ಶನಿವಾರ, ಜುಲೈ 4, 2026

ಚಂಡವ್ಯಾಘ್ರನ ಬೆಟ್ಟದಲ್ಲಿತ್ತು ಬುದ್ಧನ ಮುಗುಳ್ನಗು

'ಭೂತಾನ್‌ನಲ್ಲಿ ಯಕ್ಷದೀವಿಗೆʼ

ಪ್ರವಾಸ ಕಥನ-16

ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ

(ಪ್ರಜಾಪ್ರಗತಿ, 10 ಮೇ 2026)

(ಮುಂದುವರಿದ ಭಾಗ...) 

ನಾವು ಬೆಟ್ಟ ಏರಲು ಆರಂಭಿಸಿದಾಗ ಹನ್ನೊಂದು ಗಂಟೆ ಆಗಿತ್ತು. ಒಂದಷ್ಟು ಮಂದಿ ಆಗಲೇ ಬೆಟ್ಟದಿಂದ ವಾಪಸ್ ಬರುತ್ತಿದ್ದರು. ಅವರು ಬುದ್ಧಿವಂತರು, ತುಂಬ ಬೇಗನೇ ಹೋಗಿರಬೇಕು. ಆಗಲೇ ಬಿಸಿಲು ಏರತೊಡಗಿತ್ತು. ಅಲ್ಲಿನ ಚಳಿಗೆ ಆ ಬಿಸಿಲೂ ಬೆಳದಿಂಗಳಂತೆ ಭಾಸವಾಗುತ್ತಿತ್ತು. ಆದರೂ ಬೆಟ್ಟ ಏರುತ್ತಿದ್ದಂತೆ ಒಳಗಿನಿಂದಲೇ ಬೆವೆತು, ಚಳಿಯಿಂದ ಬಚಾವಾಗಲು ತೊಟ್ಟುಕೊಂಡಿದ್ದ ಹೆಚ್ಚುವರಿ ದಿರಿಸುಗಳನ್ನೆಲ್ಲ ಒಂದೊಂದೇ ಬಿಚ್ಚಬೇಕಾಯಿತು. ಆದರೂ ಆಗೊಮ್ಮೆ ಈಗೊಮ್ಮೆ ಕುಳಿರ್ಗಾಳಿ ಛಕ್ಕನೆ ಪ್ರತ್ಯಕ್ಷವಾಗಿ ಕೈಕಾಲೆಲ್ಲ ಮರಗಟ್ಟುವಂತೆ ಆಗುತ್ತಿತ್ತು. ಅಂತೂ ಕ್ಯಾಪು, ಗ್ಲೌಸು ಹಾಕುವುದು, ತೆಗೆಯುವುದು ಮಾಡುತ್ತಲೇ ಇರಬೇಕಿತ್ತು.

ಒಂದಷ್ಟು ದೂರ ಏರುವುದು, ಅಲ್ಲೇ ನಿಂತು ಸುತ್ತಲೂ ಕಣ್ಣಾಡಿಸಿ ಪ್ರಕೃತಿ ಸೌಂದರ್ಯ ಸವಿಯುವುದು, ಆಯಾಸ ಪರಿಹರಿಸಿಕೊಳ್ಳವುದು, ಗುಟುಕು ನೀರು ಕುಡಿಯುವುದು, ಒಂದೆರಡು ಫೋಟೋ, ವೀಡಿಯೋ ತೆಗೆದುಕೊಳ್ಳುವುದು, ಇನ್ನೂ ಒಂದಿಷ್ಟು ದೂರ ಏರುವುದು... ಹೀಗೆ ಸಾಗಿತ್ತು ನಮ್ಮ ಪಯಣ. ಸಾಕಷ್ಟು ದೂರ ಹೋದ ಮೇಲೆ ‘ಈಗ ನಾವು ಒಂದು ಮುಕ್ಕಾಲು ಪಾಲು ಏರಿ ಮುಗಿದಿರಬೇಕಲ್ಲ?’ ಎಂದು ಪೆಮಾ ಅವರನ್ನು ಕಾತರದಿಂದ ಕೇಳಿದೆವು. ಅವರು ನಮ್ಮ ಮೇಲೆ ಯಾವುದೇ ದಯೆ ದಾಕ್ಷಿಣ್ಯ ಇಲ್ಲದೆ, ‘ನಾವೀಗ ಶೇ. 30ರಷ್ಟು ಪರ್ವತ ಏರಿ ಆಯ್ತು. ಇನ್ನೂ ಶೇ. 70 ಬಾಕಿ ಇದೆ’ ಎಂದು ಜೋರಾಗಿ ನಕ್ಕರು. ನಾವು ಅಷ್ಟೇ ಜೋರಾಗಿ ನಗುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅಲ್ಲೇ ಇದ್ದ ಮರದ ಬೆಂಚುಗಳಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡೆವು. ಅಷ್ಟರಲ್ಲೇ ಐದಾರು ಮಂದಿ ಸಹಚಾರಣಿಗರು ಬಂದು ಪಕ್ಕದಲ್ಲಿದ್ದ ಬೆಂಚುಗಳಲ್ಲಿ ಕುಳಿತರು. ನೀವೆಲ್ಲಿಂದ ಬಂದಿದ್ದೀರಿ ಎಂದು ಕೇಳಿದೆವು. ಅವರಲ್ಲಿ ಒಂದಿಬ್ಬರು ಮಲೇಷ್ಯಾದವರು, ಇನ್ನಿಬ್ಬರು ಇಂಡೋನೇಷ್ಯಾದವರು, ಕೆಲವರು ಉತ್ತರಭಾರತೀಯರು ಇದ್ದರು. ಅಂತೂ ಪರ್ವತ ಏರಿ ಇಳಿಯುವ ಹೊತ್ತಿಗೆ ವಿವಿಧ ಜಾಗತಿಕ ಪ್ರತಿನಿಧಿಗಳನ್ನು ಭೇಟಿಯಾಗುವಂತಾಯಿತು. 

