ಮಂಗಳವಾರ, ಅಕ್ಟೋಬರ್ 31, 2017

ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ 'ಕರ್ನಾಟಕ ಯಕ್ಷಗಾನ ಕವಿಚರಿತ್ರೆ'

ಯಕ್ಷಗಾನ ಕೃತಿ ಪರಿಚಯ ಮಾಲಿಕೆ-2

ಕರ್ನಾಟಕ ಯಕ್ಷಗಾನ ಕವಿಚರಿತ್ರೆ
ಡಾ. ಕಬ್ಬಿನಾಲೆ ವಸಂತ ಭಾರದ್ವಾಜ
ಪ್ರಕಾಶನ: ಯಕ್ಷಗಾನ ಕೇಂದ್ರ, ಶಿವಪ್ರಭಾ, ಹಯಗ್ರೀವನಗರ, ಉಡುಪಿ.
ವರ್ಷ: 2013
ಪುಟಗಳು: 12+259
ಬೆಲೆ: ರೂ. 150

ಕರ್ನಾಟಕದ ಇತಿಹಾಸದಲ್ಲಿ ಬಂದಿರುವ ಯಕ್ಷಗಾನ ಕವಿಗಳ ಮತ್ತು ಅವರು ರಚಿಸಿರುವ ಪ್ರಸಂಗಗಳ ಸಮಗ್ರ ಚಿತ್ರಣ ನೀಡುವ ಅಪರೂಪದ ಕೃತಿಯಿದು. ಈ ಹೊತ್ತಗೆಯನ್ನು ನೋಡಿದ ಮೇಲಾದರೂ, ಯಕ್ಷಗಾನ ಕೃತಿಗಳನ್ನು ಗಂಭೀರ ಸಾಹಿತ್ಯ ಕೃತಿಗಳೆಂದು ಪರಿಗಣಿಸುವಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಯಾವ ಅನುಮಾನವೂ ಉಳಿಯದೆಂದು ನನಗನಿಸುತ್ತದೆ. “ಜಗತ್ತಿನ ಭಾಷೆಗಳಲ್ಲೆಲ್ಲ ಕನ್ನಡ ಸುಸಮೃದ್ಧ ಭಾಷೆಯೆಂಬುದಕ್ಕೆ ‘ಕರ್ನಾಟಕ ಯಕ್ಷಗಾನ ಕವಿಚರಿತ್ರೆ’ಯೇ ನಿರ್ದುಷ್ಟ ನಾಯಕಸಾಕ್ಷಿಯಾಗಿದೆ” ಎಂದು ತಮ್ಮ ಬೆನ್ನುಡಿಯಲ್ಲಿ ಪ್ರೊ. ದೇಜಗೌ ಅತ್ಯಂತ ಸೂಕ್ತವಾಗಿಯೇ ಅಭಿಪ್ರಾಯಪಟ್ಟಿದ್ದಾರೆ.

