪಾಸ್‌ಪೋರ್ಟ್ ಬೇಕು. ವಿಮಾನ ಟಿಕೆಟ್ ಕಾದಿರಿಸಲು ಪಾಸ್‌ಪೋರ್ಟ್ ಬೇಕು. ಸಾಮಾನ್ಯ ಪ್ರಕ್ರಿಯೆಯಲ್ಲಿ ಪಾಸ್‌ಪೋರ್ಟ್ ಪಡೆಯಲು 45 ದಿನ ಬೇಕು. ನಮ್ಮೆದುರು 30 ದಿನಗಳು ಮಾತ್ರ ಉಳಿದಿದ್ದವು. ಅಂದರೆ ತತ್ಕಾಲ್ ಯೋಜನೆಯಲ್ಲಿ ಮಾತ್ರ ಪಡೆಯಬಹುದು. ಆದರೆ ಉಳಿದ ಕೆಲಸಗಳಿಗೆಲ್ಲ ಇಷ್ಟು ದಿನ ಸಾಕಾಗುತ್ತದಾ? ಹೊಸ ಚಿಂತೆಗಳು ಹುಟ್ಟಿಕೊಂಡವು.

(ಮುಂದುವರಿಯುವುದು)

ಭಾನುವಾರ, ಫೆಬ್ರವರಿ 15, 2026

ವಾಟ್ಸಾಪ್‌ ಸಂದೇಶಕ್ಕೆ ಸ್ಪಂದಿಸುವ ಭೂತಾನ್ ಸರ್ಕಾರ!

'ಭೂತಾನ್‌ನಲ್ಲಿ ಯಕ್ಷದೀವಿಗೆʼ

ಪ್ರವಾಸ ಕಥನ-4

ಡಾ. ಸಿಬಂತಿ ಪದ್ಮನಾಭ & ಡಾ. ಆರತಿ ಪಟ್ರಮೆ

(ಪ್ರಜಾಪ್ರಗತಿ, 15 ಫೆಬ್ರವರಿ 2026)

(ಮುಂದುವರಿದ ಭಾಗ...)

ಭೂತಾನ್ ಯೋಜನೆಯ ಖರ್ಚುಗಳನ್ನು ಮಿತಗೊಳಿಸುವ ಬೇರೆ ದಾರಿಗಳೇನಾದರೂ ಇವೆಯೇ ಎಂದು ನಾವು ಯೋಚಿಸುತ್ತಿದ್ದೆವು. ಸಿಎಲ್‌ಸಿಎಸ್‌ಗೆ ಸಂಬಂಧಿಸಿದ ವಿಚಾರಗಳನ್ನು ಪೆಮಾ ಹಂಚಿಕೊಂಡಿದ್ದರು. ಅವರಲ್ಲದೆ ಬೇರೆ ಯಾರೊಂದಿಗೆ ನಾವು ಭೂತಾನ್‌ನಲ್ಲಿ ಸಹಭಾಗಿತ್ವ ಹೊಂದಬಹುದು ಎಂದು ತರ್ಕಿಸಿದೆವು. ನಮ್ಮ ಪ್ರಸ್ತಾವನೆಯಲ್ಲಿ ಅಲ್ಲಿನ ಸಂಸ್ಕೃತಿ ಇಲಾಖೆಯೊಂದಿಗೂ ಸಹಯೋಗ ಹೊಂದುವ ಪ್ರಸ್ತಾಪ ಮಾಡಿದ್ದು ನೆನಪಾಗಿ ಅವರನ್ನು ಸಂಪರ್ಕಿಸಬಹುದೇ ಎಂದು ಯೋಚಿಸಿದೆವು. ಆದರೆ ಹೇಗೆ? ಏನಿದ್ದರೂ ಎಲ್ಲವೂ ಮೈಲ್ ಮೂಲಕವೇ ಆಗಬೇಕು.

ಅಂತರ್ಜಾಲದಲ್ಲಿ ಏನಾದರೂ ಮಾಹಿತಿ ಸಿಗುತ್ತದೆಯೇ ಎಂದು ಮತ್ತೆ ಗೂಗಲ್ ಹುಡುಕಾಟಕ್ಕೆ ಇಳಿದೆವು. ಭೂತಾನ್‌ನ ಸಂಸ್ಕೃತಿ ಇಲಾಖೆಯ ಜಾಲತಾಣ ಸಿಕ್ಕಿತು. ‘ಡಿಪಾರ್ಟ್ಮೆಂಟ್ ಆಫ್ ಕಲ್ಚರ್ ಅಂಡ್ ಝೋ಼ಂಕಾ ಡೆವಲಪ್ಮೆಂಟ್’ ಅಂತ ಇತ್ತು. ಅರೆ! ಇದೇನು ಝೋ಼ಂಕಾ! ಮತ್ತೆ ಹುಡುಕಾಟ ಆರಂಭ. ಝೋ಼ಂಕಾ ಭೂತಾನಿಗರ ಮಾತೃಭಾಷೆ ಮತ್ತು ಆಡಳಿತ ಭಾಷೆ. ಟಿಬೆಟನ್‌ಗೆ ಹೆಚ್ಚು ಹತ್ತಿರವಾದ ಭಾಷೆ. ನಮಗೆ ಕನ್ನಡ ಇದ್ದಂತೆ ಭೂತಾನಿಗರಿಗೆ ಝೋ಼ಂಕಾ. ನಮ್ಮಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದ್ದಂತೆ ಭೂತಾನ್‌ನಲ್ಲಿ ಸಂಸ್ಕೃತಿ ಮತ್ತು ಝೋ಼ಂಕಾ ಅಭಿವೃದ್ಧಿ ಇಲಾಖೆಯಿದೆ. ಭೂತಾನ್‌ನ ಪರಮಧ್ಯೇಯವಾದ ‘ಸಮಗ್ರ ರಾಷ್ಟ್ರೀಯ ಸಂತೋಷ’ದ ಪರಿಕಲ್ಪನೆಯನ್ನು ಸಾಕಾರಗೊಳಿಸುವುದಕ್ಕೆ ದುಡಿಯುವುದೇ ಈ ಇಲಾಖೆಯ ಪ್ರಧಾನ ಉದ್ದೇಶ (ಈ ಪರಿಕಲ್ಪನೆ ಬಗ್ಗೆ ಮುಂದೆ ವಿವರವಾಗಿ ಬರೆಯುವೆವು).

ಇಲಾಖೆಯ ಜಾಲತಾಣವನ್ನು ಜಾಲಾಡುತ್ತಿದ್ದಾಗ ಸಂಪರ್ಕಕ್ಕಾಗಿ ಅದರಲ್ಲೊಂದು ಇ-ಮೇಲ್ ಐಡಿ ಕಾಣಿಸಿತು. ಇದಕ್ಕೊಂದು ಪತ್ರ ಬರೆದರೆ ಹೇಗೆ ಎಂದು ಯೋಚಿಸಿದೆವು. ಮೈಲ್ ಮಾಡುವುದು ಸರಿ, ಅದನ್ನು ಸಂಬಂಧಪಟ್ಟವರು ನೋಡುತ್ತಾರೆ ಎಂದು ಏನು ಗ್ಯಾರಂಟಿ? ನೋಡಿದರೂ ಉತ್ತರಿಸುತ್ತಾರೆ ಎಂದು ಏನು ಗ್ಯಾರಂಟಿ? ಹೀಗೂ ಯೋಚನೆ ಬಂತು. ನಮ್ಮಲ್ಲಿ ಸರ್ಕಾರಿ ಜಾಲತಾಣಗಳಲ್ಲಿ ನೀಡಲಾಗುವ ಸಂಪರ್ಕ ಸಂಖ್ಯೆ, ಇ-ಮೇಲ್ ಐಡಿಗಳು ಕೆಲಸ ಮಾಡುವ ಸಾಧ್ಯತೆಯೇ ಕಮ್ಮಿ. ಫೋನ್ ಮಾಡಿದರೆ ಅದು ಅಸ್ತಿತ್ವದಲ್ಲಿ ಇಲ್ಲ ಎನ್ನುವುದೇ ಹೆಚ್ಚು. ರಿಂಗ್ ಆದರೂ ರಿಸೀವ್ ಮಾಡುವವರು ಇರುವುದಿಲ್ಲ. ಮೈಲ್ ಮಾಡಿದರೆ ಬೌನ್ಸ್ ಆಗುವುದು, ಅವರಿಗೆ ತಲುಪಿತೋ ಇಲ್ಲವೋ ಎಂದು ಗೊತ್ತಾಗದಿರುವುದು ನಮ್ಮಲ್ಲಿ ತುಂಬ ಸಹಜ.