ನಮ್ಮ ಬ್ಯಾಗಿನಲ್ಲಿ ನೀರಿನ ಹೊರತಾಗಿ ಇನ್ನೇನೂ ಇರಲಿಲ್ಲ. ಪೆಮಾ ತಮ್ಮ ಬ್ಯಾಗಿನಿಂದ ಒಂದೊಂದೇ ಚಾಕೊಲೇಟುಗಳನ್ನು ಹೊರತೆಗೆಯತೊಡಗಿದರು. ನಾವು ಬದುಕಿದೆಯಾ ಬಡಜೀವವೇ ಎಂದು ಅವನ್ನು ಗಬಗಬನೆ ತಿಂದೆವು. ಮುನ್ನಾದಿನ ಹೋಟೆಲ್‌ನಲ್ಲಿ ನಮ್ಮನ್ನು ಮಾತಾಡಿಸಿದ ಮಹಿಳೆ, ‘ನೀವು ಪರ್ವತ ಏರುವ ಮೊದಲು ಒಂದಷ್ಟು ಚಾಕೊಲೇಟ್‌ಗಳನ್ನು ಹಿಡಿದುಕೊಳ್ಳಿ. ಆಗಾಗ ಬೇಕಾಗುತ್ತೆ’ ಎಂದು ಸಲಹೆ ನೀಡಿದ್ದಳು. ನಮಗದು ಆಮೇಲೆ ಮರೆತುಹೋಗಿತ್ತು. ಈಗ ನೋಡಿದರೆ ಆ ಬಗೆಯ ಸಣ್ಣಪುಟ್ಟ ಸಿದ್ಧತೆಗಳೇ ಎಷ್ಟು ಮುಖ್ಯವಾದದ್ದು ಎಂದು ಅನಿಸತೊಡಗಿತು.

ಸಾಧಾರಣ ಅರ್ಧ ದೂರ ಕ್ರಮಿಸಿದ ಮೇಲೆ ಬಹಳ ದೂರದಿಂದ ಟೈಗರ್ಸ್ ನೆಸ್ಟ್ ದೇಗುಲಗಳ ಸಮುಚ್ಚಯ ಕಾಣುತ್ತಿತ್ತು. ಅಬ್ಬ! ರುದ್ರ ರಮಣೀಯವೇ ಹೌದು. ಆದರೆ ಒಂದು ಬಂಡೆಯ ಮೇಲೆ ಆಧಾರ ಹೊಂದಿದಂತೆ ಕಾಣುತ್ತಿದ್ದ ಆ ದೇಗುಲವನ್ನು ಅಲ್ಲಿ ಕಟ್ಟಿದವರಾರು? ಹೇಗೆ? ಎಂಬುದೇ ವಿಜ್ಞಾನಿಗಳಿಗೂ ತಿಳಿಯದ ಚೋದ್ಯವಂತೆ. ದೂರದಿಂದ ಅದನ್ನು ನೋಡುವುದಷ್ಟೇ ಸಾಧ್ಯವಿರಬಹುದು, ಅದರ ಬುಡದವರೆಗೂ ಹೋಗಲು ಸಾಧ್ಯವೇ ಇಲ್ಲ ಬಿಡು, ಎಷ್ಟೊಂದು ಕಡಿದಾಗಿದೆ ಆ ಪ್ರದೇಶ... ಎಂದು ಮಾತಾಡಿಕೊಂಡೆವು. ‘ನಾವು ಅಲ್ಲಿಯವರೆಗೂ ಹೋಗುತ್ತೇವೆ’ ಎಂದರು ಪೆಮಾ. ‘ಛಾನ್ಸೇ ಇಲ್ಲ. ಅಲ್ಲಿಗೆ ಗಾಳಿಯಲ್ಲಿ ತೇಲಾಡಿಕೊಂಡಾ ಹೋಗೋದು? ಅಲ್ಲಿ ತಲುಪುವ ಯಾವ ದಾರಿಯೂ ಕಾಣಿಸುತ್ತಿಲ್ಲವಲ್ಲ...’ ಎಂದು ನಮ್ಮಷ್ಟಕ್ಕೇ ಮೊಂಡುವಾದ ಮಾಡಿಕೊಂಡೆವು. ಅಲ್ಲಿಗೆ ಹೋಗಿ ತಲುಪುವುದೇ ನಮ್ಮ ಉದ್ದೇಶ, ನಾವು ಹೋದಂತೆ ದಾರಿ ತೆರೆದುಕೊಳ್ಳುತ್ತದೆ, ನೀವೇನೂ ಆತಂಕಪಟ್ಟುಕೊಳ್ಳಬೇಡಿ, ನನ್ನನ್ನು ಹಿಂಬಾಲಿಸಿ ಎಂದು ಖುದ್ದು ಪೆಮಾ ಅವರು ಭರವಸೆ ಕೊಟ್ಟ ಮೇಲೆ ನಾವು ಚಿಂತೆಯನ್ನು ತೊರೆದೆವು.

ಶತಮಾನದ ಮರಗಳು:

ನಾವು ಸಾಗುವ ದಾರಿಯಲ್ಲಿ ಅಲ್ಲಲ್ಲಿ ಕೆಲವು ಹಳೆಯ ಮರಗಳನ್ನು ಪ್ರತ್ಯೇಕ ಗುರುತಿಸಿ ಇವು ಇಷ್ಟು ವರ್ಷ ಹಳೆಯವು ಎಂದು ಮಾಹಿತಿ ಫಲಕಗಳನ್ನು ನೇತುಹಾಕಿದ್ದರು. 103 ವರ್ಷ ಪ್ರಾಯದ ರೋಡೋಡೆಂಡ್ರನ್ ಮರ, 134 ವರ್ಷ ಹಳೆಯ ಬ್ಲೂ ಪೈನ್ ಮರಗಳು ನಮ್ಮನ್ನು ಚಕಿತಗೊಳಿಸಿದವು. ಆಯಾ ಮರಗಳ ವೈಜ್ಞಾನಿಕ ಹೆಸರು, ಅವುಗಳ ಸಾಮಾನ್ಯ ವ್ಯಾಸ ಎಷ್ಟು ಇತ್ಯಾದಿ ವಿವರಗಳನ್ನೆಲ್ಲ ಆ ಫಲಕಗಳು ಒಳಗೊಂಡಿದ್ದವು. ಪ್ರತಿ ಫಲಕದ ಕೆಳಗೂ ‘ಕಸ ಎಸೆಯಬೇಡಿ’ ಎಂಬ ಮನವಿ ಸಾಮಾನ್ಯವಾಗಿತ್ತು. 

