ಸೋಮವಾರ, ಮಾರ್ಚ್ 23, 2026

ಲಗೇಜ್ ಒಯ್ಯುವಂತಿಲ್ಲ ಎಂದ ವಿಮಾನ!

'ಭೂತಾನ್‌ನಲ್ಲಿ ಯಕ್ಷದೀವಿಗೆʼ

ಪ್ರವಾಸ ಕಥನ-9

ಡಾ. ಸಿಬಂತಿ ಪದ್ಮನಾಭ ಮತ್ತು ಡಾ. ಆರತಿ ಪಟ್ರಮೆ

(ಪ್ರಜಾಪ್ರಗತಿ, 22 ಮಾರ್ಚ್ 2026)

(ಮುಂದುವರಿದ ಭಾಗ...)

ಜನವರಿ 2ರಂದು ಮುಂಜಾನೆ ಆರೂಕಾಲಕ್ಕೆ ನಮ್ಮ ವಿಮಾನ ಆಕಾಶಕ್ಕೇರಬೇಕು. ನಾವು ಕನಿಷ್ಠ ಎರಡು ಗಂಟೆ ಮೊದಲು, ಅಂದರೆ ನಾಲ್ಕು ಗಂಟೆಗೆಲ್ಲ ಏರ್‌ಪೋರ್ಟ್ ತಲುಪಬೇಕು. ಅದಕ್ಕೂ ಎರಡು ಗಂಟೆ ಮೊದಲು, ಅಂದರೆ ತಡರಾತ್ರಿ ಎರಡು ಗಂಟೆಗೆ ಮನೆಯಿಂದ ಹೊರಟಾಗಬೇಕು. ತುಮಕೂರಿನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಂದೂವರೆ ಗಂಟೆ ಸಾಕು, ಆದರೆ ರಿಸ್ಕ್ ಯಾಕೆ; ಅರ್ಧ-ಮುಕ್ಕಾಲು ಗಂಟೆ ಹೆಚ್ಚೇ ಇಟ್ಟುಕೊಂಡು ಹೊರಡೋಣ... ಹೀಗೆಲ್ಲ ಪ್ಲಾನ್ ಮಾಡಿಕೊಂಡೆವು. 

ಸಿದ್ಧತೆಯ ಭಾಗವಾಗಿ ಜನವರಿ 1ರಂದು ಬೆಳಗ್ಗೆ ಟಿಕೆಟ್‌ಗಳನ್ನೆಲ್ಲ ಮತ್ತೊಮ್ಮೆ ನೋಡುತ್ತಿದ್ದೆವು. ಅಚಾನಕ್ಕಾಗಿ ಟಿಕೆಟಿನಲ್ಲಿದ್ದ ಒಂದು ಅಂಶ ನಮ್ಮನ್ನು ಚಿಂತೆಗೀಡು ಮಾಡಿತು. ಬೆಂಗಳೂರು - ಕೋಲ್ಕತಾ ವಿಮಾನದಲ್ಲಿ 7 ಕೆ.ಜಿ. ಕ್ಯಾಬಿನ್ ಬ್ಯಾಗೇಜ್ ಮತ್ತು 15 ಕೆ.ಜಿ. ಚೆಕ್-ಇನ್ ಬ್ಯಾಗೇಜ್ ಅಂತಲೂ, ಕೋಲ್ಕತಾ - ಪಾರೊ ವಿಮಾನದಲ್ಲಿ 7 ಕೆ.ಜಿ. ಕ್ಯಾಬಿನ್ ಬ್ಯಾಗೇಜ್, ಆದರೆ ಚೆಕ್-ಇನ್ ಬ್ಯಾಗೇಜಿಗೆ ಅವಕಾಶವಿಲ್ಲ ಅಂತಲೂ ಇತ್ತು. ಅರೆ! ಚೆಕ್-ಇನ್ ಬ್ಯಾಗೇಜ್ ಇಲ್ಲದೆ ಪ್ರಯಾಣಿಸುವುದು ಹೇಗೆ? ಬೆಂಗಳೂರಿನಿಂದ ಕೋಲ್ಕತಾಗೆ ಹೋದವರು ಲಗೇಜನ್ನು ಅಲ್ಲೇ ಬಿಟ್ಟುಹೋಗುವುದೇ? ಇದು ಬೇರೆ ಎರಡು ವಾರಗಳ ಪ್ರವಾಸ, ದಿನನಿತ್ಯದ ಬಟ್ಟೆಬರೆಯಲ್ಲದೆ ಇಪ್ಪತ್ತು ಕೆ.ಜಿ.ಯಷ್ಟು ಯಕ್ಷಗಾನದ ವೇಷಭೂಷಣಗಳಿವೆ. ಇವನ್ನು ಸಾಗಿಸುವ ಬಗೆ ಹೇಗೆ... ಇದ್ದಕ್ಕಿದ್ದ ಹಾಗೆ ಆತಂಕ ಆಯ್ತು.

