ಭಾನುವಾರ, ಏಪ್ರಿಲ್ 26, 2026

ನಮ್ಮ ಚಿತ್ತ ಹುಲಿಸವಾರಿ ಮಾಡಿದ ಪದ್ಮಸಂಭವನತ್ತ

'ಭೂತಾನ್‌ನಲ್ಲಿ ಯಕ್ಷದೀವಿಗೆʼ

ಪ್ರವಾಸ ಕಥನ-14

ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ

(ಪ್ರಜಾಪ್ರಗತಿ, 26 ಏಪ್ರಿಲ್ 2026)

(ಮುಂದುವರಿದ ಭಾಗ...)


ನಾವು ಯಾವುದೋ ದೇಶದವರು, ಯಾವುದೋ ಭಾಷೆಯವರು. ಆ ಸುಂದರಿಯಂತೂ ವರ್ಷಾನುಗಟ್ಟಲೆಯಿಂದ ನಮ್ಮ ಪರಿಚಯವೇನೋ ಎಂಬ ಹಾಗೆ ಉಪಚಾರ ಮಾಡಿದಳು. “ನಾಳೆ ಯಾವ ಕಡೆ ಪಯಣ? ಯಾವ ಪ್ರವಾಸಿ ತಾಣಗಳನ್ನು ನೋಡುತ್ತೀರಿ?” ಎಂದು ತನ್ನ ಹರಕು ಮುರುಕು ಇಂಗ್ಲಿಷಲ್ಲಿ ಮಾತಿಗೆಳೆದಳು. ನಾವು ಬಂದ ಉದ್ದೇಶ, ನಮ್ಮ ಯೋಜನೆಯ ಬಗ್ಗೆ ಆಕೆಗೆ ಸಂಕ್ಷಿಪ್ತವಾಗಿ ತಿಳಿಸಿದೆವು. “ನಮ್ಮ ಮುಖ್ಯ ಕೆಲಸ ಆರಂಭಿಸುವ ಮೊದಲು ಒಂದೆರಡು ದಿನ ನಾವು ಭೂತಾನದ ಪರಿಸರ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಗಮನಿಸಬೇಕು. ಅದಕ್ಕಾಗಿ ನಾಳೆ ಟೈಗರ್ಸ್ ನೆಸ್ಟ್ (Tiger's Nest) ಗೆ ಹೋಗುತ್ತಿದ್ದೇವೆ” ಎಂದೆವು.

ಟೈಗರ್ಸ್ ನೆಸ್ಟ್ ಹೆಸರು ಕೇಳುತ್ತಿದ್ದಂತೆ ಆಕೆಯ ಮುಖವರಳಿತು. “ಒಳ್ಳೆಯ ಯೋಚನೆ ಅದು. ಆದರೆ ನೀವು ಈಗ ಹಾಕಿಕೊಂಡಿರುವ ಶೂಸ್ ಏನೇನೂ ಸಾಲದು. ಅದು ಬಹಳ ಕಡಿದಾದ ಏರು ಹಾದಿ. ನೀವು ಇನ್ನೂ ಒಂಚೂರು ಒಳ್ಳೆಯ ಶೂಸ್ ಹಾಕಿಕೊಳ್ಳಬೇಕು” ಎಂದು ಒಂದಿಷ್ಟು ಅನುಕಂಪ ಸಮೇತ ಎಚ್ಚರಿಕೆ ನೀಡಿದಳು. ನಮ್ಮಲ್ಲೊಬ್ಬರು ಸಾಮಾನ್ಯ ಕ್ಯಾನ್ವಾಸ್ ಶೂಸ್ ಹಾಕಿಕೊಂಡಿದ್ದೆವು. ಅದನ್ನು ನೋಡಿ ಇವರು ಪರ್ವತ ಏರುವವರಾ ಎಂದು ಆಕೆಗೆ ಸೋಜಿಗ ಅನಿಸಿರಬೇಕು. 

ಅಷ್ಟರಲ್ಲಿ ಅಲ್ಲೇ ಪಕ್ಕದ ಹೋಟೆಲಲ್ಲಿ ನಮಗೆ ಅನುಕೂಲವಾಗುವ ರೂಮ್ ಇದೆಯೆಂಬ ಸಿಹಿಸುದ್ದಿಯೊಂದಿಗೆ ಪೆಮಾ ಬಂದರು. ಪಾರೊ, ಥಿಂಪು ಎಲ್ಲ ಅವರಿಗೆ ಚಿರಪರಿಚಿತ ಸ್ಥಳಗಳು. ಅಷ್ಟಲ್ಲದೆ ನಾವು ಬರುವುದಕ್ಕೆ ಮೊದಲೇ ಅವರು ಸಾಕಷ್ಟು ಸುತ್ತಾಟ ನಡೆಸಿ ಕೆಲವು ಹೋಟೆಲ್‌ಗಳನ್ನು ನೋಡಿ ಬಂದಿದ್ದರು. ಈಗ ಅವರು ನೋಡಿ ಬಂದ ಹೋಟೆಲು ಸಾಕಷ್ಟು ಸುಸಜ್ಜಿತವಾಗಿತ್ತು. ವಿಶಾಲವಾದ ಕೊಠಡಿ, ಒಳ್ಳೆಯ ಗಾಳಿ-ಬೆಳಕು, ನಾವು ಮೂವರಿಗೆ ಸೂಕ್ತವೆನಿಸುವ ಮೆತ್ತಗಿನ ದೊಡ್ಡ ಹಾಸಿಗೆ, ಉತ್ತಮ ಸ್ನಾನದ ಮನೆ ಮತ್ತು ಶೌಚಾಲಯ, ಗೋಡೆಗಳನ್ನು ಬೆಚ್ಚಗಿಟ್ಟಿರುವ ಓಕ್ ಮರದ ಮುಚ್ಚಿಗೆ, ಎಲ್ಲಕ್ಕಿಂತ ಮಿಗಿಲಾಗಿ ಆ ಭಯಂಕರ ಚಳಿಯಿಂದ ನಮ್ಮನ್ನು ಕಾಪಾಡಬಲ್ಲ ಹೀಟರ್... ಇವನ್ನೆಲ್ಲ ನೋಡಿ ಖುಷಿ ಅನ್ನಿಸಿತು. ಬೆಳಗ್ಗೆ ಮತ್ತು ರಾತ್ರಿ ಮೂವರ ಊಟೋಪಚಾರ ಎಲ್ಲ ಸೇರಿ ಆ ರೂಮಿಗೆ ಪ್ರತಿದಿನಕ್ಕೆ ರೂ. 3300-00 ಬಾಡಿಗೆಗೆ ಹೋಟೆಲಿನವರು ಒಪ್ಪಿಕೊಂಡರು. ನಮ್ಮ ಎರಡನೇ ಶ್ರೇಣಿಯ ನಗರಗಳಲ್ಲಿಯೂ ಇಂತಹ ದರವನ್ನು ಊಹಿಸಿಕೊಳ್ಳುವುದು ಈ ದಿನಗಳಲ್ಲಿ ಕಷ್ಟ; ಅಂತಹದರಲ್ಲಿ ಇಷ್ಟೊಂದು ಸುಸಜ್ಜಿತ ಹೋಟೆಲಿನಲ್ಲಿ ಈ ದರ ನಮಗೆ ಬಹಳ ಆಕರ್ಷಕ ಅನಿಸಿತು.

ಬೇರೆಯದೇ ಪ್ರಪಂಚ:

ಆ ಹೋಟೆಲಿನಲ್ಲಿ ನೋಂದಣಿ ಇತ್ಯಾದಿ ಔಪಚಾರಿಕತೆಗಳನ್ನು ಮುಗಿಸುವ ಹೊತ್ತಿಗೆ ಮತ್ತೆ ಬಂತು ಹಬೆಯಾಡುವ ಚಹಾ ದೊಡ್ಡ ಕಪ್‌ಗಳಲ್ಲಿ. ಆ ಚಳಿಗೆ ಕೈಕಾಲುಗಳೆಲ್ಲ ಎಷ್ಟು ಮರಗಟ್ಟಿದ್ದವೆಂದರೆ ಅವರು ಒಂದೊಂದು ಕೊಡ ಚಹಾ ಕೊಟ್ಟರೂ ನಾವು ಕುಡಿಯುತ್ತಲೇ ಕೂರೋಣ ಎಂಬ ಮನಸ್ಥಿತಿಯಲ್ಲಿ ಇದ್ದೆವು. ನಮ್ಮೆದುರಿಗೆ ಜಪಾನ್, ಭಾರತ, ಭೂತಾನ್, ಅಮೇರಿಕ, ಥಾಯ್ಲೆಂಡ್ ದೇಶಗಳ ಸಮಯ ತೋರಿಸುವ ಐದು ಪ್ರತ್ಯೇಕ ಗಡಿಯಾಗಳು ಗಮನ ಸೆಳೆಯುತ್ತಿದ್ದವು. ಭೂತಾನ್ ಗಡಿಯಾರ 6:10 ಗಂಟೆಯನ್ನೂ, ಭಾರತದ ಗಡಿಯಾರ 5:40 ಗಂಟೆಯನ್ನೂ, ಜಪಾನ್ ಗಡಿಯಾರ 9:10 ಗಂಟೆಯನ್ನೂ, ಅಮೇರಿಕ ಗಡಿಯಾರ 8:10 ಗಂಟೆಯನ್ನೂ, ಥಾಯ್ಲಂಡ್ ಗಡಿಯಾರ 6:40 ಗಂಟೆಯನ್ನೂ ತೋರಿಸುತ್ತಿತ್ತು. ನಾವು ನಮ್ಮದೇ ಒಂದು ಲೋಕದಲ್ಲಿ ಸದಾ ಬದುಕುತ್ತಿರುತ್ತೇವೆ. ಉಳಿದ ಜಗತ್ತಿಗೆ ಅದು ಬೇರೆಯದೇ ಆಗಿರುತ್ತದೆ. ಎಷ್ಟೊಂದು ವಿಚಿತ್ರ ಅಲ್ಲವೇ ಈ ಪ್ರಪಂಚ?

ಚಹಾ ಕುಡಿದು ನಾವು ರೂಮಿಗೆ ಹೊರಟೆವು. ನಾಲ್ಕೈದು ಮಂದಿ ಸುಂದರಿಯರು ನಮ್ಮ ಲಗ್ಗೇಜುಗಳನ್ನು ಅದಾಗಲೇ ರೂಮಿಗೆ ತಲುಪಿಸಿಬಿಟ್ಟಿದ್ದರು. ಅವರ ಕೆಲಸದ ಶ್ರದ್ಧೆ, ಮೃದುವಾದ ಮಾತು, ಸೊಗಸಾದ ನಗು ಇವನ್ನೆಲ್ಲ ನೋಡುವುದೇ ಒಂದು ಚಂದದ ಅನುಭವ. ಅವರೆಲ್ಲ ತಕ್ಕಮಟ್ಟಿಗೆ ಹಿಂದಿ ಮಾತಾಡುತ್ತಿದ್ದರು. ಕೆಲವರ ಇಂಗ್ಲಿಷ್ ಕೂಡ ಪರವಾಗಿಲ್ಲ.

“ನೀವು ವಿಶ್ರಾಂತಿ ತೆಗೆದುಕೊಳ್ಳಿ. ನಾನು ಬೆಳಗ್ಗೆ ಎಂಟೂವರೆಗೆ ಬರುತ್ತೇನೆ. ನಾವು ಸಾಧ್ಯವಾದಷ್ಟು ಬೇಗ ಹೋಗಬೇಕು. ಇಲ್ಲದಿದ್ದರೆ ಟೈಗರ್ಸ್ ನೆಸ್ಟ್ ನಿಂದ ವಾಪಸ್ ಬರುವುದು ಬಹಳ ತಡವಾದೀತು” ಎಂದು ಸೂಚನೆ ಕೊಟ್ಟು ಹೊರಟರು ಪೆಮಾ.

ಹೋಟೆಲ್ ರೂಮಿನಲ್ಲಿದ್ದ ಹೀಟರು ಹಳೆಯ ಕರೆಂಟ್ ಸ್ಟೌವ್ ಅನ್ನು ನೆನಪಿಸುವಂತೆ ಇತ್ತು. ನಿಗಿನಿಗಿ ಕೆಂಪಾಗಿ ಅದು ಹೊಳೆಯುತ್ತಿದ್ದರೆ ಕವಿ ಪಿ.ಬಿ. ಶೆಲ್ಲಿ ನೆನಪಾದ: “ಜಗಜಗಿಸಿ ಹೊಳೆವ ಉರಿ ಸರಳುಗಳ ಬಳಿ ಕುಳಿತು ಉಸುರಿಕೋ ನಿನ್ನೊಳಗೆ ನೀನೇ ವ್ಯಥೆ ದನಿಯಲ್ಲಿ...” ಇದೇ ರೀತಿಯ ಬೆಂಕಿಗೂಡು ಅದಿದ್ದಿರಬಹುದಲ್ಲ ಅಂತ ಮತ್ತೊಮ್ಮೆ ಸೋಜಿಗವಾಯಿತು. ಆದರೆ ಆ ಹೀಟರ್ ಇಲ್ಲದೆ ಆ ರೂಮನ್ನು ಊಹಿಸಿಕೊಳ್ಳುವುದು ಕಷ್ಟ. ಅದರಿಂದ ಕೊಂಚವೇ ದೂರ ಹೋದರೂ ನಿಜವಾದ ಚಳಿ ಅನುಭವಕ್ಕೆ ಬರುತ್ತಿತ್ತು.

