ಮಂಗಳವಾರ, ಆಗಸ್ಟ್ 25, 2020

ಯಕ್ಷನಟ ಸಾರ್ವಭೌಮ

(ಸಂ) ಕೆ.ಪಿ. ರಾಜಗೋಪಾಲ ಕನ್ಯಾನ 

ಪ್ರಕಾಶಕರು: ಉಷಾ ಎಂಟರ್ ಪ್ರೈಸಸ್, ಬೆಂಗಳೂರು. 

ವರ್ಷ: 2005

ಪುಟಗಳು: 200

ಕ್ರಯ: ರೂ.95

ಯಕ್ಷಗಾನ ಕ್ಷೇತ್ರದ ಶಕಪುರುಷರೆಂದೇ ಖ್ಯಾತಿವೆತ್ತ ಕುರಿಯ ವಿಠಲ ಶಾಸ್ತ್ರಿಗಳ ಜೀವನಚರಿತ್ರೆ ಜೊತೆಗೆ ಕುರಿಯ ವಿಠಲ ಶಾಸ್ತ್ರಿ ವಿರಚಿತ ಲೇಖನಗಳು ಹಾಗೂ ಕುರಿಯ ಶಾಸ್ತ್ರಿಗಳ ಕುರಿತಾದ ಕವಿತೆಗಳ ಅಪೂರ್ವ ಸಂಗ್ರಹ. 

ವಿದ್ವಾನ್ ತಾಳ್ತಜೆ ಕೃಷ್ಣಭಟ್ಟ, ಪಂಜಳ ಅವರು ’ಬೇರೆಯೂರಲ್ಲಿ ನೀ ಹುಟ್ಟಬೇಕಿತ್ತು, ನಿನ್ನ ಗೌರವದ ಮಣೆ ಬೇರೆ ಸಲಲಿತ್ತು’ ಎಂಬುದರೊಂದಿಗೆ ವಿಠಲ ಶಾಸ್ತ್ರಿಗಳ ಜೀವನ ಚರಿತ್ರೆಯನ್ನು ಆರಂಭಿಸಿದ್ದು ಅಂಥಾ ಶ್ರೇಷ್ಠ ಕಲಾವಿದನಿಗೆ ಸಿಗಬೇಕಾದ ಗೌರವ ಮನ್ನಣೆ ದೊರೆಯಲಿಲ್ಲವೆಂಬುದನ್ನು ಧ್ವನಿಸುತ್ತದೆ. ರಂಗಸ್ಥಳವನ್ನು ತನ್ನದೇ ಆದ ರೀತಿಯಲ್ಲಿ ಆಳಿದ, ಅನೇಕ ಶಿಷ್ಯರನ್ನು ರೂಪಿಸಿದ, ಯಕ್ಷಗಾನಕ್ಕೆ ತನ್ನದೇ ಆದ ಹಲವು ಕೊಡುಗೆಗಳನ್ನು ಕೊಡುತ್ತ ಬೆಳೆದ ಈ ವಾಮನನ ಕಥೆ ಆಸಕ್ತಿದಾಯಕ. 

ಅಂಗದನಾಗಿ ಹಿರಿಯ ಬಲಿಪಜ್ಜನ ಅನುಮತಿಯ ಮೇರೆಗೆ ರಂಗಸ್ಥಳವನ್ನು ಪ್ರವೇಶಿದವರು ಇಡಿಯ ರಂಗವನ್ನಾಳಿದ್ದೊಂದು ಅದ್ಭುತ ಇತಿಹಾಸ. ಒಂದೆರಡು ಪಾತ್ರಗಳನ್ನು ಮಾಡಿದ ತಕ್ಷಣಕ್ಕೆ ಕಲಾವಿದರೆಂದು ಮೆರೆಯುವ ಹೊಸ ತಲೆಮಾರಿನ ಮಕ್ಕಳು ಈ ತೆರನ ಹಿರಿಯ ಕಲಾವಿದರ ಜೀವನಗಾಥೆಯನ್ನು ಅಗತ್ಯವಾಗಿ ಓದಲೇಬೇಕು. ನಾವಿಂದು ಸುಲಲಿತವಾಗಿ ಹೆಜ್ಜೆಯಿರಿಸುವ ರಂಗದಲ್ಲಿ ಹಿಂದಿನ ತಲೆಮಾರಿನ ಜೀವವೇ ಹೇಗೆ ತೇದು ತಳಪಾಯ ರೂಪಿಸಿದೆ ಎಂಬುದು ನಮಗರ್ಥವಾಗಬೇಕು. 