ಹದಿನಾಲ್ಕನೆಯ ಶತಮಾನಕ್ಕೆ ಸೇರಿದ ಆದಿಪರ್ವಕಾರನಿಂದ ತೊಡಗಿ 1990ರ ದಶಕದ ಪ್ರಸಂಗಕರ್ತೃಗಳವರೆಗೆ ಡಾ. ಭಾರದ್ವಾಜರು ಒಟ್ಟು 903 ಯಕ್ಷಗಾನ ಕವಿಗಳನ್ನೂ ಅವರ ಕೃತಿಗಳನ್ನು ಪಟ್ಟಿಮಾಡಿದ್ದಾರೆ. ಇವರೆಲ್ಲರಿಂದ ರಚಿತವಾಗಿರುವ ಒಟ್ಟು 4,358 ಪ್ರಸಂಗಗಳ ಶೀರ್ಷಿಕೆಗಳು ಈ ಪುಸ್ತಕದಲ್ಲಿ ಲಭ್ಯ ಇವೆ. “ಅಜ್ಞಾತ ಕವಿಗಳ ಸುಮಾರು 300 ಪ್ರಸಂಗಗಳನ್ನು ಸೇರಿಸಿದರೆ ಈ ಸಂಖ್ಯೆ 4658 ಆಗುತ್ತದೆ” ಎನ್ನುವ ಕೃತಿಕಾರರು ಇದನ್ನು “ಯಕ್ಷಗಾನ ಕಾವ್ಯಲೋಕದ ವಿಸ್ತಾರಕ್ಕೆ ಸಾಕ್ಷಿ” ಎಂದು ಬಣ್ಣಿಸಿದ್ದಾರೆ. ಪ್ರತಿಯೊಂದು ಪ್ರಸಂಗದಲ್ಲಿ ಕನಿಷ್ಠ ಸರಾಸರಿ ಇನ್ನೂರೈವತ್ತು ಪದ್ಯಗಳಿವೆಯೆಂದು ಭಾವಿಸಿದರೂ ಪದ್ಯಗಳ ಒಟ್ಟು ಸಂಖ್ಯೆ ಹತ್ತುಲಕ್ಷವನ್ನು ದಾಟುತ್ತದೆ ಎಂದು ಅವರು ಅಂದಾಜಿಸಿದ್ದಾರೆ. ಇದನ್ನು ಪ್ರಸ್ತಾಪಿಸುತ್ತಾ ಪ್ರೊ. ದೇಜಗೌ, “ಈ ಸಂಖ್ಯೆಯೊಂದೇ ಸಾಕು ವಿತತವಿದಗ್ಧರನ್ನು ಅಚ್ಚರಿಗೊಳಿಸುವುದಕ್ಕೆ” ಎಂದಿದ್ದಾರೆ.

ಕೇವಲ ಕರಾವಳಿಯ ಯಕ್ಷಗಾನ ಕವಿಗಳನ್ನಷ್ಟೇ ಅಲ್ಲದೆ ಮಲೆನಾಡು ಮತ್ತು ಬಯಲುಸೀಮೆಯಲ್ಲೂ ಇದ್ದು ಯಕ್ಷಗಾನ ಕೃತಿಗಳನ್ನು ರಚಿಸಿದವರ ಸಂಕ್ಷಿಪ್ತ ವಿವರಗಳನ್ನು ‘ಕವಿಚರಿತ್ರೆ’ ನೀಡುತ್ತದೆ. ಪಡುವಲಪಾಯ ಯಕ್ಷಗಾನದೊಂದಿಗೆ, ದೊಡ್ಡಾಟ, ಸಣ್ಣಾಟ, ಪಾರಿಜಾತ ಮುಂತಾದ ಪ್ರಕಾರಗಳಲ್ಲಿ ಬಂದಿರುವ ಕೃತಿಗಳನ್ನೂ ಇಲ್ಲಿ ಪರಿಗಣಿಸಲಾಗಿದೆ. ಆದರೂ “ಇದನ್ನು ಸಮಗ್ರವೆಂದು ಹೇಳಲಾಗದು. ಏಕೆಂದರೆ ಲಭ್ಯ ಮಾಹಿತಿಗಳ ಆಧಾರದಲ್ಲಷ್ಟೇ ಈ ಪ್ರಯತ್ನವನ್ನು ಕೈಗೊಳ್ಳಲಾಗಿದೆ. ಕಾಲಗರ್ಭದಲ್ಲಿ ಎಷ್ಟೋ ಪ್ರಸಂಗಗಳು ನಾಶವಾಗಿರಬಹುದು. ಹೊಸ ಕಾಲದಲ್ಲಿ ಅನೇಕ ಕವಿಗಳು ತಮ್ಮಷ್ಟಕ್ಕೆ ಪ್ರಸಂಗವನ್ನು ರಚಿಸುತ್ತಿರುವುದರಿಂದ ಮತ್ತು ಎಷ್ಟೋ ಸಂದರ್ಭಗಳಲ್ಲಿ ಅವುಗಳು ಪ್ರಕಟವಾಗದೇ ಇರುವುದರಿಂದ ಕಾಲಕಾಲಕ್ಕೆ ಈ ಗ್ರಂಥವನ್ನು ಇಂತೇದಿತಗೊಳಿಸಬೇಕಾಗುತ್ತದೆ” ಎಂದು ಕೃತಿಕಾರ ವಿನಮ್ರವಾಗಿ ಹೇಳಿದ್ದಾರೆ.

