ಸಿಬಂತಿ ಪದ್ಮನಾಭ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಿಬಂತಿ ಪದ್ಮನಾಭ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಫೆಬ್ರವರಿ 26, 2023

ಶ್ರೀಧರ ಡಿ.ಎಸ್. ಅವರ 'ಮಾತಿನ ಕಲೆ ತಾಳಮದ್ದಲೆ'

ಪುಸ್ತಕ: ಮಾತಿನ ಕಲೆ ತಾಳಮದ್ದಳೆ
ಲೇಖಕರು: ಶ್ರೀಧರ ಡಿ.ಎಸ್.
ಪ್ರಕಾಶಕರು: ಅಯೋಧ್ಯಾ ಪಬ್ಲಿಕೇಶನ್ಸ್, ಬೆಂಗಳೂರು
ಪ್ರಕಟಣೆಯ ವರ್ಷ: 2023
ಪುಟಗಳು: 156
ಬೆಲೆ: ರೂ. 180

ಕೆಲವು ಪುಸ್ತಕಗಳನ್ನು ನೋಡಿದ ಕೂಡಲೇ ಓದಬೇಕು ಅನಿಸುವುದುಂಟು; ಅಂಥವನ್ನು ಓದಿದ ಕೂಡಲೇ ನಾಕು ಮಂದಿಗೆ ಹೇಳಬೇಕು ಅನಿಸುವುದುಂಟು. ಹಿರಿಯರಾದ ಶ್ರೀ ಶ್ರೀಧರ ಡಿ.ಎಸ್. ಅವರ 'ಮಾತಿನ ಕಲೆ ತಾಳಮದ್ದಳೆ' ಪುಸ್ತಕದ ವಿಷಯದಲ್ಲೂ ಹೀಗೆಯೇ ಆಯಿತು.

ಇದು ಇತ್ತೀಚೆಗೆ (ಫೆಬ್ರವರಿ 11-12, 2023) ಉಡುಪಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ ಬಿಡುಗಡೆ ಆಯಿತು. ನಿನ್ನೆ-ಇವತ್ತು ಕೂತು ಓದಿಯೂ ಆಯಿತು. ಅವರು ಈ ಪುಸ್ತಕದ ಕುರಿತು ಹೇಳತೊಡಗಿದ ದಿನಗಳಿಂದಲೇ ಇದನ್ನು ಓದುವ ಕುತೂಹಲ ಇತ್ತು.

ತಾಳಮದ್ದಳೆಯ ಕುರಿತು ಕೆಲವೇ ಕೆಲವು ಸಂಶೋಧನೆಗಳು, ಕೃತಿಗಳು ಬಂದಿವೆ. ಅವುಗಳ ವ್ಯಾಪ್ತಿ, ಉದ್ದೇಶಗಳಿಗೆ ಹೋಲಿಸಿದರೆ ಈ ಪುಸ್ತಕ ತುಂಬ ಭಿನ್ನವಾದದ್ದು. ತಾಳಮದ್ದಳೆಯನ್ನು ಒಂದು ಐತಿಹಾಸಿಕ ಕ್ರಮದಿಂದ ನೋಡುತ್ತಾ ಹೋಗುತ್ತದಾದರೂ ಇದು ಅಕಡೆಮಿಕ್ ಇತಿಹಾಸಕಾರರು ಬರೆಯುವ ಇತಿಹಾಸ ಪುಸ್ತಕದ ಮಾದರಿಯನ್ನು ಅನುಸರಿಸಿಲ್ಲ.

ಇತಿಹಾಸದ ಬರೆವಣಿಗೆಗಳಲ್ಲಿ ಢಾಳಾಗಿ ಕಾಣುವ ಇಸವಿಗಳು ಇಲ್ಲಿ ಹರಡಿಕೊಂಡಿಲ್ಲ (ತೀರಾ ಅಗತ್ಯವಿರುವಲ್ಲಿ ಮತ್ತು ಸಾಧ್ಯವಿರುವಲ್ಲಿ ಇಸವಿಗಳು ಬಂದಿವೆ). ಹಾಗೆಂದು ಇದು ಕಾಲವನ್ನು ನಿರ್ಲಕ್ಷಿಸಿಯೂ ಇಲ್ಲ. ಸ್ಥೂಲವಾಗಿ ಇಲ್ಲಿ ಕಾಣುವುದು ನಾನು ತುಸು ಹೆಚ್ಚು ಇಷ್ಟಪಡುವ ಸಾಮಾಜಿಕ ಇತಿಹಾಸ. ಕಳೆದ ವರ್ಷ ಪ್ರಕಟವಾದ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರ 'ಉಲಿಯ ಉಯ್ಯಾಲೆ'ಯಲ್ಲಿ ಇಂತಹದೇ ಒಂದು ವಿಧಾನ ಇದ್ದಿತಾದರೂ, ಅದು ಹೆಚ್ಚು ಆತ್ಮಕಥನದ ಸ್ವರೂಪದಲ್ಲಿತ್ತು.

ತಾಳಮದ್ದಲೆಯೆಂಬ 'ವಿದ್ವತ್ ಕ್ರೀಡೆ' ಹೇಗೆ ಹುಟ್ಟಿಕೊಂಡಿರಬಹುದೆಂಬ ಜಿಜ್ಞಾಸೆಯಿಂದ ತೊಡಗಿ, ಅದು ಬೇರೆಬೇರೆ ತಲೆಮಾರುಗಳಲ್ಲಿ ಹೇಗೆ ಬೆಳೆದು ಬಂತೆಂಬುದನ್ನು ಬಹು ಸರಳವಾಗಿ ಹೇಳುತ್ತಾ ಹೋಗಿದ್ದಾರೆ ಲೇಖಕರು. ನವಿರು ಹಾಸ್ಯ ಅವರ ಬರೆವಣಿಗೆಯ ಸ್ಥಾಯೀಗುಣ. ಹಾಗಾಗಿ ಪುಸ್ತಕದ ಓದು ಎಲ್ಲೂ ನೀರಸ ಅನಿಸುವುದಿಲ್ಲ. ಹಿಂದಿನ ಕಾಲದ ತಾಳಮದ್ದಳೆಗಳ ಸ್ವಾರಸ್ಯಕರ ಘಟನೆಗಳನ್ನು ಅವರು ಅಲ್ಲಲ್ಲಿ ನೆನಪಿಸಿಕೊಂಡಿರುವುದರಿಂದ ಓದಿನ ನಡುವೆ ಆಗಾಗ ನಗೆಬುಗ್ಗೆ ಚಿಮ್ಮುವುದೂ ಇದೆ.

ಪ್ರವೇಶ ಮತ್ತು ಮುಕ್ತಾಯದ ಹೊರತಾಗಿ, ಹಿಂದಣ ಹೆಜ್ಜೆ, ಹೊಸ ಹೆಜ್ಜೆ, ಶೇಣಿ-ಸಾಮಗ ಯುಗ, ತಾಳಮದ್ದಳೆಯ ನವಯುಗ, ಸಂಘಟನೆ, ಹಿಮ್ಮೇಳ, ತಾಳಮದ್ದಳೆಯಲ್ಲಿ ಹಾಸ್ಯ, ಸ್ತ್ರೀಪಾತ್ರಗಳ ನಿರ್ವಹಣೆ - ಇತ್ಯಾದಿ ಅಧ್ಯಾಯಗಳಿವೆ. ಕಾಲಕ್ಕೆ ಸಂದ ಮಹಾನುಭಾವರ ವಿವರ, ಸಮಕಾಲೀನರ ಕುರಿತ ಉಪಯುಕ್ತ ಮಾಹಿತಿಗಳಿವೆ. ವಿಶ್ವರಂಗಭೂಮಿಯಲ್ಲೇ ಅತ್ಯಂತ ವಿಶಿಷ್ಟವೆನಿಸಿರುವ ಈ ಅದ್ಭುತ ಕಲೆ ಅಪ್ರಬುದ್ಧ ನಡೆಗಳಿಂದ ತನ್ನ ಘನತೆಯನ್ನು ಕಳೆದುಕೊಳ್ಳಬಾರದು ಎಂಬ ಕಾಳಜಿಯೂ ಅಲ್ಲಲ್ಲಿ ಮಿಂಚಿದೆ.