ಹೀಗೆ ಒಂದಷ್ಟು ಗೊಂದಲವಾದರೂ ನಮಗೆ ಬೇರೆ ದಾರಿ ಇರಲಿಲ್ಲ. ಅದೇ ಇ-ಮೇಲ್ ಐಡಿಗೆ ಒಂದು ವಿವರವಾದ ಪತ್ರ ಬರೆದು, ನಮ್ಮ ಪ್ರಸ್ತಾವಿತ ಯೋಜನೆಯ ಅನುಷ್ಠಾನಕ್ಕೆ ಅವರ ಕಡೆಯಿಂದ ಏನಾದರೂ ಸಹಾಯ ಸಿಗಬಹುದೇ ಎಂದು ಕೇಳಿದೆವು. ಅವರ ಜಾಲತಾಣ ಬೇರೆ ನಮ್ಮಲ್ಲಿನ ಜಾಲತಾಣಗಳಷ್ಟು ಆಕರ್ಷಕವಾಗಿರಲಿಲ್ಲ. ತೀರಾ ಸಾಮಾನ್ಯ ಬ್ಲಾಗ್‌ನಂತೆ ಇತ್ತು. ಹೀಗಾಗಿ ಅವರ ಇಮೇಲ್ ಐಡಿ ಬಗ್ಗೆ ಯಾವುದೇ ವಿಶೇಷ ಭರವಸೆ ಇರಲಿಲ್ಲ. ಇಷ್ಟು ಹೊತ್ತಿಗೆ ಅಚಾನಕ್ಕಾಗಿ ಅವರ ಜಾಲತಾಣದ ಒಂದು ಮೂಲೆಯಲ್ಲಿ ಒಂದು ವಾಟ್ಸಾಪ್ ಐಕಾನ್ ಕಾಣಿಸಿತು. ಅರೆ! ನಮ್ಮ ಸರ್ಕಾರಿ ವೆಬೈಟುಗಳಲ್ಲಿ ವಾಟ್ಸಾಪ್ ಲಿಂಕ್ ಕಂಡದ್ದಿಲ್ಲ; ಕಾರ್ಪೋರೇಟ್ ಜಾಲತಾಣಗಳಲ್ಲಿ ‘ನಮ್ಮಿಂದ ನಿಮಗೇನು ಸಹಾಯ ಬೇಕು’ ಎಂದು ಸ್ವಯಂಚಾಲಿತ ಚಾಟ್‌ಬೋಟ್‌ಗಳು ಕೇಳುವುದಿದೆ. ಆದರೆ ಅವು ಕೇಳುವ ಪ್ರಶ್ನೆಗಳು ಮತ್ತು ಕೊಡುವ ಉತ್ತರಗಳು ಸಂಪೂರ್ಣ ಯಾಂತ್ರಿಕ. ಸ್ವವಿವೇಚನೆಯಿಂದ ವರ್ತಿಸುವವಲ್ಲ. ಇದೂ ಅಂಥದ್ದೆಯೋ ಅನಿಸಿತು. 

ಆದರೂ ಮೆಸೇಜ್ ಹಾಕುವುದರಲ್ಲಿ ಕಳೆದುಕೊಳ್ಳುವಂಥದ್ದೇನಿದೆ ಅನಿಸಿ, ‘ಹಾಯ್’ ಎಂದು ಒಂದು ಮೆಸೇಜ್ ಮಾಡಿ ಸುಮ್ಮನಾದೆವು. ಆಗ ತಡರಾತ್ರಿಯಾಗಿತ್ತು. ಯಾರಾದರೂ ನೋಡುತ್ತಾರೋ, ಏನಾದರೂ ಉತ್ತರಿಸುತ್ತಾರೋ ಎಂಬ ವಿಶೇಷ ಕುತೂಹಲವೇನೂ ಇರಲಿಲ್ಲ.

ಕಾದಿತ್ತು ಅಚ್ಚರಿ:

ಆದರೆ ಮರುದಿನ ಬೆಳಗ್ಗೆ ನಮಗೊಂದು ಅಚ್ಚರಿ ಕಾದಿತ್ತು.  ಒಂಭತ್ತೂವರೆಗೆ ಆ ಕಡೆಯಿಂದ ನಮ್ಮ ವಾಟ್ಸಾಪ್‌ಗೆ ‘ಯೆಸ್’ ಎಂಬ ಮಾರುತ್ತರ ಬಂದು ಇಣುಕಿತ್ತು. ಕೂಡಲೇ “ನಾವು ಇಂಥವರು... ಭಾರತದ ಕರ್ನಾಟಕದಿಂದ... ಒಂದು ಯೋಜನೆಯ ವಿಚಾರವಾಗಿ ನಿಮ್ಮ ಇಲಾಖೆಗೊಂದು ಮೈಲ್ ಕಳಿಸಿದ್ದೇವೆ” ಎಂದು ಉತ್ತರಿಸಿದೆವು. ತಕ್ಷಣ ಆ ಕಡೆಯಿಂದ “ವಿಚ್ ಪ್ರಾಜೆಕ್ಟ್?” ಎಂಬ ಎರಡು ಪದದ ಪ್ರಶ್ನೆ ಬಂತು. ಪರ್ವಾಗಿಲ್ಲ, ಇದು ರೋಬೋಟಲ್ಲ, ಯಾರೋ ಮನುಷ್ಯರೇ ಮಾತಾಡುತ್ತಿದ್ದಾರೆ ಅನಿಸಿ ಉತ್ಸಾಹ ಬಂತು. ನಮಗೆ ಐಬಿಎಫ್‌ನಿಂದ ಸಂಶೋಧನ ಯೋಜನೆಯೊಂದು ಮಂಜೂರಾಗಿದೆಯೆಂದೂ, ಅದರ ಸಲುವಾಗಿ ಎರಡು ವಾರ ಭೂತಾನ್‌ಗೆ ಭೇಟಿ ನೀಡಬೇಕಾಗಿದೆಯೆಂದೂ, ಉಳಿದ ವಿವರಗಳು ನಮ್ಮ ಮೈಲ್‌ನಲ್ಲಿವೆ ಎಂದೂ, ಅದರ ಬಗ್ಗೆ ತಮ್ಮ ಗಮನ ಸೆಳೆಯುವುದಕ್ಕಾಗಿ ಹೀಗೆ ವೆಬ್‌ಸೈಟಿನಲ್ಲಿ ಸಿಕ್ಕಿರುವ ವಾಟ್ಸಾಪಿಗೆ ಸಂದೇಶ ಕಳಿಸಿದ್ದೇವೆ ಎಂದೂ ಸಂಕ್ಷಿಪ್ತವಾಗಿ ತಿಳಿಸಿದೆವು.

ಆ ಕಡೆಯಲ್ಲಿದ್ದವರು ಇನ್ನೊಂದು ಮೈಲ್ ಐಡಿ ಕೊಟ್ಟು ನಿಮ್ಮ ಮೈಲ್ ಅನ್ನು ಇದಕ್ಕೆ ಫಾರ್ವರ್ಡ್ ಮಾಡಿ ಎಂದು ಸೂಚಿಸಿದರು. ಯಾವುದಕ್ಕೂ ಇರಲಿ ಎಂದು ಇಷ್ಟು ಹೊತ್ತು ಮಾತಿಗೆ ಸಿಕ್ಕ ಸಂಖ್ಯೆಯನ್ನು ಟ್ರೂಕಾಲರ್‌ನಲ್ಲಿ ಪರಿಶೀಲಿಸಿದೆವು. ಅದನ್ನು ಬಳಸುತ್ತಿದ್ದವರು ಸೋನಮ್ ಎಂಬ ಹೆಸರಿನವರೆಂದು ಗೊತ್ತಾಯಿತು. ಇನ್ನೂ ಸ್ವಲ್ಪ ಕುತೂಹಲದಿಂದ ಆ ಹೆಸರಿನವರು ಭೂತಾನ್‌ನ ಸಂಸ್ಕೃತಿ ಇಲಾಖೆಯಲ್ಲಿ ಇದ್ದಾರೆಯೇ ಎಂದು ಪರಿಶೀಲಿಸಿದೆವು. ಅವರು ಆ ಇಲಾಖೆಯ ಅಧಿಕಾರಿಯೆಂದೂ, ಪ್ರಸ್ತುತ ಭೂತಾನ್‌ನ ಅಮೂರ್ತ ಸಾಂಸ್ಕೃತಿಕ ಪರಂಪರೆ (Intangible Cultural Heritage: ICH) ಯೋಜನೆಯ ಜವಾಬ್ದಾರಿ ಹೊಂದಿದ್ದಾರೆಯೆಂದೂ ಗೊತ್ತಾಯಿತು. ಭೂತಾನ್‌ನಲ್ಲಿ ಇಂತಹ ಕರ್ತವ್ಯಬದ್ಧ ಅಧಿಕಾರಿಗಳಿದ್ದಾರಾ ಎಂದು ಅಚ್ಚರಿಯಾಯಿತು.

