ಬುಧವಾರ, ಆಗಸ್ಟ್ 26, 2020

ಚೆಂಡೆ ಮದ್ದಳೆಗಳ ನಡುವೆ


ಮದ್ದಳೆಗಾರ ಬಿ. ಗೋಪಾಲಕೃಷ್ಣ ಕುರುಪ್ ಅವರ ಆತ್ಮಕಥನ

ಪ್ರಕಾಶಕರು: ಕನ್ನಡ ಸಂಘ, ಕಾಂತಾವರ

ವರ್ಷ: 2004

ಪುಟಗಳು: 158

ಕ್ರಯ: ರೂ. 75

ಡಾ. ನಾ. ಮೊಗಸಾಲೆಯವರ ಆತ್ಮೀಯ ಆಗ್ರಹ ಮೇರೆಗೆ ರೂಪುತಾಳಿದ ಕೃತಿ. ಆತ್ಮವೃತ್ತಾಂತ ಬರೆಯುವಷ್ಟು ದೊಡ್ಡ ಬದುಕೇ ತನ್ನದು? ಎಂಬ ಪ್ರಶ್ನೆ ತನ್ನೊಳಗಿದ್ದರೂ ಯಾರೊಬ್ಬರೂ ದೊಡ್ಡವರಲ್ಲ, ಯಾರೊಬ್ಬರೂ ಸಣ್ಣವರಲ್ಲ, ನೋಡುವ ದೃಷ್ಟಿಕೋನದಿಂದ ದೊಡ್ಡವರು, ಸಣ್ಣವರು ಎಂಬ ಮೊಗಸಾಲೆಯವರ ತರ್ಕಕ್ಕೆ ಕಟ್ಟುಬಿದ್ದು ಮುಂದೆ ರಾಘವ ನಂಬಿಯಾರರ ಉತ್ತೇಜನದಿಂದ ಅಂತರಂಗವನ್ನು ತೆರೆದಿಟ್ಟವರು ಶ್ರೀ ಕುರುಪ್. 

ಕಠಿಣವಾದ ಬಾಲ್ಯದ ದಿನಗಳಲ್ಲೂ ಆರ್ಥಿಕ ಬಡತನವಿತ್ತಾದರೂ ತಂದೆ ತಾಯಿಯರ ಅಕ್ಕರೆ, ಪ್ರೀತಿಯಿಂದ ಮದ್ದಳೆಯ ಮೇಲೆ ಹೆಚ್ಚಿನ ಮಮಕಾರ ಬೆಳೆಸಿಕೊಂಡರು. ತಂದೆಯವರೇ ಮದ್ದಳೆಯ ಮೊದಲ ಗುರುಗಳೂ ಹೌದು. ಒತ್ತೆಕೋಲದ ಸಂದರ್ಭ ಅವರು ಭಾಗವತಿಕೆ ಮಾಡಿದ್ದು, ದೃಷ್ಟಿ ತಗುಲಿ ಮಾತು ತೊದಲಲಾರಂಭಿಸಿ ಬಳಿಕ ನೂಲು ಮಂತ್ರಿಸಿ ಕಟ್ಟಿದ ನಂತರ ಸರಿಹೋದ ಘಟನೆ, ಅವರೊಳಗಿನ ಕಲಾವಿದನನ್ನು ಎದ್ದು ನಿಲ್ಲಿಸಿತ್ತು. 

ದನ, ಎಮ್ಮೆ, ಕೋಣಗಳನ್ನು ಮೇಯಿಸುತ್ತಲೂ, ಕೃಷಿಯನ್ನು ಇತರ ಪ್ರಾಣಿಗಳಿಂದ ರಕ್ಷಿಸುತ್ತಲೂ ಕಳೆಯಬೇಕಿದ್ದ ದಿನಗಳಲ್ಲೂ ಕಲೋಪಾಸನೆ ಮನದಲ್ಲಿ ಇದ್ದೇ ಇತ್ತು. ಸಂಜೆಯ ವೇಳೆ ಮಹಾಭಾರತ ಗ್ರಂಥದ ಓದು, ಅವಕಾಶವಿದ್ದಾಗ ತಾಳಮದ್ದಳೆಗಳಲ್ಲಿ ಭಾಗವತಿಕೆ ಅವರ ಬದುಕಿನ ಭಾಗವಾಗಿತ್ತು. ನಾರಂಪಾಡಿ ಸುಬ್ಬಯ್ಯ ಶೆಟ್ಟಿಯವರ ಶಿಷ್ಯನಾಗಿ ಅವರ ಅನುಭವ ಬಹಳ ದೊಡ್ಡದು. 