ಆದರೆ ಯಕ್ಷಗಾನದ್ದಾಗಲೀ, ತಾಳಮದ್ದಳೆಯದ್ದಾಗಲೀ ಇತಿಹಾಸವನ್ನು ಬರೆಯುವಲ್ಲಿ ದೊಡ್ಡದೊಂದು ತೊಡಕಿದೆ. ಅದೇನೆಂದರೆ, ಈ ಕ್ಷೇತ್ರದಲ್ಲಿ ಸಶಕ್ತ ದಾಖಲೀಕರಣ ಆಗದೆ ಇರುವುದು. ಕ್ಯಾಸೆಟ್ ಕಾಲದಿಂದ ಡಿಜಿಟಲ್ ಯುಗದವರೆಗಿನ ಕಳೆದ ಅರ್ಧಶತಮಾನದ ಅವಧಿಯಲ್ಲಿ ನಡೆದ ದಾಖಲೀಕರಣ ಬಿಟ್ಟರೆ ಅದಕ್ಕಿಂತ ಹಿಂದಿನದನ್ನು ತಿಳಿದುಕೊಳ್ಳುವುದಕ್ಕೆ ನಮಗೆ ಮತ್ತೆ ಹಿರಿಯರ ನೆನಪೇ ಆಧಾರ. ಯಕ್ಷಗಾನ ಯಾ ತಾಳಮದ್ದಳೆ ಕ್ಷೇತ್ರದ ಆಯಾಯ ಕಾಲದ ವೈಶಿಷ್ಟ್ಯಗಳನ್ನು ಕೃತಿರೂಪದಲ್ಲಿ ದಾಖಲಿಸಿಡುವ ಕೆಲಸ ಆದದ್ದು ಕಮ್ಮಿ. ಬಹುಶಃ ಎಲ್ಲ ಮೌಖಿಕ ಕಲಾಸಂಪ್ರದಾಯಗಳ ವಿಚಾರದಲ್ಲೂ ಇರುವ ಸಮಸ್ಯೆ ಇದೇ.

ಹೀಗಾಗಿ, ಸಾಕಷ್ಟು ವಿಚಾರಗಳಿಗೆ ಪ್ರಸ್ತುತ ಕೃತಿಯ ಲೇಖಕರೂ ತಾವು ಕೇಳಿದ, ಓದಿದ ವಿಚಾರಗಳನ್ನೇ ಸ್ಮರಣೆಯಿಂದ ಹೆಕ್ಕಿ ಬರೆದಿದ್ದಾರೆ. ಪ್ರಕಟಿತ ಆಕರಗಳಲ್ಲಿ ಲಭ್ಯವಿರುವ ಮಾಹಿತಿಗಳನ್ನು ಅಗತ್ಯವಿರುವಲ್ಲಿ ಉಲ್ಲೇಖಿಸಿದ್ದಾರೆ. "ಬರೆವಣಿಗೆಗೆ ತೊಡಗಿದಾಗ ನನಗೆ ಎದುರಾದುದೇ ಮಾಹಿತಿಯ ಕೊರತೆ. ಹಳೆಯ ತಲೆಮಾರು ಮತ್ತು ಇಂದಿನ ಹೊಸಬರ ನಡುವಿನ ಒಂದು ತಲೆಮಾರಿನ ಕೊಂಡಿಯೇ ಇಲ್ಲದಂತೆ ಭಾಸವಾಯಿತು" ಎಂದು ಲೇಖಕರೇ ಹೇಳಿಕೊಂಡಿದ್ದಾರೆ. ಆದರೂ ಅವರು ಮಾಡಿರುವುದು ದೊಡ್ಡ ಕೆಲಸವೇ. ಯಕ್ಷಗಾನ/ ತಾಳಮದ್ದಳೆಯ ಇತಿಹಾಸವನ್ನು ಇನ್ನೂ ವಿಸ್ತಾರವಾಗಿ, ಇನ್ನೂ ಸಮಗ್ರವಾಗಿ ರಚಿಸಲು ಇಂತಹ ಕೃತಿಗಳೇ ನೀಲನಕ್ಷೆಗಳು. ತಮ್ಮ ಏಳು ದಶಕಗಳ ಜೀವನದ ಬಹುಭಾಗವನ್ನೂ ಕಲಾವಿದ, ಕವಿ, ಲೇಖಕ, ಸಂಘಟಕರಾಗಿ ಕಳೆದಿರುವ ಶ್ರೀಯುತರಿಂದ ಈ ಕೃತಿ ಬಂದಿರುವುದು ಯಕ್ಷಗಾನಕ್ಕೆ ಆಗಿರುವ ಲಾಭ.

"ವಿಸ್ತಾರವಾದ ಇತಿಹಾಸವಿರುವ ಎಲ್ಲ ಕಲೆಗಳೂ ಈ ಬಗೆಯ ಬದಲಾವಣೆಗೆ ತೆರೆದುಕೊಂಡೇ ಇರಬೇಕಾಗುತ್ತದೆ. ಯಾವುದನ್ನೂ ಒಂದು ನಿರ್ದಿಷ್ಟ ಕಾಲಮಾನದಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ. ಸಣ್ಣ ತೊರೆ ಸಮುದ್ರವಾಗಬಹುದು. ಆದರೆ ಸಮುದ್ರದ ಅಸ್ತಿತ್ವಕ್ಕೆ ತೊರೆಯೂ ಅಗತ್ಯ. ತೊರೆ ಹರಿಯುತ್ತಲೇ ಇರುತ್ತದೆ. ಸಮುದ್ರ ಮೊರೆಯುತ್ತಲೇ ಇರುತ್ತದೆ" (ಪು. 30) ಎಂಬ ಸಾಲುಗಳು ಈ ಕೃತಿಯ ಅತ್ಯಂತ ಮಹತ್ವದ ಮಾತು ಎಂದು ನನಗನಿಸಿತು.

ಇಂತಹದೊಂದು ಕೃತಿಗಾಗಿ ಲೇಖಕರಿಗೆ, ಪ್ರಕಾಶಕರಿಗೆ ನನ್ನ ವಂದನೆಗಳು.

ಸೋಮವಾರ, ಏಪ್ರಿಲ್ 4, 2022

ಉಲಿಯ ಉಯ್ಯಾಲೆ: ತಾಳಮದ್ದಳೆಯೆಂಬ ಮೋಹಕ ಲೋಕ

  • ಪುಸ್ತಕ: ಉಲಿಯ ಉಯ್ಯಾಲೆ
  • ಲೇಖಕರು: ರಾಧಾಕೃಷ್ಣ ಕಲ್ಚಾರ್
  • ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು
  • ಬೆಲೆ: ರೂ. 170
  • ಪ್ರಥಮ ಮುದ್ರಣ: 2022

ಉಲಿಯ ಉಯ್ಯಾಲೆ’ ಎಂಬ ಶೀರ್ಷಿಕೆಯಿಂದಲೇ ಆಕರ್ಷಿಸಲ್ಪಟ್ಟವನು ನಾನು. ಮಾರುಕಟ್ಟೆಯ ದೃಷ್ಟಿಯಿಂದ ನೋಡುವುದಾದರೆ ಪುಸ್ತಕದ ಯಶಸ್ಸಿನಲ್ಲಿ ಶೀರ್ಷಿಕೆಯ ಪಾಲೂ ಇದೆಯಂತೆ. ಆದರೆ ಈ ಪುಸ್ತಕ ಇಷ್ಟವಾಗುವುದಕ್ಕೆ ಹಲವು ಕಾರಣಗಳುಂಟು.

ಕಲ್ಚಾರರು ತಮ್ಮ ಉಲಿಯ ಉಯ್ಯಾಲೆಗೆ ‘ತಾಳಮದ್ದಳೆಯೆಂಬ ಮೋಹಕ ಲೋಕ’ ಎಂಬ ಉಪಶೀರ್ಷಿಕೆ ನೀಡಿದ್ದಾರೆ. ಈ ಪುಸ್ತಕವನ್ನು ಏನೆಂದು ಕರೆಯಬೇಕೆಂದು ಯೋಚಿಸಿದೆ. ಇದು ಆತ್ಮಕಥೆಯೇ?  ಕಾದಂಬರಿಯೇ? ಕಥಾಸಂಕಲನವೇ? ಅಂಕಣಗಳ ಸಂಕಲನವೇ? ತಾಳಮದ್ದಳೆಯ ಇತಿಹಾಸ ಕಥನವೇ? ಈ ಕಲಾಪ್ರಕಾರದ ಭೂತ-ವರ್ತಮಾನಗಳನ್ನು ವಿಶ್ಲೇಷಿಸುವ ವಿಮರ್ಶಾ ಕೃತಿಯೇ?

