ಗುರುವಾರ, ಆಗಸ್ಟ್ 30, 2018

ಮಕ್ಕಳ ಪ್ರಾರ್ಥನೆ ದೊಡ್ಡದು ಅಲ್ವಾ ಸಾರ್?


ಇದು - ಸ.ಹಿ.ಪ್ರಾ.ಶಾಲೆ, ಕಾಸರಗೋಡು - ಕಥೆಯಲ್ಲ.
ಕೊರಟಗೆರೆ ಸಮೀಪದ ದೊಡ್ಡನರಸಯ್ಯನಪಾಳ್ಯದ ಹಿರಿಯ ಪ್ರಾಥಮಿಕ ಶಾಲೆಯ ಕಥೆ.

“ನಾನು ಮೇಷ್ಟ್ರ ಕೆಲಸಕ್ಕೆ ಸೇರಿ 14 ವರ್ಷ ಆಯ್ತು ಸಾರ್. ಇಷ್ಟೂ ವರ್ಷಗಳ ನನ್ನ ಆಸೆ ನಮ್ಮ ಶಾಲೆಯಲ್ಲೊಂದು ಯಕ್ಷಗಾನ ಮಾಡಿಸಬೇಕು ಅಂತ. ಕಡೇ ಪಕ್ಷ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಾದರೂ ನಮ್ಮ ಹುಡುಗರಿಗೆ ಯಕ್ಷಗಾನ ವೇಷ ತೊಡಿಸಿ ಖುಷಿಪಡಬೇಕು ಅಂದುಕೊಂಡಿದ್ದೆ. ಆಗಲೇ ಇಲ್ಲ. ಈಗ ನಿಮ್ಮ ತಂಡದ ಬಗ್ಗೆ ಗೊತ್ತಾಯ್ತು. ಈ ಸ್ವಾತಂತ್ರ್ಯೋತ್ಸವಕ್ಕೊಂದು ಯಕ್ಷಗಾನ ಆಡಲೇಬೇಕು ನೀವು. ನಮ್ಮೂರ ಮಂದಿ ಯಕ್ಷಗಾನ ನೋಡೇ ಇಲ್ಲ. ಇಲ್ಲಿ ನಿಮ್ಮದೇ ಮೊದಲ ಯಕ್ಷಗಾನ…” ಹಾಗೆಂದು ಫೋನಿನಲ್ಲಿ ಹೇಳಿದರು ನಾಗೇಶ್.

ಅವರು ದೊಡ್ಡನರಸಯ್ಯನಪಾಳ್ಯದ ಸ.ಹಿ.ಪ್ರಾ. ಶಾಲೆಯ ಮೇಸ್ಟ್ರು. ಪಾದರಸದಷ್ಟು ಚುರುಕು. ಮಹತ್ವಾಕಾಂಕ್ಷಿ. ಬಹುಮುಖ ಪ್ರತಿಭೆ. ಒಳ್ಳೆಯ ರಂಗಭೂಮಿ ಕಲಾವಿದ.

“ಒಂದು ಯಕ್ಷಗಾನ ಆಗಬೇಕೆಂದರೆ ಸಾಕಷ್ಟು ಖರ್ಚಿದೆ ಅಂತ ನಂಗೆ ಗೊತ್ತು. ಆದರೆ ಅಷ್ಟೊಂದು ಹೊಂದಿಸೋದು ನಮ್ಮ ಹಳ್ಳಿ ಶಾಲೇಲಿ ಆಗಲ್ಲ. ನಮ್ಮ ಎಸ್.ಡಿ.ಎಂ.ಸಿ. ಸದಸ್ಯರು  ಒಂದಿಷ್ಟು ಸಹಾಯ ಮಾಡ್ತೀವಿ ಅಂದಿದ್ದಾರೆ. ಅದರಲ್ಲೇ ಅಡ್ಜಸ್ಟ್ ಮಾಡಬೇಕು. ನಮ್ಮ ಹುಡುಗರು ತುಂಬ ನಿರೀಕ್ಷೆಯಿಂದ ಇದ್ದಾರೆ…” ಅಂತ ಮಾತು ಮುಂದುವರಿಸಿದರು ನಾಗೇಶ್. ಮಾರನೆಯ ದಿನವೇ ಬಂದು ಖುದ್ದು ಭೇಟಿಯೂ ಆದರು.

‘‘ಕೃಷ್ಣಾರ್ಜುನ ಕಾಳಗ’ ಆಡೋಣ ಎಂದಳು ಆರತಿ. ಆಮೇಲೇನಿದ್ದರೂ ಅವಳದ್ದೇ ಕೆಲಸ. ಮತ್ತೊಂದೇ ವಾರ ಉಳಿದಿದ್ದರಿಂದ ಸಿದ್ಧತೆ ಭರದಿಂದ ನಡೆಯಿತು. ಆದರೆ ಅಷ್ಟೇ ಭರದಿಂದ ಊರೆಲ್ಲ ಮಳೆಯೂ ಸುರಿಯುತ್ತಿತ್ತು. ಅತ್ತ ಕೇರಳ-ಕೊಡಗುಗಳಲ್ಲಿ ನದಿಗಳು ಉಕ್ಕಿ ಹರಿದು ಜನ ಕಂಗಾಲಾಗಿದ್ದರೆ ಇತ್ತ ಬಯಲುಸೀಮೆಯಲ್ಲೂ ನಿರಂತರ ಮಳೆ. 

ಆಗಸ್ಟ್ 14ರ ಸಂಜೆ ನಾಗೇಶ್ ಅವರಿಗೆ ಫೋನ್ ಮಾಡಿದೆ. “ಮಳೆ ಜೋರಾಗಿದೆಯಲ್ಲಾ ಸಾರ್. ನಾಳೆಯೂ ಹೀಗೇ ಸುರಿದರೆ ಏನು ಮಾಡೋಣ?” ಎಂದು ಕೇಳಿದೆ.

“ಇಲ್ಲಿ ಅಷ್ಟೊಂದು ಮಳೆ ಇಲ್ಲ ಸಾರ್. ನಾಳೆ ಏನೂ ತೊಂದರೆ ಆಗದು ಅನ್ನೋ ವಿಶ್ವಾಸ. ಶಾಮಿಯಾನ ಹಾಕಿಸ್ತೀವಿ. ಸಣ್ಣಪುಟ್ಟ ಮಳೆಗೆ ಏನೂ ಆಗದು” ಎಂದರು ನಾಗೇಶ್.

“ಆದರೂ…” ಎಂದು ನಾನು ಸಣ್ಣ ಅನುಮಾನ ವ್ಯಕ್ತಪಡಿಸಿದೆ.

“ಎಲ್ಲದಕ್ಕಿಂತ ನಮ್ಮ ಮಕ್ಕಳ ಪ್ರಾರ್ಥನೆ ದೊಡ್ಡದು ಅಲ್ವಾ ಸಾರ್?” ಎಂದು ಮರುಪ್ರಶ್ನಿಸಿದರು ನಾಗೇಶ್.
ನಾನು ಸುಮ್ಮನಾದೆ.

ಆ ದಿನ ಮಧ್ಯರಾತ್ರಿಯವರೆಗೂ ನಮ್ಮ ಪಟ್ಟಾಜೆ ಉದಯಣ್ಣ ಹಾಗೂ ಜಯಪ್ರಕಾಶ್ ಅವರನ್ನೊಳಗೊಂಡ ಹಿಮ್ಮೇಳದವರೊಂದಿಗೆ ಮನೆಯೊಳಗೇ ಅಭ್ಯಾಸವೂ ನಡೆಯಿತು. ಮಂಜುನಾಥ್-ಸುಪ್ರಿಯಾ, ವೇದಮೂರ್ತಿ-ನವ್ಯಾ ದಂಪತಿಗಳ ಉದಾರತೆಯಿಂದ ಭೂರಿ ಭೋಜನವೂ.