ಕೆಲವು ಮೇಳಗಳಲ್ಲಿ ಮದ್ದಳೆಗಾರನಾಗಿ ಅನುಭವ ಪಡೆದ ನಂತರ ಧರ್ಮಸ್ಥಳ ಮೇಳದಲ್ಲಿ ಪಡೆದುಕೊಂಡ ಅವಕಾಶ ಅವರ ಪ್ರತಿಭೆಗೆ ಹೆಚ್ಚಿನ ಅವಕಾಶವನ್ನೊದಗಿಸಿತು. 'ನೀನೆಷ್ಟು ಚೆನ್ನಾಗಿ ಮದ್ದಳೆ ಬಾರಿಸಿದರೂ ಚೆಂಡೆ ಬಾರಿಸಲು ಕಲಿಯದಿದ್ದರೆ ಮದ್ದಳೆಗಾರನಾಗುವುದಿಲ್ಲ' ಎಂದ ನೆಡ್ಲೆ ನರಸಿಂಹ ಭಟ್ಟರೇ ಅವರನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ತಾನು ಕಲಿಯುವಾಗಲೇ ಇನ್ನೊಬ್ಬರಿಗೆ ಕಲಿಸಬಲ್ಲ ಕೌಶಲ ಅವರಲ್ಲಿದ್ದುದನ್ನು ಹಿರಿಯ ಕಲಾವಿದರು ಗುರುತಿಸಿ ಹಾರೈಸಿದ್ದರು. 

ಬದುಕು ಹಲವರಿಗೆ ಹಲವು ರೀತಿಯ ಸವಾಲುಗಳನ್ನೊಡ್ಡುತ್ತದೆ, ಕಾಡುತ್ತದೆ ಎಂಬುದಕ್ಕೆ ಕುರುಪ್ ರ ಆತ್ಮಕಥೆಯೊಂದು ಸಾಕ್ಷಿ. ಮನೆಯ ಕಷ್ಟಗಳು, ಕಲೆಯ ಮೇಲಿನ ಶ್ರದ್ಧೆ, ಹಿರಿಯ ಕಲಾವಿರುಗಳ ಒಡನಾಟ ಎಲ್ಲದರ ನಡುವೆಯೂ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ, ಹಣಕಾಸಿನ ದೃಷ್ಟಿಯಲ್ಲಿಯೂ ತೊಂದರೆಗೀಡು ಮಾಡಿದ ಒಡನಾಡಿಗಳೂ ಇಲ್ಲದಿಲ್ಲ. ತಮ್ಮದೇ ಆದ ಜಮೀನು ಮಾಡಿದ್ದೂ ಒಂದು ಸಾಹಸಗಾಥೆಯೇ. 

ಅನಾರು, ಧರ್ಮಸ್ಥಳ, ನಿಡ್ಲೆ, ಬರೆಂಗಾಯ, ಅರಸಿನಮಕ್ಕಿ, ಶಿಶಿಲದವರೆಗೂ ಹತ್ತು ಹಲವರಿಗೆ ಚೆಂಡೆಮದ್ದಳೆಗಳ ಗುರುವಾದ ಕುರುಪ್ ಅವರು ಮುಂಬೈಗೂ ಹಿಮ್ಮೇಳ ಗುರುಗಳಾಗಿ ಹೋದುದು ಅರ್ಹತೆಗೆ ಸಂದ ಮನ್ನಣೆಯೇ ಸರಿ. ಶೇಣಿ ಗೋಪಾಲಕೃಷ್ಣ ಭಟ್ಟರ ಹರಿಕತೆಗೆ ಮೃದಂಗ ನುಡಿಸಿದ ಅನುಭವವೂ ಕುರುಪರಿಗಿದೆ. 