ಪ್ರತಿಯೊಂದು ಪ್ರಶ್ನೆಗೂ ಒಂದು ಕಡೆಯಿಂದ ಹೌದು ಅಂತಲೂ, ಇನ್ನೊಂದು ಕಡೆಯಿಂದ ಅಲ್ಲ ಅಂತಲೂ ಹೇಳಬೇಕೆಂದು ಅನಿಸುತ್ತದೆ. ಇದು ಇವುಗಳಲ್ಲಿ ಯಾವುದೂ ಅಲ್ಲ, ಮತ್ತು ಎಲ್ಲವೂ ಹೌದು. ಇದು ಇವೆಲ್ಲವುಗಳ ಹೊಸದೊಂದು ಮಿಶ್ರಣ ಅಂತಾದರೂ ಕರೆಯಬಹುದು.

ಆತ್ಮಕಥೆಯೇ? ಇದಕ್ಕೆ ಅಂತಹದೊಂದು ಲಕ್ಷಣ ಇದೆ. ಯಕ್ಷಗಾನದ ಬೀಜ ಬಿತ್ತಲ್ಪಟ್ಟ ಬಾಲ್ಯದ ರೋಚಕ ಪರಿಸರದ ವಿವರಣೆಗಳಿಂದ ತೊಡಗಿ ತಾನು ತಾಳಮದ್ದಳೆಯ ಲೋಕದಲ್ಲಿ ಸಾಗಿಬಂದ ಹಾದಿಯ ಸಿಂಹಾವಲೋಕನವನ್ನು ಲೇಖಕರು ಮಾಡಿದ್ದಾರೆ. ಆದರೆ ಅವರ ಒಟ್ಟಾರೆ ಬದುಕಿನ ಚಿತ್ರಣವಿಲ್ಲ. ಪತ್ರಕರ್ತರಾಗಿ, ಕಥೆಗಾರರಾಗಿ, ಲೇಖಕರಾಗಿ, ಅಧ್ಯಾಪಕರಾಗಿ ಅವರ ಅನುಭವಗಳು ಇಲ್ಲಿ ಬರುವುದಿಲ್ಲ. ಯಕ್ಷಗಾನ ಬದುಕಿನ ವಿವರಗಳೂ ಕಟ್ಟುನಿಟ್ಟಾಗಿ ಕಾಲಾನುಕ್ರಮಣಿಕೆಯ ವ್ಯವಸ್ಥೆಯಲ್ಲಿ ಇಲ್ಲ. ಇದು ತಮ್ಮ ಆತ್ಮಕಥೆಯೇನೂ ಅಲ್ಲವೆಂಬುದನ್ನು ಲೇಖಕರೇ ಸ್ಪಷ್ಟಪಡಿಸಿದ್ದಾರೆ. ಆದರೆ ಇಲ್ಲಿಯ ಶೈಲಿ ಶುದ್ಧ ಆತ್ಮನಿವೇದನೆಯದ್ದು.

ಹಾಗೆಂದು ಇದನ್ನೊಂದು ಸುಲಲಿತ ಕಾದಂಬರಿಯನ್ನಾಗಿಯೂ, ಮೂವತ್ತು ಬಿಡಿ ಲೇಖನ ಅಥವಾ ಸಣ್ಣಸಣ್ಣ ಕಥೆಗಳನ್ನಾಗಿಯೂ ಓದಿಕೊಳ್ಳಬಹುದು. ಪೂರ್ತಿಯಾಗಿ ಓದಿದ ಮೇಲೆ ತಾಳಮದ್ದಳೆಯೆಂಬ ರಂಗಭೂಮಿಯ ಕಳೆದ ಕೆಲವು ದಶಕಗಳ ಒಟ್ಟಾರೆ ಸಾಂಸ್ಕೃತಿಕ ಇತಿಹಾಸದಂತೆಯೂ, ತಾಳಮದ್ದಳೆಯ ಭೂತ-ವರ್ತಮಾನಗಳ ಗಂಭೀರ ತುಲನೆಯಂತೆಯೂ ತೋರಬಹುದು. ನನಗೆ ಹೆಚ್ಚುಕಡಿಮೆ ಇದೇ ಭಾವನೆ ಬಂತು.

ಯಕ್ಷಗಾನ ಕ್ಷೇತ್ರದ ವಿವಿಧ ಆಯಾಮಗಳ ಕುರಿತು ಬಂದ ಪುಸ್ತಕಗಳು ಬಹಳ. ಆದರೆ ಅವುಗಳಲ್ಲಿ ಚಾರಿತ್ರಿಕ ದೃಷ್ಟಿಕೋನದವು ಕಡಿಮೆ. ಬೇರೆಬೇರೆ ಸಂದರ್ಭಗಳಲ್ಲಿ ಈ ಬಗೆಯ ಪ್ರಯತ್ನಗಳು ಆಂಶಿಕವಾಗಿಯಷ್ಟೇ ನಡೆದಿವೆ. ಅದರಲ್ಲೂ ಯಕ್ಷಗಾನದ ಸಮಗ್ರ ಸಾಮಾಜಿಕ ಇತಿಹಾಸದ ರಚನೆ ಇನ್ನಷ್ಟೇ ಆಗಬೇಕಿದೆ. ವಿಶ್ವವಿದ್ಯಾನಿಲಯ/ ಅಕಾಡೆಮಿಗಳಂತಹ ಸಂಸ್ಥೆಗಳ ಹಂತದಲ್ಲಿ, ದೊಡ್ಡಮಟ್ಟದಲ್ಲಿ ಆಗಬೇಕಾದ ಕೆಲಸವದು. ಈ ಕೆಲಸ ದೂರದ ಹಿಮಾಲಯದಂತೆ ಕಂಡರೂ ಎಂದಾದರೊಂದು ದಿನ ಅದರಲ್ಲಿ ತೊಡಗಿಸಿಕೊಳ್ಳಬೇಕು ಎಂಬ ದೊಡ್ಡ ಆಸೆ ನನಗಿದೆ. ಈ ಯೋಚನೆ ಮನಸ್ಸಿನಲ್ಲಿ ಸದಾ ಗುಂಯ್ ಗುಡುವ ಕಾರಣದಿಂದಲೋ ಏನೋ, ‘ಉಲಿಯ ಉಯ್ಯಾಲೆ’ ಒಂದು ಮಹತ್ವದ ಕೃತಿಯಾಗಿ ನನಗೆ ಕಂಡಿತು.

ಮೇಲ್ನೋಟಕ್ಕೆ ಒಬ್ಬ ಯಕ್ಷಗಾನ ಕಲಾವಿದ (ಮುಖ್ಯವಾಗಿ ತಾಳಮದ್ದಳೆ ಕಲಾವಿದ) ಆ ರಂಗಭೂಮಿಯತ್ತ ಆಕರ್ಷಿತನಾಗಿ, ಅದರೊಂದಿಗೆ ಬೆಳೆದ, ಕಂಡ ಏರಿಳಿತಗಳ, ಪಡೆದ ಅನುಭವಗಳ ಇತಿವೃತ್ತವಾಗಿ ಈ ಕೃತಿ ಕಂಡರೂ, ಅದರನ್ನು ಜನರಲೈಸ್ ಮಾಡಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಇದಕ್ಕೆ ಆತ್ಮಚರಿತ್ರೆಗಿಂತ ಹೆಚ್ಚಿನ ವ್ಯಾಪ್ತಿ ಇದೆ; ಯಕ್ಷಗಾನದ ಸಾಮಾಜಿಕ ಇತಿಹಾಸದ ಭಾಗವಾಗುವ ಶಕ್ತಿ ಇದೆ.

ತಮ್ಮ ಬಾಲ್ಯದ ನೆನಪುಗಳನ್ನು ಹೇಳಿಕೊಂಡ ಮೊದಲ ಐದಾರು ಅಧ್ಯಾಯಗಳಂತೂ ನನಗೆ ವೈಯಕ್ತಿಕವಾಗಿ ಆಪ್ತವೆನಿಸಿದವು. ಕಾರಣ ಅಂತಹದೇ ಬಾಲ್ಯದ ಪರಿಸರ ನನ್ನದೂ ಆಗಿದ್ದದ್ದು. ಬಹುಶಃ ನನ್ನಂತಹವರ ಮತ್ತು ಇದಕ್ಕಿಂತ ಹಿಂದಿನ ತಲೆಮಾರಿನ, ಗ್ರಾಮೀಣ ಪ್ರದೇಶಗಳಿಂದ ಬಂದ ಬಹುತೇಕರ ಬಾಲ್ಯವೂ ಹೀಗೆಯೇ ಇದ್ದಿರಬೇಕು. ವಿಸ್ಮಯದ ಕಲ್ಪನಾಲೋಕವನ್ನು ಕಟ್ಟಿಕೊಟ್ಟ ಅಜ್ಜನ ಕಥೆಗಳು, ಚಂದಮಾಮ, ಆಟ ನೋಡುವ ಹುಚ್ಚು, ಶಾಲಾ ವಾರ್ಷಿಕೋತ್ಸವದ ಯಕ್ಷಗಾನ ಸಂಭ್ರಮ.. ಇದೆಲ್ಲ ನಮ್ಮ ಕಥೆಯೇ ಅಲ್ಲವೇ ಎಂದು ಓದಿದವರಲ್ಲಿ ಹಲವರಿಗೆ ಅನ್ನಿಸಿರಬಹುದು.