ಅವರು ನೀಡಿದ್ದ ಪರ್ಯಾಯ ಐಡಿಗೆ ಇ-ಮೇಲ್ ಅನ್ನು ಫಾರ್ವರ್ಡ್ ಮಾಡಿದೆವು. ಇನ್ನೊಂದು ಅಚ್ಚರಿಯ ವಿಷಯ ಎಂದರೆ, ಇದಾಗಿ ನಾಲ್ಕೇ ದಿನಗಳಲ್ಲಿ ಅವರಿಂದ ಉತ್ತರ ಬಂತು: “ನಿಮ್ಮ ಯೋಜನೆಗೆ ಸಹಕಾರ ನೀಡಲು ನಮ್ಮ ಇಲಾಖೆ ಸಿದ್ಧವಿದೆ. ನಮ್ಮ ಇಲಾಖೆಯ ವ್ಯಾಪ್ತಿಗೆ ಬರುವ ಸಾಂಪ್ರದಾಯಿಕ ಪ್ರದರ್ಶನ ಕಲೆ ಮತ್ತು ಸಂಗೀತ ವಿಭಾಗ (TPAMD)ದ ಮೂಲಕ ನಿಮಗೆ ಸಹಕಾರ ನೀಡಲಾಗುವುದು. ಆದರೆ ಡಿಸೆಂಬರ್ ಕೊನೆಯವರೆಗೂ ಅವರು ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವ್ಯಸ್ತರಾಗಿದ್ದಾರೆ. ಜನವರಿ 2026ರ ಮೇಲಷ್ಟೇ ಅವರು ಲಭ್ಯವಾಗುತ್ತಾರೆ.”

ಜನವರಿಯಲ್ಲೇ ಪ್ರವಾಸ:

ಹಾಗಾದರೆ ನಮ್ಮ ಪ್ರವಾಸ ಏನಿದ್ದರೂ ಜನವರಿಯಲ್ಲೇ ಆಗಬೇಕು ಎಂದು ಯೋಚಿಸಿ ಜನವರಿ ಎರಡರಿಂದಲೇ ಹದಿನಾಲ್ಕು ದಿನಗಳ ಒಂದು ವೇಳಾಪಟ್ಟಿ ತಯಾರಿಸಿ ಭಾಷೆ ಮತ್ತು ಸಂಸ್ಕೃತಿ ಕಾಲೇಜಿನ ಪೆಮಾ ವಾಂಗ್ಚುಕ್ ಅವರಿಗೆ ಕಳಿಸಿಕೊಟ್ಟೆವು. ನಮ್ಮ ಪ್ರವಾಸದ ಅರ್ಧ ಭಾಗವನ್ನು ಸಂಸ್ಕೃತಿ ಇಲಾಖೆಯೊಂದಿಗೂ ಉಳಿದರ್ಧ ಭಾಗವನ್ನು ಈ ಕಾಲೇಜಿನೊಂದಿಗೂ ಕಳೆಯುವಂತೆ ಯೋಜನೆ ಸಿದ್ಧಪಡಿಸಿದ್ದೆವು. ಆದರೆ ಪೆಮಾ ಅವರಿಂದ ಬಂದ ಉತ್ತರ ನಮ್ಮನ್ನು ಮತ್ತೆ ಯೋಚಿಸುವಂತೆ ಮಾಡಿತು. “ಡಿಸೆಂಬರ್ 17ರಿಂದ ಫೆಬ್ರವರಿ 10ರವರೆಗೆ ನಮ್ಮ ಕಾಲೇಜಿಗೆ ಚಳಿಗಾಲದ ರಜೆ. ಅಲ್ಲಿ ಯಾರೂ ಇರುವುದಿಲ್ಲ. ನೀವು ಬಂದು ಪ್ರಯೋಜನವಿಲ್ಲ. ನೀವು ಸಂಸ್ಕೃತಿ ಇಲಾಖೆಯೊಂದಿಗೆ ಯೋಜನೆಯನ್ನು ಅನುಷ್ಠಾನ ಮಾಡುವುದೇ ಸೂಕ್ತ” ಎಂದು ಪೆಮಾ ಬರೆದಿದ್ದರು. “ಆದರೆ ನಾವು ನಮ್ಮ ಇಬ್ಬರು ಅಧ್ಯಾಪಕರನ್ನು ನೀವಿರುವ ಥಿಂಪುವಿಗೆ ಕಳುಹಿಸಿಕೊಡಲು ಸಿದ್ಧರಿದ್ದೇವೆ. ಅವರಿಗೆ ನೀವು ದಿನಭತ್ಯೆ ಮತ್ತು ಪ್ರಯಾಣಭತ್ಯೆ ಕೊಡಲು ಸಾಧ್ಯವೇ?” ಎಂದು ಕೂಡ ಅವರು ಕೇಳಿದ್ದರು.

ಕಾಸಿಗೆ ಕಾಸು ಲೆಕ್ಕ ಹಾಕುತ್ತಾ ಕುಳಿತಿದ್ದ ನಮಗೆ ಈ ಪ್ರಶ್ನೆಗಳೆಲ್ಲ ಇಷ್ಟಿಷ್ಟೇ ಆತಂಕವನ್ನು
ಹೆಚ್ಚಿಸುತ್ತಿದ್ದವು. ಆದರೂ ಏನಾದರೊಂದು ಆಗುತ್ತದೆ ಎಂಬ ಭರವಸೆಯಿಂದ ನಮ್ಮ ಆತಂಕವನ್ನು ತೋರಿಸಿಕೊಳ್ಳದೆ ಸಂವಹನವನ್ನು ಮುಂದುವರಿಸಿದ್ದೆವು. ಅವರ ಅಧಿಕೃತ ದಿನಭತ್ಯೆ 1500 ಎನ್ಗಲ್ಟ್ರಮ್ (Ngultrum), ಪ್ರಯಾಣಭತ್ಯೆ ಪ್ರತಿ ಕಿಲೋಮೀಟರಿಗೆ 16 ಎನ್ಗಲ್ಟ್ರಮ್ ಎಂದು ತಿಳಿಸಿದ್ದರು (ಒಂದು ಅನುಕೂಲವೆಂದರೆ ನಮ್ಮ ರೂಪಾಯಿ ಮತ್ತು ಭೂತಾನಿನ ಎನ್ಗಲ್ಟ್ರಮ್ ಗೆ ಸಮಾನ ಮೌಲ್ಯ).  ಅವರು 230 ಕಿ.ಮೀ. ಪ್ರಯಾಣಿಸಿ ಬಂದು ಮರಳಿದರೆ ಎಷ್ಟು ಪ್ರಯಾಣ ಭತ್ಯೆ ಕೊಡಬೇಕು, ಮೂರ್ನಾಕು ದಿನ ನಮ್ಮೊಂದಿಗೆ ಉಳಿಸಿಕೊಂಡರೆ ಎಷ್ಟು ದಿನಭತ್ಯೆ ಕೊಡಬೇಕು ಎಂದೆಲ್ಲ ಲೆಕ್ಕ ಹಾಕಿ ಒಳಗೊಳಗೆ ಬೆವೆತಿದ್ದೆವು. ಅಂತೂ ಅಳೆದು ಸುರಿದು ಲೆಕ್ಕಾಚಾರ ಮಾಡಿ “ನಿಮ್ಮ ಕಡೆಯಿಂದ ಒಬ್ಬರು ಅಧ್ಯಾಪಕರನ್ನು ಮೂರು ದಿನಗಳ ಮಟ್ಟಿಗೆ ಥಿಂಪುವಿಗೆ ಕಳಿಸಿಕೊಡಿ, ಖರ್ಚು ಭರಿಸುತ್ತೇವೆ” ಎಂದು ಉತ್ತರಿಸಿದೆವು. ಅವರು ಸರಿಯೆಂದರು. 

ಇದೆಲ್ಲ ಆದದ್ದು ಅಕ್ಟೋಬರ್ ಮೊದಲ ವಾರದಲ್ಲಿ. ಈ ಕಾರ್ಯಸೂಚಿಯನ್ನು ನಮ್ಮ ಪ್ರಾಯೋಜಕರಾದ ಐಬಿಎಫ್‌ನೊಂದಿಗೂ ಹಂಚಿಕೊಂಡಿದ್ದೆವು. ಆದರೆ ಅವರಿಗೆ ಎಲ್ಲವೂ ತೃಪ್ತಿಕರ ಅನಿಸಿದಂತೆ ಕಾಣಲಿಲ್ಲ. ಇದಾಗಿ ಎರಡು ತಿಂಗಳು ಆ ಕಡೆಯಿಂದ ಯಾವುದೇ ಸಂವಹನ ಇಲ್ಲ. ನಾವು ಕೆಲವು ದಿನ ಕಾದು ಸುಮ್ಮನಾದೆವು. ಬಹುಶಃ ಅವರಿಗೆ ಸಮಾಧಾನವಾಗಿಲ್ಲವೇನೋ? ಉತ್ತರ ಬಾರದಿದ್ದರೆ ಚಿಂತೆಯಿಲ್ಲ. ನಾವು ಪ್ರಸ್ತಾಪಿಸಿದ ಜನವರಿ ಅವಧಿ ಭೂತಾನದಲ್ಲಿ ಕಡು ಚಳಿಗಾಲದ ಸಮಯ. ಎಷ್ಟೆಂದರೆ ಹಗಲು ಗರಿಷ್ಠ ತಾಪಮಾನ ಐದು ಡಿಗ್ರಿ, ರಾತ್ರಿ ಮೈನಸ್ ಆರು ಡಿಗ್ರಿ. ನಮಗಿಲ್ಲಿ ಹದಿನೈದು ಡಿಗ್ರಿಗಿಳಿದರೇ ತಡೆದುಕೊಳ್ಳುವುದಕ್ಕಾಗುವುದಿಲ್ಲ. ಇನ್ನು ಅಲ್ಲಿ ಬದುಕೋದು ಹೇಗೆ? ಯೋಜನೆ ಬಗ್ಗೆ ತೀರಾ ತಲೆಕೆಡಿಸಿಕೊಳ್ಳುವುದು ಬೇಡವೆಂದು ಸುಮ್ಮನಾದೆವು. ಆದರೆ ಭೂತಾನಿನ ಅನ್ನದಲ್ಲಿ ನಮ್ಮ ಹೆಸರು ಬರೆದಿತ್ತು.