1983ರಲ್ಲಿ ಶಿಶಿಲದ ಗಿರಿಜನ ಆಶ್ರಮ ಶಾಲೆಯ ವಠಾರದಲ್ಲಿ ಬುಡಕಟ್ಟು ಜನಾಂಗದವರಿಗೆ ಯಕ್ಷಗಾನದ ಮುಮ್ಮೇಳವನ್ನು ಕಲಿಸಿ ಕುಡಿಯರ ಸಂಸ್ಕೃತಿಯಲ್ಲಿ ಒಂದು ದಾಖಲಾರ್ಹ ಕಾರ್ಯ ಮಾಡಿದರು. ಪ್ರೊ. ರಾಘವೇಂದ್ರ ಆಚಾರ್ ಅವರ ಕೃತಿಯಲ್ಲಿ ಇದು ದಾಖಲಾಗಿದೆ ಎಂಬುದು ಅವರಿಗೆ ಸಂತಸದ ಸಂಗತಿ. ಮುಂದೆ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗುವ ಯೋಗವೂ ಕುರುಪರಿಗೆ ಒದಗಿ ಬಂತು-ನೆಡ್ಲೆಯವರ ನಿರ್ದೇಶನದಲ್ಲಿ. ಅದೇ ಸಂದರ್ಭದಲ್ಲಿ ಮಾಡಿದ ಪಾಠಗಳನ್ನೆಲ್ಲಾ ಶಿಸ್ತುಬದ್ಧವಾಗಿ ಜೋಡಿಸುತ್ತಾ ಪ್ರಾಥಮಿಕ ಯಕ್ಷಗಾನ ಪಾಠಗಳು ಎಂಬ ಪುಸ್ತಕವನ್ನು ಬರೆದವರು ಇವರು. 

ಕಷ್ಟಪಟ್ಟು ಮಾಡಿದ ಭೂಮಿಯನ್ನು ಮಾರುವ ಪರಿಸ್ಥಿತಿ ಬಂದಾಗ ಕೃಷಿಕನ ಜೀವನವು ಕಲಾವಿದನ ಜೀವನದ ಹಾಗೆ ಅತಂತ್ರದ್ದು ಮತ್ತು ಭದ್ರತೆಯದ್ದಲ್ಲ ಎಂಬ ವಿಷಾದ ಅವರನ್ನು ಕಾಡಿದೆ. ಈ ಆಸ್ತಿಗಾಗಿ ತಾನೇ ತಾನು ಕಲಾವಿದನ ಜೀವನಕ್ಕೆ ವಿದಾಯ ಹೇಳಿದ್ದು...ನನ್ನ ತಂದೆಯವರ ಕಾಲದಲ್ಲಿ ಒಂದರ್ಧ ಎಕರೆ ಜಮೀನಿದ್ದರೆ ಅದು ದೊಡ್ಡ ಸೌಭಾಗ್ಯ. ಈಗ ಆಸ್ತಿ ಹೊಂದಿರುವುದು ಶಾಪ (ಪು.90) ಎಂಬ ಮಾತು ಇಂದು ಮಕ್ಕಳನ್ನೆಲ್ಲಾ ದೂರದ ಅಮೆರಿಕಾಗೋ, ಬೆಂಗಳೂರಿಗೋ ಕಳಿಸಿ, ಜಮೀನು ನೋಡಿಕೊಳ್ಳಲು ಕಸುವಿಲ್ಲದೇ ಮಾರಲು ಮನಸ್ಸಿಲ್ಲದೇ ನೊಂದುಕೊಳ್ಳುವ ಎಲ್ಲ ಹಿರಿಯರ ಅಂತರಂಗದ ಮಾತು. 

ನಾನು ಹುಟ್ಟಿನಿಂದ ತೀರಾ ಬಡವ, ನನ್ನ ತಂದೆಯವರಿಗೆ ಅಂಗೈಯಗಲದ ಭೂಮಿಯೂ ಇರಲಿಲ್ಲ. ನನ್ನ ಓದು ಶಿಕ್ಷಣ ಎಲ್ಲ ನನ್ನ ಕನಸಿನ ಒಳಗೆ ಬರಲೇ ಇಲ್ಲ. ಶಾಲಾ ಶಿಕ್ಷಣವೆನ್ನುವುದು ಏನೆಂದು ನಾನು ಅರಿತವನಲ್ಲ. ಆದರೆ ನಾನೇ ಶಿಕ್ಷಕನಾಗಿ ಹತ್ತಾರು ಮಂದಿಗೆ ಯಕ್ಷಗಾನದ ಹಿಮ್ಮೇಳ ಮುಮ್ಮೇಳಗಳನ್ನು ಕಲಿಸಿದೆ. ಅವರಿಗಾಗಿಯೇ ಪಠ್ಯ ಪುಸ್ತಕಗಳನ್ನು ರಚಿಸಿದೆ. ಇದು ದೇವರು ನನ್ನನ್ನು ಕುಣಿಸಿದ ಬಗೆ! (ಪು.94) ಏನೂ ಮಾಡಲಿಕ್ಕೆ ಆಗದವನು ಆಟದ ಪೆಟ್ಟಿಗೆ ಹೊರಬಹುದು ಎಂಬ ಗಾದೆ ಚಾಲ್ತಿಯಲ್ಲಿದ್ದ ಕಾಲಕ್ಕೆ ತಾನೊಬ್ಬ ಕಲಾವಿದನಾಗಿ, ಗುರುವಾಗಿ ಬೆಳೆದ ಗೋಪಾಲಕೃಷ್ಣ ಕುರುಪರ ಜೀವನದ ಸಾಧನೆ ಅಪೂರ್ವ. 