ಆತ್ಮಕಥೆ, ಸಾಮಾಜಿಕ ಇತಿಹಾಸದ ಆಚೆಗೂ ಉಲಿಯ ಉಯ್ಯಾಲೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವುದಕ್ಕೆ ಅದರೊಳಗೆ ಅಂತಃಸ್ರೋತವಾಗಿರುವ ವೈಚಾರಿಕತೆಯೂ ಕಾರಣ. ಈ ವೈಚಾರಿಕತೆಯನ್ನು ಪ್ರತಿಫಲಿಸುವ ಮಾತುಗಳು ಅಲ್ಲಿಂದ ಇಲ್ಲಿಂದ ಉದ್ಧರಿಸಿದವಲ್ಲ. ಬರವಣಿಗೆಯ ಓಘಕ್ಕೆ ಸಹಜವಾಗಿ ಹುಟ್ಟಿಕೊಂಡ ಮನಸ್ಸಿನ ಯೋಚನೆಗಳು. ಬೇಲಿಯ ಮೇಲೆ ತಣ್ಣಗೆ ಪಲ್ಲವಿಸಿದ ಬಳ್ಳಿಗಳ ನಡುವೆ ಅರಳಿಕೊಂಡ ವರ್ಣಮಯ ಪುಷ್ಪಗಳಂತೆ ಅವು ಥಟ್ಟನೆ ಸೆಳೆಯುತ್ತವೆ. ಮನಸ್ಸಿನಲ್ಲಿ ಗಟ್ಟಿಯಾಗಿ ಕೂರುತ್ತವೆ.

ಅಂತಹ ಒಂದೆರಡನ್ನು ಓದುವಾಗ ಗುರುತು ಮಾಡಿಕೊಂಡೆ:

  • ಮೂಲತಃ ಮನುಷ್ಯನಲ್ಲಿ ಇಲ್ಲದಿರುವ ಏನನ್ನೂ ಪರಿಸರ ಬಿತ್ತಲಾರದು (ಪು. 18)
  • ನಾವಿರುವ ಈಗಿನ ತಲೆಮಾರು ಸಾಂಸ್ಕೃತಿಕ ಆಸಕ್ತಿ ಕಳೆದುಕೊಡಿದೆ ಎಂದು ಅಳುತ್ತಿದ್ದೇವೆ. ಅವರಲ್ಲಿ ಆಸಕ್ತಿ ಮೂಡುವುದಕ್ಕೆ ಅಡಿಪಾಯ ಹಾಕುವುದನ್ನೂ ಮರೆತಿದ್ದೇವೆ (ಪು. 23).
  • ಯಾವುದು ನಮ್ಮ ಪ್ರವೃತ್ತಿಗೆ ಒಲಿಯುತ್ತದೋ ಅದನ್ನು ಪರಿಶ್ರಮದಿಂದ ವೃದ್ಧಿಸಿಕೊಳ್ಳಬೇಕಲ್ಲದೆ ನಾನು ಪ್ರತಿಯೊಂದರಲ್ಲೂ ಪರಿಣತಿ ಸಾಧಿಸುತ್ತೇನೆಂಬ ಹಠಕ್ಕೆ ಬಿದ್ದರೆ ಯಾವುದರಲ್ಲೂ ಏಳಿಗೆಯಾಗುವುದಿಲ್ಲ (ಪು. 58-59)
  • ನಮ್ಮ ಹವ್ಯಾಸದ ಕುರಿತು ತೀರಾ ಮೋಹ ಇಟ್ಟುಕೊಳ್ಳುವುದು ಆರೋಗ್ಯಕರವಲ್ಲ (ಪು. 99)
  • ಆದರ್ಶವನ್ನು ಸಾಧಿಸಹೊರಟವನ ಮಾತು ಅರಣ್ಯರೋದನವಾಗುತ್ತದೆ. ಜನರನ್ನು ಮೆಚ್ಚಿಸಹೊರಟವನಿಗೆ ಆತ್ಮಸಾಕ್ಷಿ ಚುಚ್ಚುತ್ತದೆ (ಪು. 142)
  • ಹಳಸಿದ್ದನ್ನು ತಿಂದು ಹೊಟ್ಟೆನೋವು ಬಂದರೆ ತಿಂದವನ ವಿವೇಕ ಪ್ರಶ್ನಾರ್ಹವೇ ಹೊರತು ಹಳಸಿದ ಆಹಾರದ ಅಪರಾಧವಲ್ಲ (ಪು. 147)

ಈ ಬಗೆಯ ಹೊಳಹುಗಳು ತುಂಬ ಇವೆ. ಎಲ್ಲವನ್ನೂ ಇಲ್ಲೇ ಬರೆದರೆ ಮುಂದೆ ಓದುವವರಿಗೆ ಏನೂ ಉಳಿಸದಂತೆ ಆದೀತು. ಪುಸ್ತಕದ ಕೊನೆಯ ಒಂದಷ್ಟು ಲೇಖನಗಳಲ್ಲಿ ತನ್ನ ಅನುಭವವನ್ನು ಹೇಳಿಕೊಳ್ಳುತ್ತಲೇ ಒಟ್ಟಾರೆ ಕ್ಷೇತ್ರದ ವರ್ತಮಾನದ ಪರಿಸ್ಥಿತಿಯ ಅವಲೋಕನವನ್ನೂ ಮಾಡಿದ್ದಾರೆ. ಇತ್ತೀಚೆಗೆ ಬಂದ ಅವರ ‘ಅರ್ಥಾಲೋಕ’ ಈ ವೈಚಾರಿಕತೆಯ ವಿಸ್ತರಣೆಯಂತೆ ಇದೆ.

ಆತ್ಮನಿವೇದನೆ ಅಹಮಿಕೆಯ ಪ್ರದರ್ಶನ ಆಗಬಾರದು ಎಂಬ ಎಚ್ಚರ ತಮಗೆ ಇರುವುದಾಗಿ ಲೇಖಕರು ಪುಸ್ತಕದ ಆರಂಭದಲ್ಲೂ ಕೊನೆಯಲ್ಲೂ ಹೇಳಿಕೊಂಡಿದ್ದಾರೆ. ಅದಕ್ಕೆ ಅವರು ಸಾಕಷ್ಟು ಪ್ರಯತ್ನಪಟ್ಟಿರುವುದು ಗೊತ್ತಾಗುತ್ತದೆ. ನನಗೆ ಇಷ್ಟವಾದ ವಿಷಯವೆಂದರೆ, ಕೆಲವು ಘಟನೆಗಳನ್ನು ನೆನಪಿಸಿಕೊಳ್ಳುತ್ತ ಅವರು ‘ಅಲ್ಲಿ ನಾನು ಪಾಠ ಕಲಿತೆ’, ‘ಇಲ್ಲಿ ನನ್ನ ಅಹಮಿಕೆಗೆ ಪೆಟ್ಟು ಬಿತ್ತು’, ‘ಅಂದು ನಾನು ಹಾಗೆ ಮಾಡಬಾರದಿತ್ತು’ ಇತ್ಯಾದಿಯಾಗಿ ಹೇಳಿರುವುದು. ಪುಸ್ತಕದ ಕೊನೆಯ ಅಧ್ಯಾಯದ ಶೀರ್ಷಿಕೆಯೇ ‘ಮನ್ನಿಸೆನ್ನಪರಾಧವ’ ಎಂದು. ಅನೇಕ ಆತ್ಮಕಥಾರೂಪದ ಕೃತಿಗಳಲ್ಲಿ ಬರೆಹಗಾರ ತನ್ನ ಕುರಿತ ಉದಾತ್ತ ಚಿತ್ರಣವೊಂದನ್ನು ಮಾತ್ರ ಕೊಡಲು ಪ್ರಯತ್ನಿಸುತ್ತಾನೆ. ನೆಗೆಟಿವ್ ಅಂಶಗಳನ್ನು ಯಥಾಸಾಧ್ಯ ಮರೆಮಾಚುತ್ತಾನೆ. ಇದು ಹಾಗಿಲ್ಲದಿರುವುದು ನನ್ನಲ್ಲಿ ಅಚ್ಚರಿಯನ್ನೂ ಮೂಡಿಸಿತು.