ಈ ಮಧ್ಯೆ “ನಾವೆಲ್ಲ ಬಹಳ ಆರಾಮವಾಗಿ ಹೋಟೆಲ್ ರೂಮಿಗೆ ತಲುಪಿದ್ದೇವೆ. ಇಲ್ಲಿ ಎಲ್ಲವೂ ಚೆನ್ನಾಗಿದೆ. ನಿಮ್ಮ ಮಂದಿ ಬಹಳ ಚೆನ್ನಾಗಿ ನಮ್ಮನ್ನು ನೋಡಿಕೊಂಡಿದ್ದಾರೆ” ಎಂದು ಸೋನಂ ಅವರಿಗೆ ಸಂದೇಶ ಕಳಿಸುವುದನ್ನು ಮರೆಯಲಿಲ್ಲ. ಅವರು ಪ್ರತಿಯಾಗಿ, “ನಿಮ್ಮ ಮೂವರ ಪಾಸ್‌ಪೋರ್ಟಿನಲ್ಲಿರುವ ಎಂಟ್ರಿ ಪರ್ಮಿಟ್‌ನ ಫೋಟೋ ತೆಗೆದು ಕಳಿಸಿ. ನೀವು ಪುನಾಖಾಕ್ಕೆ ಹೋಗಲು ರೂಟ್ ಪರ್ಮಿಟ್ ಮಾಡಿಸಿಕೊಳ್ಳಲು ಅದು ಬೇಕಾಗುತ್ತದೆ” ಎಂದು ಅವರು ನೆನಪಿಸಿದರು. ಹಾಗೆಯೇ ಮಾಡಿದೆವು.

ಮುನ್ನಾದಿನ ರಾತ್ರಿ ಬಹುತೇಕ ನಿದ್ದೆಯೇ ಮಾಡಿರಲಿಲ್ಲ. ಪ್ಯಾಕಿಂಗೆಲ್ಲ ಮುಗಿದು ಮಧ್ಯರಾತ್ರಿ ಹಾಗೆಯೇ ಏರ್‌ಪೋರ್ಟಿಗೆ ಹೊರಟಿದ್ದೆವು. ಮತ್ತೆ ಎರಡೆರಡು ವಿಮಾನ ಪ್ರಯಾಣ. ಈಗ ಮೆತ್ತಗಿನ ಹಾಸಿಗೆ, ಬೆಚ್ಚನೆಯ ಕೋಣೆ ನೋಡಿದಾಗ ಕೈಕಾಲುಮನಸ್ಸುಗಳೆಲ್ಲ ವಿಶ್ರಾಂತಿಗಾಗಿ ಹಾತೊರೆಯತೊಡಗಿದ್ದವು. ಬೇಗಬೇಗನೆ ಸ್ನಾನ ಮಾಡಿ ಊಟ ಮುಗಿಸಿ ಹಾಸಿಗೆಯಷ್ಟೇ ದಪ್ಪದ ಹೊದಿಕೆಯೊಳಗೆ ತೂರಿಕೊಂಡೆವು. 

ನಾವು ನೆಚ್ಚಿಕೊಂಡ ಯಕ್ಷಗಾನ ನಮ್ಮನ್ನು ಎಷ್ಟು ದೂರ ಕರೆದುಕೊಂಡು ಬಂತಲ್ಲ ಎಂಬೊಂದು ವಿಸ್ಮಯ ಮನಸ್ಸಿನೊಳಗೆ ಹರಡಿಕೊಂಡಿತ್ತು. ನಾವು ಪಡೆದ ಪದವಿ, ಪರ್ಸೆಂಟೇಜು ನಮಗೆ ಏನು ಮಾಡಿದೆಯೋ ಗೊತ್ತಿಲ್ಲ, ಆದರೆ ನಾವು ಕಲಿತ, ಪ್ರೀತಿಸಿದ ಯಕ್ಷಗಾನ ನಮ್ಮನ್ನು ಸೀಮೋಲ್ಲಂಘನ ಮಾಡಿಸಿತ್ತು. ಎಲ್ಲಿಯ ಯಕ್ಷಗಾನ, ಎಲ್ಲಿಯ ಕರಾವಳಿ, ಎಲ್ಲಿಯ ಬಯಲುಸೀಮೆ, ಈಗ ಇನ್ನೆಲ್ಲಿಯ ಭೂತಾನ... ಎತ್ತಣಿಂದೆತ್ತ ಸಂಬಂಧವಯ್ಯ! ಈಗ ಈ ದೇಶದಲ್ಲಿ ನಾವು ಹತ್ತು-ಹನ್ನೆರಡು ದಿನ ಇರಬೇಕು, ಇಲ್ಲಿ ಬದುಕು-ಭಾವಗಳನ್ನು ಇಷ್ಟಿಷ್ಟಾದರೂ ಅರ್ಥಮಾಡಿಕೊಂಡು ಅನುಭವಗಳನ್ನು ಕಟ್ಟಿಕೊಳ್ಳಬೇಕು, ಯಕ್ಷಗಾನದ ಪರಿಚಯವನ್ನು ನಮಗೆ ಸಾಧ್ಯವಾದಷ್ಟರ ಮಟ್ಟಿಗೆ ಇಲ್ಲಿನವರಿಗೆ ಮಾಡಿಕೊಡಬೇಕು. ಹೀಗೆ ವಿಧವಿಧದ ಯೋಚನೆಗಳ ಸಮೇತ ಗಾಢ ನಿದ್ದೆ ನಮ್ಮನ್ನು ಆವರಿಸಿಕೊಂಡಿತು.

ಟೈಗರ್ಸ್ ನೆಸ್ಟ್ ಕಡೆಗೆ:

ಮರುದಿನ ಹೆಚ್ಚು ತಡಮಾಡದೆ ಎದ್ದು ಟೈಗರ್ಸ್ ನೆಸ್ಟ್ ಏರಲು ಸಿದ್ಧತೆ ಮಾಡಿಕೊಂಡೆವು. ಪೆಮಾ ಅವರ ಸಲಹೆಯ ಮೇರೆಗೆ ನಾವು ನಮ್ಮ ಒಟ್ಟು ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೆವು. ನಾವು ತುಮಕೂರಿನಿಂದ ಹೊರಡುವ ಮುನ್ನಾದಿನದವರೆಗೂ ಟೈಗರ್ಸ್ ನೆಸ್ಟ್ ಗೆ ಭೇಟಿಕೊಡುವುದು ನಮ್ಮ ಪಟ್ಟಿಯಲ್ಲಿ ಇರಲಿಲ್ಲ. ನಮ್ಮ ಪ್ರಮುಖ ಉದ್ದೇಶವೇ ಮಾಸ್ಕ್ ಡ್ಯಾನ್ಸ್ ಅಧ್ಯಯನ ಮತ್ತು ಯಕ್ಷಗಾನದ ಪರಿಚಯ ಆಗಿದ್ದುದರಿಂದ ಅದಕ್ಕೆ ಸಂಬಂಧಿಸಿದ ಕೆಲಸಗಳನ್ನಷ್ಟೇ ಹೆಚ್ಚಾಗಿ ಯೋಜಿಸಿಕೊಂಡಿದ್ದೆವು. ವಾರಾಂತ್ಯಗಳಲ್ಲಿ ಬಿಡುವು ಮಾಡಿಕೊಂಡು ಕೆಲವು ಪ್ರವಾಸಿ ತಾಣಗಳಿಗೆ ಹೋಗೋಣ ಎಂದು ಮಾತಾಡಿಕೊಂಡಿದ್ದೆವು. ಭೂತಾನ್‌ನಲ್ಲಿ ಟೈಗರ್ಸ್ ನೆಸ್ಟ್ ಬಹಳ ಪ್ರಸಿದ್ಧ ತಾಣ ಎಂದು ಅಂತರಜಾಲದ ಮೂಲಕ ತಿಳಿದುಕೊಂಡಿದ್ದೆವು. ಅಲ್ಲಿಗೆ ಭೇಟಿ ನೀಡುವುದನ್ನು ಮಾತ್ರ ಮಿಸ್ ಮಾಡಿಕೊಳ್ಳಬೇಡಿ ಎಂದು ಕೆಲವು ಸ್ನೇಹಿತರೂ ಸಲಹೆ ನೀಡಿದ್ದರು. ಆದರೆ ಅದೊಂದು ಕಡಿದಾದ ಪರ್ವತವೆಂದೂ, ಅದರ ಭೇಟಿ ಭರ್ತಿ ಒಂದು ದಿನದ ಕೆಲಸವೆಂದೂ ಅಲ್ಲಿ ಇಲ್ಲಿ ಓದಿಕೊಂಡದ್ದರಿಂದ ಅಲ್ಲಿಗೆ ಹೋಗಲು ಸಮಯ ಹೊಂದಿಸಿಕೊಳ್ಳುವುದು ಎಲ್ಲಿ ಎಂಬ ಗೊಂದಲ ಉಂಟಾಗಿತ್ತು. ಹಾಗಾಗಿ ಅದನ್ನು ನಮ್ಮ ವೇಳಾಪಟ್ಟಿಯಲ್ಲಿ ನಮೂದಿಸಿರಲಿಲ್ಲ. ಆದರೆ ಅದರ ಭೇಟಿಯ ಮಹತ್ವ ನಾವು ತುಮಕೂರು ಬಿಡುವ ಕೊನೆಯ ಕ್ಷಣದಲ್ಲಿ ಅರ್ಥವಾಗಿದ್ದರಿಂದ ನಮ್ಮನ್ನು ಯಾವುದಾದರೊಂದು ದಿನ ಅಲ್ಲಿಗೆ ಕರೆದುಕೊಂಡು ಹೋಗಲು ಸಾಧ್ಯವೇ ಎಂದು ಪೆಮಾರನ್ನು ಕೇಳಿಕೊಂಡಿದ್ದೆವು. ಅವರೋ ಮೊದಲನೆಯ ದಿನವೇ ಅದನ್ನು ಪ್ಲಾನ್ ಮಾಡಿಬಿಟ್ಟಿದ್ದರು. ಪಾರೊದಲ್ಲಿರುವ ರಾಷ್ಟ್ರೀಯ ಮ್ಯೂಸಿಯಂ, ಮತ್ತೆ ಒಂದಿಷ್ಟು ದೇವಾಲಯಗಳು ಹಾಗೂ ಬೌದ್ಧಮಂದಿರಗಳಿಗೆ ಒಂದು ದಿನ ಭೇಟಿ ನೀಡಿ ನಂತರ ನಾವು ಥಿಂಪು ಮೂಲಕ ಪುನಾಖಾಕ್ಕೆ ಹೋಗಬೇಕು. ಆಮೇಲೆ ಟೈಗರ್ಸ್ ನೆಸ್ಟ್ ಗೆ ವಾಪಸ್ ಬರಲು ಬಹಳ ದೂರ ಆಗುತ್ತದೆ. ಅದರಿಂದ ಸಮಯ ಮತ್ತು ಹಣವೂ ವ್ಯರ್ಥ. ಇಲ್ಲಿಂದಲೇ ಅದು ಹತ್ತಿರ, ಆದ್ದರಿಂದ ಮೊದಲು ಅಲ್ಲಿಗೆ ಹೋಗಿ ಬರೋಣ ಎಂದು ಪೆಮಾ ವಿವರಿಸಿದ್ದರು. 

