ʼಭೂತಾನ್‌ನಲ್ಲಿ ಯಕ್ಷದೀವಿಗೆʼ
ಪ್ರವಾಸ ಕಥನ-3
ಡಾ. ಸಿಬಂತಿ ಪದ್ಮನಾಭ & ಡಾ. ಆರತಿ ಪಟ್ರಮೆ
(ಪ್ರಜಾಪ್ರಗತಿ, 08 ಫೆಬ್ರವರಿ 2026)
ನಮ್ಮ ಸಂಶೋಧನ ಪ್ರಸ್ತಾವನೆಯನ್ನು ಪುರಸ್ಕರಿಸಿದ ಇಂಡಿಯಾ-ಭೂತಾನ್ ಫೌಂಡೇಶನ್ (IBF) ನವದೆಹಲಿಯಲ್ಲಿರುವ ಭೂತಾನ್ ರಾಯಭಾರ ಕಚೇರಿಯ ಒಂದು ಭಾಗ. ಇದು ಭಾರತ ಮತ್ತು ಭೂತಾನ್ ಎರಡೂ ದೇಶಗಳ ಜಂಟಿ ಸಹಯೋಗದ ಸಂಸ್ಥೆ. 2003ರಲ್ಲಿ ಅಂದಿನ ಭೂತಾನ್ ರಾಜಕುಮಾರ, ಈಗಿನ ರಾಜ ಜಿಗ್ಮೆ ಖೇಸರ್ ನಮ್‌ಗ್ಯೆಲ್ ವಾಂಗ್ಚುಕ್ ಭಾರತಕ್ಕೆ ಭೇಟಿ ನೀಡಿದ್ದಾಗ ಸ್ಥಾಪನೆಯಾದ ಸಂಸ್ಥೆಯಿದು. ಶೈಕ್ಷಣಿಕ, ಸಾಂಸ್ಕೃತಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಸ್ಪರ ಕೊಡುಕೊಳ್ಳುವಿಕೆಗಳನ್ನು ವೃದ್ಧಿಸುವುದಕ್ಕಾಗಿ ಎರಡೂ ದೇಶಗಳು ಅಧಿಕೃತ ಒಡಂಬಡಿಕೆಯೊಂದನ್ನು ಮಾಡಿದ್ದರ ಪರಿಣಾಮವಾಗಿ ಐಬಿಎಫ್ ಅಸ್ತಿತ್ವಕ್ಕೆ ಬಂತು. ಭಾರತದಲ್ಲಿರುವ ಭೂತಾನ್ ರಾಯಭಾರಿ ಮತ್ತು ಭೂತಾನ್‌ನಲ್ಲಿರುವ ಭಾರತೀಯ ರಾಯಭಾರಿ ಈ ಸಂಸ್ಥೆಯ ನಿರ್ದೇಶಕರುಗಳ ಮಂಡಳಿಯ ಉಪಾಧ್ಯಕ್ಷರುಗಳಾಗಿರುತ್ತಾರೆ.