ಇಂತಹ ಕೃತಿಗಳು ಕಲ್ಚಾರರಿಂದ ಹಾಗೂ ಇತರ ಕಲಾವಿದರಿಂದ ಇನ್ನಷ್ಟು ಬರಲಿ ಎಂಬುದು ನನ್ನ ಆಶಯ. ತಮ್ಮ ಅನುಭವಗಳನ್ನು ಒಂದು ಚೌಕಟ್ಟಿನಲ್ಲಿಟ್ಟು ಒಂದಷ್ಟು ಕಲಾವಿದರರು ಪ್ರಸ್ತುತಪಡಿಸಲು ಸಾಧ್ಯವಾದರೆ ಅದು ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಆದೀತು.

ಅಕ್ಷರ ಪ್ರಕಾಶನ ಎಂದಿನಂತೆಯೇ ಈ ಪುಸ್ತಕವನ್ನೂ ಅಚ್ಚುಕಟ್ಟಾಗಿ ಮುದ್ರಿಸಿದೆ. ರಕ್ಷಾಪುಟ ಸೊಗಸಾಗಿದೆ. ಆಸಕ್ತರು ಪುಸ್ತಕಕ್ಕಾಗಿ ಕೃತಿಕಾರ ರಾಧಾಕೃಷ್ಣ ಕಲ್ಚಾರ್ ಅವರನ್ನು (ಮೊ.: 9449086653) ಸಂಪರ್ಕಿಸಿ.

- ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಆಗಸ್ಟ್ 21, 2020

ತರತಮ ಭಾವದ ನಿರರ್ಥಕತೆಯನ್ನು ಸಾರುವ 'ಪಲಾಂಡು ಚರಿತ್ರೆ'

ಚಿತ್ರಕೃಪೆ: ಶ್ಯಾಮ್ ಪ್ರಸಾದ್ ಕುಂಚಿನಡ್ಕ

ಶಾಶ್ವತ ಮೌಲ್ಯವಿರುವ ಕೃತಿ ಎಷ್ಟೇ ಹಳತಾದರೂ ಪ್ರಸ್ತುತವಾಗಬಲ್ಲುದು ಎಂಬುದಕ್ಕೆ ಕೆರೋಡಿ ಸುಬ್ಬರಾಯರಪಲಾಂಡು ಚರಿತ್ರೆಉತ್ತಮ ಉದಾಹರಣೆ. ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಇತ್ತೀಚೆಗೆ ರಂಗಕ್ಕೆ ತಂದ ಸುಮಾರು ಒಂದು ಶತಮಾನ ಹಳೆಯದಾದ ಯಕ್ಷಗಾನ ಪ್ರಸಂಗ ಪ್ರತಿಯೊಬ್ಬ ಜೀವಿಗೂ ಇರಬೇಕಾದ ಸಸ್ವರೂಪಜ್ಞಾನ, ವರ್ಗ ಸಂಘರ್ಷದ ಅರ್ಥಹೀನತೆ, ಸಹಬಾಳ್ವೆಯ ಅನಿವಾರ್ಯತೆಗಳನ್ನು ಎತ್ತಿಹಿಡಿದಿದೆ (ಕೆಲ ವರ್ಷಗಳ ಹಿಂದೆ ಹೊಸ್ತೋಟ ಭಾಗವತರು ಮಾಡಿದ ಪ್ರಯೋಗದ ಬಗ್ಗೆ ಕೊನೆಯಲ್ಲಿ ಬರೆದಿದ್ದೇನೆ).

ಮೇಲ್ನೋಟಕ್ಕೆ ಸರಳ ಕಥಾಹಂದರ ಹೊಂದಿರುವಪಲಾಂಡು ಚರಿತ್ರೆತನ್ನೊಳಗೆ ಗಟ್ಟಿ ತಿರುಳನ್ನು ಇಟ್ಟುಕೊಂಡಿದೆ. ಮಣ್ಣಿನಡಿಯಲ್ಲಿ ಬೆಳೆಯುವ ಕಂದಮೂಲಗಳು ಹಾಗೂ ನೆಲದ ಮೇಲೆ ಬೆಳೆಯುವ ಹಣ್ಣುತರಕಾರಿಗಳ ನಡುವೆ ನಡೆಯುವ ಶ್ರೇಷ್ಠತೆ-ಕನಿಷ್ಠತೆಗಳ ವಾಗ್ವಾದವನ್ನು ಪ್ರಸಂಗ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದೆ. ಶಿವನು ಪಾರ್ವತಿಗೆ ಕಥೆಯನ್ನು ಹೇಳುವ ಫ್ಲಾಶ್ ಬ್ಯಾಕ್ ತಂತ್ರವನ್ನು ಪ್ರಸಂಗ ಅನುಸರಿಸಿದೆ.


ಚೂತರಾಜ (ಮಾವಿನಹಣ್ಣು) ನೆಲದ ಮೇಲಿನವರ ಮುಖ್ಯಸ್ಥ; ತಾನೇ ಶ್ರೇಷ್ಠನೆಂ ಒಣಹಮ್ಮು ಅವನಿಗೆ. ಪಲಾಂಡು (ಈರುಳ್ಳಿ) ನೆಲದಡಿಯವರ ನೇತಾರ. ಎರಡೂ ವರ್ಗದವರ ನಡುವೆ ವಾಗ್ವಾದ ನಡೆದು ಯುದ್ಧದ ಹಂತಕ್ಕೆ ಹೋಗಿ, ಕೊನೆಗೆ ಪರಿಹಾರಕ್ಕಾಗಿ ಶ್ರೀಕೃಷ್ಣನನ್ನು ಭೇಟಿಮಾಡುವ ಸನ್ನಿವೇಶ ಒದಗುತ್ತದೆ.

ಕೃಷ್ಣ ತಕ್ಷಣಕ್ಕೆ ಯಾವ ಪರಿಹಾರವನ್ನೂ ಸೂಚಿಸದೆ ಮೂರು ದಿನ ಇತ್ತಂಡದವರೂ ತನ್ನ ವಿಶ್ರಾಂತಿಧಾಮದಲ್ಲಿ ತಂಗುವಂತೆ ಸೂಚಿಸುತ್ತಾನೆ. ಮೂರು ದಿನ ಕಳೆಯುವ ಹೊತ್ತಿಗೆ ಚೂತರಾಜನ ಬಳಗದವರೆಲ್ಲ (ಮಾವು, ಹಲಸು, ಕುಂಬಳ, ಬೆಂಡೆ, ಮುಂತಾದವರು) ಬಾಡಿ ಕೊಳೆತು ನಾರುವ ಪರಿಸ್ಥಿತಿ ಬಂದರೆ, ಪಲಾಂಡುವಿನ ಬಳಗದವರೆಲ್ಲ (ಈರುಳ್ಳಿ, ಸುವರ್ಣಗಡ್ಡೆ, ಮೂಲಂಗಿ, ಗೆಣಸು, ಮುಂತಾದವರು) ಚಿಗುರಿ ನಳನಳಿಸಲು ಆರಂಭಿಸುತ್ತಾರೆ.

-ಎಂಬಲ್ಲಿಗೆ ಪರಿಹಾರ ತಾನಾಗಿಯೇ ಒದಗಿತಲ್ಲ ಎಂದು ಬುದ್ಧಿವಂತಿಕೆಯ ನಗೆಯಾಡುತ್ತಾನೆ ಶ್ರೀಕೃಷ್ಣ. ಜಗತ್ತಿನಲ್ಲಿ ಮೇಲು-ಕೀಳು ಎಂಬುದೇ ಇಲ್ಲ, ಎಲ್ಲವೂ ಇರುವುದು ಅವರವರ ಭಾವದಲ್ಲಿ ಎಂಬುದನ್ನು ಇತ್ತಂಡದವರಿಗೂ ಮನದಟ್ಟು ಮಾಡಿಸಿ ಕಳಿಸುತ್ತಾನೆ. ಇದು ಪ್ರಸಂಗದ ಸಾರಾಂಶ.

ಯಾವುದೇ ಪ್ರಸಂಗ ಅರ್ಥಪೂರ್ಣವಾಗುವುದು ಅದರ ಆಶಯವನ್ನು ಅರ್ಥಮಾಡಿಕೊಂಡಿರುವ ಕಲಾವಿದರಿಂದ ಎಂಬುದನ್ನು ಸಿರಿಬಾಗಿಲು ಪ್ರತಿಷ್ಠಾನದ ಪ್ರದರ್ಶನ ಮತ್ತೆ ಶ್ರುತಪಡಿಸಿದೆ. ಕೃಷ್ಣನಾಗಿ ಶ್ರೀ ವಾಸುದೇವ ರಂಗ ಭಟ್, ಚೂತರಾಜನಾಗಿ ಶ್ರೀ ರಾಧಾಕೃಷ್ಣ ನಾವಡ ಮಧೂರು, ಪಲಾಂಡುವಾಗಿ ಶ್ರೀ ಪೆರ್ಮುದೆ ಜಯಪ್ರಕಾಶ ಶೆಟ್ಟಿ ತಮ್ಮ ಒಟ್ಟಾರೆ ಮಾತುಗಳಿಂದ ಪ್ರಸಂಗದ ತಿರುಳನ್ನು ತುಂಬ ಮಾರ್ಮಿಕವಾಗಿ ಪ್ರೇಕ್ಷಕರೆದುರು ಬಿಚ್ಚಿಟ್ಟಿದ್ದಾರೆ.

ಸುಲಿದ ಮೇಲೆ ಸಾರವೇನು ಎಂದು ವೇದ್ಯವಾಗುವ ವರ್ಗ ನಿನ್ನದು (ಮಾವಿನ ಕುರಿತಾಗಿ); ಬಿಡಿಸಿದಂತೆ ಅಂತರಂಗ ಅರ್ಥವಾಗುವ ವರ್ಗ ನಿನ್ನದು (ಈರುಳ್ಳಿ ಕುರಿತಾಗಿ)” ಎನ್ನುತ್ತಾ ಕೃಷ್ಣ (ವಾಸುದೇವ ರಂಗ ಭಟ್) ಮಾವು ಮತ್ತು ಈರುಳ್ಳಿಗಳ ಸ್ವರೂಪವನ್ನು ಸೊಗಸಾಗಿ ಕಟ್ಟಿಕೊಡುತ್ತಾನೆ.

ಎತ್ತರದಲ್ಲಿರುವುದು ಹಗುರವಾಗಿರುವುದಕ್ಕೂ ಸಾಧ್ಯ; ಭಾರವಾದದ್ದು ಎತ್ತರದ ಸ್ಥಾನವನ್ನು ಹೊಂದುವುದೂ ಸಾಧ್ಯ. ತಾನಿರುವುದು ಎತ್ತರದಲ್ಲಿ ಎಂಬುದರಿಂದಲೇ ಮೌಲ್ಯ ನಿರ್ಣಯ ಮಾಡಬೇಕಿಲ್ಲಎಂದು ಇನ್ನೊಂದೆಡೆ ಕೃಷ್ಣ ಹೇಳುತ್ತಾನೆ.

ಸುಗುಣ ಎಂದರೆ ತನ್ನನ್ನು ತಾನು ಬಿಟ್ಟುಕೊಡದೆ ಇನ್ನೊಬ್ಬನನ್ನು ಒಪ್ಪುವುದು. ಎತ್ತರದಲ್ಲಿ ಇರುವುದು ಬಾಗುವುದಕ್ಕೆ, ಬಯಸಿದವರಿಗೆ ಲಭ್ಯವಾಗುವುದಕ್ಕೆ. ಪ್ರಕೃತಿ ಇರುವುದೇ ಪರೋಪಕಾರಕ್ಕೆ. ಭಗವಂತನ ಸೃಷ್ಟಿಯಲ್ಲಿ ಯಾವುದೂ ಶ್ರೇಷ್ಠವಲ್ಲ, ಯಾವುದೂ ಕನಿಷ್ಠವಲ್ಲಎನ್ನುತ್ತಾ ಚೂತ-ಪಲಾಂಡುಗಳ ಚರ್ಚೆಗೆ ಮಂಗಳ ಹಾಡುವ ಕೃಷ್ಣ ವಾಸ್ತವವಾಗಿ ಇಡೀ ಮಾನವ ಸಮಾಜ ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂದೇಶವನ್ನು ಸಾರುತ್ತಾನೆ.

ಒಂದು ಕೃತಿ ಮತ್ತು ಪ್ರದರ್ಶನದ ಯಶಸ್ಸಿಗೆ ಇಷ್ಟು ಸಾಕಲ್ಲವೇ? ಇದನ್ನೇ ಆರಂಭದಲ್ಲಿ ಸಾರ್ವಕಾಲಿಕ ಮೌಲ್ಯ ಎಂದಿರುವುದು. ಧಾರ್ಮಿಕ ಕಲೆಯಾಗಿ ಬೆಳೆದು ಬಂದ ಯಕ್ಷಗಾನದಲ್ಲಿ ನೂರು ವರ್ಷಗಳ ಹಿಂದೆಯೇ ಇಂತಹದೊಂದು ಕಾಲ್ಪನಿಕ/ ಸಾಮಾಜಿಕ ಪ್ರಸಂಗದ ಕಲ್ಪನೆಯನ್ನು ಮಾಡಿದ ಕೆರೋಡಿ ಸುಬ್ಬರಾಯರು, ಮತ್ತು ಅದನ್ನು ಪ್ರದರ್ಶನಕ್ಕೆ ಒಳಪಡಿಸಿದ ಸಿರಿಬಾಗಿಲು ಪ್ರತಿಷ್ಠಾನದ ಶ್ರೀ ರಾಮಕೃಷ್ಣ ಮಯ್ಯರು ನಿಸ್ಸಂಶಯವಾಗಿ ಪ್ರಶಂಸೆಗೆ ಅರ್ಹರು. ಹೈದರಾಬಾದಿನ ಕನ್ನಡ ನಾಟ್ಯರಂಗ ಸಂಸ್ಥೆ ಪ್ರದರ್ಶನಕ್ಕೆ ಪ್ರಧಾನ ಪ್ರಾಯೋಜಕತ್ವ ನೀಡಿದೆ.

ಮಂಗಳೂರು ಮೂಲದ ಕೆರೋಡಿ ಸುಬ್ಬರಾಯರು (1863-1928) ‘ಗವಾನಂದಎಂಬ ಕಾವ್ಯನಾಮವನ್ನು ಹೊಂದಿದ್ದರು. ಶೃಂಗಾರಶತಕ, ಸೌಭಾಗ್ಯವತೀ ಪರಿಣಯ, ಸಮೂಲ ಭಾಷಾಂತರ, ಅನುಕೂಲ ಸಿಂಧು, ಶ್ರೀಕೃಷ್ಣ ಜೋಗುಳ ಮುಂತಾದ ಕೃತಿಗಳನ್ನೂ, ಜರಾಸಂಧವಧೆ, ಕುಮಾರಶೇಖರ, ತಾರಾನಾಥ ಎಂಬ ಯಕ್ಷಗಾನ ಪ್ರಸಂಗಗಳನ್ನೂ ರಚಿಸಿದ್ದರು (ಮಾಹಿತಿ: ಡಾ. ಕಬ್ಬಿನಾಲೆ ವಸಂತ ಭಾರದ್ವಾಜರಕರ್ನಾಟಕ ಯಕ್ಷಗಾನ ಕವಿಚರಿತ್ರೆ’). 'ಪಲಾಂಡು ಚರಿತ್ರೆ'ಯನ್ನು ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯ 1930ರಲ್ಲಿ ಪ್ರಕಟಿಸಿತ್ತು.

ಪಲಾಂಡು ಚರಿತ್ರೆಯನ್ನು ದಿ| ಹೊಸ್ತೋಟ ಮಂಜುನಾಥ ಭಾಗವತರುಪಲಾಂಡು ವಿಜಯಎಂಬ ಹೆಸರಿನಲ್ಲಿ ಒಮ್ಮೆ ರಂಗಕ್ಕೆ ತಂದಿದ್ದರು. ಮುಂದೆ ಅದನ್ನೇ ಸ್ವಲ್ಪ ಬದಲಿಸಿಸಸ್ಯ ಸಂಧಾನಎಂಬ ಪ್ರಸಂಗವನ್ನು ರಚಿಸಿದ್ದರು. ಅದನ್ನು ಶಿರಸಿಯ ಸಹ್ಯಾದಿ ಕಾಲೋನಿ ಮಕ್ಕಳ ಯಕ್ಷಗಾನ ತಂಡ (‘ಸಮಯ ಸಮೂಹ’) ಮೂಲಕ ಪ್ರದರ್ಶಿಸಿದ್ದರು (ಮಾಹಿತಿ: ‘ಒಡಲಿನ ಮಡಿಲು ಯಕ್ಷತಾರೆ: ಬಯಲಾಟದ ನೆನಪುಗಳುಪುಟ 70). ತಾವುನಿಸರ್ಗ ಸಂಧಾನದಂತಹ ಕಾಲ್ಪನಿಕ ಪ್ರಸಂಗಗಳನ್ನು ರಚಿಸಲುಪಲಾಂಡು ಚರಿತ್ರೆಯಂತಹ ಪ್ರಯತ್ನಗಳೇ ಪ್ರೇರಣೆ ಎಂದು ಹೊಸ್ತೋಟ ಭಾಗವತರು ಹೇಳಿಕೊಂಡಿದ್ದಾರೆ.