ಬೆಳಗ್ಗೆ ಎದ್ದಾಗಲೂ ಮಳೆಮೋಡ ದಟ್ಟೈಸಿತ್ತು. ಏಳು ಗಂಟೆಗೆಲ್ಲ ತಂಡದ ಸದಸ್ಯರು ಹೊರಟು ನಿಂತಾಯಿತು. ಅತ್ತ ಕಡೆಯಿಂದ ಮತ್ತೆ ನಾಗೇಶ್ ಫೋನು: “ಮಳೆ ಒಂದೇ ಸಮನೆ ಸುರೀತಿದೆಯಲ್ಲಾ ಸಾರ್. ಧ್ವಜಾರೋಹಣವಾದರೂ ಮಾಡಬಹುದಾ ಅಂತ ಕಾಯ್ತಾ ಇದೀವಿ. ಬಿಡೋ ಲಕ್ಷಣ ಇಲ್ಲ. ಏನ್ಮಾಡೋದು ಸಾರ್?”

ಏನ್ಮಾಡೋದು? ಇಡೀ ತಂಡ ವಾರವಿಡೀ ಪ್ರಾಕ್ಟೀಸ್ ಮಾಡಿ ಬಣ್ಣ ಹಚ್ಚುವುದಕ್ಕೆ ಸಿದ್ಧವಾಗಿದೆ. ಹಿಮ್ಮೇಳದವರು ಬೆಂಗಳೂರಿನಿಂದ ಬಂದು ನಿನ್ನೆ ರಾತ್ರಿಯಿಂದಲೇ ನಮ್ಮ ಜತೆಗಿದ್ದಾರೆ. ಅರ್ಜುನ ವೇಷಭೂಷಣ ಹೊತ್ತುಕೊಂಡು ಏಳೂವರೆ ಗಂಟೆಗೆಲ್ಲ ಶಾಲೆಯ ಬಳಿಗೇ ಬಂದುಬಿಡುತ್ತಾರೆ.

“ನಿಮ್ಮ ಶಾಲೆಯಲ್ಲಿ ಯಾವುದಾದರೂ ಹಾಲ್, ದೊಡ್ಡ ಕ್ಲಾಸ್ ರೂಂ ಅಥವಾ ಒಂದಷ್ಟು ಉದ್ದದ ಜಗುಲಿ ಇಲ್ವಾ ಸಾರ್” ನಾನು ಕೇಳಿದೆ.

“ಅಯ್ಯೋ ಗೊತ್ತಲ್ಲ ಸಾರ್ ನಮ್ದು ಸರ್ಕಾರಿ ಪಾಠಶಾಲೆ. ಚಿಕ್ಕಚಿಕ್ಕ ಕ್ಲಾಸುಗಳು. ಮಕ್ಳು ಕೂತ್ಕೊಂಬಿಟ್ರೆ ಕಾಲಿಡಕ್ಕೆ ಜಾಗ ಇರೋದಿಲ್ಲ. ಹೊರಗೆ ಇರೋ ಸಣ್ಣ ಅಂಗಳದಲ್ಲೇ ಶಾಮಿಯಾನ, ಸ್ಟೇಜು ಹಾಕಿಸ್ಬೇಕು. ಅಲ್ಲೆಲ್ಲ ಅಷ್ಟಷ್ಟು ನೀರು ನಿಂತ್ಕೊಂಬಿಟ್ಟಿದೆ. ನನ್ನ ಒಂದು ವಾರದ ಒದ್ದಾಟ ವೇಸ್ಟ್ ಆಗೋಯ್ತು ಸಾರ್” ಎಂದು ನಾಗೇಶ್ ಅಸಹಾಯಕರಾದರು.

“ಶಾಲೆಯ ಸುತ್ತಮುತ್ತ ಯಾರದ್ದಾದ್ರೂ ದೊಡ್ಡ ಮನೆ ಅಥವಾ ಸಮುದಾಯ ಭವನ ಅಥವಾ ದೇವರ ಗುಡಿ ಏನಾದರೂ ಇದೆಯಾ ನೋಡಿ. ಶಾಲೆಯ ಹೊರತು ಹತ್ತಿರದಲ್ಲೇ ಬೇರೆಲ್ಲಿ ಮಾಡಬಹುದು ನಿಧಾನವಾಗಿ ಯೋಚನೆ ಮಾಡಿ. ಮಕ್ಕಳನ್ನು ನಿರಾಶೆಗೊಳಿಸೋದು ಬೇಡ. ನಾವು ಹೊರಟಾಗಿದೆ, ಬರ್ತೀವಿ. ಏನಾದರೂ ಮಾಡೋಣ” ಎಂದೆ.

“ಸರಿ ನೋಡೋಣ ಸಾರ್. ಏನಾದರೂ ವ್ಯವಸ್ಥೆ ಮಾಡೋಣ. ಬನ್ನಿ ನೀವು” ಎಂದು ಫೋನಿಟ್ಟರು ನಾಗೇಶ್. ನಾವು ಹೊರಟೆವು. ಮಳೆ ಜೋರಾಯಿತು. 25 30 ಕಿ. ಮೀ. ಪ್ರಯಾಣದುದ್ದಕ್ಕೂ ಮಳೆ ಹಾಗೆಯೇ ಇತ್ತು.

ದೊಡ್ಡನರಸಯ್ಯನ ಪಾಳ್ಯ ತಲುಪುವ ವೇಳೆಗೆ ಮಳೆ ಕೊಂಚ ಇಳಿದಿತ್ತು. ಅದರ ನಡುವೆಯೇ ಯೂನಿಫಾರ್ಮಿನಲ್ಲಿದ್ದ ಪುಟಾಣಿಗಳು ಧ್ವಜಗೀತೆ ಹಾಡುತ್ತಿದ್ದರು.

“ಮಳೆ ಸಣ್ಣದಾಗುತ್ತಿದೆ ಸಾರ್. ಅಲ್ಲೊಂದು ಕ್ಲಾಸುರೂಂ ಖಾಲಿ ಇದೆ. ನೀವು ಕಾಸ್ಟ್ಯೂಮ್ಸ್ ಹಾಕ್ಕೊಳ್ಳೋದು ಶುರು ಮಾಡಿಕೊಳ್ಳಿ. ಹುಡುಗರು ಮೆರವಣಿಗೆ ಹೋಗಿ ಬರುತ್ತಾರೆ. ಅಷ್ಟರಲ್ಲಿ ಸ್ಟೇಜು ಶಾಮಿಯಾನ ಹಾಕಿಸ್ತೀನಿ. ನಿಮಗೇನಾದರೂ ಸಹಾಯಕ್ಕೆ ನಮ್ಮ ಹುಡುಗರು ಇರುತ್ತಾರೆ” ಎಂದರು ನಾಗೇಶ್.