ನಮ್ಮ ಪ್ರಸ್ತಾವನೆ ಸಲ್ಲಿಕೆಯಾಗಿ ನಾಲ್ಕು ತಿಂಗಳು ಆ ಕಡೆಯಿಂದ ಯಾವುದೇ ಸಂವಹನ ಇರಲಿಲ್ಲ. ಬಹುಶಃ ನಮ್ಮಂತೆ ಇನ್ನೂ ಸಾಕಷ್ಟು ಮಂದಿ ಸಲ್ಲಿಸಿದ ಪ್ರಸ್ತಾವನೆಗಳ ಪರಿಶೀಲನೆ ನಡೆಯುತ್ತಿದ್ದಿರಬಹುದು. ಬಂದರೆ ಬಂತು, ಇಲ್ಲವಾದರೆ ಇಲ್ಲ ಎಂದುಕೊಂಡು ಅದನ್ನು ಮರೆತೇಬಿಟ್ಟಿದ್ದೆವು. ಆಗಸ್ಟ್ ತಿಂಗಳ ಒಂದು ದಿನ ಇದ್ದಕ್ಕಿದ್ದ ಹಾಗೆ ಒಂದು ಮೈಲ್ ಕಾಣಿಸಿಕೊಂಡಿತು: “ನೀವು ಐಬಿಎಫ್‌ಗೆ ಸಲ್ಲಿಸಿದ ಪ್ರಸ್ತಾವನೆ ಪ್ರಾಯೋಜನೆಗೆ ಆಯ್ಕೆಯಾಗಿದೆ ಎಂದು ತಿಳಿಸಲು ಸಂತೋಷಪಡುತ್ತೇವೆ. ಈ ಸಂಬಂಧ ಹೆಚ್ಚಿನ ವಿವರಗಳನ್ನು ಚರ್ಚಿಸಲು ಒಂದು ಆನ್ಲೈನ್ ಸಭೆ ನಡೆಸಲು ಬಯಸುತ್ತೇವೆ.” ನಮಗೆ ಅದೊಂದು ಸಂಭ್ರಮದ ಕ್ಷಣವಾಗಿತ್ತು.
ಆ ತಿಂಗಳಂತೂ ಯಕ್ಷದೀವಿಗೆಗೆ ಎಡೆಬಿಡದ ಕಾರ್ಯಕ್ರಮಗಳ ಅಡಾವುಡಿ. ಅದರ ಮಧ್ಯೆ ಒಂದೆರಡು ದಿನಗಳನ್ನು ಗುರುತು ಮಾಡಿ ಈ ದಿನಗಳಲ್ಲಿ ಸಭೆ ನಡೆಸಿದರೆ ನಮಗೆ ಅನುಕೂಲ ಎಂದು ಉತ್ತರಿಸಿದೆವು. ಆಗಸ್ಟ್ 25 ಮಧ್ಯಾಹ್ನ 3 ಗಂಟೆಗೆ ಸಭೆ ನಡೆಸೋಣ ಎಂಬ ಸೂಚನೆ ಅತ್ತಲಿಂದ ಬಂತು. ಆ ದಿನ ನಾವು ಭಾಗವಹಿಸಲೇಬೇಕಾದ ಕೌಟುಂಬಿಕ ಕಾರ್ಯಕ್ರಮವೊಂದಿತ್ತು. ಅವರು ಕೊಟ್ಟ ದಿನಾಂಕಕ್ಕೆ ತಕರಾರು ಬೇಡ, ಹೇಗಾದರೂ ಆನ್ಲೈನ್ ಮೀಟಿಂಗ್ ಅಲ್ವೇ, ಮೂರು ಗಂಟೆಗೆ ಊಟವೂ ಆಗಿರುತ್ತದೆ, ಇದ್ದಲ್ಲಿಂದಲೇ ಮೀಟಿಂಗ್ ಜಾಯಿನ್ ಆದರೆ ಆಯ್ತು ಎಂದು ತೀರ್ಮಾನಿಸಿದೆವು.
