ಗುರುವಾರ, ಆಗಸ್ಟ್ 27, 2020

ಪುರಾಣ ಕೋಶ ವಿಹಾರಿ- ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ

ರಾಧಾಕೃಷ್ಣ ಕಲ್ಚಾರ್   

ಪ್ರಕಾಶಕರು: ಕನ್ನಡ ಸಂಘ ಕಾಂತಾವರ 

ವರ್ಷ: 2015

ಪುಟಗಳು: 52

ಕ್ರಯ: ರೂ.45


ಕಾಂತಾವರ ಕನ್ನಡ ಸಂಘವು ಮೂವತ್ತಕ್ಕೆ ಕಾಲಿಟ್ಟ ಸಂದರ್ಭ ನಾಡಿಗೆ ನಮಸ್ಕಾರ ಎಂಬ ಮಾಲಿಕೆಯಡಿಯಲ್ಲಿ ನಾವು ನಮಸ್ಕರಿಸಬೇಕಾದ ಅರ್ಥವಂತರ ಕುರಿತಾಗಿ ತಂದ ಪುಸ್ತಕಮಾಲೆಗಳ ಪೈಕಿ ಒಂದು. ಡಾ. ನಾ.ಮೊಗಸಾಲೆಯವರು ಮತ್ತು ಡಾ.ಬಿ ಜನಾರ್ದನ ಭಟ್ ಮತ್ತಿತರ ಸದಸ್ಯರ ಕ್ರಿಯಾಶೀಲತೆಗೂ ಬದ್ಧತೆಗೂ ಈ ಸಮಯದಲ್ಲಿ ಪ್ರಕಟಿಸಲ್ಪಟ್ಟ ನೂರಕ್ಕೂ ಮೀರಿದ ಪುಸ್ತಕಗಳು ಸಾಕ್ಷಿ. 

ಅರ್ಥಗಾರಿಕೆಯಲ್ಲಿ ಭಾಗವಹಿಸುತ್ತಿದ್ದ ಯುವ ಉಪನ್ಯಾಸಕನೊಬ್ಬ (ಲೇಖಕರೇ ಇರಬಹುದೇ ಎಂದು ನನಗನಿಸಿದೆ. ಇದ್ದರೂ ಇರಬಹುದೇನೋ!) ತಾನು ಅರ್ಥ ಹೇಳುವುದಿಲ್ಲ ಎಂಬ ನಿರ್ಧಾರ ತೆಗೆದುಕೊಂಡಾಗ ಮೂಡಂಬೈಲು ಶಾಸ್ತ್ರಿಗಳು ಆ ತರುಣನಿಗೆ ಬುದ್ಧಿಮಾತು ಹೇಳಿದ ಘಟನೆಯೊಂದಿಗೆ ಪುಸ್ತಕದ ಓದು ಮೊದಲುಗೊಳ್ಳುತ್ತದೆ. ಸಮರ್ಥನೊಬ್ಬ ಅರ್ಥ ಹೇಳದೇ ಉಳಿದರೆ ಅದರಿಂದ ನಷ್ಟವಾಗುವುದು ಒಳ್ಳೆಯ ಅರ್ಥವನ್ನು ಬಯಸುವ ಪ್ರಾಮಾಣಿಕ ಶ್ರೋತೃಗಳಿಗೆ ಎಂಬುದನ್ನು ಅರ್ಥೈಸಿಕೊಂಡ ಯುವಕ ಮುಂದೆ ಅರ್ಥಧಾರಿಯಾಗಿ ಗುರುತಿಸಲ್ಪಡುತ್ತಾನೆ. ಶಾಸ್ತ್ರಿಗಳ ವ್ಯಕ್ತಿತ್ವವನ್ನು ಸೂಚಿಸುವ ಎರಡನೆಯ ಉದಾಹರಣೆಯಾಗಿ ಎಳೆಯ ಅರ್ಥಧಾರಿಯೊಬ್ಬ ಅವರೆದುರು ಮಾತನಾಡಲಾಗದೇ ತಪ್ಪಿದಾಗ ಸಂದರ್ಭವನ್ನು ಸರಿದೂಗಿಸಿಕೊಂಡು ಹೋದ ಘಟನೆಯಿದೆ. ತಾಳಮದ್ದಳೆಯಲ್ಲಿ ಭಾಗವಹಿಸಬೇಕಾದ ಕಲಾವಿದರೊಬ್ಬರು ತಡವಾಗಿ ಬಂದುದನ್ನು ಅರ್ಥಗಾರಿಕೆಯಲ್ಲಿಯೇ ಉಲ್ಲೇಖಿಸಿದ ಅನುಭವ ಮೂರನೆಯ ಉದಾಹರಣೆ. ನಾಲ್ಕನೆಯದಾಗಿ ತಾಳಮದ್ದಳೆ ಕಲಾವಿದರಾಗ ಬಯಸುವವರಿಗೆ ಇರಬೇಕಾದ ಪೂರ್ವತಯಾರಿಯನ್ನು ಹೇಳುವ ಪಾಠವಾಗಿದೆ. ಮೂಡಂಬೈಲು ಶಾಸ್ತ್ರಿಗಳ ವ್ಯಕ್ತಿತ್ವ ಕಲ್ಚಾರರ ಕನ್ನಡಿಯಲ್ಲಿ ಪ್ರತಿಬಿಂಬಿಸಿದ ಪರಿ ಹೀಗೆ. 