ಆ ಪುಟಾಣಿಗಳಂತೂ ಚುರುಕುತನದಲ್ಲಿ ಮೇಸ್ಟ್ರಿಗೆ ಸರಿಸಾಟಿಯಾಗಿದ್ದರು. ಒಂದು ಸಣ್ಣ ಕೆಲಸ ಹೇಳಿದರೆ ನಾಕು ಹುಡುಗರು ಎಂಟು ದಿಕ್ಕಿಗೆ ಓಡಿ ಹದಿನಾರು ಸೆಕೆಂಡಲ್ಲಿ ವಾಪಸ್ ಬಂದು, ಇನ್ನೇನು ಹೇಳಿ ಸರ ಎಂದು ಕಾಯುತ್ತಿದ್ದರು. “ಏನ್ಸಾರ್ ನಿಮ್ ಹುಡುಗ್ರು” ಎಂದರೆ “ಹ್ಞೂ ಸಾರ್, ಹಂಗೆ ಮಡಗಿದೀವಿ. ತಗೊಳ್ಳಿ ಈ ಬಾಳೆಹಣ್ಣು ದೇವರ ಪಕ್ಕ ಇಡಿ, ನಮ್ ಹುಡುಗ್ರೇ ಬೆಳೆದಿದ್ದು” ಎಂದು ಅಷ್ಟೆಲ್ಲ ಅಡಾವುಡಿಗಳ ನಡುವೆ ಮಂದಹಾಸ ಬೀರಿದರು ನಾಗೇಶ್.

ಅಂತೂ ಬಹುತೇಕ ಮಳೆ ನಿಂತೇ ಹೋಯಿತು. ಅತ್ತ ತಕ್ಕಮಟ್ಟಿನ ವೇದಿಕೆ ಸಿದ್ಧವಾದರೆ ಇತ್ತ ವೇಷಗಳೂ ತಯಾರಾದವು. ಹನ್ನೆರಡೂ ಕಾಲು ದಾಟುವ ಹೊತ್ತಿಗೆ ಭಾಗವತರು ‘ಗಜಮುಖದವಗೆ ಗಣಪಗೇ’ ಎಂದು ಹಾಡಿ ವೇದಿಕೆ ಏರಿಯೇಬಿಟ್ಟರು.

ಮಳೆಯ ನಡುವೆಯೂ ಮಕ್ಕಳು, ಹಳ್ಳಿಯ ಹತ್ತಾರು ಮಂದಿ ಜಮಾಯಿಸಿದ್ದರು. ಒಂದಷ್ಟು ಹೊತ್ತು ಹೈಕಳು ಕಣ್ಣುಬಾಯಿ ಬಿಟ್ಟು ವೇಷಗಳನ್ನು ನೋಡಿದವು. ಆಮೇಲೆ ಅರ್ಥವಾಗದೆ ಬೋರ್ ಅನಿಸಿ ತಮ್ಮತಮ್ಮೊಳಗೇ ಒಂದಿಷ್ಟು ಸದ್ದುಗದ್ದಲ ಮಾಡಿಕೊಂಡವು.

ಮೂರೂಕಾಲಕ್ಕೆ ಸರಿಯಾಗಿ ಆಟ ಮುಗಿಸಿ ಭಾಗವತರು ‘ಕರದೊಳೂ ಪರಶು ಪಾಶಾಂಕುಶಧಾರಗೆ’ ಹಾಡಿದ ಮರುಕ್ಷಣ ಆಕಾಶ ಕಳಚಿಬಿದ್ದಂತೆ ಧೋ ಎಂದು ಮತ್ತೆ ಮುಸಲಧಾರೆ ಸುರಿಯತೊಡಗಿತು.

“ಮಕ್ಕಳ ಪ್ರಾರ್ಥನೆ ದೊಡ್ಡದು ಅಲ್ವಾ ಸಾರ್?” ಎಂಬ ನಾಗೇಶ್ ಮಾತನ್ನು ಹತ್ತು ಸಲ ನೆನಪಿಸಿಕೊಂಡೆ.

ಮಂಗಳವಾರ, ಅಕ್ಟೋಬರ್ 31, 2017

ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ 'ಕರ್ನಾಟಕ ಯಕ್ಷಗಾನ ಕವಿಚರಿತ್ರೆ'

ಯಕ್ಷಗಾನ ಕೃತಿ ಪರಿಚಯ ಮಾಲಿಕೆ-2

ಕರ್ನಾಟಕ ಯಕ್ಷಗಾನ ಕವಿಚರಿತ್ರೆ
ಡಾ. ಕಬ್ಬಿನಾಲೆ ವಸಂತ ಭಾರದ್ವಾಜ
ಪ್ರಕಾಶನ: ಯಕ್ಷಗಾನ ಕೇಂದ್ರ, ಶಿವಪ್ರಭಾ, ಹಯಗ್ರೀವನಗರ, ಉಡುಪಿ.
ವರ್ಷ: 2013
ಪುಟಗಳು: 12+259
ಬೆಲೆ: ರೂ. 150

ಕರ್ನಾಟಕದ ಇತಿಹಾಸದಲ್ಲಿ ಬಂದಿರುವ ಯಕ್ಷಗಾನ ಕವಿಗಳ ಮತ್ತು ಅವರು ರಚಿಸಿರುವ ಪ್ರಸಂಗಗಳ ಸಮಗ್ರ ಚಿತ್ರಣ ನೀಡುವ ಅಪರೂಪದ ಕೃತಿಯಿದು. ಈ ಹೊತ್ತಗೆಯನ್ನು ನೋಡಿದ ಮೇಲಾದರೂ, ಯಕ್ಷಗಾನ ಕೃತಿಗಳನ್ನು ಗಂಭೀರ ಸಾಹಿತ್ಯ ಕೃತಿಗಳೆಂದು ಪರಿಗಣಿಸುವಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಯಾವ ಅನುಮಾನವೂ ಉಳಿಯದೆಂದು ನನಗನಿಸುತ್ತದೆ. “ಜಗತ್ತಿನ ಭಾಷೆಗಳಲ್ಲೆಲ್ಲ ಕನ್ನಡ ಸುಸಮೃದ್ಧ ಭಾಷೆಯೆಂಬುದಕ್ಕೆ ‘ಕರ್ನಾಟಕ ಯಕ್ಷಗಾನ ಕವಿಚರಿತ್ರೆ’ಯೇ ನಿರ್ದುಷ್ಟ ನಾಯಕಸಾಕ್ಷಿಯಾಗಿದೆ” ಎಂದು ತಮ್ಮ ಬೆನ್ನುಡಿಯಲ್ಲಿ ಪ್ರೊ. ದೇಜಗೌ ಅತ್ಯಂತ ಸೂಕ್ತವಾಗಿಯೇ ಅಭಿಪ್ರಾಯಪಟ್ಟಿದ್ದಾರೆ.

