'ಭೂತಾನ್‌ನಲ್ಲಿ ಯಕ್ಷದೀವಿಗೆʼ
ಪ್ರವಾಸ ಕಥನ-10
ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ
(ಪ್ರಜಾಪ್ರಗತಿ, 29 ಮಾರ್ಚ್ 2026)
(ಮುಂದುವರಿದ ಭಾಗ...)
ರಾತ್ರಿ ಒಂದೂಮುಕ್ಕಾಲಕ್ಕೆಲ್ಲ ನಾವು ಕಾರು ಹತ್ತಿ ಏರ್‌ಪೋರ್ಟ್ ದಿಕ್ಕಿನಲ್ಲಿ ಸಾಗಿದೆವು. ಕತ್ತಲು ಹೊದ್ದು ಮಲಗಿದ್ದ ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿದ್ದರಿಂದ ನಾವು ಅಂದುಕೊಂಡದ್ದಕ್ಕಿಂತ ಬೇಗನೆಯೇ ಅಂದರೆ ಮುಂಜಾನೆ ಮೂರು ಗಂಟೆಗೆ ವಿಮಾನ ನಿಲ್ದಾಣ ತಲುಪಿದೆವು. ದೊಡ್ಡದೊಡ್ಡ ತರಹೇವಾರಿ ಲೈಟುಗಳಿಂದ ಝಗಮಗಿಸುವ ಕೆಂಪೇಗೌಡ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ನಲ್ಲಿ ನಮ್ಮನ್ನೂ ಭಾರೀ ಲಗೇಜುಗಳನ್ನೂ ಇಳಿಸಿ ಕಾರು ವಾಪಸ್ ಹೋಯಿತು.
ಚೆಕ್‌ಇನ್ ವಿಭಾಗಕ್ಕೆ ಹಾಕಬೇಕಿದ್ದ 15 ಕೆಜಿ ಆಸುಪಾಸಿನ ಮೂರು ಸೂಟ್‌ಕೇಸುಗಳು, ಪ್ರಯಾಣದಲ್ಲಿ ನಮ್ಮೊಂದಿಗೆ ಒಯ್ಯಬಹುದಾಗಿದ್ದ ಅಂದಾಜು ಏಳು ಕೆಜಿ ತೂಕದ ಇನ್ನೂ ಮೂರು ಬ್ಯಾಗುಗಳು... ಎಲ್ಲವನ್ನೂ ತಳ್ಳುಗಾಡಿಗೆ ಏರಿಸಿಕೊಂಡು ವಿಮಾನ ನಿಲ್ದಾಣದ ಪ್ಯಾಸೇಜಿನಲ್ಲಿ ಹೆಜ್ಜೆ ಹಾಕಿದೆವು. ಲಗೇಜ್ ಪರಿಶೀಲಿಸುವವರೇನಾದರೂ ಯಕ್ಷಗಾನದ ಗೆಜ್ಜೆಗಳನ್ನು ಮೆಟಲ್ ಎಂದು ಪರಿಗಣಿಸಿ ತಕರಾರು ಮಾಡಿದರೆ ತೆಗೆದು ತೋರಿಸಲು ಅನುಕೂಲವಾಗಲಿ ಎಂದು ಅವುಗಳನ್ನು ಹೆಗಲ ಬ್ಯಾಗುಗಳಲ್ಲೇ ಇಟ್ಟುಕೊಂಡಿದ್ದೆವು. ನಮ್ಮ ನಡಿಗೆಯೊಂದಿಗೆ ಅವೂ ಕೂಡ ಘಲ್ಲುಘಲ್ಲೆನುತಾ ಒಳಗಿನಿಂದಲೇ ಸಣ್ಣಗೆ ಸದ್ದುಮಾಡುತ್ತಿದ್ದವು.