ನಮ್ಮ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ಅಲ್ಲಿ ಕಸ ಎಸೆಯುವ ಪ್ರಮಾಣ ಕಡಿಮೆಯೇ ಇತ್ತು. ಆದರೂ ಕೆಲವೆಡೆ ನೀರು ಅಥವಾ ಜ್ಯೂಸ್ ಬಾಟಲ್, ಬಿಸ್ಕತ್, ಕುರುಕಲು ತಿನಿಸಿನ ಪೊಟ್ಟಣಗಳನ್ನು ಪ್ರವಾಸಿಗರು ಎಸೆದಿದ್ದರು. ಪೆಮಾ ತಮ್ಮ ಬ್ಯಾಗಿನಿಂದ ಒಂದು ಖಾಲಿ ಕವರ್ ತೆಗೆದು ಅಲ್ಲಿದ್ದ ಕಸವನ್ನೆಲ್ಲ ತುಂಬಿ ಒಂದು ಮರದ ಕೊಂಬೆಗೆ ನೇತುಹಾಕಿದರು. ಅರೆ, ಇದೇಕೆ ಎಂದು ಕೇಳಿದೆವು. ‘ಕೆಳಗೆ ಹೋಗುವಾಗ ಯಾರಾದರೂ ನೋಡಿದವರು ಕೊಂಡೊಯ್ಯುತ್ತಾರೆ. ಇಲ್ಲದಿದ್ರೆ ನಾವೇ ತೆಗೆದುಕೊಂಡು ಹೋದರಾಯಿತು’ ಎಂದರು ಪೆಮಾ. ನಮಗದನ್ನು ನಂಬಲು ಆಗಲಿಲ್ಲ. ಹೋಗಿ ಹೋಗಿ ಕಸ ಹೊತ್ತುಕೊಂಡು ಹೋಗುತ್ತಾರಾ ಜನ ಎಂದು ನಕ್ಕೆವು. ಅಚ್ಚರಿ ಎಂದರೆ ನಾವು ಮರಳಿ ಬರುವಾಗ ಆ ಕಸದ ಚೀಲ ಅಲ್ಲಿರಲಿಲ್ಲ. ಪೆಮಾ ಹೇಳಿದಂತೆ ಯಾರೋ ತೆಗೆದುಕೊಂಡು ಹೋಗಿರಬಹುದು.

ಮುಂದೆ ಹೋಗುತ್ತಾ ಹೋಗುತ್ತಾ ಅನಾವರಣಗೊಂಡದ್ದು ಪ್ರಕೃತಿಯ ಸಿರಿಯೋ, ಅಲ್ಲ, ಅಂಥ ಕಡಿದಾದ ಬೆಟ್ಟದ ನಡುವೆ ದೇಗುಲವನ್ನು ನಿರ್ಮಿಸಿದವರ ಕೈಚಳಕವೋ, ಬುದ್ಧಿವಂತಿಕೆಯೋ ಅರಿಯದಾದೆವು. ದೂರದಲ್ಲಿದ್ದ ‘ಟೈಗರ್ಸ್ ನೆಸ್ಟ್’ಗೆ ನಾವು ಇನ್ನಷ್ಟು ಹತ್ತಿರವಾಗಿದ್ದೆವು. ತುತ್ತತುದಿಯ ದೇಗುಲ ಸಮುಚ್ಚಯ ಇಲ್ಲೇ ಹತ್ತಿರವಿದೆ ಅನಿಸಿದರೂ ಒಂದಷ್ಟು ಹತ್ತುವುದು, ಇನ್ನೊಂದಷ್ಟು ದೂರ ಇಳಿಯುವುದು- ಈ ಬಗೆಯ ಹಾದಿ ಮುಂದುವರಿದೇ ಇತ್ತು. ಇಳಿಯುವ ಹಾದಿ ಸಿಕ್ಕಿದಾಗ ಒಂದಷ್ಟು ಸಮಾಧಾನ, ಮತ್ತೆ ಏರು ದಾರಿ ಸಿಕ್ಕಾಗ ಅಯ್ಯೋ ಇನ್ನೆಷ್ಟು ಮೆಟ್ಟಿಲು ಎಂಬ ಲೆಕ್ಕಾಚಾರ... ಕೈಕಾಲುಗಳೆಲ್ಲ ಸಂಪೂರ್ಣ ಸೋತಿದ್ದವು. ನಮಗಿಂತ ದುಪ್ಪಟ್ಟು ವಯಸ್ಸಾದ ಮಹಿಳೆಯರು, ಪುರುಷರು ಜಪಸರ ಹಿಡಿದುಕೊಂಡು, ಏನೋ ಮಂತ್ರ ಜಪಿಸಿಕೊಂಡು ಬೆಟ್ಟ ಏರುವುದು, ವಾಪಸ್ ಬರುವುದು ಸಾಮಾನ್ಯವಾಗಿತ್ತು. ಅವರನ್ನು ನೋಡಿದ ಮೇಲೂ ನಾವೇನಾದರೂ ಬೆಟ್ಟದ ತುದಿ ತಲುಪದೆ ಮರಳಿದ್ದರೆ ಮರ್ಯಾದೆಯ ಪ್ರಶ್ನೆ ಆಗುತ್ತಿತ್ತು!

ಅಲ್ಲಿಯೇ ಸಮೀಪದಲ್ಲಿ ಎತ್ತರದಿಂದ ನೀರು ಧುಮ್ಮಿಕ್ಕುತ್ತಿತ್ತು. ನೀರು ಕೆಳಗೆ ಬಿದ್ದಲ್ಲಿ ಅಲ್ಲಲ್ಲಿ ಮಂಜುಗಡ್ಡೆ ರೂಪುಗೊಳ್ಳುತ್ತಿತ್ತು.. ಅಂತಹ ಛಳಿ! ಪೆಮಾ ಅವರು ಕೆಳಗಿಳಿದು ಹೋಗಿ ಸಂವೃತನಿಗಾಗಿ ಒಂದಷ್ಟು ಮಂಜನ್ನು ಉಂಡೆ ಮಾಡಿ ಕೊಟ್ಟರು.. ಕೈಕೊರೆಯುವ ಚಳಿಯಲ್ಲಿ ಅದನ್ನು ಮುಟ್ಟುವ ಧೈರ್ಯವನ್ನೂ ನಾವು ಮಾಡದೆ ‘ಮುಂಜಾನೆ ಸವಿ ಮಂಜಲ್ಲಿ...’ ಎಂದು ಹಾಡು ಗುನುಗಿಕೊಂಡು ಮುನ್ನಡೆದೆವು. ತಮಾಷೆಯೆಂದರೆ ಆಗ ಮುಂಜಾನೆ ಅಲ್ಲ, ಮಧ್ಯಾಹ್ನ ಎರಡು ಗಂಟೆ ಆಗಿತ್ತು! ಆದರೆ ನಡು ಮಧ್ಯಾಹ್ನ ದಾಟಿದ ಯಾವ ವಾತಾವರಣವೂ ಅಲ್ಲಿರಲಿಲ್ಲ, ಈಗಷ್ಟೇ ಬೆಳಕು ಹರಿದಂತೆ ಇತ್ತು. ‘ಇನ್ನು ನಾವು ಸ್ವಲ್ಪ ಬೇಗನೇ ನಡೆಯದೇ ಇದ್ದರೆ ಕತ್ತಲಾಗುವುದರೊಳಗೆ ಮರಳಲಾಗದು’ ಎಂದರು ಪೆಮಾ. ನಮ್ಮ ಕಾಲುಗಳ ಕತೆ ನಮಗೆ ಮಾತ್ರ ಗೊತ್ತಿತ್ತು. 