ಫ್ರಾನ್ಸಿಗೆ ಐಫೆಲ್ ಟವರು, ಅಮೇರಿಕಕ್ಕೆ ಸ್ಟಾಚ್ಯೂ ಆಫ್ ಲಿಬರ್ಟಿ ಇದ್ದ ಹಾಗೆ ಭೂತಾನಿಗೆ ಟೈಗರ್ಸ್ ನೆಸ್ಟ್. ಭೂತಾನಿಗೆ ಸಂಬಂಧಿಸಿದ ಯಾವುದೇ ಸ್ಮರಣಿಕೆ ಇರಲಿ, ಪುಸ್ತಕ ಇರಲಿ, ಅದರಲ್ಲಿ ಟೈಗರ್ಸ್ ನೆಸ್ಟನ್ನು ಪ್ರಧಾನವಾಗಿ ತೋರಿಸಿಯೇ ಇರುತ್ತಾರೆ. ಅದು ಹಿಮಾಲಯದ ಶ್ರೇಣಿಯಲ್ಲಿರುವ ವಜ್ರಯಾನ ಬೌದ್ಧ ಪಂಥಕ್ಕೆ ಸೇರಿದ ಒಂದು ಪ್ರಸಿದ್ಧ ಯಾತ್ರಾಸ್ಥಳ. ಅದಕ್ಕೆ ‘ಪಾರೊ ತಕ್ತ್ಸಂಗ್’ (Paro Taktsang) ಎಂಬುದು ಇನ್ನೊಂದು ಹೆಸರು. ಸಮುದ್ರಮಟ್ಟದಿಂದ 10,236 ಅಡಿ (3,120 ಮೀಟರ್) ಎತ್ತರವಿರುವ ಪರ್ವತ. ಭೂತಾನೀಯರು ಬಹುವಾಗಿ ಗೌರವಿಸುವ ಆಚಾರ್ಯ ಪದ್ಮಸಂಭವ ತಪಸ್ಸು ಮಾಡಿದ “ಹುಲಿಯ ಗುಹೆ” ಇಲ್ಲಿರುವುದರಿಂದ ಇದಕ್ಕೆ ಇಷ್ಟೊಂದು ಮಹತ್ವ. ಈ ಗುಹೆಯನ್ನು ಇವರು “ಗೂಡು” (nest) ಎಂದು ಯಾಕೆ ಕರೆದರೋ ತಿಳಿಯದು. ಪದ್ಮಸಂಭವ ಗುರುಗಳು ಹುಲಿಯ ಮೇಲೆ ಸವಾರಿ ಮಾಡಿಕೊಂಡು ಇಲ್ಲಿಗೆ ಆಗಮಿಸಿದರೆಂಬುದು ಐತಿಹ್ಯ. ನಾವು ತುಮಕೂರಿನಿಂದ ಹೊರಡುವ ಹಿಂದಿನ ತಿಂಗಳಷ್ಟೇ ‘ಶಬರಿಮಲೆ ಸ್ವಾಮಿ ಅಯ್ಯಪ್ಪ’ ಯಕ್ಷಗಾನ ಪ್ರಸಂಗ ಆಡಿದ್ದರಿಂದ ಹುಲಿಯ ಮೇಲೆ ಪದ್ಮಸಂಭವ ಸವಾರಿ ಮಾಡಿದ ವಿಚಾರ ಬಂದಾಗಲೆಲ್ಲ ಖುದ್ದು ನಮ್ಮ ಅಯ್ಯಪ್ಪನೇ ಹುಲಿಯ ಹಾಲಿನೊಂದಿಗೆ ರಂಗಸ್ಥಳಕ್ಕೆ ಬಂದ ದೃಶ್ಯ ಕಣ್ಣಮುಂದೆ ಬರುತ್ತಿತ್ತು. ನಿಜ ಹೇಳಬೇಕೆಂದರೆ, ಟೈಗರ್ಸ್ ನೆಸ್ಟ್ ಏರಿದ್ದು ಕೂಡ ನಮಗೊಂದು ಹುಲಿ ಸವಾರಿಯೇ ಆಯಿತು. 

(ಮುಂದುವರಿಯುವುದು)


ಪಾರೊ ಕಣಿವೆ ಮೇಲೆ ವಿಮಾನದ ಡ್ಯಾನ್ಸ್

'ಭೂತಾನ್‌ನಲ್ಲಿ ಯಕ್ಷದೀವಿಗೆʼ

ಪ್ರವಾಸ ಕಥನ-13

ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ

(ಪ್ರಜಾಪ್ರಗತಿ, 19 ಏಪ್ರಿಲ್ 2026)

(ಮುಂದುವರಿದ ಭಾಗ...)


ನಾವು ಎಳೆಯವರಿದ್ದಾಗ ನಮ್ಮ ಅಜ್ಜಿ ಹೇಳುತ್ತಿದ್ದ ಕಥೆಯಲ್ಲಿ ಯಾವುದೋ ರಾಜಕುಮಾರಿಯನ್ನು ಕಾಪಾಡಲು ರಾಜಕುಮಾರನೊಬ್ಬ ಏಳುಪರ್ವತ ದಾಟಿ ಹಾರಿ ಬರುತ್ತಾನಲ್ಲ ಅದು ಹೀಗೇ ಇದ್ದಿರಬಹುದು ಎಂಬ ಅನುಭವ ಗೆಲೆಫುವಿನಿಂದ ಪಾರೋಗೆ ಸಾಗುವಾಗ ಆಯ್ತು. ತುಂಬಾ ಎತ್ತರದಲ್ಲೂ ಅಲ್ಲದೇ ತೀರಾ ಕೆಳಗೂ ಅಲ್ಲದೇ ಪರ್ವತಶ್ರೇಣಿಗಳನ್ನು ತಾಕಿಯೇ ಬಿಡುತ್ತದೇನೋ ಎನ್ನುವಷ್ಟು ಹತ್ತಿರವಾಗಿ ನಮ್ಮ ವಿಮಾನ ಹಾರುತ್ತಿತ್ತು. ಮಗಳನ್ನು ಪರೀಕ್ಷೆಯ ನೆಪದಿಂದ ಬಿಟ್ಟುಬಂದದ್ದು ನೆನಪಾದಾಗ ಹೊಟ್ಟೆಯಲ್ಲಿ ಸಂಕಟ ಎದ್ದಿತು! 


ಜಾತ್ರೆಯಲ್ಲಿ ಕೂಡ ಎಂದಿಗೂ ಜಯೆಂಟ್ ವೀಲ್ ಏರದ ನಮಗೆ ಈ ವಿಮಾನವೇ ಅದರ ಅನುಭವ ಕೊಡುತ್ತಿತ್ತು. ಒಮ್ಮೆ ಎತ್ತರಕ್ಕೆ ಒಮ್ಮೆ ಕೆಳಕ್ಕೆ ಹಾರುತ್ತಿದ್ದ ವಿಮಾನದ ದಿಸೆಯಿಂದ ನಮ್ಮೆದೆ ಢವಗುಡುತ್ತಿದ್ದರೆ ನಮ್ಮೊಂದಿಗಿದ್ದ ಸಹಪ್ರಯಾಣಿಕರ ಮಕ್ಕಳು ಬಲುಸಂಭ್ರಮದಿಂದ ಹ್ಹೋ ಎಂದು ಕೂಗುತ್ತಾ ನಗುತ್ತಿದ್ದರು. ಅವರಿಗೆ ಏನೇನೂ ಭಯ ಇರಲಿಲ್ಲ. ತಾವೇನೋ ಜೋಕಾಲಿ ಆಡುತ್ತಿದ್ದೇವೆ ಎಂಬಂಥ ಉತ್ಸಾಹ, ಉಲ್ಲಾಸದಿಂದ ಅವರು ಸಂಭ್ರಮಿಸುತ್ತಿದ್ದರು. ನಮ್ಮೂರಿನ ಜೀಪುಗಳಲ್ಲಿ ಮಳೆಗಾಲದ ಪ್ರಯಾಣವೂ ಸರಿಸುಮಾರು ಹೀಗೇ ಇರುತ್ತಿತ್ತಲ್ಲ ಅಂತ ನೆನಪಾದಾಗ ಮಾತ್ರ ಆತಂಕದ ನಡುವೆಯೂ ಸಣ್ಣಗೆ ನಗು ಉಕ್ಕಿತು. ಆದರೂ “ಕ್ಷೇಮವಾಗಿ ಪಾರೋದಲ್ಲಿ ಇಳಿಯುವಂತೆ ಮಾಡಪ್ಪಾ ದೇವರೇ” ಎಂದು ನೆನಪಿಗೆ ಬಂದ ದೇವರನ್ನೆಲ್ಲ ಪ್ರಾರ್ಥಿಸಿಕೊಂಡೆವು.

ಪಾರೋ ನಗರ ಹತ್ತಿರ ಬರುತ್ತಿದ್ದಂತೆ ವಿಮಾನ ಸ್ವಲ್ಪಸ್ವಲ್ಪವೇ ಕೆಳಗಿಳಿಯಲಾರಂಭಿಸಿದಾಗ ಅಲ್ಲಲ್ಲಿ ಹರಿಯುತ್ತಿದ್ದ ನದಿ, ಹಸಿರಾದ ಕಾನನ ಕಾಣಲಾರಂಭಿಸಿತು. ಜತೆಗೆ ಪೆಟ್ಟಿಗೆಗಳಂತೆ ಕಾಣುತ್ತಿದ್ದ ಮನೆಗಳೂ. ಎಲ್ಲವೂ ಒಂದೇ ಆಕಾರ! ಅಂತೂ ಒಂದಿಷ್ಟೂ ತೊಂದರೆಯಾಗದಂತೆ ಬಹಳ ಸಹಜವಾಗಿ ಪಾರೋ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸಿದರು ನಮ್ಮ ಪೈಲಟ್. ಅವರಿಗಿದು ದಿನನಿತ್ಯದ ಕಾಯಕ. ನಮಗೋ ಬದುಕಿದೆಯಾ ಬಡಜೀವವೇ ಎಂಬ ನಿಟ್ಟುಸಿರು. ಆತನೋ ನೋಡಿದರೆ ಮೊನ್ನೆಯಷ್ಟೇ ಡಿಗ್ರಿ ಮುಗಿಸಿದ ಹುಡುಗನಂತೆ ಇದ್ದ. “ಏನೋಪ! ಇಲ್ಲಿ ವಿಮಾನ ಹಾರಿಸಿದ ಈ ಪುಣ್ಯಾತ್ಮ ಮಾತ್ರ ಬಹಳ ಗಟ್ಟಿಗನೇ ಸೈ” ಎಂದು ನಮ್ಮೊಳಗೇ ಮಾತಾಡಿಕೊಂಡು ದೂರದಿಂದ ಅವನಿಗೊಂದು ಅಭಿನಂದನೆ ಹೇಳಿದೆವು.

ವಿಮಾನದಿಂದ ಕೆಳಗಿಳಿಯುತ್ತಿದ್ದರೆ ನಮ್ಮ ಲಗ್ಗೇಜು ಯಾವ ಬೆಲ್ಟ್ ಅಂತ ಹೇಳಲೇ ಇಲ್ಲವಲ್ಲ ಅಂತ ಚಿಂತೆಯಾಯ್ತು. ನೋಡೋಣ, ನಮ್ಮಂತೆ ಬಂದವರು ಉಳಿದವರೂ ಇದ್ದಾರಲ್ಲ ಅಂದುಕೊಂಡು ಮೆಲ್ಲಮೆಲ್ಲನೆ ಕೆಳಗಿಳಿದರೆ ನರನಾಡಿ ಹೆಪ್ಪುಗಟ್ಟುವಂಥ ಛಳಿ! ಉಸಿರಾಡಿದರೆ ಮಂಜುಗಡ್ಡೆಯೇ ಮೂಗೊಳಗೆ ಹೋಗುತ್ತದೆ ಅನಿಸುವ ಶೀತಲ ಗಾಳಿ. ತುಮಕೂರಿನಿಂದ ಹೊರಡುವಾಗಲೇ ಥರ್ಮಲ್ ವೇರ್ ಯಾಕೆ ಎಂದುಕೊಂಡು ನಾವದನ್ನು ಧರಿಸಿರಲಿಲ್ಲ. ಕೈಗೆ ಹಾಕಿಕೊಳ್ಳುವುದಕ್ಕೆ ಬೇಕಿದ್ದ ಗ್ಲೌಸ್, ಅದಾಗಲೇ ಧರಿಸಿದ್ದ ಸ್ವೆಟರ್ ಮೇಲೆ ಹಾಕಿಕೊಳ್ಳಬೇಕಿದ್ದ ಜರ್ಕಿನ್ ಎಲ್ಲ ಲಗ್ಗೇಜಿನಲ್ಲಿತ್ತು. ಹೊಟ್ಟೆಯಿಂದಲೇ ಶುರುವಾದ ನಡುಕ ಬೆನ್ನುಹುರಿಗೆಲ್ಲ ವ್ಯಾಪಿಸಿ ನಡೆಯವುದೇ ಹಿಂಸೆಯೆನಿಸಿತು. ಮಗ ಮಾತ್ರ “ಆಹಾ, ಇಷ್ಟು ಚಳಿ ತುಮಕೂರಿನಲ್ಲಿ ಇದ್ದರೆ ಎಷ್ಟು ಚಂದ ಇತ್ತು” ಎಂದು ಕನಸು ಕಾಣುತ್ತಿದ್ದ. ಅವನಿಗೆ ಚಳಿಯೆಂದರೆ ಇಷ್ಟ. ಸುತ್ತಲೂ ಪರ್ವತಗಳ ಸಾಲು, ಮಧ್ಯೆ ಪಾರೊ ಏರ್‌ಪೋರ್ಟ್; ಸಂಜೆಯ ಆ ನೋಟ ನಯನಮನೋಹರವಾಗಿತ್ತು. ಆದರೆ ಚಳಿಯ ದಾಳಿಯಿಂದಾಗಿ ಅದನ್ನು ನೋಡುತ್ತಾ ಎರಡು ನಿಮಿಷ ನಿಲ್ಲುವ ವ್ಯವಧಾನ ನಮಗಿರಲಿಲ್ಲ. ನಡೆದೋ ಓಡಿಯೋ ಅಂತೂ ಇಮಿಗ್ರೇಷನ್ ವಿಭಾಗದ ಕಡೆ ಹೋಗಿ ಅಗತ್ಯ ಔಪಚಾರಿಕತೆಗಳನ್ನು ಮುಗಿಸಿಕೊಂಡು ಬ್ಯಾಗುಗಳ ಕತೆ ನೋಡೋಣವೆಂದು ಒಳ ನಡೆದೆವು! ಗಗನಸಖಿ ಬೆಲ್ಟ್ ನಂಬರ್ ಹೇಳದೇ ಇದ್ದುದಕ್ಕೆ ಕಾರಣ ಗೊತ್ತಾಯಿತು. ಅಲ್ಲಿದ್ದುದು ಒಂದೇ ಬೆಲ್ಟ್. ಶಿಸ್ತುಬದ್ಧ ವಿದ್ಯಾರ್ಥಿಗಳಂತೆ ನಮ್ಮ ಬ್ಯಾಗುಗಳು ಅದಾಗಲೇ ಬಂದು ಕಾಯುತ್ತಿದ್ದವು. ಬೆಂಗಳೂರು, ಕೋಲ್ಕತ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಇದು ತುಂಬ ಚಿಕ್ಕದು. ಆದರೆ ಬಹಳ ಸುಂದರವಾಗಿತ್ತು. ಭೂತಾನಿನ ಕಲೆ, ವಾಸ್ತುಶಿಲ್ಪ ಎಲ್ಲವೂ ಕಣ್ಣಮುಂದೆ ಬರುವಂತಹ ಸುಂದರ ರಚನೆಗಳು. ಪಕ್ಕದಲ್ಲೊಂದು ಮಾಸ್ಕ್ಡ್ಯಾನ್ಸಿನ ದೊಡ್ಡ ಗಾತ್ರದ ಚೌಕಟ್ಟು ಹಾಕಿಸಿದ ಚಿತ್ರ. ಗೋಡೆಯಷ್ಟೇ ದೊಡ್ಡದಾದ ಭೂತಾನ್ ರಾಜನ ಕುಟುಂಬ ಸದಸ್ಯರ ಗ್ರೂಪ್ ಫೋಟೋ ಮನಸೆಳೆಯುವಂತೆ ಇತ್ತು.