ಕಲಾವಿದನಲ್ಲಿ ಯೌವನ ಇರುವಾಗ, ಉತ್ಸಾಹ ಇರುವಾಗ ಸಮಾಜ ಅವರನ್ನು ಕೊಂಡಾಡುತ್ತದೆ. ಆದರೆ ಆತ ದೈಹಿಕವಾಗಿ ದುರ್ಬಲನಾದಾಗ ಅವನು ಜೀವಂತವಾಗಿದ್ದಾನೆ ಎಂಬುದನ್ನು ಅವನಿಂದ ಸಂತೋಷ ಪಡೆದವರೇ ಮರೆಯುವುದು ಕಲಾಜೀವನದ ವಿಪರ್ಯಾಸ. (96) ಎಂಬ ಮಾತು ಎಲ್ಲ ಕಲಾಭಿಮಾನಿಗಳಿಗೆ ಸಣ್ಣ ಎಚ್ಚರಿಕೆ ಹೌದಲ್ಲ? 

ದೇವಿ ಮಹಾತ್ಮೆ ಪ್ರಸಂಗದಲ್ಲಿ ದೇವಿಯನ್ನು ಬಾಯಿತಾಳ ಹೇಳಿ ಕುಣಿಸುವುದನ್ನು ಈಚೆಗೆ ಒಂದು ಆಟದಲ್ಲಿ ನೋಡಿದೆ. ..ಜನರಿಗೆ ಸಂತೋಷ ಸಿಗಲಿ ಎಂದು ದೇವಿಯನ್ನು ಕುಣಿಸುವುದು ಆ ಪಾತ್ರದ ಗೌರವದ ದೃಷ್ಟಿಯಿಂದಲೂ ಯಕ್ಷಗಾನದ ಪರಂಪರೆಯ ದೃಷ್ಟಿಯಿಂದಲೂ ತಪ್ಪು. ಆದರೆ ಇದನ್ನು ಯಾರಿಗೆ ಯಾರು ಹೇಳಬೇಕು? ಹೇಳಿದರೆ ಯಾರು ಕೇಳುತ್ತಾರೆ? (ಪು.97) ಇಂದಿನ ದಿನಗಳಲ್ಲಿ ಅನೇಕ ಮಂದಿ ಪಾತ್ರದ ಔಚಿತ್ಯವನ್ನು ಬದಿಗಿಟ್ಟು, ಎಲ್ಲಾ ಪದ್ಯಗಳಿಗೂ ನಮೂನೆವಾರು ಕುಣಿಯುವ ರೀತಿಯೊಂದನ್ನು ರೂಢಿ ಮಾಡಿಕೊಳ್ಳುತ್ತಿದ್ದಾರಲ್ಲ, ಅವರೆಲ್ಲರೂ ಗಮನಿಸಬೇಕಾದ ಅಂಶಗಳಿವು. 

ಪೌರಾಣಿಕ ಪ್ರಸಂಗಗಳಿಂದ ಕಲಾವಿದನ ಬೌದ್ಧಿಕ ಮಟ್ಟವೂ ಹೆಚ್ಚು ಬೆಳೆಯುತ್ತದೆ. ಕಲಾವಿದನೂ ಬೆಳೆಯುತ್ತಾನೆ. (ಪು.97) ಎಂಬುದೂ ಕೂಡಾ ಕಲಾವಿದರಿಗಿರಬೇಕಾದ ಪುರಾಣಜ್ಞಾನದ ಆಳವಿಸ್ತಾರಗಳನ್ನು ಸೂಚಿಸುತ್ತವೆ. 

ಅನುಬಂಧದಲ್ಲಿ ಅವರ ಹಲವು ಸನ್ಮಾನದ ಭಾವಚಿತ್ರಗಳೂ, ಭಾಗವತಿಕೆಯ ಪಾಠದ ವಿವರಣೆಯೂ ಇದೆ.  

ಮುಂದಿನ ಓದು ನಿಮ್ಮದು! 

ಆರತಿ ಪಟ್ರಮೆ


   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