ಟಿಕೆಟನ್ನು ನಾವೇ ಆನ್ಲೈನ್ ಕಾಯ್ದಿರಿಸಿದ್ದು. ಆಗ ಸರಿಯಾಗಿ ನೋಡಿಕೊಂಡಿದೆ. ಲಗೇಜ್ ಒಯ್ಯುವ ಅವಕಾಶವನ್ನಂತೂ ಸರಿಯಾಗಿ ಪರಿಶೀಲಿಸಿಕೊಂಡೇ ವಿಮಾನ ಆಯ್ಕೆ ಮಾಡಿದ್ದು. ಟಿಕೆಟ್ ಜನರೇಟ್ ಆಗುವ ಹೊತ್ತಿಗೆ ಇದು ಬದಲಾದದ್ದು ಹೇಗೆ? ಅಥವಾ ಬೆಂಗಳೂರು-ಕೋಲ್ಕತಾ ವಿಮಾನದ ಚೆಕ್-ಇನ್ ಲಗೇಜಿನ ಬಗ್ಗೆ ಮಾತ್ರ ನೋಡಿಕೊಂಡಿದ್ದೆವಾ? ಅಲ್ಲಿಂದ ನಂತರದ ಕನೆಕ್ಟಿಂಗ್ ಫ್ಲೈಟ್‌ನ ವಿವರಗಳನ್ನು ಸರಿಯಾಗಿ ನೋಡಿಕೊಂಡಿರಲಿಲ್ಲವಾ... ಎಷ್ಟೇ ತಲೆ ಕೆರೆದುಕೊಂಡರೂ ನೆನಪಾಗಲಿಲ್ಲ. ನೆನಪಾಗಿ ಪ್ರಯೋಜನ ಇಲ್ಲ. ಈಗ ತಕ್ಷಣದ ಸಮಸ್ಯೆಗೆ ಪರಿಹಾರ ಬೇಕು. ಆದರೆ ಹೇಗೆ?