ಮೊದಲ ಸುಂದರಿ:

ಗೆಲೆಫುವಿಂದ ನಮ್ಮ ವಿಮಾನಕ್ಕೆ ಹತ್ತಿದ ಓರ್ವ ಎಳೆಯವಯಸ್ಸಿನ ತಾಯಿ ತನ್ನೊಂದಿಗೆ ಮೂರುಮಂದಿ ಮಕ್ಕಳನ್ನು ಕರೆತಂದಿದ್ದಳು. ಮುಖದ ಹೋಲಿಕೆ ನೋಡಿದರೆ ಮೂರು ಮಂದಿಯೂ ಅವಳಂತೆಯೇ ಕಾಣಿಸಿದರು. ದೊಡ್ಡ ಮಕ್ಕಳಿಬ್ಬರು ವಿಮಾನ ಪ್ರಯಾಣ ಬಹಳ ಅಭ್ಯಾಸ ಹೊಂದಿದವರಂತೆ ಸರಸರನೆ ನಡೆದುಹೋಗುತ್ತಿದ್ದರು. ನಮ್ಮನ್ನು ಬಾಧಿಸಿದ ಛಳಿ ಆ ಮಕ್ಕಳನ್ನು ಮುಟ್ಟಲೇ ಇಲ್ಲವೇನೋ! ಕಿರಿಯಮಗುವನ್ನು ಮಾತ್ರ ಆ ತಾಯಿ ಯಾರೊಬ್ಬರ ಸಹಾಯವನ್ನೂ ಅಪೇಕ್ಷಿಸದೇ ಅಚ್ಚುಕಟ್ಟಾಗಿ ಬಟ್ಟೆಯಲ್ಲಿ ತನ್ನ ಬೆನ್ನಿಗೆ ಕಟ್ಟಿಕೊಂಡು ಲಗ್ಗೇಜನ್ನೂ ತೆಗೆದುಕೊಂಡು ಅಲ್ಲಿಂದ ಹೊರನಡೆದಳು. ಭೂತಾನಿಗೆ ಹೋಗುತ್ತಿದ್ದೇವೆ ಎಂದು ಪ್ರಕಟಿಸಿದಾಗ ಹಿರಿಯರಾದ ಡಾ. ಎಸ್. ಪಿ. ಪದ್ಮಪ್ರಸಾದರು “ಅಲ್ಲಿಯ ಹೆಣ್ಣುಮಕ್ಕಳು ತುಂಬಾ ಸುಂದರಿಯರು ಮಾರಾಯ್ರೆ, ಜೋಪಾನ!” ಎಂದದ್ದು ನೆನಪಾಗಿ ಕುಟುಕುಟು ಚಳಿಯ ಮಧ್ಯೆಯೂ ಮುಖಮುಖ ನೋಡಿಕೊಂಡು ನಕ್ಕೆವು. ಮೊದಲ ಸುಂದರಿಯ ದರ್ಶನ ನಮಗೆ ಹೀಗೆ ಆಗಿತ್ತು. ಸೌಂದರ್ಯಕ್ಕಿಂತಲೂ ಆಕೆಯ ಸ್ವಾವಲಂಬೀ ಮನೋಭಾವ ನಮಗೆ ಇಷ್ಟವಾಯ್ತು.  

ವಿಮಾನ ನಿಲ್ದಾಣದ ಉಚಿತ ವೈಫೈ ಸಹಾಯದಿಂದ ಮೊಬೈಲ್‌ನಲ್ಲಿ ವಾಟ್ಸಾಪ್ ತೆರೆದರೆ ನಮ್ಮ ‘ಯಕ್ಷಗಾನ ವಿಸಿಟ್ ಟು ಭೂತಾನ್’ ಗ್ರೂಪಿನಲ್ಲಿ ಅದಾಗಲೇ ನಾವು ತಲುಪಿದೆವೋ ಇಲ್ಲವೋ ಎಂಬ ಬಗ್ಗೆ ಪೆಮಾ ಮತ್ತು ಸೋನಂ ಮಾತುಕತೆಯಲ್ಲಿ ತೊಡಗಿದ್ದರು. “ನಾವು ತಲುಪಿದ್ದೇವೆ. ವಿಮಾನ ನಿಗದಿತ ವೇಳೆಗಿಂತ ಕೊಂಚ ತಡವಾಗಿದೆ. ಇನ್ನೇನು ಹೊರಗೆ ಬಂದು ಬಿಡುತ್ತೇವೆ” ಎಂದು ಸಂದೇಶ ಹಾಕಿದೆವು. ಆಗ ಅಲ್ಲಿ ಸಂಜೆ ಐದು ಗಂಟೆ ಆಗಿತ್ತು; ಅಂದರೆ ಭಾರತದಲ್ಲಿ ನಾಲ್ಕೂವರೆ.

ಪೆಮಾರನ್ನು ಹುಡುಕುವುದು ನಮಗೆ ಕಷ್ಟವಾಗಲಿಲ್ಲ. ಅವರು ಮುಖ್ಯದ್ವಾರದಲ್ಲೇ ಕಾದಿದ್ದರು. ನಮ್ಮನ್ನು ಕಾಣುತ್ತಿದ್ದಂತೆಯೇ ತಕ್ಷಣ ಗುರುತು ಹಿಡಿದು ಕೈಬೀಸಿದರು. ತಾವೇ ನಮ್ಮ ಲಗೇಜುಗಳನ್ನೆತ್ತಿ ಕಾರಿನಲ್ಲಿ ಇರಿಸಿಕೊಂಡರು. “ಲೋಕಲ್ ಸಿಮ್ ತೆಗೆದುಕೊಂಡಿರಾ?” ಎಂದು ನೆನಪಿಸಿದರು. ನಾವದನ್ನು ಮರೆತಿದ್ದೆವು. ಮತ್ತೆ ನಾಲ್ಕು ಹೆಜ್ಜೆ ಹಿಂದಕ್ಕೆ ಹೋಗಿ ಸಿಮ್ ಖರೀದಿಸಿದೆವು. ಎರಡು ವಾರದ ವ್ಯಾಲಿಡಿಟಿ ಇರುವ ಸಿಮ್‌ಗೆ 300 ರುಪಾಯಿ ಅಂತ ಬೋರ್ಡಿನಲ್ಲಿ ಇತ್ತು. “ಜನವರಿಯಿಂದ ನಮ್ಮಲ್ಲಿ ಜಿಎಸ್‌ಟಿ ಜಾರಿ ಆಗಿದೆ, ಇನ್ನೂ15 ರುಪಾಯಿ ಹೆಚ್ಚಾಗುತ್ತದೆ” ಎಂದು ಸಿಮ್ ಅಂಗಡಿಯ ಹುಡುಗಿ ಸಂಕೋಚದಿಂದಲೇ ಹೇಳಿದಳು. ತಾನೇ ಸಿಮ್ ಆಕ್ಟಿವೇಟ್ ಮಾಡಿ ಮೊಬೈಲಿಗೆ ಸೆಟ್ ಮಾಡಿ ಡೇಟಾ ಚಾಲೂ ಮಾಡಿಯೇ ಕೊಟ್ಟುಬಿಟ್ಟಳು.

ಐದೂವರೆಗೇ ಕತ್ತಲಾಯಿತು:


ಪೆಮಾ ಅವರ ಕಾರಿನಲ್ಲಿ ಕುಳಿತಾಗ ಚಳಿಯಿಂದ ಬಚಾವಾಗಿ ಸ್ವರ್ಗ ಸಿಕ್ಕಿದಂತಾಯಿತು. ಉಭಯ ಕುಶಲೋಪರಿಯೊಂದಿಗೆ ನಮ್ಮ ಪ್ರಯಾಣ ಮತ್ತೆ ಆರಂಭವಾಯಿತು. ಅಲ್ಲಿಂದ ಪಾರೊ ನಗರಕ್ಕೆ ನಾಲ್ಕೈದು ಕಿಲೋಮೀಟರ್ ದೂರವಷ್ಟೇ. ಸಂಜೆ ಐದೂವರೆಯಷ್ಟೇ ಆಗಿದ್ದರೂ ಊರೆಲ್ಲ ಕತ್ತಲಾಗಿತ್ತು. ಬೀದಿದೀಪಗಳು ಝಗ್ಗನೆ ಹತ್ತಿಕೊಂಡಿದ್ದವು. ವಾಹನಗಳು ಮಿರಮಿರನೆ ಹೆಡ್ಲೈಟ್ ಉರಿಸಿಕೊಂಡು ಓಡಾಡುತ್ತಿದ್ದವು. ಓಹೋ, ಇಲ್ಲಿ ಕತ್ತಲು ಬೇಗ ಎಂದು ನೆನಪಿಸಿಕೊಂಡೆವು. 

ಪೆಮಾ ಕಾರಿನಲ್ಲಿ ಭೂತಾನ್ ಆಕಾಶವಾಣಿ ಹಿತವಾಗಿ ಹಾಡುತ್ತಿತ್ತು. ಇಕ್ಕೆಲಗಳಲ್ಲಿ ಬೆಟ್ಟಗುಡ್ಡಗಳನ್ನಿರಿಸಿದ ಸಪೂರ ರಸ್ತೆಯಲ್ಲಿ ಕಾರ್ ಮುಂದೆ ಸಾಗುತ್ತಿದ್ದಂತೆ “ವಾವ್! ನಿಮ್ಮ ದೇಶ ತುಂಬಾ ಚಂದವಿದೆ” ಎಂದು ಉದ್ಗರಿಸಿದೆವು. ಪ್ರಯಾಣದ ದೂರ ಕಡಿಮೆಯಿದ್ದರೂ ಸಿಕ್ಕಷ್ಟು ಸಮಯದಲ್ಲಿ ಪೆಮಾ ಅಲ್ಲಲ್ಲಿನ ಸ್ಥಳಗಳನ್ನು ಪರಿಚಯಿಸುತ್ತಲೇ ಇದ್ದರು.

ಅವರು ಅದಾಗಲೇ ನಮಗಾಗಿ ರೂಮ್ ಕಾಯ್ದಿರಿಸಿದ್ದರಿಂದ ಏನೂ ತೊಂದರೆಯಾಗದು ಎಂದಿದ್ದರು. ಆದರೆ ನಾವು ಅಲ್ಲಿಗೆ ತಲುಪುವ ಹೊತ್ತಿಗೆ ಅದೇನೋ ರಿಪೇರಿಯ ಕಾರಣಕ್ಕೆ ತಮ್ಮ ಹೋಟೆಲಿನ ವೈಫೈ ಕೆಲಸ ಮಾಡುತ್ತಿಲ್ಲ ಎಂದು ಅಲ್ಲಿನ ಸ್ವಾಗತಕಾರಿಣಿ ಹೇಳಿದರು. ವೈಫೈ ಇಲ್ಲವಾದರೆ ನಮಗೆ ಕಷ್ಟವಾದೀತು, ನಮ್ಮ ಎಲ್ಲ ಕೆಲಸಗಳಿಗೂ ಅದಿಲ್ಲದಿದ್ದರೆ ತೊಂದರೆಯಾಗುತ್ತದೆ ಎಂದೆವು. ಅದಕ್ಯಾಕೆ ಚಿಂತೆ, ಇಲ್ಲಿ ಇನ್ನೂ ಬೇಕಾದಷ್ಟು ಹೋಟೆಲ್‌ಗಳಿವೆ, ಹುಡುಕೋಣ ಎಂದರು ಪೆಮಾ.