ಬ್ರಹ್ಮಕಪಾಲದ ರುದ್ರ, ವಿಶ್ವಾಮಿತ್ರ ಮೇನಕೆಯ ವಿಶ್ವಾಮಿತ್ರ, ಪಾದುಕಾ ಪ್ರದಾನದ ಭರತ, ಕರ್ಣ, ಕಂಸ, ವಲಲ, ಹಿರಣ್ಯಕಶಿಪು ಹೀಗೆ ಶಾಸ್ತ್ರಿಗಳಿಗೆ ಹೆಸರು ತಂದುಕೊಟ್ಟ ಅಮೋಘ ಪಾತ್ರಗಳ ನಿರ್ವವಣೆಯ ವೈಖರಿಯನ್ನು ಓದುವಾಗ ರೋಮಾಂಚನವಾಗದಿದ್ದೀತೇ? 

 ಶಾಸ್ತ್ರಿಗಳ ಅರ್ಥಗಾರಿಕೆಯ ಕೆಲವು ಝಲಕುಗಳೂ ಈ ಪುಸ್ತಕದಲ್ಲಿವೆ. ’ಚಂದ್ರನು ಸಕಲ ಲೋಕಾನಂದದಾಯಕನು. ಅವನು ಓಷಧಾನಾಂಪತಿಃ ಅನ್ನಿಸಿ, ನಮ್ಮ ಸಮಸ್ತರ ಕ್ಷೇಮದಾಯಕನೂ ಆಗಿರುವುದರಿಂದ ಇದಿರುಗೊಂಡು ಮರ್ಯಾದೆಯಿಂದ ಆದರವೀಯುತ್ತಾರೆ. ಆದರೆ ಕಮಲಗಳು ಮಾತ್ರ ಮತ್ಸರದಿಂದ ಸಂಕುಚಿತಗೊಳ್ಳುತ್ತವೆ. ಇದನ್ನು ಕಂಡು ತಮಗೆ ಸದಾ ಕಾಲವೂ ಆನಂದೋತ್ಸಾಹವೀಯುವ ದೇವನಿಗೆ ಅಪಮಾನವಾಯಿತೆಂದು ತಿಳಕೊಂಡ ಮದಗಜಗಳು ಸರೋವರವನ್ನು ಹೊಕ್ಕು ಆ ಸಂಕುಚಿತ ಕಮಗಳನ್ನು ಕಿತ್ತೆಸೆಯುತ್ತವೆ. ತದ್ರೀತಿ, ಕುರುಕುಲ ಚಂದ್ರಮನಾದ ನಿನ್ನ ಕೀರ್ತಿ ಮತ್ತು ತೇಜೋಚಂದ್ರಿಕೆಗೆ ಸಂಕುಚಿತ ವೃತ್ತಿ ಪಡತಕ್ಕ ಪಾಂಡವ ಕಮಲಗಳನ್ನು ಮತ್ತಗಜಪ್ರಾಯನಾದ ಕರ್ಣನು ಇಂದಿನ ರಣಕಣ ಸರಸ್ಸನ್ನು ಹೊಕ್ಕು ಕಿತ್ತೆಸೆದು ತಮ್ಮ ಘನ ಗೌರವಕ್ಕೆ ಕುಂದನ್ನೆಣಿಸುವವರು ಆರೂ ಇಲ್ಲವೆಂದೆನಿಸುತ್ತಿದ್ದನು. - ಕರ್ಣನಾಗಿ ಕುರಿಯ ಶಾಸ್ತ್ರಿಗಳು. (ಪು.37, 38) 

ಯಕ್ಷಗಾನದಲ್ಲಿ ಹಲವಾರು ಸುಧಾರಣೆಗಳನ್ನು, ಬದಲಾವಣೆಗಳನ್ನು ಮಾಡಿದ ಕುರಿಯ ಶಾಸ್ತ್ರಿಗಳು 1958ರಲ್ಲಿ ರಷ್ಯಾದ ಕ್ರುಶ್ವೇವು ಬುಲ್ಗಾನಿನ್ ಬೆಂಗಳೂರಿಗೆ ಬಂದಾಗ ಹದಿಮೂರು ನಿಮಿಷಗಳ ಯಕ್ಷಗಾನ ಪ್ರದರ್ಶನವನ್ನು ನೀಡಿ ಸೈ ಎನಿಸಿಕೊಂಡದ್ದೊಂದು ಓದುವಾಗ ಖುಷಿಯಾಗದಿದ್ದೀತೇ? ಅವರನ್ನು ಮೆಚ್ಚಿದವರು ಅದೆಷ್ಟು ಮಂದಿ!  

