ಲೇಖಕರು: ಶ್ರೀಧರ ಡಿ.ಎಸ್.
ಪ್ರಕಾಶಕರು: ಅಯೋಧ್ಯಾ ಪಬ್ಲಿಕೇಶನ್ಸ್, ಬೆಂಗಳೂರು
ಪ್ರಕಟಣೆಯ ವರ್ಷ: 2023
ಪುಟಗಳು: 156
ಬೆಲೆ: ರೂ. 180
ಕೆಲವು ಪುಸ್ತಕಗಳನ್ನು ನೋಡಿದ ಕೂಡಲೇ ಓದಬೇಕು ಅನಿಸುವುದುಂಟು; ಅಂಥವನ್ನು ಓದಿದ ಕೂಡಲೇ ನಾಕು ಮಂದಿಗೆ ಹೇಳಬೇಕು ಅನಿಸುವುದುಂಟು. ಹಿರಿಯರಾದ ಶ್ರೀ ಶ್ರೀಧರ ಡಿ.ಎಸ್. ಅವರ 'ಮಾತಿನ ಕಲೆ ತಾಳಮದ್ದಳೆ' ಪುಸ್ತಕದ ವಿಷಯದಲ್ಲೂ ಹೀಗೆಯೇ ಆಯಿತು.
ಇದು ಇತ್ತೀಚೆಗೆ (ಫೆಬ್ರವರಿ 11-12, 2023) ಉಡುಪಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ ಬಿಡುಗಡೆ ಆಯಿತು. ನಿನ್ನೆ-ಇವತ್ತು ಕೂತು ಓದಿಯೂ ಆಯಿತು. ಅವರು ಈ ಪುಸ್ತಕದ ಕುರಿತು ಹೇಳತೊಡಗಿದ ದಿನಗಳಿಂದಲೇ ಇದನ್ನು ಓದುವ ಕುತೂಹಲ ಇತ್ತು.ತಾಳಮದ್ದಳೆಯ ಕುರಿತು ಕೆಲವೇ ಕೆಲವು ಸಂಶೋಧನೆಗಳು, ಕೃತಿಗಳು ಬಂದಿವೆ. ಅವುಗಳ ವ್ಯಾಪ್ತಿ, ಉದ್ದೇಶಗಳಿಗೆ ಹೋಲಿಸಿದರೆ ಈ ಪುಸ್ತಕ ತುಂಬ ಭಿನ್ನವಾದದ್ದು. ತಾಳಮದ್ದಳೆಯನ್ನು ಒಂದು ಐತಿಹಾಸಿಕ ಕ್ರಮದಿಂದ ನೋಡುತ್ತಾ ಹೋಗುತ್ತದಾದರೂ ಇದು ಅಕಡೆಮಿಕ್ ಇತಿಹಾಸಕಾರರು ಬರೆಯುವ ಇತಿಹಾಸ ಪುಸ್ತಕದ ಮಾದರಿಯನ್ನು ಅನುಸರಿಸಿಲ್ಲ.
ಇತಿಹಾಸದ ಬರೆವಣಿಗೆಗಳಲ್ಲಿ ಢಾಳಾಗಿ ಕಾಣುವ ಇಸವಿಗಳು ಇಲ್ಲಿ ಹರಡಿಕೊಂಡಿಲ್ಲ (ತೀರಾ ಅಗತ್ಯವಿರುವಲ್ಲಿ ಮತ್ತು ಸಾಧ್ಯವಿರುವಲ್ಲಿ ಇಸವಿಗಳು ಬಂದಿವೆ). ಹಾಗೆಂದು ಇದು ಕಾಲವನ್ನು ನಿರ್ಲಕ್ಷಿಸಿಯೂ ಇಲ್ಲ. ಸ್ಥೂಲವಾಗಿ ಇಲ್ಲಿ ಕಾಣುವುದು ನಾನು ತುಸು ಹೆಚ್ಚು ಇಷ್ಟಪಡುವ ಸಾಮಾಜಿಕ ಇತಿಹಾಸ. ಕಳೆದ ವರ್ಷ ಪ್ರಕಟವಾದ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರ 'ಉಲಿಯ ಉಯ್ಯಾಲೆ'ಯಲ್ಲಿ ಇಂತಹದೇ ಒಂದು ವಿಧಾನ ಇದ್ದಿತಾದರೂ, ಅದು ಹೆಚ್ಚು ಆತ್ಮಕಥನದ ಸ್ವರೂಪದಲ್ಲಿತ್ತು.