ಸರ್ವಂ ಬುದ್ಧಮಯಂ:

ಟೈಗರ್ಸ್ ನೆಸ್ಟ್ ಸಮುಚ್ಚಯದೊಳಗೆ ಹತ್ತಾರು ಗರ್ಭಗುಡಿಗಳು. ಎಲ್ಲೆಲ್ಲೂ ಬುದ್ಧನೇ! ಬುದ್ಧನ, ಪದ್ಮಸಂಭವನ, ಇತರ ಬೌದ್ಧ ಗುರುಗಳ ದೊಡ್ಡ ದೊಡ್ಡ ವಿಗ್ರಹಗಳು. ಹೊಂಬಣ್ಣದ ಬುದ್ಧನ ಅರೆನಿಲೀಮಿತ ನೇತ್ರ, ಮುಗುಳ್ನಗು, ಮುಖದಿಂದ ಹೊರಹೊಮ್ಮುವ ಕಾಂತಿ, ಸೂಜಿಬಿದ್ದರೂ ಕೇಳಿಸುವ ಮೌನ, ಮೈಕೊರೆಯುವ ಚಳಿ, ಪಿಸುಮಾತಿನಲ್ಲಷ್ಟೇ ಮಾತಾಡುವ ಮಂದಿ, ಆಗಾಗ ಬಂದು ಕಾಡುವ ತಂಪು ಗಾಳಿ- ಇವೆಲ್ಲ ಸೇರಿ ಅಲ್ಲೊಂದು ಹೊಸ ಲೋಕದ ಸೃಷ್ಟಿಯಾಗಿತ್ತು. ಸಾಲಾಗಿ ಬನ್ನಿ, ಗಲಾಟೆ ಮಾಡಬೇಡಿ ಎಂದು ಕೂಗಿಕೊಳ್ಳುವ ಮಂದಿಯಾಗಲೀ, ಕಾಣಿಕೆಯನ್ನು ಹುಂಡಿಯಲ್ಲೇ ಹಾಕಿ ಎಂಬ ಫಲಕಗಳಾಗಲೀ ಅಲ್ಲಿ ಇರಲಿಲ್ಲ. ಅವುಗಳ ಅಗತ್ಯವೂ ಇರಲಿಲ್ಲವೆನ್ನಿ. ಒಳಗೆ ಮೊಬೈಲ್ ಒಯ್ಯಬೇಡಿ ಎಂದು ಹೇಳಿ ಅದನ್ನು ಎತ್ತಿಡುವ ಒಬ್ಬ ಪೊಲೀಸ್ ಸಿಬ್ಬಂದಿ ಮಾತ್ರ ನಮಗೆ ಸಿಕ್ಕಿದ್ದರು. ದೇಗುಲಗಳ ಒಳಗೆ ಅಲ್ಲೊಬ್ಬ ಇಲ್ಲೊಬ್ಬ ಕೆಂಪನೆಯ ದಿರಿಸು ಧರಿಸಿದ ಅರ್ಚಕರು ಇರುತ್ತಿದ್ದರು. 

ದೇವರ ವಿಗ್ರಹಗಳ ಎದುರು ದೊಡ್ಡ ದೊಡ್ಡ ಬಟ್ಟಲಲ್ಲಿ ನೀರು ತುಂಬಿಸಿ ಸಾಲಾಗಿ ಜೋಡಿಸಿದ್ದರು. ಅರೆ, ದೇವರಿಗೆ ನೀರಿನ ನೈವೇದ್ಯವೇ ಎಂದು ಸೋಜಿಗದಿಂದ ಪೆಮಾ ಅವರನ್ನು ಕೇಳಿದೆವು. ‘ಹೌದು, ಇಲ್ಲಿ ಬುದ್ಧನಿಗೆ, ಪದ್ಮಸಂಭವನಿಗೆ ನೀರನ್ನು ಅರ್ಪಿಸುತ್ತಾರೆ. ನಾವೇನೇ ದೇವರಿಗೆ ಅರ್ಪಿಸಿದರೂ ಅದರ ಹಿಂದೊಂದು ಸಣ್ಣ ಆಸೆ ಇದ್ದೇ ಇರುತ್ತದೆ. ಪೂರ್ಣ ಮನಸ್ಸಿನಿಂದ ಅರ್ಪಿಸುವುದಿಲ್ಲ. ಅಯ್ಯೋ ಕೊಡಬೇಕಲ್ಲ ಎಂಬ ಸಣ್ಣ ಯೋಚನೆಯೂ ಮನಸ್ಸಿನಲ್ಲಿದ್ದರೆ ಕೊಡುವುದರ ಹಿಂದೆ ಸರ್ವಸಮರ್ಪಣೆಯ ಭಾವ ಇರುವುದಿಲ್ಲ. ಅದರಿಂದ ವಾಸ್ತವವಾಗಿ ಯಾವ ಪ್ರಯೋಜನವೂ ಇರುವುದಿಲ್ಲ. ನೀರಾದರೆ ಕೊಡುವುದಕ್ಕೆ ವಿಶೇಷ ಖರ್ಚೇನೂ ಇರುವುದಿಲ್ಲ, ಅದರ ಹಿಂದೆ ಕೊಟ್ಟುಬಿಟ್ಟೆವಲ್ಲ ಎಂಬಂಥ ಮನಸ್ಥಿತಿ ಇರುವುದಿಲ್ಲ, ಹಾಗಾಗಿ ನೀರನ್ನೇ ಅರ್ಪಿಸುವ ಪದ್ಧತಿ ಇಲ್ಲಿ ಎಲ್ಲ ಕಡೆ ಇದೆ’ ಎಂದು ಅವರು ವಿವರಿಸಿದರೆ ನಾವು ಕುತೂಹಲದಿಂದ ಕೇಳಿಸಿಕೊಳ್ಳುತ್ತಿದ್ದೆವು. ನಮಗಂತೂ ಇದೊಂದು ಹೊಸ ಪರಿಕಲ್ಪನೆ ಆಗಿತ್ತು.

(ಮುಂದುವರಿಯುವುದು)


ಗತವೈಭವ ನೆನಪಿಸಿದ ಟೈಗರ್ಸ್ ನೆಸ್ಟ್ ಹಾದಿ

'ಭೂತಾನ್‌ನಲ್ಲಿ ಯಕ್ಷದೀವಿಗೆʼ

ಪ್ರವಾಸ ಕಥನ-15

ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ

(ಪ್ರಜಾಪ್ರಗತಿ, 03 ಮೇ 2026)

(ಮುಂದುವರಿದ ಭಾಗ...)