(ಮುಂದುವರಿಯುವುದು)  

ಭಾನುವಾರ, ಫೆಬ್ರವರಿ 8, 2026

ಅಪರಿಚಿತ ದೇಶದಿಂದ ಹತ್ತಾರು ಪ್ರಶ್ನೆಗಳು!

ʼಭೂತಾನ್‌ನಲ್ಲಿ ಯಕ್ಷದೀವಿಗೆʼ

ಪ್ರವಾಸ ಕಥನ-3

ಡಾ. ಸಿಬಂತಿ ಪದ್ಮನಾಭ & ಡಾ. ಆರತಿ ಪಟ್ರಮೆ

(ಪ್ರಜಾಪ್ರಗತಿ, 08 ಫೆಬ್ರವರಿ 2026)


ನಮ್ಮ ಸಂಶೋಧನ ಪ್ರಸ್ತಾವನೆಯನ್ನು ಪುರಸ್ಕರಿಸಿದ ಇಂಡಿಯಾ-ಭೂತಾನ್ ಫೌಂಡೇಶನ್ (IBF) ನವದೆಹಲಿಯಲ್ಲಿರುವ ಭೂತಾನ್ ರಾಯಭಾರ ಕಚೇರಿಯ ಒಂದು ಭಾಗ. ಇದು ಭಾರತ ಮತ್ತು ಭೂತಾನ್ ಎರಡೂ ದೇಶಗಳ ಜಂಟಿ ಸಹಯೋಗದ ಸಂಸ್ಥೆ. 2003ರಲ್ಲಿ ಅಂದಿನ ಭೂತಾನ್ ರಾಜಕುಮಾರ, ಈಗಿನ ರಾಜ ಜಿಗ್ಮೆ ಖೇಸರ್ ನಮ್‌ಗ್ಯೆಲ್ ವಾಂಗ್ಚುಕ್ ಭಾರತಕ್ಕೆ ಭೇಟಿ ನೀಡಿದ್ದಾಗ ಸ್ಥಾಪನೆಯಾದ ಸಂಸ್ಥೆಯಿದು. ಶೈಕ್ಷಣಿಕ, ಸಾಂಸ್ಕೃತಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಸ್ಪರ ಕೊಡುಕೊಳ್ಳುವಿಕೆಗಳನ್ನು ವೃದ್ಧಿಸುವುದಕ್ಕಾಗಿ ಎರಡೂ ದೇಶಗಳು ಅಧಿಕೃತ ಒಡಂಬಡಿಕೆಯೊಂದನ್ನು ಮಾಡಿದ್ದರ ಪರಿಣಾಮವಾಗಿ ಐಬಿಎಫ್ ಅಸ್ತಿತ್ವಕ್ಕೆ ಬಂತು. ಭಾರತದಲ್ಲಿರುವ ಭೂತಾನ್ ರಾಯಭಾರಿ ಮತ್ತು ಭೂತಾನ್‌ನಲ್ಲಿರುವ ಭಾರತೀಯ ರಾಯಭಾರಿ ಈ ಸಂಸ್ಥೆಯ ನಿರ್ದೇಶಕರುಗಳ ಮಂಡಳಿಯ ಉಪಾಧ್ಯಕ್ಷರುಗಳಾಗಿರುತ್ತಾರೆ.

ನಮ್ಮ ಪ್ರಸ್ತಾವನೆ ಸಲ್ಲಿಕೆಯಾಗಿ ನಾಲ್ಕು ತಿಂಗಳು ಆ ಕಡೆಯಿಂದ ಯಾವುದೇ ಸಂವಹನ ಇರಲಿಲ್ಲ. ಬಹುಶಃ ನಮ್ಮಂತೆ ಇನ್ನೂ ಸಾಕಷ್ಟು ಮಂದಿ ಸಲ್ಲಿಸಿದ ಪ್ರಸ್ತಾವನೆಗಳ ಪರಿಶೀಲನೆ ನಡೆಯುತ್ತಿದ್ದಿರಬಹುದು. ಬಂದರೆ ಬಂತು, ಇಲ್ಲವಾದರೆ ಇಲ್ಲ ಎಂದುಕೊಂಡು ಅದನ್ನು ಮರೆತೇಬಿಟ್ಟಿದ್ದೆವು. ಆಗಸ್ಟ್ ತಿಂಗಳ ಒಂದು ದಿನ ಇದ್ದಕ್ಕಿದ್ದ ಹಾಗೆ ಒಂದು ಮೈಲ್ ಕಾಣಿಸಿಕೊಂಡಿತು: “ನೀವು ಐಬಿಎಫ್‌ಗೆ ಸಲ್ಲಿಸಿದ ಪ್ರಸ್ತಾವನೆ ಪ್ರಾಯೋಜನೆಗೆ ಆಯ್ಕೆಯಾಗಿದೆ ಎಂದು ತಿಳಿಸಲು ಸಂತೋಷಪಡುತ್ತೇವೆ. ಈ ಸಂಬಂಧ ಹೆಚ್ಚಿನ ವಿವರಗಳನ್ನು ಚರ್ಚಿಸಲು ಒಂದು ಆನ್ಲೈನ್ ಸಭೆ ನಡೆಸಲು ಬಯಸುತ್ತೇವೆ.” ನಮಗೆ ಅದೊಂದು ಸಂಭ್ರಮದ ಕ್ಷಣವಾಗಿತ್ತು.

ಆ ತಿಂಗಳಂತೂ ಯಕ್ಷದೀವಿಗೆಗೆ ಎಡೆಬಿಡದ ಕಾರ್ಯಕ್ರಮಗಳ ಅಡಾವುಡಿ. ಅದರ ಮಧ್ಯೆ ಒಂದೆರಡು ದಿನಗಳನ್ನು ಗುರುತು ಮಾಡಿ ಈ ದಿನಗಳಲ್ಲಿ ಸಭೆ ನಡೆಸಿದರೆ ನಮಗೆ ಅನುಕೂಲ ಎಂದು ಉತ್ತರಿಸಿದೆವು. ಆಗಸ್ಟ್ 25 ಮಧ್ಯಾಹ್ನ 3 ಗಂಟೆಗೆ ಸಭೆ ನಡೆಸೋಣ ಎಂಬ ಸೂಚನೆ ಅತ್ತಲಿಂದ ಬಂತು. ಆ ದಿನ ನಾವು ಭಾಗವಹಿಸಲೇಬೇಕಾದ ಕೌಟುಂಬಿಕ ಕಾರ್ಯಕ್ರಮವೊಂದಿತ್ತು. ಅವರು ಕೊಟ್ಟ ದಿನಾಂಕಕ್ಕೆ ತಕರಾರು ಬೇಡ, ಹೇಗಾದರೂ ಆನ್ಲೈನ್ ಮೀಟಿಂಗ್ ಅಲ್ವೇ, ಮೂರು ಗಂಟೆಗೆ ಊಟವೂ ಆಗಿರುತ್ತದೆ, ಇದ್ದಲ್ಲಿಂದಲೇ ಮೀಟಿಂಗ್ ಜಾಯಿನ್ ಆದರೆ ಆಯ್ತು ಎಂದು ತೀರ್ಮಾನಿಸಿದೆವು. 

ರಾಯಭಾರ ಕಚೇರಿಯೊಂದಿಗೆ ಸಭೆ:

ಸಭೆಯಲ್ಲಿ ಭೂತಾನ್ ರಾಯಭಾರ ಕಚೇರಿ ಕಡೆಯಿಂದ ಇಬ್ಬರು ಪ್ರತಿನಿಧಿಗಳಿದ್ದರು. ಒಬ್ಬರು
ಭಾರತೀಯರು, ಇನ್ನೊಬ್ಬರು ಭೂತಾನ್ ದೇಶದವರು. ಅವರ ಮಾತು ಅಷ್ಟೊಂದು ಸ್ಪಷ್ಟವಾಗಿ ನಮಗೆ ಅರ್ಥವಾಗುತ್ತಿರಲಿಲ್ಲ. ಅಂತೂ ನಮ್ಮ ಪ್ರಸ್ತಾವನೆ ವಿಚಾರವಾಗಿ ಅವರು ಒಂದಷ್ಟು ಸ್ಪಷ್ಟೀಕರಣ ಬಯಸಿದ್ದರೆಂದು ಗೊತ್ತಾಯಿತು. ನಮ್ಮ ಭೇಟಿಯ ಸಂದರ್ಭದಲ್ಲಿ ಭೂತಾನ್ ಸರ್ಕಾರದ ಸಂಸ್ಕೃತಿ ಇಲಾಖೆ, ಅಲ್ಲಿನ ಸಾಂಪ್ರದಾಯಿಕ ಪ್ರದರ್ಶನ ಕಲೆ ಮತ್ತು ಸಂಗೀತ ವಿಭಾಗ (TPAMD), ರಾಯಲ್ ಭೂತಾನೀಸ್ ವಿಶ್ವವಿದ್ಯಾನಿಲಯದ ಭಾಷೆ ಮತ್ತು ಸಂಸ್ಕೃತಿ ಕಾಲೇಜು (CLCS) - ಮುಂತಾದವುಗಳ ಸಹಯೋಗ ಪಡೆಯುವುದಾಗಿ ಪ್ರಸ್ತಾವನೆಯಲ್ಲಿ ತಿಳಿಸಿದ್ದೆವು. ಈ ಎಲ್ಲವುಗಳ ಮಾಹಿತಿಯನ್ನು ಅಂತರ್ಜಾಲದ ಮೂಲಕ ಪಡೆದಿದ್ದೆವೇ ಹೊರತು ಅವುಗಳ ಬಗ್ಗೆ ಹೆಚ್ಚಿನ ತಿಳುವಳಿಕೆಯೇನೂ ನಮಗಿರಲಿಲ್ಲ. 