“ಅವರು ಬರುವ ತನಕ ನೀವು ಒಳಗೆ ಕುಳಿತುಕೊಳ್ಳಿ. ಈ ಚಳಿ ತಡೆದುಕೊಳ್ಳುವುದು ನಿಮಗೆ ಕಷ್ಟವಾಗಬಹುದು ನಿಮ್ಮ ಲಗ್ಗೇಜು ಅಲ್ಲೇ ರಸ್ತೆ ಬದಿಯಲ್ಲಿ ಇರಲಿ, ಏನೂ ಆಗುವುದಿಲ್ಲ, ಯಾರೂ ಮುಟ್ಟುವುದಿಲ್ಲ” ಎಂದು ಅಲ್ಲಿಯ ಸುಂದರಿ ಅಭಯವನ್ನಿತ್ತು ಒಳಗೆ ಕರೆದೊಯ್ದಳು. ತಮ್ಮ ಹೋಟೆಲಿಗೆ ಬರಬೇಕಿದ್ದ ಗಿರಾಕಿಗಳು ಬೇರೆ ಹೋಟೆಲ್ ಹುಡುಕುವುದಕ್ಕೆ ಹೋಗಿದ್ದಾರಲ್ಲ ಎಂಬ ಆತಂಕದ ಸಣ್ಣ ಎಳೆಯೂ ಅವಳಲ್ಲಿ ಇರಲಿಲ್ಲ. ನಮಗೆ ನಿಜಕ್ಕೂ ಅಚ್ಚರಿ ಆಯ್ತು. ಬೇಕಾದರೆ ರಸ್ತೆ ಬದಿಯಲ್ಲಿ ಚಳಿಯಲ್ಲಿ ಒದ್ದಾಡಲಿ ಎಂದುಕೊಳ್ಳುವ ಬದಲು ಆಕೆ ನಮ್ಮನ್ನು ಅತಿಥಿಗಳು ಎಂಬಂತೆ ಆದರದಿಂದ ಕರೆದು ಹೋಟೆಲ್ ಒಳಗೆ ಕೂರಿಸಿದಳು. ಅಷ್ಟು ಸಾಲದು ಎಂಬಂತೆ ಒಳಗಿನಿಂದ ಬಿಸಿಬಿಸಿ ಚಹಾ ತರಿಸಿ ನಮಗೆ ಕೊಟ್ಟು “ಇದನ್ನು ಮೊದಲು ಕುಡಿಯಿರಿ, ಚಳಿಗೆ ಹಿತವೆನಿಸೀತು” ಅಂದಳು. ಅದು ನಮ್ಮ ಕೈಗೆ ಬರುವಷ್ಟರಲ್ಲಿ ಮುಕ್ಕಾಲು ಪಾಲು ತಣ್ಣಗಾಗಿತ್ತು. ಆದರೂ ಆಕೆಯ ವರ್ತನೆ ನಮಗೆ ಬಹಳ ಆಪ್ಯಾಯಮಾನ ಎನಿಸಿತು. ದೇವರೇ ಎದುರು ಬಂದಂತೆ ಇದ್ದಳು ಆ ಸುಂದರಿ.

(ಮುಂದುವರಿಯುವುದು)


ಮಾರ್ಗ ಮಧ್ಯೆಯೇ ಇಳಿದ ಪಾರೊ ವಿಮಾನ

'ಭೂತಾನ್‌ನಲ್ಲಿ ಯಕ್ಷದೀವಿಗೆʼ

ಪ್ರವಾಸ ಕಥನ-12

ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ

(ಪ್ರಜಾಪ್ರಗತಿ, 12 ಏಪ್ರಿಲ್ 2026)

(ಮುಂದುವರಿದ ಭಾಗ...)


ಕೋಲ್ಕತದಿಂದ ಪಾರೊಗೆ ಹೋಗುವುದಕ್ಕೆ ನಾವು ಏರಿದ ಡ್ರುಕ್‌ಏರ್ ವಿಮಾನ ಚಿಕ್ಕ ಗಾತ್ರದ್ದಾಗಿತ್ತು. ಫಕ್ಕನೆ ನೋಡಿದರೆ ನಮ್ಮ ರಾಜಹಂಸ ಬಸ್ಸಿನ ಹಾಗೆ. ಹೆಚ್ಚೆಂದರೆ ಅದರ ಎರಡು ಪಟ್ಟು ಸೀಟುಗಳಿರಬಹುದು ಅಷ್ಟೆ. ಆ ತುದಿಯಿಂದ ಈ ತುದಿಯವರೆಗೆ ಕುಳಿತ ಎಲ್ಲರನ್ನೂ ಒಂದೇ ಕಣ್ಣೋಟದಿಂದ ನೋಡಬಹುದಿತ್ತು. ತನ್ನ ಗಾತ್ರದಿಂದಷ್ಟೇ ಅಲ್ಲದೆ ಅದರಲ್ಲಿ ಕುಳಿತಿರುವ ಪ್ರಯಾಣಿಕರ ಸ್ವಭಾವದಿಂದಲೂ ವಿಮಾನ ಯಾಕೋ ಮನಸ್ಸಿಗೆ ಇಷ್ಟವಾಯ್ತು. ಬೆಂಗಳೂರು-ಕೋಲ್ಕತ ವಿಮಾನದಲ್ಲಿದ್ದ ಪ್ರಯಾಣಿಕರು ಘನಗಂಭೀರವಾಗಿ ಕುಳಿತಿದ್ದರು. ಸಾಮಾನ್ಯವಾಗಿ ಎಲ್ಲ ವಿಮಾನಗಳಲ್ಲಿ ಕಂಡುಬರುವ ದೃಶ್ಯವಿದು. ಎಲ್ಲರೂ ತಾವಾಯ್ತು, ತಮ್ಮ ಪಾಡಾಯ್ತು ಎಂದು ಇರುವವರು. ಹೆಚ್ಚೆಂದರೆ ಒಂದೇ ಕುಟುಂಬದ ಮಂದಿ ಮೆಲುದನಿಯಲ್ಲಿ ಮಾತಾಡಿಕೊಂಡಾರು. ವಿಮಾನ ಮೇಲೇರಿದರೆ ಸಾಕು, ಹೆಚ್ಚಿನವರೂ ನಿದ್ದೆಗೆ ಜಾರಿಬಿಡುವವರು ಅಥವಾ ಟ್ಯಾಬ್, ಮೊಬೈಲ್ ಇಲ್ಲವೇ ಲ್ಯಾಪ್‌ಟಾಪ್ ಬಳಸಿ ಸಿನಿಮಾ ನೋಡಿಕೊಂಡು ಕಾಲ ಕಳೆಯುವವರು. 

ಆದರೆ ಪಾರೊ ವಿಮಾನದೊಳಗಿನ ದೃಶ್ಯ ಬೇರೆ ಬಗೆಯದ್ದಾಗಿತ್ತು. ಪ್ರಯಾಣಿಕರು ಒಂದೇ ಊರಿನ ಚಿರಪರಿಚಿತ ಮಂದಿಯಂತೆ ಬಹಳ ಲವಲವಿಕೆಯಿಂದ ಹರಟೆ ಹೊಡೆದುಕೊಂಡು ಕುಳಿತಿದ್ದರು. ಅವರ ಮಾತು, ನಗು, ಕೇಕೆಯಿಂದ ಅಲ್ಲೊಂದು ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ಉತ್ತಮ ಆಸನ ವ್ಯವಸ್ಥೆ, ಹವಾನಿಯಂತ್ರಣ ಬಿಟ್ಟರೆ ನಮ್ಮೂರ ಜನಪ್ರಿಯ ಬಸ್ಸಿನೊಳಗೆ ಕುಳಿತಂತೆಯೇ ಭಾಸವಾಗುತ್ತಿತ್ತು.

ಆದರೆ ಕೋಲ್ಕತ-ಪಾರೊ ವಿಮಾನ ಪ್ರಯಾಣ ಕೊಂಚ ಆತಂಕಕಾರಿ ಇರಬಹುದು ಎಂದು ಹತ್ತಿರದ ಬಂಧುಗಳು, ಸ್ನೇಹಿತರು ನಮಗೆ ಮುನ್ನೆಚ್ಚರಿಕೆ ಕೊಟ್ಟಿದ್ದರು. ಪರ್ವತ ಪ್ರದೇಶಗಳ ಮೇಲೆ ಹಾರಾಟ ನಡೆಸಬೇಕಾದ್ದರಿಂದ ವಿಮಾನ ಸಣ್ಣಗಾತ್ರದ್ದಾಗಿರುವುದು ಸಾಮಾನ್ಯ. ಈ ಕಾರಣದಿಂದಲೇ ಅದರ ಪ್ರತಿಯೊಂದು ಚಲನೆಯೂ ಪ್ರಯಾಣಿಕರ ಅನುಭವಕ್ಕೆ ಬರುತ್ತದೆ. ವಿಮಾನ ತನ್ನ ಹಾರಾಟದ ದಿಕ್ಕನ್ನು ಬದಲಾಯಿಸುವುದು, ಅಗತ್ಯಕ್ಕೆ ತಕ್ಕಂತೆ ಎತ್ತರವನ್ನು ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು- ಇವೆಲ್ಲ ಸ್ಪಷ್ಟವಾಗಿ ಒಳಗೆ ಕುಳಿತಿರುವವರಿಗೆ ಗೊತ್ತಾಗುತ್ತದೆ. ದೊಡ್ಡ ವಿಮಾನಗಳಲ್ಲಿ ಇವು ಅಷ್ಟಾಗಿ ಅನುಭವಕ್ಕೆ ಬರುವುದಿಲ್ಲ... ಹೀಗೆಂದು ಮೊದಲೇ ಹೇಳಿದ್ದರಿಂದ ನಾವು ಸಣ್ಣ ಭಯದಿಂದಲೇ ಇವನ್ನೆಲ್ಲ ಅನುಭವಿಸುವುದಕ್ಕೆ ಸಿದ್ಧರಾಗಿದ್ದೆವು.


ಆಗಸಕ್ಕೇರಿತು ವಿಮಾನ:

ವಿಮಾನ ಆಗಸಕ್ಕೇರಿತು. ಸ್ನೇಹಿತರು ಹೇಳಿದಂತಹ ಭಯದ ಅನುಭವವೇನೂ ಅಷ್ಟಾಗಿ ಆಗಲಿಲ್ಲ. ಅಬ್ಬ ಪರವಾಗಿಲ್ಲ ಇದು ಎಂದು ಸಮಾಧಾನಪಟ್ಟುಕೊಂಡೆವು. ಅದಕ್ಕಿಂತಲೂ ಸಮಾಧಾನದ ವಿಷಯ ಏನೆಂದರೆ ವಿಮಾನ ಹೊರಟು ಸ್ವಲ್ಪ ಹೊತ್ತಲ್ಲೇ ಪ್ರಸಾದ ವಿತರಣೆ ಆರಂಭವಾದದ್ದು. ನಾವು ಬೆಳಗ್ಗೆ ತಿಂಡಿ ತಿಂದದ್ದು ಬಿಟ್ಟರೆ ಮತ್ತೇನೂ ಸೇವಿಸಿರಲಿಲ್ಲ. ಎಸ್‌ಡಿಎಫ್ ಕುರಿತಂತೆ ವಿಮಾನ ನಿಲ್ದಾಣದಲ್ಲಿ ಆದ ಗೊಂದಲ ಇತ್ಯಾದಿಗಳಿಂದ ಸಾಕಷ್ಟು ಸಮಯ ಕಳೆದುಹೋಗಿತ್ತು. ತೀರಾ ವಿಮಾನ ನಿಲ್ದಾಣದ ಒಳಗೆ ತಲುಪಿದ ಮೇಲೆ ನಮಗೆ ಒಗ್ಗುವ ಊಟ ಸಿಗುವುದೂ ಅಷ್ಟರಲ್ಲೇ ಇತ್ತು. ಪಿಜ್ಜಾ, ಬರ್ಗರ್ ತಿನ್ನುವುದಕ್ಕೆ ಸಾವಿರ ರುಪಾಯಿ ಚೆಲ್ಲಬೇಕು. ಹೀಗಾಗಿ ಇನ್ನೀಗ ಊಟ ಬೇಡ, ಭೂತಾನ್ ತಲುಪಿದ ಮೇಲೆ ನೋಡೋಣ ಎಂದು ನಿರ್ಧರಿಸಿದ್ದೆವು. 

ಹಾಗೆಂದು ವಿಮಾನದಲ್ಲಿ ಕುಳಿತ ಮೇಲೆ ಹೊಟ್ಟೆ ತಾಳಹಾಕಲು ಆರಂಭಿಸಿತ್ತು. ಅದಕ್ಕೆ ಸರಿಯಾಗಿ ವಿಮಾನದ ಮುಂಭಾಗದಿಂದ ತಿಂಡಿಯ ಗಾಡಿ ಹೊರಟಾಗ ಖುಷಿಯಾಗಿಬಿಟ್ಟಿತು. ನಾವೇನೂ ಸೀಟ್ ಜೊತೆಗೆ ಊಟ ಕಾಯ್ದಿರಿಸಿರಲಿಲ್ಲ, ಆದ್ದರಿಂದ ಇದು ಕಾಯ್ದಿರಿಸಿದವರಿಗೆ ಮಾತ್ರ ಇರಬಹುದು ಎಂಬ ಅನುಮಾನವೂ ಇತ್ತು. ಆದರೆ ಅವರು ಎಲ್ಲರಿಗೂ ಪ್ಯಾಕೆಟ್ ವಿತರಿಸಿಕೊಂಡು ಬಂದಾಗ ನಿಜವಾಗಿಯೂ ಖುಷಿಯಾಯಿತು. ಅದು ಡ್ರುಕ್‌ಏರ್ ಕಂಪೆನಿ ಕಡೆಯಿಂದ ಕಾಂಪ್ಲಿಮೆಂಟರಿ ಫುಡ್ ಆಗಿತ್ತು. ಅದನ್ನು ತಿಂದು ತಂಪು ಪಾನೀಯ ಕುಡಿದಾಗ ಮೈಮನಸ್ಸು ಎಲ್ಲ ತಂಪುತಂಪಾಗಿ ಹಾಯೆನಿಸಿತು.