ಲಗೇಜಿನ ತೂಕ ಹೆಚ್ಚಾಗುವ ಭಯದಿಂದ ಖಡ್ಗ, ಬಿಲ್ಲು-ಬಾಣ ಮುಂತಾದವುಗಳನ್ನು ನಾವೇ ಉದ್ದೇಶಪೂರ್ವಕವಾಗಿ ಮನೆಯಲ್ಲಿ ಬಿಟ್ಟು ಬಂದಿದ್ದೆವು. ಬರೀ ತೂಕದ ಪ್ರಶ್ನೆ ಮಾತ್ರ ಅಲ್ಲ, ಏರ್‌ಪೋರ್ಟಿನವರ ಪರಿಭಾಷೆಯಲ್ಲಿ ಇವೆಲ್ಲ ವೆಪನ್ ಆಗಿದ್ದರೆ ಏನು ಗತಿ ಎಂಬ ಆತಂಕವೂ ಇತ್ತು. ಇವೇ ಖಡ್ಗ ಬಿಲ್ಲು ಬಾಣಗಳನ್ನು ಹಿಡಿದು ಆಮೇಲೆ ಅವರೊಂದಿಗೆ ಯುದ್ಧಮಾಡುವಂತೆಯೂ ಇಲ್ಲ, ಏರು ಪದ್ಯಕ್ಕೆ ಭಾಗವತರೂ ಇಲ್ಲ, ಚೆಂಡೆಮದ್ದಳೆಯೂ ಇಲ್ಲ.ಸದ್ಯ ಸೆಕ್ಯುರಿಟಿ ವಿಭಾಗದವರು ಯಕ್ಷಗಾನಕ್ಕೆ ಸಂಬಂಧಿಸಿದ ಯಾವ ಸಾಮಗ್ರಿಗಳಿಗೂ ಆಕ್ಷೇಪ ಹೇಳಲಿಲ್ಲ. ಕಿರೀಟಕ್ಕೆ ಮೆತ್ತಗಿನ ಬಾಲಮುಂಡು ಸುತ್ತಿ ವಿಮಾನದೊಳಗೆ ಒಯ್ಯುವ ಬ್ಯಾಗಿನಲ್ಲೇ ಎಚ್ಚರಿಕೆಯಿಂದ ಇಟ್ಟಿದ್ದೆವು. ಚೆಕ್‌ಇನ್ ಲಗೇಜಿನಲ್ಲಿ ಜಾಗ ಉಳಿಸಿ ಹೆಚ್ಚು ತೂಕವನ್ನು ಅದಕ್ಕೆ ವರ್ಗಾಯಿಸಲು ಈ ತಂತ್ರ ನೆರವಾಯಿತು. ಪ್ರಯಾಣದಲ್ಲಿ ಕಿರೀಟಕ್ಕೇನೂ ಹಾನಿಯಾಗದಂತೆ ನೋಡಿಕೊಳ್ಳಬಹುದಲ್ಲ ಎಂಬ ಉದ್ದೇಶ ಕೂಡ ಇದರೊಂದಿಗಿತ್ತು. ಸಫೇದು, ಪೌಡರು, ಕೆಂಪು, ಹಳದಿ ಬಣ್ಣಗಳನ್ನೆಲ್ಲ ಭದ್ರವಾಗಿ ಪ್ಯಾಕ್ ಮಾಡಿದ್ದರಿಂದ ಅವೂ ಕೂಡ ಭದ್ರತಾ ಪರೀಕ್ಷೆಯಲ್ಲಿ ತಕರಾರಿಲ್ಲದೆ ಪಾಸಾದವು. ಎರಡು ಸೂಟ್‌ಕೇಸುಗಳಲ್ಲಿ ತಲಾ 15 ಕೆಜಿಗಿಂತ ಒಂದು-ಒಂದೂವರೆ ಕೆಜಿಯಷ್ಟು ಹೆಚ್ಚೇ ತೂಕವಿದ್ದರೂ ಏರ್‌ಪೋರ್ಟಿನವರು ಆಕ್ಷೇಪಿಸದೆ ಇದ್ದುದರಿಂದ ಒಳಗೊಳಗೆ ಸಮಾಧಾನಪಟ್ಟುಕೊಂಡೆವು.