ಹದಿನಾಲ್ಕನೆಯ ಶತಮಾನಕ್ಕೆ ಸೇರಿದ ಆದಿಪರ್ವಕಾರನಿಂದ ತೊಡಗಿ 1990ರ ದಶಕದ ಪ್ರಸಂಗಕರ್ತೃಗಳವರೆಗೆ ಡಾ. ಭಾರದ್ವಾಜರು ಒಟ್ಟು 903 ಯಕ್ಷಗಾನ ಕವಿಗಳನ್ನೂ ಅವರ ಕೃತಿಗಳನ್ನು ಪಟ್ಟಿಮಾಡಿದ್ದಾರೆ. ಇವರೆಲ್ಲರಿಂದ ರಚಿತವಾಗಿರುವ ಒಟ್ಟು 4,358 ಪ್ರಸಂಗಗಳ ಶೀರ್ಷಿಕೆಗಳು ಈ ಪುಸ್ತಕದಲ್ಲಿ ಲಭ್ಯ ಇವೆ. “ಅಜ್ಞಾತ ಕವಿಗಳ ಸುಮಾರು 300 ಪ್ರಸಂಗಗಳನ್ನು ಸೇರಿಸಿದರೆ ಈ ಸಂಖ್ಯೆ 4658 ಆಗುತ್ತದೆ” ಎನ್ನುವ ಕೃತಿಕಾರರು ಇದನ್ನು “ಯಕ್ಷಗಾನ ಕಾವ್ಯಲೋಕದ ವಿಸ್ತಾರಕ್ಕೆ ಸಾಕ್ಷಿ” ಎಂದು ಬಣ್ಣಿಸಿದ್ದಾರೆ. ಪ್ರತಿಯೊಂದು ಪ್ರಸಂಗದಲ್ಲಿ ಕನಿಷ್ಠ ಸರಾಸರಿ ಇನ್ನೂರೈವತ್ತು ಪದ್ಯಗಳಿವೆಯೆಂದು ಭಾವಿಸಿದರೂ ಪದ್ಯಗಳ ಒಟ್ಟು ಸಂಖ್ಯೆ ಹತ್ತುಲಕ್ಷವನ್ನು ದಾಟುತ್ತದೆ ಎಂದು ಅವರು ಅಂದಾಜಿಸಿದ್ದಾರೆ. ಇದನ್ನು ಪ್ರಸ್ತಾಪಿಸುತ್ತಾ ಪ್ರೊ. ದೇಜಗೌ, “ಈ ಸಂಖ್ಯೆಯೊಂದೇ ಸಾಕು ವಿತತವಿದಗ್ಧರನ್ನು ಅಚ್ಚರಿಗೊಳಿಸುವುದಕ್ಕೆ” ಎಂದಿದ್ದಾರೆ.

ಕೇವಲ ಕರಾವಳಿಯ ಯಕ್ಷಗಾನ ಕವಿಗಳನ್ನಷ್ಟೇ ಅಲ್ಲದೆ ಮಲೆನಾಡು ಮತ್ತು ಬಯಲುಸೀಮೆಯಲ್ಲೂ ಇದ್ದು ಯಕ್ಷಗಾನ ಕೃತಿಗಳನ್ನು ರಚಿಸಿದವರ ಸಂಕ್ಷಿಪ್ತ ವಿವರಗಳನ್ನು ‘ಕವಿಚರಿತ್ರೆ’ ನೀಡುತ್ತದೆ. ಪಡುವಲಪಾಯ ಯಕ್ಷಗಾನದೊಂದಿಗೆ, ದೊಡ್ಡಾಟ, ಸಣ್ಣಾಟ, ಪಾರಿಜಾತ ಮುಂತಾದ ಪ್ರಕಾರಗಳಲ್ಲಿ ಬಂದಿರುವ ಕೃತಿಗಳನ್ನೂ ಇಲ್ಲಿ ಪರಿಗಣಿಸಲಾಗಿದೆ. ಆದರೂ “ಇದನ್ನು ಸಮಗ್ರವೆಂದು ಹೇಳಲಾಗದು. ಏಕೆಂದರೆ ಲಭ್ಯ ಮಾಹಿತಿಗಳ ಆಧಾರದಲ್ಲಷ್ಟೇ ಈ ಪ್ರಯತ್ನವನ್ನು ಕೈಗೊಳ್ಳಲಾಗಿದೆ. ಕಾಲಗರ್ಭದಲ್ಲಿ ಎಷ್ಟೋ ಪ್ರಸಂಗಗಳು ನಾಶವಾಗಿರಬಹುದು. ಹೊಸ ಕಾಲದಲ್ಲಿ ಅನೇಕ ಕವಿಗಳು ತಮ್ಮಷ್ಟಕ್ಕೆ ಪ್ರಸಂಗವನ್ನು ರಚಿಸುತ್ತಿರುವುದರಿಂದ ಮತ್ತು ಎಷ್ಟೋ ಸಂದರ್ಭಗಳಲ್ಲಿ ಅವುಗಳು ಪ್ರಕಟವಾಗದೇ ಇರುವುದರಿಂದ ಕಾಲಕಾಲಕ್ಕೆ ಈ ಗ್ರಂಥವನ್ನು ಇಂತೇದಿತಗೊಳಿಸಬೇಕಾಗುತ್ತದೆ” ಎಂದು ಕೃತಿಕಾರ ವಿನಮ್ರವಾಗಿ ಹೇಳಿದ್ದಾರೆ.

ಕೃತಿಕಾರರ ಹೆಸರು, ಊರು, ಕಾಲನಿರ್ಣಯಕ್ಕೆ ಸಂಬಂಧಿಸಿದಂತೆ ಇರುವ ತಾಂತ್ರಿಕ ತೊಡಕುಗಳ ಬಗೆಗೂ ತಮ್ಮ ಮುನ್ನುಡಿಯಲ್ಲಿ ಡಾ. ಭಾರದ್ವಾಜರು ವಿವರವಾಗಿ ಬರೆದಿದ್ದಾರೆ. ತಂಜಾವೂರಿನ ಅರಸ ರಾಜಾ ರಘುನಾಥ ನಾಯಕ, ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರು, ಬೆಂಗಳೂರು ನಿರ್ಮಾತೃ ಕೆಂಪೇಗೌಡ, ವಿಜಯನಗರದ ದೊರೆ ಹರಿಹರ ಮುಂತಾದವರು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಕುರಿತೂ ಪ್ರಸ್ತಾಪಿಸಿದ್ದಾರೆ. ಆಧುನಿಕ ಕಾಲದಲ್ಲಿ ಅನೇಕ ಪ್ರಸಂಗಗಳಿಗೆ ಕಥಾ ರಚನೆ ಮಾಡಿದವರು ಮತ್ತು ಪದ್ಯಗಳನ್ನು ರಚಿಸಿದವರು ಬೇರೆಬೇರೆಯಾಗಿರುವುದರಿಂದ ಯಾರನ್ನು ಪ್ರಸಂಗಕರ್ತೃ ಎಂದು ಕರೆಯಬೇಕೆಂದು ಉಂಟಾಗಿರುವ ಗೊಂದಲದ ಬಗೆಗೂ ಮಾತನಾಡಿದ್ದಾರೆ.

