ʼಭೂತಾನ್‌ನಲ್ಲಿ ಯಕ್ಷದೀವಿಗೆʼ
ಪ್ರವಾಸ ಕಥನ-2
ಡಾ. ಸಿಬಂತಿ ಪದ್ಮನಾಭ & ಡಾ. ಆರತಿ ಪಟ್ರಮೆ
(ಪ್ರಜಾಪ್ರಗತಿ, 01 ಫೆಬ್ರವರಿ 2026)
ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ? ಬೆಟ್ಟದ ಮೇಲಣ ನೆಲ್ಲಿಕಾಯಿ, ಸಮುದ್ರದೊಳಗಣ ಉಪ್ಪು, ಎತ್ತಣಿಂದೆತ್ತ ಸಂಬಂಧವಯ್ಯಾ? ಎಂದು ಕೇಳಿದ್ದರಲ್ಲ ಅಲ್ಲಮ! ಎಲ್ಲಿಯ ಭೂತಾನ, ಎಲ್ಲಿಯ ಯಕ್ಷಗಾನ ಎಂದು ನಮಗೇ ಒಂದು ಕ್ಷಣ ಸೋಜಿಗವೆನಿಸಿತ್ತು. ಆದರೆ ಭೂತಾನದ ಬೆಟ್ಟಗಳ ಮೇಲಿನ ನೆಲ್ಲಿಕಾಯಿಗೂ ಕರ್ನಾಟಕದ ಯಕ್ಷಗಾನವೆಂಬ ಉಪ್ಪಿಗೂ ಎತ್ತಣಿಂದೆತ್ತಲೋ ಸಂಬಂಧ ಕೂಡಿಬಂದಿತ್ತು.
“ಭೂತಾನ್‌ಗೆ ಸಂಬಂಧಿಸಿದಂತೆ ಪ್ರಾಜೆಕ್ಟ್ ಪ್ರಪೋಸಲ್ ಕರೆದಿದ್ದಾರೆ ನೋಡಿ. ನಿಮ್ಮ ಯಕ್ಷಗಾನದ ಪ್ರಸ್ತಾವನೆ ಕಳಿಸಿ. ಲಾಟರಿ ಹೊಡೀಬಹುದು” ಎಂದು 2025ರ ಏಪ್ರಿಲ್ ತಿಂಗಳ ಒಂದು ಶುಭಮುಂಜಾನೆ ಸಂದೇಶ ಕಳಿಸಿದರು ಹಿರಿಯ ವಿದ್ವಾಂಸರಾದ ಡಾ. ಎಸ್. ಪಿ. ಪದ್ಮಪ್ರಸಾದರು. ಅವರು ಹತ್ತಾರು ದೇಶಗಳನ್ನು ಸುತ್ತಾಡಿದವರು. ಅಲ್ಲಿನ ಅನುಭವಗಳನ್ನು ತಮ್ಮ ಪ್ರವಾಸ ಕಥನಗಳ ಮೂಲಕ ಬಿಚ್ಚಿಟ್ಟವರು. ಇಂತಹ ಸುದ್ದಿಗಳೆಲ್ಲ ಅವರನ್ನು ಬೇಗನೆ ತಲುಪುತ್ತವೆ.
“ಭೂತಾನಿನಲ್ಲಿ ಯಕ್ಷಗಾನ ಮಾಡೋದಾ? ಅಲ್ಲಿಗೆ ಹೋಗೋದು ಹೇಗೆ, ಯಕ್ಷಗಾನ ಮಾಡೋದುಹೇಗೆ?” ಒಂದಷ್ಟು ಹೊತ್ತು ಹಾಗೆ ಅನ್ನಿಸಿತು. “ಪೂರ್ಣಪ್ರಮಾಣದ ಯಕ್ಷಗಾನ ಪ್ರದರ್ಶನವನ್ನೇ ಕೊಡಬೇಕಾಗಿಲ್ಲ. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಏನಾದರೂ ಮಾಡಬಹುದಾ ನೋಡಿ” ಎಂದವರು ಸುಳಿವು ಕೊಟ್ಟರು. ಆ ಬಗ್ಗೆ ಯೋಚಿಸುವುದಕ್ಕೆ ಆರಂಭಿಸಿದೆವು.