ಯಕ್ಷಗಾನ ವಿಸಿಟ್ ಟು ಭೂತಾನ್!
ವಿಮಾನ ನಿಲ್ದಾಣದ ಪ್ರಕ್ರಿಯೆಗಳೆಲ್ಲ ಮುಗಿದು ಏರ್‌ಇಂಡಿಯಾ ಎಕ್ಸ್ಪ್ರೆಸ್ ಗೇಟ್‌ಗೆ ಬಂದು ಕುಳಿತಾಗ ಇನ್ನೂ ಸಾಕಷ್ಟು ಸಮಯ ಉಳಿದಿತ್ತು. ಭೂತಾನ್ ಸಂಸ್ಕೃತಿ ಇಲಾಖೆಯ ಸೋನಂ ನಮ್ಮ ನಡುವಿನ ಸಂವಹನಕ್ಕಾಗಿ ‘ಯಕ್ಷಗಾನ ವಿಸಿಟ್ ಟು ಭೂತಾನ್’ ಎಂಬ ವಾಟ್ಸಾಪ್ ಗುಂಪು ರಚಿಸಿದ್ದರು. ಆ ಹೆಸರೇ ನಮಗೊಂಥರಾ ಸೋಜಿಗದ್ದಾಗಿತ್ತು. ಭೂತಾನ್‌ಗೆ ನಾವು ಹೋಗುತ್ತಿಲ್ಲ, ಯಕ್ಷಗಾನ ಹೋಗುತ್ತಿದೆ ಎಂಬ ಆ ಕಲ್ಪನೆಯಿಂದಲೇ ಮೈಮನಸ್ಸುಗಳಲ್ಲಿ ಒಂದು ಬಗೆಯ ಚಂದದ ಪುಳಕ ಇತ್ತು. “ನಾವು ಐದೂಮುಕ್ಕಾಲಕ್ಕೆ ಬೆಂಗಳೂರು ಬಿಡಲಿದ್ದೇವೆ. ಸಂಜೆ ನಾಲ್ಕೂವರೆಗೆ ಪಾರೊ ತಲುಪುತ್ತೇವೆ. ನಡುವೆ ಕೋಲ್ಕತದಲ್ಲಿ ಸುಮಾರು ಐದು ಗಂಟೆಯ ವಿರಾಮ ಇದೆ. ನಾವೆಲ್ಲ ನಿಮ್ಮನ್ನು ಭೇಟಿಯಾಗಲು ಕಾತರರಾಗಿದ್ದೇವೆ” ಎಂಬ ಔಪಚಾರಿಕ ಸಂದೇಶವೊಂದನ್ನು ಆ ವಾಟ್ಸಾಪ್ ಗುಂಪಿನಲ್ಲಿ ಹಾಕಿದೆವು. “ಬನ್ನಿ ಬನ್ನಿ” ಎಂದು ಉತ್ತರಿಸಿದರು ಸೋನಂ. “ಪಾರೊ ವಿಮಾನ ನಿಲ್ದಾಣದಲ್ಲಿ ನಾನು ನಿಮಗಾಗಿ ಕಾಯುತ್ತಿರುತ್ತೇನೆ” ಎಂದು ಸಂದೇಶ ಹಾಕಿದರು ಪೆಮಾ. ಭೂತಾನ್‌ನ ಮಾಸ್ಕ್ ಡ್ಯಾನ್ಸ್ ಕಲಾವಿದರೆಲ್ಲರಿಗೆ ಇಂಗ್ಲಿಷ್‌ನಲ್ಲಿ ಮಾತಾಡುವುದಕ್ಕೆ ಕಷ್ಟವಾದೀತು ಎಂಬ ಕಾರಣಕ್ಕೆ ಅವರಲ್ಲೊಬ್ಬ ದುಭಾಷಿಯನ್ನೂ ಗುರುತಿಸಿ ಸೋನಂ ಅವರು ನೇಮಿಸಿದ್ದರು. ಅವರು ಮತ್ತು ಪ್ರದರ್ಶನ ಹಾಗೂ ಸಂಗೀತ ವಿಭಾಗದ ಮುಖ್ಯಸ್ಥರಾದ ಉಗ್ಯೆನ್ ತೆನ್‌ಜಿನ್ ಕೂಡ ಗುಂಪಿನಲ್ಲಿದ್ದರು. ಹೀಗಾಗಿ ಒಂದು ಸಂದೇಶ ಹಾಕಿದರೆ ಗುಂಪಿನಲ್ಲಿದ್ದ ಎಲ್ಲರಿಗೂ ಏಕಕಾಲಕ್ಕೆ ವಿಷಯಗಳು ತಲುಪುತ್ತಿದ್ದವು.