ಹಾಗೆ ನೋಡಿದರೆ ನಮ್ಮ ದೇಶದ ಉತ್ತರದಲ್ಲಿ ಹಿಮಾಲಯದಾಚೆ ಇರುವ ದೇಶ ಭೂತಾನ್ ಎಂಬ ಭೂಪಟದ ಚಿತ್ರವೊಂದು ಬಿಟ್ಟರೆ ಆ ದೇಶದ ಬಗೆಗಾಗಲೀ, ಅಲ್ಲಿ ಇಲಾಖೆಗಳ ಬಗೆಗಾಗಲೀ, ಸಂಸ್ಥೆಗಳ ಬಗೆಗಾಗಲೀ ನಮಗೇನೂ ಗೊತ್ತಿರಲಿಲ್ಲ. ಈ ಯೋಜನೆಯ ಯೋಚನೆ ಬಂದಾಗಲೇ ಎಲ್ಲವನ್ನೂ ಅಂರ್ಜಾಲದಲ್ಲಿ ಜಾಲಾಡುವ ಮೂಲಕ ತಿಳಿದುಕೊಂಡದ್ದು. ನಮ್ಮ ಯೋಜನೆಗೆ ಪೂರಕವಾಗುವ ಸಂಸ್ಥೆಗಳು ಭೂತಾನ್ ದೇಶದಲ್ಲಿ ಏನೆಲ್ಲ ಇವೆ ಎಂದು ಹುಡುಕುವಾಗ ಈ ಸಂಸ್ಥೆಗಳ ಬಗ್ಗೆ ಮಾಹಿತಿ ದೊರೆತು, ಅವುಗಳನ್ನು ಪ್ರಸ್ತಾವನೆಯಲ್ಲಿ ನಮೂದಿಸಿದ್ದೆವೇ ಹೊರತು ಅವುಗಳ ಯಾವ ಸಂಪರ್ಕವೂ ನಮಗಿರಲಿಲ್ಲ. ಬೇರೆ ದೇಶದೊಂದಿಗೆ ಅಧ್ಯಯನ ಯೋಜನೆಗಳನ್ನು ರೂಪಿಸುವಾಗ ಅಲ್ಲಿನ ಯಾರಾದರೂ ವ್ಯಕ್ತಿಗಳ ಅಥವಾ ಸಂಘಸಂಸ್ಥೆಗಳ ಸಹಯೋಗ ಬೇಕು, ಹಾಗಿದ್ದಾಗ ಮಾತ್ರ ಪ್ರಸ್ತಾವನೆಗಳು ಸ್ವೀಕೃತವಾಗುತ್ತವೆ ಎಂದಷ್ಟೇ ನಮಗೆ ತಿಳಿದಿತ್ತು. ಪ್ರಸ್ತಾವನೆ ಆಯ್ಕೆಯಾಗಿ ಆ ದೇಶಕ್ಕೆ ಹೋಗುವಾಗ ಅಲ್ಲಿನವರ ಪರಿಚಯ ಮಾಡಿಕೊಳ್ಳೋಣ, ಅವರ ಸಹಾಯ ಪಡೆದು ಅಧ್ಯಯನ ಮಾಡೋಣ ಎಂಬ ಕರಡು ಯೋಜನೆಯೊಂದು ಮಾತ್ರ ನಮ್ಮ ತಲೆಯಲ್ಲಿತ್ತು. ಆದರೆ ನಮ್ಮ ಪ್ರಸ್ತಾವನೆ ಆಯ್ಕೆಯಾಗುವುದರ ಹಿಂದೆ ನಾವು ನಮೂದಿಸಿದ ಸಂಸ್ಥೆಗಳ ಹೆಸರು ಪ್ರಮುಖ ಪಾತ್ರ ವಹಿಸಿತ್ತು.

“ಭೂತಾನ್ ಸಂಸ್ಕೃತಿ ಇಲಾಖೆ, ಟಿಪಿಎಎಂಡಿ, ಸಿಎಲ್‌ಸಿಎಸ್ ಸಂಸ್ಥೆಗಳ ಜೊತೆ ನಿಮ್ಮ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದ್ದೀರಿ. ಅದರ ಬಗ್ಗೆ ಹೆಚ್ಚಿನ ಸ್ಪಷ್ಟತೆ ಬೇಕು. ಅಲ್ಲಿ ಯಾರೊಂದಿಗೆ ಸಂಪರ್ಕದಲ್ಲಿದ್ದೀರಿ, ಅವರೊಂದಿಗೆ ಹೇಗೆ ಕೆಲಸ ಮಾಡುತ್ತೀರಿ, ನೀವು ಅಲ್ಲಿರುವ ಅವಧಿಯ ಪ್ರತಿದಿನ ಏನೇನು ಚಟುವಟಿಕೆ ಮಾಡುತ್ತೀರಿ ಎಂಬ ಬಗ್ಗೆ ನಮಗೆ ನಿರ್ದಿಷ್ಟ ಮಾಹಿತಿ, ವೇಳಾಪಟ್ಟಿ ಬೇಕು” ಎಂದರು ಸಭೆ ನಡೆಸಿದ ರಾಯಭಾರ ಕಚೇರಿಯ ಅಧಿಕಾರಿಗಳು. ಇದೊಳ್ಳೆ ಫಜೀತಿಯಾಯಿತಲ್ಲ ಅನಿಸಿತು. ಈ ನಿಟ್ಟಿನಲ್ಲಿ ನಾವೇನೂ ತಯಾರಿ ಮಾಡಿಕೊಂಡಿರಲಿಲ್ಲ. ಅವರೊಂದಿಗೆ ಹಂಚಿಕೊಳ್ಳಲು ನಮ್ಮಲ್ಲಿ ವಿವರಗಳಾಗಲೀ ಸ್ಪಷ್ಟತೆಯಾಗಲೀ ಇರಲಿಲ್ಲ. “ನಾವು ಕೆಲವು ಮಂದಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಅವರಿಂದ ಇನ್ನಷ್ಟು ಸ್ಪಷ್ಟತೆ ದೊರೆಯಬೇಕಾಗಿದೆ. ಸದ್ಯದಲ್ಲೇ ಹೆಚ್ಚಿನ ವಿವರಗಳೊಂದಿಗೆ ನಿಮ್ಮನ್ನು ಸಂಪರ್ಕಿಸುತ್ತೇವೆ” ಎಂದಷ್ಟೇ ಹೇಳಿ ಸಭೆಯನ್ನು ಮುಗಿಸಿದೆವು. 

ಇ-ಮೇಲ್‌ನಿಂದ ಆಶಾವಾದ:

ಒಂದು ಅಧ್ಯಯನ ಪ್ರವಾಸಕ್ಕೆ ಎಷ್ಟೊಂದು ತಯಾರಿ ಮಾಡಬೇಕಲ್ವೇ ಎಂದು ಮೊದಲ ಬಾರಿ ಅನಿಸಿತು. ಈಗ ನಿಜವಾಗಿಯೂ ನಾವು ಗಂಭೀರವಾಗಿ ಯೋಚಿಸಲು ಪ್ರಾರಂಭಿಸಿದ್ದೆವು. ಮರುದಿನವೇ ಬೆಳ್ಳಂಬೆಳಗ್ಗೆ ಕುಳಿತು ಮತ್ತೆ ಅಂತರ್ಜಾಲದೊಳಗೆ ಇಳಿದೆವು. ಭಾಷೆ ಮತ್ತು ಸಂಸ್ಕೃತಿ ಕಾಲೇಜು (ಸಿಎಲ್‌ಸಿಎಸ್) ಜಾಲತಾಣಕ್ಕೆ ಭೇಟಿನೀಡಿ ನಮ್ಮ ಯೋಜನೆಗೆ ಸಹಾಯ ಮಾಡಬಲ್ಲ ವ್ಯಕ್ತಿಗಳು ಅಲ್ಲಿ ಯಾರಿದ್ದಾರೆ ಎಂದು ಹುಡುಕಿದೆವು. ಆ ಕಾಲೇಜಿನ ಶೈಕ್ಷಣಿಕ ವಿಭಾಗದ ಡೀನರಾದ ಪೆಮಾ ವಾಂಗ್ಚುಕ್ ಎಂಬವರ ಮಾಹಿತಿ, ಇಮೇಲ್ ವಿಳಾಸ ದೊರೆಯಿತು. ನಮ್ಮ ಯೋಜನೆಯ ಸಂಪೂರ್ಣ ವಿವರ, ನಮ್ಮಿಬ್ಬರ ಬಯೋಡೇಟಾ, ಯೋಜನೆ ನಮಗೆ ಮಂಜೂರಾದ ಬಗೆಗಿನ ಪತ್ರ ಎಲ್ಲವನ್ನೂ ಜೋಡಿಸಿ ಅವರಿಗೊಂದು ವಿವರವಾದ ಮೇಲ್ ಕಳಿಸಿದೆವು.