ಚಂದ್ರಮಂಡಲಚರಿತೆಯ ನೆನಪು:
ನಾವು ಆವಾಗಷ್ಟೇ ‘ಚಂದ್ರಮಂಡಲಚರಿತೆ’ಯೆಂಬ ಯಕ್ಷಗಾನ ಮಾಡಿದ ಕನವರಿಕೆಯಲ್ಲಿದ್ದೆವು. ದೆಹಲಿಯ ಹ್ಯುಂಡೈ ಇಂಡಿಯಾ ಮೋಟಾರ್ ಫೌಂಡೇಶನ್ ಕಳೆದ ವರ್ಷ ‘ಆರ್ಟ್ ಫಾರ್ ಹೋಪ್’ ಎಂಬ ಯೋಜನೆಯಡಿಯಲ್ಲಿ ಕಲಾವಿದರಿಂದ, ಕಲಾಸಂಘಟನೆಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿತ್ತು. ನಾವು ‘ಯಕ್ಷದೀವಿಗೆ’ಯ ಕಡೆಯಿಂದ ಒಂದು ವಿನೂತನ ಪ್ರಸ್ತಾವನೆ ಕಳಿಸಿದ್ದೆವು.
ಯಕ್ಷಗಾನವನ್ನು ಲಾಗಾಯ್ತಿನಿಂದಲೂ ಪೌರಾಣಿಕ ಮೌಲ್ಯಗಳ ಪ್ರತಿಪಾದನೆಗೆ, ಸಾಮಾಜಿಕ ಮೌಲ್ಯಗಳ ಪ್ರಸರಣೆಗೆ ಬಳಸುತ್ತಿದ್ದುದು ರೂಢಿ. ರಾಮಾಯಣ, ಮಹಾಭಾರತ, ಭಾಗವತದ ಕಥೆಗಳೇ ಅದಕ್ಕೆ ಆಧಾರ. ಕರಾವಳಿಯ ಪಡುವಲಪಾಯವಾಗಲೀ, ಬಯಲುಸೀಮೆಯ ಮೂಡಲಪಾಯವಾಗಲೀ ಇವೇ ಕಥಾನಕಗಳನ್ನೇ ಮತ್ತೆಮತ್ತೆ ಹೊಸ ಪ್ರಸಂಗಗಳಾಗಿ ಆಡುತ್ತಿರುತ್ತವೆ. ಪ್ರತಿದಿನ ಒಂದೇ ಪ್ರಸಂಗ ಆಡಿದರೂ ಅದು ನಿತ್ಯನೂತನ. ಕರಾವಳಿ ಕಡೆ ಎಷ್ಟು ಬಾರಿ ದೇವಿಮಹಾತ್ಮೆ ಆಡಿದರೂ ಸಾವಿರ ಜನಕ್ಕಿಂತ ಕಡಿಮೆ ನೋಡಿದ್ದಿಲ್ಲ. ಅದು ಆ ಕಲೆಗಿರುವ ಆಕರ್ಷಣೆ.
ಇಂತಹ ಯಕ್ಷಗಾನದಲ್ಲಿ ನವೀನ ಪ್ರಯೋಗಗಳಾಗಿದ್ದೂ ಉಂಟು. ಯಕ್ಷಗಾನದ ಸಂವಹನ ಶಕ್ತಿಯನ್ನು ಸಾಮಾಜಿಕ ಪ್ರಜ್ಞೆಯನ್ನು ಉದ್ದೀಪಿಸುವ ಉದ್ದೇಶದಿಂದ ಬೇರೆಬೇರೆ ರೀತಿಯಲ್ಲಿ ಬಳಸಿಕೊಂಡದ್ದುಂಟು. ‘ಆರ್ಟ್ ಫಾರ್ ಹೋಪ್’ ಯೋಜನೆಗಾಗಿ ನಾವು ಪರಿಸರ ಸಂರಕ್ಷಣೆಯ ಸಂದೇಶವನ್ನು ಯಕ್ಷಗಾನದ ಮೂಲಕ ಪಸರಿಸುವ ಉದ್ದೇಶವನ್ನು ಪ್ರಸ್ತಾಪಿಸಿದ್ದೆವು. ದೇಶದ ಉದ್ದಗಲದಿಂದ ಬಂದ ಏಳುನೂರಕ್ಕೂ ಹೆಚ್ಚು ಅರ್ಜಿಗಳ ಪೈಕಿ ಹತ್ತು ಸಂಸ್ಥೆಗಳ ಪ್ರಸ್ತಾವನೆಯನ್ನು ಹ್ಯುಂಡೈ ಆಯ್ಕೆ ಮಾಡಿತ್ತು. ಅದರಲ್ಲಿ ಯಕ್ಷದೀವಿಗೆಯದ್ದೂ ಒಂದು. ಹಾಗೆ ಹುಟ್ಟಿಕೊಂಡದ್ದು ಚಂದ್ರಮಂಡಲಚರಿತೆ.