’ಅವರ ಜೀವನ ವೃತ್ತವೆಂದರೆ ಅದು ತಾಳಮದ್ದಲೆ ರಂಗಭೂಮಿಯ ಇತಿಹಾಸವೂ ಹೌದು’ (ಪು.6) ಎಂಬುದರೊಂದಿಗೆ ತಾಳಮದ್ದಲೆ ಬೆಳೆದು ಬಂದ ಸಂಕ್ಷಿಪ್ತ ಇತಿಹಾಸದ ವಿವರಣೆಯಿದೆ. ಬಾಲ್ಯದಿಂದಲೇ ತಾಳಮದ್ದಲೆಯ ವಾತಾವರಣದಲ್ಲಿ ಬೆಳೆದ ಶಾಸ್ತ್ರಿಗಳಿಗೆ ಎಂಟನೆಯ ತರಗತಿಗೆ ಸೇರಿದಲ್ಲಿಂದ ತಾಳಮದ್ದಲೆಯ ದಿಗ್ಗಜರನ್ನು ನೋಡುವ, ಅವರೊಂದಿಗೆ ಒಡನಾಡುವ ಅವಕಾಶ ದೊರೆಯಿತು. ಅವರು ಶ್ರೇಷ್ಠ ಅರ್ಥಧಾರಿಗಳ ಸಾಲಿನಲ್ಲಿ ಸೇರಲು ಈ ಹಿನ್ನೆಲೆ ಕಾರಣವಾಯಿತೆನ್ನಬಹುದು. 

ಮೊದಲಿಗೆ ಭಾಗವತಿಕೆಯೊಂದಿಗೆ ಆರಂಭಗೊಂಡ ಅವರ ಕಲಾಯಾನ ಸಂಘಟಕನಾಗಿ, ಕಲಾವಿದನನ್ನಾಗಿ ಅವರನ್ನು ರೂಪುಗೊಳಿಸಿತು. ಘಟಾನುಘಟಿ ಅರ್ಥಧಾರಿಗಳ ಎದುರಿಗೆ ಸ್ತ್ರೀ ಪಾತ್ರಗಳನ್ನು ನಿರ್ವಹಿಸುತ್ತಾ, ಸ್ತ್ರೀಪಾತ್ರಗಳ ಕುರಿತು ಸರಿಯಾದ ಮಾಹಿತಿ, ಅರ್ಥಗಾರಿಕೆಯ ವೈವಿಧ್ಯ, ಸ್ವಭಾವ ವ್ಯತ್ಯಾಸಗಳು, ಮಾತಿನ ಲಯ ಇಂತಹ ಸೂಕ್ಷ್ಮಗಳ ಕುರಿತು ಖಚಿತ ತಿಳುವಳಿಕೆ ಹೊಂದುತ್ತಾ ಬೆಳೆದರು. ಶೇಣಿಯವರ ಪುರುಷ ಪಾತ್ರಗಳಿಗೆ ಸರಿಸಮಾನವಾಗಿ ಕಾಣಿಸಿಕೊಳ್ಳಬೇಕಾದರೆ ಶಾಸ್ತ್ರಿಗಳ ದಾರಿ ಸುಲಭವಿರಲಿಲ್ಲ. ಭಾವನೆಯೇ ಪ್ರಧಾನವಾಗುವಂತೆ ರೂಪಿಸಲಾಗುತ್ತಿದ್ದ ಪಾತ್ರಗಳನ್ನು ಬೌದ್ಧಿಕ ನೆಲೆಗೆ ಏರಿಸಿದವರು ಶಾಸ್ತ್ರಿಗಳು. ಸ್ತ್ರೀ ಪಾತ್ರಗಳಿಂದ ಪುರುಷಪಾತ್ರಗಳಿಗೂ ಅನಾಯಾಸವಾಗಿ ಒಗ್ಗಿಕೊಂಡ ಹಿರಿಮೆ ಅವರದು. 

ಅವರ ಜೀವನವೃತ್ತವನ್ನು ವಿವರಿಸುತ್ತ ಲೇಖಕರು ಶಾಸ್ತ್ರಿಗಳು ಮುಂದೆ ಶಿಕ್ಷಕರಾಗಿ, ಅಂಚೆಕಛೇರಿಯನ್ನೂ ನಡೆಸುತ್ತಾ, ಕೃಷಿಕರಾಗಿಯೂ ಸಂಸಾರಿಯಾಗಿಯೂ ಉತ್ತಮ ಬದುಕು ರೂಪಿಸಿಕೊಂಡ ಪರಿಯನ್ನು ಚಿತ್ರಿಸಿದ್ದಾರೆ. ಕೆಲವು ’ಸ್ವಾರಸ್ಯ ಪ್ರಸಂಗಗಳು’ ರಸವತ್ತಾಗಿವೆ. 