ನಾವು ಬೇಗಬೇಗನೆ ತಿಂಡಿ ಮುಗಿಸಿಕೊಂಡು ಟೈಗರ್ಸ್ ನೆಸ್ಟ್ ಕಡೆಗೆ ಹೊರಡಬೇಕಿತ್ತು. ನಾವಿದ್ದ ಹೋಟೆಲಿನ ಊಟೋಪಚಾರದ ವಿಭಾಗ ಬಲು ಸೊಗಸಾಗಿತ್ತು. ಎಲ್ಲವೂ ಹೊಂಬಣ್ಣದಿಂದ ಮಿರುಗುತ್ತಿದ್ದ ಮರದ ಕಲಾತ್ಮಕ ಪೀಠೋಪಕರಣಗಳು. ಸುತ್ತಲೂ ಗಾಜಿನ ಗೋಡೆ, ಹೊರಗೆ ಅನತಿ ದೂರದಲ್ಲಿ ಕಾಣುವ ಪರ್ವತದ ಅಂಚಿನಿಂದ ಏರಿ ಬರುತ್ತಿದ್ದ ಸೂರ್ಯ, ಇಡೀ ಮೈಯನ್ನು ಹಿಡಿಯಾಗಿಸಿ ಮುದುರಿ ಕೂರುವಂತೆ ಮಾಡುವ ಚಳಿಗಾಳಿ- ನಾವು ಯಾವುದೋ ರೆಸಾರ್ಟಿನಲ್ಲಿದ್ದೇವೇನೋ ಎಂಬ ಭಾವನೆ ಮೂಡಿಸುತ್ತಿದ್ದವು. ನಾವು ತಿಂಡಿಗೆ ಬಂದೆವೆಂದು ಗೊತ್ತಾಗುತ್ತಲೇ ಎರಡು-ಮೂರು ಸುಂದರಿಯರು ಟೇಬಲ್ ಮೇಲೆ ತಿಂಡಿ ಪಾತ್ರೆಗಳನ್ನು ಓರಣವಾಗಿ ಜೋಡಿಸಿದರು. ನಮ್ಮಂತೆ ಅವರೂ ಚಳಿಯಿಂದ ತಪ್ಪಿಸಿಕೊಳ್ಳಲು ಹರಸಾಹಸಪಡುತ್ತಿದ್ದರು. ಅಲ್ಲೇ ಮೂಲೆಯಲ್ಲೊಂದು ಹೀಟರು ಕೆಂಪುಕೆಂಪಾಗಿ ಗಮನಸೆಳೆಯುತ್ತಿತ್ತು. ಆ ಹುಡುಗಿಯರು ಐದು ನಿಮಿಷಕ್ಕೊಮ್ಮೆ ಹೀಟರಿನ ಬಳಿಗೋಡಿ ಚಳಿಕಾಯಿಸಿಕೊಂಡು ಮತ್ತೆ ತಮ್ಮ ಕೆಲಸದತ್ತ ದೌಡಾಯಿಸುತ್ತಿದ್ದರು. 

ಒಂದು ಪಾತ್ರೆಯಲ್ಲಿ ಉಪ್ಪಿಟ್ಟು, ಇನ್ನೊಂದರಲ್ಲಿ ಪರೋಟ, ಮತ್ತೊಂದರಲ್ಲಿ ಬ್ರೆಡ್ಡು, ಸವರಿಕೊಳ್ಳುವುದಕ್ಕೆ ಬೆಣ್ಣೆ ಮತ್ತು ಜಾಮ್, ದಪ್ಪನೆಯ ಮೊಸರು, ಮಾವಿನಕಾಯಿ ಉಪ್ಪಿನಕಾಯಿ. ಅವರು ತಂದಿಟ್ಟ ಪ್ರಮಾಣ ನಾವು ಮೂವರೇನು, ನಾಲ್ಕೈದು ಮಂದಿ ತಿನ್ನುವಷ್ಟಿತ್ತು. ಹೆಚ್ಚೇ ಎನಿಸುವಷ್ಟು ದ್ರಾಕ್ಷಿ-ಗೋಡಂಬಿ ಬೆರೆಸಿದ ಉಪ್ಪಿಟ್ಟು ಸಿಹಿಯಾಗಿತ್ತು; ಪರೋಟವೂ ನಮ್ಮೂರಿನ ಪರೋಟಕ್ಕಿಂತ ಭಿನ್ನವಾಗಿತ್ತು. ಆದರೆ ಎಲ್ಲವೂ ರುಚಿಕರವಾಗಿದ್ದವು. ಭೂತಾನಿಗೆ ಹೋಗಿ ಏನು ತಿನ್ನುವುದೆಂಬ ಸಣ್ಣ ಅನುಮಾನ ಅಷ್ಟರಲ್ಲೇ ಮಾಯವಾಗಿತ್ತು. ಇನ್ನೊಂದು ಕಪ್ ಚಹಾ ಇದೆಯಾ ಎಂದು ಕೇಳುತ್ತಿತ್ತು ಚಳಿ.