ನಮ್ಮ ವಿಮಾನ ಐದೂಮುಕ್ಕಾಲಕ್ಕೆ ಹೊರಡಬೇಕಿತ್ತಾದರೂ ಕೊನೆಯ ಕ್ಷಣದಲ್ಲಿ ಅರ್ಧ ಗಂಟೆ ತಡವಾಯಿತು. ಅಂದರೆ ಆರೂಕಾಲಕ್ಕೆ ಹೊರಟಿತು. ಎಂಟೂಮುಕ್ಕಾಲಕ್ಕೆ ನಾವು ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಇಳಿದೆವು. ಎರಡೂವರೆ ಗಂಟೆಯ ನಸುಕಿನ ಪ್ರಯಾಣ ಚೇತೋಹಾರಿಯಾಗಿತ್ತು. ಭೂತಾನ್‌ನ ಚಳಿಯನ್ನು ಎದುರಿಸುವುದಕ್ಕೆ ನಾವು ಇಲ್ಲಿಂದಲೇ ದಪ್ಪದಪ್ಪದ ಸ್ವೆಟರ್ ಧರಿಸಿದ್ದೆವು! ಚಳಿಗಾಲವಾದರೂ ಬೆಂಗಳೂರಲ್ಲಾಗಲೀ ಕೋಲ್ಕತಾದಲ್ಲಾಗಲೀ ವಿಪರೀತ ಚಳಿಯೇನೂ ಇರಲಿಲ್ಲ. ವಾಸ್ತವವಾಗಿ ನಾವು ಸ್ವೆಟರ್ ಧರಿಸಿಕೊಂಡದ್ದು ಚಳಿಗಾಗಿ ಅಲ್ಲ, ಸೂಟ್‌ಕೇಸಿನಲ್ಲಿ ಜಾಗ ಉಳಿಸುವುದಕ್ಕಾಗಿ. ಆದರೂ ಮುಂಜಾನೆಯ ತಂಪಿನ ವಾತಾವರಣದಲ್ಲಿ ಅವುಗಳಿಂದ ಅನುಕೂಲವೇ ಆಯಿತು.