ವಿಮಾನ ಹಿಮಾಲಯದ ಮೇಲೆ ಸಾಗುತ್ತಿದ್ದುದರಿಂದಲೂ, ಸುತ್ತಲೂ ಬೆಳ್ಳಗಿನ ಮೋಡಗಳು ಹರಡಿಕೊಂಡಿದ್ದರಿಂದಲೂ ಎಲ್ಲೆಲ್ಲೂ ಬೆಳ್ಳಗಿನ ಕನಸಿನಲೋಕ ಕಾಣಿಸುತ್ತಿತ್ತು. ಆಗಾಗ ಚಲಿಸಿದಂತೆ, ಆಗೊಮ್ಮೆ ಈಗೊಮ್ಮೆ ಅಲ್ಲೇ ನಿಂತಂತೆ, ಎತ್ತರೆತ್ತರ ಏರಿದಂತೆ, ಇಷ್ಟಿಷ್ಟೇ ಕೆಳಗಿಳಿದಂತೆ ವಿಮಾನದ ಪ್ರಯಾಣ ಆಹ್ಲಾದಕಾರಿಯಾಗಿತ್ತು. ಆದರೆ ಸಮುದ್ರ ಮಟ್ಟದಿಂದ ಅತ್ಯಂತ ಎತ್ತರಕ್ಕೆ ಏರುವ ವೇಳೆಗೆ ಒಂದಷ್ಟು ಹೊತ್ತು ವಿಪರೀತ ಕಿವಿ ನೋವು ಬಂತು. ನಿಧಾನಕ್ಕೆ ಅದು ಸರಿಹೋಯಿತು.


ಅರ್ಧದಲ್ಲೇ ಲ್ಯಾಂಡ್ ಆದೆವು:

ಕೋಲ್ಕತದಿಂದ ಪಾರೊ ವಿಮಾನಯಾನದ ಒಟ್ಟು ಅವಧಿ ಒಂದು ಗಂಟೆ ಹತ್ತು ನಿಮಿಷ. ಇನ್ನೇನು ಮುಕ್ಕಾಲು ಗಂಟೆ ಆಗಿರಬೇಕು ಎಂಬಷ್ಟರಲ್ಲಿ ವಿಮಾನ ಕೆಳಗಿಳಿಯಲು ಆರಂಭಿಸಿತು. ನಾವು ಲ್ಯಾಂಡ್ ಆಗುತ್ತಿದ್ದೇವೆ ಎಂಬ ಪೈಲಟ್ ಸೂಚನೆಯೇನೋ ಕೇಳಿಸಿತ್ತು, ಆದರೆ ಯಾಕೆ ಏನು ಎಂಬ ವಿವರ ಅರ್ಥವಾಗಿರಲಿಲ್ಲ. ಎರಡೇ ನಿಮಿಷದಲ್ಲಿ ವಿಮಾನ ಹೆಲಿಪ್ಯಾಡಿನಂತಹ ಪುಟ್ಟ ವ್ಯವಸ್ಥೆಯ ಮೇಲೆ ಲ್ಯಾಂಡ್ ಆಯಿತು. ನಾವು ಗೊಂದಲದಿಂದ ಮಿಕಮಿಕ ನೋಡುತ್ತಿದ್ದೆವು. ಹೊರಗೆ ಒಂದು ವಿಮಾನ ನಿಲ್ದಾಣದ ನೋಟವೇನೂ ಇರಲಿಲ್ಲ. ನಾವೊಂದು ಬಯಲಿನ ಮಧ್ಯೆ ಇಳಿದಂತೆ ಇತ್ತು ಅಷ್ಟೇ. ದೂರದಲ್ಲಿ ಸಾಲುಸಾಲು ಬೆಟ್ಟಗಳು. ಮೊದಲೇ ಬಸ್ಸಿನಂತೆ ಇತ್ತು ವಿಮಾನ, ಈಗ ನೋಡಿದರೆ ಬಸ್ಟಾö್ಯಂಡಿನಲ್ಲೇ ಇಳಿಸಿಬಿಟ್ಟರೋ ಹೇಗೆ ಎಂದು ಮಾತಾಡಿಕೊಂಡೆವು.

ಅಷ್ಟು ಸಾಲದು ಎಂಬಂತೆ ವಿಮಾನದಿಂದ ಒಂದಷ್ಟು ಮಂದಿ ತಮ್ಮ ಬ್ಯಾಗುಗಳೊಂದಿಗೆ ಇಳಿದುಹೋದರು. ಅರೆ! ನಾವು ಪಾರೊ ತಲುಪಿದೆವೇ ಹಾಗಾದರೆ ಎಂದು ಚೋದ್ಯವಾಯಿತು. ಹಾಗೆಂದು ಎಲ್ಲರೂ ಇಳಿದಿರಲಿಲ್ಲ. ಹೆಚ್ಚಿನವರು ಹಾಗೆಯೇ ಕುಳಿತಿದ್ದರು. ಇನ್ನೂ ಒಂದಷ್ಟು ಮಂದಿ ಕೈಕಾಲು ಬಿಡಿಸಿಕೊಂಡು ಬಸ್ಸಿನಲ್ಲಿ ಅಡ್ಡಾಡಿದಂತೆ ಹಿಂದೆ ಮುಂದೆ ಅಡ್ಡಾಡಿದರು. ಈಗ ನಾವು ಕೂಡ ಇಳಿಯಬೇಕಾ ಹಾಗಾದರೆ... ಈ ವಿಮಾನ ಪಾರೊವರೆಗೆ ಮಾತ್ರವಲ್ಲದೆ ಮುಂದೆಯೂ ಬೇರೆ ಯಾವುದಾದರೂ ಊರಿಗೆ ಹೋಗುತ್ತದೋ ಹೇಗೆ... ಎಂದೆಲ್ಲ ಯೋಚಿಸುವಾಗ ನಾಲ್ಕೈದು ಮಂದಿ ಹೊಸ ಪ್ರಯಾಣಿಕರು ವಿಮಾನ ಏರಿ ತಮ್ಮ ಆಸನಗಳಲ್ಲಿ ಕುಳಿತರು. ಈಗಿನ್ನೂ ಮಾರ್ಕೆಟಿನಿಂದ ಬಂದವರಂತೆ ಅವರ ಕೈಯಲ್ಲಿ ಒಂದಷ್ಟು ಖರೀದಿಯ ಚೀಲಗಳು, ಕೆಲವು ಹೂವಿನ ಗಿಡಗಳೆಲ್ಲ ಇದ್ದವು. ಇಳಿಯಬೇಕು ಅಂತಾದರೆ ಕಡೇ ಪಕ್ಷ ಇಳೀರಪ್ಪಾ ನಿಮ್ಮೂರು ಬಂತು ಅಂತ ಒಂದು ಅನೌನ್ಸ್ಮೆಂಟ್ ಆದರೂ ವಿಮಾನದಿಂದ ಬರಬೇಕಲ್ಲ, ಇದೇನು ಕತೆ ಎಂದು ಮಾತಾಡಿಕೊಂಡೆವು.

ಸುಮ್ಮನೆ ಗೊಂದಲ ಯಾಕೆ, ಕೇಳೇಬಿಡೋಣ ಎಂದು ನಮ್ಮಲ್ಲೊಬ್ಬರು ಮೆಲ್ಲಗೆ ಎದ್ದು ಬಾಗಿಲ ಬಳಿ ನಿಂತಿದ್ದ ಗಗನಸಖಿಯ ಹತ್ತಿರ ಹೋದೆವು. “ಯಾಕೆ ಇಲ್ಲಿ ನಿಲ್ಲಿಸಿದ್ದೀರಿ? ಏನು ಕತೆ?” ಎಂದು ಕೇಳಿದೆವು. ಬಹುಶಃ ನಮ್ಮಂತಹ ಹೊಸಬರಿಗೆ ಈ ಪ್ರಶ್ನೆ ಹುಟ್ಟಿಕೊಂಡದ್ದರಲ್ಲಿ ಆಶ್ಚರ್ಯವೇನೂ ಇಲ್ಲ ಎಂಬ ಹಾಗೆ ಆ ಗಗನಸಖಿ “ಇದು ಗೆಲೆಫು ಎಂಬ ಊರು. ಇದು ಸಣ್ಣ ಏರ್‌ಪೋರ್ಟ್. ಈಗಿನ್ನೂ ಅಭಿವೃದ್ಧಿ ಮಾಡ್ತಾ ಇದ್ದಾರೆ. ಇಲ್ಲಿಯವರೆಗೆ ಟಿಕೆಟ್ ತಗೊಂಡವರು ಇಲ್ಲಿ ಇಳಿದಿದ್ದಾರೆ. ಇನ್ನೂ ಕೆಲವರು ಬರೋದಿದೆ. ಅವರು ಬಂದ ತಕ್ಷಣ ಹೊರಡೋದೆ. ಇಲ್ಲಿಂದ ಪಾರೊಗೆ ಇನ್ನೂ ಅರ್ಧ ಗಂಟೆ ಪ್ರಯಾಣ ಇದೆ” ಎಂದು ನಗುತ್ತಾ ಸರಳ ಇಂಗ್ಲಿಷಿನಲ್ಲಿ ವಿವರಣೆ ನೀಡಿದರು.

ಓ ಇದಾ ಕತೆ ಎಂದು ನಮಗೂ ನಗು ಬಂತು. ಬಹುಶಃ ಹೆಚ್ಚು ಸಮಯ ಇರುವುದಿಲ್ಲ, ಇಲ್ಲಾಂದ್ರೆ ಇಲ್ಲೇ ಇಳಿದು ಸ್ವಲ್ಪ ಹೊತ್ತು ಊರು ನೋಡಿಕೊಂಡು ಬರಬಹುದಿತ್ತು ಎಂದು ತಮಾಷೆ ಮಾಡಿಕೊಂಡೆವು. ಅರ್ಧದಲ್ಲಿ ವಿಮಾನ ಇಳಿದು ಜನರನ್ನು ಹತ್ತಿಸಿಕೊಂಡ ಆ ಪ್ರಸಂಗವಂತೂ ನಮಗೆ ನಿಜಕ್ಕೂ ತಮಾಷೆ ಅನ್ನಿಸಿತು.

ಗೆಲೆಫು ಭೂತಾನ್‌ನ ಸರ್ಪಾಂಗ್ ಜಿಲ್ಲೆಯಲ್ಲಿರುವ ಒಂದು ಪ್ರಮುಖ ಪಟ್ಟಣ. ಅದು ಭಾರತ ಮತ್ತು ಭೂತಾನ್‌ನ ಗಡಿಭಾಗದಲ್ಲಿರುವ ಪಟ್ಟಣವಾದ್ದರಿಂದ ಎರಡೂ ದೇಶಗಳನ್ನು ಸಂಪರ್ಕಿಸುವ ಭಾಗವಾಗಿಯೂ ಪ್ರಾಮುಖ್ಯತೆ ಪಡೆದಿದೆ. ಅಸ್ಸಾಂನಿಂದ ರಸ್ತೆ ದಾರಿಯಾಗಿ ಭೂತಾನ್‌ಗೆ ಹೋಗುವುದಿದ್ದರೆ ಗೆಲೆಫು ಮೂಲಕವೇ ಪ್ರಯಾಣಿಸಬೇಕು. ಈಗ ಗೆಲೆಫು ವಿಮಾನ ನಿಲ್ದಾಣದ ಅಭಿವೃದ್ಧಿ ಕೆಲಸ ನಡೆಯುತ್ತಿದೆ. 2029ರ ವೇಳೆಗೆ ಅದನ್ನೊಂದು ಅಂತಾರಾ ಯ ವಿಮಾನ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶ ಭೂತಾನ್ ಸರ್ಕಾರಕ್ಕಿದೆ.