ಅಷ್ಟರಲ್ಲಿ ಪೆಮಾ ಕೂಡ ಬಂದು ನಮ್ಮನ್ನು ಸೇರಿಕೊಂಡರು. ಅವರು ಉಳಿದುಕೊಂಡಿದ್ದ ಸಂಬಂಧಿಕರ ಮನೆಯೂ ಅದೇ ಹೋಟೆಲಿನ ಆಸುಪಾಸಿನಲ್ಲಿತ್ತು. ಅವರೂ ನಮ್ಮೊಂದಿಗೆ ತಿಂಡಿ ಪೂರೈಸಿದರು. ಎಷ್ಟೇ ಬೇಗ ಅಂದರೂ ಅಷ್ಟೆಲ್ಲ ಆಗುವ ಹೊತ್ತಿಗೆ ಒಂಬತ್ತು ಗಂಟೆ ಕಳೆದಿತ್ತು. ಇನ್ನೇನು ಕಾರು ಏರುವುದೇ ಅಂದುಕೊಂಡರೆ ‘ಐದು ನಿಮಿಷ ತಡೆಯಿರಿ. ಕಾರ್ ಬಾಗಿಲು ತೆಗೆಯಲು ಆಗದಷ್ಟು ಐಸ್ ಅಂಟಿಕೊಂಡಿದೆ. ನಾನು ಆಗಲೇ ಬಂದು ಒಂದು ಡೋರ್ ತೆಗೆದು ಕಾರ್ ಆನ್ ಮಾಡಿ ಇಟ್ಟಿದ್ದೇನೆ. ಸ್ವಲ್ಪ ಹೊತ್ತಲ್ಲಿ ಸರಿಹೋಗುತ್ತೆ’ ಎಂದರು ಪೆಮಾ. ನಮಗೆಲ್ಲವೂ ಹೊಸದಾಗಿದ್ದರಿಂದ ಪ್ರತಿಯೊಂದನ್ನೂ ಸೋಜಿಗದಿಂದ ಗಮನಿಸುತ್ತಿದ್ದೆವು. ಬಟ್ಟೆಬರೆಗಳನ್ನು ಧರಿಸುವ ಮುನ್ನ ಥರ್ಮಲ್ ವೇರ್ ಧರಿಸಿದ್ದೂ ನಮಗೆ ಹೊಸ ಅನುಭವವೇ. ಪುಸ್ತಕಗಳಲ್ಲಿ ಸಿನಿಮಾಗಳಲ್ಲಿ ನೋಡುತ್ತಿದ್ದ ಹಿಮಾಲಯವನ್ನು ನಾವು ದಾಟಿ ಬಂದಿದ್ದೆವು. ವಾಸ್ತವವಾಗಿ ಈಗ ನಾವು ಹಿಮಾಲಯದ ಒಂದು ಭಾಗವಾಗಿಯೇ ಇದ್ದೆವು. ಥರ್ಮಲ್ ವೇರ್, ಅದರ ಮೇಲೆ ನಮ್ಮ ದಿನನಿತ್ಯದ ಡ್ರೆಸ್, ಅದರ ಮೇಲೆ ಸ್ವೆಟರ್, ಎರಡೂ ಕಿವಿಗಳನ್ನು ಪೂರ್ತಿಯಾಗಿ ಮುಚ್ಚುವ ಮಂಕಿಕ್ಯಾಪ್, ಕೈಗಳಿಗೆ ದಪ್ಪನೆಯ ಗ್ಲೌಸ್- ಇವಿಷ್ಟರ ಸಹಾಯದಿಂದ ಅಲ್ಲಿನ ಚಳಿಯನ್ನು ತಕ್ಕಮಟ್ಟಿಗೆ ತಡೆದುಕೊಳ್ಳುವುದು ನಮಗೆ ಸಾಧ್ಯವಾಗಿತ್ತು.

ಪರಂಪರೆ ಪ್ರಿಯರು:

ಟೈಗರ್ಸ್ ನೆಸ್ಟ್ ತಪ್ಪಲು ತಲುಪಲು ನಾವು ಒಂದರ್ಧ ಗಂಟೆ ಕಾರಿನಲ್ಲಿ ಪ್ರಯಾಣಿಸಬೇಕಿತ್ತು. ಕಾರು ಪಾರೊ ನಗರವನ್ನು ದಾಟಿ ಪರ್ವತದತ್ತ ಸಾಗುತ್ತಿದ್ದರೆ ಪೆಮಾ ಒಂದೊಂದೇ ಕಥೆಗಳನ್ನು ಬಿಚ್ಚುತ್ತಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಹೊಲಗಳು, ಅವುಗಳ ನಡುವೆ ಅಲ್ಲೊಂದು ಇಲ್ಲೊಂದು ಚೌಕಾಕಾರದ ಮನೆಗಳು. ಚಳಿಗಾಲವಾದ್ದರಿಂದ ಹೊಲಗಳು ಕಟಾವು ಮುಗಿಸಿಕೊಂಡು ಬಣ್ಣಗುಂದಿದ್ದವು. ಆದರೆ ಆ ಬಣ್ಣಗಳೆಲ್ಲ ಮನೆಗಳಲ್ಲಿ ಪ್ರತಿಫಲಿಸುತ್ತಿದ್ದವು. ಕಲ್ಲು-ಮಣ್ಣಿನ ಗೋಡೆಗಳು, ಅವುಗಳಿಗೆ ಮರದ ಪಟ್ಟಿಗಳ ಅಲಂಕಾರ, ಕಮಾನು ಕಿಟಕಿ ಬಾಗಿಲುಗಳು, ಕಂದು, ಕೆಂಪು, ಹಳದಿ ಬಣ್ಣ ಎದ್ದು ಕಾಣುವ ಚಿತ್ರಗಳು ಮತ್ತು ಕೆತ್ತನೆ ಕೆಲಸಗಳು, ಸಿಜಿಐ ಶೀಟುಗಳನ್ನು ಇಳಿಜಾರಾಗಿ ಜೋಡಿಸಿದ ಮಾಡು... ಹೆಚ್ಚಿನ ಮನೆಗಳದ್ದೂ ಒಂದೇ ರೂಪ. ಅಲ್ಲಿನ ಮಳೆ, ಗಾಳಿ ಮತ್ತು ಚಳಿಯನ್ನು ತಡೆದುಕೊಳ್ಳುವುದಕ್ಕೆ ಅಂತಹ ಶೀಟುಗಳನ್ನು ಬಳಸುವುದು ಅನಿವಾರ್ಯ ಎಂದು ವಿವರಿಸುತ್ತಿದ್ದರು ಪೆಮಾ. ಯಾವುದೇ ಕಟ್ಟಡ- ಖಾಸಗಿಯಿರಲಿ, ಸರ್ಕಾರದ್ದಿರಲಿ, ವಾಸದ ಮನೆಯಾಗಿರಲಿ, ವಾಣಿಜ್ಯ ಉದ್ದೇಶದ್ದೇ ಇರಲಿ - ಭೂತಾನಿನ ಪರಂಪರೆ ಮತ್ತು ಸಂಸ್ಕೃತಿಯನ್ನು ಚೆನ್ನಾಗಿ ಬಿಂಬಿಸುವ ಕಲಾತ್ಮಕತೆ ಇರಲೇಬೇಕು, ಇಲ್ಲವಾದರೆ ಅಂತಹ ನಿರ್ಮಾಣಕ್ಕೆ ಸರ್ಕಾರ ಅನುಮತಿಯೇ ನೀಡುವುದಿಲ್ಲ ಎಂದರವರು.