ಚಂದ್ರಮಂಡಲನೆಂಬ ಸಾತ್ವಿಕ ದೊರೆಯೊಬ್ಬ ಪ್ರಕೃತಿಯ ಮೇಲಾಗುವ ಬಾಹ್ಯ ದಾಳಿಗಳಿಗೆ ಪರಿಹಾರ ಕಂಡುಕೊಳ್ಳುವ ಕಥಾನಕವದು. ಹಿರಿಯ ಕಲಾವಿದ ಗಣರಾಜ ಕುಂಬ್ಳೆಯವರು ಯಕ್ಷದೀವಿಗೆಗಾಗಿ ಹೀಗೊಂದು ವಿನೂತನ ಪ್ರಸಂಗವನ್ನು ಹೊಸೆದುಕೊಟ್ಟಿದ್ದರು. ಇದನ್ನು ವಿಶೇಷ ಆಸ್ಥೆಯಿಂದ ಅಭ್ಯಾಸ ಮಾಡಿ ಅನೇಕ ಕಡೆ ಪ್ರದರ್ಶನಗಳನ್ನೂ ನೀಡಿದ್ದೆವು. ದೆಹಲಿಯಲ್ಲಿ ನಡೆದ ನಾಲ್ಕು ದಿನಗಳ ಕಲಾಮೇಳದಲ್ಲೂ ಚಂದ್ರಮಂಡಲಚರಿತೆ ಎಲ್ಲರ ಗಮನ ಸೆಳೆದಿತ್ತು.
ಮತ್ತೆ ಆರ್ಟ್ ಫಾರ್ ಹೋಪ್!
ಭೂತಾನ್‌ನಿಂದ ಬಂದ ಹೊಸ ಒಸಗೆ ಯಕ್ಷದೀವಿಗೆಗೆ ಎರಡನೆಯ ಆರ್ಟ್ ಫಾರ್ ಹೋಪ್ ಆಗಿತ್ತು. ಆದರೆ ಈ ಹೊಸ ಸಾಧ್ಯತೆಯನ್ನು ಹೇಗೆ ಬಳಸಿಕೊಳ್ಳಬೇಕು, ಏನು ಮಾಡಬೇಕು ಎಂಬ ಸ್ಪಷ್ಟ ಕಲ್ಪನೆ ಇರಲಿಲ್ಲ. ಇನ್ನೊಂದು ಹೊಸ ಪ್ರಸಂಗವನ್ನು ಸಿದ್ಧಪಡಿಸುವುದೇ, ಅಲ್ಲಿ ಹೋಗಿ ಪೂರ್ಣ ಪ್ರಮಾಣದ ಪ್ರದರ್ಶನ ನೀಡುವುದೇ, ಅದಕ್ಕೆ ಬೇಕಾದ ಸಂಪನ್ಮೂಲವೆಲ್ಲ ಲಭ್ಯವಿದೆಯೇ ಹೀಗೆ ಅನೇಕ ಪ್ರಶ್ನೆಗಳಿದ್ದವು. ಪೂರ್ಣಪ್ರಮಾಣದ ಯಕ್ಷಗಾನ ತಂಡ ಒಯ್ಯುವ ಸಾಧ್ಯತೆ ಕಡಿಮೆ ಎನಿಸಿದಾಗ ಅಧ್ಯಯನ ಯೋಜನೆ ಕೈಗೊಳ್ಳುವ ಸಾಧ್ಯತೆಗಳು ಕಾಣಿಸಿದವು.