ಈ ಬೆಳವಣಿಗೆಗೆ ಕಾರಣ ‘ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿ’ (Gelephu Mindfulness City) ಎಂಬ ಹೊಸ ನಗರ ಯೋಜನೆಯೊಂದು ಆರಂಭವಾಗಿರುವುದು. ಭೂತಾನೀಯರಿಗೆ ಹೊಸ ಉದ್ಯೋಗ ಹಾಗೂ ಉದ್ಯಮ ಅವಕಾಶಗಳನ್ನು ಒದಗಿಸುವುದಕ್ಕಾಗಿ ಭೂತಾನ್ ರಾಜ ಜಿಗ್ಮೆ ಖೇಸರ್ ನಮ್‌ಗ್ಯಾಲ್ ವಾಂಗ್‌ಚುಕ್ ಅವರು ಆರಂಭಿಸಿರುವ ಹೊಸ ಉಪಕ್ರಮ ಇದು. ಈಗಾಗಲೇ ಹೇಳಿರುವಂತೆ ವಾಂಗ್‌ಚುಕ್ ಸಾಕಷ್ಟು ಹೊಸ ಚಿಂತನೆಗಳನ್ನು ಹೊಂದಿರುವ ಉನ್ನತ ಶಿಕ್ಷಣ ಪಡೆದಿರುವ ರಾಜ. ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿ ಅಲ್ಲಿನ ವಿಶೇಷ ಆರ್ಥಿಕ ವಲಯದ ಒಂದು ಭಾಗ. 2500 ಚದರ ಕಿಲೋಮೀಟರ್‌ಗಳಷ್ಟು ದೊಡ್ಡದು – ಇದು ಗಾತ್ರದಲ್ಲಿ ಸಿಂಗಾಪುರಕ್ಕಿಂತ ಮೂರು ಪಟ್ಟು ದೊಡ್ಡದಾಗಿರುವ ಜಾಗ. ಇದರಲ್ಲಿ ಎಲ್ಲ ಆಧುನಿಕ ಮೂಲಸೌಕರ್ಯಗಳನ್ನು ಹೊಂದುವ ಉದ್ದೇಶ ಇದ್ದರೂ, ಭೂತಾನ್ ಸರ್ಕಾರ ತನ್ನ ‘ಸಮಗ್ರ ರಾಷ್ಟ್ರೀಯ ಸಂತೋಷದ ಸೂಚ್ಯಂಕ’ (Gross National Happiness Index) ಕ್ಕೆ ಅನುಗುಣವಾಗಿಯೇ ಇದನ್ನು ಅಭಿವೃದ್ಧಿಪಡಿಸುತ್ತಿದೆ. ಅಂದಹಾಗೆ, ಈ ಯೋಜನೆಯಲ್ಲಿ ಭಾರತದ ಪಾಲೂ ಇದೆ. ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿಯ ಸಂಸ್ಥಾಪಕ ಸದಸ್ಯರೂ ಆಗಿದ್ದಾರೆ.

ಅಂತೂ ನಮ್ಮ ವಿಮಾನ ಮತ್ತೆ ಗೆಲೆಫು ಬಿಟ್ಟು ಮೇಲಕ್ಕೆ ಹಾರಿತು. ನಾವು ನಿರೀಕ್ಷಿಸಿದ್ದ ಪುಟ್ಟ ವಿಮಾನದೊಳಗಿನ ಪ್ರಯಾಣದ ಭಯಾತಂಕ ಆರಂಭವಾದದ್ದು ಇಲ್ಲಿಂದ. ಸುರಕ್ಷಿತವಾಗಿ ಪಾರೊದಲ್ಲಿ ಇಳಿಯುತ್ತೇವೋ, ಮರಳಿ ಊರಿಗೆ ಹೋಗುತ್ತೇವೋ ಎಂಬ ಭಯ ಹುಟ್ಟಿಕೊಂಡದ್ದೂ ಇಲ್ಲೇ.

(ಮುಂದುವರಿಯುತ್ತದೆ)

ಗುರುವಾರ, ಏಪ್ರಿಲ್ 9, 2026

ಕೋಲ್ಕತದಲ್ಲಿ ಇಕ್ಕಟ್ಟಿನಿಂದ ಪಾರಾದ ಪ್ರಸಂಗ

'ಭೂತಾನ್‌ನಲ್ಲಿ ಯಕ್ಷದೀವಿಗೆʼ

ಪ್ರವಾಸ ಕಥನ-11

ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ

(ಪ್ರಜಾಪ್ರಗತಿ, 05 ಏಪ್ರಿಲ್ 2026)

(ಮುಂದುವರಿದ ಭಾಗ...)

ಈಗ ನಾವು ಆತಂಕಗೊಂಡರೆ ಕೆಲಸ ಕೆಡುತ್ತದೆ; ಪರಿಹಾರದ ದಾರಿ ನೋಡೋಣ ಎಂದು ಚುರುಕಾದೆವು. ನಮ್ಮ ವಿಮಾನ ಇರುವುದು ಮಧ್ಯಾಹ್ನ 1:20 ಕ್ಕೆ. ಈಗಿನ್ನೂ ಹತ್ತೂವರೆ. ಒಳಗೆ ಹೋಗಲು ಇನ್ನು ಒಂದು ಗಂಟೆ ತೆಗೆದುಕೊಂಡರೂ ನಡೆಯುತ್ತದೆ ಎಂದು ಯೋಚಿಸಿದೆವು. ನಮ್ಮ ಸಮಸ್ಯೆಯನ್ನು ಪರಿಹರಿಸಬಲ್ಲವರು ಭೂತಾನ್‌ನ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಮಾತ್ರ. “ನಿಮ್ಮೊಂದಿಗೆ ಅವರನ್ನು ಮಾತಾಡಿಸುತ್ತೇವೆ” ಎಂದು ಡ್ರುಕ್‌ಏರ್ ಸಿಬ್ಬಂದಿಗೆ ತಿಳಿಸಿದೆವು.

ನಮಗೂ ಭೂತಾನ್‌ಗೂ ಸರಿಯಾಗಿ ಅರ್ಧ ಗಂಟೆ ವ್ಯತ್ಯಾಸ. ಭೂತಾನ್‌ನವರು ನಮಗಿಂತ ಮೂವತ್ತು ನಿಮಿಷ ಮುಂದೆ. ಅಂದರೆ ಈಗ ಅಲ್ಲಿ ಹನ್ನೊಂದು ಗಂಟೆ ಆಗಿರುತ್ತದೆ. ಅಧಿಕಾರಿಗಳನ್ನು ಸಂಪರ್ಕಿಸಲು ಸಮಯ ಸರಿಯಾಗಿಯೇ ಇದೆ ಎಂದು ಯೋಚಿಸಿ ಸೋನಂ ಅವರಿಗೆ "ಹಾಯ್" ಎಂದು ವಾಟ್ಸಾಪ್ ಸಂದೇಶ ಕಳಿಸಿದೆವು. ಅದರ ಬೆನ್ನಿಗೆ, “ನಾವು ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಇದ್ದೇವೆ. ಡ್ರುಕ್‌ಏರ್‌ನ ಸಿಬ್ಬಂದಿಗಳು ಎಸ್‌ಡಿಎಫ್ ಶುಲ್ಕ ವಿನಾಯಿತಿಯ ಅನುಮತಿ ಕೇಳುತ್ತಿದ್ದಾರೆ. ನೀವು ಕಳಿಸಿದ ಪತ್ರವನ್ನು ಅವರಿಗೆ ತೋರಿಸಿದ್ದೇವೆ. ಇದು ಗೃಹ ಸಚಿವಾಲಯಕ್ಕೆ ಮಾಡಿಕೊಂಡ ಮನವಿಯಷ್ಟೇ, ನಮಗೆ ಅವರ ಅನುಮತಿ ಪತ್ರ ಬೇಕು ಎಂದು ಇವರು ಕೇಳುತ್ತಿದ್ದಾರೆ” ಎಂದು ವಿವರ ಕಳಿಸಿದೆವು.

ನಾವು ಮೆಸೇಜ್ ಏನೋ ಮಾಡಬಹುದು, ಅವರು ನೋಡಬೇಕಲ್ಲ! ಭೂತಾನ್‌ನವರೊಂದಿಗೆ ಸಂವಹನ ಮಾಡಿದ ಇಲ್ಲಿನವರೆಗಿನ ಅನುಭವ ಪ್ರಕಾರ ಅವರು ಸಾಮಾಜಿಕ ಮಾಧ್ಯಮಗಳನ್ನು ನಮ್ಮಷ್ಟು ಬಳಸುವುದಿಲ್ಲ. ಕೆಲವೊಮ್ಮೆ ನಾವು ಬೆಳಗ್ಗೆ ಮಾಡಿದ ಮೆಸೇಜನ್ನು ಅವರು ಸಂಜೆ ನೋಡಿದ್ದೂ ಉಂಟು. ಕಾಲ್ ಮಾಡುವುದಿದ್ದರೂ ವಾಟ್ಸಾಪ್ ಕಾಲ್ ಮಾಡಬೇಕಷ್ಟೆ. ಅವರು ನೆಟ್ವರ್ಕ್ ಪ್ರದೇಶದಲ್ಲಿ ಇದ್ದರೆ ಮಾತ್ರ ಕಾಲ್ ಕನೆಕ್ಟ್ ಆದೀತು. ನೋಡೋಣ, ಮೆಸೇಜ್ ಗಮನಿಸುತ್ತಾರೋ ಅಂತ ಅಂದುಕೊಂಡು ಸಂದೇಶ ಕಳಿಸಿಯಾಯಿತು.

ನಮ್ಮ ಆತಂಕ ಸರಿಯಾಗುವಂತೆ ಹತ್ತು ನಿಮಿಷ ನಮ್ಮ ಮೆಸೇಜ್ ಅವರಿಗೆ ಡೆಲಿವರಿ ಆದ ಡಬಲ್ ಟಿಕ್ ಬರಲೇ ಇಲ್ಲ. ಹೀಗೆ ಆದರೆ ಫಜೀತಿಯಾಗುತ್ತದೆ ಎಂದು ಮಾತಾಡಿಕೊಂಡೆವು. ಈ ನಡುವೆ ಡ್ರುಕ್‌ಏರ್ ಸಿಬ್ಬಂದಿ ನಮ್ಮೊಂದಿಗೆ ಬಹಳ ಸೌಜನ್ಯದಿಂದ ನಡೆದುಕೊಂಡರು. “ನೀವು ಆತಂಕಪಡಬೇಡಿ. ನಿಮ್ಮಲ್ಲಿರುವ ಪತ್ರದ ಫೋಟೋ ತೆಗೆದು ಪಾರೊ ಇಮಿಗ್ರೇಶನ್‌ಗೆ ಕಳಿಸಿದ್ದೇವೆ. ಅವರು ಆ ಕಡೆಯಿಂದ ಅನುಮತಿ ಕೊಟ್ಟರೆ ನಿಮ್ಮನ್ನು ಒಳಗೆ ಬಿಡುವುದಕ್ಕೆ ನಮ್ಮದೇನೂ ತಕರಾರಿಲ್ಲ. ಅವರು ಏನು ಹೇಳುತ್ತಾರೋ ನೋಡೋಣ. ಅಲ್ಲಿಯವರೆಗೆ ನೀವು ಓ ಅಲ್ಲಿ ಕೂತಿರಿ” ಎಂದು ಜಾಗ ತೋರಿಸಿದರು. ಅವರ ವರ್ತನೆಯಿಂದ ನಮಗೆ ಒಂದಷ್ಟು ಧೈರ್ಯ ಬಂತು.

ಸೋನಂ ಉಪಕಾರ:

ನಾವು ಲಗೇಜ್ ತಳ್ಳಿಕೊಂಡು ಒಂದಷ್ಟು ದೂರ ಹೋಗಿ ಕುಳಿತೆವು. ಹತ್ತು ನಿಮಿಷದ ನಂತರ ನಮ್ಮ ಮೆಸೇಜ್ ಸೋನಂ ಅವರಿಗೆ ಡೆಲಿವರ್ ಆಯಿತು. ಆದರೆ ಅವರು ಅದನ್ನು ನೋಡಬೇಕಲ್ಲ? ಇನ್ನೂ ಹತ್ತು ನಿಮಿಷ ಆದ ಮೇಲೆ ಆ ಕಡೆಯಿಂದ “ಸೋನಂ ಟೈಪಿಂಗ್...” ಅಂತ ಕಾಣಿಸಿತು. “ಅಬ್ಬ ನಮ್ಮ ಮೆಸೇಜ್ ಗಮನಿಸಿದ್ದಾರೆ, ಉತ್ತರಿಸುತ್ತಿದ್ದಾರೆ” ಎಂದು ತುಸು ನೆಮ್ಮದಿ ಅನಿಸಿತು. ಅವರ ಮೆಸೇಜ್ ಬಂತು. “ಈ ಪತ್ರ ಸಾಕು. ನಿಮಗೆ ಎಸ್‌ಡಿಎಫ್ ವಿನಾಯಿತಿ ಕೂಡ ಸಿಕ್ಕಿದೆ. ನೀವು ಪಾರೊ ವಿಮಾನ ನಿಲ್ದಾಣ ತಲುಪಿದಾಗ ನನಗೊಂದು ಕಾಲ್ ಮಾಡಿ” ಅಂತ ಮೆಸೇಜ್ ಇತ್ತು. “ಅವರಿಗೆ ಅನುಮತಿ ಪತ್ರ ಬೇಕಂತೆ” ಎಂದು ಉತ್ತರಿಸಿದೆವು. “ಇಲ್ಲ ಇಲ್ಲ, ಈ ಪತ್ರ ಧಾರಾಳ ಸಾಕು. ನಾವು ಪಾರೊ ಏಫೋರ್ಟಿನ ಇಮಿಗ್ರೇಶನ್ ವಿಭಾಗಕ್ಕೂ ಮಾಹಿತಿ ನೀಡಿದ್ದೇವೆ” ಎಂದು ಅವರು ಉತ್ತರಿಸಿದರು. ಅಲ್ಲದೆ, “ಎಸ್‌ಡಿಎಫ್ ಪಾವತಿಸುವ ವಿಚಾರ ಬರುವುದು ನೀವು ಪಾರೊ ವಿಮಾನ ನಿಲ್ದಾಣಕ್ಕೆ ತಲುಪಿದಾಗ. ಇದಕ್ಕೂ ಕೋಲ್ಕತಾ ಏರ್‌ಪೋರ್ಟಿನವರಿಗೂ ಸಂಬಂಧ ಇಲ್ಲ” ಎಂದರು.