ಶೇಣಿ, ಸಾಮಗರ ಅರ್ಥಗಾರಿಕೆಯ ಕುರಿತು ಶಾಸ್ತ್ರಿಗಳ ಮಾತನ್ನು ಲೇಖಕರು ಉದ್ಧರಿಸುತ್ತಾರೆ: 'ಶೇಣಿಯವರದು ವೈಚಾರಿಕವಾದ ಪ್ರತಿಪಾದನೆ. ಅವರು ದಶರಥನಾದರೆ ಪ್ರಾರಂಭದಲ್ಲೇ ಚರ್ಚೆಗಿಳಿಯುತ್ತಿದ್ದರು. ಕೈಕೆ ವರ ಕೇಳಿದ ಬಳಿಕವೂ ಗದ್ಗದಿತರಾಗುವುದಿಲ್ಲ. ವರ ಕೇಳುವುದರ ಔಚಿತ್ಯವನ್ನೇ ಪ್ರಶ್ನಿಸುವುದು ಅವರ ಕ್ರಮ. ಸಾಮಗರಾದರೆ ಹಾಗಲ್ಲ. ಅವರು ವರವನ್ನು ಕೇಳಿದ ಮೇಲೆ ಪೂರ್ಣ ಬದಲಾಗಿ ದುಃಖಿಸುವ ದಶರಥನಾಗುತ್ತಾರೆ. ಆಮೇಲೆ ಚರ್ಚೆಯಿಲ್ಲ.’ (ಪು.35) 

ಭಾವುಕ ಹಾಗೂ ವೈಚಾರಿಕಗಳೆರಡರ ಕುರಿತು ಅವರ ಅಭಿಪ್ರಾಯವಿದು,  'ಕೆಲವು ಕಡೆ ಬೌದ್ಧಿಕವಾದ ಮಾತುಗಾರಿಕೆ ಅನಿವಾರ್ಯ. ಇಲ್ಲದಿದ್ರೆ ನಾವು ಸಭೆಗೆ ಏನೂ ಕೊಟ್ಟ ಹಾಗಾಗುವುದಿಲ್ಲ. ತಾಳಮದ್ದಳೆ ಕೇಳಿದ ಮೇಲೆ ಆಲೋಚನೆಗೆ ಏನಾದರೂ ಬೇಕು ಅನ್ನುವವರಿದ್ದಾರೆ. ಅವರ ಸಮಾಧಾನಕ್ಕೆ ಬೌದ್ಧಿಕ ಚರ್ಚೆ ಅಗತ್ಯ, ಶೇಣಿಯವರು ಹಾಗೆ ಮಾಡ್ತಾ ಇದ್ರು. ಹಾಗೇಂತ ಭಾವನಾತ್ಮಕವಾಗಿ ಮಾತನಾಡದಿದ್ರೆ ಅದು ಕಲೆಯಾಗುವುದಿಲ್ಲ. ಅದಕ್ಕಾಗಿ ಎಲ್ಲಿ, ಯಾವುದಕ್ಕೆ ಮಹತ್ವ ಕೊಡಬೇಕೋ ಅದನ್ನು ನಾವು ತಿಳಿದು ಮಾತನಾಡಬೇಕಾಗುತ್ತದೆ.’ (ಪು.36)

ಅರ್ಥಗಾರಿಕೆಯ ಯೋಗ್ಯತೆ ಹೆಚ್ಚಿಸಿಕೊಳ್ಳಲು ಶಾಸ್ತ್ರಿಗಳು ನೀಡಿದ ಅಮೂಲ್ಯ ಸಲಹೆಗಳೂ ಇಲ್ಲಿ ದಾಖಲಾಗಿವೆ. ಅಲ್ಲದೇ ಅವರ ಸಾಹಿತ್ಯದ ಕುರಿತೂ ಟಿಪ್ಪಣಿಗಳಿವೆ. 

ಪುಸ್ತಕ ಗಾತ್ರದಲ್ಲಿ ಚಿಕ್ಕದಾದರೂ ವಿಷಯಮಂಡನೆ ಪ್ರಬುದ್ಧವಾಗಿರುವುದರಿಂದ ನಿಧಾನವಾಗಿ ಓದಿ ಅರ್ಥಮಾಡಿಕೊಳ್ಳಬೇಕಾದ ನಿರೂಪಣೆ! 

ಮುಂದಿನ ಓದು ನಿಮ್ಮದು! 

ಆರತಿ ಪಟ್ರಮೆ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