ಎಷ್ಟೇ ಕಡಿಮೆ ಎಂದರೂ ಚೆಕ್-ಇನ್ ಲಗೇಜ್ ಇಲ್ಲದೆ ಕೇವಲ ಕ್ಯಾಬಿನ್ ಬ್ಯಾಗೇಜ್‌ನೊಂದಿಗೆ ಪ್ರಯಾಣ ಸಾಧ್ಯವೇ ಇರಲಿಲ್ಲ. ಒಬ್ಬೊಬ್ಬರಿಗೆ ಗರಿಷ್ಠ 15 ಕೆ.ಜಿ. ಚೆಕ್-ಇನ್ ಲಗೇಜ್ ಬರುವಂತೆ, ಉಳಿದುದನ್ನು ಕ್ಯಾಬಿನ್ ಬ್ಯಾಗಿನಲ್ಲಿ ಇರಿಸಿಕೊಳ್ಳುವಂತೆ (ಅದರಲ್ಲಿ ಗರಿಷ್ಠ 7 ಕೆ.ಜಿ.ಗೆ ಅವಕಾಶವಿದೆ) ಪ್ಲಾನ್ ಮಾಡಿದ್ದೆವು. ಈಗೇನು ಮಾಡೋಣ, ಯಾರಲ್ಲಿ ಕೇಳೋಣ? ಟ್ರಾವೆಲ್ ಏಜೆಂಟ್ ಬಳಿ ಸಹಾಯ ಕೇಳೋಣ ಎಂದರೆ ನಾವು ಟ್ರಾವೆಲ್ ಏಜೆಂಟ್ ಮೂಲಕ ಟಿಕೆಟ್ ಮಾಡಿಸಿರಲಿಲ್ಲ, ನಾವೇ ಮಾಡಿಕೊಂಡದ್ದು. ನಾವೇ ಮಾಡಿಕೊಂಡದ್ದೇ ತಪ್ಪಾಯ್ತಾ? ಟ್ರಾವೆಲ್ ಏಜೆಂಟ್ ಬಳಿ ಮಾಡಿಸಿಕೊಂಡಿದ್ದರೆ ಇಂತಹ ಸಮಸ್ಯೆ ಆಗುತ್ತಿರಲಿಲ್ಲ. ಏನಾದರೂ ಸಮಸ್ಯೆ ಆಗಿದ್ದರೆ ಅವರೇ ಸರಿಪಡಿಸಿಕೊಡುತ್ತಿದ್ದರು ಅನಿಸಿತು. ಈಗ ಯಾರನ್ನು ಕೇಳುವುದು? ನಾವು ಮೇಕ್‌ಮೈಟ್ರಿಪ್ ಜಾಲತಾಣದ ಮುಖಾಂತರ ಟಿಕೆಟ್ ಮಾಡಿಕೊಂಡಿದ್ದೆವು. ಅವರನ್ನು ಸಂಪರ್ಕಿಸಿದರೆ ಪರಿಹಾರ ಸಿಗುತ್ತದೆ ಎನ್ನುವುದೇನು ಗ್ಯಾರಂಟಿ? ಆ ಜಾಲತಾಣಕ್ಕೆ ಹೋಗಿ ನೋಡಿದರೆ ಬೆಂಗಳೂರು-ಕೋಲ್ಕತಾ ಪ್ರಯಾಣಕ್ಕೆ ನಮಗೆ ಲಭ್ಯವಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಯಾನ ಸಂಸ್ಥೆಯ ಸಂಪರ್ಕ ಸಂಖ್ಯೆ ಮಾತ್ರ ಇತ್ತು. ಅಲ್ಲಿಂದ ಮುಂದೆ ಭೂತಾನದ ಪಾರೊಗೆ ಹೋಗಬೇಕಿದ್ದ ಡ್ರುಕ್ ಏರ್ ಸಂಸ್ಥೆಯ ಯಾವುದೇ ಸಂಪರ್ಕ ವಿವರಗಳಿರಲಿಲ್ಲ. ಇದೊಳ್ಳೆ ಫಜೀತಿ ಆಯ್ತಲ್ಲ... ಡ್ರುಕ್ ಏರ್ ಕಂಪೆನಿಯ ಅಧಿಕೃತ ಜಾಲತಾಣಕ್ಕೆ ಭೇಟಿನೀಡಿ ನಮ್ಮ ವಿಮಾನದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸೋಣವೆಂದರೆ ನಾವು ಅಧಿಕೃತ ಜಾಲತಾಣದ ಮೂಲಕ ಟಿಕೆಟ್ ಕಾದಿರಿಸಿರಲಿಲ್ಲ. ಹಾಗಾಗಿ ಅದು ಯಾವ ವಿವರಗಳನ್ನೂ ತೋರಿಸುತ್ತಿರಲಿಲ್ಲ.

ಎಐ ಕೊಟ್ಟ ಸಲಹೆ:

ನಮ್ಮ ಬುದ್ಧಿಮತ್ತೆ ಕೆಲಸ ಮಾಡದೆ ಇದ್ದಾಗ ಕೃತಕ ಬುದ್ಧಿಮತ್ತೆಯ ಮರೆಹೊಕ್ಕೆವು. ನಮ್ಮ ಸಮಸ್ಯೆಯನ್ನು ಎಐ ಬಳಿ ಹೇಳಿಕೊಂಡೆವು. ಅದು ಇದೊಂದು ದೊಡ್ಡ ಸಮಸ್ಯೆಯೇ ಅಲ್ಲ, ಪರ್ವತ ಪ್ರದೇಶಗಳ ಕಡೆಗೆ ಹೋಗುವ ವಿಮಾನಗಳಲ್ಲಿ ಇದೆಲ್ಲ ಸಾಮಾನ್ಯ ಎಂದು ಸಮಾಧಾನ ಹೇಳಲು ಬಂತು. ಭೂತಾನದಂತಹ ದೇಶಗಳಲ್ಲಿ ಸಣ್ಣ ಗಾತ್ರದ ವಿಮಾನಗಳು ಕಾರ್ಯಾಚರಿಸುತ್ತವೆ. ಅಲ್ಲಿನ ಒರಟಾದ ಭೂಮೇಲ್ಮೈ ಕಾರಣದಿಂದ ತಮ್ಮ ಪ್ರಯಾಣಿಕರು ಕಡಿಮೆ ತೂಕದ ಲಗೇಜ್ ಒಯ್ಯಬೇಕೆಂದು ಅವು ಅಪೇಕ್ಷಿಸುತ್ತವೆ. ಹಾಗೆಂದು ನೀವು ಆತಂಕಕ್ಕೊಳಗಾಗಬೇಕಾದ ಅಗತ್ಯವಿಲ್ಲ. ಲಗೇಜ್ ಒಯ್ಯಲೇಬಾರದೆಂದು ಇದರ ಅರ್ಥವಲ್ಲ. ಹೆಚ್ಚಿನ ಶುಲ್ಕ ಪಾವತಿಸಿ ಒಯ್ಯಬಹುದು. ಈ ಶುಲ್ಕವನ್ನು ಎರಡು ರೀತಿ ಪಾವತಿಸಬಹುದು: ಒಂದು ಮೊದಲೇ ಆನ್ಲೈನ್ ಹಣ ಪಾವತಿಸಿ ಲಗೇಜ್ ಸ್ಪೇಸ್ ಕಾದಿರಿಸುವುದು, ಇನ್ನೊಂದು ವಿಮಾನ ನಿಲ್ದಾಣದಲ್ಲೇ ಚೆಕ್-ಇನ್ ವೇಳೆ ಹಣ ಪಾವತಿಸುವುದು. ಮೊದಲೇ ಕಾದಿರಿಸುವುದು ಉತ್ತಮ, ಏಕೆಂದರೆ ಈ ವಿಧಾನದಲ್ಲಿ ಶುಲ್ಕದಲ್ಲಿ ವಿನಾಯಿತಿ ಇರುತ್ತದೆ. ಏರ್‌ಪೋರ್ಟಿನಲ್ಲೇ ಪಾವತಿಸುವುದಾದರೆ ತುಸು ತುಟ್ಟಿಯಾಗುತ್ತದೆ... ಹೀಗೆಲ್ಲ ವಿವರಗಳನ್ನು ಎಐ ನೀಡಿತು.

ನಾವು ಆಗಲೇ ಸಣ್ಣಗೆ ಬೆವೆತುಬಿಟ್ಟಿದ್ದೆವು. ಹೆಚ್ಚುವರಿ ಲಗೇಜ್ ಒಯ್ಯಬೇಕೆಂದರೆ ಹೆಚ್ಚುವರಿ ಶುಲ್ಕ ಪಾವತಿಸೋಣ, ಆದರೆ ಏನೇನೂ ಲಗೇಜ್ ಒಯ್ಯಬಾರದು ಎಂಬುದು ಯಾವ ನ್ಯಾಯ? ಹೀಗಾದರೆ ವಿದೇಶ ಪ್ರಯಾಣ ಮಾಡುವುದು ಹೇಗೆ? ಪ್ರಯಾಣಿಕರ ಗತಿ ಏನು? ಆ ವಿಮಾನಯಾನ ಸಂಸ್ಥೆ ಬಗ್ಗೆ ಸಿಟ್ಟು ಕೂಡ ಬಂತು. ಲಗೇಜ್ ದರ ನೋಡಿ ಇನ್ನಷ್ಟು ಭಯವಾಯಿತು. ಒಂದು ಕೆ.ಜಿ.ಗೆ ಒಂದು ಸಾವಿರಕ್ಕಿಂತಲೂ ಹೆಚ್ಚು ದರವಿತ್ತು. ಅಂದರೆ ನಾವು ಒಯ್ಯಬೇಕಿದ್ದ 45 ಕೆ.ಜಿ. ಲಗೇಜಿಗೆ 50-60 ಸಾವಿರದಷ್ಟು ಶುಲ್ಕವಾಗುತ್ತದೆ... ಇದು ಅನ್ಯಾಯ... ಎಂದುಕೊಂಡೆವು. ಮೊದಲೇ ಪೈಸೆಗೆ ಪೈಸೆ ಲೆಕ್ಕಹಾಕಿ ಪ್ರಯಾಣದ ಯೋಜನೆ ಮಾಡಿದ್ದಾಗಿದೆ, ಈಗ ಕೊನೇ ಕ್ಷಣಕ್ಕೆ ಇಷ್ಟೊಂದು ದೊಡ್ಡ ಮೊತ್ತ ಲಗೇಜಿಗಾಗಿ ಪಾವತಿಸುವುದೆಂದರೆ ಅನ್ಯಾಯವಲ್ಲದೆ ಇನ್ನೇನು... ಲಗೇಜಿಗಾಗಿ ಇಷ್ಟೊಂದು ಹಣ ಪಾವತಿಸುವ ಬದಲು ಅಲ್ಲೇ ಹೋಗಿ ಹಣ ತೆತ್ತು ಎರಡೆರಡು ಪ್ರತಿ ಬಟ್ಟೆಬರೆ ಖರೀದಿಸೋಣ... ಅದು ಇದಕ್ಕಿಂತ ಕಡಿಮೆಯಾದೀತು ಎಂದು ಯೋಚಿಸಿದೆವು. ಆದರೆ ಯಕ್ಷಗಾನದ ವೇಷಭೂಷಣ ಭೂತಾನದಲ್ಲಿ ಯಾರು ಕೊಡುತ್ತಾರೆ? ಇಲ್ಲಿಂದ ಒಯ್ಯದೆ ಬೇರೆ ದಾರಿಯಿಲ್ಲ. ಏನು ಮಾಡೋಣ?