ಇಂತಹ ಹಳೆಯ ಪ್ರಸಂಗಗಳನ್ನು ಪತ್ತೆ ಮಾಡಿ ಪ್ರಯೋಗಕ್ಕೆ ಒಳಪಡಿಸುವ ನವೀನ ದೃಷ್ಟಿಕೋನಕ್ಕೂ ಯಕ್ಷಗಾನದ ಇತಿಹಾಸದಲ್ಲಿ ಮಹತ್ವದ ಸ್ಥಾನ ಇದೆ. ಕೋರೋನ ಕಾಲದಲ್ಲಿ ಡಿಜಿಟಲ್ ಮಾಧ್ಯಮದ ಸಾಧ್ಯತೆಗಳನ್ನೂ ಪ್ರಯತ್ನ ಎತ್ತಿತೋರಿಸಿದೆ. ಆದ್ದರಿಂದ ಗುಣಮಟ್ಟದ ಛಾಯಾಗ್ರಹಣ ಮತ್ತು ಪ್ರಸಾರವೂ ಇಲ್ಲಿ ಅಭಿನಂದನೀಯ.

'ಪಲಾಂಡು ಚರಿತ್ರೆ' ವೀಡಿಯೋವನ್ನು ಇಲ್ಲಿ ವೀಕ್ಷಿಸಬಹುದು:

 https://www.youtube.com/watch?v=8-Vq7LX8rnc 

 ಸಿಬಂತಿ ಪದ್ಮನಾಭ


ಮಂಗಳವಾರ, ಅಕ್ಟೋಬರ್ 31, 2017

ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ 'ಕರ್ನಾಟಕ ಯಕ್ಷಗಾನ ಕವಿಚರಿತ್ರೆ'

ಯಕ್ಷಗಾನ ಕೃತಿ ಪರಿಚಯ ಮಾಲಿಕೆ-2

ಕರ್ನಾಟಕ ಯಕ್ಷಗಾನ ಕವಿಚರಿತ್ರೆ
ಡಾ. ಕಬ್ಬಿನಾಲೆ ವಸಂತ ಭಾರದ್ವಾಜ
ಪ್ರಕಾಶನ: ಯಕ್ಷಗಾನ ಕೇಂದ್ರ, ಶಿವಪ್ರಭಾ, ಹಯಗ್ರೀವನಗರ, ಉಡುಪಿ.
ವರ್ಷ: 2013
ಪುಟಗಳು: 12+259
ಬೆಲೆ: ರೂ. 150

ಕರ್ನಾಟಕದ ಇತಿಹಾಸದಲ್ಲಿ ಬಂದಿರುವ ಯಕ್ಷಗಾನ ಕವಿಗಳ ಮತ್ತು ಅವರು ರಚಿಸಿರುವ ಪ್ರಸಂಗಗಳ ಸಮಗ್ರ ಚಿತ್ರಣ ನೀಡುವ ಅಪರೂಪದ ಕೃತಿಯಿದು. ಈ ಹೊತ್ತಗೆಯನ್ನು ನೋಡಿದ ಮೇಲಾದರೂ, ಯಕ್ಷಗಾನ ಕೃತಿಗಳನ್ನು ಗಂಭೀರ ಸಾಹಿತ್ಯ ಕೃತಿಗಳೆಂದು ಪರಿಗಣಿಸುವಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಯಾವ ಅನುಮಾನವೂ ಉಳಿಯದೆಂದು ನನಗನಿಸುತ್ತದೆ. “ಜಗತ್ತಿನ ಭಾಷೆಗಳಲ್ಲೆಲ್ಲ ಕನ್ನಡ ಸುಸಮೃದ್ಧ ಭಾಷೆಯೆಂಬುದಕ್ಕೆ ‘ಕರ್ನಾಟಕ ಯಕ್ಷಗಾನ ಕವಿಚರಿತ್ರೆ’ಯೇ ನಿರ್ದುಷ್ಟ ನಾಯಕಸಾಕ್ಷಿಯಾಗಿದೆ” ಎಂದು ತಮ್ಮ ಬೆನ್ನುಡಿಯಲ್ಲಿ ಪ್ರೊ. ದೇಜಗೌ ಅತ್ಯಂತ ಸೂಕ್ತವಾಗಿಯೇ ಅಭಿಪ್ರಾಯಪಟ್ಟಿದ್ದಾರೆ.

ಹದಿನಾಲ್ಕನೆಯ ಶತಮಾನಕ್ಕೆ ಸೇರಿದ ಆದಿಪರ್ವಕಾರನಿಂದ ತೊಡಗಿ 1990ರ ದಶಕದ ಪ್ರಸಂಗಕರ್ತೃಗಳವರೆಗೆ ಡಾ. ಭಾರದ್ವಾಜರು ಒಟ್ಟು 903 ಯಕ್ಷಗಾನ ಕವಿಗಳನ್ನೂ ಅವರ ಕೃತಿಗಳನ್ನು ಪಟ್ಟಿಮಾಡಿದ್ದಾರೆ. ಇವರೆಲ್ಲರಿಂದ ರಚಿತವಾಗಿರುವ ಒಟ್ಟು 4,358 ಪ್ರಸಂಗಗಳ ಶೀರ್ಷಿಕೆಗಳು ಈ ಪುಸ್ತಕದಲ್ಲಿ ಲಭ್ಯ ಇವೆ. “ಅಜ್ಞಾತ ಕವಿಗಳ ಸುಮಾರು 300 ಪ್ರಸಂಗಗಳನ್ನು ಸೇರಿಸಿದರೆ ಈ ಸಂಖ್ಯೆ 4658 ಆಗುತ್ತದೆ” ಎನ್ನುವ ಕೃತಿಕಾರರು ಇದನ್ನು “ಯಕ್ಷಗಾನ ಕಾವ್ಯಲೋಕದ ವಿಸ್ತಾರಕ್ಕೆ ಸಾಕ್ಷಿ” ಎಂದು ಬಣ್ಣಿಸಿದ್ದಾರೆ. ಪ್ರತಿಯೊಂದು ಪ್ರಸಂಗದಲ್ಲಿ ಕನಿಷ್ಠ ಸರಾಸರಿ ಇನ್ನೂರೈವತ್ತು ಪದ್ಯಗಳಿವೆಯೆಂದು ಭಾವಿಸಿದರೂ ಪದ್ಯಗಳ ಒಟ್ಟು ಸಂಖ್ಯೆ ಹತ್ತುಲಕ್ಷವನ್ನು ದಾಟುತ್ತದೆ ಎಂದು ಅವರು ಅಂದಾಜಿಸಿದ್ದಾರೆ. ಇದನ್ನು ಪ್ರಸ್ತಾಪಿಸುತ್ತಾ ಪ್ರೊ. ದೇಜಗೌ, “ಈ ಸಂಖ್ಯೆಯೊಂದೇ ಸಾಕು ವಿತತವಿದಗ್ಧರನ್ನು ಅಚ್ಚರಿಗೊಳಿಸುವುದಕ್ಕೆ” ಎಂದಿದ್ದಾರೆ.