ತಾಳಮದ್ದಲೆಯೆಂಬ 'ವಿದ್ವತ್ ಕ್ರೀಡೆ' ಹೇಗೆ ಹುಟ್ಟಿಕೊಂಡಿರಬಹುದೆಂಬ ಜಿಜ್ಞಾಸೆಯಿಂದ ತೊಡಗಿ, ಅದು ಬೇರೆಬೇರೆ ತಲೆಮಾರುಗಳಲ್ಲಿ ಹೇಗೆ ಬೆಳೆದು ಬಂತೆಂಬುದನ್ನು ಬಹು ಸರಳವಾಗಿ ಹೇಳುತ್ತಾ ಹೋಗಿದ್ದಾರೆ ಲೇಖಕರು. ನವಿರು ಹಾಸ್ಯ ಅವರ ಬರೆವಣಿಗೆಯ ಸ್ಥಾಯೀಗುಣ. ಹಾಗಾಗಿ ಪುಸ್ತಕದ ಓದು ಎಲ್ಲೂ ನೀರಸ ಅನಿಸುವುದಿಲ್ಲ. ಹಿಂದಿನ ಕಾಲದ ತಾಳಮದ್ದಳೆಗಳ ಸ್ವಾರಸ್ಯಕರ ಘಟನೆಗಳನ್ನು ಅವರು ಅಲ್ಲಲ್ಲಿ ನೆನಪಿಸಿಕೊಂಡಿರುವುದರಿಂದ ಓದಿನ ನಡುವೆ ಆಗಾಗ ನಗೆಬುಗ್ಗೆ ಚಿಮ್ಮುವುದೂ ಇದೆ.
ಪ್ರವೇಶ ಮತ್ತು ಮುಕ್ತಾಯದ ಹೊರತಾಗಿ, ಹಿಂದಣ ಹೆಜ್ಜೆ, ಹೊಸ ಹೆಜ್ಜೆ, ಶೇಣಿ-ಸಾಮಗ ಯುಗ, ತಾಳಮದ್ದಳೆಯ ನವಯುಗ, ಸಂಘಟನೆ, ಹಿಮ್ಮೇಳ, ತಾಳಮದ್ದಳೆಯಲ್ಲಿ ಹಾಸ್ಯ, ಸ್ತ್ರೀಪಾತ್ರಗಳ ನಿರ್ವಹಣೆ - ಇತ್ಯಾದಿ ಅಧ್ಯಾಯಗಳಿವೆ. ಕಾಲಕ್ಕೆ ಸಂದ ಮಹಾನುಭಾವರ ವಿವರ, ಸಮಕಾಲೀನರ ಕುರಿತ ಉಪಯುಕ್ತ ಮಾಹಿತಿಗಳಿವೆ. ವಿಶ್ವರಂಗಭೂಮಿಯಲ್ಲೇ ಅತ್ಯಂತ ವಿಶಿಷ್ಟವೆನಿಸಿರುವ ಈ ಅದ್ಭುತ ಕಲೆ ಅಪ್ರಬುದ್ಧ ನಡೆಗಳಿಂದ ತನ್ನ ಘನತೆಯನ್ನು ಕಳೆದುಕೊಳ್ಳಬಾರದು ಎಂಬ ಕಾಳಜಿಯೂ ಅಲ್ಲಲ್ಲಿ ಮಿಂಚಿದೆ.
ಆದರೆ ಯಕ್ಷಗಾನದ್ದಾಗಲೀ, ತಾಳಮದ್ದಳೆಯದ್ದಾಗಲೀ ಇತಿಹಾಸವನ್ನು ಬರೆಯುವಲ್ಲಿ ದೊಡ್ಡದೊಂದು ತೊಡಕಿದೆ. ಅದೇನೆಂದರೆ, ಈ ಕ್ಷೇತ್ರದಲ್ಲಿ ಸಶಕ್ತ ದಾಖಲೀಕರಣ ಆಗದೆ ಇರುವುದು. ಕ್ಯಾಸೆಟ್ ಕಾಲದಿಂದ ಡಿಜಿಟಲ್ ಯುಗದವರೆಗಿನ ಕಳೆದ ಅರ್ಧಶತಮಾನದ ಅವಧಿಯಲ್ಲಿ ನಡೆದ ದಾಖಲೀಕರಣ ಬಿಟ್ಟರೆ ಅದಕ್ಕಿಂತ ಹಿಂದಿನದನ್ನು ತಿಳಿದುಕೊಳ್ಳುವುದಕ್ಕೆ ನಮಗೆ ಮತ್ತೆ ಹಿರಿಯರ ನೆನಪೇ ಆಧಾರ. ಯಕ್ಷಗಾನ ಯಾ ತಾಳಮದ್ದಳೆ ಕ್ಷೇತ್ರದ ಆಯಾಯ ಕಾಲದ ವೈಶಿಷ್ಟ್ಯಗಳನ್ನು ಕೃತಿರೂಪದಲ್ಲಿ ದಾಖಲಿಸಿಡುವ ಕೆಲಸ ಆದದ್ದು ಕಮ್ಮಿ. ಬಹುಶಃ ಎಲ್ಲ ಮೌಖಿಕ ಕಲಾಸಂಪ್ರದಾಯಗಳ ವಿಚಾರದಲ್ಲೂ ಇರುವ ಸಮಸ್ಯೆ ಇದೇ.