ಅಂತೂ ಈ ಆತಂಕದಲ್ಲಿ ಬೇರೆಬೇರೆ ಜಾಲತಾಣಗಳನ್ನು ಮತ್ತೆಮತ್ತೆ ಎಡತಾಕಿದ್ದಾಯಿತು. ಈ ವೇಳೆಗೆ ವಿಮಾನಯಾನ ಸಂಸ್ಥೆ ಡ್ರುಕ್ ಏರ್ ಜಾಲತಾಣವನ್ನು ಜಾಲಾಡುತ್ತಿದ್ದಾಗ ವಾಟ್ಸಾಪ್ ಲಿಂಕೊಂದು ಕಾಣಿಸಿತು. ಅರೆ, ಇಲ್ಲೊಂದು ಸಂಪರ್ಕಕ್ಕೆ ದಾರಿಯಿದೆ ಎನಿಸಿತು. ಹಿಂದೆ ಇಂತಹದೇ ಒಂದು ಲಿಂಕ್ ಮೂಲಕ ಭೂತಾನ್‌ನ ಸಂಸ್ಕೃತಿ ಇಲಾಖೆಯ ಸಂಪರ್ಕ ಸಾಧ್ಯವಾಗಿ ಅನೇಕ ಸಮಸ್ಯೆಗಳು ಪರಿಹಾರವಾದದ್ದು ನೆನಪಾಯಿತು. ಇಲ್ಲಿಯೂ ಸಂಸ್ಕೃತಿ ಇಲಾಖೆಯಲ್ಲಿರುವಂಥ ವ್ಯವಸ್ಥೆಯಿದ್ದರೆ ಯಾರಾದರೂ ಉಪಕಾರ ಮಾಡಿಯಾರು. ಏನಾದರಾಗಲಿ ಒಂದು ಮೆಸೇಜ್ ಕಳಿಸುವುದು ತಪ್ಪಲ್ಲ ಅಂದುಕೊಂಡು ಆ ಕೊಂಡಿಯನ್ನು ಒತ್ತಿ "ಹಾಯ್" ಎಂದು ಮೆಸೇಜ್ ಮಾಡಿದೆವು. ಆಗಿನ್ನೂ ಬೆಳಗ್ಗೆ ಏಳು ಗಂಟೆ ಕೂಡ ಆಗಿರಲಿಲ್ಲ. ಕೆಲವೇ ಕ್ಷಣಗಳಲ್ಲಿ ಆ ಕಡೆಯಿಂದ "ಕುಝು಼ಝಾ಼ಂಪೊಲಾ!" (ಹಲೋ) ಎಂಬ ಪ್ರತ್ಯುತ್ತರ ಬಂತು. ಪರ್ವಾಗಿಲ್ಲ, ಈ ವ್ಯವಸ್ಥೆ ಕೆಲಸ ಮಾಡುತ್ತಿದೆ ಎನಿಸಿ ಸಮಾಧಾನವಾಯಿತು.