ನಮಗೆ ಅಚ್ಚರಿಯೆಂಬಂತೆ ಮುಂದಿನ ಮೂರು ಗಂಟೆಗಳಲ್ಲೇ ಅದಕ್ಕೊಂದು ಉತ್ತರ ಬಂದು ನಮ್ಮ ಇನ್ಬಾಕ್ಸಲ್ಲಿ ಕಾಯುತ್ತಿತ್ತು. “ಸಹಭಾಗಿತ್ವಕ್ಕಾಗಿ ನಮ್ಮನ್ನು ಪರಿಗಣಿಸಿರುವುದು ಸಂತೋಷ. ನಮ್ಮ ಸಂಸ್ಥೆ ಭೂತಾನದ ಸಾಂಸ್ಕೃತಿಕ ಮತ್ತು ಪ್ರದರ್ಶನ ಕಲೆಗಳಿಗೆ ಸಂಬಂಧಪಟ್ಟದ್ದಾದ್ದರಿಂದ ನಿಮ್ಮ ಯೋಜನೆ ನಮಗೂ ಸರಿಹೊಂದುತ್ತದೆ” ಎಂದು ಪೆಮಾ ಉತ್ತರಿಸಿದ್ದರು. ಆದರೆ ಅವರೂ ಒಂದಷ್ಟು ಮಾಹಿತಿ ನಮ್ಮಿಂದ ಬಯಸಿದ್ದರು- ನೀವು ಯಾವಾಗ ಬರುತ್ತೀರಿ, ನಿರ್ದಿಷ್ಟವಾಗಿ ನಮ್ಮ ಕಡೆಯಿಂದ ಯಾವ ರೀತಿಯ ಸಹಾಯ ಬೇಕು, ಮಾಸ್ಕ್ ಡ್ಯಾನ್ಸ್ ಕಲಾವಿದರಿಗೆ ಸಂಭಾವನೆ ನೀಡಲು ನಿಮಗೆ ಸಾಧ್ಯವೇ, ಸ್ಥಳೀಯ ಪ್ರಯಾಣ ಮತ್ತು ಇತರ ಖರ್ಚುವೆಚ್ಚಗಳನ್ನು ಭರಿಸಲು ಸಿದ್ಧರಿದ್ದೀರಾ, ಇತ್ಯಾದಿ. ಅಷ್ಟಲ್ಲದೆ, ನಮ್ಮ ಕಾಲೇಜು ಭೂತಾನದ ಕೇಂದ್ರ ಭಾಗದಲ್ಲಿದೆ. ರಾಜಧಾನಿ ಥಿಂಪುವಿನಲ್ಲಿ ಅಲ್ಲ. ಅಲ್ಲಿಂದ ನಮ್ಮ ಕಾಲೇಜಿಗೆ ಒಂದು ದಿನದ ಪ್ರಯಾಣ ಇದೆ. ಥಿಂಪುವಿನಿಂದ ನಮ್ಮಲ್ಲಿಗೆ ನಿಮ್ಮ ಪ್ರಯಾಣದ ವ್ಯವಸ್ಥೆ ಏನು ತಿಳಿಸಿ. ದೇಶದ ವಿವಿಧ ಭಾಗಗಳಲ್ಲಿ ಮಾಸ್ಕ್ ಡ್ಯಾನ್ಸ್ ಕಲಾವಿದರು ಸಿಗುತ್ತಾರಾದರೂ ನಾವು ಸಾಕಷ್ಟು ಮುಂಚಿತವಾಗಿ ಎಲ್ಲವನ್ನೂ ಪ್ಲಾನ್ ಮಾಡಿಕೊಳ್ಳಬೇಕಾಗುತ್ತದೆ ಎಂದವರು ತಿಳಿಸಿದ್ದರು.

ಇಷ್ಟೊಂದು ಕ್ಷಿಪ್ರವಾಗಿ ಅವರು ಉತ್ತರಿಸಿದ್ದು ಮತ್ತು ತಮ್ಮ ಬೆಂಬಲ ಇರುವುದಾಗಿ ತಿಳಿಸಿದ್ದು ನಮಗೇನೋ ಸಂತೋಷವೇ ಆಗಿತ್ತು. ಆದರೆ ಉಳಿದ ಪ್ರಶ್ನೆಗಳಿಂದ ಇನ್ನೊಂದಷ್ಟು ದಿಗಿಲಾಯಿತು. ನಮಗೆ ಮಂಜೂರಾಗಿರುವುದು ಒಂದು ಸಾಮಾನ್ಯ ಮೊತ್ತ. ಅದರಲ್ಲಿ ಅಲ್ಲಿನ ಕಲಾವಿದರಿಗೆ ಸಂಭಾವನೆ, ಅವರ ಪ್ರಯಾಣದ ವೆಚ್ಚ ಇದೆಲ್ಲ ಕೊಡುವುದು ಸಾಧ್ಯವೇ ಇತ್ಯಾದಿ ಚಿಂತೆ ಹತ್ತಿಕೊಂಡಿತು. ಆದರೂ ಅದನ್ನು ತೋರಿಸಿಕೊಳ್ಳದೆ, “ಇಷ್ಟೊಂದು ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಮ್ಮ ಪ್ರಾಯೋಜಕರೊಂದಿಗೆ ಚರ್ಚಿಸಿ ಪುನಃ ನಿಮ್ಮನ್ನು ಸಂಪರ್ಕಿಸುತ್ತೇವೆ” ಎಂದು ಉತ್ತರಿಸಿದೆವು.

(ಮುಂದುವರಿಯುವುದು)

ಸೋಮವಾರ, ಫೆಬ್ರವರಿ 2, 2026

ಭೂತಾನ್‌ನ ಹಾದಿ ತೆರೆದುಕೊಂಡದ್ದು ಹೀಗೆ...

 ʼಭೂತಾನ್‌ನಲ್ಲಿ ಯಕ್ಷದೀವಿಗೆʼ

ಪ್ರವಾಸ ಕಥನ-2

ಡಾ. ಸಿಬಂತಿ ಪದ್ಮನಾಭ & ಡಾ. ಆರತಿ ಪಟ್ರಮೆ

(ಪ್ರಜಾಪ್ರಗತಿ, 01 ಫೆಬ್ರವರಿ 2026)

ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ? ಬೆಟ್ಟದ ಮೇಲಣ ನೆಲ್ಲಿಕಾಯಿ, ಸಮುದ್ರದೊಳಗಣ ಉಪ್ಪು, ಎತ್ತಣಿಂದೆತ್ತ ಸಂಬಂಧವಯ್ಯಾ? ಎಂದು ಕೇಳಿದ್ದರಲ್ಲ ಅಲ್ಲಮ! ಎಲ್ಲಿಯ ಭೂತಾನ, ಎಲ್ಲಿಯ ಯಕ್ಷಗಾನ ಎಂದು ನಮಗೇ ಒಂದು ಕ್ಷಣ ಸೋಜಿಗವೆನಿಸಿತ್ತು. ಆದರೆ ಭೂತಾನದ ಬೆಟ್ಟಗಳ ಮೇಲಿನ ನೆಲ್ಲಿಕಾಯಿಗೂ ಕರ್ನಾಟಕದ ಯಕ್ಷಗಾನವೆಂಬ ಉಪ್ಪಿಗೂ ಎತ್ತಣಿಂದೆತ್ತಲೋ ಸಂಬಂಧ ಕೂಡಿಬಂದಿತ್ತು.

“ಭೂತಾನ್‌ಗೆ ಸಂಬಂಧಿಸಿದಂತೆ ಪ್ರಾಜೆಕ್ಟ್ ಪ್ರಪೋಸಲ್ ಕರೆದಿದ್ದಾರೆ ನೋಡಿ. ನಿಮ್ಮ ಯಕ್ಷಗಾನದ ಪ್ರಸ್ತಾವನೆ ಕಳಿಸಿ. ಲಾಟರಿ ಹೊಡೀಬಹುದು” ಎಂದು 2025ರ ಏಪ್ರಿಲ್ ತಿಂಗಳ ಒಂದು ಶುಭಮುಂಜಾನೆ ಸಂದೇಶ ಕಳಿಸಿದರು ಹಿರಿಯ ವಿದ್ವಾಂಸರಾದ ಡಾ. ಎಸ್. ಪಿ. ಪದ್ಮಪ್ರಸಾದರು. ಅವರು ಹತ್ತಾರು ದೇಶಗಳನ್ನು ಸುತ್ತಾಡಿದವರು. ಅಲ್ಲಿನ ಅನುಭವಗಳನ್ನು ತಮ್ಮ ಪ್ರವಾಸ ಕಥನಗಳ ಮೂಲಕ ಬಿಚ್ಚಿಟ್ಟವರು. ಇಂತಹ ಸುದ್ದಿಗಳೆಲ್ಲ ಅವರನ್ನು ಬೇಗನೆ ತಲುಪುತ್ತವೆ. 