ಏರ್‌ಇಂಡಿಯಾ ಎಕ್ಸ್ಪ್ರೆಸ್‌ನಿಂದ ಡ್ರುಕ್‌ಏರ್ ವಿಮಾನಕ್ಕೆ ನಮ್ಮ ಚೆಕ್‌ಇನ್ ಬ್ಯಾಗೇಜುಗಳು ತಾವಾಗಿಯೇ ಶಿಫ್ಟ್ ಆಗುವ ವ್ಯವಸ್ಥೆ ಇರಲಿಲ್ಲ. ಹೀಗಾಗಿ ನಾವೇ ಅವನ್ನು ಕೋಲ್ಕತದಲ್ಲಿ ಪಡೆದುಕೊಂಡು ಮುಂದಿನ ವಿಮಾನಕ್ಕೆ ವರ್ಗಾಯಿಸಬೇಕಿತ್ತು. ಭೂತಾನ್ ವಿಮಾನ ಮಧ್ಯಾಹ್ನ ಇದ್ದುದರಿಂದ ಅಷ್ಟೂ ಸರಂಜಾಮುಗಳನ್ನು ನಮ್ಮೊಂದಿಗೆ ಇಟ್ಟುಕೊಳ್ಳಬೇಕಿತ್ತು. ಆಗಲೇ ಒಂಬತ್ತು ಗಂಟೆ ದಾಟಿದ್ದರಿಂದ ಹೊಟ್ಟೆ ಚುರುಗುಟ್ಟುತ್ತಿತ್ತು. ಡ್ರುಕ್‌ಏರ್‌ನವರೇನಾದರೂ ನಮ್ಮ ಲಗೇಜ್ ತೆಗೆದುಕೊಂಡರೆ ಓಡಾಡಲು ಅನುಕೂಲವಾಗುತ್ತದಲ್ಲ ಎಂಬ ಆಸೆಯಿಂದ ಲಗೇಜ್ ತಳ್ಳಿಕೊಂಡು ಅವರನ್ನು ಹುಡುಕಿಹೊರಟೆವು. ಅವರಿನ್ನೂ ತಮ್ಮ ಅಂಗಡಿ ತೆರೆದಿರಲಿಲ್ಲ. ಹತ್ತೂವರೆ ಮೇಲೆ ಅವರು ಬರೋದು ಎಂದು ಪಕ್ಕದ ಅಂಗಡಿಯವರು ಮಾಹಿತಿ ನೀಡಿದರು. ಬೇರೆ ದಾರಿಯಿಲ್ಲದೆ ಗಾಡಿ ತಳ್ಳಿಕೊಂಡು ಹೋಟೆಲ್ ಹುಡುಕಿದೆವು.
ಏರ್‌ಪೋರ್ಟಿನ ಕಾಫಿ ಘಮಲು ಒಂದು ಬಗೆಯ ಅಮಲು. ಅದರ ದರ ನೋಡಿದರೆ ಅಮಲು ಕೂಡಲೇ ಇಳಿಯುವ ಸಾಧ್ಯತೆ ಇದ್ದುದರಿಂದ ಇಲ್ಲಿಯವರೆಗೆ ನಾವು ಕಾಫಿ ಕುಡಿಯುವ ಗೋಜಿಗೆ ಹೋಗಿರಲಿಲ್ಲ. ಹತ್ತು ಹದಿನೈದು ರುಪಾಯಿಗೆ ಸಿಗುವ ಕಾಫಿಗೆ ನೂರೈವತ್ತೋ ಇನ್ನೂರೋ ಕೊಡಬೇಕೆಂದರೆ ಅಮಲು ಇಳಿಯದೆ ಇನ್ನೇನಾದೀತು! ಆದರೆ ಈಗ ಕಾಫಿ ಕುಡಿಯುವುದೇನು, ತಿಂಡಿ ಕೂಡ ತಿನ್ನುವುದು ಅನಿವಾರ್ಯವಿತ್ತು. ಯಾವ ವಿಮಾನ ನಿಲ್ದಾಣಕ್ಕೆ ಹೋದರೂ ಇದರಲ್ಲಿ ವ್ಯತ್ಯಾಸವೇನೂ ಇಲ್ಲ. ನಿಲ್ದಾಣದ ಮರ್ಜಿಗೆ ತಕ್ಕಂತೆ ರೇಟು. ಮೂವರು ಇಡ್ಲಿ ಸಾಂಬಾರು ಸೇವಿಸಿ ಕಾಫಿ ಕುಡಿದಾಗ ಎರಡು ಸಾವಿರಕ್ಕೆ ಐವತ್ತು ರುಪಾಯಿ ಕಡಿಮೆಯಿರುವ ಬಿಲ್ ಬಂದು ಕುಳಿತಿತು. ಈ ಬಿಲ್ಗಾರರ ಎದುರು ಯಕ್ಷಗಾನದ ಬಿಲ್ಗಾರರೆಲ್ಲ ಏನು ಮಹಾ ಎಂದು ಮುಖಮುಖ ನೋಡಿಕೊಂಡೆವು.