ರಾಯಭಾರ ಕಚೇರಿಯೊಂದಿಗೆ ಸಭೆ:ಸಭೆಯಲ್ಲಿ ಭೂತಾನ್ ರಾಯಭಾರ ಕಚೇರಿ ಕಡೆಯಿಂದ ಇಬ್ಬರು ಪ್ರತಿನಿಧಿಗಳಿದ್ದರು. ಒಬ್ಬರುಭಾರತೀಯರು, ಇನ್ನೊಬ್ಬರು ಭೂತಾನ್ ದೇಶದವರು. ಅವರ ಮಾತು ಅಷ್ಟೊಂದು ಸ್ಪಷ್ಟವಾಗಿ ನಮಗೆ ಅರ್ಥವಾಗುತ್ತಿರಲಿಲ್ಲ. ಅಂತೂ ನಮ್ಮ ಪ್ರಸ್ತಾವನೆ ವಿಚಾರವಾಗಿ ಅವರು ಒಂದಷ್ಟು ಸ್ಪಷ್ಟೀಕರಣ ಬಯಸಿದ್ದರೆಂದು ಗೊತ್ತಾಯಿತು. ನಮ್ಮ ಭೇಟಿಯ ಸಂದರ್ಭದಲ್ಲಿ ಭೂತಾನ್ ಸರ್ಕಾರದ ಸಂಸ್ಕೃತಿ ಇಲಾಖೆ, ಅಲ್ಲಿನ ಸಾಂಪ್ರದಾಯಿಕ ಪ್ರದರ್ಶನ ಕಲೆ ಮತ್ತು ಸಂಗೀತ ವಿಭಾಗ (TPAMD), ರಾಯಲ್ ಭೂತಾನೀಸ್ ವಿಶ್ವವಿದ್ಯಾನಿಲಯದ ಭಾಷೆ ಮತ್ತು ಸಂಸ್ಕೃತಿ ಕಾಲೇಜು (CLCS) - ಮುಂತಾದವುಗಳ ಸಹಯೋಗ ಪಡೆಯುವುದಾಗಿ ಪ್ರಸ್ತಾವನೆಯಲ್ಲಿ ತಿಳಿಸಿದ್ದೆವು. ಈ ಎಲ್ಲವುಗಳ ಮಾಹಿತಿಯನ್ನು ಅಂತರ್ಜಾಲದ ಮೂಲಕ ಪಡೆದಿದ್ದೆವೇ ಹೊರತು ಅವುಗಳ ಬಗ್ಗೆ ಹೆಚ್ಚಿನ ತಿಳುವಳಿಕೆಯೇನೂ ನಮಗಿರಲಿಲ್ಲ.
ಹಾಗೆ ನೋಡಿದರೆ ನಮ್ಮ ದೇಶದ ಉತ್ತರದಲ್ಲಿ ಹಿಮಾಲಯದಾಚೆ ಇರುವ ದೇಶ ಭೂತಾನ್ ಎಂಬ ಭೂಪಟದ ಚಿತ್ರವೊಂದು ಬಿಟ್ಟರೆ ಆ ದೇಶದ ಬಗೆಗಾಗಲೀ, ಅಲ್ಲಿ ಇಲಾಖೆಗಳ ಬಗೆಗಾಗಲೀ, ಸಂಸ್ಥೆಗಳ ಬಗೆಗಾಗಲೀ ನಮಗೇನೂ ಗೊತ್ತಿರಲಿಲ್ಲ. ಈ ಯೋಜನೆಯ ಯೋಚನೆ ಬಂದಾಗಲೇ ಎಲ್ಲವನ್ನೂ ಅಂರ್ಜಾಲದಲ್ಲಿ ಜಾಲಾಡುವ ಮೂಲಕ ತಿಳಿದುಕೊಂಡದ್ದು. ನಮ್ಮ ಯೋಜನೆಗೆ ಪೂರಕವಾಗುವ ಸಂಸ್ಥೆಗಳು ಭೂತಾನ್ ದೇಶದಲ್ಲಿ ಏನೆಲ್ಲ ಇವೆ ಎಂದು ಹುಡುಕುವಾಗ ಈ ಸಂಸ್ಥೆಗಳ ಬಗ್ಗೆ ಮಾಹಿತಿ ದೊರೆತು, ಅವುಗಳನ್ನು ಪ್ರಸ್ತಾವನೆಯಲ್ಲಿ ನಮೂದಿಸಿದ್ದೆವೇ ಹೊರತು ಅವುಗಳ ಯಾವ ಸಂಪರ್ಕವೂ ನಮಗಿರಲಿಲ್ಲ. ಬೇರೆ ದೇಶದೊಂದಿಗೆ ಅಧ್ಯಯನ ಯೋಜನೆಗಳನ್ನು ರೂಪಿಸುವಾಗ ಅಲ್ಲಿನ ಯಾರಾದರೂ ವ್ಯಕ್ತಿಗಳ ಅಥವಾ ಸಂಘಸಂಸ್ಥೆಗಳ ಸಹಯೋಗ ಬೇಕು, ಹಾಗಿದ್ದಾಗ ಮಾತ್ರ ಪ್ರಸ್ತಾವನೆಗಳು ಸ್ವೀಕೃತವಾಗುತ್ತವೆ ಎಂದಷ್ಟೇ ನಮಗೆ ತಿಳಿದಿತ್ತು. ಪ್ರಸ್ತಾವನೆ ಆಯ್ಕೆಯಾಗಿ ಆ ದೇಶಕ್ಕೆ ಹೋಗುವಾಗ ಅಲ್ಲಿನವರ ಪರಿಚಯ ಮಾಡಿಕೊಳ್ಳೋಣ, ಅವರ ಸಹಾಯ ಪಡೆದು ಅಧ್ಯಯನ ಮಾಡೋಣ ಎಂಬ ಕರಡು ಯೋಜನೆಯೊಂದು ಮಾತ್ರ ನಮ್ಮ ತಲೆಯಲ್ಲಿತ್ತು. ಆದರೆ ನಮ್ಮ ಪ್ರಸ್ತಾವನೆ ಆಯ್ಕೆಯಾಗುವುದರ ಹಿಂದೆ ನಾವು ನಮೂದಿಸಿದ ಸಂಸ್ಥೆಗಳ ಹೆಸರು ಪ್ರಮುಖ ಪಾತ್ರ ವಹಿಸಿತ್ತು.
“ಭೂತಾನ್ ಸಂಸ್ಕೃತಿ ಇಲಾಖೆ, ಟಿಪಿಎಎಂಡಿ, ಸಿಎಲ್‌ಸಿಎಸ್ ಸಂಸ್ಥೆಗಳ ಜೊತೆ ನಿಮ್ಮ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದ್ದೀರಿ. ಅದರ ಬಗ್ಗೆ ಹೆಚ್ಚಿನ ಸ್ಪಷ್ಟತೆ ಬೇಕು. ಅಲ್ಲಿ ಯಾರೊಂದಿಗೆ ಸಂಪರ್ಕದಲ್ಲಿದ್ದೀರಿ, ಅವರೊಂದಿಗೆ ಹೇಗೆ ಕೆಲಸ ಮಾಡುತ್ತೀರಿ, ನೀವು ಅಲ್ಲಿರುವ ಅವಧಿಯ ಪ್ರತಿದಿನ ಏನೇನು ಚಟುವಟಿಕೆ ಮಾಡುತ್ತೀರಿ ಎಂಬ ಬಗ್ಗೆ ನಮಗೆ ನಿರ್ದಿಷ್ಟ ಮಾಹಿತಿ, ವೇಳಾಪಟ್ಟಿ ಬೇಕು” ಎಂದರು ಸಭೆ ನಡೆಸಿದ ರಾಯಭಾರ ಕಚೇರಿಯ ಅಧಿಕಾರಿಗಳು. ಇದೊಳ್ಳೆ ಫಜೀತಿಯಾಯಿತಲ್ಲ ಅನಿಸಿತು. ಈ ನಿಟ್ಟಿನಲ್ಲಿ ನಾವೇನೂ ತಯಾರಿ ಮಾಡಿಕೊಂಡಿರಲಿಲ್ಲ. ಅವರೊಂದಿಗೆ ಹಂಚಿಕೊಳ್ಳಲು ನಮ್ಮಲ್ಲಿ ವಿವರಗಳಾಗಲೀ ಸ್ಪಷ್ಟತೆಯಾಗಲೀ ಇರಲಿಲ್ಲ. “ನಾವು ಕೆಲವು ಮಂದಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಅವರಿಂದ ಇನ್ನಷ್ಟು ಸ್ಪಷ್ಟತೆ ದೊರೆಯಬೇಕಾಗಿದೆ. ಸದ್ಯದಲ್ಲೇ ಹೆಚ್ಚಿನ ವಿವರಗಳೊಂದಿಗೆ ನಿಮ್ಮನ್ನು ಸಂಪರ್ಕಿಸುತ್ತೇವೆ” ಎಂದಷ್ಟೇ ಹೇಳಿ ಸಭೆಯನ್ನು ಮುಗಿಸಿದೆವು.