ಕನ್ನಡವಲ್ಲದೆ ತುಳು, ಕೊಂಕಣಿ, ಹಿಂದಿ, ಮರಾಠಿ, ಸಂಸ್ಕೃತ, ಇಂಗ್ಲಿಷ್, ಹವಿಗನ್ನಡ ಭಾಷೆಗಳಲ್ಲೂ ಯಕ್ಷಗಾನ ಪ್ರಸಂಗಗಳು ರಚಿತವಾಗಿರುವ ಮಾಹಿತಿ ನೀಡಿದ್ದು, ಯಕ್ಷಗಾನದ ವ್ಯಾಪ್ತಿ ವಿಸ್ತಾರವನ್ನು ತೋರಿಸುತ್ತದೆ. ಪೌರಾಣಿಕ, ಐತಿಹಾಸಿಕ, ಜಾನಪದೀಯ ಕಥೆಗಳು, ಸಾಮಾಜಿಕ/ಕಾಲ್ಪನಿಕ ಪ್ರಸಂಗಗಳು ಯಕ್ಷಗಾನ ಸಮುದ್ರದ ಆಳ-ಅಗಲಗಳಿಗೆ ಸಾಕ್ಷಿಯಾಗಿವೆ. “ರಾಜಮಹಾರಾಜರಿಂದ ತೊಡಗಿ ಸಂನ್ಯಾಸಿಗಳವರೆಗೆ, ಬಾಲಕರಿಂದ ಹಿಡಿದು ವೃದ್ಧರವರೆಗೆ ಎಲ್ಲ ಸ್ತರದ ಕವಿಗಳು ಪ್ರಸಂಗರಚನೆ ಮಾಡಿದ್ದಾರೆ. ಬ್ರಾಹ್ಮಣರು, ವೀರಶೈವರು, ದಲಿತರು, ಬಿಲ್ಲವರು, ಬಂಟರು, ಒಕ್ಕಲಿಗರು, ಜೈನರು, ರಜಪೂತರು, ಮುಸಲ್ಮಾನರು, ಕ್ರೈಸ್ತರು ಹೀಗೆ ಸಮಾಜದ ಎಲ್ಲ ವರ್ಗಗಳ ಕವಿಗಳು ಯಕ್ಷಗಾನ ಕೃತಿರಚನೆ ಮಾಡಿದ್ದಾರೆ. ಮಹಿಳೆಯರೂ ಈ ದಿಸೆಯಲ್ಲಿ ಪ್ರಯತ್ನ ಮಾಡಿದ್ದಾರೆ. ದಕ್ಷಿಣದ ಗಡಿನಾಡಾದ ಕೇರಳದ ಕುಂಬಳೆಯಿಂದ ತೊಡಗಿ ಉತ್ತರದ ಬೀದರಿನವರೆಗೆ, ಪಶ್ಚಿಮದ ಕಡಲತಡಿಯ ಗೋಕರ್ಣದಿಂದ ಪೂರ್ವದ ಕೃಷ್ಣಗಿರಿಯವರೆಗೆ ಸರ್ವತ್ರ ಕನ್ನಡ ಯಕ್ಷಗಾನ ಕವಿಗಳ ಕಾವ್ಯಕೃಷಿ ನಡೆದಿದೆ” ಎಂಬ ಡಾ. ಭಾರದ್ವಾಜರ ಮಾಹಿತಿ ಯಕ್ಷಗಾನದ ಹರವಿಗೆ ಮತ್ತಷ್ಟು ಪುಷ್ಟಿ ನೀಡುತ್ತದೆ.

ಪುಸ್ತಕದ ನಡುನಡುವೆ ಪ್ರಮುಖ ಕವಿಗಳ ಕೃತಿಗಳ ಆಯ್ದ ಪದ್ಯಗಳನ್ನು ಕೊಡಲಾಗಿದ್ದು ಕೃತಿಯ ಒಟ್ಟಾರೆ ತೂಕ, ಸ್ವಾರಸ್ಯ ಹೆಚ್ಚಿದೆ.  ಕೊನೆಯಲ್ಲಿ, ಕೊನೆಗೆ ಕವಿಗಳ ಅಕಾರಾದಿ ಪಟ್ಟಿಯಿದ್ದು ಬಳಕೆಗೆ ಅನುಕೂಲಕರವಾಗಿದೆ. ಯಕ್ಷಗಾನ, ಸಾಹಿತ್ಯಾಸಕ್ತರಿಗೆ, ಸಂಶೋಧಕರಿಗೆ ನೆರವಾಗಬಲ್ಲ ವೈಶಿಷ್ಟ್ಯಪೂರ್ಣ ಕೃತಿ ಇದೆಂಬುದು ನಿಚ್ಚಳ. ದೇಜಗೌ ಹೇಳಿರುವಂತೆ, ಈ ಕೃತಿಯನ್ನು ರಚಿಸಿ ಡಾ. ಭಾರದ್ವಾಜರು  ನಿಜಕ್ಕೂ ಎಲ್ಲ ಕನ್ನಡಿಗರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.

(ವಿ. ಸೂ.: ಇದು ಪುಸ್ತಕದ ಪರಿಚಯವೇ ಹೊರತು ವಿಮರ್ಶೆಯಲ್ಲ.)
ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಆಗಸ್ಟ್ 13, 2016

ಹೊಸ್ತೋಟ ಮಂಜುನಾಥ ಭಾಗವತರ ‘ಒಡಲಿನ ಮಡಿಲು-ಯಕ್ಷತಾರೆ: ಬಯಲಾಟದ ನೆನಪುಗಳು’

ಯಕ್ಷಗಾನ ಕೃತಿ ಪರಿಚಯ ಮಾಲಿಕೆ-1

ಒಡಲಿನ ಮಡಿಲು-ಯಕ್ಷತಾರೆ: ಬಯಲಾಟದ ನೆನಪುಗಳು
ಹೊಸ್ತೋಟ ಮಂಜುನಾಥ ಭಾಗವತ
ಪ್ರಕಾಶನ: ಅನೇಕ ನಾರಾಯಣ ಜೋಶಿ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು.
ವರ್ಷ: 2015            
ಪುಟಗಳು: 192          
ಬೆಲೆ: ರೂ. 150

ಹೊಸ್ತೋಟ ಮಂಜುನಾಥ ಭಾಗವತರ ಬಹುಮುಖಿ ವ್ಯಕ್ತಿತ್ವವನ್ನು ಪರಿಚಯಿಸುವ ಕೃತಿಯಿದು. ಯಕ್ಷರಂಗದ ಒಬ್ಬ ಪ್ರಯೋಗಶೀಲ ನಿರ್ದೇಶಕ, ಶಿಸ್ತಿನ ಅಧ್ಯಾಪಕ, ಪಾಂಡಿತ್ಯಪೂರ್ಣ ಕವಿ-ಕಲಾವಿದ, ಪ್ರಾಮಾಣಿಕ ಸಂಶೋಧಕ, ಪರಮ ಸ್ವಾಭಿಮಾನಿ, ದಾರ್ಶನಿಕ- ಹೀಗೆ ಹೊಸ್ತೋಟರ ವಿವಿಧ ಮುಖಗಳ ದರ್ಶನ ಇಲ್ಲಿದೆ. ಇದು ಅವರ ಸಮಗ್ರ ಜೀವನ ಚರಿತ್ರೆ ಅಲ್ಲವಾದರೂ, ಅವರ ಆತ್ಮಕಥಾನಕದ ಸಂಕ್ಷಿಪ್ತ ರೂಪವಂತೂ ಹೌದೆಂದು ಖಂಡಿತ ಹೇಳಬಹುದು.

“ಹೊಸ್ತೋಟ ಮಂಜುನಾಥ ಭಾಗವತರು ನನ್ನ ಪಾಲಿಗೆ ಒಂದು ಪುಟ್ಟ ಗಣಿ. ಸ್ವಾರ್ಥದ ಸುಳಿವೂ ಇಲ್ಲದ ಈತ ನಿಜವಾಗಿ ಸನ್ಯಾಸಿ” ಎಂಬ ಕೆ. ವಿ. ಸುಬ್ಬಣ್ಣ ಅವರ ಬೆನ್ನುಡಿಯ ವಾಕ್ಕು ಕೃತಿಯನ್ನು ಓದಿದಂತೆಲ್ಲಾ ನಮ್ಮೊಳಗೆ ಇಳಿಯುತ್ತಾ ಹೋಗುತ್ತದೆ. ಪ್ರಸ್ತುತ 76ರ ಆಸುಪಾಸಿನಲ್ಲಿರುವ ಹೊಸ್ತೋಟರು ತಮ್ಮ ಜೀವನದ ಅಷ್ಟೂ ಸಮಯವನ್ನು ಯಕ್ಷಗಾನದ ಉಪಾಸನೆಯಲ್ಲೇ ಕಳೆದವರು. ಯಕ್ಷಗಾನದೊಂದಿಗಿನ ಅವರ ಬದುಕಿನ ಮುಖಾಮುಖಿಯನ್ನು ಎಳೆಯೆಳೆಯಾಗಿ ತೆರೆದಿಡುತ್ತದೆ ಈ ಪುಸ್ತಕ.