ದೆಹಲಿಯಲ್ಲಿನ ಭೂತಾನ್ ರಾಯಭಾರ ಕಚೇರಿಯ ಒಂದು ಭಾಗವಾಗಿರುವ ‘ಇಂಡಿಯಾ - ಭೂತಾನ್ ಫೌಂಡೇಶನ್’ (IBF) ಈ ಬಾರಿ ಪ್ರಸ್ತಾವನೆಗಳನ್ನು ಆಹ್ವಾನಿಸಿತ್ತು. ಎರಡೂ ದೇಶಗಳ ನಡುವೆ ಶಿಕ್ಷಣ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಕ್ರೀಡೆ ಇತ್ಯಾದಿ ಕ್ಷೇತ್ರಗಳಲ್ಲಿ ಪರಸ್ಪರ ಸಂಬಂಧಗಳನ್ನು ಪೋಷಿಸುವ ಪ್ರಸ್ತಾವನೆಗಳನ್ನು ವೈಯಕ್ತಿಕ ನೆಲೆಯಲ್ಲಿ ಹಾಗೂ ಸಂಘಸಂಸ್ಥೆಗಳ ಮೂಲಕ ಸಲ್ಲಿಸುವುದಕ್ಕೆ ಅವಕಾಶವಿತ್ತು. ಎರಡು ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯದ ಸಾಧ್ಯತೆಯೊಂದು ಇರುವುದಾದರೆ ಅದು ಹೇಗೆ ಎಂದು ಯೋಚಿಸಿದೆವು.
ಯಕ್ಷಗಾನದಂತಹ ಕರ್ನಾಟಕದ ಕಮನೀಯ ಕಲೆಯ ಬಗ್ಗೆ ಭೂತಾನ್ ದೇಶದ ಮಂದಿಗೆ ಧಾರಾಳವಾಗಿ ಹೇಳಬಹುದು. ಆದರೆ ಬರೀ ಅಷ್ಟಕ್ಕೆ ಏನೂ ಪ್ರಯೋಜನ ಆದಂತಾಗುವುದಿಲ್ಲ. ಅವರಿಂದ ನಾವೂ ಏನನ್ನಾದರೂ ಕಲಿತು ಬರಬೇಕು; ಪರಸ್ಪರ ಕೊಡುಕೊಳ್ಳುವಿಕೆ ಸಾಧ್ಯವಾಗಬೇಕು. ಎರಡು ದೇಶಗಳ ಮಂದಿಯ ನಡುವೆ ಒಂದು ಸಾಂಸ್ಕೃತಿಕ ಬಂಧ ಬೆಸೆಯಬೇಕು. ಕಲೆಯ ನೆಪದಲ್ಲಿ ಜನಜೀವನ, ನಂಬಿಕೆ-ನಡವಳಿಕೆ, ಆಹಾರ-ವಿಹಾರ, ಸಂಸ್ಕೃತಿ, ಸಾಮಾಜಿಕ ಬದುಕು- ಇತ್ಯಾದಿಗಳು ಪರಸ್ಪರ ಅರ್ಥವಾಗಬೇಕು. ಇದಕ್ಕೆ ಏನು ಮಾಡಬಹುದು? ಹೀಗೆ ಯೋಚಿಸುತ್ತಿದ್ದವರಿಗೆ ಭೂತಾನ್‌ನ ‘ಮಾಸ್ಕ್ ಡ್ಯಾನ್ಸ್’ ಗೋಚರಿಸಿತು.