ಎದುರಾಯ್ತು ಮತ್ತೊಂದು ಫಜೀತಿ:
ಹತ್ತೂವರೆಯವರೆಗೆ ಒಂದು ಕಡೆ ಕಾದಿದ್ದು ನಂತರ ಡ್ರುಕ್‌ಏರ್ ಚೆಕ್‌ಇನ್ ವಿಭಾಗಕ್ಕೆ ಹೋದೆವು. ಇನ್ನೇನು ನಮ್ಮ ಲಗೇಜುಗಳನ್ನು ತೂಕದ ಯಂತ್ರದ ಮೇಲೆ ಇಡಬೇಕು ಅನ್ನುವ ಹೊತ್ತಿಗೆ, “ನೀವು ಎಸ್‌ಡಿಎಫ್ ಶುಲ್ಕವನ್ನು ಪಾರೊ ವಿಮಾನ ನಿಲ್ದಾಣದಲ್ಲಿ ಪಾವತಿಸುತ್ತೀರಿ ತಾನೇ?” ಎಂದು ಅಲ್ಲಿನ ಸಿಬ್ಬಂದಿಯೊಬ್ಬರು ಕೇಳಿದರು. “ಇಲ್ಲ, ನಮಗೆ ಎಸ್‌ಡಿಎಫ್ ಶುಲ್ಕದಿಂದ ವಿನಾಯಿತಿ ಇದೆ. ನಾವು ಶೈಕ್ಷಣಿಕ ಉದ್ದೇಶಕ್ಕಾಗಿ ಹೋಗುತ್ತಿದ್ದೇವೆ” ಎಂದು ಉತ್ತರಿಸಿದೆವು. ಈ ಸಂಬಂಧ ಪತ್ರವೊಂದನ್ನು ನಾಲ್ಕು ದಿನಗಳ ಹಿಂದೆಯೇ ಕಳಿಸಿ ಸೋನಂ ಮೇಡಂ ಅವರು, “ಇದನ್ನು ನೀವು ಪ್ರಿಂಟ್ ತೆಗೆಸಿ ಇಟ್ಟುಕೊಳ್ಳಿ. ಪಾರೊ ವಿಮಾನ ನಿಲ್ದಾಣದಲ್ಲಿ ಕೇಳಿದಾಗ ತೋರಿಸಿ. ನಿಮಗೆ ಎಸ್‌ಡಿಎಫ್ ಶುಲ್ಕದಿಂದ ವಿನಾಯಿತಿ ಸಿಗುತ್ತದೆ” ಎಂದಿದ್ದರು. ನಾವು ಅದನ್ನು ಮರೆಯದೆ ಎರಡೆರಡು ಪ್ರಿಂಟ್ ತೆಗೆಸಿ ಇಟ್ಟುಕೊಂಡಿದ್ದೆವು. ತಡಮಾಡದೆ ಆ ಪತ್ರವನ್ನು ಡ್ರುಕ್‌ಏರ್ ಸಿಬ್ಬಂದಿಗೆ ತೋರಿಸಿದೆವು.