ರಸ್ತೆಯ ಅಕ್ಕಪಕ್ಕ, ಗುಡ್ಡ ಮತ್ತು ಕಟ್ಟಡಗಳ ಮೇಲೆ ವಿವಿಧ ಬಣ್ಣಗಳ ಧ್ವಜಗಳು, ಧ್ವಜಗಳಿಂದಲೇ ಮಾಡಿದ ಬಣ್ಣಬಣ್ಣದ ತೋರಣಗಳು ಸಾಮಾನ್ಯವಾಗಿದ್ದವು. ಧ್ವಜಗಳಲ್ಲಿ ಹುಲಿ, ಕುದುರೆ, ಸಿಂಹ, ಗರುಡ ಮೊದಲಾದ ಪ್ರಾಣಿ-ಪಕ್ಷಿಗಳ ಚಿತ್ರಗಳು, ಝೋಂಕಾ ಭಾಷೆಯ ಅಕ್ಷರಗಳಿದ್ದವು. “ಇವೆಲ್ಲ ಭೂತಾನೀಯರ ಧಾರ್ಮಿಕ ನಂಬಿಕೆಯ ಸಂಕೇತಗಳು. ಈ ಪ್ರಾಣಿಪಕ್ಷಿಗಳೆಲ್ಲ ಶಕ್ತಿ ಹಾಗೂ ಶೌರ್ಯದ ಪ್ರತೀಕಗಳು. ಅವುಗಳ ಮೇಲಿರುವುದು ವಿವಿಧ ಬಗೆಯ ಮಂತ್ರಾಕ್ಷರಗಳು” ಎಂದು ವಿವರಿಸಿದರು ಪೆಮಾ.

“ಶಕ್ತಿಗಾಗಿ, ದೀರ್ಘಾಯಸ್ಸಿಗಾಗಿ ಪ್ರಾರ್ಥಿಸಿ ಜನರು ಧ್ವಜಗಳನ್ನು ನೆಡುತ್ತಾರೆ. ಇನ್ನು ಬೆಟ್ಟಗಳ ಮೇಲೆ ಕಾಣುವ ಬೆಳ್ಳನೆಯ ಧ್ವಜಗಳು ತೀರಿ ಹೋದ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರಿಗಾಗಿ ಸ್ಥಳೀಯರು ನೆಟ್ಟ ಧ್ವಜಗಳು. ಆರ್ಥಿಕವಾಗಿ ಸಾಮಾನ್ಯ ಹಿನ್ನೆಲೆಯವರು ಅಳಿದ ಕುಟುಂಬಸ್ಥರಿಗಾಗಿ ಒಂದೋ ಎರಡೋ ಧ್ವಜ ನೆಡುತ್ತಾರೆ; ಶ್ರೀಮಂತರು ನೂರಾರು ಧ್ವಜಗಳನ್ನು ಸ್ಥಾಪಿಸುವುದುಂಟು...” ಪೆಮಾ ಕಥೆಗಳು ಕುತೂಹಲಕರವಾಗಿದ್ದವು, ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟಿಸುತ್ತಿದ್ದವು.

ಅಷ್ಟು ಹೊತ್ತಿಗೆ ನಾವು ಟೈಗರ್ಸ್ ನೆಸ್ಟ್ ಪರ್ವದ ತಪ್ಪಲಿಗೆ ತಲುಪಿದ್ದೆವು. ಅಲ್ಲಿ ಅದಾಗಲೇ ಸಾಕಷ್ಟು ವಾಹನಗಳು ತುಂಬಿಕೊಂಡಿದ್ದವು. ಎಲ್ಲವೂ ಪ್ರವಾಸಿ ವಾಹನಗಳು. ನಮ್ಮ ಕಾರ್ ಪಾರ್ಕ್ ಮಾಡಲು ಸಾಕಷ್ಟು ಹೆಣಗಾಡಬೇಕಾಯಿತು. ಕೊನೆಗೆ ಪೆಮಾ ಸ್ವಲ್ಪ ದೂರದಲ್ಲಿದ್ದ ಒಂದು ಟಿಂಬರ್ ಅಂಗಡಿಯ ವ್ಯಕ್ತಿಯನ್ನು ವಿನಂತಿಸಿಕೊಂಡು ಅವರ ಕಾಂಪೌಂಡಿನೊಳಗೆ ಕಾರ್ ನಿಲ್ಲಿಸಿದರು.

ಮೂರು ಸಾವಿರ ಉಳಿಯಿತು:

ಪರ್ವತ ಏರುವ ಮುನ್ನ ನಾವು ಪ್ರವೇಶ ಶುಲ್ಕ ಪಾವತಿಸಬೇಕಿತ್ತು. ‘ನೀವು ಭೂತಾನಿನ ಅಧಿಕೃತ ಅತಿಥಿಗಳು. ನಿಮಗೆ ವಿನಾಯಿತಿ ಕೊಡಬಹುದು’ ಎಂದ ಪೆಮಾ ಅವರು ಟಿಕೆಟ್ ಕೌಂಟರಿನಲ್ಲಿ ನಮ್ಮನ್ನು ‘ಮಾಸ್ಸ್ ಡ್ಯಾನ್ಸ್ ಅಧ್ಯಯನ ಮಾಡಲು ಭಾರತದಿಂದ ಬಂದಿರುವ ಯಕ್ಷಗಾನ ಕಲಾವಿದರು; ನಮ್ಮ ಸರ್ಕಾರದ ಅಧಿಕೃತಿ ಅತಿಥಿಗಳು’ ಎಂದು ಪರಿಚಯಿಸಿದರು. ಸಂಸ್ಕೃತಿ ಇಲಾಖೆಯ ಅಧಿಕಾರಿ ಸೋನಂ ಅವರಿಗೆ ಕರೆ ಮಾಡಿ ಟಿಕೆಟ್ ಕೌಂಟರಿನವರೊಂದಿಗೆ ಸಂಪರ್ಕಿಸಿದರು. ಭೂತಾನಿನ ಎಲ್ಲ ಪಾರಂಪರಿಕ ಮತ್ತು ಪ್ರವಾಸಿ ತಾಣಗಳು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ಬರುತ್ತವಾದ್ದರಿಂದ ಯಾವುದೇ ವಿನಾಯಿತಿಗೂ ಅವರ ಅನುಮತಿ ಅಗತ್ಯ. ಅವರ ದೂರವಾಣಿ ಕರೆ ಕೆಲಸ ಮಾಡಿತು. ಪರ್ವತ ಏರುವ ಪ್ರವೇಶ ಶುಲ್ಕದಿಂದ ನಮಗೆ ವಿನಾಯಿತಿ ದೊರೆಯಿತು. ‘ನೋಡಿ ನಿಮಗೆ ಮೂರು ಸಾವಿರ ಉಳಿಸಿದೆ’ ಎಂದು ತಮಾಷೆ ಮಾಡಿದರು ಪೆಮಾ.