ಬಾಲ್ಯದಲ್ಲಿ ತಾವು ಕಂಡ ಯಕ್ಷಗಾನದ ಚಿತ್ರಣವನ್ನು ಕೊಡುತ್ತಾ ನೆನಪುಗಳ ಪಯಣ ಆರಂಭಿಸುವ ಭಾಗವತರು, ಹಂತಹಂತವಾಗಿ ಅದೇ ಯಕ್ಷಗಾನದ ಒಳಗೊಳಗೆ ತಾವು ಸೇರಿಹೋದುದನ್ನು ಯಾವುದೇ ಭಾವಾವೇಶಗಳಿಲ್ಲದೆ ಚಿತ್ರಿಸುತ್ತಾ ಹೋಗುತ್ತಾರೆ. ಅವರು ಹೇಳುವ ಕಥೆ ಕೇವಲ ಅವರ ಜೀವನದ ಕಥೆಯಷ್ಟೇ ಆಗಿರದೆ, ಇಡೀ ಯಕ್ಷರಂಗ ಕಳೆದ ಮುಕ್ಕಾಲು ಶತಮಾನದಲ್ಲಿ ಕಂಡ ಏಳುಬೀಳುಗಳ ಹಾಗೂ ಬದಲಾವಣೆಯ ಪರ್ವಗಳ ಕಥೆಯೂ ಆಗಿರುವುದು ಇಲ್ಲಿನ ವಿಶೇಷ.

ಯಕ್ಷಗಾನವು ಶಾಸ್ತ್ರೀಯವೇ? ಜಾನಪದವೇ? ಎಂಬುದೊಂದು ಪ್ರಮುಖ ಚರ್ಚೆ. ಇದರ ಬಗೆಗೂ ಹೊಸ್ತೋಟರ ನಿಲುವು ಸ್ಪಷ್ಟವಾಗಿದೆ. ಅವರ ಪ್ರಕಾರ ಯಕ್ಷಗಾನ ಒಂದು ಶುದ್ಧ ಜಾನಪದ ಕಲೆ; ಅದನ್ನು ಶಾಸ್ತ್ರೀಯತೆಯ ಚೌಕಟ್ಟಿನಲ್ಲಿ ಹಿಡಿದು ಕುಳ್ಳಿರಿಸುವುದರಿಂದ ವಿಶೇಷ ಲಾಭವೇನೂ ಇಲ್ಲ. “ನಾನು ಚಿಕ್ಕಂದಿನಲ್ಲಿ ಕಂಡ ದಶಾವತಾರ ಆಟ ಜಾನಪದವೆನ್ನುವಂತೆಯೇ ಇತ್ತು. ಶಾಸ್ತ್ರೀಯವೆಂದು ಕರೆಯುವ ಸಾಧ್ಯತೆಯಿರಲಿಲ್ಲ” (ಪು. 18). 

“ಯಕ್ಷಗಾನವೊಂದು ನಿಯಮಬದ್ಧ ಶೈಲೀಕೃತ ರಂಗಭೂಮಿ. ರಂಗಭೂಮಿ ಜನಸಾಮಾನ್ಯರ ಮಧ್ಯವೇ ಬೆಳೆದುಬರಬೇಕು. ನಿರ್ದಿಷ್ಟ ಜನರಿಗಾಗಿ ಮಾತ್ರ ಬಳಕೆಗೊಂಡ ಕ್ಲಾಸಿಕ್ ರಂಗಭೂಮಿ ಯಕ್ಷಗಾನವಲ್ಲ. ಜನಸಾಮಾನ್ಯರಿಂದ ಅದನ್ನು ದೂರ ತಳ್ಳುವ ಶಾಸ್ತ್ರೀಯ ಚೌಕಟ್ಟು ಇದಕ್ಕೇಕೆ? ರೂಢಿಯಿಂದ ಬಂದ ಉತ್ತಮ ಅಂಶಗಳನ್ನು ಒಳಗೊಳ್ಳುತ್ತ ಸಾಗಿ ಬಂದಿರುವ ಸಾಂಪ್ರದಾಯಿಕ ಕಲೆ ಇದು…” (ಪು. 105).

ಹೊಸ್ತೋಟರದ್ದು ಸದಾ ಪ್ರಯೋಗಶೀಲ ಮನಸ್ಸು. ಯಕ್ಷಗಾನ ಕಲಿಕೆಗೆ ವೈಜ್ಞಾನಿಕ ಸೂತ್ರವನ್ನು ಅಳವಡಿಸುವುದಲ್ಲದೆ ಸಮರ್ಪಕ ತರಬೇತಿಯಿಂದ ಅಂಧರೂ ಯಕ್ಷಗಾನ ಆಡಬಲ್ಲರೆಂಬುದನ್ನು ಸಿದ್ಧಪಡಿಸಿದವರು ಅವರು. ನಾಟಕದಂತೆ ಯಕ್ಷಗಾನಕ್ಕೂ ನಿರ್ದೇಶನ ತುಂಬ ಮುಖ್ಯವೆಂದು ನಂಬಿದ್ದವರು. ಶೇಕ್ಸ್ ಪಿಯರ್, ಕಾಳಿದಾಸ ಮೊದಲಾದ ಪ್ರಸಿದ್ಧರ ನಾಟಕಗಳನ್ನು ಆಧರಿಸಿ ಪ್ರಸಂಗ ರಚನೆ ಮಾಡಿದವರು. ಪರಿಸರ ಸಂರಕ್ಷಣೆಯಂತಹ ಹೊಸ ಸಂದೇಶಗಳ ಪ್ರಸಾರಕ್ಕೆ ಯಕ್ಷಗಾನದ ನಮನೀಯತೆಯನ್ನು ಬಳಸಿಕೊಂಡವರು. ಆದರೆ ಬದಲಾವಣೆಯ/ಪ್ರಯೋಗಶೀಲತೆಯ ಹೆಸರಿನಲ್ಲಿ  ಯಕ್ಷಗಾನದ ಚೌಕಟ್ಟನ್ನು ಮೀರುವವರ ಬಗ್ಗೆ ಅವರು ಸಿಟ್ಟಿನಿಂದ ಕುದಿಯುತ್ತಾರೆ.

“ಇಂದಿನ ಪ್ರಯೋಗದಲ್ಲಿ ಅನೇಕ ಆವಿಷ್ಕಾರ ಅಧ್ಯಯನ ಆಕರ್ಷಣೆಗಳು ಮೈಗೂಡಿದ್ದರೂ ಆತ್ಮೀಯ ಆರಾಧನಾ ಭಾವದಲ್ಲಿ ಸಾಮೂಹಿಕ ಪಾಲುಗಾರಿಕೆ ಮಾಯವಾಗಿದೆ. ಮನೋರಂಜನೆಯೇ ಮುಖ್ಯವಾಗಿದೆ. ಕಾಳಜಿ ಕಡಿಮೆಯಾಗಿದೆ” (ಪು. 24).