“ಭೂತಾನಿನಲ್ಲಿ ಯಕ್ಷಗಾನ ಮಾಡೋದಾ? ಅಲ್ಲಿಗೆ ಹೋಗೋದು ಹೇಗೆ, ಯಕ್ಷಗಾನ ಮಾಡೋದು
ಹೇಗೆ?” ಒಂದಷ್ಟು ಹೊತ್ತು ಹಾಗೆ ಅನ್ನಿಸಿತು. “ಪೂರ್ಣಪ್ರಮಾಣದ ಯಕ್ಷಗಾನ ಪ್ರದರ್ಶನವನ್ನೇ ಕೊಡಬೇಕಾಗಿಲ್ಲ. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಏನಾದರೂ ಮಾಡಬಹುದಾ ನೋಡಿ” ಎಂದವರು ಸುಳಿವು ಕೊಟ್ಟರು. ಆ  ಬಗ್ಗೆ ಯೋಚಿಸುವುದಕ್ಕೆ ಆರಂಭಿಸಿದೆವು. 

ಚಂದ್ರಮಂಡಲಚರಿತೆಯ ನೆನಪು:

ನಾವು ಆವಾಗಷ್ಟೇ ‘ಚಂದ್ರಮಂಡಲಚರಿತೆ’ಯೆಂಬ ಯಕ್ಷಗಾನ ಮಾಡಿದ ಕನವರಿಕೆಯಲ್ಲಿದ್ದೆವು. ದೆಹಲಿಯ ಹ್ಯುಂಡೈ ಇಂಡಿಯಾ ಮೋಟಾರ್ ಫೌಂಡೇಶನ್ ಕಳೆದ ವರ್ಷ ‘ಆರ್ಟ್ ಫಾರ್ ಹೋಪ್’ ಎಂಬ ಯೋಜನೆಯಡಿಯಲ್ಲಿ ಕಲಾವಿದರಿಂದ, ಕಲಾಸಂಘಟನೆಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿತ್ತು. ನಾವು ‘ಯಕ್ಷದೀವಿಗೆ’ಯ ಕಡೆಯಿಂದ ಒಂದು ವಿನೂತನ ಪ್ರಸ್ತಾವನೆ ಕಳಿಸಿದ್ದೆವು.

ಯಕ್ಷಗಾನವನ್ನು ಲಾಗಾಯ್ತಿನಿಂದಲೂ ಪೌರಾಣಿಕ ಮೌಲ್ಯಗಳ ಪ್ರತಿಪಾದನೆಗೆ, ಸಾಮಾಜಿಕ ಮೌಲ್ಯಗಳ ಪ್ರಸರಣೆಗೆ ಬಳಸುತ್ತಿದ್ದುದು ರೂಢಿ. ರಾಮಾಯಣ, ಮಹಾಭಾರತ, ಭಾಗವತದ ಕಥೆಗಳೇ ಅದಕ್ಕೆ ಆಧಾರ. ಕರಾವಳಿಯ ಪಡುವಲಪಾಯವಾಗಲೀ, ಬಯಲುಸೀಮೆಯ ಮೂಡಲಪಾಯವಾಗಲೀ ಇವೇ ಕಥಾನಕಗಳನ್ನೇ ಮತ್ತೆಮತ್ತೆ ಹೊಸ ಪ್ರಸಂಗಗಳಾಗಿ ಆಡುತ್ತಿರುತ್ತವೆ. ಪ್ರತಿದಿನ ಒಂದೇ ಪ್ರಸಂಗ ಆಡಿದರೂ ಅದು ನಿತ್ಯನೂತನ. ಕರಾವಳಿ ಕಡೆ ಎಷ್ಟು ಬಾರಿ ದೇವಿಮಹಾತ್ಮೆ ಆಡಿದರೂ ಸಾವಿರ ಜನಕ್ಕಿಂತ ಕಡಿಮೆ ನೋಡಿದ್ದಿಲ್ಲ. ಅದು ಆ ಕಲೆಗಿರುವ ಆಕರ್ಷಣೆ.

ಇಂತಹ ಯಕ್ಷಗಾನದಲ್ಲಿ ನವೀನ ಪ್ರಯೋಗಗಳಾಗಿದ್ದೂ ಉಂಟು. ಯಕ್ಷಗಾನದ ಸಂವಹನ ಶಕ್ತಿಯನ್ನು ಸಾಮಾಜಿಕ ಪ್ರಜ್ಞೆಯನ್ನು ಉದ್ದೀಪಿಸುವ ಉದ್ದೇಶದಿಂದ ಬೇರೆಬೇರೆ ರೀತಿಯಲ್ಲಿ ಬಳಸಿಕೊಂಡದ್ದುಂಟು. ‘ಆರ್ಟ್ ಫಾರ್ ಹೋಪ್’ ಯೋಜನೆಗಾಗಿ ನಾವು ಪರಿಸರ ಸಂರಕ್ಷಣೆಯ ಸಂದೇಶವನ್ನು ಯಕ್ಷಗಾನದ ಮೂಲಕ ಪಸರಿಸುವ ಉದ್ದೇಶವನ್ನು ಪ್ರಸ್ತಾಪಿಸಿದ್ದೆವು. ದೇಶದ ಉದ್ದಗಲದಿಂದ ಬಂದ ಏಳುನೂರಕ್ಕೂ ಹೆಚ್ಚು ಅರ್ಜಿಗಳ ಪೈಕಿ ಹತ್ತು ಸಂಸ್ಥೆಗಳ ಪ್ರಸ್ತಾವನೆಯನ್ನು ಹ್ಯುಂಡೈ ಆಯ್ಕೆ ಮಾಡಿತ್ತು. ಅದರಲ್ಲಿ ಯಕ್ಷದೀವಿಗೆಯದ್ದೂ ಒಂದು. ಹಾಗೆ ಹುಟ್ಟಿಕೊಂಡದ್ದು ಚಂದ್ರಮಂಡಲಚರಿತೆ.

ಚಂದ್ರಮಂಡಲನೆಂಬ ಸಾತ್ವಿಕ ದೊರೆಯೊಬ್ಬ ಪ್ರಕೃತಿಯ ಮೇಲಾಗುವ ಬಾಹ್ಯ ದಾಳಿಗಳಿಗೆ ಪರಿಹಾರ ಕಂಡುಕೊಳ್ಳುವ ಕಥಾನಕವದು. ಹಿರಿಯ ಕಲಾವಿದ ಗಣರಾಜ ಕುಂಬ್ಳೆಯವರು ಯಕ್ಷದೀವಿಗೆಗಾಗಿ ಹೀಗೊಂದು ವಿನೂತನ ಪ್ರಸಂಗವನ್ನು ಹೊಸೆದುಕೊಟ್ಟಿದ್ದರು. ಇದನ್ನು ವಿಶೇಷ ಆಸ್ಥೆಯಿಂದ ಅಭ್ಯಾಸ ಮಾಡಿ ಅನೇಕ ಕಡೆ ಪ್ರದರ್ಶನಗಳನ್ನೂ ನೀಡಿದ್ದೆವು. ದೆಹಲಿಯಲ್ಲಿ ನಡೆದ ನಾಲ್ಕು ದಿನಗಳ ಕಲಾಮೇಳದಲ್ಲೂ ಚಂದ್ರಮಂಡಲಚರಿತೆ ಎಲ್ಲರ ಗಮನ ಸೆಳೆದಿತ್ತು.

ಮತ್ತೆ ಆರ್ಟ್ ಫಾರ್ ಹೋಪ್!

ಭೂತಾನ್‌ನಿಂದ ಬಂದ ಹೊಸ ಒಸಗೆ ಯಕ್ಷದೀವಿಗೆಗೆ ಎರಡನೆಯ ಆರ್ಟ್ ಫಾರ್ ಹೋಪ್ ಆಗಿತ್ತು. ಆದರೆ ಈ ಹೊಸ ಸಾಧ್ಯತೆಯನ್ನು ಹೇಗೆ ಬಳಸಿಕೊಳ್ಳಬೇಕು, ಏನು ಮಾಡಬೇಕು ಎಂಬ ಸ್ಪಷ್ಟ ಕಲ್ಪನೆ ಇರಲಿಲ್ಲ. ಇನ್ನೊಂದು ಹೊಸ ಪ್ರಸಂಗವನ್ನು ಸಿದ್ಧಪಡಿಸುವುದೇ, ಅಲ್ಲಿ ಹೋಗಿ ಪೂರ್ಣ ಪ್ರಮಾಣದ ಪ್ರದರ್ಶನ ನೀಡುವುದೇ, ಅದಕ್ಕೆ ಬೇಕಾದ ಸಂಪನ್ಮೂಲವೆಲ್ಲ ಲಭ್ಯವಿದೆಯೇ ಹೀಗೆ ಅನೇಕ ಪ್ರಶ್ನೆಗಳಿದ್ದವು. ಪೂರ್ಣಪ್ರಮಾಣದ ಯಕ್ಷಗಾನ ತಂಡ ಒಯ್ಯುವ ಸಾಧ್ಯತೆ ಕಡಿಮೆ ಎನಿಸಿದಾಗ ಅಧ್ಯಯನ ಯೋಜನೆ ಕೈಗೊಳ್ಳುವ ಸಾಧ್ಯತೆಗಳು ಕಾಣಿಸಿದವು.