ಕೃತಿಕಾರರ ಹೆಸರು, ಊರು, ಕಾಲನಿರ್ಣಯಕ್ಕೆ ಸಂಬಂಧಿಸಿದಂತೆ ಇರುವ ತಾಂತ್ರಿಕ ತೊಡಕುಗಳ ಬಗೆಗೂ ತಮ್ಮ ಮುನ್ನುಡಿಯಲ್ಲಿ ಡಾ. ಭಾರದ್ವಾಜರು ವಿವರವಾಗಿ ಬರೆದಿದ್ದಾರೆ. ತಂಜಾವೂರಿನ ಅರಸ ರಾಜಾ ರಘುನಾಥ ನಾಯಕ, ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರು, ಬೆಂಗಳೂರು ನಿರ್ಮಾತೃ ಕೆಂಪೇಗೌಡ, ವಿಜಯನಗರದ ದೊರೆ ಹರಿಹರ ಮುಂತಾದವರು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಕುರಿತೂ ಪ್ರಸ್ತಾಪಿಸಿದ್ದಾರೆ. ಆಧುನಿಕ ಕಾಲದಲ್ಲಿ ಅನೇಕ ಪ್ರಸಂಗಗಳಿಗೆ ಕಥಾ ರಚನೆ ಮಾಡಿದವರು ಮತ್ತು ಪದ್ಯಗಳನ್ನು ರಚಿಸಿದವರು ಬೇರೆಬೇರೆಯಾಗಿರುವುದರಿಂದ ಯಾರನ್ನು ಪ್ರಸಂಗಕರ್ತೃ ಎಂದು ಕರೆಯಬೇಕೆಂದು ಉಂಟಾಗಿರುವ ಗೊಂದಲದ ಬಗೆಗೂ ಮಾತನಾಡಿದ್ದಾರೆ.

ಕನ್ನಡವಲ್ಲದೆ ತುಳು, ಕೊಂಕಣಿ, ಹಿಂದಿ, ಮರಾಠಿ, ಸಂಸ್ಕೃತ, ಇಂಗ್ಲಿಷ್, ಹವಿಗನ್ನಡ ಭಾಷೆಗಳಲ್ಲೂ ಯಕ್ಷಗಾನ ಪ್ರಸಂಗಗಳು ರಚಿತವಾಗಿರುವ ಮಾಹಿತಿ ನೀಡಿದ್ದು, ಯಕ್ಷಗಾನದ ವ್ಯಾಪ್ತಿ ವಿಸ್ತಾರವನ್ನು ತೋರಿಸುತ್ತದೆ. ಪೌರಾಣಿಕ, ಐತಿಹಾಸಿಕ, ಜಾನಪದೀಯ ಕಥೆಗಳು, ಸಾಮಾಜಿಕ/ಕಾಲ್ಪನಿಕ ಪ್ರಸಂಗಗಳು ಯಕ್ಷಗಾನ ಸಮುದ್ರದ ಆಳ-ಅಗಲಗಳಿಗೆ ಸಾಕ್ಷಿಯಾಗಿವೆ. “ರಾಜಮಹಾರಾಜರಿಂದ ತೊಡಗಿ ಸಂನ್ಯಾಸಿಗಳವರೆಗೆ, ಬಾಲಕರಿಂದ ಹಿಡಿದು ವೃದ್ಧರವರೆಗೆ ಎಲ್ಲ ಸ್ತರದ ಕವಿಗಳು ಪ್ರಸಂಗರಚನೆ ಮಾಡಿದ್ದಾರೆ. ಬ್ರಾಹ್ಮಣರು, ವೀರಶೈವರು, ದಲಿತರು, ಬಿಲ್ಲವರು, ಬಂಟರು, ಒಕ್ಕಲಿಗರು, ಜೈನರು, ರಜಪೂತರು, ಮುಸಲ್ಮಾನರು, ಕ್ರೈಸ್ತರು ಹೀಗೆ ಸಮಾಜದ ಎಲ್ಲ ವರ್ಗಗಳ ಕವಿಗಳು ಯಕ್ಷಗಾನ ಕೃತಿರಚನೆ ಮಾಡಿದ್ದಾರೆ. ಮಹಿಳೆಯರೂ ಈ ದಿಸೆಯಲ್ಲಿ ಪ್ರಯತ್ನ ಮಾಡಿದ್ದಾರೆ. ದಕ್ಷಿಣದ ಗಡಿನಾಡಾದ ಕೇರಳದ ಕುಂಬಳೆಯಿಂದ ತೊಡಗಿ ಉತ್ತರದ ಬೀದರಿನವರೆಗೆ, ಪಶ್ಚಿಮದ ಕಡಲತಡಿಯ ಗೋಕರ್ಣದಿಂದ ಪೂರ್ವದ ಕೃಷ್ಣಗಿರಿಯವರೆಗೆ ಸರ್ವತ್ರ ಕನ್ನಡ ಯಕ್ಷಗಾನ ಕವಿಗಳ ಕಾವ್ಯಕೃಷಿ ನಡೆದಿದೆ” ಎಂಬ ಡಾ. ಭಾರದ್ವಾಜರ ಮಾಹಿತಿ ಯಕ್ಷಗಾನದ ಹರವಿಗೆ ಮತ್ತಷ್ಟು ಪುಷ್ಟಿ ನೀಡುತ್ತದೆ.

ಪುಸ್ತಕದ ನಡುನಡುವೆ ಪ್ರಮುಖ ಕವಿಗಳ ಕೃತಿಗಳ ಆಯ್ದ ಪದ್ಯಗಳನ್ನು ಕೊಡಲಾಗಿದ್ದು ಕೃತಿಯ ಒಟ್ಟಾರೆ ತೂಕ, ಸ್ವಾರಸ್ಯ ಹೆಚ್ಚಿದೆ.  ಕೊನೆಯಲ್ಲಿ, ಕೊನೆಗೆ ಕವಿಗಳ ಅಕಾರಾದಿ ಪಟ್ಟಿಯಿದ್ದು ಬಳಕೆಗೆ ಅನುಕೂಲಕರವಾಗಿದೆ. ಯಕ್ಷಗಾನ, ಸಾಹಿತ್ಯಾಸಕ್ತರಿಗೆ, ಸಂಶೋಧಕರಿಗೆ ನೆರವಾಗಬಲ್ಲ ವೈಶಿಷ್ಟ್ಯಪೂರ್ಣ ಕೃತಿ ಇದೆಂಬುದು ನಿಚ್ಚಳ. ದೇಜಗೌ ಹೇಳಿರುವಂತೆ, ಈ ಕೃತಿಯನ್ನು ರಚಿಸಿ ಡಾ. ಭಾರದ್ವಾಜರು  ನಿಜಕ್ಕೂ ಎಲ್ಲ ಕನ್ನಡಿಗರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.

(ವಿ. ಸೂ.: ಇದು ಪುಸ್ತಕದ ಪರಿಚಯವೇ ಹೊರತು ವಿಮರ್ಶೆಯಲ್ಲ.)
ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