ಟಿಕೆಟ್ ಕೌಂಟರ್ ಆಸುಪಾಸಿನಲ್ಲಿ ಕೆಲವು ಕುದುರೆಗಳೊಂದಿಗೆ ಜನರು ಕಾಯುತ್ತಿದ್ದರು. ಕಾಲ್ನಡಿಗೆಯಲ್ಲಿ ಪರ್ವತ ಏರಲಾಗದವರು ಈ ಕುದುರೆಗಳ ಸಹಾಯ ಪಡೆಯಬಹುದು. ಆದರೆ ಅವರಿಗೆ ಹಣಕಾಸಿನ ಅನುಕೂಲ ಕೂಡ ಇರಬೇಕು. ‘ಕೆಲವು ತಿಂಗಳ ಹಿಂದೆ ಒಬ್ಬರು ಪ್ರವಾಸಿ ಮಹಿಳೆ ಪರ್ವತ ಏರುವಾಗ ಕುದುರೆಯಿಂದ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡರು. ಅವರಿಗೇನಾದರೂ ಆಗಿದ್ದರೆ ಕುದುರೆ ಮಾಲೀಕರಿಗೆ ತುಂಬ ಸಮಸ್ಯೆ ಆಗುತ್ತಿತ್ತು. ಆದರೆ ಈ ಘಟನೆಯ ನಂತರ ಸರ್ಕಾರ ಕುದುರೆ ಮಾಲೀಕರಿಗೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಮಾಡಿದೆ’ ಎಂದು ಮಾಹಿತಿ ನೀಡಿದರು ಪೆಮಾ. 

ನಾವಂತೂ ಕುದುರೆಗಳನ್ನೇರುವ ಯೋಚನೆ ಹೊಂದಿರಲಿಲ್ಲ. ನಮ್ಮ ನಡಿಗೆ ಆರಂಭವಾಯಿತು. ಒಂದಷ್ಟು ದೂರ ಮರ ಗಿಡ ಬಯಲಿನ ಹಾದಿ ಮುಗಿದ ಮೇಲೆ ಏರುದಾರಿಯ ಪಯಣ. ಕೊರೆಯುತ್ತಿದ್ದ ಚಳಿ ನಿಧಾನವಾಗಿ ನಮ್ಮನ್ನು ತೊರೆದಂತೆ ಸಣ್ಣಗೆ ಬೆವರು ಮೂಡಲು ಆರಂಭವಾಯಿತು. ಅಲ್ಲಿಯವರೆಗೆ ಟೈಗರ‍್ಸ್ ನೆಸ್ಟ್ ನ ಎತ್ತರ ವಿಸ್ತಾರಗಳ ಅರಿವು ನಮಗಿರಲಿಲ್ಲ. ಹೆಚ್ಚುಕಡಿಮೆ ಒಂದೂವರೆ ಗಂಟೆ ನಡೆಯಬೇಕಾಗುತ್ತದೆ ಎಂಬುದು ಮಾತ್ರ ಗೊತ್ತಿತ್ತು. ಕೆಲವೊಮ್ಮೆ ಅಜ್ಞಾನವೆಂಬುದು ವರವೇ ಹೌದಲ್ಲ! ಮೊದಲೇ ಅದರ ಬಗ್ಗೆ ತುಂಬ ಅಧ್ಯಯನ ಮಾಡಿದ್ದರೆ ‘ನನ್ನಿಂದಾಗದು- ನನ್ನಿಂದಾಗದು’ ಎಂದು ಕಾಲು ಮುಷ್ಕರ ಹೂಡುತ್ತಿತ್ತೇನೋ?

ಒಂದು ಕಿಲೋಮೀಟರಿನಷ್ಟು ಸಾಗುವಷ್ಟರಲ್ಲಿ ನಾವು ಏದುಸಿರು ಬಿಡಲು ಆರಂಭಿಸಿದ್ದೆವು. ಮಗನಿಗೆ ಚಳಿ ಮತ್ತು ಆಯಾಸದ ಪರಿವೆಯೇ ಇರಲಿಲ್ಲ. ಅವನು ಆಗಲೇ ಪೆಮಾ ಅಂಕಲ್ ಜೊತೆಗೆ ಒಳ್ಳೆಯ ಗೆಳೆತನ ಬೆಳೆಸಿಕೊಂಡು ಅವರಿಂದ ಕಥೆಗಳನ್ನು ಕೇಳುತ್ತಾ, ತಾನು ಯಕ್ಷಗಾನದ ಕಥೆಗಳನ್ನು ಹೇಳುತ್ತಾ ಬಿರುಸಾಗಿ ಹೆಜ್ಜೆ ಹಾಕುತ್ತಿದ್ದ. ‘ನೋಡು, ನಾವು ಹೆಚ್ಚಾಗಿ ಕುಳಿತೇ ಕೆಲಸ ಮಾಡುತ್ತೇವೆ. ಅಲ್ಲವೆಂದರೆ ತರಗತಿಯಲ್ಲಿ ನಿಂತುಕೊಂಡು ಪಾಠ, ವಾರಕ್ಕೊಂದು ಯಕ್ಷಗಾನ ಕ್ಲಾಸು. ಅದು ಬಿಟ್ಟರೆ ಎಂತ ವ್ಯಾಯಾಮವೂ ಇಲ್ಲ. ಅದಕ್ಕೇ ನಮಗೆ ನಡೆಯಲಾಗುತ್ತಿಲ್ಲʼ ಎಂದು ನಮ್ಮಷ್ಟಕ್ಕೇ ವಿಶ್ಲೇಷಣೆ ಮಾಡಿಕೊಂಡೆವು.

ಸ್ಕೂಲಿಗೆ ಹೋಗುವಾಗ ಏನಿಲ್ಲವೆಂದರೂ ಪ್ರತಿದಿನ ಐದು-ಹತ್ತು ಕಿ.ಮೀ. ನಡೆದು ಹೋಗುತ್ತಿದ್ದವರು ನಾವು. ಕೆಲವು ವರ್ಷ ಅದು ಹದಿನಾಲ್ಕು ಕಿ.ಮೀ. ತಲುಪಿದ್ದೂ ಉಂಟು. ಅರೆ... ಕಾಲ ಎಷ್ಟು ಬದಲಾಗಿ ಹೋಯಿತು... ಈಗ ಒಂದೆರಡು ಕಿ.ಮೀ. ನಡೆಯುವಷ್ಟರಲ್ಲಿ ಏದುಸಿರು ಬಿಡುತ್ತಿದ್ದೇವಲ್ಲ ಎಂದು ಗತವೈಭವವನ್ನು ನೆನಪಿಸಿಕೊಂಡು ನಕ್ಕೆವು. ಆದರೆ ನಿಜ ವಿಷಯ ಏನೆಂದರೆ ನಾವು ಎತ್ತರೆತ್ತರ ಏರುತ್ತಿದ್ದಂತೆ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿದ್ದುದು, ಮತ್ತು ಅದರಿಂದಾಗಿ ಉಸಿರಾಡಲು ಕಷ್ಟವಾಗುತ್ತಿದ್ದುದು. 

(ಮುಂದುವರಿಯುವುದು)