’ಕಲೆಯೆಂಬುದು ಪರಮಾತ್ಮ, ಅದುವೇ ದಿವ್ಯಾನಂದ, ಪರಮಾನಂದ. ಅದರಲ್ಲಿ ಶ್ರಮಿಸಿದವನು ಅದರಿಂದ ನಿವೃತ್ತಿ ಹೊಂದಿದರೂ, ನದಿಯ ನೀರನ್ನು ಕಟ್ಟಿಸಿದಂತೆ, ಸಮಯ ಬಂದಾಗ ಅದು ಮೇಲಿಂದ ಧುಮುಕಿ ಮುಂದೆ ಹೋಗುವ ತನ್ನ ಪ್ರವೃತ್ತಿಯಿಂದ ವಿಮುಖವಾಗಲಾರದು. ಕಲಾಗಾರರನ್ನು ತಡೆದರೂ ಅಂತೆಯೇ.’ (ಪು. 50) ದಕ್ಷಯಜ್ಞದ ಈಶ್ವರನ ಪಾತ್ರ ನಿರ್ವಹಿಸುತ್ತಲೇ ಹೃದಯಾಘಾತಕ್ಕೊಳಗಾಗಿ ರಂಗಸ್ಥಳದಲ್ಲಿ ಕುಸಿದ ಅವರು ಚೇತರಿಸಿಕೊಂಡರೂ ಮುಂದೆ ಕಲಾವಿದನಾಗಿ ರಂಗದಲ್ಲಿ ಮೆರೆಯಲಾಗದ ಹತಾಶೆಗೆ ಬಹುವಾಗಿ ಸೊರಗಿದವರು. ಬಳಿಕ ನಾಟ್ಯಗುರುಗಳಾಗಿ ಕೆಲಸಮಯ ದುಡಿದರು.  

ಅವರ ಪಾತ್ರವೈಖರಿಗಳನ್ನು ಕಂಡವರೆಲ್ಲರೂ ’ಪ್ರಪಂಚವು ಮಹಾಪುರುಷರನ್ನು ಅವರ ಜೀವಿತಕಾಲದಲ್ಲಿ ಪೂರ್ಣವಾಗಿ ಗುರುತಿಸುವುದಿಲ್ಲ.’ (ಪು.51) ಎಂದು ಉದ್ಗರಿಸುವುದು ಶಾಸ್ತ್ರಿಗಳಿಗೆ ಅರ್ಹವಾಗಿ ದೊರೆಯದೇ ಹೋದ ಮನ್ನಣೆಯನ್ನು ನೆನಪಿಸುತ್ತದೆ. 

ವಿಠಲಶಾಸ್ತ್ರಿಗಳ ವಿಚಾರಧಾರೆ ಎಂಬ ಅವರ ಸಂದರ್ಶನ ಲೇಖನ ನಮಗೆಲ್ಲ ಮಾರ್ಗದರ್ಶಿ. ಸ್ವತಃ ನಾಟಕಗಳ ಪ್ರಭಾವದಿಂದ ಯಕ್ಷಗಾನದಲ್ಲಿ ಅನೇಕ ಮಾರ್ಪಾಟುಗಳನ್ನು ಅವರು  ತಂದರಾದರೂ ’ಯಕ್ಷಗಾನವು ಕೇವಲ ಪೌರಾಣಿಕ ಕಥೆಗಳಿಗಾಗಿ, ನೀತಿ ಜಾಗೃತೆಗಾಗಿ ಇರುವ ಕಲೆ. ಅದನ್ನು ಬದಲಿಸಿ ಸುಧಾರಿಸುವುದು ಅದರ ಕೊಲೆ.’ (ಪು. 63) ಎಂಬ ಪ್ರಜ್ಞೆ ಅವರಲ್ಲಿ ಸದಾ ಜಾಗೃತವಾಗಿತ್ತು.  