“ನಾವು ನಿಮಗೆ ಕರೆ ಮಾಡಬಹುದೇ? ನೀವೇ ಅವರೊಂದಿಗೆ ಮಾತಾಡಿ” ಎಂದೆವು. ಅವರು ಸರಿ ಎಂದರು. ವಾಟ್ಸಾಪ್ ಕಾಲ್ ಮಾಡಿ ಡ್ರುಕ್‌ಏರ್‌ನ ಸಿಬ್ಬಂದಿಯೊಬ್ಬರಿಗೆ ಕೊಟ್ಟೆವು. ಅವರು ತಮ್ಮ ಸ್ಥಳೀಯ ಭಾಷೆಯಲ್ಲಿ ಮಾತಾಡಿಕೊಂಡರು. ನಮ್ಮೊಂದಿಗೆ ಹೇಳಿದ್ದನ್ನೇ ಅವರಿಗೂ ಹೇಳಿದರು ಅನಿಸುತ್ತದೆ. “ಎಸ್‌ಡಿಎಫ್ ವಿಚಾರ ಪಾರೊಗೆ ಸಂಬಂಧಿಸಿದ್ದು. ನೀವು ಕೋಲ್ಕತದಲ್ಲೇ ಯಾಕೆ ತಡೆಯುತ್ತಿದ್ದೀರಿ” ಎಂದು ಸೋನಂ ಅವರು ಕೇಳಿರಬೇಕು. “ಪಾರೊಗೆ ಸಂಬಂಧಿಸಿದ್ದಾದರೂ ಎಸ್‌ಡಿಎಫ್ ಪಾವತಿಯ ವಿಚಾರದಲ್ಲಿ ಸ್ಪಷ್ಟತೆ ಇರಬೇಕು. ಇಲ್ಲದಿದ್ದರೆ ಇಲ್ಲಿನ ಇಮಿಗ್ರೇಶನ್ ವಿಭಾಗದವರು ತಕರಾರು ಮಾಡುತ್ತಾರೆ” ಎಂಬುದು ಇವರ ವಾದ ಆಗಿತ್ತು. 

ಅವರು ಸ್ವಲ್ಪ ಹೊತ್ತು ಮಾತಾಡಿಕೊಂಡ ಮೇಲೆ ಫೋನ್ ನಮಗೆ ವಾಪಸ್ ಕೊಟ್ಟರು. ನಾವು ಪಾರೊ ಇಮಿಗ್ರೇಶನ್‌ನ ಅನುಮತಿಗಾಗಿ ಕಾಯುತ್ತಿದ್ದೇವೆ. ಅಲ್ಲಿಯವರೆಗೆ ನೀವು ದಯಮಾಡಿ ಕುಳಿತುಕೊಳ್ಳಿ ಎಂದು ಪುನಃ ಹೇಳಿದರು. ಈ ನಡುವೆ ಸೋನಂ ಅವರು, “ನಾನು ಪಾರೊ ವಿಮಾನ ನಿಲ್ದಾಣದವರೊಂದಿಗೆ ಮಾತಾಡಿದ್ದೇನೆ. ನೀವು ಬರುವುದಕ್ಕೆ ಏನೂ ಸಮಸ್ಯೆ ಇಲ್ಲ” ಎಂದು ಇನ್ನೊಂದು ಮೆಸೇಜ್ ಮಾಡಿದರು. ಆದರೆ ಇಲ್ಲಿನವರು ಪಾರೊ ಅನುಮತಿಗೆ ಇನ್ನೂ ಕಾಯುತ್ತಿದ್ದರು. “ಎಲ್ಲ ಭಾರತೀಯರು ಪಾಸ್‌ಪೋರ್ಟ್ ಅಥವಾ ವೋಟರ್ ಐಡಿ ಹಿಡಿದುಕೊಂಡು ಭೂತಾನ್‌ಗೆ ಬರಬಹುದು. ಎಸ್‌ಡಿಎಫ್ ಪಾವತಿಸುವುದು ಇಲ್ಲಿಗೆ ತಲುಪಿದ ಮೇಲೆ” ಎಂದು ಸೋನಂ ನಮಗೆ ಇನ್ನಷ್ಟು ವಿವರ ಕಳಿಸಿದರು. “ನೀವು ಹೇಳುತ್ತಿರುವುದು ಸರಿಯಾಗಿದೆ. ಆದರೆ ಇಲ್ಲಿನವರು ಇನ್ನೂ ಕಾಯುತ್ತಿದ್ದಾರೆ” ಎಂದೆವು. “ಅಂಥಾ ಸಂದರ್ಭ ಬಂದರೆ ನಾವು ಪಾರೊದಲ್ಲಿ ಎಸ್‌ಡಿಎಫ್ ಪಾವತಿಸುತ್ತೇವೆ ಎಂದು ಅವರಿಗೆ ಹೇಳಿಬಿಡಿ. ನಿಮ್ಮನ್ನು ವಿಮಾನ ಹತ್ತಲು ಬಿಡುತ್ತಾರೆ. ಇಲ್ಲಿನ ವಿಚಾರ ನಾನು ನೋಡಿಕೊಳ್ಳುತ್ತೇನೆ” ಎಂದರು. ಅವರ ಮಾತುಗಳು ನಾವು ಆತಂಕಗೊಳ್ಳದಂತೆ ಮಾಡುತ್ತಿದ್ದವು. ಇಷ್ಟೆಲ್ಲ ಆಗುವ ಹೊತ್ತಿಗೆ ಡ್ರುಕ್‌ಏರ್ ಸಿಬ್ಬಂದಿ ಸಮಸ್ಯೆ ಸರಿಹೋಗಿದೆ ಎಂಬಂತೆ “ಬನ್ನಿ ಬನ್ನಿ” ಎಂದು ಕರೆದರು. ಲಗೇಜ್ ಒಯ್ಯಲು ಒಬ್ಬ ಸಿಬ್ಬಂದಿಯನ್ನೂ ಕಳಿಸಿದರು. 

ಪರಿಹಾರವಾಯಿತು ಸಮಸ್ಯೆ:

ಇಷ್ಟೆಲ್ಲ ಆಗುವಾಗ ಹನ್ನೊಂದೂಮುಕ್ಕಾಲು ಆಗಿತ್ತು. ನಾವು ಲಗುಬಗೆಯಿಂದ ಹೋದೆವು. ಐದೇ ನಿಮಿಷದಲ್ಲಿ ಚೆಕ್‌ಇನ್ ಪ್ರಕ್ರಿಯೆ ಮುಗಿದು ನಮ್ಮನ್ನು ಸೆಕ್ಯುರಿಟಿ ಪರಿಶೀಲನೆ ವಿಭಾಗದತ್ತ ಹೋಗಲು ಅನುಮತಿ ನೀಡಿದರು. ಅಬ್ಬ ಅಂತೂ ಐವತ್ತು ಸಾವಿರ ರುಪಾಯಿ ಪಾವತಿಸುವುದರಿಂದ ಪಾರಾದೆವಲ್ಲ ಎಂದು ನಿಟ್ಟುಸಿರು ಬಿಟ್ಟೆವು. ಏನೇ ಆಗಲಿ, ಇವರು ಎಷ್ಟೊಂದು ಸಂಯಮ ಮತ್ತು ಗೌರವದಿಂದ ವರ್ತಿಸಿದರಲ್ಲ, ಇವರನ್ನು ಮೆಚ್ಚಬೇಕು ಎಂದು ಮಾತಾಡಿಕೊಂಡೆವು. “ನಮ್ಮ ಸಮಸ್ಯೆ ಪರಿಹಾರ ಆಯ್ತು. ನಾವು ಒಳಗೆ ಹೋಗುತ್ತಿದ್ದೇವೆ” ಎಂದು ಸೋನಂ ಅವರಿಗೆ ಮೆಸೇಜ್ ಮಾಡಿದೆವು. “ಓಹ್! ಗ್ರೇಟ್!” ಎಂದು ಅವರು ಉತ್ತರಿಸಿದರು. ಮನಸ್ಸು ಹಗುರ ಹಗುರ ಅನ್ನಿಸುತ್ತಿತ್ತು.

ಮುಂದಿನ ಪ್ರಕ್ರಿಯೆಗಳೆಲ್ಲ ಸಲೀಸಾಗಿ ಮುಗಿದವು. ಡ್ರುಕ್‌ಏರ್ ಪ್ರವೇಶ ದ್ವಾರಕ್ಕೆ ನಾವು ಹೋಗಿ ಕುಳಿತಾಗ ವಿಮಾನ ಹೊರಡುವುದಕ್ಕೆ ಇನ್ನೂ ಒಂದು ಗಂಟೆ ಉಳಿದಿತ್ತು. ಈ ನಡುವೆ ನಮಗೆ ಉಂಟಾದ ಸಮಸ್ಯೆಯನ್ನು ಪೆಮಾ ಅವರಿಗೂ ತಿಳಿಸಿದ್ದೆವು. ಅವರು ಮತ್ತು ಸೋನಂ ಕೂಡ ಮಾತಾಡಿಕೊಂಡಿದ್ದರು. ನಮ್ಮ ಸಮಸ್ಯೆ ಪರಿಹಾರವಾದ ವಿಚಾರವನ್ನೂ ಅವರಿಗೆ ತಿಳಿಸಿದ್ದಾಯ್ತು. 

“ನಾನು ಪಾರೊ ಮತ್ತು ಥಿಂಪುವಲ್ಲಿ ನಿಮಗಾಗಿ ಹೋಟೆಲ್ ನೋಡಿ ಇಟ್ಟಿದ್ದೇನೆ. ಇಲ್ಲಿ ಚಳಿ ಹೆಚ್ಚಾಗಿರುವುದರಿಂದ ನಿಮಗೆ ತಕ್ಕಮಟ್ಟಿಗೆ ಚೆನ್ನಾಗಿರುವ ಹೋಟೆಲೇ ಬೇಕು. ಪಾರೊದಲ್ಲಿ ಮೂರು ಸಾವಿರಕ್ಕೆಲ್ಲ ಒಳ್ಳೆಯ ಹೋಟೆಲ್ ಇದೆ. ಥಿಂಪುವಿನಲ್ಲಿ ಇನ್ನೂ ಒಂದೈನೂರು ಹೆಚ್ಚಾಗುತ್ತದೆ. ಜನವರಿ 1ರಿಂದ ನಮ್ಮಲ್ಲಿ ಜಿಎಸ್‌ಟಿ ಆರಂಭ ಆಗಿದೆ. ಆದ್ದರಿಂದ ಇನ್ನೂ ಸ್ವಲ್ಪ ಹೆಚ್ಚಾಗಬಹುದು. ಆದರೆ ಇದರಲ್ಲಿ ಬೆಳಗ್ಗಿನ ಉಪಾಹಾರ ಮತ್ತು ರಾತ್ರಿಯ ಊಟ ಸೇರಿಕೊಂಡಿದೆ” ಎಂದು ಪೆಮಾ ವಿವರ ನೀಡಿದರು.

ನಮ್ಮಲ್ಲಿಗೆ ಹೋಲಿಸಿದರೆ ಅಲ್ಲಿನ ಹೋಟೆಲ್ ದರಗಳು ಪರವಾಗಿಲ್ಲ ಎನಿಸಿತು. ನಮ್ಮ ವಿಚಾರ ಸರಿ, ನೀವು ಎಲ್ಲಿ ತಂಗುತ್ತೀರಾ ಕೇಳಿದೆವು. ಅವರು ಪಾರೊ, ಥಿಂಪುವಲ್ಲೆಲ್ಲ ತಮ್ಮ ಸಂಬಂಧಿಕರು ಇರುವುದಾಗಿಯೂ, ಅವರ ಮನೆಗಳಲ್ಲಿ ತಂಗುವುದಾಗಿಯೂ ತಿಳಿಸಿದರು. “ನಾನು ನಾಲ್ಕೂವರೆಗೆಲ್ಲ ಪಾರೊ ವಿಮಾನ ನಿಲ್ದಾಣದಲ್ಲಿ ಇರುತ್ತೇನೆ. ನೀವು ಏಪೋರ್ಟಲ್ಲೇ ಸ್ಥಳೀಯ ಸಿಮ್ ತೆಗೆದುಕೊಳ್ಳಬಹುದು. ಸಂವಹನ ಸುಲಭವಾಗುತ್ತದೆ. ಅದು ಕೂಡ ದುಬಾರಿ ಏನಲ್ಲ” ಎಂದರು. “ಅಲ್ಲಿನ ಸಿಮ್ ಸಕ್ರಿಯವಾಗುವುದಕ್ಕೆ ಸಮಯ ತೆಗೆದುಕೊಳ್ಳುತ್ತದಲ್ಲ... ಆದರೂ ನಾವು ನಿಮ್ಮನ್ನು ಹೇಗಾದರೂ ಪತ್ತೆಹಚ್ಚುತ್ತೇವೆ” ಎಂದೆವು. ಅವರು, “ಏರ್ಪೋರ್ಟಲ್ಲಿ ಉಚಿತ ವೈಫೈ ಇರುತ್ತದೆ. ಅದಕ್ಕೆ ಕನೆಕ್ಟ್ ಮಾಡಿಕೊಳ್ಳಿ” ಎಂದು ನೆನಪಿಸಿದರು. ನಾವು ಪಾರೊ ವಿಮಾನ ಹತ್ತಲು ಸಿದ್ಧರಾದೆವು.

(ಮುಂದುವರಿಯುವುದು)