ಕೇವಲ ಕರಾವಳಿಯ ಯಕ್ಷಗಾನ ಕವಿಗಳನ್ನಷ್ಟೇ ಅಲ್ಲದೆ ಮಲೆನಾಡು ಮತ್ತು ಬಯಲುಸೀಮೆಯಲ್ಲೂ ಇದ್ದು ಯಕ್ಷಗಾನ ಕೃತಿಗಳನ್ನು ರಚಿಸಿದವರ ಸಂಕ್ಷಿಪ್ತ ವಿವರಗಳನ್ನು ‘ಕವಿಚರಿತ್ರೆ’ ನೀಡುತ್ತದೆ. ಪಡುವಲಪಾಯ ಯಕ್ಷಗಾನದೊಂದಿಗೆ, ದೊಡ್ಡಾಟ, ಸಣ್ಣಾಟ, ಪಾರಿಜಾತ ಮುಂತಾದ ಪ್ರಕಾರಗಳಲ್ಲಿ ಬಂದಿರುವ ಕೃತಿಗಳನ್ನೂ ಇಲ್ಲಿ ಪರಿಗಣಿಸಲಾಗಿದೆ. ಆದರೂ “ಇದನ್ನು ಸಮಗ್ರವೆಂದು ಹೇಳಲಾಗದು. ಏಕೆಂದರೆ ಲಭ್ಯ ಮಾಹಿತಿಗಳ ಆಧಾರದಲ್ಲಷ್ಟೇ ಈ ಪ್ರಯತ್ನವನ್ನು ಕೈಗೊಳ್ಳಲಾಗಿದೆ. ಕಾಲಗರ್ಭದಲ್ಲಿ ಎಷ್ಟೋ ಪ್ರಸಂಗಗಳು ನಾಶವಾಗಿರಬಹುದು. ಹೊಸ ಕಾಲದಲ್ಲಿ ಅನೇಕ ಕವಿಗಳು ತಮ್ಮಷ್ಟಕ್ಕೆ ಪ್ರಸಂಗವನ್ನು ರಚಿಸುತ್ತಿರುವುದರಿಂದ ಮತ್ತು ಎಷ್ಟೋ ಸಂದರ್ಭಗಳಲ್ಲಿ ಅವುಗಳು ಪ್ರಕಟವಾಗದೇ ಇರುವುದರಿಂದ ಕಾಲಕಾಲಕ್ಕೆ ಈ ಗ್ರಂಥವನ್ನು ಇಂತೇದಿತಗೊಳಿಸಬೇಕಾಗುತ್ತದೆ” ಎಂದು ಕೃತಿಕಾರ ವಿನಮ್ರವಾಗಿ ಹೇಳಿದ್ದಾರೆ.

ಕೃತಿಕಾರರ ಹೆಸರು, ಊರು, ಕಾಲನಿರ್ಣಯಕ್ಕೆ ಸಂಬಂಧಿಸಿದಂತೆ ಇರುವ ತಾಂತ್ರಿಕ ತೊಡಕುಗಳ ಬಗೆಗೂ ತಮ್ಮ ಮುನ್ನುಡಿಯಲ್ಲಿ ಡಾ. ಭಾರದ್ವಾಜರು ವಿವರವಾಗಿ ಬರೆದಿದ್ದಾರೆ. ತಂಜಾವೂರಿನ ಅರಸ ರಾಜಾ ರಘುನಾಥ ನಾಯಕ, ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರು, ಬೆಂಗಳೂರು ನಿರ್ಮಾತೃ ಕೆಂಪೇಗೌಡ, ವಿಜಯನಗರದ ದೊರೆ ಹರಿಹರ ಮುಂತಾದವರು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಕುರಿತೂ ಪ್ರಸ್ತಾಪಿಸಿದ್ದಾರೆ. ಆಧುನಿಕ ಕಾಲದಲ್ಲಿ ಅನೇಕ ಪ್ರಸಂಗಗಳಿಗೆ ಕಥಾ ರಚನೆ ಮಾಡಿದವರು ಮತ್ತು ಪದ್ಯಗಳನ್ನು ರಚಿಸಿದವರು ಬೇರೆಬೇರೆಯಾಗಿರುವುದರಿಂದ ಯಾರನ್ನು ಪ್ರಸಂಗಕರ್ತೃ ಎಂದು ಕರೆಯಬೇಕೆಂದು ಉಂಟಾಗಿರುವ ಗೊಂದಲದ ಬಗೆಗೂ ಮಾತನಾಡಿದ್ದಾರೆ.

ಕನ್ನಡವಲ್ಲದೆ ತುಳು, ಕೊಂಕಣಿ, ಹಿಂದಿ, ಮರಾಠಿ, ಸಂಸ್ಕೃತ, ಇಂಗ್ಲಿಷ್, ಹವಿಗನ್ನಡ ಭಾಷೆಗಳಲ್ಲೂ ಯಕ್ಷಗಾನ ಪ್ರಸಂಗಗಳು ರಚಿತವಾಗಿರುವ ಮಾಹಿತಿ ನೀಡಿದ್ದು, ಯಕ್ಷಗಾನದ ವ್ಯಾಪ್ತಿ ವಿಸ್ತಾರವನ್ನು ತೋರಿಸುತ್ತದೆ. ಪೌರಾಣಿಕ, ಐತಿಹಾಸಿಕ, ಜಾನಪದೀಯ ಕಥೆಗಳು, ಸಾಮಾಜಿಕ/ಕಾಲ್ಪನಿಕ ಪ್ರಸಂಗಗಳು ಯಕ್ಷಗಾನ ಸಮುದ್ರದ ಆಳ-ಅಗಲಗಳಿಗೆ ಸಾಕ್ಷಿಯಾಗಿವೆ. “ರಾಜಮಹಾರಾಜರಿಂದ ತೊಡಗಿ ಸಂನ್ಯಾಸಿಗಳವರೆಗೆ, ಬಾಲಕರಿಂದ ಹಿಡಿದು ವೃದ್ಧರವರೆಗೆ ಎಲ್ಲ ಸ್ತರದ ಕವಿಗಳು ಪ್ರಸಂಗರಚನೆ ಮಾಡಿದ್ದಾರೆ. ಬ್ರಾಹ್ಮಣರು, ವೀರಶೈವರು, ದಲಿತರು, ಬಿಲ್ಲವರು, ಬಂಟರು, ಒಕ್ಕಲಿಗರು, ಜೈನರು, ರಜಪೂತರು, ಮುಸಲ್ಮಾನರು, ಕ್ರೈಸ್ತರು ಹೀಗೆ ಸಮಾಜದ ಎಲ್ಲ ವರ್ಗಗಳ ಕವಿಗಳು ಯಕ್ಷಗಾನ ಕೃತಿರಚನೆ ಮಾಡಿದ್ದಾರೆ. ಮಹಿಳೆಯರೂ ಈ ದಿಸೆಯಲ್ಲಿ ಪ್ರಯತ್ನ ಮಾಡಿದ್ದಾರೆ. ದಕ್ಷಿಣದ ಗಡಿನಾಡಾದ ಕೇರಳದ ಕುಂಬಳೆಯಿಂದ ತೊಡಗಿ ಉತ್ತರದ ಬೀದರಿನವರೆಗೆ, ಪಶ್ಚಿಮದ ಕಡಲತಡಿಯ ಗೋಕರ್ಣದಿಂದ ಪೂರ್ವದ ಕೃಷ್ಣಗಿರಿಯವರೆಗೆ ಸರ್ವತ್ರ ಕನ್ನಡ ಯಕ್ಷಗಾನ ಕವಿಗಳ ಕಾವ್ಯಕೃಷಿ ನಡೆದಿದೆ” ಎಂಬ ಡಾ. ಭಾರದ್ವಾಜರ ಮಾಹಿತಿ ಯಕ್ಷಗಾನದ ಹರವಿಗೆ ಮತ್ತಷ್ಟು ಪುಷ್ಟಿ ನೀಡುತ್ತದೆ.

ಪುಸ್ತಕದ ನಡುನಡುವೆ ಪ್ರಮುಖ ಕವಿಗಳ ಕೃತಿಗಳ ಆಯ್ದ ಪದ್ಯಗಳನ್ನು ಕೊಡಲಾಗಿದ್ದು ಕೃತಿಯ ಒಟ್ಟಾರೆ ತೂಕ, ಸ್ವಾರಸ್ಯ ಹೆಚ್ಚಿದೆ.  ಕೊನೆಯಲ್ಲಿ, ಕೊನೆಗೆ ಕವಿಗಳ ಅಕಾರಾದಿ ಪಟ್ಟಿಯಿದ್ದು ಬಳಕೆಗೆ ಅನುಕೂಲಕರವಾಗಿದೆ. ಯಕ್ಷಗಾನ, ಸಾಹಿತ್ಯಾಸಕ್ತರಿಗೆ, ಸಂಶೋಧಕರಿಗೆ ನೆರವಾಗಬಲ್ಲ ವೈಶಿಷ್ಟ್ಯಪೂರ್ಣ ಕೃತಿ ಇದೆಂಬುದು ನಿಚ್ಚಳ. ದೇಜಗೌ ಹೇಳಿರುವಂತೆ, ಈ ಕೃತಿಯನ್ನು ರಚಿಸಿ ಡಾ. ಭಾರದ್ವಾಜರು  ನಿಜಕ್ಕೂ ಎಲ್ಲ ಕನ್ನಡಿಗರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.

(ವಿ. ಸೂ.: ಇದು ಪುಸ್ತಕದ ಪರಿಚಯವೇ ಹೊರತು ವಿಮರ್ಶೆಯಲ್ಲ.)
ಸಿಬಂತಿ ಪದ್ಮನಾಭ ಕೆ. ವಿ.