ಹೀಗಾಗಿ, ಸಾಕಷ್ಟು ವಿಚಾರಗಳಿಗೆ ಪ್ರಸ್ತುತ ಕೃತಿಯ ಲೇಖಕರೂ ತಾವು ಕೇಳಿದ, ಓದಿದ ವಿಚಾರಗಳನ್ನೇ ಸ್ಮರಣೆಯಿಂದ ಹೆಕ್ಕಿ ಬರೆದಿದ್ದಾರೆ. ಪ್ರಕಟಿತ ಆಕರಗಳಲ್ಲಿ ಲಭ್ಯವಿರುವ ಮಾಹಿತಿಗಳನ್ನು ಅಗತ್ಯವಿರುವಲ್ಲಿ ಉಲ್ಲೇಖಿಸಿದ್ದಾರೆ. "ಬರೆವಣಿಗೆಗೆ ತೊಡಗಿದಾಗ ನನಗೆ ಎದುರಾದುದೇ ಮಾಹಿತಿಯ ಕೊರತೆ. ಹಳೆಯ ತಲೆಮಾರು ಮತ್ತು ಇಂದಿನ ಹೊಸಬರ ನಡುವಿನ ಒಂದು ತಲೆಮಾರಿನ ಕೊಂಡಿಯೇ ಇಲ್ಲದಂತೆ ಭಾಸವಾಯಿತು" ಎಂದು ಲೇಖಕರೇ ಹೇಳಿಕೊಂಡಿದ್ದಾರೆ. ಆದರೂ ಅವರು ಮಾಡಿರುವುದು ದೊಡ್ಡ ಕೆಲಸವೇ. ಯಕ್ಷಗಾನ/ ತಾಳಮದ್ದಳೆಯ ಇತಿಹಾಸವನ್ನು ಇನ್ನೂ ವಿಸ್ತಾರವಾಗಿ, ಇನ್ನೂ ಸಮಗ್ರವಾಗಿ ರಚಿಸಲು ಇಂತಹ ಕೃತಿಗಳೇ ನೀಲನಕ್ಷೆಗಳು. ತಮ್ಮ ಏಳು ದಶಕಗಳ ಜೀವನದ ಬಹುಭಾಗವನ್ನೂ ಕಲಾವಿದ, ಕವಿ, ಲೇಖಕ, ಸಂಘಟಕರಾಗಿ ಕಳೆದಿರುವ ಶ್ರೀಯುತರಿಂದ ಈ ಕೃತಿ ಬಂದಿರುವುದು ಯಕ್ಷಗಾನಕ್ಕೆ ಆಗಿರುವ ಲಾಭ.
"ವಿಸ್ತಾರವಾದ ಇತಿಹಾಸವಿರುವ ಎಲ್ಲ ಕಲೆಗಳೂ ಈ ಬಗೆಯ ಬದಲಾವಣೆಗೆ ತೆರೆದುಕೊಂಡೇ ಇರಬೇಕಾಗುತ್ತದೆ. ಯಾವುದನ್ನೂ ಒಂದು ನಿರ್ದಿಷ್ಟ ಕಾಲಮಾನದಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ. ಸಣ್ಣ ತೊರೆ ಸಮುದ್ರವಾಗಬಹುದು. ಆದರೆ ಸಮುದ್ರದ ಅಸ್ತಿತ್ವಕ್ಕೆ ತೊರೆಯೂ ಅಗತ್ಯ. ತೊರೆ ಹರಿಯುತ್ತಲೇ ಇರುತ್ತದೆ. ಸಮುದ್ರ ಮೊರೆಯುತ್ತಲೇ ಇರುತ್ತದೆ" (ಪು. 30) ಎಂಬ ಸಾಲುಗಳು ಈ ಕೃತಿಯ ಅತ್ಯಂತ ಮಹತ್ವದ ಮಾತು ಎಂದು ನನಗನಿಸಿತು.
ಇಂತಹದೊಂದು ಕೃತಿಗಾಗಿ ಲೇಖಕರಿಗೆ, ಪ್ರಕಾಶಕರಿಗೆ ನನ್ನ ವಂದನೆಗಳು.