“ಮೇಳದವರು ಅಧ್ಯಯನಶೀಲರಾಗಿ ಹೊಣೆಗಾರರಾಗಿ ಇರಬೇಕಾದ ಅಗತ್ಯ ಏಕಿದೆ ಎಂದರೆ ಜನರನ್ನು ರಂಜಿಸುವ ತನ್ಮಯಗೊಳಿಸುವ ಪ್ರಯತ್ನಕ್ಕೆ ಸಾಧ್ಯವಾದ ಸಂಗ್ರಹ ಅವರಲ್ಲಿರಬೇಕು. ಅದಿಲ್ಲದಿದ್ದರೆ ಆ ವೇಷ ಹಾಕಿ ಹೋಗಿ ಸಾಮಾಜಿಕರನ್ನು ಮೋಸಗೊಳಿಸಿದಂತಾಗುತ್ತದೆ. ತಾನೇನು ಮಾಡಬೇಕು ಎಂಬ ಅರಿವೂ ಇಲ್ಲದೆ ಆದದ್ದಾಗುತ್ತದೆ ಎಂದು ಹೇಳುವವರು, ತನ್ನ ಹೊಣೆಗಾರಿಕೆಯ ಪಾತ್ರವನ್ನೇ ಮರೆತವರು, ಪಾತ್ರಧಾರಿಗಳಾದರೆ ವೇಷಭೂಷಣಗಳೂ ಕಳಚಿ ಬೀಳುತ್ತವೆ... ಆಟವಾಡುವುದೆಂದರೆ ಗದ್ದಲ ಎಬ್ಬಿಸಿ ಸುತ್ತಲಿದ್ದವರ ನಿದ್ದೆಗೆಡಿಸುವುದಲ್ಲ…” (ಪು. 31-32).

“…ಅಡ್ಡಾದಿಡ್ಡಿ ಕುಣಿತಗಳು, ಹೆಜ್ಜೆಯ ಅಭ್ಯಾಸವೇ ಇಲ್ಲದೆ ಭರತನಾಟ್ಯ-ಬ್ಯಾಲೆ-ಓಡಿಸ್ಸಿ ಇವುಗಳ ಹೆಸರಿನಲ್ಲಿ ಕ್ಲಬ್ ಡ್ಯಾನ್ಸಿನಂತೆ ಡಿಸ್ಕೋ ಡ್ಯಾನ್ಸಿನಂತೆ ಕಾಣಿಸುತ್ತವೆ, ಪ್ರಸಿದ್ಧ ನಾಟ್ಯ ಪ್ರಕಾರಗಳ ಸಂಗೀತ ಪದ್ಧತಿಗಳ ಹೆಸರು ಹೇಳಿ ಪ್ರಕೃತ ರಂಗದ ಪಾರಂಪರಿಕ ಬಳಕೆಗಳನ್ನು ಕಡೆಗಣಿಸಿ, ‘ನಾವು ಹೀಗೆ ಮಾಡದಿದ್ದರೆ ಕಲೆ ಉಳಿಯುವುದಿಲ್ಲ; ಹಳೆಯದನ್ನು ಈಗ ಯಾರು ಕೇಳುತ್ತಾರೆ?” ಎಂದು ಗುಂಪು ಕಟ್ಟಿ ತಿರುಗುವ ದಗಾಕೋರರ ಹಾವಳಿಯಲ್ಲಿ ಯಕ್ಷಗಾನ ತನ್ನ ಸರ್ವಸ್ವವನ್ನೂ ಕಳೆದುಕೊಂಡು ತಲೆ ಮರೆಸಿಕೊಳ್ಳುವಂತಾಗಿದೆ” (ಪು. 125)

“ಇತ್ತೀಚಿನ ದಶಕದಲ್ಲಿ ಪ್ರಸಿದ್ಧಿಯ ಗೀಳು, ವ್ಯಾಪಾರೀ ಮನೋಭಾವ, ಅಭ್ಯಾಸದಲ್ಲಿ ಅನಾಸಕ್ತಿ, ವೈಯುಕ್ತಿಕ ಚಟ ಇವೇ ಹೆಚ್ಚು ಬೆಳೆಯತೊಡಗಿವೆ…. ಸಾಂದರ್ಭಿಕ ಅರಿವಿನಿಂದ ಸಾಂಸ್ಕೃತಿಕ ನೆಲೆಯಲ್ಲಿ ವ್ಯವಹರಿಸಿದ ಈ ರಂಗಭೂಮಿ ಇಂದಿನ ಯುವಜನಾಂಗದ ನೈಟ್ ಕ್ಲಬ್ಬಾಗದಿರಲಿ” (ಪು. 142).

“ಇಂದಿನ ಹಾಡುಗಾರರು ಸ್ವರಜ್ಞಾನ, ರಾಗಜ್ಞಾನ ಸಂಪಾದಿಸಲು ಬಳಸುವ ಹಾದಿ, ಯಾವುದೋ ಭಾವಗೀತೆಯ, ಸಿನಿಮಾ ಹಾಡಿನ ಯಥಾನುಕರಣೆಯೇ ಹೊರತು ದಿನದ ಸ್ವಂತ ಅಧ್ಯಯನದ ಫಲವಲ್ಲ. ಆ ಗುಂಗಿಗೆ ಯಕ್ಷಗಾನ ಪದ್ಯಸಾಹಿತ್ಯವನ್ನು ಸಿಕ್ಕಂತೆ ಬಳಸಿ ಗುನುಗಿದರೆ ಅದೊಂದು ಬಗೆಯ ನರಳಿಕೆಯೇ ವಿನಹ ಹಾಡುಗಾರಿಕೆಯಲ್ಲ…” (ಪು.143).

ಇಷ್ಟೆಲ್ಲ ಅಸಮಾಧಾನಗಳ ಮಧ್ಯೆಯೂ ಹೊಸ್ತೋಟರಿಗೆ ಭವಿಷ್ಯದ ಬಗ್ಗೆ ನಿರಾಶೆಯಿಲ್ಲ. “ತಾವು ಈ ರಂಗಕ್ಕೆ ಬಂದಿದ್ದರಿಂದಲೇ ರಂಗ ಬದುಕಿದೆ ಎಂದು ಭಾವಿಸುವ ಲಂಪಟ ಲಂಗುಲಗಾಮಿಲ್ಲದ ವರ್ತನೆಯಿಂದ ತಾತ್ಕಾಲಿಕ ಗೊಂದಲ ಎದ್ದಿದೆಯಾದರೂ, ಈ ಕಲೆ ತನ್ನ ಸಶಕ್ತ ಮಾಧ್ಯಮಗಳ ಶೈಲೀಕೃತ ಬಲದಿಂದ ಅಸ್ತಿತ್ವವುಳಿಸಿಕೊಳ್ಳುತ್ತದೆ- ಎಂಬ ನಂಬುಗೆ ನನಗಿದೆ” (ಪು. 125) ಎಂಬ ಅವರ ಆಶಯ ಪುಸ್ತಕದ ಕೊನೆಯ ಪುಟಗಳಲ್ಲಿದೆ. ಭೂತ-ವರ್ತಮಾನಗಳನ್ನು ಚಿಕಿತ್ಸಕ ದೃಷ್ಟಿಯಿಂದಲೂ, ಭವಿಷ್ಯವನ್ನು ಆಶಾವಾದದಿಂದಲೂ ಕಾಣುವ ಹೊಸ್ತೋಟರ ನೆನಪುಗಳ ಬುತ್ತಿ ಎಲ್ಲ ಯಕ್ಷಗಾನಪ್ರಿಯರಿಗೆ ಒಂದು ಉತ್ತಮ ಆಕರ ಗ್ರಂಥ.


ಅಂದಹಾಗೆ,  ಈ ಪುಸ್ತಕವನ್ನು ವಿಮರ್ಶಿಸುವ ಉದ್ದೇಶದಿಂದ ಬರೆದ ಬರೆಹ ಇದಲ್ಲ. ಪುಸ್ತಕ ಓದುತ್ತ ನನ್ನ ಮನಸ್ಸಿಗೆ ನಾಟಿದ ಒಂದಷ್ಟು ವಿವರಗಳನ್ನು ಪರಿಚಯದ ಉದ್ದೇಶದಿಂದ ದಾಖಲಿಸಿದ್ದೇನೆ ಅಷ್ಟೇ. 