ಯಕ್ಷಗಾನದಲ್ಲಿ ನೃತ್ಯಾಭಿನಯಗಳೇ ಬಹಳ ಮುಖ್ಯ ಎಂದು ಅವರು ಬಲವಾಗಿ ನಂಬಿದ್ದರು. ’ಮಾತು ಬಲ್ಲವರೆಲ್ಲ ಇಂದು ಯಕ್ಷಗಾನ ರಂಗ ಪ್ರವೇಶ ಮಾಡುತ್ತಾರೆ, ಕಲಾಗಾರರಾಗಿ ಮೆರೆಯುತ್ತಾರೆ ಎಂಬುದು ಭ್ರಮೆ. ಕಲೆಯ ನಿಜತ್ವವನ್ನು ತಿಳಿದವರು ಬರಿಯೆ ವಾಗ್ಝರಿಗೆ ಮೆಚ್ಚಲಾರರು.’ (ಪು. 65) ನಾಟ್ಯ ಅಭ್ಯಸಿಸದೇ ಕೇವಲ ಮಾತಿನ ಮೋಡಿಯಿಂದ ಕಲಾವಿದರಾದವರ ಬಗ್ಗೆ ಶಾಸ್ತ್ರಿಗಳ ಖಡಾಖಂಡಿತ ನಿಲುವು ಇದು. ನಿಜವಾಗಿಯೂ ಕಲೆಯನ್ನು ನೋಡಲು ಕಲಾಭಿಜ್ಞತೆ ಬೇಕು; ಸಜ್ಜನಿಕೆಯಿರಬೇಕು; ಅಂತಚ್ಛಕ್ಷುವನ್ನು ತೆರೆದು ನೋಡಬೇಕು. ಅದು ಕಾಣಸಿಗುವುದು...ಕಲಾಗಾರನ ಕರ್ಮಸಿದ್ಧಿಯಲ್ಲಿ-ಅದರ ಶುದ್ದಿಯಲ್ಲಿ. ಸಂಸ್ಕಾರವಂತ ಪ್ರೇಕ್ಷಕರೂ ಕಲೆಯ ಉನ್ನತೀಕರಣಕ್ಕೆ ಬಹಳ ಮುಖ್ಯ ಎಂಬುದು ಅವರ ಅಭಿಪ್ರಾಯ. 

ಕುರಿಯ ವಿಠಲಶಾಸ್ತ್ರಿ ವಿರಚಿತ ಲೇಖನಗಳು ಹಿರಿಯ ಬಲಿಪರೊಂದಿಗಿನ ಅವರ ಒಡನಾಟ, ಅರ್ಥದಾರಿ ಕಿಲ್ಲೆಯವರ ವ್ಯಕ್ತಿತ್ವ, ಗೆಜ್ಜೆಗುರು ಶಿವರಾಮ ಕಾರಂತರೊಂದಿಗಿನ ಅವರ ಬಾಂಧವ್ಯ, ಯಕ್ಷಗಾನದಲ್ಲಿ ಹಾಡುಗಾರಿಕೆ, ಸೌದಾಸ ಚರಿತ್ರೆ, ದೇರಾಜೆ, ಯಕ್ಷಸಂಬಂಧ ಕುರಿತಾಗಿವೆ. ಮತ್ತುಳಿದಂತೆ ಶಾಸ್ತ್ರಗಳ ಕುರಿತು ಅನೇಕರ ನುಡಿನಮನಗಳಿವೆ, ಅಲ್ಲದೇ ಅವರ ವಿವಿಧ ಪಾತ್ರಗಳ ಚಿತ್ರಗಳಿವೆ.

ಬ್ರಾಹ್ಮಣರಾದವರಿಗೆ ಯಕ್ಷಗಾನ ನಿಷಿದ್ಧ ಎಂಬ ವಾತಾವರಣವಿದ್ದ ಕಾಲದಲ್ಲಿ ಕಲಾವಿದರಾಗಿ ಕ್ರಾಂತಿಯನ್ನುಂಟು ಮಾಡಿದವರು ಕುರಿಯ ಶಾಸ್ತ್ರಿಗಳು. ಬರಿಯ ಹಳ್ಳಿಗಾಡಿನ ಮೋಜು ಅದೆಂದು ಗೇಲಿ ಮಾಡಿಸಿಕೊಳ್ಳುತ್ತಿದ್ದ ಕೆಳ ತಾಣದಿಂದ ಕರ್ನಾಟಕದ ಅತಿ ಶ್ರೇಷ್ಠ ಜಾನಪದ ಕಲೆ ಎಂಬ ಉಚ್ಚ ಸ್ಥಾನಕ್ಕೇರುವವರೆಗೂ ಉಳಿದವರು. ಅವರ ಜೀವನ ಚರಿತ್ರೆಯನ್ನು ಓದುವ ಅವಕಾಶ ನಮಗೆ ದೊರೆತರೂ ನಮ್ಮ ಭಾಗ್ಯವೇ ಹೌದು. 

ಆರತಿ ಪಟ್ರಮೆ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