ಮಾಸ್ಕ್ ಡ್ಯಾನ್ಸ್ ಎಂಬ ಯಕ್ಷಗಾನ:ನಮ್ಮ ಯಕ್ಷಗಾನಕ್ಕೆ ಸಂವಾದಿಯಾಗಿ ಭೂತಾನ್ ದೇಶದಲ್ಲಿ ಎಂತಹ ಕಲೆಗಳಿವೆ ಎಂದು ಹುಡುಕುತ್ತಿದ್ದಾಗ ‘ಮಾಸ್ಕ್ ಡ್ಯಾನ್ಸ್’ನ ಮಾಹಿತಿ ದೊರೆಯಿತು. ಮುಖವಾಡ ನೃತ್ಯ ಭೂತಾನ್‌ನ ಅತ್ಯಂತ ವಿಶಿಷ್ಟ ಕಲೆಯಷ್ಟೇ ಅಲ್ಲ, ಅದು ಅಲ್ಲಿನ ಜನಜೀವನದ ಮಧ್ಯೆ ಹಾಸುಹೊಕ್ಕಂತೆ ಬೆರೆತುಹೋಗಿದೆ. ಭೂತಾನ್‌ನಲ್ಲಿ ಎಲ್ಲೇ ಸಂಚಾರ ಮಾಡಿದರೂ ಯಾವುದೋ ಗೋಡೆಗಳ ಮೇಲೆ, ಇನ್ಯಾವುದೋ ಬಾಗಿಲ ಮೇಲೆ ಮುಖವಾಡದ ಪ್ರತಿಕೃತಿಗಳು, ವರ್ಣರಂಜಿತ ಚಿತ್ರಗಳು ಕಾಣಿಸುತ್ತಲೇ ಇರುತ್ತವೆ. ಭೂತಾನಕ್ಕೆ ಹೋದವರು ಮಾಸ್ಕ್ಗಳ ಒಂದೆರಡು ಫ್ರಿಜ್ ಮ್ಯಾಗ್ನೆಟ್‌ಗಳಿಲ್ಲದೆ ಹಿಂದಿರುಗುವುದು ಅಪರೂಪ. ಆ ಮಟ್ಟಿಗೆ ಅದು ಗಟ್ಟಿ.
ವರ್ಣರಂಜಿತ ವೇಷಭೂಷಣ, ಎದ್ದುಕಾಣುವ ವೈವಿಧ್ಯಮಯ ಮುಖವಾಡಗಳು, ಶೈಲೀಕೃತ ನರ್ತನ ವಿಧಾನ-ಇವನ್ನೆಲ್ಲ ನೋಡಿದಾಗ ‘ಅರೆ ಭೂತಾನದಲ್ಲೂ ಒಂದು ಯಕ್ಷಗಾನ ಇದೆ’ ಎಂದು ಅನಿಸಿತು. ಅಂತರ್ಜಾಲದ ವಿವಿಧ ತಾಣಗಳಲ್ಲಿ ಹುಡುಕಾಡಿದಾಗ ಆ ಪ್ರಕಾರದ ಬಗ್ಗೆ ಒಂದಷ್ಟು ಮಾಹಿತಿಯೂ ದೊರೆಯಿತು. ನಮ್ಮ ಯಕ್ಷಗಾನದೊಂದಿಗೆ ಈ ಮಾಸ್ಕ್ ಡ್ಯಾನ್ಸನ್ನೇ ಯಾಕೆ ಹೋಲಿಸಿ ನೋಡಿ ಅಧ್ಯಯನ ಮಾಡಬಾರದು ಎಂಬ ಸಾಧ್ಯತೆ ಗೊತ್ತಾಯಿತು. ಹಾಗೆ ಹುಟ್ಟಿಕೊಂಡದ್ದು – “ಕರ್ನಾಟಕದ ಯಕ್ಷಗಾನ ಮತ್ತು ಭೂತಾನ್‌ನ ಮಾಸ್ಕ್ ಡ್ಯಾನ್ಸ್ಗಳ ತೌಲನಿಕ ಅಧ್ಯಯನ”ವೆಂಬ ಒಂದು ಸಂಶೋಧನ ಯೋಜನೆ.
ಆದರೆ ಈ ಯೋಜನೆ ಮಂಜೂರಾಗುವ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಹೆಚ್ಚುಕಡಿಮೆ ಒಂಬತ್ತು ತಿಂಗಳ ಪ್ರಯತ್ನವದು. ಆದರೆ ಈ ಪ್ರಯತ್ನದ ನೆಪದಲ್ಲಿ ಭೂತಾನಿಗೆ ಹೋಗುವ ಮುನ್ನವೇ ಭೂತಾನೀಯರ ಸಮೀಪದರ್ಶನವಾಯಿತು. ಅವರ ಸಹಕಾರ ಮನೋಭಾವ, ಮಾನವೀಯತೆ, ಸಜ್ಜನಿಕೆ, ಪರಸ್ಪರ ಗೌರವ, ಸಹೃದಯತೆಗಳು ಮತ್ತೆಮತ್ತೆ ಅನುಭವಕ್ಕೆ ಬಂದವು. ಆ ಕಥೆಯನ್ನು ಮುಂದೆ ಕೇಳುವಿರಂತೆ.
(ಮುಂದುವರಿಯುವುದು.)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