ನಮ್ಮ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ವಿವರಿಸಿ, "ನಾವು ಎರಡು ವಾರ ಭೂತಾನ್ ಪ್ರವಾಸ ಮಾಡಬೇಕಾದವರು, ನಿಮ್ಮಲ್ಲಿ ಚೆಕ್-ಇನ್ ಲಗೇಜ್‌ಗೆ ಅವಕಾಶವೇ ಇಲ್ಲ, ಹೀಗಾದರೆ ನಾವು ಪ್ರಯಾಣ ಮಾಡುವುದು ಹೇಗೆ?" ಎಂದು ಸಂದೇಶ ಕಳಿಸಿದೆವು. ಆ ಕಡೆಯಿಂದ, "ನಮಗೆ ಸರಿಯಾಗಿ ಅರ್ಥವಾಗಲಿಲ್ಲ; ಇನ್ನಷ್ಟು ವಿವರ ಕೊಟ್ಟರೆ ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ" ಎಂಬ ಉತ್ತರ ಬಂತು. ಅಂದರೆ ಇದು ಕೂಡ ಅಟೋಮೇಟೆಡ್ ವ್ಯವಸ್ಥೆ ಅಲ್ಲ, ಆ ಕಡೆಯಿಂದ ಯಾರೋ ಜೀವಂತ ಮನುಷ್ಯರೇ ಉತ್ತರಿಸುತ್ತಿದ್ದಾರೆ ಎಂದು ಗೊತ್ತಾಗಿ ಇನ್ನಷ್ಟು ಸಮಾಧಾನ ಅನ್ನಿಸಿತು. ನಮ್ಮ ಪ್ರಯಾಣದ ದಿನಾಂಕ, ಫ್ಲೈಟ್ ಸಂಖ್ಯೆ, ಪಿಎನ್‌ಆರ್ ಸಂಖ್ಯೆ ನಮೂದಿಸಿ, "ಇದರಲ್ಲಿ ಚೆಕ್-ಇನ್ ಲಗೇಜ್‌ಗೆ ಅವಕಾಶ ಇಲ್ಲ ಎಂದಿದೆಯಲ್ಲ" ಎಂದು ಕೇಳಿದೆವು. ಇದಾಗಿ ಐದೇ ನಿಮಿಷಕ್ಕೆ ಅತ್ತಲಿಂದ, "ನಿಮ್ಮ ನೋಂದಾಯಿತ ಇ-ಮೇಲ್‌ಗೆ ನಿಮ್ಮ ಟಿಕೆಟ್ ಕಳಿಸಿದ್ದೇವೆ, ಅದರಲ್ಲಿ ಎಲ್ಲ ವಿವರಗಳೂ ಇವೆ, ಗಮನಿಸಿ" ಎಂಬ ಉತ್ತರ ಬಂತು.

ಇ-ಮೇಲ್ ನೋಡಿದರೆ ಅಚ್ಚರಿ ಕಾದಿತ್ತು. ಪ್ರತಿಯೊಬ್ಬರಿಗೂ 30 ಕೆ.ಜಿ. ಚೆಕ್-ಇನ್ ಲಗೇಜ್ ಅವಕಾಶ ಕಲ್ಪಿಸಿದ ಟಿಕೆಟ್ ಕಳಿಸಿದ್ದರು. ನಾವು ಸಾಮಾನ್ಯವಾಗಿ ವಿಮಾನಗಳಲ್ಲಿ ಲಭ್ಯವಿರುವ 15 ಕೆ.ಜಿ. ಅವಕಾಶಕ್ಕಾಗಿ ಎದುರು ನೋಡುತ್ತಿದ್ದರೆ, ಅವರು ಅದರ ಎರಡು ಪಟ್ಟು ಮೂಟೆ ಒಯ್ಯುವುದಕ್ಕೆ ಅವಕಾಶ ನೀಡಿದ್ದರು. ಈಗ ನಿಜವಾಗಿಯೂ ಬೇಸ್ತು ಬೀಳುವ ಸರದಿ ನಮ್ಮದಾಗಿತ್ತು. ಮತ್ತೆ ಇಷ್ಟು ಹೊತ್ತು ಈ ಕೃತಕ ಬುದ್ಧಿಮತ್ತೆ ಹೇಳಿದ್ದೇನು ಎಂದು ನಗು ಕೂಡ ಬಂತು. ಅದರೊಂದಿಗೆ ಅಷ್ಟು ಹೊತ್ತಿನಿಂದ ತಲೆಗೆ ಅಡರಿಕೊಂಡಿದ್ದ ಆತಂಕವೂ ಜರ‍್ರನೆ ಇಳಿದು ಭರ‍್ರನೆ ಮಾಯವಾಯಿತು. "ದೊಡ್ಡ ಉಪಕಾರ ಮಾಡಿದಿರಿ, ಧನ್ಯವಾದಗಳು" ಎಂದು ಉತ್ತರಿಸಿದೆವು.

(ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