ಸಿಬಂತಿ ಪದ್ಮನಾಭ ಕೆ. ವಿ.

ಎರಡು ಆರಂಭಿಕ ಮಾತು

ಎಳವೆಯಿಂದಲೂ ಯಕ್ಷಗಾನವೆಂದರೆ ನನಗೊಂದು ಬಹುದೊಡ್ಡ ಬೆರಗು. ಬೆರಗು ಬಲುಬೇಗನೆ ನನ್ನನ್ನು ತನ್ನೊಳಕ್ಕೆ ಅಕ್ಕರೆಯಿಂದ ಬರಮಾಡಿಕೊಂಡಿತು. ಒಳಗಿದ್ದೂ ಹೊರಗಿದ್ದೂ ಅದರ ಬೆಡಗು ವಿಸ್ಮಯಗಳನ್ನು ಒಬ್ಬ ಸಾಮಾನ್ಯ ಮನುಷ್ಯನಾಗಿ ನೋಡುತ್ತಲೇ ಬಂದೆ. ಬೆರಗಿನ ಜಾಗದಲ್ಲಿ ಒಂದಿಷ್ಟು ಅನಾದರವಾಗಲೀ ಅಸಡ್ಡೆಯಾಗಲೀ ಪ್ರವೇಶಿಸುವುದಕ್ಕೆ ಅವಕಾಶವಾಗಿಲ್ಲ. ಹಂಚಿದಷ್ಟೂ ಹೆಚ್ಚಾಗುವ ಸಂತೋಷದಂತೆ, ಅದಿನ್ನೂ ನನ್ನೊಳಗೆ ಹಿಮಾಲಯದಂತೆ ಬೆಳೆಯುತ್ತಲೇ ಇದೆ.

ಯಕ್ಷಗಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಒಂದು ಪ್ರತ್ಯೇಕ ಬ್ಲಾಗಿನಲ್ಲೇ ಯಾಕೆ ದಾಖಲಿಸಿಕೊಂಡು ಹೋಗಬಾರದು ಎನಿಸಿತು. ಅದಕ್ಕೇ 'ಯಕ್ಷದೀವಿಗೆ' ಹುಟ್ಟಿಕೊಂಡಿದೆ. ಈಗಂತೂ ಯೋಗಾಯೋಗ ಎಂಬ ಹಾಗೆ ಯಕ್ಷಗಾನವೇ ನನ್ನ ಸಂಶೋಧನಾ ಕ್ಷೇತ್ರವಾಗಿಯೂ ದೊರೆತಿರುವುದರಿಂದ ಯಕ್ಷಗಾನವನ್ನು ಕೇವಲ ಬೆರಗಿನ ಕಣ್ಣುಗಳಿಂದ ನೋಡುವುದಕ್ಕಿಂತಲೂ, ಕುತೂಹಲ ಹಾಗೂ ಚಿಕಿತ್ಸಕ ದೃಷ್ಟಿಗಳಿಂದ ನೋಡುವುದು ಅನಿವಾರ್ಯವಾಗಿದೆ.

ಸದ್ಯಕ್ಕೆ ಅಧ್ಯಯನಕ್ಕೆ ಅನುಕೂಲವಾಗುವ ಒಂದಷ್ಟು ಪುಸ್ತಕಗಳನ್ನು ಓದುತ್ತಾ ಇದ್ದೆ. ಅವುಗಳನ್ನು ಓದುತ್ತಾ ಹೋದ ಹಾಗೆ, ನನ್ನಷ್ಟಕ್ಕೇ ಕೆಲವು ವಿಚಾರಗಳನ್ನು ಟಿಪ್ಪಣಿ ಮಾಡಿಕೊಳ್ಳುವುದರ ಜತೆಗೆ, ಪುಸ್ತಕಗಳನ್ನು ಎಲ್ಲರೊಂದಿಗೂ ಯಾಕೆ ಹಂಚಿಕೊಳ್ಳಬಾರದು ಎನಿಸಿತು. ಹಾಗಾಗಿ, 'ಯಕ್ಷಗಾನ ಕೃತಿ ಪರಿಚಯ ಮಾಲಿಕೆ' ಈಗ ಆರಂಭಿಸುತ್ತಿದ್ದೇನೆ. ನಮ್ಮಲ್ಲಿ ತುಂಬ ವಿಸ್ತಾರವಾದ ಯಕ್ಷಗಾನ ಸಂಬಂಧೀ ಸಾಹಿತ್ಯ ಇದೆ. ಅವೆಲ್ಲವನ್ನೂ ಓದುವ ಅಥವಾ ಕಡೇ ಪಕ್ಷ ನೋಡುವ ಕೆಲಸ ಒಬ್ಬ ವ್ಯಕ್ತಿಗೆ ಆಗುವ ಕೆಲಸ ಅಲ್ಲ. ಹಾಗಾಗಿ,  ನನ್ನ ಓದಿನ ಸಂದರ್ಭದಲ್ಲಿ ಎದುರಾಗುವ ಒಂದಷ್ಟು ಪುಸ್ತಕಗಳ ಬಗ್ಗೆ ನಿಮಗೆ ಹೇಳುವ ಒಂದು ಪ್ರಯತ್ನ ಇದಷ್ಟೇ

ಮುಖ್ಯವಾಗಿ ಇದು ಪುಸ್ತಕ ವಿಮರ್ಶೆ ಅಲ್ಲ. ಪುಸ್ತಕಗಳ ಪರಿಚಯ ಅಷ್ಟೇ. ನಿಯಮಿತವಾಗಿ- ದಿನಕ್ಕೊಂದು, ವಾರಕ್ಕೊಂದು ಹೀಗೆಲ್ಲ- ಪ್ರಕಟಿಸುವುದು ಕಷ್ಟ. ನಾನು ಓದುತ್ತಿದ್ದ ಹಾಗೆ ಅವುಗಳ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾ ಹೋಗುತ್ತೇನೆ. ಅವುಗಳಲ್ಲಿ ಹೊಸ ಪುಸ್ತಕಗಳೂ ಇರಬಹುದು, ಹಳೇ ಪುಸ್ತಕಗಳೂ ಇರಬಹುದು, ನೀವು ಓದಿದ್ದೂ ಇರಬಹುದು, ಓದದ್ದೂ ಇರಬಹುದು. ಅಂತೂ ನನ್ನಂತಹ ಒಂದಷ್ಟು ಕುತೂಹಲಿಗಳಿಗೆ ಮಾಹಿತಿ ಸಿಗಬಹುದು ಅಂತ ನನ್ನ ಭಾವನೆ.

ಪುಸ್ತಕಗಳಷ್ಟೇ ಅಲ್ಲದೆ, ಯಕ್ಷಗಾನ ಸಂಬಂಧೀ ಇನ್ಯಾವುದೇ ವಿಚಾರಗಳನ್ನೂ ಆಗಿಂದಾಗ್ಗೆ ಹಂಚಿಕೊಳ್ಳುವುದಕ್ಕೆ ಬ್ಲಾಗ್ ಒಂದು ವೇದಿಕೆಯಾಗಬಹುದು ಎಂದುಕೊಂಡಿದ್ದೇನೆ.

ಸಿಬಂತಿ ಪದ್ಮನಾಭ ಕೆ. ವಿ.