ದೆಹಲಿಯಲ್ಲಿನ ಭೂತಾನ್ ರಾಯಭಾರ ಕಚೇರಿಯ ಒಂದು ಭಾಗವಾಗಿರುವ ‘ಇಂಡಿಯಾ - ಭೂತಾನ್ ಫೌಂಡೇಶನ್’ (IBF) ಈ ಬಾರಿ ಪ್ರಸ್ತಾವನೆಗಳನ್ನು ಆಹ್ವಾನಿಸಿತ್ತು. ಎರಡೂ ದೇಶಗಳ ನಡುವೆ ಶಿಕ್ಷಣ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಕ್ರೀಡೆ ಇತ್ಯಾದಿ ಕ್ಷೇತ್ರಗಳಲ್ಲಿ ಪರಸ್ಪರ ಸಂಬಂಧಗಳನ್ನು ಪೋಷಿಸುವ ಪ್ರಸ್ತಾವನೆಗಳನ್ನು ವೈಯಕ್ತಿಕ ನೆಲೆಯಲ್ಲಿ ಹಾಗೂ ಸಂಘಸಂಸ್ಥೆಗಳ ಮೂಲಕ ಸಲ್ಲಿಸುವುದಕ್ಕೆ ಅವಕಾಶವಿತ್ತು. ಎರಡು ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯದ ಸಾಧ್ಯತೆಯೊಂದು ಇರುವುದಾದರೆ ಅದು ಹೇಗೆ ಎಂದು ಯೋಚಿಸಿದೆವು.

ಯಕ್ಷಗಾನದಂತಹ ಕರ್ನಾಟಕದ ಕಮನೀಯ ಕಲೆಯ ಬಗ್ಗೆ ಭೂತಾನ್ ದೇಶದ ಮಂದಿಗೆ ಧಾರಾಳವಾಗಿ ಹೇಳಬಹುದು. ಆದರೆ ಬರೀ ಅಷ್ಟಕ್ಕೆ ಏನೂ ಪ್ರಯೋಜನ ಆದಂತಾಗುವುದಿಲ್ಲ. ಅವರಿಂದ ನಾವೂ ಏನನ್ನಾದರೂ ಕಲಿತು ಬರಬೇಕು; ಪರಸ್ಪರ ಕೊಡುಕೊಳ್ಳುವಿಕೆ ಸಾಧ್ಯವಾಗಬೇಕು. ಎರಡು ದೇಶಗಳ ಮಂದಿಯ ನಡುವೆ ಒಂದು ಸಾಂಸ್ಕೃತಿಕ ಬಂಧ ಬೆಸೆಯಬೇಕು. ಕಲೆಯ ನೆಪದಲ್ಲಿ ಜನಜೀವನ, ನಂಬಿಕೆ-ನಡವಳಿಕೆ, ಆಹಾರ-ವಿಹಾರ, ಸಂಸ್ಕೃತಿ, ಸಾಮಾಜಿಕ ಬದುಕು- ಇತ್ಯಾದಿಗಳು ಪರಸ್ಪರ ಅರ್ಥವಾಗಬೇಕು. ಇದಕ್ಕೆ ಏನು ಮಾಡಬಹುದು? ಹೀಗೆ ಯೋಚಿಸುತ್ತಿದ್ದವರಿಗೆ ಭೂತಾನ್‌ನ ‘ಮಾಸ್ಕ್ ಡ್ಯಾನ್ಸ್’ ಗೋಚರಿಸಿತು.

ಮಾಸ್ಕ್ ಡ್ಯಾನ್ಸ್ ಎಂಬ ಯಕ್ಷಗಾನ:

ನಮ್ಮ ಯಕ್ಷಗಾನಕ್ಕೆ ಸಂವಾದಿಯಾಗಿ ಭೂತಾನ್ ದೇಶದಲ್ಲಿ ಎಂತಹ ಕಲೆಗಳಿವೆ ಎಂದು ಹುಡುಕುತ್ತಿದ್ದಾಗ ‘ಮಾಸ್ಕ್ ಡ್ಯಾನ್ಸ್’ನ ಮಾಹಿತಿ ದೊರೆಯಿತು. ಮುಖವಾಡ ನೃತ್ಯ ಭೂತಾನ್‌ನ ಅತ್ಯಂತ ವಿಶಿಷ್ಟ ಕಲೆಯಷ್ಟೇ ಅಲ್ಲ, ಅದು ಅಲ್ಲಿನ ಜನಜೀವನದ ಮಧ್ಯೆ ಹಾಸುಹೊಕ್ಕಂತೆ ಬೆರೆತುಹೋಗಿದೆ. ಭೂತಾನ್‌ನಲ್ಲಿ ಎಲ್ಲೇ ಸಂಚಾರ ಮಾಡಿದರೂ ಯಾವುದೋ ಗೋಡೆಗಳ ಮೇಲೆ, ಇನ್ಯಾವುದೋ ಬಾಗಿಲ ಮೇಲೆ ಮುಖವಾಡದ ಪ್ರತಿಕೃತಿಗಳು, ವರ್ಣರಂಜಿತ ಚಿತ್ರಗಳು ಕಾಣಿಸುತ್ತಲೇ ಇರುತ್ತವೆ. ಭೂತಾನಕ್ಕೆ ಹೋದವರು ಮಾಸ್ಕ್ಗಳ ಒಂದೆರಡು ಫ್ರಿಜ್ ಮ್ಯಾಗ್ನೆಟ್‌ಗಳಿಲ್ಲದೆ ಹಿಂದಿರುಗುವುದು ಅಪರೂಪ. ಆ ಮಟ್ಟಿಗೆ ಅದು ಗಟ್ಟಿ.

ವರ್ಣರಂಜಿತ ವೇಷಭೂಷಣ, ಎದ್ದುಕಾಣುವ ವೈವಿಧ್ಯಮಯ ಮುಖವಾಡಗಳು, ಶೈಲೀಕೃತ ನರ್ತನ ವಿಧಾನ-ಇವನ್ನೆಲ್ಲ ನೋಡಿದಾಗ ‘ಅರೆ ಭೂತಾನದಲ್ಲೂ ಒಂದು ಯಕ್ಷಗಾನ ಇದೆ’ ಎಂದು ಅನಿಸಿತು. ಅಂತರ್ಜಾಲದ ವಿವಿಧ ತಾಣಗಳಲ್ಲಿ ಹುಡುಕಾಡಿದಾಗ ಆ ಪ್ರಕಾರದ ಬಗ್ಗೆ ಒಂದಷ್ಟು ಮಾಹಿತಿಯೂ ದೊರೆಯಿತು. ನಮ್ಮ ಯಕ್ಷಗಾನದೊಂದಿಗೆ ಈ ಮಾಸ್ಕ್ ಡ್ಯಾನ್ಸನ್ನೇ ಯಾಕೆ ಹೋಲಿಸಿ ನೋಡಿ ಅಧ್ಯಯನ ಮಾಡಬಾರದು ಎಂಬ ಸಾಧ್ಯತೆ ಗೊತ್ತಾಯಿತು. ಹಾಗೆ ಹುಟ್ಟಿಕೊಂಡದ್ದು – “ಕರ್ನಾಟಕದ ಯಕ್ಷಗಾನ ಮತ್ತು ಭೂತಾನ್‌ನ ಮಾಸ್ಕ್ ಡ್ಯಾನ್ಸ್ಗಳ ತೌಲನಿಕ ಅಧ್ಯಯನ”ವೆಂಬ ಒಂದು ಸಂಶೋಧನ ಯೋಜನೆ.

ಆದರೆ ಈ ಯೋಜನೆ ಮಂಜೂರಾಗುವ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಹೆಚ್ಚುಕಡಿಮೆ ಒಂಬತ್ತು ತಿಂಗಳ ಪ್ರಯತ್ನವದು. ಆದರೆ ಈ ಪ್ರಯತ್ನದ ನೆಪದಲ್ಲಿ ಭೂತಾನಿಗೆ ಹೋಗುವ ಮುನ್ನವೇ ಭೂತಾನೀಯರ ಸಮೀಪದರ್ಶನವಾಯಿತು. ಅವರ ಸಹಕಾರ ಮನೋಭಾವ, ಮಾನವೀಯತೆ, ಸಜ್ಜನಿಕೆ, ಪರಸ್ಪರ ಗೌರವ, ಸಹೃದಯತೆಗಳು ಮತ್ತೆಮತ್ತೆ ಅನುಭವಕ್ಕೆ ಬಂದವು. ಆ ಕಥೆಯನ್ನು ಮುಂದೆ ಕೇಳುವಿರಂತೆ.

(ಮುಂದುವರಿಯುವುದು.)