ಅದು ವಾಸ್ತವವಾಗಿ ಭೂತಾನ್‌ನ ಸಂಸ್ಕೃತಿ ಇಲಾಖೆಯವರು ಗೃಹ ಸಚಿವಾಲಯಕ್ಕೆ ಮಾಡಿಕೊಂಡಿದ್ದ ಮನವಿಯ ಪ್ರತಿಯಾಗಿತ್ತು. ನಮ್ಮ ಯೋಜನೆಯ ವಿವರ, ಅದರ ಮಹತ್ವವವನ್ನು ಪತ್ರದಲ್ಲಿ ಉಲ್ಲೇಖಿಸಿ ಈ ಮೂವರು ಯಕ್ಷಗಾನ ಕಲಾವಿದರಿಗೆ ಜನವರಿ 2ರಿಂದ 14ರವರೆಗೆ ಎಸ್‌ಡಿಎಫ್ ಶುಲ್ಕದಿಂದ ವಿನಾಯಿತಿ ನೀಡಬೇಕು ಮತ್ತು ಪುನಾಖಕ್ಕೆ ಪ್ರಯಾಣಿಸಲು ರೂಟ್ ಪರ್ಮಿಟ್ ನೀಡಬೇಕು ಎಂಬ ವಿನಂತಿ ಆ ಪತ್ರದಲ್ಲಿತ್ತು. ಪತ್ರದ ಕೆಳಗೆ ‘ಮುಂದಿನ ಕ್ರಮಕ್ಕಾಗಿ’ ಎಂದು ಬರೆದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಸಹಿ ಮಾಡಿದ್ದರು.
ಪತ್ರವನ್ನು ಪರಿಶೀಲಿಸಿದ ಡ್ರುಕ್‌ಏರ್ ಸಿಬ್ಬಂದಿ, “ಇದು ಮನವಿ ಪತ್ರ ಮಾತ್ರ. ಅನುಮತಿ ಪತ್ರ ಅಲ್ಲ. ಗೃಹ ಸಚಿವಾಲಯ ನಿಮಗೆ ಎಸ್‌ಡಿಎಫ್ ವಿನಾಯಿತಿ ನೀಡಿದೆ ಎಂಬುದಕ್ಕೆ ಇದರಲ್ಲಿ ಯಾವುದೇ ಪುರಾವೆ ಇಲ್ಲ. ನೀವು ಪಾರೊದಲ್ಲಿ ಎಸ್‌ಡಿಎಫ್ ಪಾವತಿಸುತ್ತೇವೆ ಎಂದು ಒಪ್ಪಿಕೊಂಡರೆ ಮಾತ್ರ ನಿಮಗೆ ಪ್ರಯಾಣಿಸಲು ಅನುಮತಿ ನೀಡಬಹುದು” ಎಂದರು. ಇದೊಳ್ಳೆ ಕತೆಯಾಯಿತಲ್ಲ ಎಂದು ಮತ್ತೆ ಗೊಂದಲ ಆರಂಭವಾಯಿತು. ಅವರು ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ನಮ್ಮಲ್ಲಿದ್ದುದು ಅನುಮತಿ ಪತ್ರ ಆಗಿರಲಿಲ್ಲ. ಆದರೆ ಸೋನಂ ಅವರು ಇದನ್ನೇ ತೋರಿಸಿ ಸಾಕು ಅಂದಿದ್ದರಲ್ಲ ಎಂದು ನಾವೂ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಇನ್ನೇನು ಮಾಡುವುದು ಎಂದು ಚಿಂತೆ ಹತ್ತಿತು. ಈ ಹಿಂದೆ ಹೇಳಿದ್ದಂತೆ ಭೂತಾನ್ ಸರ್ಕಾರ ಪ್ರತಿ ಪ್ರವಾಸಿಗರಿಗೆ ವಿಧಿಸುವ ಎಸ್‌ಡಿಎಫ್ ಪ್ರತಿದಿನಕ್ಕೆ 1200 ರುಪಾಯಿ. ಮೂವರಿಗೆ ಎರಡು ವಾರಕ್ಕೆ ಐವತ್ತು ಸಾವಿರ! ನಾವು ಪೆಚ್ಚಾಗಿ ನಿಂತುಬಿಟ್ಟೆವು.
(ಮುಂದುವರಿಯುವುದು)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