ಒಂದು ಅಧ್ಯಯನ ಪ್ರವಾಸಕ್ಕೆ ಎಷ್ಟೊಂದು ತಯಾರಿ ಮಾಡಬೇಕಲ್ವೇ ಎಂದು ಮೊದಲ ಬಾರಿ ಅನಿಸಿತು. ಈಗ ನಿಜವಾಗಿಯೂ ನಾವು ಗಂಭೀರವಾಗಿ ಯೋಚಿಸಲು ಪ್ರಾರಂಭಿಸಿದ್ದೆವು. ಮರುದಿನವೇ ಬೆಳ್ಳಂಬೆಳಗ್ಗೆ ಕುಳಿತು ಮತ್ತೆ ಅಂತರ್ಜಾಲದೊಳಗೆ ಇಳಿದೆವು. ಭಾಷೆ ಮತ್ತು ಸಂಸ್ಕೃತಿ ಕಾಲೇಜು (ಸಿಎಲ್‌ಸಿಎಸ್) ಜಾಲತಾಣಕ್ಕೆ ಭೇಟಿನೀಡಿ ನಮ್ಮ ಯೋಜನೆಗೆ ಸಹಾಯ ಮಾಡಬಲ್ಲ ವ್ಯಕ್ತಿಗಳು ಅಲ್ಲಿ ಯಾರಿದ್ದಾರೆ ಎಂದು ಹುಡುಕಿದೆವು. ಆ ಕಾಲೇಜಿನ ಶೈಕ್ಷಣಿಕ ವಿಭಾಗದ ಡೀನರಾದ ಪೆಮಾ ವಾಂಗ್ಚುಕ್ ಎಂಬವರ ಮಾಹಿತಿ, ಇಮೇಲ್ ವಿಳಾಸ ದೊರೆಯಿತು. ನಮ್ಮ ಯೋಜನೆಯ ಸಂಪೂರ್ಣ ವಿವರ, ನಮ್ಮಿಬ್ಬರ ಬಯೋಡೇಟಾ, ಯೋಜನೆ ನಮಗೆ ಮಂಜೂರಾದ ಬಗೆಗಿನ ಪತ್ರ ಎಲ್ಲವನ್ನೂ ಜೋಡಿಸಿ ಅವರಿಗೊಂದು ವಿವರವಾದ ಮೇಲ್ ಕಳಿಸಿದೆವು.ನಮಗೆ ಅಚ್ಚರಿಯೆಂಬಂತೆ ಮುಂದಿನ ಮೂರು ಗಂಟೆಗಳಲ್ಲೇ ಅದಕ್ಕೊಂದು ಉತ್ತರ ಬಂದು ನಮ್ಮ ಇನ್ಬಾಕ್ಸಲ್ಲಿ ಕಾಯುತ್ತಿತ್ತು. “ಸಹಭಾಗಿತ್ವಕ್ಕಾಗಿ ನಮ್ಮನ್ನು ಪರಿಗಣಿಸಿರುವುದು ಸಂತೋಷ. ನಮ್ಮ ಸಂಸ್ಥೆ ಭೂತಾನದ ಸಾಂಸ್ಕೃತಿಕ ಮತ್ತು ಪ್ರದರ್ಶನ ಕಲೆಗಳಿಗೆ ಸಂಬಂಧಪಟ್ಟದ್ದಾದ್ದರಿಂದ ನಿಮ್ಮ ಯೋಜನೆ ನಮಗೂ ಸರಿಹೊಂದುತ್ತದೆ” ಎಂದು ಪೆಮಾ ಉತ್ತರಿಸಿದ್ದರು. ಆದರೆ ಅವರೂ ಒಂದಷ್ಟು ಮಾಹಿತಿ ನಮ್ಮಿಂದ ಬಯಸಿದ್ದರು- ನೀವು ಯಾವಾಗ ಬರುತ್ತೀರಿ, ನಿರ್ದಿಷ್ಟವಾಗಿ ನಮ್ಮ ಕಡೆಯಿಂದ ಯಾವ ರೀತಿಯ ಸಹಾಯ ಬೇಕು, ಮಾಸ್ಕ್ ಡ್ಯಾನ್ಸ್ ಕಲಾವಿದರಿಗೆ ಸಂಭಾವನೆ ನೀಡಲು ನಿಮಗೆ ಸಾಧ್ಯವೇ, ಸ್ಥಳೀಯ ಪ್ರಯಾಣ ಮತ್ತು ಇತರ ಖರ್ಚುವೆಚ್ಚಗಳನ್ನು ಭರಿಸಲು ಸಿದ್ಧರಿದ್ದೀರಾ, ಇತ್ಯಾದಿ. ಅಷ್ಟಲ್ಲದೆ, ನಮ್ಮ ಕಾಲೇಜು ಭೂತಾನದ ಕೇಂದ್ರ ಭಾಗದಲ್ಲಿದೆ. ರಾಜಧಾನಿ ಥಿಂಪುವಿನಲ್ಲಿ ಅಲ್ಲ. ಅಲ್ಲಿಂದ ನಮ್ಮ ಕಾಲೇಜಿಗೆ ಒಂದು ದಿನದ ಪ್ರಯಾಣ ಇದೆ. ಥಿಂಪುವಿನಿಂದ ನಮ್ಮಲ್ಲಿಗೆ ನಿಮ್ಮ ಪ್ರಯಾಣದ ವ್ಯವಸ್ಥೆ ಏನು ತಿಳಿಸಿ. ದೇಶದ ವಿವಿಧ ಭಾಗಗಳಲ್ಲಿ ಮಾಸ್ಕ್ ಡ್ಯಾನ್ಸ್ ಕಲಾವಿದರು ಸಿಗುತ್ತಾರಾದರೂ ನಾವು ಸಾಕಷ್ಟು ಮುಂಚಿತವಾಗಿ ಎಲ್ಲವನ್ನೂ ಪ್ಲಾನ್ ಮಾಡಿಕೊಳ್ಳಬೇಕಾಗುತ್ತದೆ ಎಂದವರು ತಿಳಿಸಿದ್ದರು.
ಇಷ್ಟೊಂದು ಕ್ಷಿಪ್ರವಾಗಿ ಅವರು ಉತ್ತರಿಸಿದ್ದು ಮತ್ತು ತಮ್ಮ ಬೆಂಬಲ ಇರುವುದಾಗಿ ತಿಳಿಸಿದ್ದು ನಮಗೇನೋ ಸಂತೋಷವೇ ಆಗಿತ್ತು. ಆದರೆ ಉಳಿದ ಪ್ರಶ್ನೆಗಳಿಂದ ಇನ್ನೊಂದಷ್ಟು ದಿಗಿಲಾಯಿತು. ನಮಗೆ ಮಂಜೂರಾಗಿರುವುದು ಒಂದು ಸಾಮಾನ್ಯ ಮೊತ್ತ. ಅದರಲ್ಲಿ ಅಲ್ಲಿನ ಕಲಾವಿದರಿಗೆ ಸಂಭಾವನೆ, ಅವರ ಪ್ರಯಾಣದ ವೆಚ್ಚ ಇದೆಲ್ಲ ಕೊಡುವುದು ಸಾಧ್ಯವೇ ಇತ್ಯಾದಿ ಚಿಂತೆ ಹತ್ತಿಕೊಂಡಿತು. ಆದರೂ ಅದನ್ನು ತೋರಿಸಿಕೊಳ್ಳದೆ, “ಇಷ್ಟೊಂದು ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಮ್ಮ ಪ್ರಾಯೋಜಕರೊಂದಿಗೆ ಚರ್ಚಿಸಿ ಪುನಃ ನಿಮ್ಮನ್ನು ಸಂಪರ್ಕಿಸುತ್ತೇವೆ” ಎಂದು ಉತ್ತರಿಸಿದೆವು.
(ಮುಂದುವರಿಯುವುದು)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